ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!
– ರತೀಶ ರತ್ನಾಕರ.
“ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ ಜಗತ್ತು ಕಂಡ ದೊಡ್ಡ ಕಲೆಗಾರರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಈತ ಹೆಜ್ಜೆಹಾಕುವುದರಲ್ಲಿ ಹಲವಾರು ಬಗೆಗಳಿತ್ತು, ಅವುಗಳಲ್ಲಿ ಮೈಯನ್ನು ನೇರವಾಗಿಟ್ಟುಕೊಂಡು ನೆಲದತ್ತ ಬಾಗುವುದು ಹೆಚ್ಚು ಮಂದಿಮೆಚ್ಚುಗೆಯನ್ನು ಪಡೆದ ಬಗೆ. ನಾವ್ಯಾರಾದರು ಹೀಗೆ ನೆಲದತ್ತ ಬಾಗಲು ಹೋದರೆ ಬಿದ್ದು ಮುಸುಡಿಯನ್ನು ಒಡೆದುಕೊಳ್ಳಬೇಕಾದೀತು. ಹಾಗಾದರೆ ಮೈಕಲ್ ಜಾಕ್ಸನ್ ಗೆ ಇದು ಹೇಗೆ ಕರಗತವಾಗಿತ್ತು?
ಮೊದಲಬಾರಿಗೆ ಈ ಬಗೆಯ ಹೆಜ್ಜೆಯನ್ನು ಹಾಕಿದ್ದು 1987 ರಲ್ಲಿ ಬಿಡುಗಡೆಯಾದ ‘ಸ್ಮೂತ್ ಕ್ರಿಮಿನಲ್‘(Smooth Criminal) ವಿಡಿಯೋ ಹಾಡಿಗೆ. ಈ ಹಾಡನ್ನು ಮಾಡುವಾಗ ತೆಳುವಾದ ಮತ್ತು ಗಟ್ಟಿಯಾದ ತಂತಿಗಳನ್ನು ಬೆನ್ನಿಗೆ ಕಟ್ಟಿ, ಅದರ ನೆರವಿನಿಂದ ನೆಲದತ್ತ ಬಾಗುವಂತೆ ಮಾಡಲಾಗಿತ್ತು. ಬಳಿಕ ಎಡಿಟಿಂಗ್ ಮಾಡುವಾಗ ತಂತಿಗಳು ಕಾಣದಂತೆ ಮಾಡಿ ವಿಡಿಯೋವನ್ನು ಚೆಂದಗಾಣಿಸಿ ಮೂಡಿಸಲಾಗಿತ್ತು. ಮೈಕಲ್ ಅವರ ಈ ಹೊಸಬಗೆಯ ಕುಣಿತವನ್ನು ನೋಡಿ ಮಂದಿ ಅವಕ್ಕಾದರು. ಇದು ಇನ್ನಿಲ್ಲದ ಮಂದಿಮೆಚ್ಚುಗೆಯನ್ನು ಪಡೆಯಿತು. ಈ ಹೆಜ್ಜೆಯನ್ನು ಅಟ್ಟಲಿ(stage)ನ ಮೇಲೆ ಮಂದಿಯ ಎದುರಿಗೆ ಮಾಡಿ, ಅವರನ್ನು ಮೋಡಿಮಾಡುವ ತವಕ ಮೈಕಲ್ ಜಾಕ್ಸನ್ ಅವರದ್ದಾಗಿತ್ತು. ಆದರೆ ಮಂದಿಯ ಎದುರಿಗೆ ನೇರವಾಗಿ ಕುಣಿಯುವಾಗ ತಂತಿಗಳನ್ನು ಕಟ್ಟಿಕೊಂಡು ಕುಣಿಯಲು ಆಗುವುದಿಲ್ಲ. ಅದಕ್ಕೆಂದೇ ಬೇರೆಯಾದ ಬೂಟನ್ನು ಮಾಡಿಸುವ ಕೆಲಸಕ್ಕೆ ಮೈಕಲ್ ಕೈಹಾಕಿದರು. ಕೊನೆಗೂ ಆ ಕೆಲಸಕ್ಕೆ ಗೆಲುವು ಸಿಕ್ಕಿತ್ತು. ಹೌದು, ನೆಲದತ್ತ ಸುಮಾರು 45 ಡಿಗ್ರಿ ಬಾಗಿ ಕುಣಿಯಲು ಮೈಕಲ್ ಜಾಕ್ಸನ್ ಗೆ ನೆರವಾಗಿದ್ದು ಅವರ ಬೂಟುಗಳು.
ಎಂದಿನ ಬೂಟಿಗಿಂತ ಬೇರೆಯಾಗಿ ಇದು ಕಾಣುತ್ತದೆ. 1993 ರಲ್ಲಿ ಈ ಬೂಟಿನ ಹಕ್ಕೋಲೆ(patent)ಯನ್ನು ಮೈಕಲ್ ಅವರು ಮಾಡಿಸಿದರು. ಇದರ ಇಟ್ಟಳ(structure) ಮತ್ತು ಮಾಡುವ ಬಗೆಯನ್ನು ಬೇರೆ ಯಾರು ಕದಿಯದಂತೆ ತಡೆಯುವುದು ಇವರ ಗುರಿಯಾಗಿತ್ತು. ಬಳಿಕ ಆ ಹಕ್ಕೋಲೆಯ ಗಡುವು 2005 ರಲ್ಲಿ ಕೊನೆಗೊಂಡಿತು. ಆ ಹಕ್ಕೋಲೆಯಲ್ಲಿದ್ದ ಬೂಟಿನ ಇಟ್ಟಳದ ಚಿತ್ರಗಳು ಇಲ್ಲಿವೆ.
1. ಬೂಟಿನ ಮೇಲ್ಬಾಗವು ಎಂದಿನ ಬೂಟಿಗಿಂತ ಕೊಂಚ ಎತ್ತರವಾಗಿದೆ. ಹಾಗೆಯೇ ಬೂಟಿನ ಕಟ್ಟುವ ದಾರಗಳ ಜೊತೆಗೆ ಪಟ್ಟಿಗಳು ಇವೆ. ಇವು ನೆಲದತ್ತ ಬಾಗುವಾಗ ಕಾಲಿನ ಹಿಮ್ಮಡಿಯು ಬೂಟಿನಿಂದ ಬೇರಾಗದಂತೆ ತಡೆಯುತ್ತವೆ.
2. ಬೂಟಿನ ಮೇಲ್ಬಾಗದ ಹೊರಪದರವನ್ನು ತೊಗಲಿನ ಪರದೆಯಿಂದ ಮುಚ್ಚಿರುತ್ತಾರೆ. ಬೂಟಿನ ಪಟ್ಟಿಗಳನ್ನು ಕಾಣದಂತೆ ಮಾಡುವುದು ಮತ್ತು ಬೂಟಿನ ಪಟ್ಟಿಗಳಿಗೆ ಬಲವನ್ನು ನೀಡುವುದು ಇದರ ಕೆಲಸವಾಗಿದೆ.
3. ಇದರಲ್ಲಿ ತುಂಬಾ ಅರಿದಾದ್ದು ಅಂದರೆ ಬೂಟಿನ ಹಿಮ್ಮಡಿ. ಬೂಟಿನ ಹಿಮ್ಮಡಿಯ ತಳವು ಕುದುರೆ ಲಾಳಾಕಾರದಲ್ಲಿ ಇದ್ದು ಮೂರು ಪದರಗಳಿಂದ ಮಾಡಲಾಗಿದೆ. ಮೊದಲನೇ ಪದರ ಕುದುರೆ ಲಾಳಾಕಾರದ ಬೂಟಿನ ತೊಗಲು ಇಲ್ಲವೇ ರಬ್ಬರ್ ಹಿಮ್ಮಡಿ, ಎರಡನೆಯದ್ದು ‘V’ ಆಕಾರದ, ಮೊಳೆಗಳನ್ನು ಹೊಂದಿರುವ ಕಬ್ಬಿಣದ ತುಂಡು, ಮೂರನೆಯ ಪದರವು ಮತ್ತೊಂದು ‘V’ ಆಕಾರದ, ಆದರೆ ಮೊದಲನೇ ‘V’ ಆಕಾರದ ಪಟ್ಟಿಗಿಂತ ದೊಡ್ಡದಾದ ಕಬ್ಬಿಣದ ಪಟ್ಟಿ (ಚಿತ್ರ Fig 8 ಅನ್ನು ನೋಡಿ).
ಎರಡು ‘V’ ಆಕಾರದ ಪಟ್ಟಿಗಳನ್ನು ಅಂಟಿಸಿದ ಮೇಲೆ ಅವೆರಡರ ನೆರವಿನಿಂದ ಒಂದು ದೊಡ್ಡ ಮೊಳೆಯ ತಲೆ ಗಟ್ಟಿಯಾಗಿ ಕೂರುವಂತೆ ಆಗುತ್ತದೆ. ಈ ಮೊಳೆಯನ್ನು ನೆಲದಲ್ಲಿರುವ ಒಂದು ಹಲಗೆಗೆ ಗಟ್ಟಿಯಾಗಿ ಹೊಡೆದಿರಲಾಗುತ್ತದೆ. ಕುಣಿಯುವಾಗ, ಬೂಟಿನ ಹಿಮ್ಮಡಿಯನ್ನು ಈ ಮೊಳೆಯ ತಲೆಗೆ ಸಿಕ್ಕಿಸಿ ನೆಲದತ್ತ ಬಾಗಿದರೆ ಮುಗಿಯಿತು!
ಅಂದಹಾಗೇ, ಬರಿ ಬೂಟಿದ್ದರೆ ಮೈಕಲ್ ಜಾಕ್ಸನ್ ಹಾಗೆ ಕುಣಿಯಲು ಆಗುವುದಿಲ್ಲ. ಅದಕ್ಕೆ ತಕ್ಕ ಹಾಗೆ ಪಳಗಬೇಕು. ಹಾಡಿಗೆ ಎಲ್ಲೆಲ್ಲೋ ಹೆಜ್ಜೆಹಾಕುತ್ತಿರುವಾಗ ಅಟ್ಟಲಿನ ನೆಲದ ಮೇಲೆ ಹೊಡೆದಿರುವ ಮೊಳೆಯ ತಲೆಗೆ ಬೂಟನ್ನು ಸಿಕ್ಕಿಸಿ ಹೆಜ್ಜೆತಪ್ಪದಂತೆ ಕುಣಿಯಲು ಕಲಿಯಬೇಕು. ಮತ್ತು, ಬೇರೆ ಹೆಜ್ಜೆಗಳನ್ನು ಹಾಕುವಾಗ ಮೊಳೆಯ ತಲೆಯನ್ನು ತುಳಿಯದಂತೆ ಎಚ್ಚರವಹಿಸಬೇಕು. ಸರಿಯಾಗಿ ಪಳಗದೇ ಹೀಗೆ ಕುಣಿಯಲು ಹೋದರೆ ಕೈಕಾಲು ಮುರಿದುಕೊಳ್ಳುವುದು ಗ್ಯಾರಂಟಿ. ಮೈಕಲ್ ಜಾಕ್ಸನ್ ಅವರಿಗೇ ಈ ಬೂಟು ಕೈಕೊಟ್ಟಿತ್ತು ಎಂದರೆ ನಾವು ಕೊಂಚ ಯೋಚಿಸಬೇಕಾಗುತ್ತದೆ. 1996 ರಲ್ಲಿ ರಶ್ಯಾದ ಮಾಸ್ಕೋದಲ್ಲಿ ಮಂದಿಯ ಎದುರಿಗೆ ಕುಣಿಯುವಾಗ ಈ ಬೂಟಿನಿಂದ ಕೊಂಚ ಎಡವಟ್ಟಾಗಿ ಬೂಟಿನ ಹಿಮ್ಮಡಿ ಸಡಿಲವಾಗಿತ್ತು. ಇದರಿಂದ ಮೈಕಲ್ ಅವರು ದೊಡ್ಡ ಪೆಟ್ಟಾಗುವುದರಿಂದ ಹೇಗೋ ಪಾರಾಗಿದ್ದರು. ಬಳಿಕ ಈ ಬೂಟನ್ನು ಮತ್ತಶ್ಟು ಗಟ್ಟಿಗೊಳಿಸುವ ಪ್ರಯತ್ನ ಅವರ ತಂಡದಿಂದ ಆಗಾಗ ನಡೆಯುತ್ತಿತ್ತು.
‘ಬಿಣ್ಪಿಗೆ ಎದುರಾದ‘ (anti-gravity) ಬೂಟು ಎಂದೇ ಇದು ಹೆಸರು ಪಡೆದುಕೊಂಡಿತ್ತು. ಸಾಮಾನ್ಯವಾಗಿ ಮೈಯನ್ನು ನೇರವಾಗಿಟ್ಟುಕೊಂಡು ನೆಲದತ್ತ ಬಾಗಿದರೆ ನೆಲದ ಬಿಣ್ಪಿಗೆ (gravity) ಸಿಕ್ಕು ಮುಗ್ಗರಿಸಿ ಬೀಳುತ್ತೇವೆ. ಈ ಬಿಣ್ಪಿಗೆ ಎದುರಾಗಿ, ನೆಲದತ್ತ 45 ಡಿಗ್ರಿಯವರೆಗೆ ಬಾಗಲು ನೆರವಾಗುತ್ತಿದ್ದರಿಂದ ಇದಕ್ಕೆ ಬಿಣ್ಪಿಗೆ ಎದುರಾದ ಬೂಟು ಎಂದು ಹೆಸರು ಬಂದಿತ್ತು. ಅರಿಮೆಯ ನೆರವಿನಿಂದ ಹೊಸ ಬಗೆಯ ಸೊಮ್ಮಿಕೆ(Entertainment)ಯನ್ನು ಹುಟ್ಟುಹಾಕಬಹುದು ಎಂಬುದಕ್ಕೆ ಇದೊಂದು ಎತ್ತುಗೆಯಾಗಿದೆ. ಮಂದಿಯ ಮನಗೆದ್ದಿದ್ದ ಈ ಬೂಟು 2009 ರಲ್ಲಿ ಬರೋಬ್ಬರಿ 6 ಲಕ್ಶ ಡಾಲರ್‍ಗಳಿಗೆ (ಸುಮಾರು 3.90 ಕೋಟಿ ರೂಪಾಯಿಗಳು!) ಹರಾಜಾಯಿತು.
(ಮಾಹಿತಿ ಮತ್ತು ಚಿತ್ರಸೆಲೆ: fossbytes.com, visualnews.com, complex.com)
ಇತ್ತೀಚಿನ ಅನಿಸಿಕೆಗಳು