ಓ ಹುಚ್ಚು ಮನವೇ!
– ನಾಗರಾಜ್ ಬದ್ರಾ.
ಅವಳು ಬರುವ ದಾರಿಯಲ್ಲಿ ದುರ‍್ಬೀನನಾಗಿ ಕಾಯುತ್ತಿರುವ,
ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ,
ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.
ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸುತ್ತಿರುವ ಕಣ್ಣುಗಳೇ,
ನಾ ಹೇಗೆ ತಿಳಿಸಲಿ ನಿಮಗೆ,
ಅವಳಿನ್ನು ಬಾವಚಿತ್ರದಲ್ಲಿ ಮೂಡಿರುವ ಚಿತ್ರ ಮಾತ್ರವೇ ಎಂದು.
ಎಲ್ಲೆಡೆಯೂ ಅವಳ ದನಿಯು ಕೇಳಿದ ಹಾಗೆ ತೋರುತ್ತಿರುವ ಕಿವಿಗಳೇ,
ನಾ ಹೇಗೆ ತಿಳಿಸಲಿ ನಿಮಗೆ,
ಅವಳಿನ್ನು ಮಾತು ಬರದ ಮೂಕಳೆಂದು.
ಪ್ರತಿ ದೂರವಾಣಿ ಕರೆಯು ಅವಳದೆಂದು, ಎದೆಯ ಬಡಿತ ಹೆಚ್ಚಿಸಿ ಕಂಪಿಸುತ್ತಿರುವ
ಓ ಮನವೇ ನಾ ಹೇಗೆ ತಿಳಿಸಲಿ ನಿನಗೆ,
ಅವಳ ವಾಣಿಯು ಕೇಳಲಾರದಶ್ಟು ದೂರದಲ್ಲಿದೆ ಎಂದು.
ಬಾಳಿನ ಪ್ರತಿ ಗಟ್ಟದಲ್ಲಿ ಜೊತೆಯಾಗಿ ಹೆಜ್ಜೆ ಹಾಕುವೆ ಎಂದವಳು,
ನಾ ಹೇಗೆ ಅಂದುಕೊಳ್ಳಲಿ ಇಂದು
ಅವಳೇ ಹೆಜ್ಜೆ ಗುರುತಾಗಿದ್ದಾಳೆಂದು
ಜೀವನದ ಕತೆಯಲ್ಲಿ ಕೊನೆಯವರೆಗೂ ಜೊತೆಯಾಗಿ ಇರುವೆ ಎಂದವಳು,
ಓ ಮನವೇ, ನಾ ಹೇಗೆ ತಿಳಿಸಲಿ ನಿನಗೆ
ಕತೆ ಮದ್ಯೆಯೇ ತನ್ನ ಪಾತ್ರವನ್ನು ಕೊನೆಯಾಗಿಸಿ
ನನ್ನ ಒಂಟಿಯಾಗಿ ಮಾಡಿ ಹೋಗಿದ್ದಾಳೆಂದು.
ಮರಳಿ ಬಾರದ ಲೋಕಕ್ಕೆ ಹೋದವಳನ್ನು,
ಇಲ್ಲಿ ಹುಡುಕುವೆ ಎಂದು ಹೊರಟಿರುವ ಓ ಹುಚ್ಚು ಮನವೇ,
ನಿನ್ನ ಹುಚ್ಚಾಟಕ್ಕೆ ನಾನೇನೆಂದು ಕರೆಯಲಿ.
ಓ ಮನವೇ ಸಾಕು ನಿಲ್ಲಿಸು ನಿನ್ನ ಹುಚ್ಚಾಟವನ್ನ,
ಅವಳಿನ್ನು ನನಸಾಗದ ಕನಸು
ನನ್ನ ಎದೆಯಲ್ಲಿ ಮೂಡಿರುವ ಅವಳ ಚಿತ್ರ,
ನೆನಪು ಎರಡನ್ನೂ ಅಳಿಸಿ ನನ್ನ ಬದುಕಲು ಬಿಡು,
ಇಲ್ಲಾ ಅವಳನ್ನು ಸೇರಲು ಬಿಡು, ಓ ಮನವೇ.
(ಚಿತ್ರ ಸೆಲೆ: thebestshayaricollection.blogspot.in )
ಇತ್ತೀಚಿನ ಅನಿಸಿಕೆಗಳು