ಮಾರುತಿಯ ಮಹಾರಾಜಾ ವಿಟಾರಾ ಬ್ರೆಜಾ

ಜಯತೀರ‍್ತ ನಾಡಗವ್ಡ.

1

ಕಳೆದ ತಿಂಗಳು ನಡೆದ ಬಂಡಿಗಳ ತೋರ‍್ಪಿನಲ್ಲಿ ನಳನಳಿಸುತ್ತ ಕಂಡುಬಂದಿದ್ದ ಮಾರುತಿರವರ ವಿಟಾರಾ ಬ್ರೆಜಾ (Vitara Brezza) ಮೊನ್ನೆ 8ನೇ ತಾರೀಕು ಬೀದಿಗಿಳಿದಿದೆ. ಹೆಚ್ಚುತ್ತಿರುವ ಕಿರು ಆಟೋಟ ಬಳಕೆಯ ಬಂಡಿಗಳ (Compact SUV) ಪಯ್ಪೋಟಿಗೆ ಹೇಳ್ವಿಯಾಗಿ ಮಾರುತಿ ಸುಜುಕಿಯಿಂದ ವಿಟಾರಾ ಬ್ರೆಜಾ ಬಂದಿದೆ. ವರುಶದ ಕೊನೆಯಲ್ಲಿ ಬಲೆನೊ ಬಿಡುಗಡೆಗೊಳಿಸಿದ್ದ ಮಾರುತಿ ಸುಜುಕಿ ಇದೀಗ ವರುಶದ ಮೊದಲಲ್ಲಿ ವಿಟಾರಾ ಬ್ರೆಜಾ ಮೂಲಕ ಕಾಲಿಟ್ಟಿದೆ. ಬಂಡಿ ಕೊಳ್ಳುಗರು ಪೋರ‍್ಡ್ ಎಕೊಸ್ಪೋರ‍್ಟ್ , ಹ್ಯುಂಡಾಯ್ ಕ್ರೇಟಾ, ಮಹೀಂದ್ರಾ ಟಿಯುವಿ 3ಒಒ ಬಂಡಿಗಳತ್ತ ಹೆಚ್ಚಿನ ಒಲವು ತೋರಿ ಕಿರು ಆಟೋಟ ಬಳಕೆ ಬಂಡಿಗಳ ಮಾರುಕಟ್ಟೆಗೆ ಅಡಿಪಾಯ ಹಾಕಿಕೊಟ್ಟಿದ್ದರು. ಮಾರುತಿ ಕೂಡ ಬ್ರೆಜಾ ಮೂಲಕ ಈಗ ಮಾರುಕಟ್ಟೆಗೆ ದುಮುಕಿದೆ.

ವಿಟಾರಾ ಹೆಸರು ಮಾರುತಿ ಸುಜುಕಿಯವರಿಗಾಗಲಿ ಬಾರತಕ್ಕಾಗಲಿ ಹೊಸದಲ್ಲ. ಸುಜುಕಿ ಕೂಟ ಗ್ರ್ಯಾಂಡ್ ವಿಟಾರಾ (Grand Vitara) ಎಂಬ ಆಟೋಟ ಬಳಕೆಯ ಬಂಡಿಯನ್ನು ಈ ಹಿಂದೆ ಬಾರತದಲ್ಲಿ ಪರಿಚಯಿಸಿತ್ತು. ಕಿರು ಮತ್ತು ಅಗ್ಗದ ಕಾರುಗಳಿಗೆ ಸುಜುಕಿ ಕೂಟದವರು ಹೆಸರುವಾಸಿಯಾಗಿದ್ದ ಕಾರಣವೋ ಇಲ್ಲವೇ ಬಂಡಿ ಮಂದಿಗೆ ಹಿಡಿಸಲಿಲ್ಲವೋ ಗೊತ್ತಿಲ್ಲ ಒಟ್ಟಿನಲ್ಲಿ ಗ್ರ್ಯಾಂಡ್ ವಿಟಾರಾ ಬಾರತದಲ್ಲಿ ಮುಗ್ಗರಿಸಿತ್ತು. ಅಶ್ಟಾದರೂ ಮಾರಾಟದಿಂದ ಹಿಂತೆಗೆಯದೇ ಗ್ರ್ಯಾಂಡ್ ವಿಟಾರಾ ಇಂದಿಗೂ ಉಳಿಸಿಕೊಂಡದ್ದು ಅಚ್ಚರಿ. ಅಂದಹಾಗೆ ಇದರ ಕೊಳ್ಳುಗರ ಸಂಕ್ಯೆಯೂ ಎರಡಂಕೆ ದಾಟದು. ಆದರೆ ವಿಟಾರಾ ಬ್ರೆಜಾ ಇದಕ್ಕಿಂತ ಬೇರೆಯೇ ಆಗಿದೆ. ಬಂಡಿ ತೋರ‍್ಪಿನಲ್ಲಿ ಬಹಳಶ್ಟು ಮಂದಿಯನ್ನು ತನ್ನತ್ತ ಸೆಳೆದು ಹಿಟ್ ಆಗುವ ಎಲ್ಲ ಮುನ್ಸೂಚನೆ ನೀಡಿದೆ. ಬಂಡಿ ಹೇಗಿರಲಿದೆ ಎಂಬುದರ ಮಾಹಿತಿ ತಿಳಿಯುವ ಬನ್ನಿ.

2

ಈ ಬಂಡಿಗೂ ಸುಜುಕಿರವರ ನೆಚ್ಚಿನ ನಂಬಿಗಸ್ತ ಡಿಡಿಆಯ್‌ಎಸ್-200 ಹೆಸರಿನ 1.3 ಲೀಟರ್ ಅಳತೆಯ ಬಿಣಿಗೆಯೇ ಜೊತೆಗಾರ.  ಸ್ವಿಪ್ಟ್, ಸಿಯಾಜ್, ಎರ‍್ಟಿಗಾ, ಎಸ್-ಕ್ರಾಸ್ ಮುಂತಾದ ಬಂಡಿಗಳಲ್ಲೂ ಇದೇ ಡಿಸೇಲ್ ಬಿಣಿಗೆ ಇಲ್ಲಿಯೂ ತನ್ನ ಓಟ ಮುಂದುವರೆಸಿದಿದೆ.  ಸುಮಾರು 89 ಕುದುರೆಬಲ ಕಸುವಿನ ಮತ್ತು 200 ನ್ಯೂಟನ್ ತಿರುಗುಬಲದ ಈ ಬಿಣಿಗೆ ಸುಜುಕಿಗಶ್ಟೇ ಅಲ್ಲದೇ ಮಾರುತಿ ಸುಜುಕಿ ಕಾರೊಲವಿಗರು ಹಿಡಿಸಿದಂತೆ ತೋರುತ್ತದೆ. ಈ ನಡುವೆ ಒಂದೆರಡು ಹೊಸ ಡಿಸೇಲ್ ಬಿಣಿಗೆ ಪರಿಚಯಿಸಿ ಕಯ್ ಸುಟ್ಟುಕೊಂಡಿದ್ದ ಮಾರುತಿ ಸುಜುಕಿ ಬ್ರೆಜಾದಲ್ಲೂ ತನ್ನ ನೆಚ್ಚಿನ ಬಿಣಿಗೆಯನ್ನೇ ಉಳಿಸಿಕೊಂಡಿದೆ. ಇತ್ತಿಚೀಗೆ ಬಾರತ ಒಕ್ಕೂಟ ಸರಕಾರ ಕೆಡುಗಾಳಿಯ ಕಟ್ಟಳೆಗಳನ್ನು ಬಿಗಿಗೊಳಿಸುವುದಾಗಿ ಗೋಶಿಸಿತ್ತು ಮತ್ತು ದೆಹಲಿಯ ಸರಕಾರ 2ಲೀಟರ್‌ಗೂ ಮೇಲ್ಪಟ್ಟ ಡಿಸೇಲ್ ಬಿಣಿಗೆ ಹೊಂದಿರುವ ಬಂಡಿಗಳನ್ನು ಬಾರತದ ನೆಲೆವೀಡು ದೆಹಲಿಯಲ್ಲಿ ಓಡಾಡಿಸುವಂತಿಲ್ಲವೆಂದು ಕಟ್ಟಳೆ ಸಾರಿತ್ತು.  ಹೆಚ್ಚು ಕೆಡುಗಾಳಿ ಉಗುಳುವ ಡಿಸೇಲ್ ಬಿಣಿಗೆಯನ್ನು ಹಿಡಿತದಲ್ಲಿಡುವುದು ಕಶ್ಟವೆಂದು ಬಂಡಿ ತಯಾರಕರು ಚಿಂತೆಗೀಡಾಗಿದ್ದರು ಮತ್ತು ಪೆಟ್ರೋಲ್ ಬಿಣಿಗೆಯ ಬಂಡಿಗಳು ಹೆಚ್ಚಲಿವೆ ಎಂಬ ಸುದ್ದಿಯೂ ಇತ್ತು. ಇದರ ನಡುವೆಯೇ ಮಾರುತಿ ಸುಜುಕಿ ವಿಟಾರಾ ಬ್ರೆಜಾ ಬಂಡಿಯ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿಲ್ಲದಿರುವುದು ಅಚ್ಚರಿ ಮೂಡಿಸಿದೆ.

1

ಸಾಗಣಿ ಓಡಿಸುಗನಿಡಿತದ್ದು 5-ವೇಗದ ಹಲ್ಲುಗಾಲಿಯನ್ನು ಅಳವಡಿಸಿಕೊಂಡಿದೆ. ದಿನದಿಂದ ದಿನ ಹೆಸರುವಾಸಿಯಾಗುತ್ತಿರುವ ಅರೆ-ಓಡಿಸುಗನಿಡಿತದ(AMT) ಸಾಗಣಿ ಬ್ರೆಜಾದಲ್ಲೂ ಮುಂದಿನ ದಿನಗಳಲ್ಲಿ ಬಂದರೂ ಬರಬಹುದು.

ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದದ ಬಂಡಿಗಳಿಗೆ ಸರಕಾರ ನೀಡುವ ತೆರಿಗೆ ರಿಯಾಯಿತಿಯನ್ನು ಪಡೆಯುವ ಉದ್ದೇಶದಿಂದ ಬಂಡಿಯ ಉದ್ದ 3995 ಮಿಲಿಮೀಟರ್‌ಗಳಿರುವಂತೆ ನೋಡಿಕೊಳ್ಳಲಾಗಿದೆ. ಅಗಲ 1790 ಮಿಲಿಮೀಟರ್, ಉದ್ದ 1640 ಮಿಲಿಮೀಟರ್, ಗಾಲಿಗಳ ನಡುವಿನ ದೂರ 2.5 ಮೀಟರ್ ಮತ್ತು ನೆಲತೆರವು 198 ಮಿಲಿಮೀಟರ್‌ ಇವು ಇತರೆ ಆಯಗಳು. ಇಶ್ಟೆಲ್ಲ ಅಚ್ಚುಕಟ್ಟಾಗಿದ್ದರೂ ಒಳಗೆ ಒಮ್ಮೆ ಇಣುಕಿದರೆ ಬ್ರೆಜಾದ ಸರಕು ಚಾಚಿಕೆ ಅಶ್ಟೇನೂ ದೊಡ್ಡದಿಲ್ಲ ಅನ್ನುವ ಬೇಜಾರು. 328 ಲೀಟರ್ ಅಳತೆಯ ಸರಕು ಚಾಚಿಕೆ ಬಲೆನೊಗಿಂತ ಕಡಿಮೆಯಿದೆ.

2

ದಿಟ್ಟವಾದ ಮುನ್ಕಂಬಿ ತೆರೆ, ಸರಳವಾದ ಮುಂದೀಪಗಳು, ಚಪ್ಪಟೆಯಾದ ಬಿಣಿಗವಸು(Bonnet) ಬ್ರೆಜಾಗೆ ಆಟೋಟ ಬಳಕೆ ಬಂಡಿಗಳಲ್ಲಿ ಕಂಡುಬರುವ ಸೊಬಗನ್ನು ನೀಡಿವೆ. ಸಾಮಾನ್ಯ ಸರಕು ಗೂಡಲ್ಲದೇ ಕೋಲ್ಡ್ರಿಂಕ್ಸ್ , ನೀರು ಮುಂತಾದವುಗಳನ್ನು ತಂಪಾಗಿಟ್ಟುಕೊಂಡು ದೂರ ಸಾಗಲು ತಂಪಾದ ಸರಕುಗೂಡು (Cooled Glove box), ಬಾಗಿಲ ಬದಿಗೆ ನೀರಿನ ಬಾಟಲಿಯಿಡಲು ಸೇರುವೆಗಳು, ಕಾರಿನ ಹಿಂಬಾಗದಿ ಜಾಕೆಟ್, ಕೋಟು ಮತ್ತು ಮುಂಬಾಗದ ಕೂರುಮಣೆಯ ಹಿಂದೆ ಕಯ್ ಚೀಲ ಮುಂತಾದವುಗಳನ್ನು ನೇತು ಹಾಕಲು ಕೊಕ್ಕೆಗಳು ನಿಮಗೆ ನೆರವಿಗೆ ಬರಲಿವೆ. ಹಿಂಬದಿಯಲ್ಲಿ ಪಯಣಿಗರು ಇಲ್ಲದಾಗ ಕೂರುಮಣೆಯನ್ನು ಹಾಯಾಗಿ ಮಡಚಿಕೊಂಡು ನಿಮ್ಮ ಸಾಯ್ಕಲ್ ಇಲ್ಲವೇ ದೊಡ್ಡ ಗಾತ್ರದ ಸರಕಿನ ಚೀಲಗಳನ್ನು ಇಟ್ಟುಕೊಂಡು ಹೋಗುವ ಅನುಕೂಲವನ್ನೂ ಒದಗಿಸಿದ್ದಾರೆ

ಸ್ಮಾರ‍್ಟ್ ಪ್ಲೇ (Smart play)ಹೆಸರಿನ ತಿಳಿನಲಿ ಏರ‍್ಪಾಡು (Infotainment System)ನಿಮ್ಮ ದಾರಿಯ ನೆರವಿಗನಾಗಿರಲಿದೆ. ಬ್ರೆಜಾದ ತಿಳಿನಲಿ ಏರ‍್ಪಾಡನ್ನು ನಿಮ್ಮ ಆಪಲ್ ಚುಟಿಯೂಲಿಗಳಿಗೂ ಜೋಡಿಸಿಕೊಂಡು ಆಪಲ್‌ನ ಕಾರ್ ಪ್ಲೇ (Apple Carplay) ಬಳಕವಾಗಿ ಮಾರ‍್ಪಡಿಸಿಕೊಂಡು ಸಾಗಬಹುದು. ತಿಳಿನಲಿ ಏರ‍್ಪಾಟಿನ ಮೂಲಕ ನೀವು ಹಾಡು ಕೇಳಲು, ತಲುಪುದಾರಿ ಏರ‍್ಪಾಟು (Navigation System) ಮತ್ತು ಬಂಡಿ ನಿಲುಗಡೆ ನೆರವಾಗುವ ವಿಶೇಶತೆಗಳನ್ನು ನೀಡಿದ್ದಾರೆ.ನಾಲ್ಕು ಮಿಂಕಿಂಡಿ (Power Windows), ಇಶ್ಟಕ್ಕೆ ತಕ್ಕಂತೆ ಹೊರಳುವ ಮಿಂಕನ್ನಡಿಗಳು(Power Mirror), ಎತ್ತರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಲ್ಲ ಮಿಂತಿಗುರಿ, ಸುಯ್ ಅಂಕೆ ಏರ‍್ಪಾಟು (Cruise Control) ಹೀಗೆ ಇಂದಿನ ಹೆಚ್ಚಿನ ಬಂಡಿಗಳಲ್ಲಿ ಕಂಡುಬರುವ ಎಲ್ಲ ಏರ‍್ಪಾಟುಗಳು ಇದರಲ್ಲಿವೆ. ಬಂಡಿಯ ಕಾಪಿನ ವಿಶಯದಲ್ಲೂ ಯಾವುದೇ ರಾಜಿ ಮಾಡಿಕೊಂಡಿಲ್ಲ. ಸಿಲುಕದ ತಡೆತದ ಏರ‍್ಪಾಟು (Anti-Lock Braking System), ಗಾಳಿಚೀಲಗಳು(Air Bags) ಮತ್ತು ಕೂರುಪಟ್ಟಿಗಳನ್ನು ಜೋಡಿಸಿ ನಿಮ್ಮ ಕಾಪಿನ ಚಿಂತೆಯನ್ನು ದೂರಮಾಡಲಾಗಿದೆ.

ಕೆಂಪು, ಬಿಳಿ, ನೀಲಿ, ಕಂದು, ಬೆಳ್ಳಿ ಮತ್ತು ಬಂಗಾರದ ಹಳದಿಯ ಆರು ಬಗೆ ಮತ್ತು ಮೂರು ಇಬ್ಬಗೆಯ ಬಣ್ಣ ನೀಲಿ/ಬಿಳಿ, ಕೆಂಪು/ಬಿಳಿ, ಹಳದಿ/ಬಿಳಿ ಹೀಗೆ ಒಟ್ಟು 9 ವಿವಿದ ಆಯ್ಕೆಯಲ್ಲಿ ವಿಟಾರಾ ಬ್ರೆಜಾ ಮಾರಾಟವಾಗಲಿದೆ.

ಹೋಲಿಕೆಯ ವಿಶಯಕ್ಕೆ ಬಂದರೆ ಟಿಯುವಿ 3ಒಒ (TUV 3OO) ಮತ್ತು ಎಕೊ ಸ್ಪೋರ‍್ಟ್‌ಗಳಿಗೆ (Eco Sport) ವಿಟಾರಾ ಬ್ರೆಜಾ ನೇರ ಎದುರಾಳಿ ಎಂದು ಹೇಳಲಾಗಿದೆ.  ಆಯಗಳ ವಿಶಯದಲ್ಲಿ ಎಕೊ ಸ್ಪೋರ‍್ಟ್, ಬ್ರೆಜಾ ಹಾಗೂ ಟಿಯುವಿ 3ಒಒ ಗಳಿಗಿಂತ ಕೇವಲ 4ಮಿ.ಮೀ.ಗಳಶ್ಟು ಮಾತ್ರ ಉದ್ದವಿದೆ. ಬ್ರೆಜಾದ ಅಗಲ ಟಿಯುವಿಗಿಂತ ಕಡಿಮೆ ಮತ್ತು ಎಕೊ ಸ್ಪೋರ‍್ಟ್‌ಗಿಂತ ಹೆಚ್ಚಾಗಿದೆ. ಎತ್ತರದ ಮತ್ತು ಗಾಲಿಗಳ ನಡುವಿನ ದೂರದ ಆಯದಲ್ಲೂ ಬ್ರೆಜಾ, ಟಿಯುವಿ ಮತ್ತು ಎಕೊ ಸ್ಪೋರ‍್ಟ್‌ಗಳಿಗಿಂತ ಹಿಂದಿದೆ. ನೆಲತೆರವಿನ ವಿಶಯದಲ್ಲಿ ಎಕೊ ಸ್ಪೋರ‍್ಟ್ ಬರೋಬ್ಬರಿ 200 ಮಿ.ಮೀ. ಇದ್ದರೆ, ಬ್ರೆಜಾ 198 ಮಿ,ಮೀ. ಮೂಲಕ 2ನೇ ಸ್ತಾನ ಪಡೆದಿದೆ. ಟಿಯುವಿ 184 ಮಿ.ಮೀ.ನೆಲತೆರವನ್ನು ಹೊಂದಿದೆ. ಕೆಳಗಿನ ಪಟ್ಟಿಯಲ್ಲಿ ಆಯಗಳ ಹೋಲಿಕೆಯನ್ನು ವಿವರವಾಗಿ ನೋಡಬಹುದು.

Comparison-2

ವಿಟಾರಾ ಬ್ರೆಜಾದ ಬಿಣಿಗೆ ಎದುರಾಳಿ ಬಂಡಿಗಳಿಗಿಂತ ಚಿಕ್ಕದಿದ್ದರೂ 89 ಕುದುರೆಬಲದ ಕಸುವನ್ನುಂಟು ಮಾಡುತ್ತದೆ. ಎಕೊ ಸ್ಪೋರ‍್ಟ್‌ಗೆ ಚೂರು ದೊಡ್ಡ 1.5 ಲೀ ಅಳತೆಯ ಬಿಣಿಗೆಯಿದ್ದು ಅದರಿಂದ 99 ಕುದುರೆಬಲದ ಕಸುವು ಹೊರಬರುತ್ತದೆ.  ಕಡಿಮೆ ಕಸುವುಂಟು ಮಾಡಿದರೂ ಮಹೀಂದ್ರಾ ಟಿಯುವಿ 230 ನ್ಯೂಟನ್ ಮೀ, ತಿರುಗುಬಲ ನೀಡಿ ಎಕೊ ಸ್ಪೋರ‍್ಟ್ ಮತ್ತು ವಿಟಾರಾ ಬ್ರೆಜಾಗಳನ್ನು ಹಿಂದಿಕ್ಕಿದೆ.  ಮೂರು ಬಂಡಿಗಳಲ್ಲಿ 5-ವೇಗದ ಓಡಿಸುಗನಿಡಿತದ ಸಾಗಣಿ ನೀಡಿದ್ದಾರೆ. ಟಿಯುವಿಯಲ್ಲಿ ಅರೆ-ಓಡಿಸುಗನಿಡಿತದ ಸಾಗಣಿಯ ಆಯ್ಕೆಯೂ ಇದೆ. ವಿಟಾರಾ ಬ್ರೆಜಾ ಹೆಚ್ಚು ಮಯ್ಲಿಯೋಟ ನೀಡುವ ಕಿರು ಆಟೋಟದ ಬಳಕೆ ಬಂಡಿಯೆಂದು ಹೇಳಲಾಗಿದೆ. 24.3 ಕಿ.ಮೀ. ಪ್ರತಿ ಲೀಟರ್ ಸಾಗುವ ಮೂಲಕ ತನ್ನ ಅಣ್ಣ ಎಸ್-ಕ್ರಾಸ್ ಅನ್ನೇ ಇದು ಮೀರಿಸಿದೆ. ಎಕೊ ಸ್ಪೋರ‍್ಟ್ 22.4 ಕಿ.ಮೀ. ಮತ್ತು ಟಿಯುವಿ 18.49 ಕಿ.ಮೀ. ನೀಡುವ ಮೂಲಕ ಬ್ರೆಜಾ ಮುಂದೆ ಸಪ್ಪೆಯೆನಿಸುತ್ತವೆ.

ಬೆಲೆ: 6.99 ಲಕ್ಶದಿಂದ 9.68 ಬೆಲೆಯಲ್ಲಿ ಬ್ರೆಜಾದ ವಿವಿದ ಬಗೆಗಳು ದೊರೆಯಲಿವೆ. ಇದು ದೆಹಲಿಯ ಎಕ್ಸ್.ಶೋರೂಮ್ ಬೆಲೆಯಾಗಿರುತ್ತದೆ. ನಮ್ಮ ಕರ‍್ನಾಟಕದ ನೆಲೆವೀಡು ಬೆಂಗಳೂರಿನ ಎಕ್ಸ್.ಶೋರೂಮ್ ಬೆಲೆ 7.17 ಲಕ್ಶ ರೂ ಗಳಿಂದ 9.80 ಲಕ್ಶ ರೂ.ಗಳಾಗಿರುತ್ತದೆ.

Price comparison

ಬ್ರೆಜಾ ಎಂದರೆ ಇಟಾಲಿಯನ್ ಬಾಶೆಯಲ್ಲಿ ತಂಗಾಳಿಯಂತೆ. ವಿಟಾರಾ ಬ್ರೆಜಾ ಕೂಡ ಹೊಸ ತಂಗಾಳಿಯಾಗಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಅಬ್ಬರವನ್ನು ಕಾಯ್ದುಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕು.

 

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, marutisuzuki.com)

 

 

 Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s