ಕೊರ‍್ಲೆ ಹಿಟ್ಟಿನ ತಾಲಿಪೆಟ್ಟು
ನಮ್ಮಲ್ಲಿ ಈ ಐದು ಅಂಕಕ್ಕೆ ಬಹು ಮಹತ್ವವಿದೆ. ಐದು ಅಂದರೆ ನನಗಿಲ್ಲಿ ನೆನಪಾಗುವುದು ಪಂಚದಾನ್ಯ ಹಾರಕ, ಕೊರ‍್ಲೆ, ನವಣೆ, ಬರಗು ಹಾಗು ಸಾಮೆ. ಇವುಗಳನ್ನು ನಮ್ಮ ಆಹಾರಗಳ ಪಂಚರತ್ನವೆನ್ನಬಹುದು. ಇದಕ್ಕೆ ವಿವರಣೆ ದೊಡ್ಡದೇ ಬೇಕಾಗಬಹುದೆನೊ. ಇರಲಿ ಈಗ ನಮಗಿಲ್ಲಿ ಬೇಕಾಗಿರುವುದು ಇವುಗಳ ಒಂದು ರುಚಿಯಾದ ಬೆಳಗಿನ ತಿಂಡಿ ಮಾಡುವ ಬಗೆ.
ಬೇಕಾಗುವ ಅಡಿಗೆ ಸಾಮಾನುಗಳು:
1 ಬಟ್ಟಲು ಕೊರ‍್ಲೆ ಹಿಟ್ಟು
2 ಚಮಚ ಅಕ್ಕಿ ಹಿಟ್ಟು
4 ಚಮಚ ಕಡಲೆ ಬೇಳೆ ಹಿಟ್ಟು
1 ಚಮಚ ಜೀರಿಗೆ
4 ಚಮಚ ಬಿಳಿಯ ಎಳ್ಳು
4 ಉಳ್ಳಾಗಡ್ಡಿ.
4 ರಿಂದ 5 ಹಸಿಮೆಣಸಿನಕಾಯಿ
ಒಂದು ಹಿಡಿ ತೊಳೆದ ಹಸಿ ಕರಿಬೇವಿನ ಸೊಪ್ಪು
ಬೇಯಿಸಲು ಬೇಕಾದಸ್ಟು ಎಣ್ಣೆ
ರುಚಿಗೆ ತಕ್ಕಸ್ಟು ಉಪ್ಪು.
ತಾಲಿಪೆಟ್ಟು ಮಾಡುವ ಬಗೆ:
ಕರಿಬೇವು ಮತ್ತು ಉಳ್ಳಾಗಡ್ಡಿಯನ್ನು ಸಣ್ಣಗೆ ಹಚ್ಚಿ. ಹಸಿಮೆಣಸಿನಕಾಯಿ, ಜೀರಿಗೆ, ಚಿಟಿಕೆ ಉಪ್ಪು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಒಂದು ಬಟ್ಟಲಿನಲ್ಲಿ ಎಲ್ಲ ಹಿಟ್ಟುಗಳನ್ನು ಹಾಕಿ ಇದಕ್ಕೆ ರುಬ್ಬಿದ ಹಸಿಮೆಣಸಿನಕಾಯಿ, ಕರಿಬೇವು ಮತ್ತು ಉಳ್ಳಾಗಡ್ಡಿಯನ್ನು ಹಾಕಿ ಚೆನ್ನಾಗಿ ಕಲೆಸಿ.
ಒಂದು ಬಾಣಲೆಯಲ್ಲಿ ಒಂದು ಬಟ್ಟಲು ನೀರನ್ನು ಹಾಕಿ ಕುದಿಸಿ ಅದಕ್ಕೆ ಎರಡು ಚಿಟಿಕೆ ಅರಿಸಿನ ಪುಡಿ ಮತ್ತು ಹಿಟ್ಟಿನ ಮಿಶ್ರಣಕ್ಕೆ ಬೇಕಾಗುವಸ್ಟು ಉಪ್ಪನ್ನು ಹಾಕಿ ಈ ನೀರನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ. ಇನ್ನೂ ನೀರು ಬೇಕಾದಲ್ಲಿ ತಣ್ಣನೆ ನೀರು ಹಾಕಿ ಹಿಟ್ಟನ್ನು ನಾದಿಕೊಳ್ಳಿ. ನಾದಿ ಮೆತ್ತಗಾದ ಈ ಹಿಟ್ಟಿನಿಂದ ಬಾಳೆಯ ಎಲೆಯ ಮೇಲೆ ತಟ್ಟಿ ಕಾದ ಕಬ್ಬಿಣದ ಹಂಚಿನ ಮೇಲೆ ಹದವಾಗಿ ಬೇಕಾದಸ್ಟು ಎಣ್ಣೆ ಹಾಕಿ ಬೇಯಿಸಿ.
ಕೆಂಪು ಚಟ್ನಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ. ಎರಡು ಉಳ್ಳಾಗಡ್ಡಿ, ನಾಲ್ಕು ಟೊಮೆಟೊ, ಎರಡು ಚಮಚ ತುರಿದ ಒಣ ಕೊಬ್ಬರಿ, ಕಾಲು ಚಮಚ ಮೆಂತೆ ಕಾಳು, ಒಂದು ಚಮಚ ಜೀರಿಗೆ, ಎರಡು ಹಿಡಿ ಕರಿಬೇವು, ಒಂಚೂರು ಹುಣಸೆಹಣ್ಣು, ರುಚಿಗೆ ತಕ್ಕಸ್ಟು ಉಪ್ಪು. ಎಲ್ಲವನ್ನು ಸಣ್ಣನೆ ಉರಿಯಲ್ಲಿ ಗಮ್ಮನೆ ಎಣ್ಣೆಯಲ್ಲಿ ತಾಳಿಸಿ ಚಟ್ನಿ ಮಾಡಿ, ತಾಲಿಪೆಟ್ಟಿನ ಜೊತೆ ಸವಿದು ನೋಡಿ.
(ಚಿತ್ರಸೆಲೆ: homemadeonline.in)
ಇತ್ತೀಚಿನ ಅನಿಸಿಕೆಗಳು