ಮಣ್ಣಿನ ಮಗ ಗಣಪ

– ಚಂದ್ರಗೌಡ ಕುಲಕರ‍್ಣಿ.

Lord-Ganesha-HD-Wallpaper
ಬೂದೇವಿ ಬೆವರಲ್ಲಿ ಮಾದೇವನ ಮಗನಾಗಿ
ಹಾದಿ ತೋರಿದ ಗಣಪಣ್ಣ | ನೀಡ್ಯಾನ
ಮೇದಿನಿಯ ವಿದ್ಯೆ ಕಲ್ಮೇಶ |

ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಗೆವೊಲಿದು
ಮಾಟದ ದಾರಿ ತೋರಿದ | ಗಣಪನಿಗೆ
ಕೋಟಿ ವಂದನೆಯೊ ಕಲ್ಮೇಶ |

ಆದಿ ಮೂರುತಿ ದೇವ ಮೇದಿನಿಯಲ್ಲುದಯಿಸಿ
ಬೋದಿಸಿದ ಮಣ್ಣ ಕಾಯಕವ |
ಬೋದಿಸಿದ ಮಣ್ಣ ಕಾಯಕದ | ಗಣಪನ
ಪಾದಕ್ಕೆ ಮಣಿವೆ ಕಲ್ಮೇಶ |

ಆದಿ ಮಾನವ ಕಾಡಿನ ಸಹಜ ಪರಿಸರದಲ್ಲಿ ವಿಕಸನ ಹೊಂದುತ್ತ ಮುನ್ನಡೆವಾಗ ಮೊದಲು ಆಯ್ದುಕೊಂಡ ಕಾಯಕ ಕುರಿಸಾಕಣೆ, ಅನಂತರ ಪಶು ಸಾಕಣೆ, ದಕ್ಶಬ್ರಹ್ಮ ಕುರಿ ಸಾಕಣೆ ಬುಡಕಟ್ಟಿನ ನಾಯಕ. ಶಿವ ಪಶು ಸಾಕಣೆ ಬುಡಕಟ್ಟಿನ ನಾಯಕ. ಅಲೆಮಾರಿಯಾದ ಈ ಬುಡಕಟ್ಟು ಸಾಮುದಾಯಗಳಿಗೆ ಪರಸ್ಪರ ಗರ‍್ಶಣೆ ನಡೆದಿರಬೇಕು. ಶಿವನ ಉಗ್ರ ದಂಡನಾಯಕ ವೀರಬದ್ರ ದಕ್ಶಬ್ರಹ್ಮನನ್ನು ಕೊಂದ ಪುರಾಣ ಕತೆ ಇದನ್ನೇ ಸೂಚಿಸುವ ರೂಪಕವಾಗಿದೆ.

ಕುರಿಸಾಕಣೆ ಪಶುಸಾಕಣೆ ಅನಂತರ ಮಾನವ ಕಂಡುಕೊಂಡ ಜೇವವಿದ್ಯೆ ಒಕ್ಕಲುತನ. ಅಲೆಮಾರಿತನ ಬಿಟ್ಟು, ನದಿ ದಡದಲ್ಲಿ ಪಲವತ್ತಾದ ಮಣ್ಣಿನಲ್ಲಿ ಬೀಜ ಬಿತ್ತಿ ಬೆಳೆವ ಕಾಯಕ ಕಲಿತು ಕೊಂಡ. ಅಂತಹ ಒಕ್ಕಲುತನ ಸಮೂಹದ ಒಡೆಯ ( ಪಾರ‍್ವತಿಯ ಬೆವರಲ್ಲಿ ಹುಟ್ಟಿದ ) ಮಣ್ಣಿನ ಮಗ ಗಣಪ. ಗಣಪ ಮೊದಲ ಕ್ರುಶಿಕ. ಮೊದಲ ಕ್ರುಶಿ ವಿಜ್ನಾನಿ . ಮಿತವಾಗಿ ಕಾಡನ್ನು ಹಸನುಮಾಡಿ ಬೀಜ ಬಿತ್ತಿ ಬೆಳೆಯತೊಡಗಿದ. ಹೀಗೆ ಅದ್ಬುತ ವಿದ್ಯೆ ಕಂಡು ಹಿಡಿದ ಗಣಪ ಬುಡಕಟ್ಟಿನ ನಾಯಕನಾದ. ಆಗ ನಾಯಕನ ಆರಾದನೆ ಆರಂಬವಾಯಿತು.

ಗಣಪತಿಗೆ ಏರಿಸುವ ಕರಿಕೆ ಪತ್ರಿಗೆ ವಿಶೇಶ ಅರ‍್ತವಿದೆ. ಬೂಮಿಯಲ್ಲಿ ಹಬ್ಬಿ ಬೂಮಿಯ ಪಲವತ್ತತೆಯನ್ನು ಹಾಳು ಮಾಡುವ ಕರಿಕೆಯ ನಾಲ್ಕು ಗರಿಗಳನ್ನು ತಂದು ಏರಿಸಿದರೆ ಸಾಕು ನಾನು ಸಂತ್ರುಪ್ತನಾಗುತ್ತೇನೆ ಎಂದು ಹೇಳಿದ ಮಾತಿನಲ್ಲಿ ಹೊಲ ಹಸನು ಮಾಡಿಸುವ ತಂತ್ರವಿದೆ. ರೈತನನ್ನು ಕಾಡುವ ಪ್ರಾಣಿ ಇಲಿ. ಅದು ನಿಯಂತ್ರಣದಲ್ಲಿರಬೇಕು,ಅದಕ್ಕೆ ಅದು ಗಣಪನ ವಾಹನ.  ಹೀಗೆ ದುಡಿಮೆ ಕಾಯಕ ಬೆವರಿನ ಮೂಲ ಪುರುಶನಾದ ಗಣಪನಿಗೆ ಹಣ್ಣು ಹಂಪಲಗಳನ್ನು ಎಡೆಮಾಡುತ್ತಾರೆ (ಮೋದಕ ಮುಂತಾದ ತಿನಿಸು ಅನಂತರ ಸೇರಿವೆ). ಹಣ್ಣು ಹಂಪಲ ಬೆಳೆವ ವಿದ್ಯೆಯನ್ನು ಕಳಿಸಿದ ಒಡೆಯನಿಗೆ ಅವುಗಳನ್ನೇ ಅರ‍್ಪಿಸಿ ಕ್ರುತಾರ‍್ತರಾಗುವ ವಿದಾನ ಇದು.

ಕುರಿಸಾಕಣೆ , ಪಶುಸಾಕಣೆ ವಿದ್ಯೆಗಿಂತ ನಿಂತ ನೆಲದಲ್ಲಿಯೇ (ನೆಲೆಮಾರಿತನ ) ತಾನೇ ಸ್ರುಶ್ಟಿಕರ‍್ತನಾಗಿ ಹಣ್ಣು ಹಂಪಲ ದಾನ್ಯ ಬೆಳೆವ ವಿದ್ಯೆ ಮೇಲೆನಿಸಿತು. ಎಲ್ಲ ಸಮುದಾಯದವರಿಂದ ಮನ್ನಣೆ ಪಡೆಯಿತು. ಹೀಗೆ ಮೊದಲ ಅದ್ಬುತ ವಿದ್ಯೆ ಎಂಬ ಪರಿಕಲ್ಪನೆ , ಹೊಸ ಸ್ರುಶ್ಟಿಯ ವಿಸ್ಮಯ ಆರಂಬವಾಯಿತು – ಈ ಗಣಪನಿಂದ. ಈ ಅರ‍್ತದಲ್ಲಿ ಗಣಪ ವಿದ್ಯಾ ದೇವತೆ. ಆಡಿಮೂರುತಿ. ಕುರಿ ಮತ್ತು ಪಶು ಸಾಕಣೆಯನ್ನು ತನ್ನಲ್ಲಿ ಅಳವಡಿಸಿಕೊಂಡ ಒಕ್ಕಲುತನ ಮಾನ್ಯತೆ ಪಡೆದ ಜೀವ ವಿದ್ಯೆಯಾಯಿತು. ಅಂದಿನಿಂದ ಮಾನವ ತನ್ನ ಬಾವನಾತ್ಮಕ, ಕಲಾತ್ಮಕ ಅಬಿವ್ಯಕ್ತಿಗೆ ಮೂಲ ಪುರುಶ ಗಣಪ.

ಮಾನವ ಸಮೂಹ ವಿಕಸನಗೊಂಡಂತೆ ಅಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ‍್ಗ ಸ್ರುಶ್ಟಿಯಾದವು, ಗಣಪ ಯಾವಾಗಲೂ ರೈತರ ಪರ. ನಾಗರಿಕ ಸಮುದಾಯ ಪ್ರತಿಶ್ಟೆ ದೇವರ ಹೆಸರಿನಲ್ಲಿ ಯಜ್ನ ಯಾಗ ಮಾಡಿ ದವಸ ದಾನ್ಯ ಸಂಪತ್ತು ಮತ್ತು ಪ್ರಾಣಿಗಳನ್ನು ಬಲಿಕೊಡತೊಡಗಿತು. ಇದು ರೈತಗೆ ಸರಿಬರಲಿಲ್ಲ. ರೈತ ಮುಕಂಡ ಗಣಪ ಸುಮ್ಮನಿರಲಿಲ್ಲ. ಯಾಗದ ವಿರುದ್ದ ಬಂಡೆದ್ದ. ಯಜ್ನಕ್ಕೆ ವಿಗ್ನ ಮಾಡಿದ. ವಿಗ್ನೇಶ್ವರನಾದ. ವಿಗ್ನ ನಿವಾರಕ ಅಲ್ಲ, ನೆನೆಪಿರಲಿ ಎಲ್ಲಿಯೂ ಗಣಪನಿಗೆ ವಿಗ್ನನಾಶಕ ಎಂಬ ಹೆಸರಿಲ್ಲ. ಅದು ಇತ್ತೀಚಿಗೆ ಜೋಡಿಸಿದ್ದು.

ದುಡಿವ ಬುಡಕಟ್ಟಿನ ಒಡೆಯನಾದ ಗಣಪ ದುಡಿಯದೆ ಉಣ್ಣುವ ನಾಗರಿಕ ಸಮೂಹಕ್ಕೆ ನುಂಗಲಾರದ ತುತ್ತಾದ. ಅವರು ಗಣಪನನ್ನು ಮನೆ ಮನೆಗೆ ಕರೆದು ಸಿಹಿ ಊಟ ಹಾಕತೊಡಗಿದರು. ಅವನ ಆರಾದನೆ ಮಾಡುವ ತಂತ್ರ ಹೂಡಿದರು. ದುಡಿದುಣ್ಣುವ ಗಣಪ ಕುಳಿತು ಉಣ್ಣುವ ದಾರಿದ್ರ್ಯಕ್ಕೆ ಬಿದ್ದ. ಹೊಟ್ಟೆ ಬೆಳೆಸಿದ. ತಮ್ಮ ನಾಯಕನ ಈ ವರ‍್ತನೆ , ಪಕ್ಶಾಂತರ ಕಂಡು ರೈತರು ಬೇಸತ್ತುರು. ಗಣಪನನ್ನು ಹುಡುಕತೊಡಗಿದರು. ಗಣಪ ತಲೆಮರೆಸಿಕೊಂಡ. ಮುಕವಾಡ ದರಿಸಿ ತಿರುಗಾಡಿದ. ಗಣಪನನ್ನು ಮನೆಯಲ್ಲಿರಿಸಿಕೊಂಡು ಇಲ್ಲ ಎಂದು ನಾಗರಿಕ ಸಮೂಹದವರು ಸುಳ್ಳು ಹೇಳತೊಡಗಿದರು. ಆಗ ರೈತರಲ್ಲಿ ಒಬ್ಬನಾದ ಜೋಕುಮಾರ ಗಣಪನನ್ನು ಹುಡುಕಲು ಮನೆ ಮನೆ ತಿರುಗಿದ. ಕೊನೆಗೊಮ್ಮೆ ಗಣಪನನ್ನು ಹಿಡಿದ. ಇಂತ ನಾಯಕ ರೈತ ಸಮುದಾಯಕ್ಕೆ ಅಪಾಯ ಎಂದು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತ ಗಣಪತಿ ಬಾಪ್ಪ ಮೋರಯ್ಯ , ಪುಂಡಿಪಲ್ಲೆ ಸೂರಯ್ಯ ಎಂದು ಹೊಳೆ ಕಾಣಿಸಿದ (ಈಗಲೂ ಜೋಕುಮಾರ ಮನೆ ಮನೆಗೆ ಬಂದಾಗ ಗಣಪನನ್ನು ಇರಿಸಿದ ಮಾಡಿಗೆ ಪರದೆ ಮುಚ್ಚುವರು.ಇದು ಆ ಗಟನೆಯ ಪಳೆಯುಳಿಕೆ).

ಕುರಿ ಪಶು ಸಾಕಣೆ ಹಾಗೂ ಕ್ರುಶಿ ಕಾಯಕಗಳಿಂದ ಮುಪ್ಪುರಿಗೊಂಡ ಒಕ್ಕಲುತನ ಮಾನವ ಜೀವನದಲ್ಲಿ ಅತ್ಯಂತ ಮಹತ್ವ ಪಡೆಯಿತು. ಇಂದಿಗೂ ಆಚರಿಸಲ್ಪಡುವ ನಮ್ಮ ಎಲ್ಲ ಹಬ್ಬಗಳಲ್ಲಿ ಕ್ರುಶಿ ಪರಂಪರೆ ಹಾಸುಹೊಕ್ಕಾಗಿರುವದನ್ನು ಕಾಣಬಹುದು. ಕಾರ ಹುಣ್ಣಿವೆ ಮಳೆ ಮತ್ತು ಎತ್ತಿನ ಪೂಜೆ, ಮಣ್ಣೆತ್ತಿನ ಪೂಜೆ, ನಾಗರ ಪಂಚಮಿಯ ಮಣ್ಣಿನ ನಾಗಪ್ಪ, ಆಶಾಡದ ಗುಳ್ಳವ್ವ-ಗೊಗ್ಗವ್ವ, ಗೌರಿ ಗಣಪ ಜೋಕುಮಾರ, ಶೀಗವ್ವ-ಗೌರವ್ವನ ಪೂಜೆ ಇವು ಎಲ್ಲವೂ ಮಣ್ಣಿನ ಪೂಜೆಯೇ ಆಗಿವೆ. ದಸರಾ ಹಬ್ಬದ ಬನ್ನಿ-ಬಂಗಾರವಾಗುವ ವಿಸ್ಮಯ, ದೀಪಾವಳಿಯ ಹಟ್ಟಿ ಪೂಜೆ ಇವೂ ಸಹ ರೈತರ ಹಬ್ಬಗಳೇ. ಶೀಗಿಹುಣ್ಣಿಮೆ ಚರಗ, ಯಳ್ಳ ಅಮಾವಾಸ್ಯೆಯ ಚರಗ ಇವು ಬೂತಾಯಿಯ ಸೀಮಂತ ಕಾರಣದ ಆಚರಣೆಗಳಾಗಿವೆ. ಬನದ ಹುಣ್ಣಿಮೆಯಲ್ಲಿ ಬನದ (ಸಸ್ಯ ಸಂಪತ್ತು) ಪೂಜೆ, ಬಾರತ ಹುಣ್ಣಿಮೆಯಲ್ಲಿ ಬರಪೂರ ಕಾಳು ತುಂಬಿದ ಕಾಳು ತೆನೆಗಳ ಪೂಜೆ (ಜೋಳ ಮುಂತಾದ ದಾನ್ಯಗಳ ತೆನೆ ತೋರಣವನ್ನು ಬಾಗಿಲಿಗೆ ಕಟ್ಟುವುದು). ಇವೆಲ್ಲ ಮಾನವ ಜೀವನವನ್ನು ರೂಪಿಸಿದ ಕ್ರುಶಿ ಪರಂಪರೆಯನ್ನು ಸಂಕೇತ ರೂಪದಲ್ಲಿ ಅಬಿವ್ಯಕ್ತ ಮಾಡುತ್ತವೆ. ಕಾಲಾಂತರದಲ್ಲಿ ಕೆಲ ಬಿನ್ನ ಅಂಶಗಳು ಸೇರಿಕೊಂಡಿವೆ.

ಬುಡಕಟ್ಟು ಒಡೆಯ ನಾಗರಿಕರ ವಿಗ್ನನಿವಾರಕನಾಗಿ ಪುರಾಣ ಸೇರಿದ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸಾರ‍್ವಜನಿಕ ಸಂಗಟಕನಾದ (ಈಗ ಕಂಪ್ಯೂಟರ್ ಅವತಾರ ತಾಳಿ ( ಮೌಸ್ ಇಲಿ) ನಮ್ಮೊಂದಿಗಿದ್ದಾನೆ). ಹೀಗೆ ಗಣಪ ಮನುಶ್ಯ ವಿಕಾಸದ ಹಂತಗಳನ್ನು ರೂಪಕದ ಮೂಲಕ ಹೊಳೆಯಿಸುವ ಪ್ರತೀಕವಾಗಿದ್ದಾನೆ.

ಗಣಪನ ನಿಜ ಸ್ವರೂಪವನ್ನು ಅರಿತರೆ ಮಾತ್ರ ನಮಗೆ ಆತ್ಮ ಹತ್ಯೆ ಮಾಡಿಕೊಳ್ಳುವ ರೈತರ ಸಂಕಶ್ಟ , ಕಳಸಾ ಬಂಡೂರಿಯ ಕಿಚ್ಚು ಅರ‍್ತವಾಗುತ್ತದೆ. ಇಲ್ಲವಾದರೆ ನಾವು ಜಡ ಸಂವೇದನೆಯ ಗೊಂಬೆಗಳಾಗುವ ಅಪಾಯವಿದೆ.

(ಚಿತ್ರ ಸೆಲೆ:  shortday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: