ಮಹೀಂದ್ರಾದ ಹೊಚ್ಚ ಹೊಸ ಕೆಯುವಿ 1ಒಒ
ಬಲುದಿನದಿಂದ ಬಿಡುಗಡೆಯಾಗದೇ ಕಾದಿದ್ದ ಮಹೀಂದ್ರಾ ಮತ್ತು ಮಹೀಂದ್ರಾ ಕೂಟದ ಕಾರೊಂದು ಮೊನ್ನೆ ಶುಕ್ರವಾರ ಅಂದರೆ 15ನೇ ಜನವರಿಯಂದು ಬಿಡುಗಡೆಯಾಗಿದೆ. ಎಸ್101(S101) ಎಂಬ ಹೆಸರಿನ ಹಮ್ಮುಗೆಯಡಿಯಲ್ಲಿ ತಯಾರಾದ ಬಂಡಿಯೇ ಈ ಕೆಯುವಿ-1ಒಒ (KUV1OO) ಎಂಬ ಹೆಸರಿನ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿದೆ. ಹರೆಯದ ಮಂದಿಯನ್ನು ಸೆಳೆಯಲು ಅವರಿಗಾಗಿ ಈ ಬಂಡಿಯೆಂದು ಮಹೀಂದ್ರಾ ಹೇಳಿಕೊಂಡಿದೆ. ಅದಕ್ಕೋಸ್ಕರ ಕೆಯುವಿ 1ಒಒ ಬಂಡಿಗೆ “ಯಂಗ್ ಎಸ್‌ಯುವಿ” ಎಂಬ ಸೆಳೆಸಾಲೊಂದನು ನೀಡಿದೆ. ಹೆಚ್ಚುತ್ತಿರುವ ಕಿರು ಆಟೋಟದ ಬಳಕೆ ಬಂಡಿಗಳ ಪಯ್ಪೋಟಿಗೆ ಕೆಯುವಿ 1ಒಒ ಅನ್ನು ತನ್ನ ಬತ್ತಳಿಕೆಯಿಂದ ಹರಿಯಬಿಟ್ಟಿದೆ ಮಹೀಂದ್ರಾ.
ಬದಲಾಗುತ್ತಿರುವ ಕೊಳ್ಳುಗರ ಆಯ್ಕೆಗೆ ತಕ್ಕ ಮಾದರಿಗಳನ್ನು ನೀಡದಿದ್ದರೆ ಮಾರುಕಟ್ಟೆಯಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದು ಎನ್ನುವುದನ್ನರಿತು ಮಹೀಂದ್ರಾ 2015ರಲ್ಲಿ ಎರಡು ಬಂಡಿ ಬಿಡುಗಡೆ ಮಾಡುವುದಾಗಿ ಸುದ್ದಿ ನೀಡಿತ್ತು. ಅದರಂತೆ ಟಿಯುವಿ 3ಒಒ ಬಂಡಿ 2015ರ ಸೆಪ್ಟೆಂಬರ್ ಹೊತ್ತಿಗೆ ಬಿಡುಗಡೆಯಾಗಿತ್ತು. ಆದರೆ ಸುಮಾರು ನಾಲ್ಕು ವರುಶಗಳಿಂದ ನಡೆಯುತ್ತಿದ್ದ ಕೆಯುವಿ ಬಂಡಿಯ ಎಸ್101 ಹಮ್ಮುಗೆ ಮಾತ್ರ ಪದೇ ಪದೇ ಮುಂದೂಡಲ್ಪಡುತಿತ್ತು. ಹಲವು ಬಾರಿ ಮುಂದೂಡಲ್ಪಟ್ಟು ಇದೀಗ ಬಿಡುಗಡೆಯಾಗಿದ್ದು ಮಹೀಂದ್ರಾ ನಿಟ್ಟುಸಿರು ಬಿಟ್ಟಂತಾಗಿದೆ.
ಹೊಸದಾದ ಕೆಯುವಿ 1ಒಒ ಬಂಡಿಯ ಮಯ್ಮಾಟ, ಬಿಣಿಗೆ, ಸಾಗಣಿಯ ವಿಶೇಶತೆ, ಪಯ್ಪೋಟಿ ಮತ್ತು ಬೆಲೆ ಮತ್ತಿತರ ವಿವರಗಳ ಮಾಹಿತಿಯನ್ನು ಈ ಮುಂದೆ ಓದಿ.
ಬಿಣಿಗೆ ಮತ್ತು ಸಾಗಣಿ (Engine and Transmission):
ಕೆಯುವಿಗಾಗಿ ಮಹೀಂದ್ರಾ ಹೆಣೆದಿದ್ದ ಎಸ್101 ಹಮ್ಮುಗೆಗಾಗಿ ಬೇರೆಯದೇ ಆದ ತಂಡವನ್ನೇ ಕಟ್ಟಲಾಗಿತ್ತಂತೆ. ಬಂಡಿಯ ಈಡುಗಾರಿಕೆಯಿಂದ ಹಿಡಿದು ಒರೆಗೆ ಹಚ್ಚುವಿಕೆ, ಬಿಡಿಬಾಗ ತಯಾರಕರ ಆಯ್ಕೆ ಮತ್ತು ಅವುಗಳ ಬೆಲೆ ನಿರ‍್ದರಿಸುವಿಕೆ, ಬಂಡಿ ಬಿಡುಗಡೆಯ ಎಲ್ಲ ಉಸ್ತುವಾರಿ ಈ ತಂಡಕ್ಕೆ ಹೊರಿಸಲಾಗಿತ್ತು. ಎಸ್101 ಹಮ್ಮುಗೆಯ ಬಂಡಿ ತಯಾರಿಸಲು ಹೊಸ ಬಿಣಿಗೆಯ ಬೆಳೆಸುವ ನಿರ‍್ಣಯ ಕಯ್ಗೊಳ್ಳಲಾಯಿತು. ಅದರಂತೆ ಎಮ್-ಪಾಲ್ಕನ್ (MFalcon) ಹೆಸರಿನ ಡಿಸೇಲ್, ಪೆಟ್ರೋಲ್ ಬಿಣಿಗೆಗಳು ಹೊಸದಾಗಿ ಅಣಿಗೊಂಡವು. ಮಹೀಂದ್ರಾ ಕೂಟದ ಹೆಚ್ಚಿನ ಮಾದರಿಗಳಲ್ಲಿ ಕಂಡುಬರುವ ಎಮ್-ಹಾಕ್ ಇಗಲ್ ಬಂಡಿಗಳನ್ನು ಇಲ್ಲಿ ಮುಂದುವರೆಯಿಸಲಿಲ್ಲ.
ಎಮ್-ಪಾಲ್ಕನ್ ಪೆಟ್ರೋಲ್ ಜಿ80(G80) ಬಿಣಿಗೆ 3 ಉರುಳೆಯ 1.2 ಲೀಟರ್ ಅಳತೆಯದ್ದಾಗಿದೆ. ಕೆಡುಗಾಳಿ ಮಟ್ಟ ಬಿಎಸ್-4ನ್ನು ಸುಲಬವಾಗಿ ದಾಟುವ ಬಿಣಿಗೆ 61 ಕಿಲೋವ್ಯಾಟ್ ಕಸುವನ್ನು ಹೊರಹಾಕುತ್ತ 115 ನ್ಯೂಟನ್ ಮೀಟರ್ ತಿರುಗುಬಲ ಉಂಟುಮಾಡುತ್ತದೆ. ಇದಕ್ಕೆ 5 ವೇಗದ ಓಡಿಸುಗನಿಡಿತದ ಸಾಗಣಿ ಅಳವಡಿಸಲಾಗಿದೆ. ಜಿ80 ಬಿಣಿಗೆ ಪ್ರತಿ ಲೀಟರ್‌ಗೆ 18.15 ಕಿಮೀ ಸಾಗಲಿದೆ.
ಎಮ್-ಪಾಲ್ಕನ್‌ನ ಡಿಸೇಲ್ ಡಿ75(D75) ಬಿಣಿಗೆ ಕೂಡ ಸಮ ಅಳತೆಯ ಅಂದರೆ 1.2ಲೀಟರ್‌ನದಾಗಿದ್ದು 3 ಉರುಳೆ ಪಡೆದಿರುತ್ತದೆ. 57.4 ಕಿಲೋವ್ಯಾಟ್‌ನಶ್ಟು ಕಸುವು ಹೊರಹಾಕುವ ಡಿ75 ಬಿಣಿಗೆ 190 ನ್ಯೂಟನ್ ಮೀಟರ್ ತಿರುಗುಬಲ ಉಂಟು ಮಾಡಿ ಮುನ್ನುಗ್ಗಲಿದೆ. ಗಾಳಿ ದೂಡುಕ ಬಳಸುವ ಈ ಡಿಸೇಲ್ ಬಿಣಿಗೆಯ ಮಯ್ಲಿಯೋಟ 25.32 ಕಿಮೀ ಪ್ರತಿ ಲೀಟರ್‌ಗೆ. ಇದರಲ್ಲೂ 5 ವೇಗದ ಓಡಿಸುಗನಿಡಿತದ ಸಾಗಣಿ ಅಳವಡಿಸಲಾಗಿದೆ.
ಮಯ್ಮಾಟ:
ಹೊರನೋಟದಲ್ಲಿ ಕೆಯುವಿ ನೋಡುಗರ ಕಣ್ಸೆಳೆಯುವುದು ಕಂಡಿತ. ಒಂದು ಬದಿಯಿಂದ ನೋಡಿದರೆ ಮಹೀಂದ್ರಾರವರ ಎಕ್ಸ್‌ಯುವಿ 5ಒಒ (XUV5OO)ತರಹ ಕಾಣುತ್ತದೆ. ಬಂಡಿಯ ಮುನ್ಕಂಬಿ ತೆರೆ ಒಂದೊಮ್ಮೆ ಲ್ಯಾಂಡ್‌ರೋವರ್ ಇವೋಕ್ (Evoque) ಕಾರನ್ನು ನೆನಪಿಸುತ್ತದೆ. ಮುಂದೀಪ ಮತ್ತು ಹಿಂದೀಪಗಳನ್ನು ಓರಣವಾಗಿ ಜೋಡಿಸಿದ್ದು ಅಂದವಾಗಿ ಕಂಡರೂ ಹಿಂಬದಿಯಿಂದ ನೋಡಿದರೆ ಕೆಯುವಿ ಕಿರು ಆಟೋಟದ ಬಂಡಿಯಂತೆ ಕಾಣದೇ ಹ್ಯುಂಡಾಯ್ ಆಯ್-10, ಸ್ವಿಪ್ಟ್‌ನಂತೆ ತೋರುತ್ತದೆ. ನೋಡುಗರಿಗೆ ಇದು ಅಶ್ಟೊಂದು ಹಿಡಿಸಲಿಕ್ಕಿಲ್ಲ.
ಉದ್ದ, ಅಗಲ, ಎತ್ತರ ಮತ್ತು ಗಾಲಿಗಳ ನಡುವಿನಂತರ ಮುಂತಾದ ಆಯಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.
ಕೆಯುವಿ ಬಂಡಿ 5 ಮತ್ತು 6 ಪಯಣಿಗರನ್ನು ಸಾಗಿಸುವ 2 ಆಯ್ಕೆ ಹೊಂದಿದೆ. 6 ಕೂರುಮಣೆಯ ಮಾದರಿಗಳು ಸ್ವಲ್ಪ ದೊಡ್ಡ ಕುಟುಂಬ ಹೊಂದಿರುವ ಕೊಳ್ಳುಗರನ್ನು ಸೆಳೆಯುವ ತಂತ್ರವೆನಿಸುತ್ತದೆ. ಹಿಂಬದಿಯ ಸಾಲಿನಲ್ಲಿ ಮೂರು ಜನ ಸರಾಗವಾಗಿ ಕುಳಿತುಕೊಳ್ಳಬಹುದು. ಮುಂಬಾಗದಲ್ಲಿ ಓಡಿಸುಗ ಪಕ್ಕದಲ್ಲಿ ಇನ್ನಿಬ್ಬರು ಕೂಡುವ ಏರ‍್ಪಾಟು ಮಾಡಲಾಗಿದೆ. ಇದಕ್ಕೋಸ್ಕರ ಹಲ್ಲುಗಾಲಿ ಬದಲಾಯಿಸುವ ಹಿಡಿಕೆಯನ್ನು(Gear shift lever) ತೋರುಮಣೆಯ ಕೆಳಬದಿ ಜಾಯ್‌ಸ್ಟಿಕ್‌ನಂತೆ ಜೋಡಿಸಿ ಹೆಚ್ಚಿನ ಜಾಗ ಮಾಡಿಕೊಡಲಾಗಿದೆ. ಓಡಿಸುಗನ ಪಕ್ಕದಲ್ಲಿ ಒಬ್ಬರು ದೊಡ್ಡವರ ಜೊತೆ ಒಂದು ಮಗು ಸಲೀಸಾಗಿ ಕೂರಬಹುದು. ಆದರೆ ಇಬ್ಬರು ದೊಡ್ಡವರು ಕೂಡುವುದಕ್ಕೆ ತುಸು ಕಶ್ಟವಾಗಬಹುದು.
ಹಿಂಬದಿಯ ಸಾಲಿನವರಿಗೆ ಕಯ್, ಕಾಲು ಚಾಚಲು ಸಾಕಶ್ಟು ಜಾಗವಿದೆ. ಹಿಂಬಾಗದಿ ಕೂಡುವ ಮೂವರಿಗೂ ಹೊಂದಿಸಿಕೊಳ್ಳಬಲ್ಲ ತಲೆಯೊರುಗಗಳು (head rest) ಅವರಿಗೆ ಪಯಣದ ಹಿತ ನೀಡಲಿವೆ. ಎಲ್ಲ ಬಾಗಿಲುಗಳಿಗೂ ನೀರಿನ ಬಾಟಲ್ ಇಡಲು ಅನುಕೂಲವಿದೆ. ಸಾಕಶ್ಟು ಸರಕು ಗೂಡುಗಳನ್ನು (Glove box) ನೀಡಿದ್ದು ಸರಕು ಸಾಗಿಸಲು ಯಾವುದೇ ತೊಂದರೆಯಾಗದು. ಸರಕು ಚಾಚು ಕೂಡ 243 ಲೀಟರ್‌ನಶ್ಟು ದೊಡ್ಡದಾಗಿದೆ. ದೊಡ್ಡ ಚೀಲಗಳನ್ನು ಹೊತ್ತು ನಿಮ್ಮ ದೂರದೂರಿನ ಪಯಣಗಳಿಗೆ ಇದು ನೆರವಾಗಲಿದೆ.
ಕೆಯುವಿ ಬಂಡಿ ಒಟ್ಟು 7 ಮಾದರಿಗಳಲ್ಲಿ ಸಿಗಲಿದೆ. ಕೆ2,ಕೆ2+, ಕೆ4, ಕೆ4+, ಕೆ6, ಕೆ6+ ಮತ್ತು ಕೆ8 ಇವೇ ಆ ಏಳು ಮಾದರಿಗಳು. ಬಂಡಿಯ ಕಾಪಿನ ವಿಶಯಕ್ಕೆ ಬಂದರೆ ಎಲ್ಲ ಮಾದರಿಗಳಲ್ಲಿ ಸಿಲುಕದ ತಡೆತದ ಏರ‍್ಪಾಟನ್ನು (ABS) ನೀಡಿ ಮಹೀಂದ್ರಾ ಕಾಪಿನ ವಿಶಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವಂತೆ ತೋರುತ್ತದೆ. ಇನ್ನೂ ಎದುರು ಗುದ್ದುವಿಕೆ (Frontal Crash), ಅಕ್ಕಪಕ್ಕದಿಂದಾಗುವ ಗುದ್ದುವಿಕೆ (Side Crash) ಇವುಗಳನ್ನು ಒರೆಗೆ ಹಚ್ಚಿ ಒಪ್ಪೋಲೆ ಪಡೆದಿದ್ದು ವಿಶೇಶ. ಎಲ್ಲ ಏಳು ಮಾದರಿಗಳಲ್ಲಿ 2 ಗಾಳಿಚೀಲಗಳನ್ನು (Air bag) ಆಯ್ಕೆಯಾಗಿ ನೀಡಲಾಗಿದ್ದು ಮತ್ತು ತನ್ನಿಡಿತದ ಸಾಗಣಿಯ (Automatic Transmission) ಆಯ್ಕೆ ಕೊಡದೇ ಇರುವುದು ಅಚ್ಚರಿ ಮೂಡಿಸಿದ್ದಂತೂ ನಿಜ.
ಬಣ್ಣಗಳ ಆಯ್ಕೆಯಲ್ಲಿ ನಿಮಗೆ 7 ಬಗೆಬಗೆಯ ಆಯ್ಕೆ ಇರಲಿವೆ. ಬಿಳಿ, ಕಪ್ಪು, ಬೆಳ್ಳಿ, ಕಂದು, ಕೆಂಪು ಈ ಸಾಮಾನ್ಯ ಬಣ್ಣಗಳೊಂದಿಗೆ ಕಡಲ ನೀರಿನ ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲೂ ಕೆಯುವಿ ಕಾಣಸಿಗುತ್ತದೆ.
ಪಯ್ಪೋಟಿ:
ಕೆಯುವಿ 1ಒಒ ಗೆ ಮಾರುತಿ ಸುಜುಕಿ ಸ್ವಿಪ್ಟ್ (Swift) ಮತ್ತು ಹ್ಯುಂಡಾಯ್ ಆಯ್-10 (I-10) ನೇರ ಎದುರಾಳಿಗಳೆಂದು ಮಹೀಂದ್ರಾ ಹೇಳಿಕೊಂಡಿದೆ. ಕೆಯುವಿಯ ಉದ್ದ ಸ್ವಿಪ್ಟ್ ಮತ್ತು ಆಯ್-10 ಗಿಂತ ಕಡಿಮೆಯಿದೆ ಆದರೆ ಕೆಯುವಿ ತನ್ನ ಎದುರಾಳಿಗಳಿಗಿಂತ ಹೆಚ್ಚು ಅಗಲವಿದೆ. ನೆಲತೆರವಿನ ಆಯದಲ್ಲಿ ಆಯ್-10 ಅಯ್ದು ಮಿಲಿಮೀಟರ್ ಕಡಿಮೆ, ಸ್ವಿಪ್ಟ್ ಮತ್ತು ಕೆಯುವಿಗಳು ಸಮನಾದ 170 ಎಮ್.ಎಮ್.ನ ನೆಲತೆರವು ಪಡೆದಿವೆ.
ಪೆಟ್ರೋಲ್ ಬಿಣಿಗೆ ಮತ್ತು ಸಾಗಣಿಗಳ ಹೋಲಿಕೆಯಲ್ಲಿ ಹೆಚ್ಚಿನ ಬೇರ‍್ಮೆ ಕಂಡುಬರುವುದಿಲ್ಲ. ಎಲ್ಲವೂ 1.2 ಲೀಟರ್ ಅಳತೆ ಹೊಂದಿದ್ದು ಕಸುವು ಮತ್ತು ತಿರುಗುಬಲ ಹೆಚ್ಚು ಕಡಿಮೆ ಒಂದೇ ಸಮನಾಗಿವೆ. ಡಿಸೇಲ್ ಬಿಣಿಗೆಯ ಮಾದರಿಗಳ ಹೋಲಿಕೆಯಲ್ಲಿ ಸಾಕಶ್ಟು ಬೇರ‍್ಮೆಗಳು ಕಂಡುಬರುತ್ತವೆ. ಆದರೆ ಇದರಲ್ಲಿ ಎದ್ದು ಕಾಣುವ ಮುಕ್ಯ ಬೇರ‍್ಮೆ ಎಂದರೆ 1.3 ಲೀಟರ್ ಅಳತೆಯ ಸ್ವಿಪ್ಟ್ ಬಿಣಿಗೆಗಿಂತ 1.2ಲೀ ಅಳತೆಯ ಎಮ್-ಪಾಲ್ಕನ್ ಡಿಸೇಲ್ ಬಿಣಿಗೆ ಹೆಚ್ಚಿನ ಕಸುವುಂಟು ಮಾಡಿ ಸಮನಾದ ತಿರುಗುಬಲವುಂಟು ಮಾಡುತ್ತದೆ.
ಬೆಲೆ:
ಕೆಯುವಿ 1ಒಒ ಪೆಟ್ರೋಲ್ ಆರಂಬಿಕ ಬೆಲೆ 4,42,000 ಲಕ್ಶ ಮತ್ತು ಡಿಸೇಲ್ ಮಾದರಿಯ ಆರಂಬಿಕ ಬೆಲೆ 5,22,000 ಲಕ್ಶ ರೂಪಾಯಿಗಳು. ಇವು ಎಕ್ಸ್‌ಶೋ ರೂಮ್ ಬೆಲೆಗಳು ಇದಕ್ಕೆ ರಸ್ತೆ ತೆರಿಗೆ ಸೇರಿದಂತೆ ಇತರೆ ಬೆಲೆಗಳನ್ನು ಸೇರಿಸಬೇಕಾಗಿರುತ್ತದೆ. ಎಲ್ಲ ಏಳು ಬಗೆಯ ಮಾದರಿಗಳ ಬೆಲೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
(ತಿಟ್ಟ ಮತ್ತು ಮಾಹಿತಿ ಸೆಲೆ: autocarindia.com , mahindrakuv100.com )
ಇತ್ತೀಚಿನ ಅನಿಸಿಕೆಗಳು