ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 1

ಕೆ. ಎಸ್. ಮಲ್ಲೇಶ್.

The_Tao_of_Physics_(first_edition)

ಕಾಪ್ರರ ಬದುಕು ಬರಹ:

ದಿ ತಾವೋ ಆಪ್ ಪಿಸಿಕ್ಸ್ ನ ಬರಹಗಾರ ಪ್ರಿಜೋ ಕಾಪ್ರ ಜನಿಸಿದ್ದು 1939 ರ ಪೆಬ್ರವರಿ 1 ರಂದು ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ. ಮುಂದೆ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಶಣ ಪಡೆದು ಸೈದ್ದಾಂತಿಕ ಬೌತವಿಜ್ನಾನದಲ್ಲಿ ಸಂಶೋದನೆ ನಡೆಸಿ 1966 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಕಣ ಬೌತವಿಜ್ನಾನದಲ್ಲಿ ತಮ್ಮ ಸಂಶೋದನೆಯನ್ನು 1966 ರಿಂದ 1970ರ ವರೆಗೆ ಪ್ಯಾರಿಸ್, ಕ್ಯಾಲಿಪೋರ‍್ನಿಯಾ ಮತ್ತು ಬರ‍್ಕ್‍ಲೀ ವಿಶ್ವವಿದ್ಯಾನಿಲಯಗಳಲ್ಲಿ ಮುಂದುವರೆಸಿದ ಕಾಪ್ರ ಜೊತೆಗೇ ‘ವ್ಯವಸ್ತೆಗಳ ಸಿದ್ದಾಂತ’ ದಲ್ಲೂ ಕೂಡ ಅದ್ಯಯನ ನಡೆಸಿದ್ದಾರೆ. ಪ್ರಸ್ತುತ ಲಂಡನ್‍ನ ಶೂಮಾಕರ್ ಕಾಲೇಜಿನಲ್ಲಿ ಅದ್ಯಾಪಕ ಬಳಗದಲ್ಲಿರುವ ಕಾಪ್ರ ಕ್ಯಾಲಿಪೋರ‍್ನಿಯಾದ ಬರ‍್ಕಲೀಯಲ್ಲಿ ಪರಿಸರ ಸಾಕ್ಶರತಾ ಕೇಂದ್ರದ ಸಂಸ್ತಾಪಕ ನಿರ‍್ದೇಶಕರಾಗಿದ್ದಾರೆ. ಇವರ ಕ್ರುತಿಗಳು ದಿ ತಾವೋ ಆಪ್ ಪಿಸಿಕ್ಸ್ (1975), ದಿ ಟರ‍್ನಿಂಗ್ ಪಾಯಿಂಟ್ (1982) ಅನ್‍ಕಾಮನ್ ವಿಸ್‍ಡಂ (1988) ದಿ ವೆಬ್ ಆಪ್ ಲೈಪ್ (1996), ದಿ ಹಿಡನ್ ಕನೆಕ್ಶನ್ಸ್ (2002). ಇವುಗಳಲ್ಲಿ ದಿ ತಾವೋ ಆಪ್ ಪಿಸಿಕ್ಸ್ 43 ಬಾರಿ ಪುನಪ್ರಕಟಣೆಗೊಂಡಿರುವುದಲ್ಲದೆ 23 ಬಾಶೆಗಳಿಗೆ ಅನುವಾದಗೊಂಡು ಜನಪ್ರಿಯ ಕ್ರುತಿಯೆನಿಸಿದೆ.

ಕ್ರುತಿಯ ಮೂಲ ವಿಶಯ:

ಕ್ರುತಿಯ ಶೀರ‍್ಶಿಕೆ ‘ತಾವೋ ಆಪ್ ಪಿಸಿಕ್ಸ್’ ಅನ್ನು ಸರಳ ಅರ‍್ತದಲ್ಲಿ ಬೌತವಿಜ್ನಾನದ ಮಾರ‍್ಗ ಎಂದು ಅನುವಾದಿಸಬಹುದು. ಈ ಕ್ರುತಿಯಲ್ಲಿ ಕಾಪ್ರ ಆದುನಿಕ ಬೌತವಿಜ್ನಾನ ಮತ್ತು ಪೌರ‍್ವಾತ್ಯ ದಾರ‍್ಶನಿಕತೆಗಳ ನಡುವಿನ ಸಾಮ್ಯಗಳ ಪರಿಶೋದನೆಯನ್ನು ದಾಕಲಿಸಿದ್ದಾರೆ. ಇಲ್ಲಿ ಆದುನಿಕ ಬೌತವಿಜ್ನಾನ ಎಂದರೆ ಪ್ರಮುಕವಾಗಿ 20ನೆಯ ಶತಮಾನದಲ್ಲಿ ಪ್ರಕಟಗೊಂಡ ಆಲ್ಬರ‍್ಟ್ ಐನ್‍ಸ್ಟೈನರ ಸಾಪೇಕ್ಶತಾ ಸಿದ್ದಾಂತ ಮತ್ತು ಪ್ಲಾಂಕ್, ನೀಲ್ಸ್ ಬೋರ್ ಹೈಸನ್ಬರ‍್ಗ್, ಸ್ಕ್ರಾಡಿಂಜರ್, ಪೌಲಿ, ಡಿರಾಕ್ ಮುಂತಾದವರು ಪ್ರತಿಪಾದಿಸಿದ ಕ್ವಾಂಟಂ ಸಿದ್ದಾಂತಗಳಿಂದ ರೂಪಿತವಾದದ್ದು. ಪೌರ‍್ವಾತ್ಯ ದರ‍್ಶನಗಳೆಂದರೆ ಹಿಂದೂ, ಬೌದ್ದ, ಜೆನ್ ಮತ್ತು ತಾವೋ ದರ‍್ಶನಗಳು. ಬೆನ್ನುಡಿಯ ಪ್ರಕಾರ ಕಾಪ್ರ ತಮ್ಮ ಪರಿಶೋದನೆಯ ಮೂಲಕ ಬೌತವಿಜ್ನಾನದ ಲೌಕಿಕ ದ್ರುಶ್ಟಿಕೋನ ಮತ್ತು ಆದ್ಯಾತ್ಮಿಕ ಸಂಪ್ರದಾಯಗಳ ನಡುವೆ ಇರುವ ಆಳವಾದ ಸಾಮರಸ್ಯದ ಬಗೆಗೆ ಹೊಸ ಅರಿವು ಮೂಡಿಸಿದ್ದಾರೆ.

ಕ್ರುತಿಗೆ ಪ್ರೇರಣೆ:

ಬೇಸಿಗೆಯ ಮದ್ಯಾಹ್ನದಲ್ಲೊಮ್ಮೆ ಸಮುದ್ರ ತೀರದಲ್ಲಿ ಸುರುಸುರುಳಿಯಾಗಿ ಅಬ್ಬರಿಸಿ ಬರುತ್ತಿದ್ದ ಅಲೆಗಳನ್ನು ನೋಡುತ್ತ ಜೊತೆಗೆ ಲಯಬದ್ದವಾಗಿ ಸಾಗಿದ್ದ ಎದೆಬಡಿತವನ್ನು ಅನುಬವಿಸುತ್ತ ಕುಳಿತಿದ್ದ ನನಗೆ ಇದ್ದಕ್ಕಿದ್ದಂತೆ ಇಡೀ ಸ್ರುಶ್ಟಿಯೇ ಒಂದು ಅದ್ಬುತ ಬ್ರಹ್ಮಾಂಡ ನರ‍್ತನಗೈಯುತ್ತಿದ್ದಂತೆ ಬಾಸವಾಯಿತು. ಸುತ್ತಲಿನ ಜಡ ಚೇತನಗಳಲ್ಲಿ ಕಂಪಿಸುತ್ತಿರುವ ಅಣು ಪರಮಾಣುಗಳು ಸಂಲಗ್ನಗೊಂಡು ಸ್ರುಶ್ಟಿ ಲಯ ಕಾರ‍್ಯಗಳಲ್ಲಿ ತೊಡಗಿರುವ, ವಿಶ್ವದ ಕಿರಣಗಳು ವಾಯುಮಂಡಲದಲ್ಲಿ ಸಂಗಟಿಸಿ ನವನವೀನ ಕಣಸ್ರುಶ್ಟಿಯೊಡನೆ ಅವಿಚ್ಚಿನ್ನವಾಗಿ ಬೂಮಿಯನ್ನು ಅಪ್ಪಳಿಸುವ ಕ್ರಿಯೆಗಳೆಲ್ಲವೂ ಬೌತವಿಜ್ನಾನಿಯಾದ ನನಗೆ ಅಂಕಿ ಅಂಶ ನಕ್ಶೆ ಚಿತ್ತಾರಗಳ ಮೂಲಕ ಈ ಮೊದಲೇ ಪರಿಚಯವಾಗಿತ್ತಾದರೂ ಸಮುದ್ರತೀರದಲ್ಲಿ ಕುಳಿತಿದ್ದ ಆ ಕ್ಶಣದಲ್ಲಿ ಮಾತ್ರ ಬಾಹ್ಯಾಕಾಶದಿಂದ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿದ್ದ ಚೈತನ್ಯ ವಸ್ತು ಸ್ರುಶ್ಟಿ ಲಯ ಕ್ರಿಯೆಯನ್ನು ಲಯಬದ್ದವಾಗಿ ನಡೆಸುತ್ತ ನನ್ನೊಳಗಿನ ಕಣಗಳನ್ನೂ ಸೇರಿಸಿಕೊಂಡು ಒಂದು ಮಹಾನರ‍್ತನದಲ್ಲಿ ತೊಡಗಿದ್ದಂತೆ ಬಾಸವಾಯಿತು. ಇದೇ ಆ ಶಿವತಾಂಡವ ನ್ರುತ್ಯವೆಂದು ನನಗೆ ಅರಿವಾದುದಕ್ಕೆ ಆ ಕ್ಶಣ ಸಾಕ್ಶಿಯಾಯಿತು. ಕ್ರುತಿ ಬರೆಯಲು ಈ ಸುಂದರ ಅನುಬವವೇ ಪ್ರೇರಣೆಯಾಯಿತು ಎಂದು ಕಾಪ್ರ ಮುನ್ನುಡಿಯುತ್ತಾರೆ.

ಕ್ವಾಂಟಂ ಬೌತವಿಜ್ನಾನದ ಪ್ರವರ‍್ತಕರಲ್ಲಿ ಒಬ್ಬರಾದ ವರ‍್ನರ್ ಹೈಸನ್‍ಬರ‍್ಗ್ ರ ನಮ್ಮ ಚಿಂತನೆಯ ಇತಿಹಾಸವನ್ನು ಗಮನಿಸಿದರೆ ವಿಬಿನ್ನ ನೆಲೆಗಳ ಚಿಂತನಾಕ್ರಮಗಳು ಸಂದಿಸಿದಾಗ ಪಲಪ್ರದ ಬೆಳವಣಿಗೆಗಳಾಗಿವೆ. ಈ ನೆಲೆಗಳು ಬೇರೆ ಬೇರೆ ಕಾಲಗಟ್ಟಗಳಲ್ಲಿ ಸಂಸ್ಕ್ರುತಿ ಅತವಾ ಆದ್ಯಾತ್ಮ ಪರಂಪರೆಗಳಾಗಿರಬಹುದು ಎನ್ನುವ ಹೇಳಿಕೆಯನ್ನು ಕಾಪ್ರ ತಮ್ಮ ವಿಚಾರಸರಣಿಯನ್ನು ಮಂಡಿಸಲು ಆದಾರವಾಗಿಟ್ಟುಕೊಂಡು ಮುನ್ನಡೆಯುತ್ತಾರೆ. ಆದುನಿಕ ಬೌತವಿಜ್ನಾನ ಆವಿಶ್ಕಾರಗಳ ಮೂಲಕ ನಮ್ಮ ಬದುಕಿಗೆ ಪೂರಕವಾಗಿಯೂ ಮಾರಕವಾಗಿಯೂ ಬದಲಾವಣೆಗಳನ್ನು ತಂದಿದೆ. ತಂತ್ರಜ್ನಾನದ ಅಳವಡಿಕೆಯಿಂದಾಚೆಗೂ ದಾಟಿ ನಮ್ಮ ಸಾಂಸ್ಕ್ರುತಿಕ, ಆರ‍್ತಿಕ, ಸಾಮಾಜಿಕ ಮತ್ತು ರಾಜಕೀಯ ಹೀಗೆ ಎಲ್ಲ ಕ್ಶೇತ್ರಗಳನ್ನೂ ಆವರಿಸಿ ಪ್ರಬಾವ ಬೀರಿದೆ. ನ್ಯೂಟನ್ ಕಾಲಗಟ್ಟದಿಂದ 20ನೆಯ ಶತಮಾನದವರೆಗೂ ವಿಶ್ವದ ಬಗೆಗಿನ ಹಾಗೂ ವಿಶ್ವದೊಡನೆ ನಮಗಿದ್ದ ಸಂಬಂದದ ಬಗೆಗಿನ ಮೂಲ ತತ್ವಗಳನ್ನೂ ವಿಚಾರಗಳನ್ನೂ ನವ್ಯಾತಿನವ್ಯ ಅರ‍್ತಕೊಡುವ ಮೂಲಕ ಆಮೂಲಾಗ್ರವಾಗಿ ಬದಲಾಯಿಸಿದೆ.

ಹೊಸ ಅರ‍್ತಗಳನ್ನು ಕೊಟ್ಟಂತಹ ಸ್ವರೂಪವುಳ್ಳ ಆದುನಿಕ ಬೌತವಿಜ್ನಾನವನ್ನು ಅತ್ಯಂತ ಸೂಕ್ಶ್ಮವಾಗಿ ಗಮನಿಸಿದರೆ ಪೌರ‍್ವಾತ್ಯ ದರ‍್ಶನಗಳು ವಿಶ್ವದ ಬಗ್ಗೆ ತಾಳಿರುವ ನಿಲುವುಗಳನ್ನೇ ಹೋಲುವಶ್ಟು ಸಮೀಪಕ್ಕೆ ಬೌತವಿಜ್ನಾನ ಕರೆದೊಯ್ಯುತ್ತದೆ ಎನ್ನುವುದು ಕಾಪ್ರರ ನಿಲುವು. ಪರಮಾಣುಗಳ ಬಗೆಗಿನ ಸಂಶೋದನೆಯಲ್ಲಿ ಕಂಡುಕೊಂಡ ವಿಚಾರಗಳು, ವಿಜ್ನಾನಕ್ಕೆ ಹೊಸವಿರಬಹುದು. ಆದರೆ ಬೌದ್ದ ಮತ್ತು ಹಿಂದೂದರ‍್ಮಗಳಲ್ಲಿ ಇವು ಬಹಳ ಹಿಂದಿನಿಂದಲೇ ಪ್ರಚಲಿತವಾಗಿವೆ ಎಂಬ ಓಪನ್ ಹೈಮರ್‍ರ ಅಬಿಪ್ರಾಯ ಕಾಪ್ರಾರ ಹೇಳಿಕೆಗೆ ಸಾಕ್ಶಿಯಾಗಿದೆ. ಕೇವಲ ಸಾಮ್ಯತೆಯ ನೆಲೆಯಲ್ಲಿ ನಿಲ್ಲದೆ ಇಂತಹ ದ್ರುಶ್ಟಿಕೋನ ಪಲಪ್ರದವೂ ಆಗುವ ಸಾದ್ಯತೆಯಿದೆ ಎನ್ನುವುದಕ್ಕೆ ಸಾಕ್ಶಿಯಾಗಿ 1950ರ ನಂತರ ಜಪಾನ್ ಆದುನಿಕ ಬೌತವಿಜ್ನಾನದಲ್ಲಿ ಅಸಾದಾರಣ ಕೊಡುಗೆ ಕೊಟ್ಟಿರುವುದನ್ನು ವರ‍್ನರ್ ಹೈಸನ್‍ಬರ‍್ಗ್ ಗುರುತಿಸಿ ಈ ಪ್ರಗತಿಗೆ ಪೌರ‍್ವಾತ್ಯ ದರ‍್ಶನಗಳ ವಿಚಾರ ಪರಂಪರೆ ಮತ್ತು ಕ್ವಾಂಟಂ ವಿಜ್ನಾನದ ತಾತ್ವಿಕ ಅಂಶಗಳ ನಡುವೆ ನಿಶ್ಚಿತ ಸಂಬಂದವಿರುವುದೇ ಕಾರಣ ಎಂದಿದ್ದಾರೆ.

ಎರಡು ವಿಬಿನ್ನ ಜ್ನಾನಗಳು:

ಸಾಮ್ಯಗಳನ್ನು ಗುರುತಿಸುವುದಕ್ಕೆ ಮೊದಲು ನಾವು ಹೋಲಿಕೆ ಮಾಡುತ್ತಿರುವುದಾದರೂ ಏನನ್ನು ಎನ್ನುವುದನ್ನು ಸ್ಪಶ್ಟಪಡಿಸಿಕೊಳ್ಳಬೇಕು. ಇದಕ್ಕೆ ಉತ್ತರ ಇವೆರಡರಲ್ಲಿರುವ ಜ್ನಾನ. ಎರಡು ತೆರನಾದ ಜ್ನಾನಗಳನ್ನು ಹೋಲಿಸಬೇಕಾಗಿದೆ ಎನ್ನುತ್ತ ಕಾಪ್ರ, ಒಂದು ಕಚಿತ ವಿಜ್ನಾನ, ಹೊರಜಗತ್ತಿನಲ್ಲಿನ ಕ್ರಿಯೆಗಳನ್ನು ಪ್ರಮಾಣಿಸಿ ಪಡೆದ ಪಲಿತಾಂಶಗಳನ್ನು ತರ‍್ಕದ ಆದುನಿಕ ಗಣಿತದ ಉನ್ನತ ಬಾಶೆಯಲ್ಲಿ ನಿರೂಪಿಸಿ ಪಡೆದದ್ದು. ಇನ್ನೊಂದು ದ್ಯಾನಾದಾರಿತ, ದ್ಯಾನಸ್ತಿತಿಯಲ್ಲಿ ಹೊರಜಗತ್ತಿನ ಬಗ್ಗೆ ಅಂತರ‍್ದ್ರುಶ್ಟಿ ಬೀರಿ ಪಡೆದದ್ದು.

ಬಾಶೆಯ ಮೂಲಕ ಸಂವಹಿಸಲು ಸಾದ್ಯವಾಗದ ಒಳನೋಟಗಳಿಂದ ಕೂಡಿದ್ದು. ಇವೆರಡಕ್ಕೂ ಎಲ್ಲಿಯ ಹೋಲಿಕೆ ಎಂದು ಅನ್ನಿಸಿದರೂ ಈ ಕ್ಶೇತ್ರಗಳಿಗೆ ಸಮರ‍್ಪಿಸಿಕೊಂಡು ಇಲ್ಲಿನ ಜ್ನಾನಗಳನ್ನು ತಮ್ಮದಾಗಿಸಿಕೊಂಡು ವಿಜ್ನಾನಿಗಳು ಮತ್ತು ದಾರ‍್ಶನಿಕರು ಅವರವರ ಅನುಬವ ಮೂಲಕ ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ಹೋಲಿಕೆ ಮಾಡಿದರೆ ಆ ಜ್ನಾನಗಳನ್ನು ಹೋಲಿಸಿನೋಡಿದಂತೆಯೇ ಎನ್ನುತ್ತ ಕಾಪ್ರ ಹೋಲಿಕೆಗಾಗಿ ಸರಿಯಾದ ಚೌಕಟ್ಟೊಂದನ್ನು ಮೊದಲು ಸಿದ್ದಪಡಿಸಿಕೊಳ್ಳೋಣವೆನ್ನುತ್ತಾರೆ.

ಜ್ನಾನವೆಂದರೆ ಯಾವ ತೆರನಾದದ್ದು, ಬುದ್ದ ಹೇಳುವ ಜ್ನಾನ ಆಕ್ಸಪರ‍್ಡ್ ನ ವಿಜ್ನಾನಿ ಹೇಳುವ ಜ್ನಾನ ಎರಡೂ ಒಂದೇ ಏನು? ಎನ್ನುತ್ತ ಕಾಪ್ರ ಮಾನವ ಚಿಂತನೆಯ ಚಾರಿತ್ರಿಕ ಬೆಳವಣಿಗೆಯ ಕಡೆಗೆ ಹೊರಳುತ್ತಾರೆ. ವೈಚಾರಿಕ ಅತವಾ ತಾರ‍್ಕಿಕ ಜ್ನಾನ ಒಂದಿದೆ ಹಾಗೆಯೇ ದ್ಯಾನೋತ್ಪನ್ನ ಅತವಾ ಬಾವನಾತ್ಮಕ ಜ್ನಾನ ಇನ್ನೊಂದಿದೆ. ಇದನ್ನೇ ಹಿಂದೂ ದರ‍್ಮದಲ್ಲಿ ಕೆಳಸ್ತರದ ಮೇಲುಸ್ತರದ ಜ್ನಾನಗಳೆಂದೂ, ಬೌದ್ದರು ಸಾಪೇಕ್ಶ ನಿರಪೇಕ್ಶ ಜ್ನಾನಗಳೆಂದೂ ಚೀನೀಯರು ಯಾಂಗ್ ಮತ್ತು ಯಿನ್‍ಗಳೆಂದೂ ಕರೆಯುತ್ತಾರೆ. ವಿಜ್ನಾನದ್ದು ತಾರ‍್ಕಿಕ ಜ್ನಾನ, ದರ‍್ಶನಗಳದ್ದು ದ್ಯಾನೋತ್ಪನ್ನ ಜ್ನಾನ.

ಪಾಶ್ಚಿಮಾತ್ಯರು ತಾರ‍್ಕಿಕ ಜ್ನಾನವೇ ಮೇಲೆಂದು ಪರಿಗಣಿಸಿದರೆ ಪೌರ‍್ವಾತ್ಯರದ್ದು ತದ್ವಿರುದ್ದ ನಿಲುವು. ಪರಿಸರದೊಡನೆ ನಮ್ಮ ನಿತ್ಯ ಸಂಪರ‍್ಕ ವರ‍್ತನೆಗಳಿಂದ ಬಂದದ್ದು ತಾರ‍್ಕಿಕ ಜ್ನಾನ. ಇದರಿಂದಾಗಿಯೇ ನಾವು ವಸ್ತುಸ್ತಿತಿಗಳನ್ನು ಪರಿಮಾಣಾತ್ಮಕವಾಗಿ ಗುರುತಿಸುವ, ಸಂಬಂದಕಲ್ಪಿಸುವ, ಅಳೆದು ನೋಡುವ, ವಿಂಗಡಿಸುವ ಸಾಮತ್ರ್ಯಪಡೆದಿದ್ದೇವೆ. ವಸ್ತುಸ್ತಿತಿಗಳ ಗುಣವಿಶೇಶಗಳನ್ನು ಸಾಂಕೇತಿಕವಾಗಿ ಕಚಿತವಾಗಿ ನಿರ‍್ದುಶ್ಟವಾಗಿ ಗುರುತಿಸಲೂ ಯುಕ್ತವಾಗಿ ಸಂವಹಿಸಬಹುದಾದ ಸಾರ‍್ವತ್ರಿಕವಾದ ಸಾಂಕೇತಿಕ ಬಾಶೆಯಲ್ಲಿ ನಿರೂಪಿಸಲೂ ಸಾದ್ಯವಾಗಿದೆ.

ಈ ತಾರ‍್ಕಿಕ ಜ್ನಾನ ಬೌತವಿಜ್ನಾನದಲ್ಲಿ ಮೂರು ಹಂತದಲ್ಲಿ ರೂಪುಗೊಳ್ಳುತ್ತದೆ. ಮೊದಲಿಗೆ ವಿಜ್ನಾನಿಗಳು ಯಾವ ಕ್ರಿಯೆಯನ್ನು ಅರ‍್ತೈಸಬೇಕೋ ಅದಕ್ಕೆ ಪ್ರಾಯೋಗಿಕ ಪ್ರಮಾಣಗಳನ್ನು ಕಲೆಹಾಕಿ ನಂತರದಲ್ಲಿ ಪ್ರಯೋಗದ ಪಲಿತಾಂಶಗಳನ್ನು ಸಂಕೇತಗಳಿಗೆ ಹೊಂದಿಸಿ ನಿರ‍್ದಿಶ್ಟ ಗಣಿತ ಸೂತ್ರಗಳನ್ನು ಪಡೆಯುತ್ತಾರೆ. ಇವುಗಳನ್ನು ಕ್ರಮಬದ್ದ ರೀತಿಯಲ್ಲಿ ಜೋಡಿಸಿದ್ದನ್ನೇ ಕ್ರಿಯೆಯ ಬಗೆಗಿನ ಮಾದರಿಯೆಂದು ಇನ್ನೂ ಸ್ವಲ್ಪ ಸಂಸ್ಕರಿಸಿ ಸಿದ್ದಾಂತವೆಂದು ಪರಿಗಣಿಸುತ್ತಾರೆ. ಎರಡನೆಯ ಹಂತದಲ್ಲಿ ಈ ಸಿದ್ದಾಂತವನ್ನು ಹೊಸ ಪ್ರಯೋಗಗಳಿಗೆ ಒರೆಹಚ್ಚಿ ಸುಸಂಬದ್ದ ಪಲಿತಾಂಶಗಳು ಬಂದಲ್ಲಿ ಸರಿಯಾದ ಸಿದ್ದಾಂತವೆಂದು ಅಂಗೀಕರಿಸುತ್ತಾರೆ.

ಮೂರನೆಯ ಹಂತದಲ್ಲಿ ಈ ಸಿದ್ದಾಂತದಿಂದ ಸತ್ಯದ ಸಾಕ್ಶಾತ್ಕಾರವೆಶ್ಟಾಗಿದೆಯೋ ಅದನ್ನು ಇತರರಿಗೆ ಪರಿಚಯಿಸುವುದಕ್ಕೆ ಸರಳ ಬಾಶೆಯಲ್ಲಿ ಸಿದ್ದಾಂತದ ಮೂಲ ವಿಚಾರಗಳನ್ನೂ ಗಣಿತೋಕ್ತಿಗಳ ಸಾರವನ್ನೂ ಸಂಗ್ರಹಿಸಿ ಪ್ರಕಟಪಡಿಸುತ್ತಾರೆ. ಎಲ್ಲ ಸಂದರ‍್ಬಗಳಲ್ಲೂ ಮೇಲಿನ ಕ್ರಮದಲ್ಲಿಯೇ ವಿಜ್ನಾನದಲ್ಲಿನ ಸಿದ್ದಾಂತಗಳು ರೂಪುಗೊಳ್ಳುತ್ತವೆಯೆಂದಲ್ಲ. ಎರಡನೆಯ ಹಂತದಲ್ಲಿ ಒಮ್ಮೊಮ್ಮೆ ತನ್ನ ಕ್ರಿಯಾಶೀಲ ದ್ರುಶ್ಟಿಯಿಂದಲೋ, ಆದ್ಯಾತ್ಮಿಕ ನೆಲೆಗಟ್ಟಿನಿಂದಲೋ ಸ್ವಪ್ನ ಸುಶುಪ್ತ ಸ್ತಿತಿಯಲ್ಲಿಯೋ ತಳೆದ ವಿಶಿಶ್ಟ ಆಲೋಚನೆಗಳನ್ನು ವಿಜ್ನಾನಿ ಗಣಿತದ ಸಾಂಕೇತಿಕ ಬಾಶೆಗೆ ಅಳವಡಿಸಿ, ಸಿದ್ದಾಂತವೊಂದನ್ನು ಕಟ್ಟ್ತಬಹುದು. ಹೇಗೇ ಕಟ್ಟಿದರೂ ಸಿದ್ದಾಂತಗಳು ತಮ್ಮ ಸಿಂದುತ್ವಕ್ಕಾಗಿ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು.

ಹೀಗೆ ಕ್ರಿಯೆಯನ್ನು ಅರ‍್ತೈಸುವಲ್ಲಿ, ಎಲ್ಲ ಸಿದ್ದಾಂತಗಳನ್ನೂ ಪ್ರಯೋಗಗಳಿಗೆ ಆದಾರಪಡಿಸುವುದನ್ನೇ ವೈಜ್ನಾನಿಕ ದ್ರುಶ್ಟಿಕೋನ ಅತವಾ ವೈಜ್ನಾನಿಕ ಕ್ರಮವೆನ್ನುತ್ತಾರೆ. ತಾರ‍್ಕಿಕ ಜ್ನಾನವೊಂದು ರೂಪುತಳೆಯಬೇಕಾದರೆ ಅಲ್ಲಿನ ಸಿದ್ದಾಂತಗಳು ಪ್ರಯೋಗಗಳ ಕುಲುಮೆಗಳಲ್ಲಿ ಉತ್ತೀರ‍್ಣಗೊಂಡು ಹೊರಬರಬೇಕಾದದ್ದು ಅನಿವಾರ‍್ಯ. ತಾರ‍್ಕಿಕ ಜ್ನಾನಕೋಶಾಗಾರಕ್ಕೆ ಪ್ರವೇಶಬಯಸುವುದಾದರೆ ಸಿದ್ದಾಂತಗಳು ಪ್ರಯೋಗಗಳೆಂಬ ಎಲ್ಲ ಪ್ರವೇಶದ್ವಾರಗಳಲ್ಲಿ ರಹದಾರಿ ಪತ್ರಗಳನ್ನು ಪಡೆಯಲೇಬೇಕು. ಹೀಗೆ ಪಕ್ವಗೊಂಡ ಸಿದ್ದಾಂತಗಳು ತಮ್ಮೊಳಗಿನ ತಾರ‍್ಕಿಕ ಜ್ನಾನದ ಮೂಲಕ ಸ್ರುಶ್ಟಿಯ ರಹಸ್ಯಗಳಿಗೆ ಕ್ರಮಬದ್ದರೀತಿಯಲ್ಲಿ ವ್ಯಾಕ್ಯಾನಕೊಟ್ಟು ಹೆಚ್ಚಿನ ಜ್ನಾನಕ್ಕೂ ಮುಂದುವರಿದ ಸಂಶೋದನೆಗೂ ಮಾರ‍್ಗದರ‍್ಶಕವಾಗುತ್ತವೆ.

ಇಶ್ಟಾದರೂ ಈ ಜ್ನಾನ ಪರಿಮಿತವಾದದ್ದು ಎಂಬುದು ಸ್ರುಶ್ಟಿಯ ಸಂಕೀರ‍್ಣ ರಚನಾ ವೈವಿದ್ಯದಿಂದಲೇ ಸ್ಪಶ್ಟ. ಯಾವ ವಸ್ತುಸ್ತಿತಿಯೂ ಇಲ್ಲದ ಶೂನ್ಯಸ್ತಿತಿಯ ಅವಕಾಶವೇ ವಕ್ರತೆಯನ್ನು ಹೊಂದಿದೆ ಎಂದು ಆದುನಿಕ ಬೌತವಿಜ್ನಾನವೇ ಕಂಡುಕೊಂಡಿದೆ. ಇನ್ನು ಅಸಂಕ್ಯಾತ ಪರಮಾಣುಗಳಿಂದ ಹಿಡಿದು ಬಿಲಿಯನ್‍ಗಟ್ಟಲೆ ಗೆಲಾಕ್ಸಿಗಳನ್ನೂ, ಕೋಟ್ಯಾಂತರ ಜೀವರಾಶಿಗಳನ್ನೂ ಹೊಂದಿರುವ ವಿಶ್ವರಚನೆಯಂತೂ ಅತ್ಯಂತ ಜಟಿಲ ಹಾಗೂ ಸಂಕೀರ‍್ಣವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಿರುವಾಗ ಇಡೀ ವಿಶ್ವವನ್ನೇ ಜೀವ ನಿರ‍್ಜೀವ ಬಾಗಗಳೆಂದು ಗುರುತಿಸಿ ಇವುಗಳನ್ನು ಮತ್ತೆ ಮತ್ತೆ ವಿಬಜಿಸಿ ಕಂಡದ್ರುಶ್ಟಿಯಿಂದಲೇ ವಿವಿದ ಬಾಗಗಳನ್ನು ಅಬ್ಯಸಿಸುವ ವಿಜ್ನಾನ ತನಗೆ ತಾನೇ ಪರಿಮಿತಿಯನ್ನು ಒಡ್ಡಿಕೊಂಡಿರುವುದಂತೂ ಸ್ಪಶ್ಟ.

ಇದರಿಂದಾಗಿಯೇ ಇದರ ತತ್ವ ಹಾಗೂ ಅದನ್ನು ನಿರೂಪಿಸುವ ಬಾಶೆ ನಿರ‍್ದಿಶ್ಟವೆನಿಸಿದರೂ ನಿರ‍್ಬಂದಿತ ಎಲ್ಲೆಗಳಿಗೆ ಸೀಮಿತವಾಗಿವೆ. ಆದರೂ ಹಲವು ಬಾರಿ ಇದು ಗಮನಕ್ಕೆ ಬಾರದೆ ಇಂತಹ ಜ್ನಾನವು ಬಿಂಬಿಸುವುದನ್ನೇ ನಾವು ವಾಸ್ತವವೆಂದು ಗ್ರಹಿಸಿ ಗೊಂದಲದಲ್ಲಿ ಸಿಲುಕಿ ಬೀಳುತ್ತೇವೆ. ಇಂತಹ ನಿಲುವು ಸರಿಯಲ್ಲವೆಂದು ದರ‍್ಶನಗಳು ಎಚ್ಚರಿಸಿ ಗೊಂದಲದಿಂದ ನಮ್ಮನ್ನು ಪಾರುಮಾಡಲು ಪ್ರಯತ್ನಿಸಿವೆ. ಚಂದ್ರನನ್ನು ತೋರಿಸಲು ಬೆರಳು ಅಗತ್ಯವೆನಿಸಿದರೂ ಒಮ್ಮೆ ಚಂದ್ರನನ್ನು ಗುರುತಿಸಿದ ಮೇಲೆ ಬೆರಳನ್ನು ಗಮನಿಸುವ ಗೋಜಿಗೆ ಸಿಲುಕಬಾರದು ಎನ್ನುವ ಈ ದರ‍್ಶನಗಳು ಇಂದ್ರಿಯಗೋಚರ ಅನುಬವದಿಂದಾಚೆಗೂ ಅಂತರ‍್ದ್ರುಶ್ಟಿಯಿಂದ ಪಡೆಯಬಹುದಾದ ಒಂದು ಅನುಬವವಿದೆ.

ಆ ಅನುಬವದ ಪಲವೇ ನಿರಪೇಕ್ಶ ಜ್ನಾನ, ಅತ್ಯುನ್ನತವಾದ ವಾಸ್ತವ ಅತವಾ ನಿಜಸ್ತಿತಿ ಎನ್ನುವುದೊಂದಿದೆ ಎಂದು ಈ ಜ್ನಾನ ಹೇಳುತ್ತದೆ. ಅನುಬವಕ್ಕೆ ಮಾತ್ರ ದಕ್ಕುವ ಈ ಸತ್ಯವನ್ನು ಪ್ರಚುರಪಡಿಸಲು ಸಾದ್ಯವಿಲ್ಲ. ನಿರಪೇಕ್ಶ ಜ್ನಾನ ಬುದ್ದಿಪೂರ‍್ವಕವಲ್ಲದ (ಮುಗ್ದ) ಸ್ತಿತಿಯಲ್ಲಿ ಪಡೆದ ವಾಸ್ತವದ ನಿಜರೂಪದ ಅನುಬವ. ಸಾದಾರಣವಲ್ಲದ ವಿವೇಕಸ್ತಿತಿ, ಇದನ್ನು ದ್ಯಾನಿಕ ಅತವಾ ದಾರ‍್ಶನಿಕ ಸ್ತಿತಿಯೆನ್ನಬಹುದೇನೋ, ಇಂತಹದ್ದೊಂದಿದೆ ಎಂದು ದಾರ‍್ಶನಿಕರು ಅಬಿಪ್ರಾಯ ಪಡುವುದಕ್ಕೆ ಪೂರಕವಾಗಿ ಮನಶಾಸ್ತ್ರಜ್ನರೂ ಸಂಶೋದನೆಯ ಮೂಲಕ ತಮ್ಮ ಒಪ್ಪಿಗೆ ಕೊಟ್ಟಿದ್ದಾರೆ. (ಮುಂದುವರೆಯುವುದು…)

(ಚಿತ್ರಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/10/2015

    […] (ಬರಹ ಮುಂದುವರೆದಿದೆ…) […]

ಅನಿಸಿಕೆ ಬರೆಯಿರಿ:

%d bloggers like this: