ಅಮೇರಿಕಾ ಅದ್ಯಕ್ಶರ ಆಯ್ಕೆ ಹೇಗೆ ನಡೆಯುತ್ತದೆ?

– ರತೀಶ ರತ್ನಾಕರ.

USA President election

ಅಮೇರಿಕಾದಲ್ಲಿ ಈಗ ಅದ್ಯಕ್ಶರ ಚುನಾವಣೆ ಬಿಸಿ. ಅದರಲ್ಲೂ ನಾಲ್ಕು ವರುಶಗಳಿಗೊಮ್ಮೆ ಬರುವ ಈ ಚುನಾವಣೆ ಅಮೇರಿಕಾದ ರಾಜಕೀಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸುತ್ತದೆ ಎಂದರೆ ತಪ್ಪಾಗಲಾರದು. ಅಮೇರಿಕಾದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯುವರು, ನಮ್ಮಲ್ಲಿರುವ ಮೇಲ್ಮನೆ ಹಾಗು ಕೆಳಮನೆಗಳಂತೆ ಸೆನೆಟ್ (Senate) ಹಾಗು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಗಳು(House of Representatives – ಹೌಸ್ ಎಂದು ಚಿಕ್ಕದಾಗಿ ಕರೆಯುತ್ತಾರೆ) ಕಾಂಗ್ರೆಸ್‍ನ ಬಾಗಗಳು. ಒಕ್ಕೂಟದಡಿಯಲ್ಲಿರುವ ನಾಡುಗಳ ಮಂದಿಯೆಣಿಕೆಯ ಆದಾರದ ಮೇಲೆ ಅವನ್ನು ಹಲವು ವಲಯಗಳನ್ನಾಗಿ ಮಾಡಲಾಗಿದೆ. ಹೀಗಿರುವ ಒಂದೊಂದು ವಲಯದಿಂದ ಹುರಿಯಾಳುಗಳು ಹೌಸ್ ಗೆ ಆಯ್ಕೆಯಾಗಿ ಬಂದಿರುತ್ತಾರೆ. ಈಗ ಅಮೇರಿಕಾದ ಸಂಸತ್ತಿನಲ್ಲಿ ಒಟ್ಟು 435 ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಇದ್ದಾರೆ. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಅವರ ಅದಿಕಾರದ ಕಾಲಮಿತಿ ಎರಡು ವರುಶಗಳಾಗಿರುತ್ತದೆ.

ಇನ್ನು ಒಕ್ಕೂಟದಡಿಯಲ್ಲಿರುವ ಒಂದೊಂದು ನಾಡಿನಿಂದ ಇಬ್ಬರು ಸೆನೆಟರ್‍ಗಳು ಆಯ್ಕೆಯಾಗಿ ಬರುತ್ತಾರೆ, ಇದಕ್ಕೆ ಯಾವುದೇ ಮಂದಿಯೆಣಿಕೆಯ ಲೆಕ್ಕಚಾರವಿರುವುದಿಲ್ಲ, ಹಾಗಾಗಿ ಒಟ್ಟು 100 ಸೆನೆಟರ್ ಗಳು ಆಯ್ಕೆಯಾಗಿ ಇರುತ್ತಾರೆ. ಸೆನೆಟ್ ಹಾಗು ಹೌಸ್ ಗೆ ಅದರದ್ದೇ ಆದ ಮಂದಿಯಾಳ್ವಿಕೆಯ ಅದಿಕಾರಗಳಿವೆ. ಮೇಲ್ಮನೆ ಮತ್ತು ಕೆಳಮನೆಗಳ ಮೇಲಾಳು ಎಂದು ಕರೆಯಲಾಗುವ ಅದ್ಯಕ್ಶರ ಆಯ್ಕೆಯು ಅದಕ್ಕಾಗಿಯೇ ಮೀಸಲಿರುವ ಚುನಾವಣೆಯ ಮೂಲಕ ನಡೆಯುತ್ತದೆ. ಹಾಗಾಗಿ, ಅಮೇರಿಕಾ ಕಾಂಗ್ರೆಸ್ ನ ಹುರಿಯಾಳುಗಳಿಗಾಗಿ ಒಟ್ಟು ಮೂರು ದೊಡ್ಡ ಚುನಾವಣೆಗಳು ನಡೆಯುತ್ತವೆ;
1. ಸೆನೆಟರ್ ಚುನಾವಣೆ
2. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಚುನಾವಣೆ
3. ಅದ್ಯಕ್ಶರ ಚುನಾವಣೆ.

ಅದ್ಯಕ್ಶರ ಚುನಾವಣೆಗೆ ತನ್ನದೇ ಆದ ಹೆಚ್ಚುಗಾರಿಕೆ ಇದೆ. ಅದ್ಯಕ್ಶರ ಚುನಾವಣೆ ಬಿಸಿ ಸುಮಾರು ಒಂದು ವರುಶಕ್ಕಿಂತ ಹೆಚ್ಚು ಕಾಲ ಅಮೇರಿಕಾದ ತುಂಬೆಲ್ಲಾ ಹರಡಿರುತ್ತದೆ ಎಂದರೆ ಬೆರಗಾಗಬಹುದು. ಈ ಅದ್ಯಕ್ಶರ ಆಯ್ಕೆಯ ಬಗೆಯು ತುಂಬಾ ದೊಡ್ಡದಿದೆ. ಇಂಡಿಯಾದಲ್ಲಿ ನಾವು ನಮಗೆ ಬೇಕಾದ ಎಮ್.ಎಲ್.ಏ/ಎಂ.ಪಿ ಗಳನ್ನು ಆಯ್ಕೆ ಮಾಡಿ ಕಳಿಸುತ್ತೇವೆ. ಬಳಿಕ ಬಹುಮತ ಗಳಿಸಿದ ಪಕ್ಶವು ತನ್ನ ಮುಕ್ಯಮಂತ್ರಿ/ಪ್ರದಾನ ಮಂತ್ರಿಯನ್ನು ಆರಿಸುತ್ತದೆ. ಆದರೆ ಅಮೇರಿಕಾದಲ್ಲಿ, ಅದ್ಯಕ್ಶರ ಚುನಾವಣೆ ಎಂದು ಬೇರೆಯದಾಗಿ ಇರುವುದರಿಂದ, ಮಂದಿಯೇ ನೇರವಾಗಿ ಓಟನ್ನು ಹಾಕಿ ಕಣದಲ್ಲಿರುವ ಒಬ್ಬ ಹುರಿಯಾಳನ್ನು ಅದ್ಯಕ್ಶರೆಂದು ಆಯ್ಕೆ ಮಾಡುತ್ತಾರೆ. ಈ ಅದ್ಯಕ್ಶರ ಚುನಾವಣೆ ಸುಮಾರು ಒಂದು ವರುಶಗಳ ಕಾಲ ಹಲವಾರು ಹಂತಗಳಲ್ಲಿ ನಡೆಯುತ್ತದೆ.

ರಾಜಕೀಯ ಪಕ್ಶಗಳಿಂದ ಹುರಿಯಾಳುವಿನ ಆಯ್ಕೆ:

ಹೆಚ್ಚಿನವರಿಗೆ ತಿಳಿದಿರುವಂತೆ ಅಮೇರಿಕಾದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಶಗಳದ್ದೇ ಮೇಲುಗೈ. ಇವರಿಬ್ಬರ ನಡುವಿನ ಪೈಪೋಟಿ ಹೆಚ್ಚಿನ ಸುದ್ದಿಯನ್ನು ಮಾಡುತ್ತದೆ. ಉಳಿದ ಪಕ್ಶಗಳಾದ ಲಿಬರ‍್ಟೇರಿಯನ್(Libertarian), ಗ್ರೀನ್(Green), ಕಾನ್ಸ್ಟಿಟ್ಯೂಶನ್(Constitution) ಮುಂತಾದ ಪಕ್ಶಗಳಿಂದಲ್ಲದೇ ಪಕ್ಶೇತರ ಹುರಿಯಾಳುಗಳು ಕೂಡ ಅದ್ಯಕ್ಶ ಗಾದಿಗೆ ಪೈಪೋಟಿ ನಡೆಸುತ್ತಾರೆ. ತಮ್ಮ ಹರವು ಹಾಗು ರಾಜಕೀಯ ಹಿನ್ನಲೆಯ ಸಲುವಾಗಿ ಡೆಮಾಕ್ರಟಿಕ್ ಹಾಗು ರಿಪಬ್ಲಿಕನ್ ಪಕ್ಶಗಳ ಹುರಿಯಾಳುವಿನ ಆಯ್ಕೆ ಮತ್ತು ಸೆಣೆಸಾಟ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿದೆ.

ಯಾವುದೇ ರಾಜಕೀಯ ಪಕ್ಶದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಗೆ ತಾನು ಅದ್ಯಕ್ಶನಾಗ ಬೇಕು ಎಂಬ ಬಯಕೆ ಇರುತ್ತದೆ, ಇದರಿಂದ ಅಮೇರಿಕಾದ ರಾಜಕೀಯ ಪಕ್ಶಗಳೂ ಹೊರತಾಗಿಲ್ಲ. ಡೆಮಾಕ್ರಟಿಕ್, ರಿಪಬ್ಲಿಕನ್, ಲಿಬರ‍್ಟೇರಿಯನ್ ಹಾಗು ಗ್ರೀನ್ ಪಕ್ಶಗಳಲ್ಲಿ ಒಂದೊಂದು ಬಾರಿಯೂ ಸುಮಾರು ಐದರಿಂದ ಆರು ಮಂದಿ ಅದ್ಯಕ್ಶ ಚುನಾವಣೆಯಲ್ಲಿ ಪೈಪೋಟಿ ನಡೆಸಬೇಕೆಂದು ಬಯಸುತ್ತಾರೆ. ಹೀಗಿದ್ದಾಗ, ಅವರಲ್ಲಿ ಒಬ್ಬರನ್ನು ಮಾತ್ರ ಆಯ್ಕೆಮಾಡಿ ಪಕ್ಶದ ಪರವಾಗಿ ಅದ್ಯಕ್ಶ ಚುನಾವಣೆಗೆ ಇಳಿಸಬೇಕು. ಅದಕ್ಕಾಗಿ ಈ ಪಕ್ಶಗಳು ಕಂಡುಕೊಂಡ ದಾರಿ ಎಂದರೆ; ಅದ್ಯಕ್ಶ ಚುನಾವಣೆಯ ಕಣಕ್ಕೆ ಇಳಿಯುವ ಹುರಿಯಾಳನ್ನು ‘ ತಮ್ಮೊಳಗೇ ಒಂದು ಚುನಾವಣೆಯನ್ನು ಮಾಡಿ ಒಬ್ಬ ಹುರಿಯಾಳನ್ನು ಆಯ್ಕೆ ಮಾಡುವುದು’! ಆ ಚುನಾವಣೆಗಳೇ ಮೊದಲ ಹಂತದ ಚುನಾವಣೆ(Primary election) ಮತ್ತು ಆಯ್ಕೆಕೂಟ(caucus).

ಈ ಬಾರಿಯ ಅದ್ಯಕ್ಶರ ಚುನಾವಣೆಗೆ ಡೆಮಾಕ್ರಟಿಕ್ ಪಕ್ಶದಿಂದ 3 ಮಂದಿ ಪೈಪೋಟಿ ನಡೆಸಲು ಬಯಸಿದ್ದಾರೆ ಎಂದಿಟ್ಟುಕೊಳ್ಳೋಣ. ಈ 3 ಮಂದಿಯಲ್ಲಿ ಒಬ್ಬರನ್ನು ಆರಿಸಿ ಆತ/ಆಕೆ ತನ್ನ ಪಕ್ಶದ ಹುರಿಯಾಳು ಎಂದು ಪಕ್ಶವು ಹೇಳಬೇಕು. ಆ 3 ಮಂದಿಯಲ್ಲಿ ಒಬ್ಬರನ್ನು ಆರಿಸುವ ಕೆಲಸವನ್ನು ಡೆಮಾಕ್ರಟಿಕ್ ಪಕ್ಶದವರು ಒಕ್ಕೂಟದ ಆಯಾ ನಾಡಿನ ಮಂದಿಗೆ ಬಿಟ್ಟುಬಿಡುತ್ತಾರೆ. ಅಮೇರಿಕಾ ಒಕ್ಕೂಟದ 50 ನಾಡುಗಳಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಶಗಳಿವೆ. 30 ಕ್ಕಿಂತ ಹೆಚ್ಚಿನ ನಾಡುಗಳಲ್ಲಿ ಲಿಬರ‍್ಟೇರಿಯನ್ ಹಾಗು ಗ್ರೀನ್ ಪಕ್ಶಗಳು ಹರಡಿಕೊಂಡಿವೆ. ಆಯಾ ನಾಡುಗಳಲ್ಲಿ ಇದನ್ನು ಡೆಮಾಕ್ರಟಿಕ್/ರಿಪಬ್ಲಿಕನ್/ ಲಿಬರ‍್ಟೇರಿಯನ್/ಗ್ರೀನ್ “ಪ್ರಾದೇಶಿಕ ಪಕ್ಶಗಳು” (state parties) ಎಂದು ಕರೆಯಲಾಗುತ್ತದೆ. ಈಗ 3 ಮಂದಿಯಲ್ಲಿ ತಮಗೆ ಬೇಕಾದ ಒಬ್ಬ ಹುರಿಯಾಳನ್ನು ಆರಿಸಲು ಮೊದಲ ಹಂತದ ಚುನಾವಣೆಯನ್ನು ಕೈಗೊಳ್ಳಬೇಕೋ ಇಲ್ಲವೇ ಆಯ್ಕೆಕೂಟವನ್ನು ನಡೆಸಬೇಕೋ ಎಂಬ ತೀರ‍್ಮಾನ ಆಯಾ ನಾಡಿನ ಪ್ರಾದೇಶಿಕ ಪಕ್ಶಗಳದ್ದಾಗಿರುತ್ತದೆ. ಎರಡರಲ್ಲಿ ಒಂದನ್ನು ನಡೆಸಿ ತಮ್ಮ ಒಲವು ಯಾರ ಪರ ಇದೆ ಎಂಬ ತೀರ‍್ಮಾನವನ್ನು ನಾಡಿನ ಪಕ್ಶಗಳು ತಿಳಿಸುತ್ತವೆ.

President 2 ಚಿತ್ರ: ಪಕ್ಶದ ಪರವಾಗಿ ಒಬ್ಬ ಹುರಿಯಾಳನ್ನು ಆರಿಸುವ ಹಂತಗಳು

ಆಯ್ಕೆಕೂಟ (Caucus):

ಆಯ್ಕೆಕೂಟ ಎಂದರೆ ಒಂದು ದೊಡ್ಡ ಜಾತ್ರೆ ಇದ್ದಂತೆ. ನಾಡಿನಲ್ಲಿರುವ ವಲಯಗಳಲ್ಲಿ ಈ ಆಯ್ಕೆಕೂಟ ನಡೆಯುತ್ತದೆ. ಸಾವಿರಾರು ಮಂದಿ ಸೇರಿರುತ್ತಾರೆ. ಆ ಜಾತ್ರೆಯಲ್ಲಿ ಅದ್ಯಕ್ಶರ ಚುನಾವಣೆಗೆ ಪೈಪೋಟಿ ಮಾಡಲು ಬಯಸುವ ಹುರಿಯಾಳುಗಳು ಬಂದು ಬಾಶಣ ಮಾಡುತ್ತಾರೆ. ಅಲ್ಲಿ ಬಂದು ಸೇರಿರುವ ಮಂದಿಯ ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಅವರ ಮಾತುಗಳನ್ನು ಕೇಳಿದ ಮೇಲೆ, ಮಂದಿಯು ತಮ್ಮ ಮೆಚ್ಚಿನ ಆಯ್ಕೆಯನ್ನು ಕೈ ಎತ್ತುವ ಮೂಲಕವೋ, ಓಟನ್ನು ಹಾಕುವ ಮೂಲಕವೋ ಆರಿಸುತ್ತಾರೆ. ಆಯ್ಕೆಕೂಟ ನಡೆಸುವ ತೀರ‍್ಮಾನ ಮತ್ತು ಹೊಣೆ ನಾಡಿನ ಪ್ರಾದೇಶಿಕ ಪಕ್ಶದ್ದಾಗಿರುತ್ತದೆ. ಈಗಿರುವ 50 ಒಕ್ಕೂಟದ ನಾಡುಗಳಲ್ಲಿ 13 ನಾಡುಗಳು ಮತ್ತು 2 ಒಕ್ಕೂಟದಾಡಳಿತದ ಪ್ರದೇಶಗಳು (US territories) ಆಯ್ಕೆಕೂಟವನ್ನು ನಡೆಸಿದರೆ ಉಳಿದ ನಾಡುಗಳು ಮೊದಲ ಹಂತದ ಚುನಾವಣೆಯ ಮೂಲಕ ತಮ್ಮ ಪಕ್ಶದ ಹುರಿಯಾಳನ್ನು ಆರಿಸುತ್ತವೆ.

ಮೊದಲ ಹಂತದ ಚುನಾವಣೆ (Primary Election):

ಮೊದಲ ಹಂತದ ಚುನಾವಣೆ ಎಂದಿನ ಚುನಾವಣೆಯಂತೆ ಇರುತ್ತದೆ. ಇದನ್ನು ಒಕ್ಕೂಟದ ನಾಡಿನ ಆಳ್ವಿಕೆ ಇಲ್ಲವೇ ಸ್ತಳೀಯ ಆಳ್ವಿಕೆ (state or local government) ನಡೆಸುತ್ತದೆ. ಮೊದಲ ಹಂತದ ಚುನಾವಣೆಯಲ್ಲಿ ಆಯಾ ಪಕ್ಶದೊಂದಿಗೆ ಹೆಸರಿಸಿಕೊಂಡ ಮತದಾರರು(registered voters) ಬಂದು, ಪಕ್ಶದ ಪರವಾಗಿ ನಿಲ್ಲಬಯಸುವ ಯಾರಿಗಾದರು ಒಬ್ಬ ಹುರಿಯಾಳಿಗೆ ಮತವನ್ನು ಹಾಕುತ್ತಾರೆ. ಈ ಚುನಾವಣೆಯಲ್ಲಿಯೂ ಹಲವು ಬಗೆಗಳಿವೆ;

  1. ಒಂದು ಬಗೆಯಲ್ಲಿ, ಪಕ್ಶದೊಂದಿಗೆ ಹೆಸರಿಸಿಕೊಂಡವರಿಗೆ ಮಾತ್ರ ಓಟನ್ನು ಹಾಕಲು ಬಿಡಲಾಗುತ್ತದೆ. ಅಂದರೆ ರಿಪಬ್ಲಿಕನ್ ಪಕ್ಶದೊಂದಿಗೆ ಹೆಸರಿಸಿಕೊಂಡವರು ಡೆಮಾಕ್ರಟಿಕ್/ ಲಿಬರ‍್ಟೇರಿಯನ್/ಗ್ರೀನ್/ ಇತರೆ ಪಕ್ಶದ ಮೊದಲ ಹಂತದ ಚುನಾವಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ.
  2. ಇನ್ನೊಂದು ಬಗೆಯಲ್ಲಿ, ಓಟಿನ ಅರ‍್ಹತೆ ಇರುವ ಎಲ್ಲರೂ ಬಂದು ಓಟನ್ನು ಹಾಕಬಹುದು, ಆ ಪಕ್ಶದೊಂದಿಗೆ ಹೆಸರಿಸಿಕೊಳ್ಳಲೇ ಬೇಕೆಂದಿಲ್ಲ. ಆದರೆ ಡೆಮಾಕ್ರಟಿಕ್ ಪಕ್ಶದಲ್ಲಿ ಬಂದು ಓಟನ್ನು ಹಾಕಿದ ಮೇಲೆ ರಿಪಬ್ಲಿಕನ್/ ಲಿಬರ‍್ಟೇರಿಯನ್/ಗ್ರೀನ್/ ಇತರೆ ಪಕ್ಶದಲ್ಲಿನ ಹುರಿಯಾಳಿನ ಆಯ್ಕೆಗೆ ಓಟನ್ನು ಹಾಕುವ ಹಾಗಿಲ್ಲ.
  3. ಮತ್ತೊಂದು ಬಗೆಯಲ್ಲಿ, ಓಟಿನ ಅರ‍್ಹತೆ ಇದ್ದವರು ಎಲ್ಲಾ ಪಕ್ಶಗಳ ಹುರಿಯಾಳುವಿನ ಆಯ್ಕೆಗೆ ಓಟನ್ನು ಹಾಕಬಹುದು.

ಇವುಗಳಲ್ಲಿ ಯಾವ ಬಗೆಯ ಚುನಾವಣೆಯನ್ನು ನಡೆಸಬೇಕೆಂಬ ಆಯ್ಕೆ ಆಯಾ ನಾಡಿನ ಪ್ರಾದೇಶಿಕ ಪಕ್ಶಗಳಿಗೆ ಬಿಟ್ಟಿದ್ದು.

ಅದ್ಯಕ್ಶ ಚುನಾವಣೆ ನಾಲ್ಕು ವರುಶಗಳಿಗೊಮ್ಮೆ ನವೆಂಬರ್ ತಿಂಗಳ ಮೊದಲ ಮಂಗಳವಾರ ನಡೆಯುತ್ತದೆ. ಅಮೇರಿಕಾದ ಐಯೋವ ನಾಡಿನಲ್ಲಿ ಮೊದಲ ಆಯ್ಕೆಕೂಟವು ಪೆಬ್ರವರಿ ಮೊದಲ ವಾರ ನಡೆಯುತ್ತದೆ, ಹಾಗು ನ್ಯೂ ಹ್ಯಾಂಪ್‍ಶೈರ್ ನಲ್ಲಿ ಮೊದಲ ಹಂತದ ಚುನಾವಣೆಯು ಪ್ರೆಬ್ರವರಿ ತಿಂಗಳಲ್ಲಿ ನಡೆಯುತ್ತದೆ. ಅದ್ಯಕ್ಶ ಚುನಾವಣೆಯ ಬಿಸಿಗೆ ಇವು ಮೊದಲ ಹೆಜ್ಜೆಗಳಾದ್ದರಿಂದ ಈ ಎರಡು ನಾಡಿನ ಆಯ್ಕೆಕೂಟ ಮತ್ತು ಮೊದಲ ಹಂತದ ಚುನಾವಣೆ ಹೆಚ್ಚುಗಾರಿಕೆಯನ್ನು ಪಡೆದುಕೊಂಡಿವೆ.

ಒಪ್ಪಾಳುಗಳು (Delegates):

ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಶಗಳು ಒಕ್ಕೂಟದಡಿಯಲ್ಲಿರುವ ಒಂದೊಂದು ನಾಡಿಗೂ ಇಶ್ಟಿಶ್ಟು ಒಪ್ಪಾಳುಗಳು ಎಂದು ಗುರುತಿಸಿದೆ. ಎತ್ತುಗೆಗೆ, ನ್ಯೂಯಾರ‍್ಕ್ ನಾಡಿನಲ್ಲಿ 15 ಡೆಮಾಕ್ರಟಿಕ್/ರಿಪಬ್ಲಿಕನ್ ಒಪ್ಪಾಳುಗಳು, ಕ್ಯಾಲಿಪೋರ‍್ನಿಯಾದಲ್ಲಿ 55 ಒಪ್ಪಾಳುಗಳು, ಹೀಗೆ ಎಲ್ಲಾ ನಾಡಿನಲ್ಲಿ ಆಯಾ ಪಕ್ಶದ ಒಪ್ಪಾಳುಗಳ ಎಣಿಕೆ ಬೇರೆ ಬೇರೆಯಾಗಿರುತ್ತದೆ. ಈ ಒಪ್ಪಾಳುಗಳ ಕೆಲಸವೇನು ಎಂಬುದನ್ನು ಮುಂದೆ ತಿಳಿಸುವೆ. ಒಂದು ನಾಡಿನಲ್ಲಿ ಮೊದಲ ಹಂತದ ಚುನಾವಣೆ ಇಲ್ಲವೇ ಆಯ್ಕೆಕೂಟ ಮುಗಿದ ಮೇಲೆ, ಆ ಪಕ್ಶದಲ್ಲಿ ಕಣದಲ್ಲಿರುವ ಮಂದಿಯಲ್ಲಿ ಯಾರ ಮೇಲೆ ನಾಡಿನ ಮಂದಿಯ ಒಲವಿದೆ ಎಂದು ತಿಳಿಯುತ್ತದೆ. ಈ ಮಂದಿಯಲ್ಲಿ ಯಾರು ಹೆಚ್ಚು ಓಟನ್ನು ಗಳಿಸುತ್ತಾರೋ ಅವರು ಆ ನಾಡಿನಲ್ಲಿ ಗೆದ್ದವರು ಎಂದು ಹೇಳಲಾಗುತ್ತದೆ. ಹಾಗೆ ಗೆದ್ದವರಿಗೆ ಆ ನಾಡಿನ ಎಲ್ಲಾ ‘ಒಪ್ಪಾಳುಗಳು’ ಎಂದು ಗೊತ್ತು ಮಾಡಲಾಗುತ್ತದೆ. ಎತ್ತುಗೆಗೆ, ಒಂದು ಪಕ್ಶದಲ್ಲಿರುವ 3 ಮಂದಿ ಹುರಿಯಾಳುಗಳಲ್ಲಿ ಒಬ್ಬರು ನ್ಯೂಯಾರ‍್ಕ್ ನಾಡಿನಲ್ಲಿ ಗೆದ್ದರೆ ಅವರಿಗೆ ಆ ನಾಡಿನ 15 ಪ್ರತಿನಿದಿಗಳನ್ನು ಗೊತ್ತು ಮಾಡಲಾಗುತ್ತದೆ. ಅದೇ ಹುರಿಯಾಳು ಕ್ಯಾಲಿಪೋರ‍್ನಿಯಾದಲ್ಲಿ ಗೆದ್ದರೆ ಅಲ್ಲಿನ 55 ಒಪ್ಪಾಳುಗಳೂ ಅವರಿಗೆ. ಹೀಗೆ ಒಟ್ಟು ಅವರ ಹೆಸರಲ್ಲಿ 70 ಒಪ್ಪಾಳುಗಳು ಇರುತ್ತಾರೆ. ಒಂದು ವೇಳೆ ಪ್ಲೋರಿಡಾದಲ್ಲಿ ಅವರು ಸೋತಿದ್ದರೆ ಆ ನಾಡಿನಿಂದ ಅವರಿಗೆ ಸಿಗುವ ಒಪ್ಪಾಳುಗಳ ಎಣಿಕೆ ಸೊನ್ನೆ!

ಒಪ್ಪಾಳುಗಳನ್ನು ಗೊತ್ತುಮಾಡುವ ಕೆಲಸ ಆಯಾ ನಾಡಿನ ಪ್ರಾದೇಶಿಕ ಪಕ್ಶಗಳಿಗೆ ಬಿಟ್ಟಿರುತ್ತಾರೆ. ಕೆಲವು ನಾಡುಗಳು ಗೆದ್ದವರಿಗೆ ಎಲ್ಲಾ ಒಪ್ಪಾಳುಗಳನ್ನು ಕೊಟ್ಟರೆ, ಇನ್ನು ಕೆಲವು ನಾಡಿನಲ್ಲಿ ಯಾರಿಗೆ ಎಶ್ಟು ಓಟು ಬಂದಿದೆಯೋ ಅದರ ಲೆಕ್ಕಹಾಕಿ ಒಪ್ಪಾಳುಗಳನ್ನು ಗೊತ್ತುಮಾಡುತ್ತಾರೆ. ಎತ್ತುಗೆಗೆ, ಪೈಪೋಟಿಯಲ್ಲಿರುವ ಹುರಿಯಾಳುಗಳಲ್ಲಿ ಒಬ್ಬರು 25% ಓಟನ್ನು ಪಡೆದಿದ್ದರೆ ಅವರಿಗೆ ಆ ನಾಡಿನ 25% ಒಪ್ಪಾಳುಗಳು, 50% ಓಟಿಗೆ 50% ಒಪ್ಪಾಳುಗಳು… ಹೀಗೆ. ಇನ್ನು ಕೆಲವು ನಾಡುಗಳು ಗೆದ್ದವರಿಗೆ ಎರಡು ಹೆಚ್ಚುವರಿ ಒಪ್ಪಾಳುಗಳನ್ನು ಗೊತ್ತುಮಾಡುವ ಪರಿಪಾಟ ಇಟ್ಟುಕೊಂಡಿವೆ. ತಮ್ಮ ನಾಡಿನ ಒಪ್ಪಾಳುಗಳನ್ನು ಹೇಗೆ ಗೊತ್ತುಮಾಡಬೇಕೆಂಬ ತೀರ‍್ಮಾನ ಆ ನಾಡಿನ ಪ್ರಾದೇಶಿಕ ಪಕ್ಶದ್ದಾಗಿರುತ್ತದೆ.

ನ್ಯಾಶನಲ್ ಸಮ್ಮೇಳನ (National Convention):

ಒಂದು ಪಕ್ಶದಿಂದ ಕಣದಲ್ಲಿರುವ ಮಂದಿಯಲ್ಲಿ ಎಲ್ಲಾ ನಾಡುಗಳನ್ನು ಸೇರಿಸಿ ಯಾರು ಹೆಚ್ಚು ಒಪ್ಪಾಳುಗಳನ್ನು ಪಡೆಯುತ್ತಾರೋ ಅವರು ಗೆದ್ದು ಆ ಪಕ್ಶದಿಂದ ಅದ್ಯಕ್ಶ ಚುನಾವಣೆಗೆ ಆಯ್ಕೆಯಾಗುತ್ತಾರೆ. ಆದರೆ ಈ ಆಯ್ಕೆಗೆ ಇನ್ನೂ ಒಂದು ಹಂತವಿದೆ ಅದೇ ‘ನ್ಯಾಶನಲ್ ಸಮ್ಮೇಳನ’ (National Convention). ಮೊದಲ ಹಂತದ ಚುನಾವಣೆ ಹಾಗು ಆಯ್ಕೆಕೂಟಗಳು ಎಲ್ಲಾ ನಾಡಿನಲ್ಲಿ ಮುಗಿದಮೇಲೆ ಪಕ್ಶಗಳು ನ್ಯಾಶನಲ್ ಸಮ್ಮೇಳನವನ್ನು ಏರ‍್ಪಡಿಸುತ್ತವೆ. ಈ ಸಮ್ಮೇಳನಕ್ಕೆ ಆಯಾ ನಾಡಿನಿಂದ ಪ್ರಾದೇಶಿಕ ಪಕ್ಶಗಳು ಕಳಿಸಲ್ಪಟ್ಟ ಒಪ್ಪಾಳುಗಳು ಬರುತ್ತಾರೆ. ಅಲ್ಲಿ, ಎಲ್ಲಾ ಒಪ್ಪಾಳುಗಳು, ತಮ್ಮ ನಾಡಿನ ಮಂದಿ ಯಾರನ್ನು ಆರಿಸಿರುತ್ತಾರೋ ಅವರಿಗೆ ಓಟನ್ನು ಹಾಕುತ್ತಾರೆ. ಎತ್ತುಗೆಗೆ, ನ್ಯೂಯಾರ‍್ಕ್ ನಾಡಿನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಶದ ಮೊದಲ ಹಂತದ ಚುನಾವಣೆಯಲ್ಲಿ, ಪಕ್ಶದ 3 ಹುರಿಯಾಳುಗಳಲ್ಲಿ ಹಿಲರಿ ಕ್ಲಿಂಟನ್ ಅವರು ಗೆದ್ದಿದ್ದರೆ, ನ್ಯೂಯಾರ‍್ಕ್ ನಾಡಿನ 15 ಒಪ್ಪಾಳುಗಳು ‘ನ್ಯಾಶನಲ್ ಸಮ್ಮೇಳನದ’ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‍ಗೇ ಓಟನ್ನು ಹಾಕಬೇಕು. ಒಂದು ವೇಳೆ, ನ್ಯೂಯಾರ‍್ಕ್ ನ ಒಪ್ಪಾಳುಗಳು ನಾಡಿನ ಮಂದಿಯ ಒಲವನ್ನು ಮೂಲೆಗೊತ್ತಿ, ಬೆರೊಬ್ಬರಿಗೆ ಓಟನ್ನು ಹಾಕಿದರೂ ಹಾಕಬಹುದು! ಆದರೆ ಹೀಗೆ ಓಟನ್ನು ಬೇರೆಯವರಿಗೆ ಹಾಕಿದರೆ, ನಾಡಿನ ಪ್ರಾದೇಶಿಕ ಪಕ್ಶದ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಆಯಾ ನಾಡಿನ ಪ್ರಾದೇಶಿಕ ಪಕ್ಶಗಳು ಇಂತಹ ಮೋಸದ ಒಪ್ಪಾಳುಗಳಿಗೆ ದಂಡಿಸಲು ತಮ್ಮದೇ ಆದ ಕಾನೂನನ್ನು ರೂಪಿಸಿಕೊಂಡಿವೆ. ಇನ್ನು ಕೆಲವು ಪ್ರಾದೇಶಿಕ ಪಕ್ಶಗಳು ಯಾವುದೇ ಕಾನೂನನ್ನು ರೂಪಿಸಿಕೊಳ್ಳದೇ ಒಪ್ಪಾಳುಗಳನ್ನು ನಂಬುತ್ತವೆ. ಇಂತಹ ನಾಡಿನ ಒಪ್ಪಾಳುಗಳು ಓಟನ್ನು ಬೇರೆಯವರಿಗೆ ಹಾಕಿದರೆ ಏನು ಮಾಡಲಾಗುವುದಿಲ್ಲ!

ಒಂದೊಂದು ನಾಡಿನ ಒಪ್ಪಾಳುಗಳಲ್ಲದೇ ಪಕ್ಶಗಳು ತನ್ನದೇ ಆದ ಒಪ್ಪಾಳುಗಳನ್ನೂ ಹೊಂದಿವೆ. ಪಕ್ಶದ ಮಾಜಿ ಅದ್ಯಕ್ಶರುಗಳು, ಹಾಲಿ ಅದ್ಯಕ್ಶರು, ಪಕ್ಶದಿಂದ ಗೌರ‍್ನರ್ ನಂತಹ ಮೇಲಿನ ಹುದ್ದೆಯಲ್ಲಿ ಇರುವಂತವರು, ಪಕ್ಶದ ಸೆನೆಟರ್ ಹಾಗು ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಹೀಗೆ ಒಪ್ಪಾಳುಗಳ ದೊಡ್ದ ದಂಡು ಪಕ್ಶದ ನ್ಯಾಶನಲ್ ಸಮ್ಮೇಳನದಲ್ಲಿ ಸೇರಿರುತ್ತದೆ. ಇವರಲ್ಲೆರೂ ಸೇರಿ ಅದ್ಯಕ್ಶರ ಚುನಾವಣೆಗೆ ನಿಲ್ಲಬಯಸುವ ಮಂದಿಗೆ ಓಟನ್ನು ಹಾಕಿ, ತಮ್ಮ ಪಕ್ಶದಿಂದ ಅದ್ಯಕ್ಶ ಚುನಾವಣೆಗೆ ಯಾರು ನಿಲ್ಲಬೇಕು ಎಂದು ಆರಿಸುತ್ತಾರೆ. ಇದರಲ್ಲಿ ಹೆಚ್ಚು ಓಟನ್ನು ಪಡೆದವರು ಆ ಪಕ್ಶದಿಂದ ಪೈಪೋಟಿಗೆ ಇಳಿಯುತ್ತಾರೆ.
ಮೇಲೆ ಹೇಳಿದ ಎಲ್ಲಾ ಹಂತಗಳನ್ನು ಡೆಮಾಕ್ರಟಿಕ್, ರಿಪಬ್ಲಿಕನ್, ಲಿಬರ‍್ಟೇರಿಯನ್, ಗ್ರೀನ್, ಕಾನ್ಸ್ಟಿಟ್ಯೂಶನ್ ಹಾಗು ಇತರೆ ಪಕ್ಶಗಳು ಬೇರೆ ಬೇರೆಯಾಗಿ ನಡೆಸಿ ತಮ್ಮ ಪಕ್ಶದಿಂದ ಒಬ್ಬ ಹುರಿಯಾಳನ್ನು ಕಣಕ್ಕೆ ಇಳಿಸುತ್ತಾರೆ. ತನ್ನ ಪಕ್ಶದಿಂದ ಯಾರು ಪೈಪೋಟಿಗೆ ನಿಲ್ಲಬೇಕು ಎಂಬುದನ್ನು ಮಂದಿಯಿಂದಲೇ ತಿಳಿಯುವ ಸಲುವಾಗಿ ಈ ಆಯ್ಕೆಯ ಬಗೆಯನ್ನು ಪಕ್ಶಗಳು ನೆಚ್ಚಿಕೊಂಡಿವೆ. ಇನ್ನುಳಿದ ಪಕ್ಶಗಳ ಹುರಿಯಾಳುಗಳ ಆಯ್ಕೆಯಲ್ಲಿ ಅವರದೇ ಆದ ಸಬೆ, ಸಮ್ಮೇಳನ ಹಾಗು ಚುನಾವಣೆಗಳು ನಡೆಯುತ್ತವೆ. ಆದರೆ ಅವು ಈ ಎರಡು ಪಕ್ಶಗಳ ಆಯ್ಕೆಯ ಕಸರತ್ತಿನಶ್ಟು ಮಂದಿ ಮೆಚ್ಚುಗೆಯನ್ನು ಪಡೆದಿಲ್ಲ.

ದೊಡ್ಡ ಚುನಾವಣೆ (Election):

ರಾಜಕೀಯ ಪಕ್ಶಗಳು ಮೇಲೆ ಹೇಳಿದ ಆಯ್ಕೆಯ ಹಂತಗಳ ಮೂಲಕ ತಮ್ಮ ಪಕ್ಶದ ಹುರಿಯಾಳನ್ನು ಆರಿಸಿ ಕಣಕ್ಕೆ ಇಳಿಸುವರು. ಪ್ರಚಾರ, ಸಮ್ಮೇಳನ ಹಾಗು ಮಂದಿಯ ಮನವೊಲಿಸುವ ಪ್ರಯತ್ನಗಳೆಲ್ಲಾ ಎಂದಿನಂತೆ ಸಾಗುವುವು. ಡೆಮಾಕ್ರಟಿಕ್ ಹಾಗು ರಿಪಬ್ಲಿಕನ್ ಪಕ್ಶದ ಹುರಿಯಾಳುಗಳು ಸೇರಿದಂತೆ ಪಕ್ಶೇತರ, ಲಿಬರ‍್ಟೇರಿಯನ್, ಗ್ರೀನ್, ಕಾನ್ಸ್ಟಿಟ್ಯೂಶನ್ ಹಾಗು ಇತರೆ ಪಕ್ಶಗಳ ಹುರಿಯಾಳುಗಳೂ ಪೈಪೋಟಿಗೆ ನಿಲ್ಲುವರು. ಪಕ್ಶೇತರ ಹುರಿಯಾಳು ತನಗೆ ಒಳ್ಳೆಯ ಬೆಂಬಲವಿದೆ ಎಂದು ತೋರಿಸಲು ಹಲವು ಬೆಂಬಲಿಗರ ಕೈಗುರುತಿರುವ ಮನವಿ(petition)ಯನ್ನು ಚುನಾವಣೆಯ ಕಮೀಶನ್ ಗೆ ತೋರಿಸಬೇಕಾಗುತ್ತದೆ.
ನವೆಂಬರ್ ತಿಂಗಳ ಮೊದಲನೇ ಮಂಗಳವಾರ ಓಟಿನ ದಿನ. ಅಂದು ಅಮೇರಿಕಾದ ಮಂದಿ ತಮಗೆ ಬೇಕಾದ ಹುರಿಯಾಳಿಗೆ ಓಟನ್ನು ಹಾಕುವರು. ಓಟು ಮುಗಿದ ಕೆಲವು ದಿನಗಳಲ್ಲಿ ಎಣಿಕೆ ಆಗುತ್ತದೆ. ಯಾವ ನಾಡಿನಿಂದ ಯಾರಿಗೆ ಹೆಚ್ಚು ಓಟುಗಳು ಬಂದಿದೆ ಎಂದು ತಿಳಿಯುತ್ತದೆ. ಅಮೇರಿಕಾದ ಒಂದೊಂದು ನಾಡನ್ನು ಹಲವು ವಲಯಗಳಾಗಿ (Congressional district) ಪಾಲುಮಾಡಲಾಗಿದೆ. ಒಂದೊಂದು ವಲಯದಿಂದ ಒಬ್ಬ ಹೌಸ್ ಆಪ್ ರೆಪ್ರೆಸೆಂಟೇಟಿವ್ ಅನ್ನು ಅಮೇರಿಕಾದ ಕಾಂಗ್ರೆಸ್ ಗೆ ಆಯ್ಕೆ ಮಾಡಿ ಕಳಿಸಲಾಗುತ್ತದೆ, ಹೀಗೆ ಒಟ್ಟು 435 ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಇದ್ದಾರೆ ಎಂದು ಈ ಮೊದಲು ತಿಳಿದಿದ್ದೆವು. ಹಾಗೆಯೇ, ಅದ್ಯಕ್ಶ ಚುನಾವಣೆಗಾಗಿ ಎಂದೇ ಈ ಒಂದೊಂದು ವಲಯದಿಂದ ಒಬ್ಬ ‘ಆಯ್ಕೆದಾರ‘(Elector) ಎಂಬುವವರ‍್ಯ್ ಇರುತ್ತಾರೆ (ಪಕ್ಶಗಳ ಆಯ್ಕೆಯಲ್ಲಿ ಒಪ್ಪಾಳುಗಳು ಇದ್ದ ಹಾಗೆ) . ಜೊತೆಗೆ ಒಕ್ಕೂಟದ ಎಲ್ಲಾ ನಾಡುಗಳು ತಲಾ ಎರಡು ಹೆಚ್ಚುವರಿ ಆಯ್ಕೆದಾರರನ್ನು ಹೊಂದಿರುತ್ತವೆ. ಎತ್ತುಗೆಗೆ, ಟೆಕ್ಸಾಸ್ ನಲ್ಲಿ ಒಟ್ಟು 36 ವಲಯಗಳಿವೆ, ಹಾಗಾಗಿ ಅಲ್ಲಿ 36 ಆಯ್ಕೆದಾರರು ಜೊತೆಗೆ 2 ಹೆಚ್ಚುವರಿ ಆಯ್ಕೆದಾರರು ಸೇರಿ ಒಟ್ಟು 38 ಆಯ್ಕೆದಾರರು ಆಗುತ್ತಾರೆ. ಹೀಗೆ ಒಕ್ಕೂಟದಲ್ಲಿ ಒಟ್ಟು 538 ಆಯ್ಕೆದಾರರು ಆಗುತ್ತಾರೆ (435 + 100 + ರಾಜದಾನಿಯಾದ ವಾಶಿಂಗ್ಟನ್ ಡಿ.ಸಿ.ಯಲ್ಲಿ ಯಾವುದೇ ವಲಯವಿಲ್ಲ ಆದ್ದರಿಂದ ಅಲ್ಲಿಗೆ 3 ಆಯ್ಕೆದಾರರು ಎಂದು ಒಕ್ಕೂಟದಾಳ್ವಿಕೆ ನಿಗದಿಪಡಿಸಿದೆ.)

ಅದ್ಯಕ್ಶ ಚುನಾವಣೆಯಲ್ಲಿ ಒಂದು ನಾಡಿನಲ್ಲಿ ಯಾವ ಹುರಿಯಾಳು ಹೆಚ್ಚಿನ ಓಟನ್ನು ಪಡೆದು ಗೆಲ್ಲುತ್ತಾನೋ ಆ ಹುರಿಯಾಳಿಗೆ ಆ ನಾಡಿನ ಎಲ್ಲಾ ‘ಆಯ್ಕೆದಾರರನ್ನು ಗೊತ್ತುಮಾಡಲಾಗುತ್ತದೆ. ಎತ್ತುಗೆಗೆ, ಪ್ಲೋರಿಡಾದಲ್ಲಿ 27 ವಲಯಗಳಿದ್ದು, 2 ಹೆಚ್ಚುವರಿ ಆಯ್ಕೆದಾರರು ಸೇರಿ ಒಟ್ಟು 29 ಮಂದಿ ಆಯ್ಕೆದಾರರು ಇದ್ದಾರೆ. ಆ ನಾಡಿನಲ್ಲಿ ಯಾವ ಹುರಿಯಾಳಿಗೆ ಹೆಚ್ಚು ಓಟು ಸಿಗುವುದೋ ಅವರಿಗೆ ಎಲ್ಲಾ 29 ಆಯ್ಕೆದಾರರನ್ನು ಗೊತ್ತು ಮಾಡಲಾಗುತ್ತದೆ.  ಆದರೆ ಮೈನ್(Maine) ಮತ್ತು ನೆಬ್ರಾಸ್ಕ(Nebraska) ನಾಡುಗಳು ಮಾತ್ರ, ಆಯಾ ವಲಯಗಳಲ್ಲಿ ಯಾರು ಹೆಚ್ಚು ಓಟನ್ನು ಪಡೆದಿರುತ್ತಾರೋ ಅವರಿಗೆ ಆ ವಲಯದ ‘ಆಯ್ಕೆದಾರರನ್ನು’ ಗೊತ್ತುಮಾಡುತ್ತಾರೆ. ಹಾಗು, ಒಟ್ಟಾಗಿ ಅವರ ನಾಡಿನಲ್ಲಿ ಯಾರು ಹೆಚ್ಚು ಓಟನ್ನು ಪಡೆಯುವರೋ ಅವರಿಗೆ 2 ಹೆಚ್ಚುವರಿ ಆಯ್ಕೆದಾರರನ್ನು ಗೊತ್ತುಮಾಡುತ್ತಾರೆ. ಆಯ್ಕೆದಾರರನ್ನು ಹುರಿಯಾಳುಗಳಿಗೆ ಹೇಗೆ ಗೊತ್ತುಮಾಡಬೇಕು ಎಂಬ ತೀರ‍್ಮಾನ ಆಯಾ ನಾಡುಗಳದ್ದಾಗಿರುತ್ತದೆ.

ಡಿಸೆಂಬರ್ ತಿಂಗಳ ಎರಡು ಇಲ್ಲವೇ ಮೂರನೇ ಸೋಮವಾರದಂದು ಎಲ್ಲಾ ಆಯ್ಕೆದಾರರು ತಮ್ಮ ತಮ್ಮ ನಾಡಿನ ರಾಜದಾನಿಯಲ್ಲಿ ಸೇರುತ್ತಾರೆ. ಅಂದು ತಮ್ಮ ಓಟನ್ನು ಯಾರಿಗೆ ಹಾಕಬೇಕೆಂದು ಮಂದಿಯು ನಿಗದಿಪಡಿಸಿರುತ್ತಾರೋ ಆ ಹುರಿಯಾಳಿಗೆ ಓಟನ್ನು ಹಾಕುತ್ತಾರೆ. ಇದರಲ್ಲೂ ಆಯ್ಕೆದಾರರು ತಮ್ಮ ನಾಡಿನ ಮಂದಿಯ ತೀರ‍್ಮಾನವನ್ನು ಬದಿಗೊತ್ತಿ ತಮಗೆ ಬೇಕಾದವರಿಗೆ ಓಟನ್ನು ಹಾಕಬಹುದು. ಅಂತಹ ಓಟು ನಂಬಿಕೆಯನ್ನು ಒಡೆದ ಓಟಾಗುತ್ತದೆ. ಒಕ್ಕೂಟದ 24 ನಾಡುಗಳು ಇಂತಹ ಮೋಸದ ಆಯ್ಕೆದಾರರ ಎದುರು ಕ್ರಮ ಕೈಗೊಳ್ಳುವ ಕಾನೂನನ್ನು ರೂಪಿಸಿಕೊಂಡಿವೆ.

President 3ಚಿತ್ರ: ಅದ್ಯಕ್ಶ ಚುನಾವಣೆಯ ಎಲ್ಲಾ ಹಂತಗಳು

ಆಯ್ಕೆದಾರರ ಬೀಡು (Electoral College):

ಓಟಿನ ದಿನವಾಯಿತು, ಓಟಿನ ಎಣಿಕೆಯೂ ಆಯಿತು, ಯಾರಿಗೆ ಹೆಚ್ಚು ಓಟು ಬಂದಿದೆ ಎಂಬುದರ ಮೇಲೆ ಆಯ್ಕೆದಾರರನ್ನು ಗೊತ್ತುಮಾಡಿಯೂ ಆಯಿತು, ಆಯ್ಕೆದಾರರು ಓಟು ಹಾಕಿಯೂ ಆಯಿತು. ಇನ್ನು ಅದ್ಯಕ್ಶರನ್ನು ಆಯ್ಕೆಮಾಡುವ ಕೆಲಸ. ಇದು ನಡೆಯುವುದು ಆಯ್ಕೆದಾರರ ಬೀಡಿನಲ್ಲಿ. ಜನವರಿ ತಿಂಗಳ ಮೊದಲನೇ ವಾರದಲ್ಲಿ, ಸೆನೆಟರ್, ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್, ಎದುರಲ್ಲಿ ಹಾಲಿ ಉಪಾದ್ಯಕ್ಶರು ‘ಆಯ್ಕೆದಾರರ’ ಮತಗಳನ್ನು ತೆಗೆದು ಎಣಿಸುತ್ತಾರೆ. ಗೆಲ್ಲಲು 50% ಗಿಂತ ಹೆಚ್ಚಿನ ಆಯ್ಕೆದಾರರ ಓಟನ್ನು ಗಳಿಸಬೇಕು(ಈಗಿನ ಎಣಿಕೆಯಲ್ಲಿ 270 ಓಟುಗಳು ಬೇಕು).  ಒಂದು ವೇಳೆ ಯಾರಿಗೂ 50% ಗಿಂತ ಹೆಚ್ಚಿನ ಓಟು ಸಿಗದಿದ್ದರೆ. ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ಓಟನ್ನು ಹಾಕುತ್ತಾರೆ. ಆದರೆ ಎಲ್ಲಾ 435 ರೆಪ್ರೆಸೆಂಟೇವ್ ಓಟನ್ನು ಹಾಕುವ ಹಾಗಿಲ್ಲ, ಒಂದೊಂದು ನಾಡಿನಿಂದ ಒಂದು ಓಟು ಎಂದು ಲೆಕ್ಕ. ಅಲ್ಲಿನ ರೆಪ್ರೆಸೆಂಟೇಟಿವ್ ಗಳು ತಮ್ಮ ನಾಡಿನ ಪರವಾಗಿ ಯಾರಿಗೆ ಓಟನ್ನು ಹಾಕಬೇಕು ಎಂದು ತೀರ‍್ಮಾನಿಸಿ ಒಂದು ಓಟನ್ನು ಹಾಕಬೇಕು. ಇಂತಹ ಪರಿಸ್ತಿತಿ 1800 ಮತ್ತು 1824 ರಲ್ಲಿ ನಡೆದಿತ್ತು. ಆಗ ಹೌಸ್ ಆಪ್ ರೆಪ್ರೆಸೆಂಟೇಟಿವ್ಸ್ ತಮ್ಮ ಓಟಿನ ಮೂಲಕ ಅದ್ಯಕ್ಶರನ್ನು ಆರಿಸಿದ್ದರು.

ಅದ್ಯಕ್ಶರ ಚುನಾವಣೆಯ ಜೊತೆಗೆ ಉಪಾದ್ಯಕ್ಶರ ಚುನಾವಣೆಯೂ ನಡೆಯುತ್ತದೆ. ಉಪಾದ್ಯಕ್ಶರ ಚುನಾವಣೆಗೂ ಇದೇ ಹಂತಗಳನ್ನು ಪಾಲಿಸಲಾಗುತ್ತದೆ. ಆದರೆ ಕೊನೆಯಲ್ಲಿ ಒಂದು ಬದಲಾವಣೆ ಇದೆ. ಒಂದು ವೇಳೆ ಯಾರಿಗೂ 50% ಗಿಂತ ಹೆಚ್ಚು ಓಟು ಬರದಿದ್ದರೆ ಸೆನೆಟರ್ ಗಳು ಓಟನ್ನು ಹಾಕಿ ಉಪಾದ್ಯಕ್ಶರನ್ನು ಆರಿಸುತ್ತಾರೆ. ಇಲ್ಲಿಯೂ ಒಂದು ನಾಡಿಗೆ ಒಂದು ಓಟು, ಆಯಾ ನಾಡಿನ ಸೆನೆಟರ್ ಗಳು ತೀರ‍್ಮಾನಿಸಿ ಒಂದು ಓಟನ್ನು ಹಾಕಬೇಕು. ಇಂತಹ ಪರಿಸ್ತಿತಿ 1836 ರಲ್ಲಿ ಒದಗಿಬಂದಿತ್ತು.

President1

ಒಟ್ಟಿನಲ್ಲಿ, ಅಮೇರಿಕಾ ಅದ್ಯಕ್ಶರ ಆಯ್ಕೆಯಲ್ಲಿ ಆಯಾ ನಾಡಿನ ಮಂದಿಯ ಓಟಿಗೆ ಹೆಚ್ಚುಗಾರಿಕೆ ಇದೆ. ಪಕ್ಶದ ಹುರಿಯಾಳಿನ ಆಯ್ಕೆಯಲ್ಲಿ, ಅದ್ಯಕ್ಶರ ಚುನಾವಣೆಯಲ್ಲಿ ಹಲವು ಹಂತಗಳಿವೆ ಹಾಗು ಹಲವು ಬಗೆಗಳಿವೆ. ಇವುಗಳಲ್ಲಿ ಯಾವು ಆಯ್ಕೆಯ ಬಗೆಯನ್ನು ಪಾಲಿಸಬೇಕು ಎಂಬ ತೀರ‍್ಮಾನಿಸುವ ಹಕ್ಕು ಒಕ್ಕೂಟದಡಿಯಲ್ಲಿ ಬರುವ ನಾಡುಗಳಿಗಿದೆ. ಸಂವಿದಾನದ ಆರ‍್ಟಿಕಲ್ 2 ಅದ್ಯಕ್ಶರ ಆಯ್ಕೆಯ ಹಂತಗಳನ್ನು ತಿಳಿಸುತ್ತದೆ. ಅದ್ಯಕ್ಶರ ಆಯ್ಕೆಯಲ್ಲಿ ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳು ಆಗಿವೆ, ಅದಕ್ಕೆ ಬೇಕಾದ ತಿದ್ದುಪಡಿಗಳನ್ನು ಸಂವಿದಾನದ ಆರ‍್ಟಿಕಲ್ 2 ಕ್ಕೆ ಮಾಡಲಾಗಿದೆ. ಹಾಗೆಯೇ, ಇನ್ನೂ ಕೆಲವು ಬದಲಾವಣೆಗಳು ಆಗಬೇಕು ಎಂಬ ಬೇಡಿಕೆಗಳನ್ನು ಕೆಲವರು ಮುಂದಿಟ್ಟಿದ್ದಾರೆ, ಈಗಿರುವ ಹಂತಗಳಲ್ಲಿ ಮುಂದೇನು ಬದಲಾವಣೆ ಆಗುವುದೋ ಕಾದುನೋಡಬೇಕು. ಮಂದಿಯಾಳ್ವಿಕೆಯಲ್ಲಿ ಕಾಲಕ್ಕೆ ತಕ್ಕಂತೆ ಬೇಕಾದ ಬದಲಾವಣೆಗಳು ಆಗುವುದು ಇದ್ದೇ ಇರುತ್ತದೆ.

(ಮಾಹಿತಿ ಸೆಲೆ: wikipedia)
(ಚಿತ್ರ ಸೆಲೆ: africa-talks.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Thank you for informative article ..

ಅನಿಸಿಕೆ ಬರೆಯಿರಿ:

Enable Notifications OK No thanks