ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ.

surgical-implements-hospital-_taip

ಕಂತು 1

ರಾತ್ರಿ ಒಂಬತ್ತು ಗಂಟೆ.
ಬೆಂಗಳೂರಿನ ಹೊರಬಾಗದಲ್ಲಿರುವ ಒಂದು ಪಾರ‍್ಮ್ ಹೌಸ್.
ಸುಮಾರು ಹತ್ತು ಎಕರೆಯ ತೋಟದ ನಡುವೆ ಅರಮನೆಯಂತ ಮನೆ. ಆಗ ತಾನೇ ಎಮ್.ಬಿ.ಬಿ.ಎಸ್ ಪರೀಕ್ಶೆ ಮುಗಿಸಿದ್ದ ಹುಡುಗರ ಗುಂಪೊಂದು ಪಾರ‍್ಟಿ ನಡೆಸಿತ್ತು. ಒಟ್ಟು ಆರು ಜನ; ಮೂವರು ಹುಡುಗರು, ಮೂವರು ಹುಡುಗಿಯರು. “ದೊಡ್ಡ” ಮನೆಯ ಮಕ್ಕಳಾದ್ದರಿಂದ ಹೇಳುವವರು-ಕೇಳುವವರು ಕಮ್ಮಿ, ಅದೂ ಆ ಪಾರ‍್ಮ್ ಹೌಸಿನಲ್ಲಂತೂ ಯಾರೂ ಇರಲಿಲ್ಲ, ಕೆಲಸಗಾರರನ್ನು ಬಿಟ್ಟು. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ನಗುತ್ತಾ, ಒಂದು ಬಗೆಯ ಬಿಡುಗಡೆ ಹೊಂದಿದಂತೆ ಕುಶಿಪಡುತ್ತಿದ್ದರು ಆ ಹುಡುಗರು.

ಪಾರ‍್ಮಹೌಸಿನ ಹುಲ್ಲುಹಾಸಿನ ಮೇಲೆ ನಡೆಯುತ್ತಿದ್ದ ಪಾರ‍್ಟಿಗೆ ಎಲ್ಲ ಎರ‍್ಪಾಟೂ ಆಗಿತ್ತು. ಎಲ್ಲೆಲ್ಲೂ ಸಂತಸ ತುಂಬಿದ್ದ ಜಾಗದಲ್ಲಿ, ತಂಪಾದ ಗಾಳಿ ಬೀಸಿ ಅಲ್ಲಿದ್ದವರ ಮಯ್ಯಿಗೂ ಮನಸ್ಸಿಗೂ ಮುದ ಕೊಡುತ್ತಿತ್ತು. ಹಿನ್ನಲೆಯಲ್ಲಿ ತೇಲಿ ಬರುತ್ತಿದ್ದ ಸಂಗೀತದ ಅಲೆಗಳ ತಾಳಕ್ಕೆ ಆಗಾಗ ಅವರ ಹೆಜ್ಜೆಗಳು ಕುಣಿಯುತ್ತಾ ಪಯ್ಪೋಟಿಗಿಳಿಯುತ್ತಿದ್ದವು.

“ಲೇ ರಚನಾ, ಸಾಕೇ ಕುಡದಿದ್ದು. ವಾಂತಿ ಮಾಡ್ಕೊತೀಯಾ ನೋಡು ಈಗ”, ಗೆಳತಿಯ ಕುಡಿತಕ್ಕೆ ಕಡಿವಾಣ ಹಾಕಲು ವಸುದಾ ಹೆಣಗಾಡುತ್ತಿದ್ದಳು.
“ಆಂ. ಏನಂದೆ?” ಎಂದು ಅವಳನ್ನು ಚೇಡಿಸುವ ರೀತಿಯಲ್ಲಿ ಕೇಳಿದಳು ರಚನಾ.
“ಸಾಕು ಕುಡಿದಿದ್ದು ಅಂದೆ”
“ನಿನಗೆ ಪಾರ‍್ಟಿ ಸೆನ್ಸೇ ಇಲ್ಲಾ ಕಣೇ. ಜೀವನದಲ್ಲಿ ಇವತ್ತೇ ನಮ್ ಕೊನೆ ದಿನಾ ಅನ್ನೋತರಾ ಪಾರ‍್ಟಿ ಮಾಡ್ಬೇಕು. ಯಾರಿಗೊತ್ತು ನಾಳೆ ಏನಾಗುತ್ತೋ ಅಂತಾ”, ಎಂದು ಮಾರ‍್ಮಿಕವಾಗಿ ನಕ್ಕಳು.
ಅಶ್ಟರಲ್ಲಿ ಕುಣಿದು ಕುಣಿದು ಸುಸ್ತಾಗಿ, ಹುಡುಗಿಯರು ಇದ್ದ ಜಾಗಕ್ಕೆ, ಹುಡುಗರು ಬಂದರು. ವಿಸ್ಕಿ ತುಂಬಿದ್ದ ತನ್ನ ಗ್ಲಾಸನ್ನು ಪೂರ‍್ಣಿಮಾ ಕಯ್ಗೆ ಕೊಟ್ಟ ಗಿರೀಶ, “ವಾಯಿನ್ ಕಣೇ… ಕುಡ್ದು ನೋಡು”, ಎಂದನು. ಅನುಮಾನದಿಂದಲೇ ಗ್ಲಾಸನ್ನು ಕಯ್ಗೆ ತೆಗೆದುಕೊಂಡ ಪೂರ‍್ಣಿಮಾ, ವಾಸನೆ ನೋಡಿ ಒಂದು ಕ್ಶಣ ಮುಕ ಹಿಂಜಿದಳು. ನಂತರ ಬಾಯಿಗೆ ಗ್ಲಾಸಿಟ್ಟು ತುಸುವೇ ಗುಟುಕಿಸಿದಳು. ಅದರ ಕಹಿ ರುಚಿಗೆ ಇನ್ನೇನು ವಾಂತಿ ಮಾಡಿಕೊಳ್ಳುತ್ತಾಳೆ ಎನ್ನುವಂತೆ ನಾಲಗೆ ಹೊರಚಾಚಿ, ಮತ್ತೆ ಹೇಗೋ ತಡೆದುಕೊಂಡಳು. ಅಲ್ಲಿದ್ದವರೆಲ್ಲ ಗೊಳ್ ಎಂದು ನಕ್ಕರು.
“ಯಾಕೋ ಸುಮ್ನೆ ಅವಳನ್ನಾ ಪೀಡಿಸ್ತೀಯಾ?” ಕೇಳಿದನು ಅಮರ್.
“ಕುಡೀದೇ ಇದ್ರೆ ಪಾರ‍್ಟಿ ಮಾಡೋಕೆ ಯಾಕ್ ಬರ‍್ಬೇಕಪ್ಪಾ?” ಎಂದನು ತಾತ್ಸಾರ ದನಿಯಲ್ಲಿ.
‘ಅಂತೂ ಪೂರ‍್ಣಿಮಾ ದೊಡ್ಡೋಳಾದ್ಳು” ಅಂದನು ಮಂಜು. ಎಲ್ಲರೂ ಮತ್ತೆ ನಕ್ಕರು.
“ಯಾಕೋ?” ಕೇಳಿದನು ಗಿರೀಶ.
“ಮತ್ತೆ? ಅವ್ಳ ಮನೇಲಿ ಇಂತಾ ಪಾರ‍್ಟಿಗೆ ಕಳ್ಸೋಕೆ ಒಪ್ಕೊಂಡಿದಾರಲ್ಲಾ, ಅದಕ್ಕೆ”. ಎಲ್ಲರ ನಗು ಮುಂದುವರೆಯಿತು.
“ಸುಮ್ನೆ ಬಿಡ್ರೋ… ಅವ್ಳು ಪಾರ‍್ಟಿಗೆ ಬಂದಿರೋದೇ ಹೆಚ್ಚು”, ಎಂದಳು ವಸುದಾ. ಹುಡುಗರು ಸುಮ್ಮನಾದರು. ಎಲ್ಲರೂ ತಮ್ಮ ತಮ್ಮ ಗ್ಲಾಸುಗಳನ್ನು ಎತ್ತಿ ಕುಡಿಯಲು ಮುಂದಾದರು.
ಅಲ್ಲೇ ಇದ್ದ ರಚನಾಳ ಕಡೆ ಹೊರಳಿ ಪೂರ‍್ಣಿಮಾ ಅಂದಳು, “ಇವ್ಳೇನ್ ಕುಡಿತಿದಾಳೆ?”
“ವಿಸ್ಕಿ”
“ಹೌದಾ!” ಉದ್ಗರಿಸಿದಳು ಪೂರ‍್ಣಿಮಾ. ಒಂದೆರಡು ಕ್ಶಣ ಏನೋ ಯೋಚಿಸಿ, “ಹಾಗಾದ್ರೆ ನಾನೂ ಕುಡೀತೀನಿ”, ಅಂದಳು ಪಯ್ಪೋಟಿಗಿಳಿದವಳಂತೆ.
“ನಿಂಗಾಗಲ್ವೆ” ನಕ್ಕಳು ವಸುದಾ, “ಬೇಕಿದ್ರೆ ವೊಡ್ಕಾ ಕುಡಿ” ಎಂದು ಸಲಹೆ ಕೊಟ್ಟಳು.
“ಹೌದು. ನೀನು ವೋಡ್ಕಾ ಟ್ರಾಯ್ ಮಾಡು”, ಗೆಳತಿಯ ಸಲಹೆಯನ್ನು ರಚನಾ ಅನುಮೋದಿಸಿದಳು.
“ಹಮ್… ಸರಿ”, ಪೂರ‍್ಣಿಮಾ ಬಲವಂತದ ಒಪ್ಪಿಗೆ ತೋರಿದಳು.

ಒಂದು ಗ್ಲಾಸಿನಲ್ಲಿ ತುಸು ವೋಡ್ಕಾ ಸುರಿದು, ಬಹಳಶ್ಟು ಸಿಹಿ ಸೋಡಾ ಬೆರೆಸಿ ಕೊಟ್ಟಳು ರಚನಾ. ಅದನ್ನು ಕುಡಿದ ಪೂರ‍್ಣಿಮಾ, “ಜ್ಯೂಸ್ ತರಾ ಇದೆ” ಎಂದಳು, “ಆದ್ರೆ ಸ್ವಲ್ಪ ಕಹಿ ಅನ್ಸುತ್ತೆ”.
“ಈ ಚಿಪ್ಸ್ ತಿನ್ನು, ಎಲ್ಲಾ ಸರಿಯಾಗುತ್ತೆ.”
ಸ್ವಲ್ಪ ಹೊತ್ತಿನಲ್ಲಿ ರಚನಾ ಮತ್ತು ವಸುದಾ ಅಲ್ಲಿಂದ ಎದ್ದು, ಹುಡುಗರ ಜೊತೆಗೂಡಿ, ಹಾಡುಗಳಿಗೆ ಹೆಜ್ಜೆಹಾಕಲು ಶುರುಮಾಡಿದರು. ಬಗೆಬಗೆಯ ಹಾಡುಗಳು. ಕೆಲವೊಮ್ಮೆ ಅವುಗಳ ತಾಳಕ್ಕೆ ಹೊಂದಿದರೆ, ಕೆಲವೊಮ್ಮೆ ವಿಚಿತ್ರವೆನಿಸುವ ಕುಣಿತ. ಪೂರ‍್ಣಿಮಾ ಮಾತ್ರ ಯಾಕೋ ಮಂಕಾಗಿ ಅಲ್ಲೇ ಕುಳಿತು ತನ್ನ ಯೋಚನೆಯಲ್ಲೇ ಮುಳುಗಿದ್ದಳು.

ಕುಣಿದು ದಣಿವಾದ ಮೇಲೆ, ಬಾಟಲಿಗಳಿದ್ದ ಜಾಗಕ್ಕೆ ಬಂದರು ರಚನಾ ಮತ್ತು ವಸುದಾ. ತುಸು ದೂರದಲ್ಲಿ ಕುಳಿತಿದ್ದ ಪೂರ‍್ಣಿಮಾಳತ್ತ ನೋಡುತ್ತ ವಸುದಾ ಅಂದಳು,
“ಯಾಕೆ ಅವ್ಳು ಹೀಗ್ ಕೂತಿದ್ದಾಳೆ?”
“ಅಯ್ಯೋ, ಅವ್ಳ್ ಮನೇಲಿ ಜರ‍್ಮನಿಗೆ ಹೋಗೋಕೆ ಬೇಡ ಅಂದಿದ್ದಾರಂತೆ.”
“ಹೌದಾ!” ಬೆರಗಾದಳು ವಸುದಾ, “ಅಂತಾ ಆಪರ‍್ಚುನಿಟಿ ಯಾರೇ ಬಿಡ್ತಾರೆ?”
“ಅವ್ರ್ ಮನೇಲಿ ತುಂಬಾ ಸಂಪ್ರದಾಯ ಕಣೇ… ಹೋಗ್ಲಿ ಬಿಡು… ಇನ್ನೊಂದು ಗ್ಲಾಸು ವೊಡ್ಕಾ ಕುಡುದ್ರೆ ತಾನೇ ಸರಿಯಾಗ್ತಾಳೆ”, ನಕ್ಕಳು ರಚನಾ.
ಇಬ್ಬರೂ ಪೂರ‍್ಣಿಮಾ ಕುಳಿತಿದ್ದ ಜಾಗಕ್ಕೆ ಬಂದರು. ಮೂವರೂ ಸುಮಾರು ಹೊತ್ತು ಹರಟೆ ಹೊಡೆಯುತ್ತಾ, ವೊಡ್ಕಾ ಗುಟುಕಿಸುತ್ತಾ, ತಿನಿಸುಗಳನ್ನು ಬಾಯಿಗೆ ಹಾಕುತ್ತಾ, ಆಗಾಗ ಹಾಡುಗಳಿಗೆ ಕುಣಿಯುತ್ತಾ, ಸಮಯ ಕಳೆಯುತ್ತಿದ್ದರು.
“ನಾನು ವಾಶ್ ರೂಮ್ ಹೋಗಿ ಬರ‍್ತೀನಿ” ಎಂದು ಅಂಗಳದಿಂದ ಮನೆಯೆಡೆಗೆ ಹೊರಟಳು ವಸುದಾ. ಅವಳು ತುಸು ದೂರ ಹೋಗಿದ್ದಾಗ, ರಚನಾ ಅವಳನ್ನು ಕೂಗಿ ಕರೆದಳು.
ಅವಳು ಮರಳಿ ಬಂದಾಗ ಪೂರ‍್ಣಿಮಾ ನೆಲದ ಮೇಲೆ ಮಲಗಿದ್ದಳು. “ಏನಾಯ್ತು?” ಎಂದು ಗಾಬರಿಯಿಂದ ಕೇಳಿದಳು.
“ಪೂರ‍್ಣಿಮಾ ವಾಂತಿ ಮಾಡ್ಕೊಂಡು, ತಲೆ ಸುತ್ತಿ ಬಿದ್ದಬಿಟ್ಳು”, ಎಂದಳು ರಚನಾ. ಅಶ್ಟರಲ್ಲಿ ಮಿಕ್ಕ ಹುಡುಗರೂ ಅಲ್ಲಿಗೆ ಬಂದರು. ಎಚ್ಚರ ತಪ್ಪಿದ್ದ ಪೂರ‍್ಣಿಮಾಳನ್ನು ಅಂಗಳದಿಂದ ಎತ್ತಿ, ಮನೆಯ ಒಳಗಡೆ ಒಂದು ಕೋಣೆಗೆ ಒಯ್ದು ಮಲಗಿಸಿದರು. ಪಾರ‍್ಟಿ ಹಾಳು ಮಾಡುವುದು ಬೇಡವೆಂದು ಒಮ್ಮನಸ್ಸಿನಿಂದ ಎಲ್ಲರೂ ಮತ್ತೆ ಅಂಗಳಕ್ಕೆ ಬಂದು ತಮ್ಮ ತಮ್ಮ ಗ್ಲಾಸುಗಳನ್ನು ಎತ್ತಿಕೊಂಡರು.
“ಲೇ ವಸುದಾ… ನನ್ ಬ್ಯಾಗಿನಲ್ಲಿ ಒಂದು ಸ್ಪೆಶಲ್ ವಾಯಿನ್ ಬಾಟಲ್ ಇದೆ ತೊಗೊಂಡ್ ಬಾರೇ”, ಎಂದಳು ರಚನಾ.
“ಇಲ್ಲಿರೋದನ್ನಾ ಮೊದ್ಲು ಮುಗ್ಸು”
“ತೂ, ಇಲ್ಲಿರೋದು ಚೆನ್ನಾಗಿಲ್ಲ. ಇರು ನಾನೇ ತರ‍್ತೀನಿ… ಹಂಗೇ ವಾಶ್ ರೂಮ್ ಹೋಗಿ ಬರ‍್ತೀನಿ”, ಎಂದು ತೂರಾಡುತ್ತಾ ಮನೆ ಒಳಗೆ ಹೋದಳು ರಚನಾ. ಅವಳ ಕುಡುಕ ಗುಣವನ್ನು ವಸುದಾ ಚೆನ್ನಾಗಿ ತಿಳಿದಿದ್ದಳು. ಒಂದು ಸಾರಿ ಕುಡಿಯಲು ಶುರುಮಾಡಿದರೆ ಅವಳನ್ನು ತಡೆಯಲು ಯಾರಿಂದಲೂ ಆಗುತ್ತಿರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಮರಳಿ ಬಂದ ರಚನಾ, ಅಲ್ಲೇ ಇದ್ದ ತನ್ನ ಗ್ಲಾಸನ್ನು ಎತ್ತಿಕೊಂಡಳು.
“ಎಲ್ಲೇ ವಾಯಿನ್ನು?”
“ಯಾವ್ ವಾಯಿನ್ನು?” ಅಮಲಿನ ಮುಕದಲ್ಲಿ ಕೇಳಿದಳು ರಚನಾ.
“ಸರಿ ಹೋಯ್ತು… ಇವತ್ ಯಾಕೋ ನಿನಗೆ ನಶೆ ಬೇಗ ಏರಿದೆ”, ನಕ್ಕಳು ವಸುದಾ. “ಇಲ್ಲೇ ಇರು, ನಾನೂ ವಾಶ್ ರೂಮ್ ಹೋಗಿ ಬರ‍್ತೀನಿ” ಎಂದು ಮನೆಕಡೆ ಹೋದಳು.

“ಇವತ್ತು ಕಾಲೇಜನಲ್ಲೆಲ್ಲಾ ಅಶೋಕನದ್ದೇ ಮಾತು”, ಸಿಗರೇಟಿನ ಹೊಗೆ ಬಿಡುತ್ತಾ ಹೇಳಿದ ಗಿರೀಶ.
“ಅವ್ನು ಇಶ್ಟ್ ಬೇಗ ಪ್ರಪೋಸ್ ಮಾಡ್ಬಾರ‍್ದಿತ್ತಪ್ಪಾ”, ತನ್ನ ಅನಿಸಿಕೆ ಹೇಳಿದ ಅಮರ್.
“ಯಾವಾಗ್ ಮಾಡಿದ್ರೂ ಅಶ್ಟೇ… ಪೂರ‍್ಣಿಮಾ ಏನು ಹೂಂ ಅಂತಿದ್ಳಾ?”, ಅಂದ ಮಂಜು.
“ಅವ್ಳಿಗೂ ಅವ್ನು ಇಶ್ಟಾ ಅಂತಾ ಅನ್ಕೊಂಡಿದ್ದೆ ನಾನು”, ಅಂದ ಅಮರ್.
“ಇಲ್ಲಾ ಬಿಡು. ಅವ್ಳ್ಯಾಕೆ ಅವನನ್ನಾ ಇಶ್ಟಾ ಪಡ್ತಾಳೆ?” ತುಸು ರೇಗಿದಂತೆ ಕೇಳಿದ ಗಿರೀಶ.
“ಮತ್ತೆ ಕಾಲೇಜಲ್ಲಿ ಯಾವ್ ಹುಡಗನ್ ಜೊತೆನೂ ಇಲ್ಲದ್ ಸಲಿಗೆ ಅವ್ನ್ ಜೊತೆ ತೋರಿಸ್ತಾ ಇದ್ಳು?”, ಅಮರ್ ತನ್ನ ಅನಿಸಿಕೆಗೆ ಕಾರಣ ಸೂಚಿಸಿದ.
“ಸಲುಗೆ ಏನೂ ಇಲ್ಲ… ನನ್ ಜೊತೆನೂ ಅಶ್ಟೇ ಪ್ರೆಂಡ್ಲಿಯಾಗಿ ಇರ‍್ತಾಳೆ… ಬೇಕಿದ್ರೆ ಅವಳನ್ನೇ ಕೇಳೋಣ, ಹೇಗೂ ಇಲ್ಲೇ ಇದಾಳಲ್ಲಾ”.
“ಹೋಗ್ಲಿ ಬಿಡಪ್ಪಾ, ನಮಗ್ಯಾಕೆ?” ಎಂದು ವಾದಕ್ಕೆ ಅಂತ್ಯ ಹಾಡಿದ ಮಂಜು.

ಪಾರ‍್ಟಿ ನಡೆಯುತ್ತಿದ್ದ ಪಾರ‍್ಮ್ ಹೌಸಿನ ಮಾಲೀಕರ ಮಗನಾದ ಅಮರ್, ಹವ್ಯಾಸವಾಗಿ ಮ್ಯಾಜಿಕ್ ಕಲಿತಿದ್ದ. ಅದನ್ನು ಎಲ್ಲರಿಗೂ ತೋರಿಸಲು ಮುಂದಾಗಿ, ಅಂಗಳದಿಂದ ತುಸು ದೂರದಲ್ಲಿ ಸಿದ್ದಪಡಿಸಿದ ಟೇಬಲ್ ಒಂದರ ಬಳಿ ಎಲ್ಲರೂ ಹೋದರು. ಎಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಪಾರ‍್ಮ್ ಹೌಸಿನ ಆಳುಗಳೂ ಮ್ಯಾಜಿಕ್ ನೋಡಲು ಮುಂದಾದರು. ಅಮರ್ ಒಂದೊಂದಾಗಿ ಕಣ್ಕಟ್ಟುಗಳನ್ನು ತೋರಿಸತೊಡಗಿದ. ಕಯ್ಯಲ್ಲಿದ್ದ ನಾಣ್ಯ ಮಾಯವಾಗಿ, ಅವನ ಜೇಬಿನಲ್ಲಿ ಸೇರುವುದು, ಇಸ್ಪೀಟು ಎಲೆಗಳನ್ನು ಬಳಸಿ ಮಾಡುವ ಕಣ್ಕಟ್ಟುಗಳು, ಹೀಗೆ ಅವನ ಮ್ಯಾಜಿಕ್ ಶೋ ನಡೆದಿತ್ತು.
“ಈ ಟ್ರಿಕ್ ಗಳೆಲ್ಲಾ ನನಗೊತ್ತು. ಇರೋದನ್ನಾ ಇಲ್ಲಾ ಅಂತ ನಂಬಿಸೋದು ಅಶ್ಟೇ” ಎಂದು ಪಿಸುಮಾತಿನಲ್ಲಿ ರಚನಾಗೆ ಹೇಳಿದಳು ವಸುದಾ. ಅಶ್ಟರಲ್ಲಿ, “ಅಯ್ಯೋ” ಎಂದಳು ರಚನಾ.
“ಏನಾಯ್ತೇ?” ಮ್ಯಾಜಿಕ್ ನಿಲ್ಲಿಸಿ ಕೇಳಿದನು ಅಮರ್.
“ಪೂರ‍್ಣಿಮಾ ನನ್ ಪ್ಯಾಂಟ್ ಮೇಲೇ ವಾಂತಿ ಮಾಡ್ಕೊಂಡಿದಾಳೆ”, ಎಂದು ತನ್ನ ಮೊಣಕಾಲು ತೋರಿಸಿದಳು.
ಅದನ್ನು ಗಮನಿಸಿದ ವಸುದಾ, ಬಟ್ಟೆ ಬದಲಿಸುವಂತೆ ಸಲಹೆ ಕೊಟ್ಟಳು. ರಚನಾ ಒಪ್ಪಿ, ಅಲ್ಲಿಂದ ಎದ್ದು, ಮನೆಯ ಒಳಗೆ ಹೋಗಿ ಬಟ್ಟೆ ಬದಲಿಸಿ ಬಂದಳು. ಮ್ಯಾಜಿಕ್ ಶೋ ಮುಂದುವರೆದಿತ್ತು.
“ಪೂರ‍್ಣಿಮಾಗೆ ಎಬ್ಬಿಸಿ, ಬಾ ಅಂತ ಕೇಳಿದೆ, ಆದ್ರೆ ಅವ್ಳು ಇನ್ನೊಂಚೂರು ಮಲ್ಕೊತೀನಿ ಅಂದ್ಳು”, ಎಂದಳು ರಚನಾ.
“ಸರಿ ಬಿಡು, ಊಟಕ್ಕೆ ಎಬ್ಬಿಸೋಣ”, ಎಂದಳು ವಸುದಾ.

ಇದರ ನಡುವೆ, ಮಂಜುವಿನ ಮೊಬಾಯಿಲಿಗೆ ಯಾವುದೋ ಕರೆ ಬಂದಿತು. ಅವನು ಅಲ್ಲಿಂದ ಎದ್ದು ತುಸು ದೂರ ಹೋಗಿ ಮಾತಾಡುತ್ತಾ, ಅಲ್ಲಿಂದಲೇ ಗಿರೀಶ್ ಗೆ ಕಯ್ ಮಾಡಿ ಕರೆದ. ಇಬ್ಬರೂ ಏನೋ ಮಾತಾಡುತ್ತಾ ಮನೆಯೆಡೆಗೆ ಹೋದರು. ಇತ್ತ ಮ್ಯಾಜಿಕ್ ಶೋ ನೋಡುವವರಿಗೆ ಅವರತ್ತ ಗಮನವೇ ಇರಲಿಲ್ಲ. ಇನ್ನೇನು ಮ್ಯಾಜಿಕ್ ಶೋ ಮುಗಿಯುತ್ತಾ ಬಂದು, ಒಂದು ಕೊನೆಯ ಆಟ ಮಾತ್ರ ಉಳಿಸಿಕೊಂಡಿದ್ದ ಅಮರ್. ಗಿರೀಶ್ ಮತ್ತು ಮಂಜುನನ್ನು ಹೊರತುಪಡಿಸಿ ಎಲ್ಲರೂ ಅಲ್ಲಿದ್ದರು. ಅವರ ಮೊಬಾಯಿಲಿಗೆ ಅಮರ್ ಕರೆ ಮಾಡಿದ ಮೇಲೆ, ಒಂದೆರಡು ನಿಮಿಶದಲ್ಲಿ ಅವರು ಬಂದರು.
“ಎಲ್ಲೋ ಹೋಗಿದ್ರಿ?” ಕೇಳಿದ ಅಮರ್.
“ವಾಶ್ ರೂಮ್” ಎಂದ ಗಿರೀಶ.
“ಸರಿ. ಈಗಾ ನನ್ ಪಾಯಿನಲ್ ಶೋ… ಬನ್ನಿ”, ಎಂದು ಅಲ್ಲಿಂದ ಸ್ವಲ್ಪ ದೂರ, ಕತ್ತಲಿದ್ದ ಜಾಗಕ್ಕೆ ಕರೆದುಕೊಂಡು ಹೋದ. ಒಂದು ದೊಡ್ಡ ಮರದ ಮುಂದೆ ಒಂದು ಕಟ್ಟೆ ಇದ್ದು, ಆ ಕಟ್ಟೆಯ ಮೇಲೆ ಒಂದು ಕುರ‍್ಚಿ, ಮತ್ತು ಅದರ ಮೇಲೆ ಕಪ್ಪು ಕಂಬಳಿ ಇತ್ತು. ಎಲ್ಲರಿಗೂ ಕಟ್ಟೆಯಿಂದ ಸ್ವಲ್ಪ ದೂರ ನಿಂತುಕೊಳ್ಳಲು ಹೇಳಿ, ತಾನು ಆ ಕುರ‍್ಚಿಯ ಮೇಲೆ ಕೂತು, ದೊಡ್ಡಾದಾಗಿದ್ದ ಕಂಬಳಿಯನ್ನು ತನ್ನ ಮುಕ-ಮಯ್ ಕಾಣದಂತೆ ಹೊಚ್ಚಿಕೊಂಡ ಅಮರ್. ಕಂಬಳಿಯ ಹಿಂದೆ, ಕಯ್-ಕಾಲು ಗಳನ್ನು ಜೋರಾಗಿ ಅಲ್ಲಾಡಿಸಲು ಶುರುಮಾಡಿ, ನೋಡುವವರಿಗೆ ಕಂಬಳಿ ಮಾತ್ರ ಹೊಯ್ದಾಡುವುದು ಕಾಣುತ್ತಿತ್ತು. ಒಂದೆರಡು ಕ್ಶಣಗಳಲ್ಲಿ ಕಂಬಳಿ ಸುಮ್ಮನಾಯಿತು. ಎಲ್ಲರೂ ಹಾಗೆ ನಿಂತಿದ್ದರು. ಒಂದು ನಿಮಿಶವಾದರೂ ಕಂಬಳಿ ಕದಲಲಿಲ್ಲ. ಆಮೇಲೆ ಮಂಜು ಕಟ್ಟೆಯ ಮೇಲೆ ಹತ್ತಿ ಕಂಬಳಿ ಎತ್ತಿದ್ದ. ಅಲ್ಲಿ ಅಮರ್ ಇರಲಿಲ್ಲ!
ಅಮರ್ ನ ಮ್ಯಾಜಿಕ್ ಕಲೆಗೆ ಅವರೆಲ್ಲ ಬೆರಗಾದರು. ಅಲ್ಲಿಂದ ಮರಳಿ ಬಾಟಲಿಗಳಿದ್ದ ಜಾಗಕ್ಕೆ ಬಂದು ಅವನಿಗಾಗಿ ಕಾಯ್ದರು. ಸುಮಾರು ಅಯ್ದು ನಿಮಿಶವಾದರೂ ಅವನು ಬಾರದ ಕಾರಣ, ಗಿರೀಶ ಅವನ ಮೊಬಾಯಿಲಿಗೆ ಕರೆ ಮಾಡಿದ. ಅತ್ತ ಕಡೆಯಿಂದ ಯಾವ ಉತ್ತರವೂ ಇಲ್ಲದಿದ್ದಾಗ, ತುಸು ಗಾಬರಿಯಾಗಿ ಎಲ್ಲರೂ ಅವನನ್ನು ಹುಡುಕಲು ಮುಂದಾದರು. ಹುಡುಗರು ಅಂಗಳದ ಸುತ್ತ ಹುಡುಕಿದರೆ, ಹುಡುಗಿಯರು ಮನೆಯ ಒಳಗಡೆ ನೋಡಲು ಹೊರಟರು.
ಒಂದೆರಡು ನಿಮಿಶದಲ್ಲಿ ವಸುದಾ ಜೋರಾಗಿ ಕಿರುಚುವ ದನಿ ಕೇಳಿ, ಎಲ್ಲರೂ ಪೂರ‍್ಣಿಮಾ ಮಲಗಿದ್ದ ಕೋಣೆಯೆಡೆಗೆ ಓಡಿದರು. ಮಂಚದ ಪಕ್ಕಕ್ಕೆ ವಸುದಾ ದಿಗಿಲು ಬಡಿದವರಂತೆ ನಿಂತಿದ್ದಳು. ಅಮರ್ ಕೂಡಾ ಅಲ್ಲಿಗೆ ಓಡಿ ಬಂದ. ಪೂರ‍್ಣಿಮಾಳ ಎಡಗಯ್ಯ ಮುಂಬಾಗ ಕುಯ್ದು, ಅವಳ ಮಯ್ಯಲ್ಲಿದ್ದ ನೆತ್ತರೆಲ್ಲ ಕೋಣೆಯ ನೆಲದ ತುಂಬಾ ಹರಡಿತ್ತು. ಸಡಿಲವಾಗಿದ್ದ ಅವಳ ಬಲಗಯ್ಯ ಮುಶ್ಟಿಯ ನಡುವೆ ಸ್ಕಾಲ್ಪೆಲ್ (ಆಪರೇಶನ್ ಮಾಡುವಾಗ ಚರ‍್ಮ ಕುಯ್ಯಲು ಬಳಸುವ ಚಾಕು) ಇತ್ತು. ಎಚ್ಚರಿಕೆಯಿಂದ, ಅಮರ್ ಅವಳ ನಾಡಿ ಮುಟ್ಟಿ ನೋಡಿದ. ಕಯ್ ತಣ್ಣಗಾಗಿ, ಅವಳಲ್ಲಿ ಜೀವ ಉಳಿದಿರುವ ಯಾವ ಕುರುಹೂ ಅವನಿಗೆ ಸಿಗಲಿಲ್ಲ. ಪರಿಸ್ತಿತಿಯ ಗಂಬೀರತೆ ಅರಿತ ಅವನು ತಕ್ಶಣ ಪೊಲೀಸ್ ಗೆ ಕರೆ ಮಾಡಿದ.

ಶವವಿದ್ದ ಜಾಗ, ಮನೆ, ಅಂಗಳ, ಅಮರ್ ತೋರಿದ ಕಣ್ಕಟ್ಟಿನ ಒಳಗುಟ್ಟು, ಎಲ್ಲವನ್ನೂ ಪರೀಕ್ಶಿಸಿದ ನಂತರ ಎಸ್. ಆಯ್ ಪ್ರಬಾಕರ್ ಒಬ್ಬೊಬ್ಬರನ್ನೇ ವಿಚಾರಣೆ ಮಾಡಿದರು. ಎಲ್ಲರೂ ತಮ್ಮ ತಮ್ಮ ಪಾಲಿನ ಕತೆಯನ್ನು ಹೇಳಿ, ಪೂರ‍್ಣಿಮಾಳದ್ದು ಆತ್ಮಹತ್ಯೆಯೇ ಇರಬೇಕೆಂದು ತಿಳಿಸಿದರು. ದೇಹ ಬಿದ್ದಿದ್ದ ರೀತಿ, ಕಯ್ ಕುಯ್ದುಕೊಂಡ ಗುರುತು, ಎಲ್ಲವನ್ನೂ ನೋಡಿದರೆ ಅದು ಆತ್ಮಹತ್ಯೆಯೇ ಇರಬೇಕೆಂದು ಪ್ರಬಾಕರ್ ಅವರಿಗೂ ಅನಿಸಿತು. ಆದರೆ, ಆ ಕೋಣೆಯಲ್ಲಿ, ಸಾಯುವ ಮುನ್ನ ಅವಳು ಬರೆದಿಟ್ಟಿರಬಹುದಾದ ಯಾವ ಪತ್ರವೂ ಸಿಗಲಿಲ್ಲ. ಅವಳ ಮನಸ್ಸು ಯಾವುದೋ ಕಾರಣಕ್ಕೆ ನೊಂದಿತ್ತೆಂದು ಗೊತ್ತಾದರೂ ಅವಳು ಆತ್ಮಹತ್ಯೆ ಮಾಡಿಕೊಳ್ಳುವಶ್ಟು ಸೂಕ್ಶ್ಮ ಮನಸ್ಸಿನವಳಾಗಿದ್ದಳೇ? ಅವಳ ಮನಸ್ತಿತಿಯನ್ನು ಅವಳ ಮನೆಯವರಿಂದ ಕೇಳಿ ತಿಳಿಯಬೇಕು, ಅಲ್ಲದೇ, ಆ ಸ್ಕಾಲ್ಪೆಲ್ ಮೇಲೆ ಅವಳದೇ ಬೆರಳಿನ ಗುರುತು ಇರುವುದರಲ್ಲಿ ಅನುಮಾನವೇ ಇಲ್ಲ. ಲ್ಯಾಬ್ ರಿಪೋರ‍್ಟ್ ಬಂದಮೇಲೆ ಅದು ಕಾತ್ರಿಯಾಗುತ್ತೆ. ಆ ರಾತ್ರಿಯಲ್ಲಿ ವಿಚಾರಣೆ ಮಾಡುವುದು ಇನ್ನೇನೂ ಉಳಿದಿಲ್ಲ ಎನಿಸಿತು. ಶವವನ್ನು ಆಗಲೇ ಸಾಗಿಸಿಯಾಗಿತ್ತು. ಇನ್ನು ಪೂರ‍್ಣಿಮಾಳ ಮನೆಯವರಿಗೆ ವಿಶಯ ತಿಳಿಸಿದರೆ ಕೇಸು ಮುಗಿದಂಗೆ. ಹೇಗೆ ಯೋಚಿಸಿದರೂ, ಅದು ಕೊಲೆಯೆನ್ನುವ ಯಾವ ಸುಳಿವೂ ಸಿಗಲಿಲ್ಲ. ಆದ್ರೂ ಇದು ಯಾಕೋ ಕೊಲೆ ಅಂತ ಪ್ರಬಾಕರ್ ಅವರ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಅದನ್ನೇ ತಮ್ಮ ಜೊತೆಗಿದ್ದ ಪೇದೆಗೆ ಹೇಳಿಕೊಂಡರು.
“ಸಾರ್, ಯಾಕೆ ಒಂದ್ಸಾರಿ ಪುಲಕೇಶಿ ಅವರನ್ನಾ ಕೇಳ್ಬಾರ‍್ದು?” ಪೊಲೀಸ್ ಕಾನ್ಸ್ಟೇಬಲ್ ಎಸ್. ಆಯ್ ಅವರಿಗೆ ಸಲಹೆ ಕೊಟ್ಟನು.
“ಟಾಯ್ಮ್ ನೋಡಿದೀಯಾ? ರಾತ್ರಿ ಎರಡು ಗಂಟೆ. ಇಶ್ಟೊತ್ತಲ್ಲಿ ಕಾಲ್ ಮಾಡೋದಾ?”
“ಟ್ರಾಯ್ ಮಾಡಿ ನೋಡಿ ಸರ್. ಬೆಳಗ್ಗೆ ತಂಕ ಕಾದ್ರೆ ಇವರ‍್ಯಾರೂ ನಮ್ ಕಯ್ಗೆ ಸಿಗೊಲ್ಲ. ಎಲ್ಲ ದೊಡ್ ಮನೆ ಮಕ್ಳು… ಕೇಸು ಅಶ್ಟೇ ಆಮೇಲೆ”.
“ಸರಿ. ಒಂದ್ಸಾರಿ ಟ್ರಾಯ್ ಮಾಡ್ತೀನಿ ಇರು”, ಎಂದು ಪುಲಕೇಶಿಯ ಮೊಬಾಯಿಲಿಗೆ ಕರೆ ಮಾಡಿದರು ಪ್ರಬಾಕರ್.

ರಾತ್ರಿ ಎರಡಾಗಿತ್ತು. ಮನುಶ್ಯರ ಮುಕದಲ್ಲಾಗುವ ಬದಲಾವಣೆಗಳನ್ನು ಬಳಸಿ, ಅವರ ಮನಸ್ಸನ್ನು ಅರಿವ ಬಗೆ ತಿಳಿಸುವ ಹೊತ್ತಗೆಯೊಂದನ್ನು ಪುಲಕೇಶಿ ಓದುತ್ತಿದ್ದ. ಸಾಮಾನ್ಯವಾಗಿ ಗೊತ್ತಿರುವಂತೆ ಒಬ್ಬರು ಮಾತಾಡುವಾಗ ನೆಲವನ್ನೇ ದಿಟ್ಟಿಸಿದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬ ಯೋಚನೆ ಸರಿಯಲ್ಲವೆಂದು ತಿಳಿದು ಬೆರಗಾಗಿದ್ದ. ಅಶ್ಟರಲ್ಲಿ ಅವನ ಮೊಬಾಯಿಲು ರಿಂಗಣಿಸಿತು; ಪುಲಕೇಶಿಗೆ ಹಳೆಯ ಪರಿಚಯವಿದ್ದ ಎಸ್. ಆಯ್ ಪ್ರಬಾಕರ್ ಅವರದ್ದು; ಕರೆ ಎತ್ತಿದ.
“ಹೇಳಿ ಪ್ರಬಾಕರ್. ಹೇಗಿದಿರಾ?”
“ಏನೋ ಇದೀವಿ.”
“ಯಾಕ್ ಸಾರ್, ಏನಾಯ್ತು?”
“ಇದೇ… ಮಾಮೂಲಿ… ಈ ಪೊಲೀಸ್ ಡ್ಯೂಟಿ ದೆಸೆಯಿಂದ ಹಗಲು-ರಾತ್ರಿ ತಿರಗೋದೆ ಆಗೋಗಿದೆ.”
“ಹ್ಹ… ಹ್ಹ… ನಾನೇನಾದ್ರು ಸಹಾಯ ಮಾಡ್ಲಾ?”
“ಅದಕ್ಕೇ ಕಾಲ್ ಮಾಡಿದ್ದು. ನೀವಿನ್ನೂ ಮಲಗಿಲ್ವಾ?”
“ಕ್ರಾಯ್ಮ್ ನಡೆಯೋ ಹೊತ್ತಲ್ಲಿ ನಮ್ಮಂತವ್ರು ಮಲಕೊಂಡ್ರೆ ಹೇಗೆ ಸಾರ‍್?” ನಕ್ಕನು ಪುಲಕೇಶಿ.
“ಅದೂ ಸರಿನೇ ಅನ್ನಿ” ಎಂದು ವಿಶಯಕ್ಕೆ ಹೊರಳಿದರು ಎಸ್. ಆಯ್, “ಈಗ… ಇಲ್ಲಿ ತುಮಕೂರು ರೋಡ್ ಹತ್ರ ಒಂದ್ ಪಾರ‍್ಮ್ ಹೌಸ್ ಇದೆ. ಇಲ್ಲಿ ಒಂದು ಸಾವಾಗಿದೆ. ಆ ಸಾವು ಕೊಲೆನೋ, ಆತ್ಮಹತ್ಯೆನೋ ಅಂತಾ ಗೊತ್ತಾಗ್ತಾಯಿಲ್ಲ. ನೀವ್ ಒಂಚೂರು ಬಂದು ಏನಾದ್ರು ಕ್ಲೂ ಹುಡುಕಿ ಕೊಟ್ರೆ ಈಸಿಯಾಗುತ್ತೆ”
“ಕಂಡಿತಾ ಸಾರ್. ಅಡ್ರೆಸ್ ಹೇಳಿ” ಎಂದು ಪುಲಕೇಶಿ ವಿವರ ಬರೆದುಕೊಂಡು, ಹೊರಡಲು ಅಣುವಾದನು.

ಪುಲಕೇಶಿಯ ಕಾರು ಆ ಪಾರ‍್ಮ್ ಹೌಸಿನ ಗೇಟಿನ ಒಳಗೆ ಬಂದು ಮನೆಯ ಮುಂದೆ ನಿಂತಿತು. ಒಳಗಡೆ, ನಡುಮನೆಯಲ್ಲಿ ಎಲ್ಲರೂ ಜೋಲುಮುಕ ಹಾಕಿ ಕುಳಿತಿದ್ದರು. ಪುಲಕೇಶಿ ಬಂದವನೇ, ಎಲ್ಲರನ್ನು ಒಂದು ಸುತ್ತು ನೋಡಿದ. ನಡುವೆ ಇದ್ದ ಸೋಪಾದ ಒಂದು ಕಡೆ ಅಯ್ದು ಜನ ಕೂತಿದ್ದರು. ಇಬ್ಬರು ಹುಡುಗಿಯರು, ಮೂವರು ಹುಡುಗರು. ಎಲ್ಲರೂ ಕಾಲೇಜಿಗೆ ಹೋಗುವ, ಇಪ್ಪತ್ತರ ಹರೆಯವರು ಎಂಬುದು ನಿಚ್ಚಳವಾಗಿ ಕಾಣುತ್ತಿತ್ತು. ಇನ್ನೊಂದು ಬದಿಯಲ್ಲಿ ಎಸ್. ಆಯ್ ಪ್ರಬಾಕರ್ ಮತ್ತು ಅವರ ಪಕ್ಕದಲ್ಲಿ ಒಬ್ಬ ಪೇದೆ ಕೂತಿದ್ದರು. ನಡುಮನೆಯ ಗೋಡೆಗೆ ಒರಗಿ ಹಾಕಿದ್ದ ಕುರ‍್ಚಿಗಳಲ್ಲಿ ಮೂವರು ಗಂಡಸರು ಕೂತಿದ್ದರು. ಅವರ ಬಟ್ಟೆ, ಮುಕ ಲಕ್ಶಣ ನೋಡಿ, ಆಳುಗಳು ಇರಬೇಕು ಎಂದುಕೊಂಡ ಪುಲಕೇಶಿ. ಹುಡುಗರತ್ತ ನೋಟ ನೆಟ್ಟು, ಏರು ದನಿಯಲ್ಲಿ,

“ಪ್ರಬಾಕರ್, ಕೊಲೆಗಾರ ಯಾರು ಗೊತ್ತಾಯ್ತ?” ಎಂದನು, ಎಲ್ಲರ ಮುಕದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತ. ಯಾವ ಸುಳಿವೂ ಸಿಗಲಿಲ್ಲ. ನೋಟ ಹೊರಳಿಸಿ, ಪ್ರಬಾಕರ್ ಅವರತ್ತ ಹೋದನು. ಇಬ್ಬರೂ ಸೇರಿ ಕೋಣೆಯೊಂದಕ್ಕೆ ಹೋಗಿ ಬಾಗಿಲು ಹಾಕಿಕೊಂಡರು.
“ಪುಲಕೇಶಿ, ನಿಮಗೆ ಇದು ಕೊಲೆ ಅಂತ ಹೇಗೆ ಗೊತ್ತಾಯ್ತು? ನಾನಿನ್ನೂ ಯಾವ ವಿವರ ಕೊಟ್ಟಿಲ್ವಲ್ಲಾ?”
“ಸರ್, ಅದು ಕ್ರಿಮಿನಲ್ ಸಾಯ್ಕಾಲಾಜಿಗೆ ಸಂಬಂದಪಟ್ಟಿದ್ದು. ನಿಜವಾಗಲೂ ಅದು ಕೊಲೆನೇ ಆಗಿದ್ರೆ, ಮತ್ತೆ ಇಲ್ಲಿದ್ದವರೇ ಕೊಲೆ ಮಾಡಿದ್ರೆ, ಅವರ ಮಾತುಗಳಲ್ಲಿ ಕಂಡಿತ ಬದಲಾವಣೆಯಾಗುತ್ತೆ ನೋಡ್ತಾಯಿರಿ.”
“ಏನೋಪಾ… ನಂಗೆ ಸಾಯಿಕಾಲಜಿ ಅರ‍್ತ ಆಗೊಲ್ಲ”
“ಸಿಂಪಲ್ ಸರ್. ನಾನು ಎಲ್ಲೋ ಓದಿದ್ದೆ…” ಎಂದು ಎಸ್. ಆಯ್ ಅವರಿಗೆ ತಿಳಿಸಲು ಮುಂದಾದ ಪುಲಕೇಶಿ, “ಈಗ ನೋಡಿ… ಒಂದು ಕೊಲೆಯಾಗಿದೆ ಅಂದುಕೊಳ್ಳೋಣ. ಯಾರೋ ಮೂವರಲ್ಲಿ ಒಬ್ಬರು ಈ ಕೆಲಸ ಮಾಡಿದ್ದಾರೆ ಎಂದು ನಿಮ್ಗೆ ಗೊತ್ತಾಗುತ್ತೆ, ಆದ್ರೆ ಯಾರು ಅಂತ ಗೊತ್ತಾಗಲ್ಲ. ಆಗ ಆ ಮೂವರನ್ನೂ ಒಬ್ಬೊಬ್ಬರಾಗಿ ಕರೆದು ನೀನೇ ಕೊಲೆಮಾಡಿದೀಯಾ ಅಂತ ಗೊತ್ತಾಗಿದೆ, ನಾಳೆ ಕೋರ‍್ಟ್ಗೆ ಪ್ರೊಡ್ಯುಸ್ ಮಾಡ್ತೀನಿ ಅಂತ ಮೂವರನ್ನೂ ಬೇರೆ ಬೇರೆ ಲಾಕಪ್ಪಿನಲ್ಲಿ ಒಂದು ರಾತ್ರಿ ಹಾಕಿಡಿ. ಮಾರನೇ ದಿನಾ ಕೊಲೆ ಮಾಡಿದವನ ಮನಸ್ಸು ನಿರಾಳವಾಗಿರುತ್ತೆ. ಇನ್ನಿಬ್ಬರು ಮುಂದೇನು ಅಂತಾ ಯೋಚನೆ ಮಾಡ್ತಿರ‍್ತಾರೆ. ಆಗ ಅವರನ್ನ ಮಾತಾಡಿಸಿದ್ರೆ ಸಾಕು, ಅವರ ಮಾತಿನಲ್ಲೇ ಗೊತ್ತಾಗುತ್ತೆ ಕೊಲೆ ಯಾರು ಮಾಡಿದ್ದು ಅಂತಾ.”
ಒಂದೆರಡು ಕ್ಶಣ ಯೋಚಿಸಿದ ಎಸ್. ಆಯ್, “ಹೌದು ನೀವು ಹೇಳೋದು ಸರಿ” ಎಂದರು.
“ಈಗ ನಡೆದಿದ್ದೆಲ್ಲ ಹೇಳಿ ಸರ್… ಸಾದ್ಯವಾದಶ್ಟು ಡಿಟೇಲ್ಸ್ ಕೊಡಿ”

ಪ್ರಬಾಕರ್ ನಡೆದುದೆಲ್ಲವನ್ನೂ ವಿವರವಾಗಿ ಹೇಳಿದರು. ಕೊನೆಗೆ, “ಪೂರ‍್ಣಿಮಾ ವಾಂತಿ ಮಾಡಿ ಮಲಗಿದ್ದು ಸುಮಾರು ಹನ್ನೊಂದು ಗಂಟೆಗೆ, ಅದಾದ ಒಂದು ಗಂಟೆಯ ನಂತರ, ಅಂದರೆ ಹನ್ನೆರಡರ ಹೊತ್ತಿಗೆ ಅವರು ಅವಳನ್ನು ಕೋಣೆಯಲ್ಲಿ ಕಯ್ ಕುಯ್ದುಕೊಂಡು ಬಿದ್ದಿದ್ದನ್ನು ನೋಡಿದ್ದು. ಅಮರ್ ನ ಮ್ಯಾಜಿಕ್ ನಡೆದದ್ದು ಮೂವತ್ತು ನಿಮಿಶ. ಪೋಸ್ಟ್ ಮಾರ‍್ಟೆಮ್ ರಿಪೋರ‍್ಟ್ ನಾಳೆ ಬರಬಹುದು, ಹಾಗಾಗಿ ಸಾವು ಎಶ್ಟೊತ್ತಿಗೆ ಆಗಿದೆ ಅಂತ ಇನ್ನೂ ಗೊತ್ತಾಗಿಲ್ಲ.” ಅಂದರು.
“ಆತ್ಮಹತ್ಯೆಗೆ ಏನು ಕಾರಣ ಇರಬಹುದು ಅಂತ ಹುಡುಗ್ರು ಹೇಳಿದ್ರಾ?”
“ಹೂಂ… ಪೂರ‍್ಣಿಮಾ ತುಂಬಾ ಜಾಣ ಹುಡುಗಿ ಅಂತೆ. ಅವ್ಳಿಗೆ ಜರ‍್ಮನಿಯ ಮೆಡಿಕಲ್ ಇನ್ಸ್ಟಿಟ್ಯುಟ್ ನಲ್ಲಿ ಹೆಚ್ಚಿನ ಓದಿಗೆ ವಿತ್ ಸ್ಕಾಲರ‍್ಶಿಪ್ ಆಪರ್ ಬಂದಿತ್ತಂತೆ. ಅದು ತುಂಬಾ ದೊಡ್ಡ ಸಾದನೆ ಅಂತಾ ಹುಡುಗ್ರು ಹೇಳಿದ್ರು. ಆದ್ರೆ ಅವ್ಳ ಮನೇಲಿ ಅವ್ಳನ್ನಾ ಜರ‍್ಮನಿಗೆ ಕಳ್ಸೋಕೆ ಒಪ್ಪಲಿಲ್ವಂತೆ. ಪಾಪ ಹುಡುಗಿ ತುಂಬಾ ಬೇಜಾರು ಮಾಡ್ಕೊಂಡಿದ್ಳು ಅಂತಾ ಹೇಳಿದ್ರು”
“ಹಮ್…” ಕಣ್ಣು ಮುಚ್ಚಿ ಒಂದೆರಡು ಕ್ಶಣ ಯೋಚಿಸಿದ ಪುಲಕೇಶಿ. ಕಣ್ಣು ಬಿಟ್ಟು “ಲವ್ವು ಗಿವ್ವು?” ಅಂತಾ ಕೇಳಿದ.
“ಅಂತದ್ದೇನೂ ಇಲ್ವಂತೆ. ಇತ್ತೀಚಿಗೆ ಒಬ್ಬ ಹುಡುಗ ಅವ್ಳಿಗೆ ಪ್ರಪೋಸ್ ಮಾಡಿದ್ದು ಬಿಟ್ರೆ ಹೆಚ್ಚೇನೂ ಇಲ್ಲ ಅಂದ್ರು”
“ಆ ಹುಡುಗ ಇಲ್ಲಿದಾನಾ?”
“ಇಲ್ಲ, ಆದ್ರೆ ಅವ್ನ ಮೊಬಾಯಿಲ್ ಟ್ರಾಕ್ ಮಾಡೋಕೆ ಹೇಳಿದೀನಿ.”
“ಹಮ್… ನಿಮಗ್ಯಾಕೆ ಡೌಟು ಬಂದಿದ್ದು?”
“ಎಲ್ಲೂ ಸೂಯಿಸಾಡ್ ನೋಟ್ ಸಿಕ್ಕಿಲ್ಲ. ಅದಕ್ಕಿಂತ ಹೆಚ್ಚಾಗಿ, ಈ ರಾತ್ರಿ ಪಾರ‍್ಟಿ, ಪಾರ‍್ಮ್ ಹೌಸು, ದುಡ್ಡಿರೋ ಮನೆ ಹುಡುಗ್ರು, ಇದೆಲ್ಲ ನೋಡಿದ್ರೆ ಯಾಕೋ ಸಮಾದಾನ ಆಗೊಲ್ಲ, ಕ್ರಾಯ್ಮ್ ನಡೆಯೋದೇ ಇಂತಾ ಜಾಗದಲ್ಲಿ, ಅಲ್ವಾ?”
“ನಿಮ್ ಮಾತು ನಿಜ. ಆದ್ರೆ ನೀವು ಹೇಳಿರೋದೆಲ್ಲ ನೋಡಿದ್ರೆ ಅದು ಕೊಲೆ ಅನ್ನೋಕೆ ಯಾವ್ದೆ ಎವಿಡೆನ್ಸು ಇಲ್ಲಾ, ಅಲ್ವಾ?”
“ಇರಬಹುದು. ಅದಕ್ಕೆ ನಿಮ್ಮನ್ನಾ ಕರಸಿದ್ದು. ನೀವ್ ಒಂದ್ಸಾರಿ ಕಣ್ಣಾಡ್ಸಿ ನೋಡಿ. ಏನೂ ಸಿಗದಿದ್ರೆ ಓಕೆ”
“ಹುಡುಗ್ರ ಅಪ್ಪ ಅಮ್ಮ ಯಾರೂ ಬಂದಿಲ್ವಾ?”
“ಬೆಳಗಾಗೋ ಹೊತ್ತಿಗೆ ಬರಬಹುದು… ನನ್ ಕೇಳಿದ್ರೆ, ಒಂದ್ ಮಾತಂತೂ ನಿಜ”.
“ಏನು?”
“ಈ ಮ್ಯಾಜಿಕ್ ಶೋ ನಡಿತಾ ಇದ್ದಾಗ್ಲೇ ಇದು ಆಗಿದ್ದು”.
“ಹೇಗೆ?”
“ಮ್ಯಾಜಿಕ್ ಶುರುವಾಗಿ ಸ್ವಲ್ಪ ಹೊತ್ತಿಗೇ ರಚನಾ ಪೂರ‍್ಣಿಮಾಳನ್ನಾ ಮಾತಾಡಿಸಿ ಹೋಗಿದ್ದಾಳಲ್ಲ? ಸೋ ಹಾಗಾಗಿ, ಹನ್ನೊಂದು-ವರೆಯಿಂದ ಹನ್ನೊಂದು ಮುಕ್ಕಾಲಿನ ನಡುವೆ ನಡೆದಿರಬಹುದು ಅಂತ ನನ್ನ ಅನುಮಾನ”.
“ಹಮ್”, ಎಂದು ಸುಮ್ಮನಾದ ಪುಲಕೇಶಿ. ಕಣ್ಣು ಮುಚ್ಚಿ, ಪ್ರಬಾಕರ್ ಅವರಿಂದ ಕೇಳಿದ್ದೆಲ್ಲವನ್ನೂ ಮನಸ್ಸಿನಲ್ಲೇ ನೆನೆಸಿಕೊಳ್ಳುತ್ತಾ, ಅಲ್ಲಿ ನಡೆದಿದ್ದ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳತೊಡಗಿದ. ಒಂದಯ್ದು ನಿಮಿಶವಾದ ಮೇಲೆ ಕಣ್ಣು ತೆಗೆದು, ಪ್ರಬಾಕರ್ ಅವರ ಜೊತೆಗೂಡಿ, ಪೂರ‍್ಣಿಮಾ ಮಲಗಿದ್ದ ಕೋಣೆಗೆ ಹೋದ. ಕೋಣೆಯನ್ನು ವಿವರವಾಗಿ ನೋಡಲು ಮೊದಲುಮಾಡಿದ ಪುಲಕೇಶಿ. ಪ್ರಬಾಕರ್ ಹೇಳಿದರು, “ಪೂರ‍್ತಿ ಮನೆ ಚೆಕ್ ಮಾಡೋಕೆ ಆಗಿಲ್ಲ, ಆದ್ರೆ ಎಲ್ಲರ ಬ್ಯಾಗು ಚೆಕ್ ಮಾಡಿದೀನಿ. ಒಂದು ಇಂಟೆರೆಸ್ಟಿಂಗ್ ವಿಶ್ಯ ಏನು ಅಂದ್ರೆ, ಪೂರ‍್ಣಿಮಾಳ ಬ್ಯಾಗಿನಲ್ಲಿ ಇನ್ನೊಂದು ಸ್ಕಾಲ್ಪೆಲ್ ಇರುವ ಚಿಕ್ಕ ಪೆಟ್ಟಿಗೆ ಸಿಕ್ತು.”
ಕವರಿನಲ್ಲಿ ಇಡಲಾಗಿದ್ದ ಆ ಇನ್ನೊಂದು ಸ್ಕಾಲ್ಪೆಲ್ ಪೆಟ್ಟಿಗೆ ತೆರೆದು, ತನ್ನ ಬೆರಳುಗಳು ಅದನ್ನು ಸೋಕದಂತೆ ಎಚ್ಚರವಹಿಸಿ, ವಿವರವಾಗಿ ನೋಡಿ, ನಂತರ ಅದನ್ನು ಮೂಸಿ ಮೂಸಿ ನೋಡಿದನು ಪುಲಕೇಶಿ. ಹಾಗೇ ಪೂರ‍್ಣಿಮಾಳ ಬ್ಯಾಗು ಮತ್ತು ಕಯ್ ಕುಯ್ದುಕೊಳ್ಳಲು ಬಳಸಿದ್ದ ಸ್ಕಾಲ್ಪೆಲ್ ಕೂಡ ಮೂಸಿ ನೋಡಿದ.
“ಶವ ಇಲ್ಲೇ ಇದ್ರೆ ಒಳ್ಳೇದಾಗ್ತಿತ್ತು”, ಅಂದ ಪುಲಕೇಶಿ.
“ಯಾಕೆ?”
“ಈ ಪೆಟ್ಟಿಗೆಯಲ್ಲಿರುವ ಇನ್ನೊಂದು ಸ್ಕಾಲ್ಪೆಲ್ ಮೇಲೆ ಯಾವುದೇ ಪಿಂಗರ್ ಪ್ರಿಂಟ್ ಕಾಣ್ತಾಯಿಲ್ಲ.”
ಒಂದೆರಡು ಕ್ಶಣ ಯೋಚಿಸಿದ ಪ್ರಬಾಕರ್ ಕೇಳಿದರು, “ಅಂದ್ರೆ… ಪೂರ‍್ಣಿಮಾ ಆತ್ಮಹತ್ಯೆ ಮಾಡಿಕೊಂಡಿದ್ರೆ ಅದರ ಮೇಲೂ ಪಿಂಗರ್ ಪ್ರಿಂಟ್ ಇರಬೇಕಿತ್ತು, ಅಲ್ವಾ?”
“ಹೌದು… ಇರಲಿ, ನೋಡೋಣ”, ಎಂದು ಪುಲಕೇಶಿ ತನ್ನ ಹದ್ದುಗಣ್ಣಿನ ಹುಡುಕಾಟ ಮುಂದುವರೆಸಿದ. ಮಂಚದ ಪಕ್ಕದ ನೆಲ ಮತ್ತು ಹಾಸಿಗೆ ರಕ್ತದಿಂದ ಕೆಂಪಾಗಿದ್ದವು.

(ಮುಂದುವರೆಯುವುದು : ಎರಡನೆ  ಕಂತು ನಾಳೆ ಮೂಡಿ ಬರುತ್ತದೆ) 

(ಚಿತ್ರ ಸೆಲೆ: news.asiantown.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: