ಕೆಡುಕಿನ ಸುದ್ದಿಗಳು ಕೆಲಸಕ್ಕೆ ಕುತ್ತು!

– ರತೀಶ ರತ್ನಾಕರ.

Negative_News

ಕಚೇರಿಯ ಕೆಲಸಕ್ಕೆ ಹೊರಡುವ ಮುನ್ನ ಟಿವಿಯ ಚಾನೆಲ್ ಗಳನ್ನು ಬದಲಿಸಿ ತುಣುಕು ಸುದ್ದಿಗಳನ್ನು ನೋಡುವ, ಇಲ್ಲವೇ ಸುದ್ದಿಹಾಳೆಗಳತ್ತ ಕಣ್ಣಾಡಿಸುವ ರೂಡಿ ಹಲವರಲ್ಲಿರುತ್ತದೆ. ಹೀಗೆ ನೋಡುವ ಸುದ್ದಿಗಳು ಒಂದು ವೇಳೆ ಕೆಡುಕಿನ (negative) ಸುದ್ದಿಗಳಾಗಿದ್ದರೆ ಅವು ದಿನವಿಡೀ ಮಾಡುವ ಕೆಲಸದ ಮೇಲೆ ಎದುರಾದ ಪರಿಣಾಮ ಬೀರುತ್ತವೆ. ಕೆಲವು ನಿಮಿಶಗಳ ಕೆಡುಕಿನ ಸುದ್ದಿ ತುಣುಕುಗಳು ತಲ್ಲಣಗಳನ್ನು ಏರುಪೇರು ಮಾಡಿ ಇಡೀ ದಿನದ ಕೆಲಸವನ್ನು ಹಾಳುಗೆಡುವುತ್ತವೆ ಎಂದು ಹಲವಾರು ಅರಕೆಗಳು (research) ತಿಳಿಸುತ್ತಿವೆ.

ಕೆಡುಕಿನ ಸುದ್ದಿಗಳು ಎಂದಿನ ಕೆಲಸದ ಮೇಲೆ ಹೇಗೆ ನಾಟುತ್ತವೆ ಎಂದು ಅರಿಯಲು 2012 ರಲ್ಲಿ ಪೆನ್ಸಿಲ್ವೇನಿಯಾ ಕಲಿಕೇವೀಡಿನಲ್ಲಿ (University of Pennsylvania) ಒಂದು ಅರಕೆಯನ್ನು ನಡೆಸಲಾಯಿತು. ಇದರಲ್ಲಿ, ಅರಕೆಯಲ್ಲಿ ಪಾಲ್ಗೊಂಡ 110 ಮಂದಿಯನ್ನು ಎರಡು ಗುಂಪುಗಳನ್ನಾಗಿ ಮಾಡಲಾಯಿತು. ಬೆಳಗ್ಗೆ 10 ಗಂಟೆಗಿಂತ ಮುಂಚೆ ಕೆಲಸಕ್ಕೆ ಹೋಗುವ ಮುನ್ನ, 3 ನಿಮಿಶಗಳ ‘ಕೆಡುಕಿನ ಸುದ್ದಿಯ ತುಣುಕು‘ಗಳನ್ನು ಒಂದು ಗುಂಪಿಗೆ ತೋರಿಸಲಾಯಿತು. ಹಾಗೆಯೇ ಇನ್ನೊಂದು ಗುಂಪಿಗೆ ‘ಹುರಿದುಂಬಿಸುವ ಸುದ್ದಿ‘ಗಳನ್ನು (solution focused news) ತೋರಿಸಲಾಯಿತು. ಕೆಡುಕಿನ ಸುದ್ದಿಗಳ ತುಣುಕುಗಳೆಂದರೆ ಎಲ್ಲೋ ನಡೆದ ಸರಣಿ ಕೊಲೆಗಳು, ಬ್ರಶ್ಟಾಚಾರದ ಸುದ್ದಿ, ಶೇರುಪೇಟೆಯ ಕುಸಿತ, ಮಾರುಕಟ್ಟೆ ಕುಸಿತ ಮತ್ತು ಸಾವಿನಂತಹ ಸುದ್ದಿಗಳಾಗಿದ್ದವು. ‘ಹುರಿದುಂಬಿಸುವ ಸುದ್ದಿ’ಗಳೆಂದರೆ, ಹೈಸ್ಕೂಲ್ ಮಕ್ಕಳು ಯಾವುದೋ ಹೊಸ ಚಳಕವನ್ನು ಕಂಡು ಹಿಡಿದಿದ್ದು, 70 ವರುಶದ ವ್ಯಕ್ತಿಯೊಬ್ಬರು 21 ಕಿ.ಮೀ ಮ್ಯಾರಾತಾನ್ ಓಡಿ ಮುಗಿಸಿದ್ದು, ಇಂತಹ ಸುದ್ದಿಗಳಾಗಿದ್ದವು.

ಸುದ್ದಿಯ ತುಣುಕುಗಳನ್ನು ನೋಡಿದ ಮಂದಿ ತಮ್ಮ ತಮ್ಮ ಕೆಲಸಗಳಿಗೆ ತೆರಳಿದರು. ಸುಮಾರು 6 ಗಂಟೆಗಳ ಬಳಿಕ ಅವರಿಗೆ ಕೇಳ್ವಿಗಳ ಪಟ್ಟಿಯೊಂದನ್ನು ಕಳಿಸಿ ಉತ್ತರಿಸುವಂತೆ ಕೇಳಲಾಯಿತು. ಅವಕ್ಕೆ ಉತ್ತರಿಸಲು 2 ಗಂಟೆಯಶ್ಟು ಹೊತ್ತನ್ನು ನೀಡಲಾಗಿತ್ತು. ಆ ಕೇಳ್ವಿಗಳು ಅವರ ಒತ್ತಡ ಮತ್ತು ಅನಿಸಿಕೆ(mood)ಗಳನ್ನು ಅಳೆಯುವಂತಹ ಕೇಳ್ವಿಗಳಾಗಿದ್ದವು. ಬಳಿಕ ಮಂದಿಯ ಉತ್ತರವನ್ನು ಕಲೆಹಾಕಿ ಒತ್ತಡ ಮತ್ತು ಅನಿಸಿಕೆಗಳನ್ನು ಅಳೆಯಲಾಯಿತು. ಈ ಅರಕೆಯಿಂದ ಸಿಕ್ಕ ದೊರೆತ(result)ವು ಅಚ್ಚರಿ ಮೂಡಿಸುವಂತಿತ್ತು. ಕೇವಲ ಮೂರು ನಿಮಿಶಗಳ ಕೆಡುಕಿನ ಸುದ್ದಿ ಮೊದಲ ಗುಂಪಿನ ಮಂದಿಯ ಇಡೀ ದಿನವನ್ನು ಕೆಟ್ಟದಾಗಿಸಿತ್ತು. ಅವರ ಎಂದಿನ ದಿನಕ್ಕಿಂತ ಆ ದಿನವು ಸುಮಾರು 27% ಹೆಚ್ಚು ಕೆಟ್ಟದಾಗಿತ್ತು. ಅದೂ ಸುದ್ದಿಯನ್ನು ನೋಡಿದ ಸುಮಾರು 6 ಗಂಟೆಗಳ ಬಳಿಕ! ಇನ್ನು ಹುರಿದುಂಬಿಸುವ ಸುದ್ದಿ ನೋಡಿದವರು ದಿನದ 88% ಪಾಲು ಚೆನ್ನಾಗಿತ್ತು ಎಂದು ತಿಳಿಸಿದ್ದರು.

ಕೆಲವು ನಿಮಿಶಗಳ ಕೆಡುಕಿನ ಸುದ್ದಿಗಳು ಒತ್ತಡ ಮತ್ತು ಅನಿಸಿಕೆಯ ಮೇಲೆ ಎದುರಾಗಿ ನಾಟುತ್ತವೆ ಎಂದು ಈ ಅರಕೆಯು ತಿಳಿಸಿಕೊಟ್ಟಿತ್ತು. ಇಶ್ಟೇ ಅಲ್ಲದೇ, ಕೆಡುಕಿನ ಸುದ್ದಿಗಳು ‘ಕೆಲಸ ಮಾಡುವ ಬಗೆ’ ಮತ್ತು ‘ಸವಾಲುಗಳನ್ನು ಬಗೆಹರಿಸುವ ಚಳಕ’ದ ಮೇಲೂ ಎದುರಾಗಿ ನಾಟುತ್ತವೆ. ಹೆಚ್ಚಿನ ಸುದ್ದಿಗಳು ನಮ್ಮ ಸುತ್ತಮುತ್ತಲ ಜಗತ್ತಿನ ತೊಂದರೆಗಳಾಗಿರುತ್ತವೆ, ಆ ತೊಂದರೆಗಳನ್ನು ಬಗೆಹರಿಸಲು ನಮ್ಮ ಕೈಯಿಂದ ಏನೂ ಮಾಡಲಾಗುತ್ತಿರುವುದಿಲ್ಲ. ಎತ್ತುಗೆಗೆ, ಶೇರುಮಾರುಕಟ್ಟೆ ಕುಸಿಯುತ್ತಿರುವ ಸುದ್ದಿಯನ್ನು ಕೇಳಿದಾಗ ಅದನ್ನು ಸರಿಪಡಿಸಲು ನಾವೇನು ಮಾಡಲಾಗುವುದಿಲ್ಲ. ಸುದ್ದಿ ಗೊತ್ತಿದ್ದೂ ಕೈಯಲ್ಲಿ ಏನು ಮಾಡಲಾಗದವರ ಸ್ತಿತಿಗೆ ತಲುಪುತ್ತೇವೆ. ಇದು ಕೊರಗನ್ನು ಉಂಟುಮಾಡಿ ನಮ್ಮ ಎಂದಿನ ಕೆಲಸದ ಗೆಯ್ಮೆ(performance)ಯನ್ನು ಕಡಿಮೆಗೊಳಿಸುತ್ತದೆ. ಮಾನಸಿಕವಾಗಿಯು ಕುಗ್ಗಿ ಹೋಗುತ್ತೇವೆ.

ಅದೇ ಹುರಿದುಂಬಿಸುವ ಸುದ್ದಿ ಇಲ್ಲವೇ ಕೆಲಸಗಳಿಂದ ನಮ್ಮ ದಿನವನ್ನು ಮೊದಲುಮಾಡಿದರೆ ಅದರಿಂದ ಒಳ್ಳೆಯ ಪರಿಣಾಮಗಳೇ ಹೆಚ್ಚು. ಹುರಿದುಂಬಿಸುವ ಸುದ್ದಿ/ಕೆಲಸಗಳು ‘ನಡುವಳಿಕೆ’ಯ ಮೇಲೂ ಒಳ್ಳೆಯ ಪರಿಣಾಮ ಮಾಡುತ್ತವೆ. ಅಮೇರಿಕಾದ ಲೂಸಿಯಾನ ನಾಡಿನ ಒಂದು ಗುಂಪಿನ ಆಸ್ಪತ್ರೆಗಳಲ್ಲಿ ಡಾಕ್ಟರ್ ಮತ್ತು ಸಿಬ್ಬಂದಿಗಳಿಗೆ, ಆಸ್ಪತ್ರೆಯಲ್ಲಿ ಓಡಾಡುವಾಗ ಎದುರಿಗೆ ಸಿಕ್ಕವರ ಮುಕ ನೋಡಿ ನಗುವಂತೆ ಹೇಳಲಾಗಿತ್ತು. ನಗುವ ಕೆಲಸವನ್ನು ಮಾಡಿದ 6 ತಿಂಗಳುಗಳ ಬಳಿಕ ಆ ನಾಡಿನ ಇತರೆ ಆಸ್ಪತ್ರೆಗಳಿಗಿಂತ, ಲೂಸಿಯಾನ ಗುಂಪಿನ ಆಸ್ಪತ್ರೆಗೆ ಹೆಚ್ಚು ರೋಗಿಗಳು ಬೇಟಿ ನೀಡತೊಡಗಿದರು. ಇದಕ್ಕೆ ಕಾರಣವನ್ನು ಹುಡುಕಲು ಒಂದು ಅರಸುವಿಕೆ(survey)ಯನ್ನು ಮಾಡಿದರು. ಲೂಸಿಯಾನ ಗುಂಪಿನ ಡಾಕ್ಟರ್ ಹಾಗು ಸಿಬ್ಬಂದಿಗಳ ನಡುವಳಿಕೆಗೆ ಮೆಚ್ಚಿ, ರೋಗಿಗಳು ತಮ್ಮ ಚಿಕಿತ್ಸೆಗೆಂದು ಈ ಅಸ್ಪತ್ರೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ ಎಂದು ಅರಸುವಿಕೆಯಿಂದ ತಿಳಿಯಿತು. ಒಂದು ಸಣ್ಣ ನಗು ದೊಡ್ಡ ಬದಲಾವಣೆಯನ್ನು ತಂದಿತ್ತು.

ಅಮೇರಿಕಾದ ನೇಶನ್‍ವೈಡ್ ಇನ್ಶೂರೆನ್ಸ್ ಕಂಪನಿಯಲ್ಲಿ ಪಾಲಿಸುತ್ತಿರುವ ಹೊಸದೊಂದು ನಡೆ-ನುಡಿ ಗಮನ ಸೆಳೆಯುವಂತದ್ದು. ಬೆಳಗ್ಗೆ ಕೆಲಸ ಶುರುಮಾಡುವ ಮುನ್ನ ಎಲ್ಲಾ ಕೆಲಸಗಾರರು ಅಲ್ಲಲ್ಲಿ ಗುಂಪು ಸೇರುತ್ತಿದ್ದರು, ಕೆಲವು ನಿಮಿಶಗಳ ಕಾಲ ತಮಗನಿಸಿದ ಒಳ್ಳೆಯ ಸುದ್ದಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು. ಬಳಿಕ, ಯಾವುದಾದರು ಜೊತೆ ಕೆಲಸಗಾರರಿಗೆ ಆ ದಿನ ಹೆಚ್ಚು ಕೆಲಸವಿದ್ದು ಅವರಿಗೆ ಹೆಚ್ಚಿನ ಹುರುಪು ಬೇಕಾಗಿದ್ದರೆ, ಅವರನ್ನು ಸುತ್ತುವರೆದು ಹುರಿದುಂಬಿಸುವ ಮಾತುಗಳನ್ನಾಡಿ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಿದ್ದರು. ಈ ನಡೆ-ನುಡಿಯು ಕೆಲಸಗಾರರ ಗೆಯ್ಮೆ, ಒತ್ತಡ ಮತ್ತು ಅನಿಸಿಕೆಗಳ ಮೇಲೆ ಚೆನ್ನಾಗಿ ನಾಟಿತು. ಇದರಿಂದಾಗಿ ಆ ಕಂಪನಿಯು $600 ಮಿಲಿಯನ್ ನಿಂದ $900 ಮಿಲಿಯನ್ ಗಳಿಕೆಗೆ ಒಂದೇ ವರುಶದಲ್ಲಿ ಜಿಗಿಯಿತು. ಅಲ್ಲದೇ, ಹೊಸ ಇನ್ಶೂರೆನ್ಸ್ ಕೇಳಿಕೊಂಡು ಬರುವವರ ಎಣಿಕೆ 237% ನಶ್ಟು ಹೆಚ್ಚಾಯಿತು!

ಹುರಿದುಂಬಿಸುವ ಸುದ್ದಿ ಇಲ್ಲವೇ ಕೆಲಸಗಳಿಂದ ಒಳ್ಳೆಯದಾಗುತ್ತದೆ ಎಂದು ಮೇಲಿನ ಎತ್ತುಗೆಗಳು ತಿಳಿಸುತ್ತವೆ. ಆದಶ್ಟು ಒಳ್ಳೆಯ ಸುದ್ದಿಗಳನ್ನು ಆರಿಸಿಕೊಂಡು ಕೆಡುಕಿನ ಸುದ್ದಿಗಳಿಂದ ದೂರವಿದ್ದರೆ ಎಂದಿನ ಕೆಲಸಕ್ಕೆ ತುಂಬಾ ಒಳ್ಳೆಯದು.

ಕೆಡುಕಿನ ಸುದ್ದಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ಸುದ್ದಿಚುರುಕು(news alert) ಮೊಟಕಾಗಲಿ: ಹೆಚ್ಚಿನ ಸುದ್ದಿಗಳು ಕೆಡುಕಿನದ್ದೇ ಆಗಿರುತ್ತವೆ. ಅಲೆಯುಲಿ ಇಲ್ಲವೇ ಮಿಂಚೆಯ ಮೂಲಕ ಚುರುಕು ಮುಟ್ಟಿಸುತ್ತಿರುತ್ತವೆ. ಯಾವುದೋ ಕೆಲಸದ ನಡುವೆ ‘ಟಿಂಗ್’ ಎಂದು ಬರುವ ಸುದ್ದಿಚುರುಕು ಗಮನ ಸೆಳೆಯುತ್ತದೆ. ಒಂದು ವೇಳೆ ಆ ಸುದ್ದಿ ಕೆಡುಕಿನದ್ದಾಗಿದ್ದರೆ ಅದರ ಪರಿಣಾಮ ಏನೆಂದು ಮೊದಲೆ ತಿಳಿದಿದ್ದೇವೆ. ಹಾಗಾಗಿ, ಈ ಸುದ್ದಿಚುರುಕುಗಳನ್ನು ಅಲೆಯುಲಿ ಇಲ್ಲವೇ ಮಿಂಚೆಯಲ್ಲಿ ಆಪಿಡು(disable)ವುದು ಒಳ್ಳೆಯದು. ಒಂದು ವಾರದ ಕಾಲಕ್ಕಾದರೂ ಆಪಿಡುವ ಪ್ರಯತ್ನ ಮಾಡಿನೋಡಬಹುದು. ಯಾವುದಾದರು ಗೊತ್ತಾಗಲೇ ಬೇಕಾದ ಸುದ್ದಿಯಿದ್ದರೆ ಅದು ಹೇಗಾದರು ತಿಳಿದೇ ತಿಳಿಯುತ್ತದೆ ಅದಕ್ಕಾಗಿ ಆತುರ ಬೇಡ.

ಜಾಣ ಕಿವುಡರಾಗಿ: ಮನೆಯಿಂದ ಕಚೇರಿಗೆ ಹೋಗುವ ಹೊತ್ತಿನಲ್ಲಿ ಹತ್ತಾರು ಬಗೆಯ ಸದ್ದುಗಳು ಮತ್ತು ಸುದ್ದಿಗಳು ಕಿವಿಗೆ ಬೀಳುತ್ತಿರುತ್ತವೆ. ಎಲ್ಲದಕ್ಕೂ ಕಿವಿಗೊಟ್ಟರೆ ಒಳ್ಳೆಯದಲ್ಲ. ಮನೆಯಿಂದ ಹೊರಹೋಗುವಾಗ, ಹೊರಗಿನ ಸದ್ದನ್ನು ಕಡಿಮೆ ಮಾಡಿಕೊಳ್ಳಲು ಬಾನುಲಿಗೆ ಕಿವಿಗೊಡಬಹುದು, ಆದರೆ ಬಾನುಲಿಯ ಎಲ್ಲಾ ಮಾತುಗಳನ್ನು ಕೇಳಿದರೆ ಇನ್ನೂ ತೊಂದರೆ ಆಗಬಹುದು. ಬೇಕಾದ್ದನ್ನು ಆಯ್ದು ಕೇಳಿಸಿಕೊಳ್ಳುವುದರಲ್ಲಿ ಪಳಗಬೇಕು. ಬಾನುಲಿಯ ಮಾತು ಬೇಡ ಎಂದಾಗ ಅದನ್ನು ನಿಲ್ಲಿಸಿಕೊಳ್ಳಬಹುದು. ಮೊದಮೊದಲಿಗೆ ಇದು ಕಶ್ಟ ಎನಿಸಬಹುದು ಆದರೆ ಪ್ರಯತ್ನಪಟ್ಟರೆ ಆಗದಿರುವುದೇನಲ್ಲ.

ಹುರಿದುಂಬಿಸುವ ಸುದ್ದಿಗಳತ್ತ ಕಣ್ಣು ತಿರುಗಲಿ: ಬೆಳಗಿನ ಕೆಲ ಹೊತ್ತನ್ನು ಹುರಿದುಂಬಿಸುವ ಸುದ್ದಿಗಳನ್ನು ನೋಡುವುದರಲ್ಲಿ ಕಳೆಯಬಹುದು. ಕೆಡುಕಿನ ಸುದ್ದಿಗಳು ಕಂಡುಬಂದರೆ ಪುಟ ತಿರುಗಿಸಬೇಕು, ಇಲ್ಲವೇ ಚಾನೆಲ್ ಬದಲಿಸಬೇಕು. ಹೊಸ ಹೊಸ ಹುರಿದುಂಬಿಸುವ ಸುದ್ದಿಗಳನ್ನು ಹುಡುಕಿಟ್ಟುಕೊಂಡು ಬೆಳಗಿನ ಹೊತ್ತು ಓದಬಹುದು/ನೋಡಬಹುದು. ಒಳ್ಳೆಯ ಸುದ್ದಿಗಳ ಹುಡುಕಾಟದಲ್ಲಿಯೂ ಎಚ್ಚರವಿರಬೇಕು, ಯಾರಿಗೋ 1 ಕೋಟಿ ಲಾಟರಿ ಹೊಡೆದ ಸುದ್ದಿ ಒಳ್ಳೆಯ ಸುದ್ದಿಯಂತೆ ಕಂಡರೂ ಅದರಿಂದ ಯಾವ ಒಳಿತು ಸಿಗದು. ಹಾಗಾಗಿ ಒಳ್ಳೆಯ ಸುದ್ದಿ ಮತ್ತು ಹುರಿದುಂಬಿಸುವ ಸುದ್ದಿಗಳ ಬೇರ‍್ಮೆ ಚೆನ್ನಾಗಿ ಅರಿತುಕೊಂಡು, ಸುದ್ದಿಯಿಂದ ನಮಗೆ ಏನಾದರು ಒಳ್ಳೆಯದಾಗುತ್ತದೆ, ಏನಾದರು ದಕ್ಕುತ್ತದೆ ಅಂದಾಗ ಮಾತ್ರ ಕಿವಿಗೊಡುವಂತಿರಬೇಕು.

ಯಾವ ಸುದ್ದಿಗಳು ನಮ್ಮ ಕಿವಿಗೆ ಬೀಳಬೇಕು ಎಂಬ ಆಯ್ಕೆ ನಮ್ಮ ಕೈಯಲ್ಲೇ ಇರಬೇಕು. ಸುದ್ದಿಗಳು ನಮ್ಮ ಹತೋಟಿಯಲ್ಲಿರಬೇಕು, ಸುದ್ದಿಗಳ ಹತೋಟಿಯಲ್ಲಿ ನಾವಿರಬಾರದು. ಹುರಿದುಂಬಿಸುವ, ಒಳ್ಳೆಯ ಹಾಗು ಕೆಡುಕಿನ ಸುದ್ದಿಗಳನ್ನು ಕೇಳಿಸಿಕೊಂಡ ಮೇಲೂ ನಮ್ಮ ದಿನವನ್ನು ಚಟುವಟಿಕೆಯಿಂದ ಕಳೆಯಲು ಸಾದ್ಯ. ಯಾವ ಸುದ್ದಿಯನ್ನು ಯಾವ ಹೊತ್ತಿನಲ್ಲಿ ಎಶ್ಟು ಕೇಳಿಸಿಕೊಳ್ಳುತ್ತೇವೆ/ನೋಡುತ್ತೇವೆ? ಅವುಗಳಿಂದಾಗುವ ಪರಿಣಾಮವನ್ನು ಹೇಗೆ ಹತೋಟಿಯಲ್ಲಿಟ್ಟುಕೊಳ್ಳುತ್ತೇವೆ? ಎಂಬುದರ ಮೇಲೆ ನಮ್ಮ ಚಟುವಟಿಕೆ ಅವಲಂಬಿಸಿರುತ್ತದೆ.

(ಮಾಹಿತಿ ಸೆಲೆ: hbr.org)
(ಚಿತ್ರ ಸೆಲೆ: ರತೀಶ ರತ್ನಾಕರ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: