ನಿನ್ನನು ನೀನು ಗೆಲ್ಲಬಹುದು!

– ನಾಗರಾಜ್ ಬದ್ರಾ.

walk-on-rail-track

( ಈ ಕತೆ ಮತ್ತು ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕ )

ರಾಮಾಚಾರಿ – ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಕಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ತಾನದಲ್ಲಿ  ಕೆಲಸ ಮಾಡುತ್ತಿದ್ದನು. ಆದರೆ ಅವನ ಸಂಬಳ ಸ್ನೇಹಿತರಿಗಿಂತಲೂ ಸ್ವಲ್ಪ ಕಡಿಮೆಯದ್ದಾಗಿತ್ತು.ಕಮಾಲಪುರದಲ್ಲಿ ಒಬ್ಬನೇ ಒಂದು ಬಾಡಿಗೆ ಕೊಟಡಿಯನ್ನು ಮಾಡಿಕೊಂಡು ವಾಸವಾಗಿದ್ದನು.  ರಾಮಾಚಾರಿಯು ಸ್ವಬಾವದಲ್ಲಿ ದಲ್ಲಿ  ಸ್ವಲ್ಪ  ಒರಟು, ಆದರೆ ಮನಸ್ಸು ಮಾತ್ರ  ತುಂಬಾ ಮ್ರುದು. ಜೀವನದಲ್ಲಿ ತಾನು ಆಸೆ ಪಟ್ಟಿದ್ದು ಯಾವುದೂ  ಈಡೇರಲಿಲ್ಲ ಎಂದು ಕೊರಗುತ್ತಿದ್ದನು. ತನ್ನ ಸ್ನೇಹಿತರು ತನಗಿಂತ ಒಳ್ಳೆಯ ರೀತಿಯಲ್ಲಿ ಜೀವಿಸುತ್ತಿರುವದನ್ನು ಕಂಡು ಮನಸ್ಸಿನಲ್ಲಿ ಯೋಚಿಸಿ ನರಳುತ್ತಿದ್ದನು. ತನ್ನ ಜೀವನದಲ್ಲಿ ಅದ್ರುಶ್ಟವೇ ಇಲ್ಲವೆಂದು ಮನಸ್ಸಿನಲ್ಲಿಯೇ ನೋವು ಪಡುತ್ತಿದ್ದನು, ’ನನಗೇ ಯಾಕೆ ಹೀಗೆ ಮಾಡುತ್ತೀಯಾ’ ಎಂದು ಪ್ರತಿ ದಿನವೂ ದೇವರ ಜೊತೆ ಜಗಳವಾಡುತ್ತಿದ್ದನು. ಅವನು ಪ್ರತಿ ಕ್ಶಣವು ಅದನ್ನೇ ಯೋಚಿಸುತ್ತಾ ತನ್ನ ವರ‍್ತಮಾನದ ಜೀವನದ ಸಂತೋಶವನ್ನು ಅನುಬವಿಸದೇ ನೋವಿನಲ್ಲಿ ಬದುಕುತ್ತಿದ್ದನು.

ರಾಮಾಚಾರಿಯು ತನ್ನ ನೋವು,ಅನಿಸಿಕೆಗಳನ್ನು, ಯೋಚನೆಗಳನ್ನು ಯಾರ ಹತ್ತಿರವು  ಹಂಚಿಕೊಳ್ಳುತ್ತಿರಲ್ಲಿಲ್ಲ. ಆದ್ದರಿಂದಲೇ ಅವನ ನೋವು, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವುದಿಲ್ಲ. ಹೀಗೆ ಕೆಲವು ತಿಂಗಳಗಳು ಕಳೆದವು. ಒಂದು ದಿನ ರಾಮಾಚಾರಿಯು ತುಂಬಾ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಬೇಕಂತ ಕೆಟ್ಟ ನಿರ‍್ಣಯವನ್ನು  ತೆಗೆದುಕೊಂಡನು. ಬೆಳಗಿನ ಜಾವ ಬೇಗನೆಯೇ ಎದ್ದು ರೂಮಿನಿಂದ ಹೊರಟನು. ದೇವಸ್ತಾನಕ್ಕೆ ಹೋಗಿ ದೇವರ ಹತ್ತಿರ ’ತಂದೆ ತಾಯಿ ತಮ್ಮನನ್ನು ಕಾಪಾಡು, ಹಾಗೆ ನನ್ನನ್ನು ಕ್ಶಮಿಸಿಬಿಡು’ ಎಂದು ಕೇಳಿಕೊಂಡನು. ನಂತರ ಒಂದು ಚಲನಚಿತ್ರವನ್ನು ನೋಡಲು ತೇಟರ್ ಗೆ ಹೋದನು. ಮದ್ಯಾಹ್ನ ಚಲನಚಿತ್ರ ಬಿಟ್ಟಮೇಲೆ ಒಳ್ಳೆಯ ಊಟವನ್ನು ಮಾಡಿಕೊಂಡು, ಗಾರ‍್ಡನ್ ಒಂದರಲ್ಲಿ ಒಬ್ಬನೇ ತನ್ನ  ಜೀವನದಲ್ಲಿ ನಡೆದ ಗಟನೆಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾ ಕುಳಿತುಕೊಂಡನು. ನೋಡ ನೋಡುತ್ತಲೇ ಸಾಯಂಕಾಲವಾಗಿ ಹೋಗಿತ್ತು. ಚಲಿಸುತ್ತಿರುವ ರೈಲುಗಾಡಿ ಎದುರು ನಿಂತು ಆತ್ಮಹತ್ಯೆ ಮಾಡಿಕೊಳ್ಳಬೇಕಂತ ಮೊದಲೆ ಯೋಚಿಸಿದ್ದ. ಆದ್ದರಿಂದ ನಗರದ ರೈಲ್ವೆ ನಿಲ್ದಾಣದಕ್ಕೆ ಕಡೆಗೆ ನಡೆದುಕೊಂಡು ಹೊರಟನು.

ಸುಮಾರು 1 ಗಂಟೆಯ ನಂತರ ನಿಲ್ದಾಣವನ್ನು ತಲುಪಿದನು. ಕಡೆ ಬಾರಿ ತಂದೆ, ತಾಯಿ, ಸ್ನೇಹಿತರ ಜೊತೆ ಮಾತಾಡಬೇಕೆಂದು ಕರೆಯನ್ನು ಮಾಡಿದನು. ಅವರ ಯೋಗಕ್ಶೇಮವನ್ನು ವಿಚಾರಿಸಿ, ತನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಶಮಿಸಿ ಅಂತ ಕೇಳಿದನು. ಅವರು ಯಾಕೆ ಹೀಗೆ ಮಾತಾಡುತ್ತಿರುವನೆಂದು ಗಾಬರಿಯಿಂದ ಏನಾಗಿದೆ? ಅಂತ ಕೇಳಿದರು. ಅದಕ್ಕೆ ರಾಮಾಚಾರಿಯು ’ಸ್ವಲ್ಪ ಮನಸ್ಸಿಗೆ ಬೇಜಾರಾಗಿದೆ ಅದಕ್ಕೆ ಹಾಗೆ ಮಾತಾಡಿದೆ,ನೀವು ಯೋಚಿಸಬೇಡಿ’ ಎಂದು ಹೇಳಿದನು. ಮನೆಯವರು ’ಏನು ಯೋಚನೆ ಮಾಡಬೇಡ, ಎಲ್ಲವೂ ಸರಿಯಾಗುತ್ತದೆ’ ಎಂದು ಹೇಳಿದರು. ರಾಮಾಚಾರಿಯು ಆಯಿತೆಂದು ಹೇಳಿ ಕರೆಯನ್ನು ಕಟ್ ಮಾಡಿದ್ದನು.

ಹಾಗೆ ರೈಲು ನಿಲ್ದಾಣದಲ್ಲಿನ ಕುರ‍್ಚಿ ಮೇಲೆ ಕುಳಿತುಕೊಂಡು ಮತ್ತೆ ತನ್ನ ಹಳೆಯ ನೆನಪುಗಳ ಅಂಗಳಕ್ಕೆ ಜಾರಿದನು. ರಾತ್ರಿ ಸುಮಾರು 11 ಗಂಟೆಗೆ  ನಿಲ್ದಾಣದಿಂದ ತುಸು ದೂರದಲ್ಲಿದ್ದ  ನಿರ‍್ಜನ ಸ್ತಳದ ಕಡೆಗೆ ಹೊರಟನು. ಆ ಸ್ತಳವನ್ನು ತಲುಪಿದ ಮೇಲೆ ರೈಲು ಕಂಬಿಗಳ ಹತ್ತಿರವೇ ಕುಳಿತುಕೊಂಡನು. ಸ್ವಲ್ಪ ಸಮಯದ ನಂತರ ದೂರದಲ್ಲಿ ಪ್ರಕಾಶಮಾನವಾದ ಬೆಳಕಿನ ಜೊತೆಗೆ ರೈಲು ಬರುವುದು ಕಾಣಿಸಿತು. ರೈಲು ಅವನ ಕಡೆಗೆ ವೇಗವಾಗಿ ಬರುತ್ತಿದಂತೆ ರಾಮಾಚಾರಿಯ ಮನಸ್ಸು ಒಂದು ಗಳಿಗೆಯಲ್ಲಿ ತಂದೆ,ತಾಯಿ ಸ್ನೇಹಿತರನ್ನು, ಮುಂದಿನ ಸುಂದರವಾದ ಜೀವನವನ್ನು ಬಿಟ್ಟು ಯಾಕೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆಯೆಂದು ಕೇಳುತ್ತಿತ್ತು. ಇನ್ನೊಂದು ಗಳಿಗೆಯಲ್ಲಿ ನೋವುಗಳಿಂದ ಮುಕ್ತಿ ಹೊಂದಬೇಕೆಂದು ಹೇಳುತಾಯಿತ್ತು. ರಾಮಾಚಾರಿಯ ಮನಸ್ಸಿನಲ್ಲಿನ ಈ ದ್ವಂದ್ವದಿಂದ, ದೈರ‍್ಯ ಸಾಲದೆ ರೈಲು ಕಂಬಿಗಳಿಂದ ದೂರ ಸರಿದನು.

ಕೆಲವೇ ನಿಮಿಶಗಳಲ್ಲಿ ರೈಲು ಹೊರಟಿತು. ರಾಮಾಚಾರಿಯು ಮತ್ತೆ ರೈಲು ಕಂಬಿಗಳಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಂಡನು. ಅವನ ಮನಸ್ಸಿನಲ್ಲಿ ನೂರಾರು ಯೋಚನೆಗಳು ಹರಿದಾಡತೊಡಗಿದ್ದವು. ಅವನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸುಮಾರು 30 ನಿಮಿಶಗಳ  ನಂತರ ಮತ್ತೆ ಬೆಳಕಿನ ಜೊತೆಗೆ ರೈಲು ಬರುತ್ತಿರುವ ಶಬ್ದವು ಕೇಳಿಸಿತು. ರಾಮಾಚಾರಿ ಯಾವುದೇ ನಿರ‍್ಣಯವನ್ನು ತೆಗೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದ ನಿರ‍್ದಾರದಿಂದ ದೂರ ಸರಿದನು. ಸುಮಾರು 1 ಗಂಟೆಯ ನಂತರ ಅವನು ಆತ್ಮಹತ್ಯೆ ಮಾಡಿಕೊಳ್ಳಲೆಬೇಕೆಂದು ದ್ರುಡ ನಿರ‍್ದಾರ ಮಾಡಿದನು. ಸುಮಾರು ರಾತ್ರಿ 12 ಗಂಟೆಗೆ ಮತ್ತೆ ರೈಲು ಬರುವ ಶಬ್ದ ಕೇಳಿಸಿತು.

ರಾಮಾಚಾರಿಯು ಗಟ್ಟಿ ಮನಸ್ಸಿನಿಂದ ರೈಲು ಕಂಬಿಗಳ ಕಡೆಗೆ ಹೆಜ್ಜೆ ಹಾಕಬೇಕೆನುವಾಗಲೇ, ಅವನಿಗೆ ಯಾರೋ ಕೂಗಿದ ಹಾಗಾಯಿತು. ಹಿಂದೆ ತಿರುಗಿ ನೋಡಿದ, ಸ್ವಲ್ಪ ದೂರದಲ್ಲಿ ಯಾರೋ ನಿಂತಿರುವ ಹಾಗೆ ಕಾಣಿಸಿತು.

ತಕ್ಶಣವೇ ಅಲ್ಲಿಂದ, ’ಇಶ್ಟು ರಾತ್ರಿಯಲ್ಲಿ ರೈಲು ಕಂಬಿಗಳ ಹತ್ತಿರ ಏನು ಮಾಡುತ್ತಿದ್ದಿಯಾ’ ಎಂದು ಯಾರೋ ಪ್ರಶ್ನೆಯನ್ನು ಕೇಳಿದರು.

ರಾಮಾಚಾರಿಯು ಗಾಬರಿಯಿಂದ ’ಏನಿಲ್ಲ,  ನೀನು ಯಾರು ಇಶ್ಟು ರಾತ್ರಿಯಲ್ಲಿ ನೀನೂ ಇಲ್ಲಿ ಏನು ಮಾಡುತ್ತಿರುವೆ’ ಎಂದು ಕೇಳಿದನು.

ಅದಕ್ಕೆ ಅವನು ’ನನ್ನ ಜಾಗಕ್ಕೆ ಬಂದು ನನಗೇ ಯಾರು ನೀನಂತ ಕೇಳುತ್ತೀಯಲ್ಲ’ ಅಂತ ಗದರಿಸಿದನು.

ರಾಮಾಚಾರಿ : ಇದು ರೈಲ್ವೆ ಇಲಾಕೆಯವರದು, ನಿನ್ನ ಜಾಗ ಹೇಗೆ ?

ಅವನು : ನಾನು ಈ ಜಾಗದಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿದ್ದೆ, ನನ್ನ ಆತ್ಮ ಇನ್ನೂ ಈ ಶರೀರದಿಂದ ಮುಕ್ತಿಗೊಂಡಿಲ್ಲ ಅದಕ್ಕೆ ಇಲ್ಲಿಯೇ ವಾಸವಾಗಿದ್ದೇನೆ.

ರಾಮಾಚಾರಿ : ತಮಾಶೆ ಮಾಡಬೇಡ ನೀನು

ಬೂತ : ಸಂಶಯ ಇದ್ದರೆ ಹತ್ತಿರ ಬಂದು ನನ್ನ ಮುಟ್ಟಿ ಪರೀಕ್ಶಿಸು

ರಾಮಾಚಾರಿ ಗಾಬರಿಯಿಂದ ನಡುಗುತ್ತಾ ಅವನ ಹತ್ತಿರಕ್ಕೆ ಹೋಗಿ ಕೈಯಿಂದ ಅವನನ್ನು ಮುಟ್ಟಿದ, ಆದರೆ ರಾಮಚಾರಿಗೆ ಯಾವ ಸ್ಪರ‍್ಶದ ಅನುಬವವಾಗಲಿಲ್ಲ. ಬಯದಿಂದ ಹಿಂದೆ ಸರಿದನು.

ಬೂತ : ಬಯ ಪಡಬೇಡಾ,ನಾನು ನಿನಗೆ ಏನೂ ಹಾನಿ ಮಾಡೋದಿಲ್ಲ. ನಾನು ಈ ಸ್ತಳದಲ್ಲಿಯೇ ಒಂದು  ವರ‍್ಶದ ಹಿಂದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದೆ. ನನಗೆ ಸಂಶಯ ಬರುತ್ತಿದೆ ನೀನು ಅದಕ್ಕೆ ಬಂದಿರುವೆ ಎಂದು?

ರಾಮಾಚಾರಿ : ಹೌದು ನೀನು ಹೇಳಿದ್ದು ನಿಜ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದೀನಿ. ನಾನು ಸಿನಿಮಾಗಳಲ್ಲಿ ನೋಡಿದೆ ಬೂತ,ದೆವ್ವಗಳು ಬಿಳಿ ಬಟ್ಟೆಗಳಲ್ಲಿ, ವಿಕಾರವಾಗಿರುತ್ತವೆಂದು.

ಬೂತ :  ಮನುಶ್ಯನು ಸತ್ತಮೇಲೆ, ಅವನ ಆತ್ಮವು ಶರೀರದಿಂದ  ಮುಕ್ತಿಹೊಂದುತ್ತದೆ. ಆದರೆ ಅವನ ಮುಕ್ಯವಾದ ಆಸೆಗಳು ಈಡೇರದೆ ಹಾಗೆ ಉಳಿದಿದ್ದರೆ ಅವನ ಆತ್ಮ ಆ ಶರೀರದಿಂದ ಮುಕ್ತಿಯನ್ನು ಹೊಂದದೆ, ಹಾಗೆ ತಿರುಗಾಡುತ್ತಾ ಇರುತ್ತದೆ. ಆತ್ಮಗಳಿಗೆ ಯಾವದೇ ರೀತಿಯ ಆಕಾರವಿರುವುದಿಲ್ಲ. ಅವುಗಳು ಯಾರ ದೇಹವನ್ನು ಸೇರಿಕೊಳ್ಳುತ್ತವೆಯೋ ಆ ರೀತಿಯ ಆಕಾರವನ್ನು ಪಡೆದುಕೊಳ್ಳುತ್ತವೆ. ನೀನು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ‍್ದಾರಕ್ಕೆ ಬಂದೆ?

ರಾಮಾಚಾರಿ : ನನ್ನ ಜೀವನದಲ್ಲಿ ಅದ್ರುಶ್ಟವೇ ಇಲ್ಲ. ಕಾಲೇಜಿನಲ್ಲಿ ನನ್ನ ಸ್ನೇಹಿತರು ಓದಿನಲ್ಲಿ  ನನಗಿಂತ ಕಡಿಮೆಯಿದ್ದಿದ್ದವರು ಇವತ್ತು ನನಗಿಂತ ಒಳ್ಳೆಯ ಉದೋಗ್ಯದಲ್ಲಿದ್ದಾರೆ ಮತ್ತು ತುಂಬಾ ಸುಕಕರ ಜೀವನವನ್ನು ನಡೆಸುತ್ತಿದ್ದಾರೆ. ನಾನು ತುಂಬಾ ಪ್ರಯತ್ನ ಪಟ್ಟಿದ್ದೀನಿ .ಆದರೆ ಅವರಿಗಿರುವ ಅದ್ರುಶ್ಟ ನನಗಿಲ್ಲ.

ಬೂತ : ನೀನು ಮೊದಲು ನಿನ್ನ ಜೀವನವನ್ನು ಬೇರೆಯವರ ಜೊತೆ ಹೋಲಿಕೆ ಮಾಡಿಕೊಳ್ಳುವದನ್ನು ಬಿಡು. ದೇವರು ಯಾರಿಗೆ ಏನು ನೀಡಬೇಕೆಂದು ಮೊದಲೇ ಯೋಚಿಸಿರುತ್ತಾನೆ. ಅದರಂತಲೇ ನಮ್ಮ ಜೀವನಗಳು ನಡೆಯುತ್ತಿರುತ್ತವೆ. ಈ ಬೂಮಿ ಮೇಲೆ ಪ್ರತಿಯೊಬ್ಬರ ಜೀವನವು ಬೇರೆ ಬೇರೆ ರೀತಿಯಲ್ಲಿ ಸಾಗುತ್ತವೆ. ನಿನಗೆ ಹೋಲಿಕೆ ಮಾಡಬೇಕೆಂದು ಅನಿಸಿದರೆ ನಿನಗಿಂತ ಕಡಿಮೆಯಿರುವವರ ಜೊತೆ ಮಾಡಿಕೋ. ಆಗ ನಿನಗೆ ಅರಿವಾಗುತ್ತದೆ ನೀನು ಎಶ್ಟು ಒಳ್ಳೆಯ ಸ್ತಿತಿಯಲ್ಲಿರುವೆ ಎಂದು. ಜೀವನದಲ್ಲಿ ಸಂತೋಶವಾಗಿ  ಬದುಕಬೇಕೆಂದರೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಡಬೇಕು.

ರಾಮಾಚಾರಿ : ನನಗೆ ಪ್ರೀತಿಯಲ್ಲಿಯೂ ಮೋಸವಾಯಿತು. ನಾನು ತುಂಬಾ ನಂಬಿಕೆಯಿಟ್ಟಿದ್ದವಳೆ ನನಗೆ ಮೋಸ ಮಾಡಿದಳು, ಮನಸ್ಸಿಗೆ ತುಂಬಾ ನೋವಾಗಿದೆ. ಪ್ರತಿ ಕ್ಶಣವು ಅವಳದೇ ನೆನಪು, ಈ ನೆನಪು ನನ್ನನ್ನು ಬದುಕಲೂ ಬಿಡದೇ ಸಾಯಲೂ ಬಿಡದೇ ಪ್ರತಿ ಕ್ಶಣವು ಕೊಲ್ಲುತ್ತಿದೆ. ಅವಳು ನನಗೆ ಯಾಕೆ ಮೋಸ ಮಾಡಿದಳೆಂದು ನನಗೆ ಇಲ್ಲಿವರೆಗೂ ಗೊತ್ತಾಗಿಲ್ಲ. ನನ್ನಿಂದ ಏನು ತಪ್ಪಾಗಿದೆ ಎಂದು ಗೊತ್ತಾಗ್ಲಿಲ್ಲ.

ಬೂತ :  ಸಂಬಂದಗಳು ನಂಬಿಕೆ, ವಿಶ್ವಾಸದಿಂದಲೇ ಗಾಡವಾಗಿ ಬೆಳೆಯುತ್ತವೆ ಹಾಗೂ ಅದರ ಮೇಲೆಯೇ ನಿಂತಿರುತ್ತವೆ. ನಿಜವಾದ ಪ್ರೀತಿಯೆಂದರೆ ಎರಡು  ಮನಸ್ಸುಗಳ ಬೆಸೆಯುವ ಒಂದು ಗಾಡವಾದ ಸಂಬಂದ. ದೇಹದ ಮತ್ತು ಹಣದ ಆಕರ‍್ಶಣೆಯಿಂದ ಹುಟ್ಟಿದ ಸಂಬಂದಗಳು ತುಂಬಾ ಬೇಗನೆ ಕೊನೆಗಾಣುತ್ತವೆ. ಯಾಕೆಂದರೆ ಇಂತಹ ಸಂಬಂದಗಳು ಆಕರ‍್ಶಣೆಯ ಮೇಲೆಯೇ ನಿಂತಿರುತ್ತವೆ. ಆಕರ‍್ಶಣೆ ಕಡಿಮೆಯಾದಂತೆ ಇವುಗಳ ಮೌಲ್ಯವು ಕಡಿಮೆಯಾಗುತ್ತದೆ. ನೀನು ಏನಾದರು ಮೋಸ ಮಾಡಿದ್ದಿಯಾ? ಇಲ್ಲತಾನೇ, ಇನೊಬ್ಬರು ಮಾಡಿದ ಮೋಸದ ಬಗ್ಗೆ ಯೋಚಿಸಿ ನೀನೇಕೆ ನೋವು ಪಡುತ್ತಿದ್ದಿಯಾ? ಯಾವುದನ್ನು ನಿನ್ನ ಕೈಯಿಂದ ಸರಿಪಡಿಸಲು ಸಾದ್ಯವಿಲ್ಲವೊ, ಅದರ ಬಗ್ಗೆ ಯೋಚಿಸಿ ಯೋಚಿಸಿ ಯಾಕೆ ನರಳುತ್ತಿರುವೆ. ಎಂತಹ ವಿಪರ‍್ಯಾಸ ನೋಡು, ಪರೀಕ್ಶೆ ಬರೆಯುವಾಗ ಓದಿರೋದು ಯಾವುದೂ ನೆನಪಿಗೆ ಬರೋದಿಲ್ಲವೆಂದು ಗೋಳಾಡುತೀವಿ. ಈಗ ನೆನಪಿನಿಂದ ಹೋಗುತ್ತಿಲ್ಲವೆಂದು ನರಳಾಡುತ್ತೀವಿ. ಇದೇ ಆ ದೇವರ ಆಡುವ ಆಟ. ಈ ನೆನಪುಗಳು ಕಾಲ ಕಳೆದ ಹಾಗೆ ಮಾಯವಾಗುತ್ತವೆ. ಬೂತಕಾಲದಲ್ಲಿ ನಡೆದಹೋದ ಕೆಟ್ಟ ಸಂಗತಿಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು, ಅದರಿಂದ ಕಲಿತ ಪಾಟವನ್ನು ನೆನಪಿನಲ್ಲಿ ಇಟ್ಟುಕೊಂಡು, ಬವಿಶ್ಯದ ಬಗ್ಗೆ ತುಂಬಾ ಯೋಚಿಸದೇ ವರ‍್ತಮಾನದಲ್ಲಿ ಬದುಕು. ನಿನ್ನ ನೋವು ತಾನೇ ಮಾಯವಾಗುತ್ತದೆ.

ರಾಮಾಚಾರಿ : ಯಾರೇ ಆಗಲಿ ನನ್ನ ಸಹಾಯವನ್ನು ಕೇಳಿದರೆ, ನನ್ನಿಂದಾಗುವುದನ್ನು ಮಾಡುತ್ತೇನೆ. ಆದರೆ ನನಗೆ ಸಹಾಯದ ಅವಶ್ಯಕತೆ ಇದ್ದಾಗ ಯಾರು ಮಾಡೋದಿಲ್ಲ ಯಾಕೆ?

ಬೂತ : ಸಹಾಯವನ್ನು ಕೇಳಿಕೊಂಡು ಬಂದವರಿಗೆ ಕೈಲಾದಶ್ಟೂ ಸಹಾಯ ಮಾಡುವುದು ತುಂಬಾ ಒಳ್ಳೆಯ ಗುಣ. ಅದನ್ನು ಯಾವತ್ತು ನಿಲ್ಲಿಸಬೇಡ. ಆದರೆ ಅವರಿಂದಲೂ ಅದೇ ರೀತಿಯ ಸಹಾಯ ನಿರೀಕ್ಶಿಸೋದು ತಪ್ಪು. ನಿರೀಕ್ಶೆಯೇ ಮನುಶ್ಯನ ಜೀವನದಲ್ಲಿನ ನೋವುಗಳಿಗೆ ಕಾರಣ. ಜೀವನದಲ್ಲಿ ಸಂತೋಶವಾಗಿ ಬಾಳಬೇಕೆಂದರೆ ನೀರಿಕ್ಶೆಯನ್ನು ತ್ಯಜಿಸಬೇಕು.

ರಾಮಾಚಾರಿ : ನಾನು ನೋಡಲು ನನ್ನ ಸ್ನೇಹಿತರಿಗಿಂತ ಚೆನ್ನಾಗಿಲ್ಲ ಯಾಕೆ? ನಾನು ಏನು ತಪ್ಪು ಮಾಡಿದೀನಿ? ಅವರನ್ನು ನೋಡಿದಾಗೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತದೆ.

ಬೂತ : ದೇವರು ಈ ಬೂಮಿಯಮೇಲೆ ಪ್ರತಿಯೊಬ್ಬರನ್ನು ವಿಬಿನ್ನವಾದ ರೀತಿಯಲ್ಲಿ ಹುಟ್ಟಿಸಿದ್ದಾನೆ. ಈ ನಿನ್ನ ದೇಹವು ಬೂಮಿಮೇಲೆ ಕೋಟ್ಯಂತರ ಮನುಶ್ಯರಗಳ ಮದ್ಯೆ ’ಇವನೇ ರಾಮಾಚಾರಿ’ ಎಂದು ಗುರುತಿಸಲು ದೇವರು ಮಾಡಿದ ಮೂಳೆ,ಮಾಂಸದ ಹೊದಿಕೆ ಅಶ್ಟೇ.
ಈ ದೇಹವು ಶಾಶ್ವತವಾದುದಲ್ಲ,ಇದರ ಮೇಲೆ ವ್ಯಾಮೋಹವನ್ನು ಇಟ್ಟುಕೊಳ್ಳಬೇಡ. ಇದರ ಬಗ್ಗೆ ತುಂಬಾ ತೆಲೆಕೆಡಿಸಿಕೊಳ್ಳಬೇಡ. ಇದು ಒಂದು ದಿನ ನಶಿಸಿ ಹೋಗುವುದು. ನಿನ್ನ ಆತ್ಮವು ಕೆಲವು ವರ‍್ಶಗಳಿಗೋಸ್ಕರ ಈ ದೇಹವನ್ನು ಬಾಡಿಗೆಗೆ ಪಡೆದಿದೆ. ಜೀವನದ ಅಮೂಲ್ಯವಾದ ಸಮಯವನ್ನು  ದೇಹದ ಸೌಂದರ‍್ಯದ ಬಗ್ಗೆ  ಯೋಚಿಸುವುದರಲ್ಲಿ ಕಳೆಯಬೇಡ.

ರಾಮಾಚಾರಿ : ಈ ಸಂಬಂದಗಳು – ನಾನು,ನನ್ನದು, ಇವುಗಳ ಬಗ್ಗೆ ಹೇಳು. ಮನುಶ್ಯನು ತನ್ನ  ಜೀವನವನ್ನು ಇದರಲ್ಲಿಯೇ ಕಳೆಯುತ್ತಾನಲ್ಲಾ?

ಬೂತ : ಒಂದಿಶ್ಟು ಸಂಬಂದಗಳು ಮನುಶ್ಯನ ಹುಟ್ಟಿನೊಂದಿಗೆ ಹುಟ್ಟಿಕೊಳ್ಳುತ್ತವೆ.ಇನೊಂದಿಶ್ಟು ಮನುಶ್ಯನು ಜೀವನವನ್ನು ಸಾಗಿಸುತ್ತಾ ಬೆಳೆಸುತ್ತಾನೆ. ಮನುಶ್ಯನು ಸಂಗಜೀವಿ ಒಂಟಿಯಾಗಿ ಬದುಕಲಾರನು. ಹಾಗಾಗಿಯೇ ಈ ಸಂಬಂದಗಳನ್ನು ಬೆಳೆಸುತ್ತಾನೆ. ಆದರೆ ಯಾವುದು ಶಾಶ್ವತವಾದುದಲ್ಲ. ಅವುಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಹಾಗೂ ನಿಬಾಯಿಸುವ ಪ್ರಯತ್ನದಲ್ಲಿ  ಮನುಶ್ಯನು ತನ್ನ ಇಡೀ ಜೀವನವನ್ನು ಕಳೆಯುತ್ತಾನೆ. ನಾನು ಮತ್ತು ನನ್ನದು ಎನ್ನುವುದು ಈ ಬೂಮಿ ಮೇಲೆ ಏನಿಲ್ಲ. ನಿನ್ನ ದೇಹದ ಜೊತೆಯಲ್ಲಿ ಈ ನಾನು,ನನ್ನದು ಎನ್ನುವುದು ಹುಟ್ಟಿಕೊಂಡು ಇದರ ಜೊತೆಯಲ್ಲಿಯೇ ಕೊನೆಗೊಳ್ಳುತ್ತವೆ. ಯಾವುದು ನಿನ್ನದಂತ ಒಂದು ಸಾರಿ ಯೋಚಿಸು. ನಿನ್ನ ಹೆಂಡತಿ, ಮಕ್ಕಳು, ಮನೆ,ಹೊಲ,ಕಾರು,ಬೈಕು,ಹಣ,ಆಸ್ತಿ – ಯಾವುದೂ ನಿನ್ನದಲ್ಲ. ಅವುಗಳೆಲ್ಲಾ ಬದುಕಲು ಮಾಡಿಕೊಂಡ ಏರ‍್ಪಾಡುಗಳಶ್ಶೆ. ನಿನ್ನದು ಅಂತ ಇರುವುದು ನಿನ್ನ ಆತ್ಮ ಮಾತ್ರ. ಅದನ್ನು ದುರಾಸೆ, ವಂಚನೆ, ಕೋಪ, ವ್ಯಾಮೋಹ, ನಾನು, ನನ್ನದು ಮುಂತಾದವುಗಳಿಂದ ದೂರವಿಡು. ನಿನ್ನ ಆತ್ಮವನ್ನು ಶುದ್ಡವಾಗಿಟ್ಟುಕೊಂಡು ಬಾಳು. ಜೀವನದಲ್ಲಿ ನೋವು ಎನ್ನುವುದು ನಿನ್ನ ಹತ್ತಿರಕ್ಕೂ ಬರುವುದಿಲ್ಲ.

ರಾಮಾಚಾರಿ : ಹೀಗೂ ಬದುಕಬಹುದೇ! ತುಂಬಾ ಕಶ್ಟವೆನಿಸುತ್ತದೆ.

ಬೂತ : ಅವುಗಳನ್ನು ಗೆಲ್ಲುವುದು ತುಂಬಾ ಕಶ್ಟ, ಆದರೆ ಅವುಗಳನ್ನು ಹಿಡಿತದಲ್ಲಿಟ್ಟುಕೊಂಡರೂ ಸಾಕು ಜೀವನದಲ್ಲಿ ತುಂಬಾ ಸಂತೋಶದಿಂದ ಬದುಕಬಹುದು. ನಾನು ಅವುಗಳು ನೀಡಿದ ನೋವುಗಳನ್ನು ತಾಳಲಾರದೆ, ಜೀವನದಿಂದ ಮುಕ್ತಿ ಹೊಂದಲು ಆತ್ಮಹತ್ಯೆಯನ್ನು ಮಾಡಿಕೊಂಡೆ.
ಆದರೂ ನಾನು ಸಾವಿನ ನಂತರವೂ ಅವುಗಳನ್ನು ಗೆಲ್ಲಲಾಗಲಿಲ್ಲ. ನೀನು ಮೊದಲು ನನಗೆ ಯಾರೆಂದು ಕೇಳಿದೆಯಲ್ವಾ, ನಾನು ಏನು  ಉತ್ತರ ನೀಡಿದೆ ಎಂದು ಒಂದು ಸಾರಿ ಯೋಚಿಸು. ’ನನ್ನ ಜಾಗಕ್ಕೆ ಬಂದು ನನಗೇ ಯಾರು ನೀನಂತ ಕೇಳುತ್ತೀಯಲ್ಲ’ ಎಂದು ಉತ್ತರಿಸಿದೆ  ನೆನಪಿಗೆ ಬಂತಾ.

ರಾಮಾಚಾರಿ : ಹಾ! ನೆನಪು ಬಂತು.

ಬೂತ : ನೋಡು ನಾನು ಸತ್ತ ಮೇಲು ಅವುಗಳನ್ನು ನನ್ನಿಂದ ಗೆಲ್ಲಲಾಗಲಿಲ್ಲ. ನೀನು ಗೆಲ್ಲಲು ಪ್ರಯತ್ನ ಮಾಡು, ನನ್ನಿಂದಾಗಲಿಲ್ಲ ಎಂದರೆ ನಿನ್ನಿಂದಲೂ ಆಗೋದಿಲ್ಲ ಅಂತೇನಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ನಿನ್ನ ನಿರ‍್ದಾರವನ್ನು ಮನಸ್ಸಿನಿಂದ ತೆಗೆದುಹಾಕಿದಿಯಾ ತಾನೇ.

ರಾಮಾಚಾರಿ : ನೀನು ಮನುಶ್ಯನ ಬದುಕಿನ ಬಗ್ಗೆ  ಹೇಳಿದ್ದನೆಲ್ಲಾ ಕೇಳಿದ ಮೇಲೆಯೂ ಆತ್ಮಹತ್ಯೆ ಮಾಡಿಕೊಂಡರೆ ನನ್ನಂತ ಮೂರ‍್ಕ ಬೇರಾರಿಲ್ಲ. ಕೆಲವು ವರ‍್ಶಗಳಲ್ಲಿ ತಾನಾಗಿಯೇ ನಶಿಸಿ ಹೋಗುವ, ಶಾಶ್ವತವಲ್ಲದ ಈ ದೇಹವನ್ನು ನಾನೇಕೆ ಆತ್ಮಹತ್ಯೆ ಮೂಲಕ  ಕೊನೆಗೊಳಿಸಲಿ? ಬದುಕುತ್ತಾ ನನ್ನಲ್ಲಿನ ಆಸೆ, ನಿರೀಕ್ಶೆ, ವ್ಯಾಮೋಹ, ಕೋಪ, ಹೋಲಿಕೆ, ದುರಾಸೆ, ನಾನು, ನನ್ನದು ಇವುಗಳನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ. ಬದುಕಿ ಜೀವನದಲ್ಲಿ ಏನಾದರೂ ಸಾದಿಸುತ್ತೇನೆ. ನನಗೆ ಜೀವನದಲ್ಲಿನ ಸತ್ಯದ ಬಗ್ಗೆ ತಿಳಿ ಹೇಳಿ ಸರಿಯಾದ ರೀತಿಯಲ್ಲಿ ಬದುಕಲು  ದಾರಿ ತೋರಿಸಿದ್ದಕ್ಕೆ ದನ್ಯವಾದಗಳು ನಿನಗೆ. ನಾನಿನ್ನು ಹೊರಡ್ತೀನಿ.

ಬೂತ : ನೀನು ಜೀವನದ ಬಗ್ಗೆ ತಿಳಿದುಕೊಂಡಿದ್ದನ್ನು ಈ ಬೂಮಿ ಮೇಲೆ ನಿನ್ನ ಹಾಗೆ  ಗೊಂದಲದಲ್ಲಿರುವರಿಗೂ ತಿಳಿಸು. ಒಳ್ಳೆದಾಗಲಿ.

(ಚಿತ್ರಸೆಲೆ: pinterest.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *