ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ.

creepy_scalpel_hand_sketch_by_phantomothedeathstar-d45ftxlಕಂತು 1 ಕಂತು 2

ಪುಲಕೇಶಿಗೆ ಆ ಕೋಣೆಯಲ್ಲಿ ಮತ್ತೇನೂ ಕಾಣಲಿಲ್ಲ. ಅಲ್ಲಿಂದ ಹೊರಗಡೆ ಬಂದು, ಎಲ್ಲರೂ ಕೂತಿದ್ದ ನಡುಮನೆಯಲ್ಲಿ ಒಂದು ಸುತ್ತು ಹಾಕುತ್ತಾ, ಬಾಟಲಿಗಳಿದ್ದ ಜಾಗಕ್ಕೆ ಬಂದ. ಅಲ್ಲಿದ್ದ ಬಗೆಬಗೆಯ ಕುಡಿಯುಗಳನ್ನು ವಿವರವಾಗಿ ನೋಡಿ, ಅವುಗಳಲ್ಲಿ ಒಂದೂ ವೋಡ್ಕಾ ಬಾಟಲಿ ಇಲ್ಲದ್ದನ್ನು ಗಮನಿಸಿದ. ಅಲ್ಲಿಂದ ಹೊರಳಿ, ಆಳುಗಳು ನಿಂತಿದ್ದ ಜಾಗಕ್ಕೆ ಬಂದು ಅವರನ್ನು ಅಂಗಳಕ್ಕೆ ಕರೆದುಕೊಂಡು ಹೋದ.
“ನಾನು ಯಾರನ್ನಾ ಕೇಳ್ತೀನೋ, ಅವರು ಮಾತ್ರ ಬಾಯಿ ಬಿಡಬೇಕು” ಎಂದು ಎಚ್ಚರಿಸಿ, ತನ್ನ ಕೇಳ್ವಿಗಳನ್ನು ಶುರುವಿಟ್ಟುಕೊಂಡ. “ಡ್ರಿಂಕ್ಸ್ ಬಾರ್ ಯಾರು ನೋಡ್ಕೊಳ್ಳೋದು?”
“ನಾನು ಸರ‍್”, ಎಂದು ಮೂವರ ನಡುವೆ ನಿಂತಿದ್ದವ ಕಯ್ ಎತ್ತಿದ.
“ಅಲ್ಲಿ ವೊಡ್ಕಾ ಬಾಟಲ್ ಯಾಕಿಲ್ಲ?”
“ಇಲ್ಲಿ ಬರೋರು ಯಾರೂ ವೊಡ್ಕಾ ಕುಡಿಯೋದಿಲ್ಲ ಸರ‍್”
“ಹಾಗಾದರೆ, ಇಲ್ಲಿರೋ ಹುಡುಗಿಯರು ಕುಡದಿದ್ದ ವೊಡ್ಕಾ ಎಲ್ಲಿಂದ ಬಂತು?”
“ಅದನ್ನಾ ಅವರೇ ತಂದಿದ್ದು ಸರ‍್”.
“ಓಹ್!” ಎಂದು ತನಗೆ ತಾನೇ ಏನನ್ನೋ ಮನವರಿಕೆ ಮಾಡಿಕೊಂಡು, “ಅದು ಈಗ ಎಲ್ಲಿದೆ?”
“ಇಲ್ಲೇ ಸರ‍್” ಎಂದು ಅಂಗಳದಲ್ಲೇ ಒಂದು ಟೇಬಲ್ಲಿನ ಮೇಲೆ, ಮಿಕ್ಕ ಬಾಟಲಿಗಳ ಜೊತೆ ಇಟ್ಟಿದ್ದ 180ಎಮ್. ಎಲ್ ನ ವೊಡ್ಕಾ ಬಾಟಲಿ ತೋರಿಸಿದನು ಆಳು.
“ಬಾಟಲಿಯಲ್ಲಿ ಇನ್ನೂ ಅರ‍್ದದಶ್ಟು ವೊಡ್ಕಾ ಇತ್ತು”. ಅದನ್ನು ನೋಡಿದ ಮೇಲೆ, ಮಿಂಚು ಹೊಳೆದಂತೆ ಪುಲಕೇಶಿಯ ಕಣ್ಣುಗಳು ಅರಳಿದವು. ತಕ್ಶಣ ಕೇಳಿದ, “ಇದೊಂದೇ ಬಾಟಲಿನಾ?”
“ಹೌದು ಸರ್. ಇದೊಂದೇ”.
“ಹುಡುಗರ ಗ್ಲಾಸುಗಳಿಗೆ ಡ್ರಿಂಕ್ಸ್ ನೀವೇ ಹಾಕಿ ಕೊಟ್ರಾ?”
“ಇಲ್ಲಾ ಸರ್. ಅವರೇ ಹಾಕೊಳ್ಳತಿದ್ರು, ನಾವೆಲ್ರೂ ಒಳಗೆ ಅಡುಗೆ ತಯಾರಿಯಲ್ಲಿದ್ವಿ”.
“ಪೆಂಟಾಸ್ಟಿಕ್”, ಉದ್ಗರಿಸಿದನು. “ಪೂರ‍್ಣಿಮಾ, ಅಂದ್ರೆ ಸತ್ತ ಹುಡುಗಿ, ಅವಳ ಗ್ಲಾಸು ಯಾವ್ದು ಅಂತ ಗೊತ್ತಾ?”
“ಇಲ್ಲಾ ಸರ‍್”.
“ನಿಮಗೆ?” ಎಂದು ಮಿಕ್ಕ ಆಳುಗಳನ್ನು ಕೇಳಿದನು.
ಒಬ್ಬ,”ಗೊತ್ತು ಸರ್. ಅವರು ವಾಂತಿ ಮಾಡ್ಕೊಂಡ್ ಮೇಲೆ, ಕ್ಲೀನ್ ಮಾಡಿ, ಆ ಗ್ಲಾಸನ್ನಾ ನಾನೆ ತೆಗೆದಿಟ್ಟೆ”, ಎಂದು ಟೇಬಲ್ಲಿನ ಕೆಳಗಿದ್ದ ಗ್ಲಾಸನ್ನು ಎತ್ತಿ ಕೊಟ್ಟನು. ಪುಲಕೇಶಿ ಅದನ್ನೂ ಮೂಸಿ ನೋಡಿದನು.

ಇಬ್ಬರೂ ಆಳುಗಳ ಜೊತೆಯಲ್ಲಿ ಮನೆಯ ಒಳಗೆ ಬಂದರು. ಪುಲಕೇಶಿ, ನೇರ ಆ ಕೋಣೆಗೆ ಹೋಗಿ, ತನ್ನ ಹಿಂದೆ ಬಂದ ಪ್ರಬಾಕರ್ ಅವರನ್ನು ಕುರಿತು,
“ನಿಮ್ಮ ಮೊಬಾಯಿಲಿನಲ್ಲಿ ಪಿಕ್ಚರ್ ಏನಾದ್ರೂ ತಗೊಂಡಿದೀರಾ?” ಎಂದು ಕೇಳಿದನು.
“ಹಾಂ… ಇಲ್ಲಿದೆ ನೋಡಿ” ಎಂದು ತಮ್ಮ ಮೊಬಾಯಿಲು ತೆಗೆದುಕೊಟ್ಟರು ಪ್ರಬಾಕರ್. ಪೂರ‍್ಣಿಮಾಳ ಎಡಗಯ್ ಮಂಚದಿಂದ ಹೊರಗೆ ಚಾಚಿದ್ದು, ಅವಳು ಮಂಚದ ಎಡಬಾಗದಲ್ಲಿ ಅಂಗಾತ ಮಲಗಿದ್ದಳು. ಅವಳ ಇನ್ನೊಂದು ಕಯ್ಯಲ್ಲಿ ಸ್ಕಾಲ್ಪೆಲ್ ಇತ್ತು. ಶವ ಬಿದ್ದಿದ್ದ ರೀತಿ, ಕಯ್ ಗಾಯದ ಗುರುತು, ಎಲ್ಲವನ್ನೂ ಪರೀಕ್ಶಿಸಿದ ಪುಲಕೇಶಿ,
“ಇದು ಕೊಲೆನೇ ಅಂತ ನನಗೆ ಅನಿಸ್ತಾಯಿದೆ, ಯಾಕೆ ಅಂತಾ ಆಮೇಲೆ ಹೇಳ್ತೀನಿ. ಈಗ, ಕೊಲೆ ಹೇಗಾಗಿರಬಹುದು ಎಂದು ಯೋಚಿಸೋಣ… ಕೊಲೆ ಮಾಡಿದವರು ಅವಳ ಬೆನ್ನ ಹಿಂದೆ ಕೂತು, ಅವಳ ಕಯ್ಯನ್ನು ತಮ್ಮ ಕಯ್ಯಲ್ಲಿ ಹಿಡಿದು, ಅದು ಆತ್ಮಹತ್ಯೆಯೇ ಅನ್ನುವ ರೀತಿಯಲ್ಲಿ ಅವಳ ಮುಂಗಯ್ ಕುಯ್ದಿರಬೇಕು.”
ಒಂದಿಶ್ಟು ಕ್ಶಣ ಯೋಚಿಸಿದ ಪ್ರಬಾಕರ್, “ಹೌದು, ನೀವು ಹೇಳೋದು ಸರಿ ಅನ್ಸುತ್ತೆ. ಗಾಯದ ಗುರುತು ನೋಡಿದ್ರೆ, ಪೂರ‍್ಣಿಮಾಳ ಎದುರಿಗೆ ಕೂತು ಕೊಯ್ದಿರುವ ಚಾನ್ಸು ಇಲ್ಲ”, ಅಂದರು.

“ಬನ್ನಿ ಹುಡುಗರನ್ನಾ ಮಾತಾಡಿಸೋಣ”, ಎಂದು ಪುಲಕೇಶಿ ನಡುಮನೆಗೆ ಬಂದನು. ಎಲ್ಲರೂ ಅಲ್ಲಿಯೇ ತೂಕಡಿಸುತ್ತಾ ಕುಳಿತಿದ್ದರು. ಅವರಿಗೆಲ್ಲ ಎಚ್ಚರವಾಗುವಂತೆ ಏರು ದನಿಯಲ್ಲಿ ಮಾತಾಡಿದ ಪುಲಕೇಶಿ,
“ನಾನು ಕೇಳೋ ಪ್ರಶ್ನೆಗಳಿಗೆ ತಟ್ ಅಂತ ಉತ್ತರ ಹೇಳ್ಬೇಕು, ಆಯ್ತಾ?”
ಎಲ್ಲರೂ ಎಚ್ಚರವಾಗಿ ನೆಟ್ಟಗೆ ಕುಂತರು. ಆಳುಗಳೂ ಸೋಪಾದ ಹಿಂಬದಿಯಲ್ಲಿ, ಗೋಡೆಗೆ ಒರಗಿ ಕುಳಿತಿದ್ದರು.
“ಯಾರಿಗ್ ಟೀ ಬೇಕು ಕಯ್ ಎತ್ತಿ”, ಎಂದನು ನಗತ್ತಾ. ಎಲ್ಲರೂ ಕಯ್ ಎತ್ತಿದರು. “ಒಂದೆರಡ್ ಪ್ರಶ್ನೆ ಕೇಳಿಬಿಡ್ತೀನಿ, ಆಮೇಲೆ ಎಲ್ರೂ ಸೇರಿ ಟೀ ಕುಡಿಯೋಣ… “, ಎಲ್ಲರಿಗೂ ಪೂರ‍್ತಿ ಎಚ್ಚರವಾಗಿತ್ತು.
“ನಿಮ್ಮಲ್ಲಿ ಅಶೋಕ್ ಯಾರಿಗೆ ಚೆನ್ನಾಗಿ ಪರಿಚಯ?”
ಒಂದೆರಡು ಕ್ಶಣ ತಮ್ಮ ತಮ್ಮಲ್ಲೇ ಮುಕ ನೋಡಿಕೊಂಡ ಮೇಲೆ, ಗಿರೀಶ್ ಮಾತಾಡಿದ, “ಇಲ್ಲಿ ನಮ್ಮೆಲ್ಲರಿಗೂ ಅವ್ನು ಚೆನ್ನಾಗಿ ಗೊತ್ತು”.
“ಪೂರ‍್ಣಿಮಾ ಅವನನ್ನಾ ರಿಜೆಕ್ಟ್ ಮಾಡಿದ್ದಕ್ಕೆ ಅವನಿಗೆ ಅವಳ ಮೇಲೆ ಸಿಟ್ಟೇನಾದ್ರೂ ಇತ್ತಾ?”
“ಪೂರ‍್ಣಿಮಾಳಂತಹ ಹುಡುಗಿ ರಿಜೆಕ್ಟ್ ಮಾಡಿದ ಅವಮಾನಕ್ಕೆ ಯಾರಿಗಾದ್ರೂ ಸಿಟ್ಟು ಬಂದೇ ಬರುತ್ತೆ ಅಲ್ವಾ ಸರ‍್?”, ಅಂದ ಗಿರೀಶ.
ನಡುವೆ ಬಾಯಿ ಹಾಕಿದಳು ರಚನಾ, “ಹಂಗೇನಿಲ್ಲಾ… ಅವ್ನೇನು ಅಂತಾ ಹುಡುಗ ಅಲ್ಲಾ”, ಅವಳ ದನಿಯಲ್ಲಿ ಸ್ವಲ್ಪ ಅಸಮಾದಾನ ತುಂಬಿತ್ತು.
“ಹೋಗಲಿ ಬಿಡಿ… ರಚನಾ… ನೀವ್ ಹೇಳಿ. ಈ ಅಶೋಕ ಎಂತಾ ಹುಡುಗಾ?”
“ಹಮ್… ತುಂಬಾ ಒಳ್ಳೇ ಹುಡುಗ, ಬುದ್ದಿವಂತ ಕೂಡ”.
“ಹಮ್… ಸರಿ… ಪೂರ‍್ಣಿಮಾ ಅವನನ್ನಾ ರಿಜೆಕ್ಟ್ ಮಾಡಿದ್ಳು ಅಂತಾ ನಿಮಗೆಲ್ಲ ಹೇಗ್ ಗೊತ್ತು?”
ಅಮರ್ ಹೇಳಿದ, “ಅವ್ನ ಕ್ಲೋಸ್ ಪ್ರೆಂಡೊಬ್ಬ ನನಗೆ ಹೇಳಿದ್ದಾ ಸರ‍್”.
“ಇದರ ಬಗ್ಗೆ ಪೂರ‍್ಣಿಮಾ ನಿಮ್ ಹತ್ರ ಏನೂ ಹೇಳಿರಲಿಲ್ವಾ?” ಎಂದು ಹುಡುಗಿಯರ ಕಡೆ ತಿರುಗಿ ಕೇಳಿದ.
ವಸುದಾ ಉತ್ತರಿಸಿದಳು, “ಹೇಳಿದ್ಳು ಸರ್. ಅವ್ನು ಪ್ರಪೋಸ್ ಮಾಡ್ದಾ, ಆದ್ರೆ ನಾನೇ ಇಲ್ಲಾ ಅಂದೆ ಅಂತಾ”.
“ಹಾಗಾದ್ರೆ ಅವ್ಳಿಗೆ ಅವ್ನ ಮೇಲೆ ಒಂದಿಶ್ಟೂ ಮನಸ್ಸಿರಲಿಲ್ಲಾ, ಅಲ್ವಾ?”
“ಹೌದು” ಎಂದಳು ವಸುದಾ.
“ಹಾಗಾದ್ರೆ, ಅವ್ಳು ಆತ್ಮಹತ್ಯೆ ಯಾಕೆ ಮಾಡ್ಕೊಂಡ್ಳು?”
“ಅವರ ಮನೆಯವರು ಜರ‍್ಮನಿಗೆ ಹೋಗೋಕೆ ಬೇಡ ಅಂದ್ರಂತೆ ಸರ‍್”, ಎಂದನು ಗಿರೀಶ, “ಅದಕ್ಕೇ ಅನ್ಸುತ್ತೆ”
“ಈ ಜರ‍್ಮನಿ ಕಾಲೇಜೇನು ಅಶ್ಟು ದೊಡ್ದಾ?”
“ಹೌದು ಸರ್… ತುಂಬಾ ರೆಪ್ಯೂಟೆಡ್ಡು, ಅಂತಾ ಚಾನ್ಸು ಸಿಕ್ಕೋದು ಕಶ್ಟ”.
ತುಟಿಗಳ ಬಲ ಅಂಚನ್ನು ತುಸು ಹಿಗ್ಗಿಸಿ ಮತ್ತೆ ಕುಗ್ಗಿಸಿದಳು ರಚನಾ, “ಮೂರ‍್ತಿ ಸಾರ್ ರೆಕಮೆಂಡ್ ಮಾಡಿದ್ದಕ್ಕೇ ಸಿಕ್ಕಿದ್ದು”, ಅಂದಳು.
ಮನಸ್ಸಿನಲ್ಲೇ ನಕ್ಕ ಪುಲಕೇಶಿ, “ರಚನಾ ಅವ್ರೆ… ಪೂರ‍್ಣಿಮಾ ನಿಮ್ಮ ಮೇಲೆ ವಾಂತಿ ಮಾಡಿಕೊಂಡ್ರು ಅಂತಾ ನೀವು ಬಟ್ಟೆ ಬದಲಿಸಿದ್ರಲ್ವಾ?”
“ಹೌದು, ತುಂಬಾ ಗಲೀಜಾಗಿತ್ತು”
“ಅದನ್ನಾ ಸ್ವಲ್ಪ ತಗೊಂಡು ಬರ‍್ತೀರಾ?”
“ತುಂಬಾ ಗಲೀಜಾಗಿತ್ತು ಅಂತಾ ತೊಳ್ದು ಬಾತರೂಮಿನಲ್ಲಿಟ್ಟಿದ್ದೆ”.
“ತಗೊಂಡು ಬರ‍್ತೀರಾ ಪ್ಲೀಸ್?”
ಎದ್ದು ಹೋಗಿ, ಹಸಿಯಾಗಿದ್ದ ಜೀನ್ಸ್ ಪಾಂಟನ್ನು ತಂದು ಪುಲಕೇಶಿಯ ಕಯ್ಯಲ್ಲಿಟ್ಟಳು ರಚನಾ. ಅದನ್ನು ನೋಡುತ್ತಾ, “ಯಾವ ಜಾಗದಲ್ಲಿ ವಾಂತಿ ಬಿದ್ದದ್ದು?” ಕೇಳಿದ.
“ಇಲ್ಲಿ…” ಎಂದು ಎಡ ಮೊಣಕಾಲಿನ ಕಡೆ ತೋರಿದಳು.
“ವಾಂತಿ ಬಿದ್ದದ್ದು ನೀವು ಗಮನಿಸಿದಾಗ ಅದು ಒಣಗಿತ್ತಾ, ಇನ್ನೂ ಹಸಿಯಾಗಿತ್ತಾ?”
ಸ್ವಲ್ಪ ಅಸಹ್ಯವಾಗಿ, ಯೋಚಿಸುತ್ತಾ ನಿಂತಳು ರಚನಾ. ಆಗ, ತಟ್ಟನೆ ಹೇಳಿದಳು ವಸುದಾ, “ಹಸಿಯಾಗಿತ್ತು ಸರ್. ನನಗ್ ನೆನಪಿದೆ”.
“ಸರಿ ಬಿಡಿ, ಈಗ ನೀವೆಲ್ಲಾ ನಿಮ್ಮ ಹೆಸರು, ಮತ್ತೆ ಅಡ್ರೆಸ್ಸು ಸ್ವಲ್ಪ ಬರದು ಕೊಡ್ತೀರಾ?”, ಎಂದು ಪ್ರಬಾಕರ್ ಅವರ ಕಡೆಗೆ ನೋಡಿದನು. ಅವರು ಪೇದೆಯೆಡೆಗೆ ನೋಡಿದಾಗ, ಪೇದೆ ತನ್ನ ಬಳಿಯಿದ್ದ ಹಾಳೆಯ ತುಂಡುಗಳನ್ನು ಹುಡುಗರಿಗೆ ಕೊಟ್ಟು, ಪೆನ್ನನ್ನೂ ಕೊಟ್ಟನು. ಎಲ್ಲರೂ ಅಡ್ರೆಸ್ ಬರೆಯುವುದನ್ನು ಪುಲಕೇಶಿ ನೋಡಿದ.
ಆಳುಗಳತ್ತ ತಿರುಗಿ, “ಎಲ್ರಿಗೂ ಸ್ವಲ್ಪ ಟೀ ಮಾಡಿ ಕೊಡಿ” ಎಂದನು ಪುಲಕೇಶಿ. ಆಳು ಎದ್ದು ಅಡುಗೆಮನೆಗೆ ನಡೆದನು. ರಾತ್ರಿ ಮೂರುವರೆಯಾಗಿತ್ತು.

ಕೋಣೆಗೆ ಬಂದ ಪುಲಕೇಶಿ, ರಚನಾಳ ಜೀನ್ಸ್ ಪ್ಯಾಂಟನ್ನು ತನ್ನ ಬೂತಗನ್ನಡಿಯಲ್ಲಿ ಹಿಡಿದು, ಏನನ್ನೋ ಹುಡುಕುತ್ತಲಿದ್ದ. “ಏನ್ ಮಾಡ್ತಾಯಿದೀರಾ ಪುಲಕೇಶಿ?”, ಎಂದರು ಪ್ರಬಾಕರ್. ಅವನು ಉತ್ತರಿಸಲಿಲ್ಲ. ಒಂದಯ್ದು ನಿಮಿಶವಾದಮೇಲೆ,
“ಹ್ಹ ಹ್ಹ”, ಎಂದು ನಕ್ಕ.
“ಏನಾಯ್ತು?”
“ಇಲ್ಲಿ ನೋಡಿ… ನೀಲಿ ಪ್ಯಾಂಟಿನಲ್ಲಿ ಕೆಂಪು ಬಣ್ಣ”.

ಮರುದಿನ ಎಲ್ಲರೂ ಪ್ರಬಾಕರ್ ಅವರ ಪೊಲೀಸ್ ಸ್ಟೇಶನ್ನಿನಲ್ಲಿ ಸೇರಿದ್ದರು. ಹಿರಿದಾದ ಕೋಣೆಯ ನಡುವೆ ಇದ್ದ ಮೇಜಿನ ಮೇಲೆ, ಹಿಂದಿನ ದಿನದ ಸ್ಕಾಲ್ಪೆಲ್ಲು, ವೋಡ್ಕಾ ಬಾಟಲಿ, ಜೀನ್ಸ್ ಪ್ಯಾಂಟುಗಳಿದ್ದವು.
ಪುಲಕೇಶಿ ಎದ್ದು ಮತಾಡಿದ, “ನೀವೆಲ್ಲ ಅನ್ಕೊಂಡಿರೋ ಹಾಗೆ ಪೂರ‍್ಣಿಮಾ ಆತ್ಮಹತ್ಯೆ ಮಾಡಿಕೊಂಡಿಲ್ಲ”. ಎಲ್ಲರ ಮುಕದಲ್ಲೂ ಗೊಂದಲ ಎದ್ದು ಕಾಣುತ್ತಿತ್ತು. ಅವನು ಮುಂದುವರೆಸಿದ, “ಮೊದಲನೇ ಪ್ರಶ್ನೆ… ಈ 180ಎಮ್.ಎಲ್ ವೋಡ್ಕಾ ಬಾಟಲಿನಲ್ಲಿ ಅರ‍್ದ ಮಾತ್ರ ಕಾಲಿಯಾಗಿದೆ. ಕಾಲಿಯಾಗಿರೋ ಅರ‍್ದದಲ್ಲಿ ಮೂರು ಹುಡುಗಿಯರು ಕುಡದಿದ್ದಾರೆ. ಅಶ್ಟು ಮಾತ್ರ ವೋಡ್ಕಾ ಕುಡದ್ರೆ ಯಾರಿಗಾದ್ರೂ ವಾಂತಿಯಾಗುತ್ತಾ?”, ಒಂದು ಕ್ಶಣ ತಡೆದು, ಎಲ್ಲರತ್ತ ನೋಡಿ, “ಪೋಸ್ಟ್ ಮಾರ‍್ಟೆಮ್ ರಿಪೋರ‍್ಟ್ ಪ್ರಕಾರ ಮೂರ‍್ಣಿಮಾಳ ಬ್ಲಡ್ಡಲ್ಲಿ ನಿದ್ದೆ ಬರೋ ಡ್ರಗ್ಗು ಇತ್ತು.”
“ಎರಡನೇ ಪ್ರಶ್ನೆ: ಪೂರ‍್ಣಿಮಾಳ ಕಯ್ಯಲ್ಲಿ ಇದ್ದ ಸ್ಕಾಲ್ಪೆಲ್ಲಿಗೆ ಒಂತರಾ ಮೇಕಪ್ ವಾಸನೆ ಇತ್ತು. ಆದ್ರೆ ಅವಳ ಬ್ಯಾಗಿನಲ್ಲಿದ್ದ ಇನ್ನೊಂದು ಸ್ಕಾಲ್ಪೆಲ್, ಅತವಾ ಅದರ ಪೆಟ್ಟಿಗೆಗೆ ಅಂತಹಾ ವಾಸನೆಯಾಗಲಿ, ಪಿಂಗರ್ ಪ್ರಿಂಟಾಗಲಿ ಇರ‍್ಲಿಲ್ಲ… ಅದರ ಅರ‍್ತ, ಯಾರೋ ಗ್ಲೌಸು ಬಳಸಿದಾರೆ”.
“ಮೂರನೇ ಪ್ರಶ್ನೆ: ರಚನಾ ಅವರ ಜೀನ್ಸ್ ಪ್ಯಾಂಟಿನ ಮೇಲೆ, ಪೂರ‍್ಣಿಮಾಳ ರಕ್ತದ ಕಲೆ ಹೇಗ್ ಬಂತು? ಹಾಗೇ ನಾಲ್ಕನೇ ಪ್ರಶೇ: ಕೊಲೆ ಹಿಂದೆ ಇರೋ ಕಾರಣ ಏನು?”

ಎಲ್ಲರೂ ಬೆರಗಾಗಿ ಮೂಕರಾದರು. ಇಡೀ ಕೋಣೆ ಶಾಂತವಾಗಿತ್ತು. “ಈ ಎರಡೂ ಪ್ರಶ್ನೆಗೆ ಉತ್ತರ…”, ಎನ್ನುತ್ತಾ ರಚನಾ ಹತ್ತಿರ ಬಂದು, “ರಚನಾ ಅವರು ಹೇಳ್ತಾರೆ”, ಎಂದ.
ರಚನಾಳ ಮಯ್ ನಡುಗಿ, ಅತಿಯಾಗಿ ಬೆವರಿದ್ದು ಎಲ್ಲರಿಗೂ ತಿಳಿಯಾಗಿ ಕಾಣುತ್ತಿತ್ತು. ಕುಳಿತಲ್ಲೇ ತಲೆ ಕೆಳಗಾಕಿ, ಕಯ್ ಕಯ್ ಹಿಸುಕುತ್ತಿದ್ದಳು. ಸಾಂತ್ವನ ನೀಡುವ ರೀತಿಯಲ್ಲಿ ಅವಳ ಕಯ್ಯನ್ನು ಹಿಡಿದ ಪುಲಕೇಶಿ, ಅವಳನ್ನು ಎಬ್ಬಿಸಿ, ಅಪ್ಪಿಕೊಂಡ. ಅವಳು ಅವನ ಎದೆಗೆ ಮುಕವಿಟ್ಟು ಗಳಗಳನೆ ಅತ್ತಳು. ಸ್ವಲ್ಪ ಹೊತ್ತು ಅತ್ತ ನಂತರ, ನಿದಾನವಾಗಿ ಮಾತು ಶುರುಮಾಡಿದಳು,
“ಚಿಕ್ಕವಳಿದ್ದಾಗಿನಿಂದ ನನಗಿಂತ ತಾನೇ ಹೆಚ್ಚು ಅನ್ನೊ ಜಂಬ ಇತ್ತು ಅವಳಿಗೆ… ಅವ್ಳಿಗೆ ಇಂಜಿನಿಯರಿಂಗ್ ಇಶ್ಟ ಇತ್ತು, ಆದ್ರೆ ನಾನು ಮೆಡಿಕಲ್ ಮಾಡ್ತೀನಿ ಅಂದಾಗ ತಾನೂ ಮೆಡಿಕಲ್ ಮಾಡ್ತೀನಿ ಅಂತ ನನ್ ಕಾಲೇಜಿಗೇ ಬಂದ್ಳು. ನನ್ನನ್ನಾ ಸೋಲಿಸೋದು ಅಂದ್ರೆ ತುಂಬಾ ಇಶ್ಟಾ ಅವ್ಳಿಗೆ.” ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮಾತು ಮುಂದುವರೆಸಿದಳು, “ನಾನು ಜರ‍್ಮನಿಗೆ ಹೋಗ್ಬೇಕು ಅಂತಾ ಎಶ್ಟು ಕನಸು ಕಂಡಿದ್ದೆ… ಆದ್ರೆ ಅಲ್ಲೂ ಕಾಂಪಿಟಿಶನ್ ಕೊಟ್ಳು, ಆಮೇಲೆ… ಆ ಅಶೋಕ್… ಅವ್ನು ಅಂದ್ರೆ ನಂಗೆ ತುಂಬಾ ಇಶ್ಟಾ… ಅವ್ನೂ ಕೂಡ ಅವಳ ಹಿಂದೇನೇ ಬಿದ್ದ, ನನಗೆ ಕೋಪ ಬರಲ್ವಾ?”
ಸ್ವಲ್ಪ ಹೊತ್ತು ಹಾಗೇ ಅವಳನ್ನು ಸಮಾದಾನ ಪಡಿಸಿದ ಪುಲಕೇಶಿ. ಆದರೆ ಅವಳ ಅಳು ಕಮ್ಮಿಯಾಗಲಿಲ್ಲ. ಪ್ರಬಾಕರ್ ಅವರು ಮಿಕ್ಕವರಿಗೆ ಅಲ್ಲಿಂದ ಹೊರಡಲು ಸನ್ನೆ ಮಾಡಿದರು.
“ಆದ್ರೂ ನೀನ್ ಮಾಡಿದ್ದು ತಪ್ಪು ಅಲ್ವಾ?” ಎಂದನು ಪುಲಕೇಶಿ, “ನಿನ್ನ ಜೀವನಾನೂ ಹಾಳು ಮಾಡ್ಕೊಂಡೆ”. ಅವಳನ್ನು ಕುರ‍್ಚಿಯ ಮೇಲೆ ಕೂರಿಸಿ, ಪ್ರಬಾಕರ್ ಮತ್ತು ಪುಲಕೇಶಿ ಹೊರಗೆ ಬಂದರು.
“ಪುಲಕೇಶಿ, ನನಗೆ ಒಂದು ವಿಶಯ ಗೊತ್ತಾಗಲಿಲ್ಲ… ವಾಂತಿ ಮಾಡ್ಕೊಂಡಿದ್ದು ಯಾರು?”
“ಹ್ಹ ಹ್ಹಾ… ವಾಂತಿ ಮಾಡ್ಕೊಂಡಿದ್ದು ರಚನಾನೇ”
“ಒಹ್!”
“ಒಂದ್ ಸಾರಿ ಅಲ್ಲಾ… ಎರಡೆರಡು ಸಾರಿ… ಕೊಲೆ ಮಾಡಿ ಸ್ವಲ್ಪ ಹೊತ್ತಾದ ಮೇಲೆ ಅವಳಿಗೆ ಪ್ಯಾಂಟಿನ ಮೇಲೆ ಪೂರ‍್ಣಿಮಾಳ ರಕ್ತದ ಕಲೆ ಕಾಣ್ಸಿದೆ. ಆಗ ಮತ್ತೆ ವಾಂತಿ ಮಾಡ್ಕೊಂಡು ಡ್ರೆಸ್ ಚೆಂಜ್ ಮಾಡೋ ನೆಪ ಹೂಡಿದಾಳೆ.”
“ಓಹೋ!… ನಿಮಗೆ ಮತ್ಯಾವ್ ಕ್ಲೂ ಸಿಕ್ತು?”
“ಪೂರ‍್ಣಿಮಾ ಬಗ್ಗೆ ಕೇಳ್ದಾಗ ಅವಳು ತಾತ್ಸಾರ ತೋರಿಸೋ ತರಾ ತುಟಿ ಹಿಗ್ಗಿಸಿದ್ಳು… ಅವಾಗ್ಲೆ ನನ್ ಡೌಟು ಕ್ಲಿಯರ್ ಆಗಿದ್ದು… ಎಲ್ಲಾ ಸೈಕಾಲಜಿ” ಎಂದು ನಕ್ಕನು ಪುಲಕೇಶಿ.

ಪೇದೆ ಕೂಗಿದ ದನಿ ಕೇಳಿ ಇಬ್ಬರೂ ರಚನಾ ಇದ್ದ ಕೋಣೆಗೆ ಹೋದರು. ಅಲ್ಲೇ ಇದ್ದ ಸ್ಕಾಲ್ಪೆಲ್ ನಿಂದ ರಚನಾ ತನ್ನ ಕಯ್ ಕುಯ್ದುಕೊಂಡಿದ್ದಳು. ನೀರಿನ ಕಾರಂಜಿಯಂತೆ ನೆತ್ತರು ಎಲ್ಲೆಡೆ ಚಿಮ್ಮಿತ್ತು. ಎಲ್ಲರಿಗೂ ಗಾಬರಿಯಾಗಿ ಒಂದೆರಡು ಕ್ಶಣ ಏನು ಮಾಡಬೇಕೆಂದು ತೋಚದೆ ಹಾಗೇ ನಿಂತಿದ್ದರು. ಅರಿವಿಗೆ ಮರಳಿದ ಪುಲಕೇಶಿ, ಅವಳ ಕಯ್ಯನ್ನು ಒತ್ತಿ ಹಿಡಿದ, ಪ್ರಬಾಕರ್ ಅವಳ ಮುಂಗಯ್ಗೆ ಜೋರಾಗಿ ಎಳೆದು ಬಟ್ಟೆಯೊಂದನು ಕಟ್ಟಿದರು. ಆದರೂ ರಕ್ತ ಹರಿಯುವುದು ನಿಲ್ಲಲಿಲ್ಲ. ಅವಳನ್ನು ಎತ್ತಿ, ಗಾಡಿಯಲ್ಲಿ ಕೂರಿಸಿ, ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೊರಟರು. ಎಶ್ಟು ಒತ್ತಿ ಹಿಡಿದರೂ ರಕ್ತ ಮಾತ್ರ ನಿಲ್ಲದೆ ಹರಿಯುತ್ತಿತ್ತು. ಒಂದೆರಡು ಗಂಟೆ ತೀವ್ರ ಪ್ರಯತ್ನ ಪಟ್ಟ ವಯ್ದ್ಯರ ಚಿಕಿತ್ಸೆ ಪಲಕಾರಿಯಾಗದೆ ಅವಳ ಎದೆಬಡಿತ ನಿಂತುಹೋಯಿತು. ಅದು ಗೊತ್ತಾಗಿ ಪುಲಕೇಶಿಯ ಕಣ್ಣಗಳೂ ಒದ್ದೆಯಾದವು.

(ಮುಗಿಯಿತು)

(ಚಿತ್ರ ಸೆಲೆ: phantomothedeathstar.deviantart.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: