ಮಂದಿಯ ಬಾಳಿನ ಏಳಿಗೆಗೆ ಇಲ್ಲೊಂದು ಹೊಸದಾರಿ!

ವಿಜಯಮಹಾಂತೇಶ ಮುಜಗೊಂಡ.

SE
ಹಾಲಿನ ಜೊತೆ ಜೇನು ಸೇರಿದರೆ ಆ ರುಚಿಯನ್ನು ಮೀರಿಸುವುದು ಯಾವುದೂ ಇಲ್ಲವೆನಿಸುತ್ತದೆ. ಹಾಗೆಯೇ ಒಂದು ಒಳ್ಳೆಯ ಹೊಳಹು(idea), ಆದನ್ನು ಕೆಲಸಕ್ಕೆ ತರುವ ಹೊಸಜಂಬಾರಿಗರ(entrepreneurs) ಕೈಗೆ ಸೇರಿದರೆ ಅದಕ್ಕಿಂತ ದೊಡ್ಡದು ಇನ್ಯಾವುದು ಇಲ್ಲ. ಹೊಸಜಂಬಾರಿಗರ ಮೇಲೆ ಇಂತಹದ್ದೊಂದು ದೊಡ್ಡ ನಂಬಿಕೆಯನ್ನು ಹಲವು ಉದ್ದಿಮೆ ವಲಯಗಳು ಇಟ್ಟುಕೊಂಡಿವೆ. ಈ ನಂಬಿಕೆ ಕಳೆದ ಹತ್ತಿಪ್ಪತ್ತು ವರುಶಗಳಿಂದ ಬೆಳೆದುಕೊಂಡು ಬಂದಿದೆ.

ಉದ್ದಿಮೆಯ ಬೆಳವಣಿಗೆಯ ಜೊತೆಗೆ ಕೂಡಣ(society)ಕ್ಕೆ ಒಳಿತನ್ನು ಮಾಡುವುದು ಎಲ್ಲರ ಬಯಕೆಯೂ ಆಗಿದೆ. ಇಡಿನೆಲಗೊಳಿಸುವಿಕೆ(globalization) ಮತ್ತು ಹೊಸ ಹಮ್ಮುಗೆಗಳಿಂದಾಗಿ ಬಾಳಬಗೆಯ ಏಳಿಗೆ ಚುರುಕಾಗುತ್ತಿದ್ದಂತೆ ಕೂಡಣಕ್ಕೆ ಒಳಿತನ್ನು ಮಾಡುವ ಹುರುಪೂ ಮಂದಿಯಲ್ಲಿ ಹೆಚ್ಚುತ್ತಿದೆ. ಇಂತಹುದರ ನಡುವೆ ಕೂಡಣದ ಹೊಸಜಂಬಾರಿಕೆ(social entrepreneurship)ಯು ಎಲ್ಲರ ಬಯಕೆಯನ್ನು ಸರಳಗೊಳಿಸಬಲ್ಲದು ಎಂದರೆ ತಪ್ಪಾಗಲಿಕ್ಕಿಲ್ಲ.

ಏನಿದು ಕೂಡಣದ ಹೊಸಜಂಬಾರಿಕೆ?

ವಿಕಿಪೀಡಿಯದ ಹುರುಳಿನಂತೆ ಕೂಟದ ಹೊಸಜಂಬಾರಿಕೆಯು ಕೊಡುಕೊಳ್ಳುವಿಕೆಯ ಜಾಣ್ಮೆಯನ್ನು ಕೂಡಣದ ತೊಡಕುಗಳನ್ನು ಹೋಗಲಾಡಿಸಲು ಬಳಸುವ ಚಳಕವೇ ಅಗಿದೆ. ಈ ಎಣಿಕೆ(concept)ಯನ್ನು ಹಲಬಗೆಯ ಕೂಡಣಗಳಿಗೆ ಬಳಸಬಹುದಾಗಿದೆ. ಇತರೆ ಜಂಬಾರಿಗರು ಆದಾಯವನ್ನು ಗೆಯ್ಮೆ(performance)ಯ ಅಳತೆಗೋಲನ್ನಾಗಿ ಬಳಸಿದರೆ, ಕೂಡಣದ ಹೊಸಜಂಬಾರಿಗರು ಕೂಡಣದ ಒಳಿತು ಮತ್ತು ಬೆಳವಣಿಗೆಯನ್ನು ಅಳತೆಗೋಲನ್ನಾಗಿ ಬಳಸುತ್ತಾರೆ. ಕೆಲವು ಕೂಡಣದ ಹೊಸಜಂಬಾರಿಗರು ಮಂದಿಯ ಆದಾಯವನ್ನು ಗೆಯ್ಮೆಯ ಅಳತೆಗಾಗಿ ಬಳಸುವುದುಂಟು. ಕಲೆ, ಸಂಸ್ಕ್ರುತಿ ಮತ್ತು ಸುತ್ತಣದ ಏಳಿಗೆಗಾಗಿ ಕೆಲಸ ಮಾಡಲು ಮುಂದೆ ಬರುವ ಮಂದಿಯನ್ನು ಈ ಹೊಸಜಂಬಾರಿಗರು ಸೆಳೆಯುತ್ತಾರೆ.

ಕೂಡಣದ ಹೊಸಜಂಬಾರಿಕೆಯು ಕೂಡಣಕ್ಕೆ ಒಳಿತನ್ನು ಮಾಡುವ ಸರಳ ಬಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಂಡವಾಳಗಾರರು, ಸಿರಿವಂತರು ಇದರಲ್ಲಿ ತೊಡುಗುತ್ತಿದ್ದಾರೆ. ಇಂತಹವರನ್ನು ಸ್ತಳೀಯ ಬದಲಾವಣೆಯ ಹರಿಕಾರರೆಂದೇ ಬಿಂಬಿಸಲಾಗುತ್ತದೆ. ಸಾಮಾನ್ಯವಾಗಿ ಕೂಡಣದ ಹೊಸಜಂಬಾರಿಗರು ಸ್ತಳೀಯ ತೊಡಕುಗಳನ್ನು ಬಗೆಹರಿಸಲು ಹೊಸಬಗೆಯ ಹಮ್ಮುಗೆಗಳನ್ನು ಮತ್ತು ಒಳ್ಳೆಯ ಹೊಳಹುಗಳನ್ನು ನಂಬಿರುತ್ತಾರೆ. ಕೂಡಣದ ತೊಡಕುಗಳನ್ನು ತಿಳಿದು ಅವುಗಳನ್ನು ತೊಡೆದುಹಾಕಲು ಪಟ್ಟುಬಿಡದೇ ಮುನ್ನಡೆಯುವವರೇ ಆಗಿರುತ್ತಾರೆ. ತೊಡಕುಗಳನ್ನು ನಿವಾರಿಸಲು ಆಡಳಿತ ಯಂತ್ರದ ಬದಲಾಗಿ ಕೂಡಣದ ಜನರ ತೊಡಗಿಸಿಕೊಳ್ಳುವಿಕೆ ಮತ್ತು ಪಾಲುದಾರಿಕೆಯನ್ನು ಮೂಲ ಹೂಡಿಕೆಯನ್ನಾಗಿರಿಸುತ್ತಾರೆ. ತಮ್ಮದೇ ಆದ ಚಿಕ್ಕ ಹರವು(area)ಗಳ ಮೇಲೆ ಕೆಲಸಮಾಡುತ್ತಾರೆ. ತೊಡಕುಗಳನ್ನು ಚೆನ್ನಾಗಿ ತಿಳಿಯಲು ಮತ್ತು ಸ್ತಳೀಯ ಸೊಮ್ಮು(resource)ಗಳನ್ನು ಬಳಸಿ ತೊಡಕುಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕಲು ಚಿಕ್ಕ ಹರವುಗಳು ನೆರವಾಗುತ್ತವೆ.

ಕೂಡಣದ ಹೊಸಜಂಬಾರಿಕೆಯ ಗುರಿಗಳನ್ನು ನಾಲ್ಕು ಕವಲುಗಳಾಗಿ ನೋಡಬಹುದು. ಅವು, ಒಡಲೊಳಿತು, ಕಲಿಕೆ, ಕ್ರುಶಿ ಮತ್ತು ಬಾಳಿನ ಗುಣಮಟ್ಟವನ್ನು ಮೇಲೇರಿಸುವ ಗುರಿಗಳು. ಅವುಗಳನ್ನು ಇಂಗ್ಲಿಶ್ ನುಡಿಯ HEAL (ಅಂದರೆ Health, Education, Agriculture ಮತ್ತು Livelihood) ಪದದಿಂದ ಗುರುತಿಸಲಾಗುತ್ತದೆ. ಆಯಾ ಹರವುಗಳಲ್ಲಿ ಕೆಲಸಮಾಡುವ ಕೂಡಣದ ಹೊಸಜಂಬಾರಿಗರು ತಮ್ಮ ಹಂಪಡೆದ ಗುಂಪುಗಳ (beneficiary groups) ಒಳಿತಿಗಾಗಿ ಕೆಲಸಮಾಡುತ್ತಾರೆ. ಕೂಡಣದ ತೊಡಕುಗಳಲ್ಲದೆ ಸ್ತಳೀಯ ಹುಟ್ಟುಜಾಣ್ಮೆ(Talent), ಕಲೆ, ಸಂಸ್ಕ್ರುತಿಯನ್ನು ಆರಯ್ಸುವ ಮತ್ತು ಬೆಂಬಲಿಸುವ ಮೂಲಕ ಮಂದಿಯ ಬಾಳಿನ ಗುಣಮಟ್ಟವನ್ನು ಮೇಲೇರಿಸುವ ಉದ್ದೇಶ ಹೊಂದಿರುತ್ತಾರೆ.

ಇತ್ತೀಚಿನ ನಾಡುಗಳಲ್ಲಿ ಅಮೆರಿಕಾದ ಬಾಸ್ಟನ್ ಸೇರಿದಂತೆ ಹಲವು ಕಲಿಕೆವೀಡುಗಳು ಕೂಡಣದ ಹೊಸಜಂಬಾರಿಕೆಯನ್ನು ತಮ್ಮ ಕಲಿಕೆಯಲ್ಲಿ ಸೇರಿಸಿಕೊಂಡಿವೆ. ಕೆಲವು ಏಡುಗಳ ಹಿಂದೆ ದಾರವಾಡದ ಕರ‍್ನಾಟಕ ಕಲಿಕೆವೀಡು ಇಂತಹ ಒಂದು ಪದವಿ ಹಮ್ಮುಗೆಯನ್ನು ಜಾರಿಗೆ ತಂದಿರುವುದನ್ನು ಇಲ್ಲಿ ನೆನೆಯಬಹುದು.

(ಮಾಹಿತಿ ಸೆಲೆ: Ashoka.orgವಿಕಿಪೀಡಿಯ)
(ಚಿತ್ರ ಸೆಲೆ: youinc.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.