ಕನ್ನಡಿಗರು ಅರಿಯಬೇಕಾದ ‘ಕಪ್ಪೆ ಅರಬಟ್ಟ’ನ ಕಲ್ಬರಹ

ಕಿರಣ್ ಮಲೆನಾಡು.

30 ಸಾವಿರಕ್ಕೂ ಹೆಚ್ಚು ಕನ್ನಡದ ಕಲ್ಬರಹಗಳು ಸಿಕ್ಕಿರುವುದು ಯಾವೊಬ್ಬ ಕನ್ನಡಿಗನಿಗಾದರು ಹೆಮ್ಮೆ ತರದೇ ಇರಲಾರದು. ಅಂತಹ ನುರಿತ ನುಡಿ ನಮ್ಮ ಕನ್ನಡನುಡಿ! ಅದರಲ್ಲೊಂದು ಕಲ್ಬರಹ ಈ ಕಪ್ಪೆ ಅರಬಟ್ಟನ ಕಲ್ಬರಹ.

ಕಪ್ಪೆ ಅರಬಟ್ಟನ ಕಲ್ಬರಹ ಎಲ್ಲಿದೆ?
ಕನ್ನಡಿಗರಾದ ಬಾದಾಮಿ ಚಾಲುಕ್ಯ ಅರಸುಮನೆತನದ ಮೇಲುಪಟ್ಟಣವಾಗಿ ಮೆರೆದ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ಸುತ್ತಾಡುಗೆ ತಾಣ. ಗುಡ್ಡದ ಬದಿಯನ್ನು ಕೊರೆದು ಕಟ್ಟಿದ ಬಾದಾಮಿಯ ಗುಹೆಗಳು ಸುತ್ತಾಡುಗೆಗೆ(Tourism) ಹೆಸರುವಾಸಿಯಾಗಿದೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಡುವಣ ತೀರದಲ್ಲಿ ಊರು ಹಬ್ಬಿದೆ. ಕೆರೆಯ ಬಡಗಣ ದಡದ ಮೇಲಿನ ತಟ್ಟುಕೋಟೆಯಲ್ಲಿನ ಬಂಡೆಯೊಂದರ ಮೇಲೆ ಕಪ್ಪೆ ಅರಬಟ್ಟನ ಕಲ್ಬರಹವನ್ನು ಕಾಣಬಹದು.

ಕಲ್ಬರಹದ ಅರಕೆ ಮತ್ತು ಹಿರಿಮೆ:
ಕ್ರಿ.ಶ. 700 ಹೊತ್ತಿನ ಹಳಗನ್ನಡ ಲಿಪಿಯಲ್ಲಿ ಈ ಕಲ್ಬರಹವನ್ನು ಕೆತ್ತಲಾಗಿದೆ. ಈ ಕಲ್ಬರಹವು ಕನ್ನಡದಲ್ಲಿ ಸಿಕ್ಕ ಮೊಟ್ಟಮೂದಲ ಮೂರುಸಾಲುಗಳುಳ್ಳ ಕಟ್ಟೊರೆ (ತ್ರಿಪದಿ) ಆಗಿದೆ. ಈ ಕಲ್ಬರಹವು ಕನ್ನಡದೊಂದಿಗೆ ಹಲವು ಸಕ್ಕದ ಪದಗಳನ್ನೂಳಗೊಂಡಿದೆ. ಬಾದಾಮಿಯ ಈ ಕಪ್ಪೆ ಅರಬಟ್ಟನ ಕಲ್ಬರಹವನ್ನು ಮೊಟ್ಟಮೊದಲು ಅರಕೆ (Research) ಮಾಡಿದವರು ಬ್ರಿಟಿಶ್ ಹಿನ್ನಡವಳಿಯರಿಗ ಡಾ.ಜೆ.ಎಪ್ ಪ್ಲೀಟ್ (1847 -1917). ಹಲವಾರು ಮಾಹಿತಿಗಳಿಂದ ತಿಳಿದುಬಂದಂತೆ ಕಪ್ಪೆ ಅರಬಟ್ಟ ಕ್ರಿ.ಶ. ಏಳುನೂರರ ಹೊತ್ತಿನ ಒಬ್ಬ ಬಾದಾಮಿ ಚಾಲುಕ್ಯರ ಕಾದಾಳು (Fighter). ಇನ್ನು ಕೆಲವು ಹಿನ್ನಡವಳಿಯರಿಗರ ಅನಿಸಿಕೆಯಂತೆ ಇವನು ಸಂತನಾಗಿದ್ದನು. ಆದರು ಕೂಡ ಕಪ್ಪೆ ಅರಬಟ್ಟ ದಿಟವಾಗಿ ಯಾರು ಎಂಬುದರ ಬಗ್ಗೆ ಹಿನ್ನಡವಳಿಯರಿಗರಲ್ಲಿ ಗೊಂದಲವಿದೆ.

ಈ ಕಲ್ಬರಹವು 3.375 ಅಡಿ ಎತ್ತರ ಮತ್ತು 2.861 ಅಡಿ ಅಗಲವಾಗಿದೆ. ಕಲ್ಬರಹದ ಕೆಳಗೆ 3.583 ಅಡಿ ಅಡ್ಡಳತೆಯ ಹತ್ತು ಎಲೆಗಳುಳ್ಳ ತಾವರೆ ಹೂವಿನ ಕೆತ್ತನೆಯನ್ನು ಒಳಗೊಂಡಿದೆ. ಕಪ್ಪೆ ಅರಬಟ್ಟನ ಇನ್ನೊಂದು ಕಲ್ಬರಹವನ್ನು ಇತ್ತೀಚಿಗೆ ಬಾದಾಮಿಯ ಸಿಡ್ಲಪಡಿಯ ಹತ್ತಿರ ಕಂಡುಹಿಡಿಯಲಾಯಿತು ಹಾಗು ಈ ಕಲ್ಬರಹದ ಬಗ್ಗೆ ಇನ್ನೂ ಹೆಚ್ಚು ಅರಕೆಗಳು ನಡೆಯಬೇಕಿದೆ.

Kappe_Arabhatta_inscription_at_Badami

ಕಲ್ಬರಹದ ಸಾಲುಗಳು ಇಂತಿವೆ:
“ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್, ಕಷ್ಟಜನವರ್ಜಿತನ್, ಕಲಿಯುಗ ವಿಪರೀತನ್, ವರನ್ತೇಜಸ್ವಿನೋ ಮೃತ್ತ್ಯರ್‍ನತು ಮಾನಾವಖಣ್ಡನಂ ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್, ದಿನೇ,ದಿನೇ ಸಾಧುಗೆ ಸಾಧು ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವೊರ್ ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ ಇಲ್ಲಿ ಸನ್ಧಿಕ್ಕುಂ ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿರೀತ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಮ್.”

ಹೊಸಗನ್ನಡದ ನುಡಿಮಾರಿಕೆ:

ಈ ಕಪ್ಪೆ ಅರಬಟ್ಟ ಎಂಬುವನು ತನ್ನನ್ನು ನಂಬಿದ ಎಲ್ಲಾ ಒಳ್ಳೆಯವರಿಗೆ ಅಕ್ಕರೆಯುಳ್ಳವನು; ಕೆಟ್ಟ ಕೆಲಸ ಮಾಡುವ ತನಗೆ ಆಗದ ಮಂದಿಯನ್ನು ಕೊನೆಗಾಣಿಸುವ, ಕಲಿಯುಗಕ್ಕೇ ಹೆಚ್ಚೆನಿಸುವಶ್ಟು ಕೆಚ್ಚೆದೆಯವನು. ತಿಳಿದವರಿಗೆ ಮಿಗಿಲಾದುದು ಯಾವುದು? ಕಾದಾಟದ ಸಾವೇ ಹೊರತು ತುಯ್ತವಲ್ಲ; ಏಕೆಂದರೆ ಸಾವು ಕೆಲವು ಹೊತ್ತಿಗೆ ಅಳುವನ್ನು ತಂದೊಡ್ಡಬಹುದು, ಆದರೆ ತುಯ್ತ ಎಲ್ಲಾ ನಾಳುಗಳಿಗೂ ಅಳುವನ್ನು ತರುತ್ತಲೇ ಇರುತ್ತದೆ. ಇವನು ಒಳ್ಳೆಯವರಿಗೆ ಒಳ್ಳೆಯವನು, ಸವಿನಡತೆಯುಳ್ಳವನಿಗೆ ಸವಿಯಾದವನು; ಕಾಡುವ ಕಲಿಗೇ ಇವನು ಕಾಡುವಂತಹ ಗಟ್ಟಿಗ. ಒಳ್ಳೆಯದನ್ನು ಮಾಡುವವರಿಗೂ ಮತ್ತು ಕೆಡುಕನ್ನು ಮಾಡುವವರಿಗೂ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ. ಮಂದಿಯ ಹಿಂದಿನ ಹುಟ್ಟಿನಲ್ಲಿ ಏನು ಮಾಡಿದ್ದರೋ ಅವರವರ ಕೆಲಸಗಳಿಗೆ ತಕ್ಕಂತೆ ಒಳಿತನ್ನು ಅವರುಗಳು ಇವನಿಂದ ಪಡೆಯುತ್ತಾರೆ. ಕಟ್ಟಿದ ಸಿಂಹವನ್ನು ಬಿಟ್ಟರೇನಾಯ್ತು ಎಂದು ಅದನ್ನೀಗ ಬಿಟ್ಟಂತಾಗಿದೆ. ಈ ಸಿಂಹನಂತಿರುವ ಮತ್ತು ಕಲಿಗೆ ಮಿಗಿಲಾಗಿರುವ ಇವನ ಕೈಗೆ ಸಿಕ್ಕು ವೈರಿಗಳು ಕೆಡುವರು ಇಲ್ಲವೇ ಸಾಯುವರು. ಇದು ಕೇಡು ಬಗೆಯುವವರಿಗೆ ಸಿಕ್ಕ ಬಳುವಳಿ.

 

(ಮಾಹಿತಿ ಸೆಲೆ: gazatter.kar.nic, kannada.oneindia, thehindu.com, archive.org, bp.blog, wikipedia)
(ಚಿತ್ರಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: