ಓಡಿಸುಗನಿಲ್ಲದ ಕಾರಿನತ್ತ ಟೆಸ್ಲಾದ ಚಿತ್ತ

ಜಯತೀರ‍್ತ ನಾಡಗವ್ಡ.

ಗೂಗಲ್ ಮತ್ತು ಬೇರೆ ಬೇರೆ ಹೆಚ್ಚಿನ ತಾನೋಡ ಕೂಟಗಳು ಓಡಿಸುಗನಿಲ್ಲದ ಬಂಡಿ ತಯಾರಿಸುವತ್ತ ಹೆಜ್ಜೆ ಇಟ್ಟಿವೆ. ಗೂಗಲ್ ತಾನು ತಯಾರಿಸಿದ ಬಂಡಿಯನ್ನು ಓರೆಗೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರೆ ಎಲಾನ್ ಮಸ್ಕ್(Elon Musk) ಮುಂದಾಳತ್ವದ ಟೆಸ್ಲಾ ಮೋಟಾರ‍್ಸ್(Tesla Motors) ಅದಾಗಲೇ ತನ್ನ ಮಿಂಚಿನ ಬಂಡಿಗಳಿಗೆ(Electric cars) ಓಡಿಸುಗನಿಲ್ಲದ ಮೆದುಸರಕನ್ನು(Software) ಅಳವಡಿಸುವ ಮೂಲಕ ತಾನೋಡದ ಕಯ್ಗಾರಿಕೆಯಲ್ಲಿ ಮತ್ತೆ ಸುದ್ದಿಯ ಸರಕಾಗಿದ್ದರು.

tesla-model-s-autopilot-image

ಟೆಸ್ಲಾ ಮಿಂಚಿನ ಬಂಡಿಯು ಓಡಿಸುಗನ ನೆರವಿಲ್ಲದೇ ಮುಂದು ಸಾಗಲು ಅಲೆಗಾವಲು(Radar), ತಿಟ್ಟಕ(Camera) ಹಾಗೂ ಬಂಡಿಯ ಸುತ್ತಲೂ 12 ವಿವಿದ ಅರಿವಿಕಗಳನ್ನು (Sensor) ಜೋಡಿಸಲಾಗಿದೆ. ಈ 12 ಅರಿವಿಕಗಳು ಬಂಡಿಯ ಸುತ್ತಲೂ ಅಂದರೆ ಸುಮಾರು 16 ಅಡಿ ಹರಿವಿನವರೆಗೂ ಹಾದು ಹೋಗುವ ಅಡೆತಡೆ ಎಲ್ಲದರ ಬಗ್ಗೆ ಮಾಹಿತಿ ಒದಗಿಸುತ್ತಿರುತ್ತವೆ. ಈ ಅರಿವಿಕಗಳಿಂದ ಎಲ್ಲ ಆಗು ಹೋಗುವ ಮಾಹಿತಿಗಳು ಬಂಡಿಗೆ ಕಳಿಸಲ್ಪಡುತ್ತವೆ. ಈ ಮಾಹಿತಿಯನ್ನು ಆದರಿಸಿ ಓಣಿ ಬದಲಾಯಿಸುವ(Lane change), ಒಯ್ಯಾಟ ದಟ್ಟಣೆ ಗುರುತಿಸುವ(Traffic detection) ಮತ್ತು ಸುಯ್ಯ ಅಂಕೆ(Cruise Control) ಬಳಸುವ ಚುರುಕುತನ ಟೆಸ್ಲಾ ಬೆಳವಣಿಗೆಗೊಳಿಸಿರುವ “ಆಟೋ ಪಾಯ್ಲಟ್” Auto pilot ಹೆಸರಿನ ಮೆದುಸರಕು ಸಲೀಸಾಗಿ ಮಾಡುತ್ತದೆ. ಟೆಸ್ಲಾದ ಮಾಡೆಲ್ ಎಸ್ ಬಗೆಯ ಬಂಡಿಗಳಲ್ಲಿ ಇದೀಗ ಇದೆಲ್ಲವನ್ನು ಒದಗಿಸಲಾಗಿದೆ. ಇಶ್ಟೇ ಅಲ್ಲ ನಿಮ್ಮ ಬಂಡಿಯ ನಿಲುಗಡೆಗೆ ನೆರವು (Parking Assist), ಬಂಡಿ ತಡೆತದ ಏರ‍್ಪಾಟಿಗೆ ನೆರವಾಗುವ (Braking system assist) ಪರಿಚೆಗಳು ಆಟೋ ಪಾಯ್ಲಟ್ ನಲ್ಲಿ ಕಂಡು ಬರುತ್ತವೆ.

ಇತರೆ ಕೂಟಗಳು ಓಡಿಸುಗನ ಬಂಡಿಯ ಬೆಳವಣಿಗೆಗೊಳಿಸುವ ಇಲ್ಲವೇ ಓರೆಗೆ ಹಚ್ಚುವ ಹಂತದಲ್ಲಿದ್ದರೆ ಟೆಸ್ಲಾ ಬಂಡಿಗಳು ಎಲ್ಲರಿಗಿಂತ ತಾಮುಂದು ಎನ್ನುವುದನ್ನು ಮತ್ತೆ ದಿಟಗೊಳಿಸಿವೆ. ಓಡಿಸುಗರಿಗೆ ಕಶ್ಟವೆನಿಸುವ ಎಲ್ಲ ಕೆಲಸಗಳನ್ನು ನಮ್ಮ ಬಂಡಿ ಮಾಡಲಿದೆ. ಬಾನೋಡದ ಬಂಡಿ ಓಡಿಸುಗನಂತೆಯೇ ನಮ್ಮ ಆಟೋ ಪಾಯ್ಲಟ್ ಪಯಣಿಗರೆಲ್ಲರನ್ನು ಕಾಪಾಡಿಕೊಂಡು ಮುಂದೆ ಸಾಗಿಸಲಿದೆ ನೀವೆನಿದ್ದರೂ ಮಿಂತಿಗುರಿಯ(Power steering) ಹಿಂದೆ ಕುಳಿತು ನಲಿವು ಅನುಬವಿಸಿ ಎಂದು ಟೆಸ್ಲಾ ಕೂಟ ಮಿಂಬಾಗಿಲು(blog) ಮೂಲಕ ಹೇಳಿಕೊಂಡಿದೆ.

tesla-motors-inc-to-release-new-autopilot-software-for-its-model-s

ಇಶ್ಟೆಲ್ಲ ಇದ್ದರೂ ಈ ಬಂಡಿಯಲ್ಲಿ ಓಡಿಸುಗನ ಇರುವಿಕೆಯ ತಳ್ಳಿಹಾಕಲಾಗದು.ಇದಕ್ಕೆ ಇಂಬು ನೀಡುವಂತ ಗಟನೆಯೊಂದು ಇತ್ತಿಚೀಗೆ ಕಂಡು ಬಂದಿದೆ. ಟೆಸ್ಲಾ ಬಂಡಿಯ ಓಡಿಸುಗರೊಬ್ಬರು “ಆಟೋ ಪಾಯ್ಲಟ್” ಬಳಸುವಾಗ ಎಡವಟ್ಟು ನಡೆದಿದೆ. ಎದುರಿನಿಂದ ಬರುತ್ತಿದ್ದ ಬಂಡಿಯೊಂದಕ್ಕೆ ಟೆಸ್ಲಾ ಬಂಡಿ ಇನ್ನೇನು ಗುದ್ದಿ ಬಿಡುತ್ತದೆ ಎನ್ನುವಶ್ಟರಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಆಟೋ ಪಾಯ್ಲಟ್ ಮೆದುಸರಕು ತನ್ನ ಎದುರಿಗೆ ಬರುತಿದ್ದ ಬಂಡಿಯನ್ನು ಗುರುತಿಸದೇ ಹೋಗಿದ್ದು ಓಡಿಸುಗ ತಾನಾಗೆ ಮಿಂತಿಗುರಿಯನ್ನು ತಿರುಗಿಸಿ ಆಗುತ್ತಿದ್ದ ಅನಾಹುತದಿಂದ ಪಾರಾಗಿದ್ದಾನೆ. ಇದು ಆಟೋ ಪಾಯ್ಲಟ್‌ನ ಬಳಕೆ ಬಗ್ಗೆ ಕೇಳ್ವಿ ಹುಟ್ಟುಹಾಕುವಂತೆ ಮಾಡಿದೆ. ಯೂಟ್ಯೂಬ್, ಪೇಸ್ಬುಕ್ ಮುಂತಾದ ಸಾಮಾಜಿಕ ಕೂಡುತಾಣಗಳಲ್ಲಿ ಈ ಗಟನೆಯ ಓಡುತಿಟ್ಟವೊಂದು ಹೊರಬಂದಿದ್ದು ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ಕಂಡು ಹಲವರು ಟೆಸ್ಲಾದ ಆಟೋ ಪಾಯ್ಲಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಇದಿನ್ನೂ ಎಳಸಿನ ಹಂತದಲ್ಲಿದೆ ಇದರ ಬಳಕೆಯಿಂದ ಪಜೀತಿಯಾಗಲಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಇದರ ಬಿಸಿ ಎಲಾನ್ ಮಸ್ಕ್‌ರಿಗೂ ತಟ್ಟಿದಂತೆ ತೋರಿದೆ. ಕೂಡಲೇ ತಮ್ಮ ಬಂಡಿಯ ಮೆದುಸರಕಿನ ತಪ್ಪನ್ನು ತಿದ್ದಿಕೊಳ್ಳಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ತಮ್ಮ ಟ್ವೀಟರ್ ಗೂಡಿನ ಮೂಲಕ ಆಟೋ ಪಾಯ್ಲಟ್ ನಂತ ಮೆದುಸರಕಿನ ಕೆಲಸ ಮಾಡಲು ಇಶ್ಟವಿದ್ದವರು ನನಗೆ ಜಾತಕ ಕಳುಹಿಸಿ ಎಂದು ಚೀವ್ ಗುಟ್ಟಿದ್ದಾರೆ. ಈ ರೀತಿಯ ತೊಂದರೆ ಒಂದೇ ಬಂಡಿಯಲ್ಲಿ ಕಾಣಿಸಿಕೊಂಡಿದ್ದು ಟೆಸ್ಲಾ ಕೂಟ ಇಲ್ಲಿ ಪೂರ‍್ತಿ ಸೋತಿದೆ ಎಂದು ಹೇಳಲಾಗದು. ಆಟೋ ಪಾಯ್ಲಟ್ ಅನ್ನು ಆದಶ್ಟು ಬೇಗ ತಿದ್ದುಪಡಿಗೊಳಿಸಿ ಬಿಡುಗಡೆ ಮಾಡಿ ಈ ತೊಂದರೆಯಿಂದ ಬಂದರೆ ಟೆಸ್ಲಾದ ಮುಂದಿನ ದಾರಿ ಸುಗಮವಾಗಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆ: Tesla.com, technewstoday.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.