ವರ‍್ಶಕ್ಕೊಂದು ಅವ್ವಂದಿರ ದಿನವಂತೆ

– ಚಂದ್ರು ಎಂ ಹುಣಸೂರು.

avva

ವರ‍್ಶಕ್ಕೊಂದು ಅವ್ವಂದಿರ ದಿನವಂತೆ
ನನಗೆ ಅವ್ವನಿಲ್ಲದ ಕ್ಶಣ ಎದೆ ಮಿಡಿದಿತ್ತೆ?
ಪ್ರತಿದಿನ ಶನಿವಾರ ಸಂಜೆ ಯಾವಾಗ ಬರುತ್ತದೋ
ಓಡಿ ಬರುವೆ ಕರ ಹಸ ಕಂಡ್ಹಂಗೆ, ಈ ನಾಡಿನಿಂದ ಆ ಗೂಡಿಗೆ
ಅವಳ ಮೊಗನೋಡಿ ತಡಣಿಕಾಳಿನ ಕೆಂಪು ಉಪ್ಪೆಸರಿನ ಮುದ್ದೆಗೆ
ಕರಿ ಕಂಬಳಿಯ ಹೊದ್ದಿ ಅವಳ ಕತೆಕೇಳಲು ಕುತೂಹಲ
ಒಂದೊಂದು ಮಾತು, ಆ ರಾಗ ನೆನೆದು ಕರುಳು ಸ್ಪರ‍್ದೆ ಹೂಡುತ್ತದೆ
ಆಚೆಬರುವ ಸೂಚನೆಯಂತೆ, ಕರಗಿಹೋಗುತಿಹ ಕರ‍್ಪೂರದಂತೆ

ತಿಂಗಳಿಗೊಮ್ಮೆ ಬಾಣಸಿಗ, ಸೂತಕದ ಯೋಗ
ನನ್ನ ಪ್ರಯೋಗ ತಿಂದು ಪರಿಪರಿ ವರ‍್ಣನೆ
ಒಮೊಮ್ಮೆ ಸೀರೆ ತೊಳೆದಾಗ, ಜೊತೆಗೂಡಿ ಊರ ಕೆರೆಯಲ್ಲಿ
ಕೋಟಿ ಸೀರೆ ಕೊಡಿಸಿದಕ್ಕಿಂತ ಕುಶಿ, ಯಾಕವಳು ಹೀಗೆ?
ನಾನೇನು ಮಾಡಿದೆ ಅವಳಿಗಾಗಿ, ಮಾಡಬೇಕಾದ್ದಿದೆ ಜೀವತೇದಿ

ವ್ಯಾಸಾಂಗಕ್ಕಾಗಿ ಮನೆಬಿಡುವಾಗ, ಸಂತಸ ಸಂಕಟ
ಬಂದ ಹನಿಗಳು ಇಂದು ನೆನಪಾಗಿ ಮಗುವಾಗಲೇ
ಮರಳಿ ಅವಳ ಮಡಿಲಲ್ಲಿ ಮಲಗಿ ಜಗಮರೆಯಲೇ
ಸೆರಗಗಂಟ ಬಿಚ್ಚಿ ಕೊಡುವಳು, ದೂಳಾಗಿದ್ದ ನೋಟುಗಳು
ಹತ್ತು ರುಪಾಯಿಯ ಎಂಟು, ಐವತ್ತರ ಎರಡು
ಮುದುರಿದ್ದವು, ನಾಲ್ಕು ಬಾರಿ ಮಡಿಸಿದ್ದವಾಗಿದ್ದವು
ಕಳೆಕಿತ್ತು ದುಡಿದ ಬೆವರ ಹನಿಗಳ, ಅವ್ವಾ, ಕೂಗುವೆ
ಕೂತಲ್ಲಿಯೇ, ಓಡಿಹೋಗಬೇಕು ಎಲ್ಲಬಿಟ್ಟು, ಮೈಸೂರು
ಮಹಾರಾಜರ ಆಶ್ರಯದಲ್ಲಿದ್ದರೂ ಅವಳಿಗೇಕೋ ತಲ್ಲಣವಂತೆ

ನನ್ನವ್ವ ಮನೆಯ ಬಿತ್ತಿಯ ಬಾವಚಿತ್ರದ ಮಿರಮಿನುಗೋ
ವೈಬೋಗದ ಲಕ್ಶ್ಮೀ, ವೀಣೆ ಸರಸ್ವತಿ, ನಗುವ ಪಾರ‍್ವತಿ
ಹತ್ತಾರು ಕೈಯಿರುವ ಶ್ರೀಮಂತ ದೇವತೆಗಳಂತಲ್ಲ
ಹರಿದ ಸೀರೆ, ಶ್ರಮದಿ ಸುಕ್ಕು ಗಂಟಿದ ಮೋರೆ
ಬರಿಯ ಕಿವಿ, ತೊಟ್ಟ ಚಪ್ಪಲಿ ಸವೆದು
ಹಿಮ್ಮಡಿಯಲ್ಲಿ ಚಂದ್ರತಾರೆ ಮೂಡಿ, ಇನ್ನೂ ಹಾಗೆ ಇರುವ
ಗರಗರ ತಿರುಗಿ, ಮಳೆಯಲ್ಲೂ, ಕೊರೆವ ಚಳಿಯಲ್ಲೂ
ಹಾಲು ಹ್ರುದಯವೊಂದಿರುವ ಮಾನವತಾದಾರೆ
ಎಲ್ಲರಲ್ಲ ನನಗೆ, ಅವಳೇ ನನ್ನ ದೇವತೆ, ನನ್ನ ದೇವತೆ

ನವ ಮಾಸದಿ ನರಕವಕಂಡು
ಕರುಳ ಕುಡಿಗಾಗಿ ಕೋಟಿ ಕಶ್ಟವ ನೂಕಿ
ಹಿಡಿ ಹಿಟ್ಟಿಗೆ ಕುರಿಕಾದು ಜೀವತೇದು ನನ್ನೆದುರು ನಗುತಿರುವ
ಅವಳಲ್ಲಿ ಮರಳಿ ಮಗುವಾಗಲೇ, ಬೇಡ, ಬೇಡ
ಆ ದಿನಗಳಲ್ಲಿ ಅವಳ ಆ ನೋವು ಮತ್ತೆ ಬರೋದು ಬೇಡ
ನೆರಕೆಯ ಒಳಗೆ ಗಂಡಮಕ್ಕಳ ತಡೆದು, ಮಳೆಯಲ್ಲಿ ಮಡಿಲ ಹೊಡ್ಡಿ
ಹೇಗೋ ಇಶ್ಟುವರ‍್ಶದ ಬಳಿಕ ತುಸು ನೆಮ್ಮದಿ, ಹಾಗೆ ಇರಲಿ ನನ್ನವ್ವ

ಕೂಲಿ ಇನ್ನೂ ಮಾಡುತಿರುವವಳ ಆಸೆ ಏನು ಗೊತ್ತೇ?
ನನ್ನ ಬಾಳು ನಗಬೇಕಂತೆ, ಬೀದಿಕೂಲಿಯಲ್ಲಿ ನನ್ನ ನೆರಳು
ಸುಳಿದಾಡಬಾರದಂತೆ, ಆಗಲಿ ಅವಳ ಆಸೆಯಂತೆ ಆಗಲಿ
ಲೆಕ್ಕ ಗೊತ್ತಿಲ್ಲದೆ ವಾರಗಟ್ಟಲೇ ಕೂಲಿಮಾಡಿ ಚಿಲ್ಲರೆ ಚಿಲ್ಲರೆ ಅರ‍್ಪಿಸಿದವಳಿಗೆ
ಈ ಬಾಳ ಸಮರ‍್ಪಿಸುವೆ, ಜ್ನಾನ ಜ್ಯೋತಿಯಲಿ ಬೆಳಕು ಉಂಡು
ಅವಳನ್ನು ಅಂಗೈಮೇಲಣ ನವಜಂತುವಂತೆ ಜೋಪೀಕರಿಸಿ, ಕ್ರುತಜ್ನನಾಗುವೆ

ಬಟ್ಟೆ ದಿಂಬಿನ ಉಳಿತಾಯ ಕಾತೆಯಲಿ ಒಂದೊಂದು ರುಪಾಯಿ ಚಿನ್ನ
ರಕ್ತವ ಮೇಣವಾಗಸಿ ಮೈ ಬತ್ತಿಯಾಗಿಸಿ ಅವಳು ಬತ್ತಿಹೋಗುತ್ತಿದ್ದರೂ
ಮೇಣದಂತೆ ಕರಗಿ ಕೊರಗಿ ಜ್ಯೋತಿಯಾದಳು, ಜೀವನ ಗೀತೆಯಾದಳು
ಸಹನೆ, ತ್ಯಾಗ ಪದಗಳು ಸಣ್ಣಗಾದವು, ಸಾಲದಾದವು, ಸೋತುಹೋದವು
ಇವಳ ಮಮತೆಯ ಹಿಂದೆ, ಸಾಲು ದೇವಾನುದೇವತೆಗಳ ಮಂದೆ

ಉಸಿರಲ್ಲಿಡುತ್ತೇನೆ ಹಸಿದಾಗ ಹಾಲುಣಿಸಿದ ಮಾತೆಗೆ
ಪಾದಗಳ ಪೂಜಿಸುತ್ತೇನೆ, ಹೊತ್ತೆನ್ನದೆ ಎದೆಯೊಡ್ಡಿದವಳಿಗೆ
ಹಣೆಗೆ ಮುತ್ತಿಟ್ಟು ಹರಸಿ ಬೆಳಸಿದವಳ
ಒಳ ಹ್ರುದಯದಲ್ಲಿಟ್ಟು ಎನ್ನೊಡಲು ಮೌನವಾಗುವವರೆಗೂ
ಅವಳಿಗೆ ಊರುಗೋಲಾಗಿ ತಂಪು ಬೀಸಣಿಕೆಯಾಗುವೆ

ಅವ್ವ ‘ಅನ್ನಾ’ ಎನ್ನುವಾಗಿನ ಸೊಲ್ಲು ಇಂದಿಗೂ ಹಾಗೆ ಎದೆಯಲ್ಲಿದೆ
ಎಂದೆಂದೂ ಇರುತ್ತದೆ, ಇಲ್ಲಿಂದ ಬಸ್ಸತ್ತುವಾಗ ನನ್ನವ್ವ ಸುಗ್ಗಿಯಾಗಿ ಕೈಚಾಚಿ
ಸುಕವಾಗುತ್ತಾಳೆ, ಬರುವೆ ಇನ್ನೇನೋ ವಸಿ ಹೆಸರು ಪಡೆದು
ನೀ ಹೇಳಿದಂತೆ, ನಿಜಕೂ ನಿನಮಗನಾಗಿ ಸಾರ‍್ತಕನಾಗಬೇಕು
ಹಣಕಿಂತ ಸರ‍್ವಕಾಲಕ್ಕೂ ಗುಣತಾನೇ ಮುಕ್ಯ ಅಂದಿದ್ದೇ ಆವತ್ತು ನೀನು
ಅದರತ್ತ ನನ್ನ ಹೆಜ್ಜೆ, ನಗಲವ್ವ ನೀನು, ಬಗವಂತ ಏನಾದರೂ ನೀಡುವಂತಿದ್ದರೆ
ನಿನಗೊಳ್ಳೆ ಆರೋಗ್ಯ ನೀಡಿ ನೀನು ಶಕ್ತಳಾಗೇ ಇರಬೇಕೆಂದು ನನ್ನ ಆಸೆ
ಎಂದೆಂದೂ ನೀನು ಶಕ್ತಳಾಗೆ ಇರಬೇಕು, ನಗುತ್ತಿರಬೇಕು, ಸರಿನವ್ವಾ

(ಚಿತ್ರ ಸೆಲೆ:  takeaslowbreath.blogspot.in )Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s