ಮೊಡವೆಗಳು

ಯಶವನ್ತ ಬಾಣಸವಾಡಿ.

ಮಯ್-ಜಿಡ್ಡು (sebum) ಹಾಗು ಸತ್ತ ತೊಗಲಿನ ಗೂಡುಗಳು, ಕೂದಲಿನ ಚೀಲಗಳಲ್ಲಿ (hair follicles) ಕಟ್ಟಿಕೊಳ್ಳುವುದರಿಂದ ಮೊಡವೆಗಳು ಉಂಟಾಗುತ್ತವೆ.

ಮೊಡವೆಗಳನ್ನು ಹುಟ್ಟಿಸುವ ಇರುಹುಗಳು (factors):

1) ಮಯ್-ಜಿಡ್ಡು
2) ಸತ್ತ ತೊಗಲಿನ ಗೂಡುಗಳು
3) ಕಟ್ಟಿಕೊಂಡ ಕೂದಲಿನ ಚೀಲದ ತೂತು
4) ಒಚ್ಚೀರುಗಳು (bacteria)

ಮೋರೆ, ಕುತ್ತಿಗೆ, ಬೆನ್ನು, ಎದೆ ಹಾಗು ಹೆಗಲುಗಳ ತೊಗಲಿನಲ್ಲಿ ಜಿಡ್ಡಿನ-ಸುರಿಕಗಳು (sebaceous glands) ಹೆಚ್ಚಾಗಿ ಇರುವುದರಿಂದ, ಈ ಎಡೆಗಳಲ್ಲಿ ಮೊಡವೆಗಳು ಮೂಡುವ ಸಾದ್ಯತೆಗಳೂ ಹೆಚ್ಚು.
ಕೂದಲಿನ ಚೀಲಗಳು, ಜಿಡ್ಡಿನ-ಸುರಿಕಗಳಿಗೆ ಹೊಂದಿಕೊಂಡಿರುತ್ತವೆ; ಈ ಸುರಿಕಗಳು ಒಸರುವ (secrete) ಮಯ್-ಜಿಡ್ಡು ತೊಗಲು ಮತ್ತು ಕೂದಲುಗಳನ್ನು ಎರೆಯುತ್ತವೆ (lubricate). ಸಾಮಾನ್ಯವಾಗಿ ಮಯ್-ಜಿಡ್ಡು ಕೂದಲಿನ ತಾಳುಗಳ ಜೊತೆ-ಜೊತೆಗೆ ಸಾಗಿ ಕೂದಲಿನ ಚೀಲದ ತೂತುಗಳಿಂದ ತೊಗಲಿನ ಹೊರಮಯ್ ತಲುಪುತ್ತದೆ.

ಮಯ್-ಜಿಡ್ಡು ಹಾಗು ಸತ್ತ ತೊಗಲಿನ ಗೂಡುಗಳು ಹೆಚ್ಚಾದಾಗ, ಅವು ಕೂದಲಿನ ಚೀಲಗಳಲ್ಲಿ ತುಂಬಿಕೊಂಡು ಮೆತ್ತನೆಯ ಬೆಣೆಯಂತಾಗುತ್ತವೆ. ಒಚ್ಚೀರುಗಳು ನೆಲೆಸಲು ಹಾಗು ಬೆಳೆಯಲು ಈ ಬೆಣೆಗಳು ಒಳ್ಳೆಯ ತಾಣ. ಬೆಣೆಗಳಲ್ಲಿ ಒಚ್ಚೀರುಗಳ ಸೋಂಕು ತಗುಲಿದರೆ, ಕೂದಲಿನ ಚೀಲದಲ್ಲಿ ಉರಿಯೂತ (inflammation) ಉಂಟಾಗುತ್ತದೆ.

ಮೊಡವೆಯ ಕಡುಹಿಗೆ (intensity) ತಕ್ಕಂತೆ ಹಲವು ಬಗೆಯ ಕುರುಹುಗಳು ಕಾಣಿಸಿಕೊಳ್ಳುತ್ತವೆ:

1) ಬಿಳಿತಲೆ (whiteheads) : ಮಯ್-ಜಿಡ್ಡು ಹಾಗು ಸತ್ತ ತೊಗಲಿನ ಗೂಡುಗಳು ತುಂಬಿಕೊಂಡಿರುವ ಕೂದಲಿನ ಚೀಲಗಳ ತೂತುಗಳು ಮುಚ್ಚಿಕೊಂಡಿರುತ್ತವೆ. ಜಿಡ್ಡಿನ ಬೆಣೆಗಳು ಕೂದಲಿನ ಚೀಲಗಳ ತೂತುಗಳನ್ನು ಮುಚ್ಚಿದರೆ, ಕೂದಲಿನ ಚೀಲಗಳ ಗೋಡೆಗಳು ಉಬ್ಬಿ ಬಿಳಿತಲೆಗಳನ್ನು ಮಾಡುತ್ತವೆ.

titta 1

2) ಕರಿತಲೆ (blackheads):  ಮಯ್-ಜಿಡ್ಡು ಹಾಗು ಸತ್ತ ತೊಗಲಿನ ಗೂಡುಗಳು ತುಂಬಿಕೊಂಡ ತೊಗಲಿನ ಚೀಲಗಳ ತೂತುಗಳು ತೆರೆದುಕೊಂಡಿರುತ್ತವೆ. ತೆರೆದ ತೊಗಲಿನ ಚೀಲದ ತೂತುಗಳಿಂದಾಗಿ, ತೊಗಲಿನ ಚೀಲ ಹೊರಗಿನ ಗಾಳಿಪಾಡಿಗೆ ತೆರದುಕೊಂಡಾಗ, ಜಿಡ್ಡಿನ ಬೆಣೆ ಕಂದು ಬಣ್ಣಕ್ಕೆ ಬದಲಾಗುತ್ತದೆ. ಇದರಿಂದಾಗಿ ಈ ಮೊಡವೆಗಳ ತುದಿ ಕಪ್ಪಾಗಿ ಕಾಣಿಸಿಕೊಳ್ಳುತ್ತವೆ.

titta 2

3) ಕೆಂಗುಳ್ಳೆ (papules): ಈ ಬಗೆಯ ಮೊಡವೆಗಳು ಕೆಂಪುಬಣ್ಣದಲ್ಲಿದ್ದು, ಸ್ವಲ್ಪ ಮಟ್ಟಿಗೆ ನೋವನ್ನೂ ಉಂಟುಮಾಡುತ್ತವೆ.

titta 3

4) ಕೀವು-ಮೊಡವೆ (pimples/pustules): ಈ ಬಗೆಯ ಮೊಡವೆಗಳಲ್ಲಿ ಕೂದಲಿನ ಚೀಲದ ತುದಿಯು ಕೀವನ್ನು (pus) ತುಂಬಿಕೊಂಡಿರುತ್ತದೆ. ಜಿಡ್ಡಿನ ಬೆಣೆ ತುಂಬಿದ ಕೂದಲಿನ ಚೀಲದಲ್ಲಿ ಒಚ್ಚೀರುಗಳ ಸೋಂಕು ತಗುಲಿ ಉರಿಯೂತ ಉಂಟಾದರೆ ಕೀವು-ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಕೀವು-ಮೊಡವೆಗಳು  ನೋಡುವುದಕ್ಕೆ ಕೆಂಪಗಿದ್ದು (ಉರಿಯೂತದಿಂದ), ಮೊಡವೆಯ ನಡುವಿನಲ್ಲಿ ಇರುವ ಕೀವು (ಒಚ್ಚೀರುಗಳ ಸೋಂಕಿನಿಂದ) ಬಿಳಿ ಇಲ್ಲವೇ ತಿಳಿ-ಅರಿಶಿನದ ಬಣ್ಣವಾಗಿ ಕಾಣುತ್ತದೆ.

titta 4

5) ಗಂಟು ಮತ್ತು ಬೊಕ್ಕೆ (nodule & cyst): ಕೂದಲಿನ ಚೀಲದ ಆಳದಲ್ಲಿ ಉಂಟಾಗುವ ಬೆಣೆ ಹಾಗು ಉರಿಯೂತಗಳು ತೊಗಲಿನ ಕೆಳಗೆ ಬೊಕ್ಕೆ ಇಲ್ಲವೆ ಗಂಟುಗಳನ್ನು ಮಾಡುತ್ತವೆ. ಬೊಕ್ಕೆ ಹೊರಮಯ್ ತೊಗಲಿನ ಕೆಳಗೆ, ನೋವು ಉಂಟು ಮಾಡುವ ಕೀವು ತುಂಬಿದ ದೊಡ್ಡ ಗಡ್ಡೆಗಳಂತೆ ಕಾಣುತ್ತದೆ. ಬೆವರನ್ನು ಹೊರಹಾಕುವ ಬೆವರು ಸುರಿಕಗಳು (sweat glands) ಮೊಡವೆಗಳನ್ನು ಮಾಡುವುದಿಲ್ಲ.

titta 5ಮೊಡವೆಗಳನ್ನು ಹೆಚ್ಚಿಸಬಹುದಾದ ಇರುಹುಗಳು (factors):

1) ಸುರಿಗೆಗಳು (hormones):  ಮಯ್ನೆರೆಯುವ ಹೊತ್ತಿಗೆ ಗಂಡು ಹಾಗು ಹೆಣ್ಣು ಮಕ್ಕಳಲ್ಲಿ ಮಯ್ನೆರೆಯುವಿಕೆಗೆ ಬೇಕಾಗಿರುವ ಆಂಡ್ರೋಜನ್(androgen) ಸುರಿಗೆಯ (hormone) ಮಟ್ಟ ಹೆಚ್ಚಿರುತ್ತದೆ. ಅಂಡ್ರೋಜನ್ ಸುರಿಗೆಯು ಮಯ್-ಜಿಡ್ಡಿನ ಸುರುಕಗಳನ್ನು ದಪ್ಪವಾಗಿಸಿ, ಹೆಚ್ಚೆಚ್ಚು ಮಯ್-ಜಿಡ್ಡನ್ನು ಮಾಡುತ್ತದೆ.

2) ಮದ್ದುಗಳು: ಕಾರ್ಟಿಕೋಸ್ಟೀರಾಯ್ಡ್ಗಳು, ಆಂಡ್ರೋಜನ್ ಹಾಗು ಲೀತಿಯಂ ಗಳನ್ನು ಹೊಂದಿರುವ ಮದ್ದುಗಳು ಮೊಡವೆಗಳನ್ನು ಹೆಚ್ಚಿಸುವ ಅಳವನ್ನು ಹೊಂದಿರುತ್ತವೆ.

3) ತಿನಿಸುಗಳು: ಹಲವು ಬಗೆಯ ತಿನಿಸುಗಳೂ ಕೂಡ ಮೊಡವೆಗಳನ್ನು ಹೆಚ್ಚಿಸಬಹುದು ಎಂದು ಕೆಲವು ಅರಕೆಗಳು ತೋರಿಸಿಕೊಟ್ಟಿವೆ.  ಎತ್ತುಗೆಗೆ: ಹಾಲಿನ ತಿನಿಸುಗಳು, ಹೆಚ್ಚಿನ ಮಟ್ಟದ ಹಿಟ್ಟುಸಕ್ಕರೆಯನ್ನು (carbohydrate) ಹೊಂದಿರುವ ತಿನಿಸುಗಳು (ಬ್ರೆಡ್, ಬೇಗಲ್, ಚಿಪ್ಸ್) ಮತ್ತುಚಾಕ್ಲೇಟುಗಳು.

4) ಒತ್ತಡ (stress): ದಣಿವು ಹಾಗು ಮನಸ್ಸಿನ ಮೇಲೆ ಎರಗುವ ಒತ್ತಡಗಳು ನೇರವಾಗಿ ಮೊಡವೆಗಳನ್ನು ಉಂಟುಮಾಡದಿದ್ದರೂ, ಮೊಡವೆಗಳನ್ನು ಉಳ್ಳವರಲ್ಲಿ, ಮೊಡವೆಗಳ ಕಡುಹುಗಳನ್ನು ಹೆಚ್ಚಿಸಬಲವು.

5) ಪೀಳಿಗಳ (genes): ಅಪ್ಪ-ಅಮ್ಮ ಇಬ್ಬರೂ ಮೊಡವೆಗಳಿಗೆ ತುತ್ತಾಗಿದ್ದಲ್ಲಿ, ಮಕ್ಕಳಲ್ಲಿಯೂ ಮೊಡವೆಗಳು ಉಂಟಾಗುವ ತೆರಹುಗಳು ಹೆಚ್ಚು.

ಮೊಡವೆಗಳ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು:

1) ಎಣ್ಣೆಯ ತಿನಿಸುಗಳನ್ನು ತಿಂದರೆ ಮೊಡವೆಗಳು ಹೆಚ್ಚಾಗುತ್ತವೆ:
ಎಣ್ಣೆಯಿಂದ ಕನಿಯುತ್ತಿರುವ ತಾಣಗಳಲ್ಲಿ ಕೆಲಸ ಮಾಡುವುದರಿಂದ ಮೊಡವೆಗಳು ಬರಬಹುದು. ಎತ್ತುಗೆಗೆ: ಅಡುಗೆ ಮನೆಯಲ್ಲಿ ಎಣ್ಣೆಯ ಬಾಣಲೆಗಳನ್ನು ತೊಳೆಯುವಾಗ, ಎಣ್ಣೆಯು ತೊಗಲಿಗೆ ಅಂಟಿಕೊಂಡು ಕೂದಲು ಚೀಲಗಳಲ್ಲಿ ಬೆಣೆಗಳನ್ನು ಉಂಟುಮಾಡಬಹುದು. ಮುಂದೆ ಈ ಬೆಣೆಗಳು ಉರಿಯೂತದ ಮೂಲಕ ಮೊಡವೆಗಳಿಗೆ ಕಾರಣವಾಗಬಹುದು. ಆದರೆ, ಎಣ್ಣೆಯ ತಿನಿಸುಗಳನ್ನು ತಿನ್ನುವುದರಿಂದ ಮೊಡವೆಗಳು ಬರುವುದಿಲ್ಲ.

2) ಮಯ್ ತೊಗಲಿನಲ್ಲಿ ಕೊಳೆ ಇದ್ದರೆ ಮೊಡವೆಗಳು ಬರುತ್ತವೆ:
ಇದೊಂದು ತಪ್ಪು ತಿಳುವಳಿಕೆ. ಇರುವುದೆನೆಂದರೆ, ನಮ್ಮ ತೊಗಲನ್ನು ತೊಳೆಯುವಾಗ ಒತ್ತಿ ಉಜ್ಜಿದರೆ, ಇಲ್ಲವೆ ಗಾಟಿನ ನೊರೆತಗಳನ್ನು (soap) ಬಳಸಿದರೆ, ಮೊಡವೆಗಳು ಬರಬಹುದು. ಆದರೆ, ನಯವಾಗಿ ತೊಗಲನ್ನು ತೊಳೆದುಕೊಂಡರೆ, ಅದು ಮೊಡವೆಗಳು ಹುಟ್ಟುವುದನ್ನು ತಡೆಯುತ್ತದೆ.

3) ಅಂದುಗೆಗಳನ್ನು (cosmetics) ಬಳಸುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ:
ಕೂದಲಿನ ತೂತುಗಳನ್ನೂ ಮುಚ್ಚದ  ಜಿಡ್ಡಿಲ್ಲದ ಅಂದುಗೆಗಳನ್ನು ಬಳಸಿದರೆ, ಮೊಡವೆಗಳು ಉಂಟಾಗುವುದಿಲ್ಲ.
ಮುಂದಿನ ಕಂತಿನಲ್ಲಿ ಮೊಡವೆಗಳ ಮಾಂಜುಗೆಯ ಬಗ್ಗೆ ತಿಳಿದುಕೊಳ್ಳೋಣ.

(ಮಾಹಿತಿ & ತಿಟ್ಟ ಸೆಲೆ: mayoclinic.org, bitsdiaries.com, clindot.com, chelchellatte.blogspot.com, homeremedieslog.com, gponline.com, yoderm.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.