ಕಡಲ ಮಯ್ಲಿಗೆ ತಡೆಯಲೊಂದು ಚಳಕ
ಇಂದಿನ ದಿನಗಳಲ್ಲಿ ನೀರಿನ ಮಯ್ಲಿಗೆ(Water Pollution)ಯೆಂಬುದು ಜಾಗತಿಕ ಮಟ್ಟದಲ್ಲಿ ಮಂದಿಯ ತಲೆಕೆಡಿಸಿದೆ.ಕಾರಣ ಜಗತ್ತಿನಲ್ಲಿ ಕಾಯಿಲೆ ಮತ್ತು ಸಾವುಗಳಾಗುತ್ತಿರುವಲ್ಲಿ ನೀರಿನ ಮಯ್ಲಿಗೆ ಪಾತ್ರ ಕೂಡ ದೊಡ್ಡ ಮಟ್ಟದಲ್ಲಿರುವುದು. ಮುಂದುವರಿದ ನಾಡುಗಳೇನೂ ಈ ತೊಂದರೆಯಿಂದ ಹೊರತಾಗಿಲ್ಲ. ವಿಶೇಶವೆಂದರೆ ಜಗತ್ತಿನಾದ್ಯಂತ ದಿನನಿತ್ಯ ಇದರಿಂದಾಗಿ 14,000ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಲೆಕ್ಕಿಸಲಾಗಿದೆ. ಇತ್ತೀಚೆಗೆ ಅಮೇರಿಕಾ ಒಕ್ಕೂಟ ನಾಡುಗಳ ನೀರಿನ ಗುಣಮಟ್ಟದ ವರದಿಯಂತೆ, ನೂರಕ್ಕೆ ನಲವತ್ತಯ್ದರಶ್ಟು ಮಯ್ಲುಗಳ ಕಾಲುವೆಗಳು, ನೂರಕ್ಕೆ ಮೂವತ್ತೆರಡರಶ್ಟು ಚದರ ಮಯ್ಲುಗಳಶ್ಟು ಕೊಲ್ಲಿ ಮತ್ತು ಕಡಲುಗಳು, ನೂರಕ್ಕೆ ನಲವತ್ತೇಳರಶ್ಟು ಎಕರೆಯ ಸರೋವರಗಳು ಮಯ್ಲಿಗೆಯಾಗಿದೆ ಎಂದು ಲೆಕ್ಕಿಸಲಾಗಿದೆ.
ನೀರಿನ ಮಯ್ಲಿಗೆಗಳತ್ತ ಗಮನಹರಿಸಿದಾಗ, ನಮಗೆ ಮೊದಲಿಗೆ ಕಾಣಸಿಗುವುದು ‘ಕಡಲ ಮಯ್ಲಿಗೆ'(Sea Pollution). ಪ್ರತಿ ವರುಶ ಜೂನ್ 8ರಂದು ನಡೆಯುವ ‘ವಿಶ್ವ ಕಡಲುಗಳ ದಿನ’ದ ಸಲುವಾಗಿ ಕಳೆದ ವರುಶ ಒಂದು ಹಮ್ಮುಗೆಯನ್ನು ಹಾಕಿಕೊಳ್ಳಲಾಯಿತು. ಅದರಂತೆ ಜಗತ್ತಿನೆಲ್ಲೆಡೆ ನೂರಕ್ಕೆ ಎಂಬತ್ತರಶ್ಟು ಕಡಲಿನ ಮಯ್ಲಿಗೆ ಕಾರ‍್ಕಾನೆಗಳ ಇರ‍್ಪು(chemical), ಎಣ್ಣೆ, ಗೊಬ್ಬರ ಮತ್ತು ಕೊಳಕಿನಿಂದ, ನದಿಗಳ ಮೂಲಕ ಕಡಲು ಸೇರುವ ಕಸ ಕಡ್ಡಿ, ಕೊಳಕಿನಿಂದ ಆಗುತ್ತಿದೆ ಎಂದು ಹೇಳಲಾಗಿದೆ. ಅದರಲ್ಲಿಯೂ ಈ ಕೊನೆಯ ಹತ್ತು ವರುಶಗಳಲ್ಲಿ ಕಡಲು ಮತ್ತಶ್ಟು ಹದಗೆಟ್ಟಿದೆ. ಇವುಗಳಲ್ಲಿ ಇಂಗ್ಲೆಂಡ್ ನಾಡಿನ ಐಬಿ ಟೈಮ್ಸ್(IBTimes) ಜಗತ್ತಿನಲ್ಲಿಯೇ ಅತೀ ಮಯ್ಲಿಗೆಯಾದ ಕಡಲಾಗಿದೆ.
ಜಗತ್ತು ಎಲ್ಲಾ ಬಗೆಯ ಅರಿಮೆಯಲ್ಲಿ ಮುಂದುವರಿಯುತ್ತಿರುವ ಈ ಹೊತ್ತಿನಲ್ಲಿ, ಕಡಲಿನ ಮಯ್ಲಿಗೆ ತಡೆಗಟ್ಟಲೊಂದು ಸರಿಯಾದ ಚಳಕವಿಲ್ಲ ಎಂಬ ಕೊರಗು ಮಂದಿಯದಾಗಿತ್ತು. ಈ ನಿಟ್ಟಿನಲ್ಲಿ ನೀರಿನ ಅರಿಗರಿಂದ, ಮಯ್ಲಿಗೆ ತಡೆಗಟ್ಟುವ ಕುರಿತು ಬಹಳಶ್ಟು ಚುರುಕಿನ ಕೆಲಸಗಳು, ಹಮ್ಮುಗೆಗಳು ನಡೆಯುತ್ತಿವೆ. ಇತ್ತೀಚಿಗೆ ಈ ಹಮ್ಮುಗೆಗೆ ಸಾಟಿಯಾಗುವಂತೆ ಅರಿಗೆಯೊಂದನ್ನು ಮಾಡಲಾಗಿದೆ. ಅದು ಕಡಲಿನಿಂದ ನೀರಚ್ಚುಕ(Plastic) ಮತ್ತು ಅದರ ಬಿಡಿಬಾಗಗಳನ್ನು ನೀರಿನಿಂದ ಮೇಲೆ ಎತ್ತು.ವ ಚಳಕ. ಬೋಯನ್ ಸ್ಲಾಟ್ (Boyan Slat) ಎಂಬ ಡಚ್ ನಾಡಿನ ಕಲಿಕೆಗಾರ ಕಂಡುಹಿಡಿದಿರುವ ಈ ಚಳಕ, ಒಗತ್ತಿನ ಕೆಟ್ಟ ತೊಂದರೆಯೊಂದನ್ನು ಹೋಗಲಾಡಿಸುವಲ್ಲಿ ದೊಡ್ಡ ಪಾತ್ರವಹಿಸಲಿದೆ. ತನ್ನ ಹದಿನಾರನೇ ವಯಸ್ಸಿನಲ್ಲಿಯೇ ಆತ ಕಡಲಿನಲ್ಲಿ ತೇಲುವ ಕಸಗಳನ್ನು ನಿರಾಯಾಸವಾಗಿ ಮೇಲೆತ್ತಲೊಂದು ಉಪಾಯ ಕಂಡುಕೊಂಡಿದ್ದ.
* ಕಡಲಿನ ಒಂದು ಬದಿಯಲ್ಲಿ ಉದ್ದವಾದ ತೇಲುವ ಬೇಲಿಗಳನ್ನು ಹಾಕಿ, ಅದರೆಡೆಗೆ ಬಾಗಿದ ತಟ್ಟೆಯಾಕಾರದ ವಸ್ತುವಿನಲ್ಲಿ ನೀರನ್ನು ಹರಿಬಿಡುವುದು. ಇದರಿಂದ ನೀರಿನ ಮೇಲ್ಲಾಗದಲ್ಲಿ ಚಿಕ್ಕಮಟ್ಟದ ಅಲೆಗಳು ಉಂಟಾಗುವುದರಿಂದ ನೀರಿನ ಮೇಲೆ ಏರಿಳಿಕೆಗಳು ಉಂಟಾಗುತ್ತದೆ. ಈ ಏರಿಳಿಕೆಗಳು ನೀರಿನ ಮೇಲಿರುವ ಕಸವನ್ನು ಬೇಲಿಯ ಎದುರು ದಿಕ್ಕಿನಲ್ಲಿ ತಳ್ಳುತ್ತದೆ. ಇದರಿಂದ ಕಸಗಳೆಲ್ಲ ಬೇಲಿಯ ಬದಿಯಲ್ಲಿ ಒಂದೆಡೆ ಸೇರಿಕೊಳ್ಳುತ್ತದೆ.
* ಇನ್ನು ಎರಡನೇ ಚಳಕವು ಮೊದಲ ಚಳಕವನ್ನೇ ತುಸು ಹೋಲುತ್ತದೆ. ಇಲ್ಲಿಯೂ ಕೂಡ ಕಡಲಿನ ಒಂದು ಬದಿಯಲ್ಲಿ ಉದ್ದವಾದ ತೇಲುವ ಬೇಲಿಗಳನ್ನು ಹಾಕಿ ಕಡಲಿನಲ್ಲಿ ಕಸವಿರುವ ಜಾಗಗಳಲ್ಲಿ ಬಿಣಿಗೆ ಬಳಸಿ, ಬಿಣಿಗೆಯ ಅಡಿ ತಿರುಗುಕಗಳಿಂದ ಅಲೆಗಳನ್ನು ಉಂಟುಮಾಡಲಾಗತ್ತದೆ. ಇದರಿಂದ ನೀರಿನ ಮೇಲ್ಬಾಗ ಏರಿಳಿಕೆ ಏರ‍್ಪಟ್ಟು ಕಸವನ್ನು ಬೇಲಿಯೆಡೆಗೆ ತಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಕಸಗಳೆಲ್ಲ ಬೇಲಿಯ ಬದಿಯಲ್ಲಿ ಒಂದೆಡೆ ಸೇರಿಕೊಳ್ಳುತ್ತದೆ. ಹೀಗೆ ಒಂದೆಡೆ ಸೇರುವ ಕಸವನ್ನು ಮೇಲೆತ್ತಲು ಈಗಾಗಲೇ ಬಳಸುತ್ತಿರುವ ಕಡಲ ಹೂಳೆತ್ತುವ ಚಳಕವನ್ನೇ ಬಳಸಬಹುದು.
ಅಂದಹಾಗೆ ಇಂತಹ ಚಳಕವನ್ನು ಬೋಯನ್ 2012ರಲ್ಲಿ ಟಿ.ಈ.ಡಿ.ಎಕ್ಸ್(TEDx) ಮಾತುಕತೆಯೊಂದರಲ್ಲಿ ಮಂಡಿಸಲಾಗಿತ್ತು. ಬಿಣಿಗೆಗಾರರನ್ನು, ಅರಿಮೆಗಾರರನ್ನ, ಕಡಲರಿಗರನ್ನು ಸೆಳೆದ ಈ ಚಳಕ ಕಡಿಮೆ ಹಣದಿಂದ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರುವ ಬರವಸೆ ನೀಡಿತು. ಈ ಕಾರಣಕ್ಕೆ ಈ ಎರಡು ಚಳಕಗಳನ್ನು ಬಳಸಿಕೊಂಡು ಈ ವರುಶ ಮೊದಲು ಸುಮಾರು 2ಕಿಮೀ ಉದ್ದದ ತೇಲುವ ಬೇಲಿಗಳನ್ನು ಕಟ್ಟಿ ಹಮ್ಮುಗೆ ನಡೆಸಲಿದ್ದಾರೆ. ಈ ಹಮ್ಮುಗೆಯು ಜಪಾನ್ ನಾಡಿನ ಸುಶೀಮ ನಡುಗಡ್ಡೆಯಲ್ಲಿ ನಡೆಯಲಿದೆ. ಇದರ ಬಳಿಕ ಮುಂದಿನ ದಿನಗಳಲ್ಲಿ ಸುಮಾರು 100ಕಿಮೀ ಉದ್ದದ ತೇಲ್ಬೇಲಿಗಳನ್ನು ಬಳಸಿಕೊಂಡು, ಕ್ಯಾಲಿಪೋರ‍್ನಿಯ ಮತ್ತು ಹವಾಯಿ ನಾಡುಗಳ ನಡುವಿನ ಪೆಸಿಪಿಕ್ ಕಡಲಿನಲ್ಲಿ ಹಮ್ಮುಗೆ ನಡೆಸಲಾಗುತ್ತದೆ.
ಹೀಗೆ ಕಡಲಿನ ಮಯ್ಲಿಗೆಯನ್ನು ಕಡಿಮೆ ಮಾಡಿ ಕಡಲನ್ನು ಕಾಪಾಡುವ ಈ ಹಮ್ಮುಗೆಗೆ ಗೆಲುವು ಸಿಗಲಿ ಎಂದು ಹಾರೈಸೋಣ.
(ಮಾಹಿತಿ ಮತ್ತು ತಿಟ್ಟ ಸೆಲೆ: theworldin.com)
ಇತ್ತೀಚಿನ ಅನಿಸಿಕೆಗಳು