ಕ್ರಿಕೆಟ್ ಲೋಕದ ದಿಗ್ಗಜ ಅನಿಲ್ ಕುಂಬ್ಳೆ
ಅದು 1986 ಬೇಸಿಗೆ ರಜೆ. ಬೆಂಗಳೂರಿನ ಬಸವನಗುಡಿಯಲ್ಲಿ ಮಳೆ ಬರುವ ಸೂಚನೆ ಇದ್ದುದರಿಂದ ಅಂದಿನ ಕ್ರಿಕೆಟ್ ಅಬ್ಯಾಸವನ್ನು ರದ್ದು ಮಾಡಲಾಗಿತ್ತು. ಆದರೆ ತುಂತುರು ಮಳೆಯಲ್ಲೂ ದಪ್ಪನೆಯ ಕನ್ನಡಕ ಹಾಕಿಕೊಂಡಿದ್ದ 15 ವರ‍್ಶದ ಒಬ್ಬ ಹುಡುಗ ಕಾಲಿ ನೆಟ್ಸ್ ನಲ್ಲಿ ತನ್ನಶ್ಟಕ್ಕೆ ತಾನೇ ಒಂದು ತಾಸು ಬೌಲಿಂಗ್ ಅಬ್ಯಾಸ ಮಾಡುತ್ತಾನೆ. ಈ ಹುಡುಗ ಮುಂದೆ ಬಾರತ ಕಂಡ ಶ್ರೇಶ್ಟ ಬೌಲರ್ ಗಳಲ್ಲಿ ಒಬ್ಬನಾಗಿ ಬಾರತಕ್ಕೆ ಯಾರೂ ಗೆಲ್ಲಿಸಿ ಕೊಡದಶ್ಟು ಪಂದ್ಯಗಳನ್ನು, ತನ್ನ ಲೆಗ್ ಸ್ಪಿನ್ನಿಂದ ಗೆಲ್ಲಿಸಿ ದಿಗ್ಗಜನಾಗುತ್ತಾನೆ. ಇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಒಂದು ವ್ರುತ್ತ ಕೂಡ ಇದೆ. ಈಗ ಎಲ್ಲರಿಗೂ ನಾವು ಯಾರ ಬಗ್ಗೆ ಮಾತಾಡುತ್ತಿದ್ದೀವಿ ಅಂತ ಗೊತ್ತಾಗಿರಬೇಕಲ್ವೇ? ಹೌದು ಇವರು ಬೇರೆ ಯಾರು ಅಲ್ಲ ವಿಶ್ವ ಕ್ರಿಕೆಟ್ ನಲ್ಲಿ ಕರ‍್ನಾಟಕದ ಕೀರ‍್ತಿ ಪತಾಕೆ ಹಾರಿಸಿದ ನಮ್ಮ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ.
1970 ರ ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಹುಟ್ಟಿದ ಅನಿಲ್ ಕುಂಬ್ಳೆ ಚಿಕ್ಕಂದಿನಿಂದಲೂ ಆಟದ ಜೊತೆ ಪಾಟವನ್ನೂ ಗಂಬೀರವಾಗಿ ಪರಿಗಣಿಸಿದವರು. ಅದಕ್ಕೆ ಸಾಕ್ಶಿ ಆರ್.ವಿ ಕಾಲೇಜ್ ಆಪ್ ಇಂಜಿನಿಯರಿಂಗ್ ನಿಂದ ಅವರು ಪಡೆದಿರುವ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ. ಈಗಿನ ಕಾಲದ ಹುಡುಗರು ಆಟ ಮತ್ತು ಕಲಿಕೆಯನ್ನು ಸರಿಯಾಗಿ ತೂಗಿಸಲಾಗದೆ ಎರಡರಲ್ಲೂ ಸೂಲುಂಡಿರೋ ಎಶ್ಟೋ ಎತ್ತುಗೆಗಳು ನಮ್ಮ ಕಣ್ಣ ಮುಂದಿವೆ. ಅಂತವರಿಗೆ ಕ್ರಿಕೆಟ್ ಆಡುತ್ತಲೇ ಇಂಜಿನಿಯರ್ ಆದ ಕುಂಬ್ಳೆ ಅವರು ಮಾದರಿಯಾಗಬಲ್ಲರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕುಂಬ್ಳೆ ಅವರು ನ್ಯಾಶನಲ್ ಸ್ಕೂಲಿನಲ್ಲಿ ಕಲಿಯುತ್ತಿರುವಾಗಲೇ 15 ರ ವಯೋಮಿತಿಯ ಕರ‍್ನಾಟಕ ತಂಡದಲ್ಲಿ ಸ್ತಾನ ಪಡೆದರು. ಆಗ ವೇಗದ ಬೌಲರ್ ಆಗಿದ್ದ ಕುಂಬ್ಳೆಯವರ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದೆ ಅಂತ ಕೋಚ್ ಒಬ್ಬರು ಚಕಾರ ಎತ್ತಿದ್ದರಿಂದ ಲೆಗ್ ಸ್ಪಿನ್ ಕಡೆಗೆ ವಾಲಿದರು. ಅಲ್ಲಿಂದ ಬೆಳೆದು 1989 ರ ಹೊತ್ತಿಗೆ ಕರ‍್ನಾಟಕ ರಣಜಿ ತಂಡದ ಸದಸ್ಯರಾದರು. ರಣಜಿ ಆಡಿದ ಮೊದಲ ವರ‍್ಶದಲ್ಲೇ ಗಮನಸೆಳೆದಿದ್ದ ಕುಂಬ್ಳೆ ಅವರು ಒಂದೇ ವರ‍್ಶದೊಳಗೆ 1990 ರಲ್ಲಿ ಮ್ಯಾನ್ಚೆಸ್ಟರ್ ನಲ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಕ್ರಿಕೆಟ್ ಗೆ ಪಾದಾರ‍್ಪಣೆ ಮಾಡಿದರು. ನೀರಸ ಡ್ರಾನಲ್ಲಿ ಮುಗಿದ ಈ ಪಂದ್ಯದಲ್ಲಿ ಕುಂಬ್ಳೆ ಅವರು 3 ವಿಕೆಟ್ ಪಡೆದು ಬರವಸೆ ಮೂಡಿಸಿದರು.
ಚೆಂಡನ್ನೇ ತಿರುಗಿಸೋಲ್ಲ ಇವನು ಸ್ಪಿನ್ನರಾ?
ಇಂಗ್ಲೆಂಡ್ ನಲ್ಲಿ 19 ವರ‍್ಶದ ಹುಡುಗ ತನ್ನ ಚೊಚ್ಚಲ ಟೆಸ್ಟ್ ಆಡಿದಾಗ ಕೇಳಿ ಬಂದ ಮಾತು, ಇವನು ಚೆಂಡನ್ನೇ ತಿರುಗಿಸಲ್ಲ ಇವನ್ಯಾವ ಸೀಮೆ ಸ್ಪಿನ್ನರ‍್? ಇವನು ಅತ್ತ ವೇಗಿಯೂ ಅಲ್ಲ ಇತ್ತ ಸ್ಪಿನ್ನರೂ ಅಲ್ಲ. ಇವನ ಎಸೆತಗಳನ್ನು ಆಡುವಾಗ ಒಬ್ಬ ಮದ್ಯಮ ವೇಗಿಗೆ ಆಡುವ ರೀತಿಯಲ್ಲಿ ಆಡಬೇಕು ಎಂದು ಕ್ರಿಕೆಟ್ ಪಂಡಿತರು ಟೀಕಿಸಿದ್ದರು. ಇದೇ ಪಂದ್ಯದಲ್ಲಿ ಮಿಡ್ ಆನ್ ನಲ್ಲಿ ಪೀಲ್ಡಿಂಗ್ ಮಾಡುತ್ತಿರುವಾಗ ಗೂಚ್ ಅವರು ಕೊಟ್ಟ ಕ್ಯಾಚನ್ನು ಕುಂಬ್ಳೆ ಕೈ ಚೆಲ್ಲುತ್ತಾರೆ. ಇದರಿಂದ ಸಿಟ್ಟಾದ ಕಪಿಲ್ ದೇವ್ ಹಿಗ್ಗಾ ಮುಗ್ಗ ಬಯ್ಯುತ್ತಾರೆ. ಇದರಿಂದ ನೊಂದ ಕುಂಬ್ಳೆ ಅವರು ಡ್ರೆಸ್ಸಿಂಗ್ ಕೊಟಡಿಯ ಒಂದು ಮೂಲೆಯಲ್ಲಿ ಕೂತು ಅಳುತ್ತಿರುವಾಗ ಆಗಿನ ಕೋಚ್ ಸ್ಪಿನ್ ದಿಗ್ಗಜ ಬಿಶನ್ ಸಿಂಗ್ ಬೇಡಿ ಸಮಾದಾನ ಮಾಡುತ್ತಾರೆ. ಮೊದಲ ಪ್ರವಾಸದಲ್ಲೇ ಈ ರೀತಿಯ ಅವಮಾನಗಳನ್ನು ಸಹಿಸಿಕೊಂಡು 14 ವರ‍್ಶಗಳ ನಂತರ ಅದೇ ಕಪಿಲ್ ದೇವ್ ರ ಆತ್ಯದಿಕ 434 ಟೆಸ್ಟ್ ವಿಕೆಟ್ ಗಳ ದಾಕಲೆಯನ್ನು ಮುರಿದ ಕುಂಬ್ಳೆ ಅವರ ಚಲವನ್ನು ಮೆಚ್ಚಲೇಬೇಕು. ಇದೇ ಸಂದರ‍್ಬದಲ್ಲಿ ಕಾಸಗಿ ಚಾನಲ್ ಒಂದರಲ್ಲಿ ವಿವರಣೆಗಾರರಾಗಿದ್ದ ಬೇಡಿ ಅವರು “ಕ್ಯಾಪ್ಸ್, ನೀನಂದು ಕ್ರಿಕೆಟ್ ಆಡಲು ನಿಮ್ಮಂತವರು ನಾಲಾಯಕ್ಕು ಎಂದು ಟೀಕಿಸಿದ್ದ ಹುಡುಗ ಇಂದು ನಿನ್ನ ದಾಕಲೆಯನ್ನು ಮುರಿದ್ದಿದ್ದಾನೆ. ಈಗ ಹೇಗೆ ಅನ್ನಿಸ್ತಿದೆ?” ಎಂದು ತಮಾಶೆ ಮಾಡಿದ್ದರು. ಬಹುಶ ಈ ಮೇಲಿನ ಗಟನೆ ಕುಂಬ್ಳೆ ಅವರ ದ್ರುಡ ವ್ಯಕ್ತಿತ್ವ ಮತ್ತು ಚಲಕ್ಕೆ ಹಿಡಿದ ಕನ್ನಡಿ ಅಂದರೆ ತಪ್ಪಾಗಲಾರದು.
ಹಟಕ್ಕೆ ಮತ್ತೊಂದು ಹೆಸರು ಕುಂಬ್ಳೆ
ಬೇರೆ ಸ್ಪಿನ್ನರ್ ಗಳ ರೀತಿ ಕುಂಬ್ಳೆ ಅವರು ಚೆಂಡನ್ನು ಹೆಚ್ಚು ತಿರುಗಿಸೊಲ್ಲ. ಅವರ ಬೌಲಿಂಗ್ ಶಕ್ತಿ ಅವರ ವೇಗ ಬದಲಾವಣೆ ಹಾಗು ಕರಾರುವಾಕ್ ಗೂಗ್ಲಿಗಳು. ಇವುಗಳ ಬಲದಿಂದಲೇ ಸತತ 18 ವರ‍್ಶಗಳ ಕಾಲ ಅಂತರಾಶ್ಟ್ರಿಯ ಕ್ರಿಕೆಟ್ ಆಡಿ ಬಾರತದ ಪರ ಟೆಸ್ಟ್ ನಲ್ಲಿ ಆತ್ಯದಿಕ 619 ಹಾಗು ಒಂದು ದಿನದ ಪಂದ್ಯಗಳಲ್ಲಿ 337 ವಿಕೆಟ್ ಗಳನ್ನು ಪಡೆದರು. 2007 ರ ಓವಲ್ ಟೆಸ್ಟ್ ನಲ್ಲಿ ಒಂದು ಶತಕ ಕೂಡ ಬಾರಿಸಿದ್ದಾರೆ. 1999 ರ ದೆಹಲಿ ಟೆಸ್ಟ್ ನಲ್ಲಿ ಪಾಕಿಸ್ತಾನದ ಮೇಲೆ ಒಂದೇ ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಗಳನ್ನು ಪಡೆದು ವಿಶಿಶ್ಟ ದಾಕಲೆ ಮಾಡಿದರು. ಈ ದಾಕಲೆಯನ್ನು ಸರಿಗಟ್ಟಲು ಸಾದ್ಯವೇ ಹೊರತು ಮುರಿಯಲು ಸಾದ್ಯವಿಲ್ಲ, ಹಾಗಾಗಿ ಟೆಸ್ಟ್ ಕ್ರಿಕೆಟ್ ಇರುವ ತನಕ ಕುಂಬ್ಳೆ ಅವರ ಹೆಸರು ಅಜರಾಮರ.
1996 ರಲ್ಲಿ ಕುಂಬ್ಳೆ ಅವರ ನಾಯಕತ್ವದಲ್ಲಿ ಕರ‍್ನಾಟಕ 13 ವರ‍್ಶಗಳ ಅಂತರದ ಬಳಿಕ ರಣಜಿ ಟ್ರೋಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಇವೆಲ್ಲಾ ಅವರ ಕ್ರಿಕೆಟ್ ಕೌಶಲ್ಯಗಳಿಗೆ ಎತ್ತುಗೆಗಳಾದರೆ, 2002 ರ ಆಂಟಿಗ ಟೆಸ್ಟ್ ಅವರ ಹಟ, ದೈರ‍್ಯ ಹಾಗು ಆಶಾವಾದಿ ಮನೋಬಾವಕ್ಕೇ ಸೂಕ್ತ ಎತ್ತುಗೆ. ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ವೆಸ್ಟ್ ಇಂಡೀಸ್ ನ ಬೌಲರ್ ಡಿಲಾನ್ ರ ಎಸೆತದಿಂದ ದವಡೆಗೆ ಪೆಟ್ಟು ಮಾಡಿಕೊಂಡಿದ್ದ ಕುಂಬ್ಳೆ ಅವರು ಪಟ್ಟಿ ಕಟ್ಟಿಕೊಂಡು ವೈದ್ಯರ ಸಲಹೆಯನ್ನು ದಿಕ್ಕರಿಸಿ ಕಣಕ್ಕಿಳಿದು ಸತತ 14 ಓವರ್ ಗಳನ್ನು ಮಾಡಿ ದಿಗ್ಗಜ ಬ್ಯಾಟ್ಸಮೆನ್ ಲಾರಾ ಅವರನ್ನು ತಮ್ಮ ಸ್ಪಿನ್ ಬಲೆಗೆ ಬೀಳಿಸಿದರು. “ನನಗೆ ನೋವಾದರೂ ಅಡ್ಡಿ ಇಲ್ಲ ನಾನು ಆಡುತ್ತೇನೆ, ನನ್ನಿಂದ ತಂಡಕ್ಕೆ ಒಳಿತಾಗಬೇಕು.” ಅನ್ನುವ ಕುಂಬ್ಳೆ ಅವರ ಈ ನಡೆ ಕ್ರಿಕೆಟ್ ಪಂಡಿತರು ಹಾಗು ಅಬಿಮಾನಿಗಳಿಂದ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿತು.
ಬಾರತದ ನಾಯಕ ಕುಂಬ್ಳೆ
ತಮ್ಮ ಕ್ರಿಕೆಟ್ ಜೀವನದ ಕೊನೆ ದಿನಗಳಲ್ಲಿದ್ದ 37 ವರ‍್ಶದ ಕುಂಬ್ಳೆ ಅವರಿಗೆ 2007 ರಲ್ಲಿ ಬಾರತ ಟೆಸ್ಟ್ ತಂಡದ ನಾಯಕರಾಗುವ ಅದ್ರುಶ್ಟ ಒಲಿಯಿತು. ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ನಡೆದ ವಿವಾದಗಳನ್ನು ಅವರು ಎದುರಿಸಿ ಕ್ರಿಕೆಟ್ ಸ್ಪೂರ‍್ತಿಗೆ ಚ್ಯುತಿ ಬಾರದ ಹಾಗೆ ಬಗೆಹರಿಸಿದ ರೀತಿಯನ್ನು ಈಗಲೂ ಕ್ರಿಕೆಟ್ ಜಗತ್ತು ಕೊಂಡಾಡುತ್ತದೆ. ಆಸ್ಟ್ರೇಲಿಯಾ ಮಾದ್ಯಮಗಳು ಅನಿಲ್ ಕುಂಬ್ಳೆ ಅಂತಹ ಸಬ್ಯ ಆಟಗಾರ ಇನ್ನೊಬ್ಬರಿಲ್ಲ ಎಂದು ಗುಣಗಾನ ಮಾಡಿದವು. ಆ ಪ್ರವಾಸದ ಸಿಡ್ನಿ ಟೆಸ್ಟ್ ನಲ್ಲಿ ಕಳಪೆ ಅಂಪೈರಿಂಗ್ ಇಂದ ಆದ ಸೋಲು ಹಾಗು ಹರಬಜನ್ ಸಿಂಗ್ ರ ವಿರುದ್ದದ ಜನಾಂಗೀಯ ನಿಂದನೆಯ ಆರೋಪ ಇಡೀ ಬಾರತವನ್ನೇ ರೊಚ್ಚಿಗೆಬ್ಬಿಸಿತ್ತು, ಇನ್ನೇನು ಪ್ರವಾಸವನ್ನೇ ರದ್ದು ಮಾಡಬೇಕು ಅನ್ನುವ ಮಾತುಗಳು ಕೇಳಲಾರಂಬಿಸಿದವು. ಇಂತಹ ಸಮಯದಲ್ಲಿ ತಂಡದ ಆತ್ಮಸ್ತೈರ‍್ಯವನ್ನು ಕುಗ್ಗದಂತೆ ನೋಡಿಕೊಂಡು ಎಲ್ಲರನ್ನು ಹುರಿದುಂಬಿಸಿ ಆಸ್ಟ್ರೇಲಿಯಾದ ಬದ್ರಕೋಟೆ ಎಂದೇ ಹೆಸರಾಗಿದ್ದ ಪೆರ‍್ತ್ ನಲ್ಲಿ ಬಲಿಶ್ಟ ಆಸ್ಟ್ರೇಲಿಯಾವನ್ನು ನಾಲ್ಕೇ ದಿನಗಳಲ್ಲಿ ಸೋಲುಣಿಸುವಂತೆ ಮಾಡಿದ್ದು ಅನಿಲ್ ಕುಂಬ್ಳೆ ಅವರ ಅದ್ಬುತ ನಾಯಕತ್ವ. ಹೀಗೆ ತಮ್ಮ ಆಟದ ಸಂದ್ಯಾ ಕಾಲದಲ್ಲೂ ಎಲ್ಲಾ ಸವಾಲುಗಳನ್ನು ಎದುರಿಸಿ ಗೆದ್ದ ಕುಂಬ್ಳೆ ಅವರು 2008 ರಲ್ಲಿ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ನಿವ್ರುತ್ತರಾದರು.
ಆನಂತರದ 2 ವರ‍್ಶ ಐಪಿಎಲ್ ನಲ್ಲಿ ಬೆಂಗಳೂರು ಪರ ಆಡಿದರು. ಟಿ20 ಮಾದರಿಯ ಕ್ರಿಕೆಟ್ ಯುವಕರಿಗಶ್ಟೇ ಎಂಬ ನಂಬಿಕೆಯನ್ನು ತಲೆ ಕೆಳಗೆ ಮಾಡುವಲ್ಲಿ ಕುಂಬ್ಳೆ ಯಶಸ್ವಿಯಾದರು. 2009 ಹಾಗು 10 ರ ಐಪಿಎಲ್ ನಲ್ಲಿ ನಾಯಕರಾಗಿ ಅವರು ತಂಡವನ್ನು ಮುನ್ನಡಿಸಿದ ರೀತಿ ಮತ್ತು ಬೌಲಿಂಗ್ ಮಾಡಿದ ಪರಿಯನ್ನು ಕಂಡ ಕ್ರಿಕೆಟ್ ಪಂಡಿತರು ಇವರು ಯಾಕಾದರೂ ಅಂತರಾಶ್ಟ್ರೀಯ ಕ್ರಿಕೆಟ್ ಇಂದ ನಿವ್ರುತ್ತರಾದರೋ ಎಂದು ಪ್ರಶ್ನೆ ಕೇಳಲಾರಂಬಿಸಿದರು. ಬೆಂಗಳೂರು ತಂಡ ಎರಡೂ ವರ‍್ಶಗಳಲ್ಲಿ ಪ್ರಶಸ್ತಿ ಗೆಲ್ಲದ್ದಿದ್ಡರೂ ಪೈನಲ್ ಮತ್ತು ಸೆಮಿ ಪೈನಲ್ ತಲುಪುವಲ್ಲಿ ಯಶಸ್ವಿಯಾಯಿತು. ಇವರ ನಾಯಕತ್ವದ ಪ್ರಯೋಗದಿಂದಲೇ ಮನೀಶ್ ಪಾಂಡೆ ಎಂಬ ಕರ‍್ನಾಟಕದ ಪ್ರತಿಬೆ ಐಪಿಎಲ್ ನಲ್ಲಿ ಶತಕ ಸಿಡಿಸಿ ಇಡೀ ಪ್ರಪಂಚಕ್ಕೆ ಪರಿಚಯ ಆದರು. 2010 ರ ನಂತರ ಸಂಪೂರ‍್ಣವಾಗಿ ಆಡುವುದನ್ನು ನಿಲ್ಲಿಸಿ ಬೆಂಗಳೂರು ತಂಡದ ಸಲಹೆಗಾರರಾಗಿ ಮುಂದುವರಿದರು. ಅದಾದ ನಂತರ 2013 ರಿಂದ 15 ರ ತನಕ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರರಾಗಿ ಕೆಲಸ ಮಾಡಿದರು. 2015 ರಲ್ಲಿ ಐ.ಸಿ.ಸಿ ಯು ಅನಿಲ್ ಕುಂಬ್ಳೆ ಅವರನ್ನು ತನ್ನ ಹಾಲ್ ಆಪ್ ಪೇಮ್ ಪಟ್ಟಿಗೆ ಸೇರಿಸಿ ಗೌರವ ಸಲ್ಲಿಸಿತು.
ಕೆ.ಎಸ್.ಸಿ.ಎ ಅದ್ಯಕ್ಶ
ಕ್ರಿಕೆಟ್ ನನಗೆ ಎಲ್ಲಾ ಕೊಟ್ಟಿದೆ. ಈಗ ನಿವ್ರುತ್ತನಾದ ಮೇಲೆ ಕ್ರಿಕೆಟ್ ಗೆ ಏನಾದರು ಕೊಡುಗೆ ನೀಡಬೇಕು ಎಂಬ ಸಿದ್ದಾಂತವನ್ನು ನಂಬಿದ್ದ ಕುಂಬ್ಳೆ ಅವರು ತಮ್ಮ ಗೆಳಯ ಜಾವಗಲ್ ಶ್ರೀನಾತ್ ಅವರೊಟ್ಟಿಗೆ ಸೇರಿ 2010 ರಲ್ಲಿ ಕೆ.ಎಸ್.ಸಿ.ಎ ಚುನಾವಣೆ ಗೆದ್ದು ಅದಿಕಾರದ ಚುಕ್ಕಾಣಿ ಹಿಡಿದರು. ಕುಂಬ್ಳೆ ಅದ್ಯಕ್ಶರಾದರೆ ಶ್ರೀನಾತ್ ಕಾರ‍್ಯದರ‍್ಶಿಯ ಗದ್ದುಗೆಗೆ ಏರಿದರು. ಒಬ್ಬ ಮಾಜಿ ಆಟಗಾರ ಯಾವುದೇ ಕ್ರಿಕೆಟ್ ಸಂಸ್ತೆಯ ಆದ್ಯಕ್ಶನಾಗಿದ್ದು ಬಾರತದ ಇತಿಹಾಸದಲ್ಲಿ ಇದೇ ಮೊದಲು. ಆಡುವ ದಿನಗಳಿಂದಲೂ ತಮ್ಮ ನೇರನುಡಿ ದೀಮಂತ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಕುಂಬ್ಳೆ ಅವರಿಂದ ಸಾಕಶ್ಟು ನಿರೀಕ್ಶೆಗಳನ್ನು ಇಟ್ಟುಕೊಂಡಿದ್ದ ಜನರ ನಂಬಿಕೆಯನ್ನು ಅವರು ಹುಸಿಗೊಳಿಸಲ್ಲಿಲ್ಲ. ಕರ‍್ನಾಟಕದಲ್ಲಿ ಕ್ರಿಕೆಟ್ ಗೆ ಸಂಬಂದಸಿದಂತೆ ಸಾಕಶ್ಟು ಬೆಳವಣಿಗೆಗಳು ಆದವು.
ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಹೊಸ ಆಟದ ಅಂಕಣಗಳು ತಲೆ ಎತ್ತಿದವು. ಬೆಂಗಳೂರಿನ ಬಳಿ ಇರುವ ಆಲೂರಿನಲ್ಲೂ ಒಂದೇ ಕಡೆ ಅಕ್ಕ ಪಕ್ಕ 3 ಹೊಸ ಆಟದ ಅಂಕಣಗಳು ಸ್ರುಶ್ಟಿಯಾದವು. ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಅಂಕಣವು ಹೊನಲು ಬೆಳಕಿನ ಪಂದ್ಯಕ್ಕೆ ಅನುವಾಗುವಂತೆ ವಿಶ್ವದರ‍್ಜೆ ಮಟ್ಟಕ್ಕೆ ಏರಿತು. ಬೆಂಗಳೂರಲ್ಲದೇ ಬೇರೆ ಊರುಗಳಲ್ಲೂ ವಿವಿದ ವಯೋಮಿತಿಯ ಕ್ರಿಕೆಟ್ ಗೆ ಕುಂಬ್ಳೆ ಅವರು ಹೆಚ್ಚು ಒತ್ತು ಕೊಟ್ಟಿದ್ದರಿಂದ ಇಂದು ಹುಬ್ಬಳ್ಳಿಯಿಂದ ಶಿಶಿರ್ ಬಾವನೆ, ಬೆಳಗಾವಿಯಿಂದ ರೋನಿತ್ ಮೋರೆ ಅಂತಹ ಪ್ರತಿಬೆಗಳು ಉದಯಿಸಿ ಕರ‍್ನಾಟಕ ತಂಡಕ್ಕೆ ಆಡುತ್ತಿದ್ದಾರೆ. ಹೀಗೆ ಅದಿಕಾರದ ಚುಕ್ಕಾಣಿ ಹಿಡಿದ ಮೇಲೆ ಕುಂಬ್ಳೆ ಅವರು ಬಿತ್ತಿದ ಬೀಜ ನಂತರದ 2 ವರ‍್ಶಗಳಲ್ಲಿ ಹೆಮ್ಮರವಾಗಿ ಕರ‍್ನಾಟಕ ಬಲಿಶ್ಟ ತಂಡವಾಯಿತು. ಸತತ 2 ವರ‍್ಶ 2014 ಹಾಗು 15 ರ ರಣಜಿ ಟ್ರೋಪಿ ಸೇರಿ ಎಲ್ಲಾ ದೇಶಿಯ ಪಂದ್ಯಾವಳಿಗಳನ್ನು ಗೆದ್ದು ಕರ‍್ನಾಟಕ ತಂಡ ಇತಿಹಾಸ ಬರೆಯಿತು. ಅವರ ಆದ್ಯಕ್ಶತೆಯಲ್ಲಿ 2013 ರಲ್ಲಿ ಕೆ.ಎಸ್.ಸಿ.ಎ ರಜತ ಮಹೋತ್ಸವವನ್ನು ವಿಜ್ರುಂಬಣೆಯಿಂದ ಆಚರಿಸಿದರು. ಇದಕ್ಕೆ ನ್ಯೂಜಿಲ್ಯಾಂಡ್ ನ ದಿಗ್ಗಜ ಬೌಲರ್ ರಿಚರ‍್ಡ್ ಹ್ಯಾಡ್ಲಿ ಅವರು ಅತಿತಿಯಾಗಿ ಬಂದಿದ್ದರು. ಬಾರತದ ಎಲ್ಲಾ ಮಾಜಿ ದಿಗ್ಗಜ ಆಟಗಾರರು ಮತ್ತು ಕರ‍್ನಾಟಕದಿಂದ ಬಾರತಕ್ಕೆ ಆಡಿದ ಎಲ್ಲಾ ಆಟಗಾರರು ಈ ಅಪರೂಪದ ಕಾರ‍್ಯಕ್ರಮಕ್ಕೆ ಸಾಕ್ಶಿಯಾದರು. ಇಶ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೆ.ಎಸ್.ಸಿ.ಎ ವಲಯದಲ್ಲಿ ಟೀಕೆಗಳು ಕೇಳಿ ಬಂದವು. ಇದರಿಂದ ನೊಂದ ಕುಂಬ್ಳೆ ಅವರು 2013 ರ ಚುನಾವಣೆಯಿಂದ ಹೊರಗುಳಿದರು. ಅಲ್ಲಿಗೆ ಕರ‍್ನಾಟಕ ಕ್ರಿಕೆಟ್ ಇಂದ ಕುಂಬ್ಳೆ ದೂರವಾದರು. ಇದು ನಿಜಕ್ಕೂ ರಾಜ್ಯ ಕ್ರಿಕೆಟ್ ಗೆ ದೊಡ್ಡ ನಶ್ಟ ಅನ್ನುವುದರಲ್ಲಿ ಎರಡು ಮಾತಿಲ್ಲ.
ಬಾರತದ ಕೋಚ್ ಕುಂಬ್ಳೆ
ರವಿಶಾಸ್ತ್ರಿ ಅವರು 18 ತಿಂಗಳ ಕಾಲ ಬಾರತ ತಂಡದ ನಿರ‍್ದೇಶಕರಾಗಿ ಅವದಿ ಪೂರೈಸಿದ ಮೇಲೆ ಒಬ್ಬ ಪೂರ‍್ಣಪ್ರಮಾಣದ ಕೋಚ್ ನ ಅವಶ್ಯಕತೆಯನ್ನು ಮನಗಂಡು ಬಿ.ಸಿ.ಸಿ.ಐ ಕೋಚ್ ಹುದ್ದೆಗೆ ಅರ‍್ಜಿಗಳನ್ನು ಆಹ್ವಾನಿಸಿದಾಗ ಕುಂಬ್ಳೆ ಅವರು ಅರ‍್ಜಿ ಸಲ್ಲಿಸುವುದಿಲ್ಲ. ಶಾಸ್ತ್ರಿ ಅವರೇ ಕೋಚ್ ಆಗಲಿದ್ದಾರೆ ಎಂಬ ಮಾತುಗಳು ಕೇಳಬರುತ್ತಿರುವಾಗಲೇ ಕೊನೆ ಗಳಿಗೆಯಲ್ಲಿ ಹಟಾತ್ತನೆ ಕುಂಬ್ಳೆ ಅರ‍್ಜಿ ಸಲ್ಲಿಸುತ್ತಾರೆ. ಆಯ್ಕೆ ಸಮಿತಿಯಲ್ಲಿದ್ದ ತೆಂಡೂಲ್ಕರ್, ಗಂಗೂಲಿ, ಲಕ್ಶ್ಮಣ್ ಒಮ್ಮತದಿಂದ ಕುಂಬ್ಳೆ ಅವರನ್ನು ಕೋಚ್ ಹುದ್ದೆಗೆ ಆರಿಸಿದರು. ಈ ಬೆಳವಣಿಗೆ ಕೆಲವರಿಗೆ ಆಶ್ಚರ‍್ಯ ಉಂಟು ಮಾಡಿದರೆ ಕ್ರಿಕೆಟ್ ವಲಯದ ಇನ್ನಿತರರಿಗೆ ಅಸೂಯೆ ಉಂಟು ಮಾಡುತ್ತದೆ. ಪೂರ‍್ವ ಕೋಚಿಂಗ್ ನ ಅನುಬವ ಇಲ್ಲದ ಕುಂಬ್ಳೆ ಅವರನ್ನು ಕೇವಲ ಅವರ ಆಟದ ದಿನಗಳ ಪ್ರದರ‍್ಶನದ ಅಳತೆಗೋಲಿನಿಂದ ಇಂತ ಜವಬ್ದಾರಿಯುತ ಹುದ್ದೆಗೆ ನೇಮಕ ಮಾಡುವುದು ತಪ್ಪು ಎಂದು ಹಲವರು ಕಿಡಿ ಕಾರಿದರು. ಆದರೆ ಬಾರತದ ಪರ ದಶಕಗಳ ಕಾಲ ಕ್ರಿಕೆಟ್ ಆಡಿದ ದಿಗ್ಗಜರಾದ ಬೇಡಿ, ಗವಾಸ್ಕರ್ ಅವರು ಕುಂಬ್ಳೆ ಅವರಿಗಿಂತ ಹೆಚ್ಚು ಯೋಗ್ಯ ಕೋಚ್ ಇರಲು ಸಾದ್ಯವಿಲ್ಲ ಎಂದು ಕುಂಬ್ಳೆ ಅವರ ನೇಮಕಾತಿಯನ್ನು ಸ್ವಾಗತಿಸಿದರು.
ಬಾರತದ ಹಳೇ ಕೋಚ್ ಗಳ ಪಟ್ಟಿ ನೋಡಿದರೆ ಅದರಲ್ಲಿ ಗೆಲುವು ಕಂಡಿರುವರು ತೀರಾ ಕಡಿಮೆ. ಬಾರತದ ಬೇಡಿ, ಮದನ್ ಲಾಲ್, ಅಂಶುಮನ್ ಗಾಯೆಕ್ವಾಡ್, ಕಪಿಲ್ ದೇವ್ ಕೋಚ್ ಆಗಿದ್ದವರು. ಕಪಿಲ್ ರ ನಂತರ ಬಿ.ಸಿ.ಸಿ.ಐ ದಶಕಗಳ ಕಾಲ ವಿದೇಶಿ ಕೋಚ್ ಗಳಿಗೆ ಮಣೆಹಾಕಿತ್ತು. ಆದರೂ ಈಗ ಕುಂಬ್ಳೆ ಅವರನ್ನು ಆರಿಸಿದ್ದಾರೆ ಎಂದರೆ ಅವರ ಸಾಮರ‍್ತ್ಯದ ಮೇಲೆ ಕ್ರಿಕೆಟ್ ವಲಯದಲ್ಲಿ ಎಶ್ಟು ನಂಬಿಕೆ ಇದೆ ಎಂದು ತಿಳಿಯುತ್ತದೆ. ಐ.ಪಿ.ಎಲ್ ತಂಡಗಳ ಸಲಹೆಗಾರರಾಗಿ ಕೆಲಸ ಮಾಡಿರುವ ಕುಂಬ್ಳೆ ಅವರಿಗೆ ಕೋಚ್ ಕೆಲಸ ಹೊಸತೇನಲ್ಲ, ಮೇಲಾಗಿ ಎರಡು ದಶಕಗಳ ಕಾಲ ಅಂತರಾಶ್ಟ್ರಿಯ ಕ್ರಿಕೆಟ್ ಆಡಿರುವ ಅವರಿಗೆ ತಂಡವನ್ನು ನಿಬಾಯಿಸುವುದು ಹೆಚ್ಚೇನು ಕಶ್ಟ ಆಗಲಾರದು ಎಂಬುವುದು ಕ್ರಿಕೆಟ್ ಬಲ್ಲವರ ಅಂಬೋಣ. ಅವರ ಮೊದಲ ಪ್ರವಾಸದಲ್ಲೇ ಬದಲಾವಣೆಗಳು ನೋಡ ಸಿಗುತ್ತಿವೆ. ವೆಸ್ಟ್ ಇಂಡೀಸ್ ನ ಪಿಚ್ ಗಳು ವೇಗದ ಬೌಲರ್ ಗಳಿಗೆ ಸಹಾಯಕ ಅನ್ನುವ ನಂಬಿಕೆ ಇದ್ದರೂ 2 ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿದ ಕುಂಬ್ಳೆ ಕೋಚ್ ಆಗಿ ತಮ್ಮ ಮೊದಲ ಟೆಸ್ಟ್ ನಲ್ಲೇ ಗೆಲುವು ಕಂಡರು. ಎರಡನೇ ಟೆಸ್ಟ್ ನಲ್ಲೂ ಬಾರತ ಪ್ರಾಬಲ್ಯ ಮೆರೆಯಿತು, ವೆಸ್ಟ್ ಇಂಡೀಸ್ ಅಂತಹ ಬಲಾಡ್ಯ ತಂಡ ಅಲ್ಲದ್ದಿದ್ಡರೂ ಬಾರತ ತಂಡ ಪ್ರದರ‍್ಶನದಲ್ಲಿ ಸುದಾರಣೆ ಕಂಡಿರುವುದು ದಿಟ. ಬಾರತ ಒಳ್ಳೆಯ ಬೌಲರ್ ಗಳಿಲ್ಲದೆ ದಶಕಗಳ ಕಾಲ ಸೊರಗಿದೆ. ಹಾಗಾಗಿ ಒಬ್ಬ ಬೌಲರ್ ಕೋಚ್ ಆಗಿರುವುದು ಎಶ್ಟು ಉಪಯುಕ್ತ ಎಂದು ಅಶ್ವಿನ್ ರ ಪ್ರದರ‍್ಶನದಿಂದ ತಿಳಿಯುತ್ತದೆ. ಮೊದಲ ಇನ್ನಿಂಗ್ಸ್ ನಲ್ಲಿ ಒಂದೂ ವಿಕೆಟ್ ಪಡೆಯಲಾಗದ್ದಿದ್ದ ನನಗೆ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆಯಲು ಕುಂಬ್ಳೆ ಅವರ ಮಾರ‍್ಗದರ‍್ಶನವೇ ಕಾರಣ ಎಂದು ಅಶ್ವಿನ್ ಅವರು ಹೇಳಿರುವುದು ಕುಂಬ್ಳೆ ಅವರ ಕೋಚಿಂಗ್ ಸಾಮರ‍್ತ್ಯಕ್ಕೆ ಸಾಕ್ಶಿಯಾಗಿದೆ.
ಒಬ್ಬ ಬೌಲರ್ ಆಗಿ, ನಾಯಕನಾಗಿ, ಆದ್ಯಕ್ಶನಾಗಿ ಕ್ರಿಕೆಟ್ ನ ಎಲ್ಲಾ ರಂಗದಲ್ಲೂ ಗೆಲುವು ಕಂಡಿರುವ ನಮ್ಮ ಹೆಮ್ಮೆಯ ಕನ್ನಡಿಗ ಕುಂಬ್ಳೆ ಅವರು ಕೋಚ್ ಆಗಿ ಕೂಡ ಒಳ್ಳೆಯ ಆರಂಬ ಪಡೆದ್ದಿದ್ದಾರೆ. ಕೋಚ್ ಆಗಿಯೂ ಅವರು ಬಾರತಕ್ಕೆ ಇನ್ನಶ್ಟು ಯಶಸ್ಸು ತಂದು ಕೊಡಲಿ ಎಂದು ನಾವೆಲ್ಲ ಹಾರೈಸೋಣ.
(ಚಿತ್ರಸೆಲೆ: sportskeeda.com, indiatoday.in)
ಇತ್ತೀಚಿನ ಅನಿಸಿಕೆಗಳು