ಸಣ್ಣಕತೆ: ತಾನೊಂದು ಬಗೆದರೆ…
– ಕೆ.ವಿ.ಶಶಿದರ.
ಬದುಕಲು ಉತ್ಕಟ ಆಸೆ ಆ 40 ವರ‍್ಶ ಪ್ರಾಯದವನಿಗೆ. ಪ್ರಾಣವನ್ನಾದರೂ ಒತ್ತೆಯಿಟ್ಟು ಬದುಕಿಸಿಕೊಳ್ಳಬೇಕು ಎಂಬ ಕಾತರ ಹೆತ್ತವರಿಗೆ. ದುಡ್ಡಿಗೆ ಬರವಿರಲಿಲ್ಲ. ಲ್ಯಾಬ್ ರಿಪೊರ‍್ಟ್ ಆದಾರದ ಮೇಲೆ, ತಮ್ಮ ಪ್ಯಾಮಿಲಿ ಡಾಕ್ಟರ್ ಸಲಹೆಯಂತೆ ವಿದೇಶದಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹೊರಟಿದ್ದರು.
ಏರ್‍ಪೋರ‍್ಟ್ ರಸ್ತೆ. ಹಲವು ಸಂಗಟನೆಗಳಿಂದ ರಸ್ತೆ ತಡೆ. ಹಾಗೂ ಹೀಗೂ ದಾರಿ ಮಾಡಿಕೊಂಡು ಏರ್‍ಪೋರ‍್ಟ್ ತಲುಪಿದರೂ ಪ್ರಯೋಜನವಾಗಲಿಲ್ಲ. ಬೋರ‍್ಡಿಂಗ್ ಕೌಂಟರ್ ಬಂದ್ ಆಗಿತ್ತು. ವಾಪಸ್ಸು ದಾರಿಯುದ್ದಕ್ಕೂ ನೌಕರರ ಶಾಹಿಯ ಮೇಲೆ ವಾಚಾಮಗೋಚರ ಬೈಗುಳ ಸುರಿಮಳೆಗೈದಾಯಿತು. ಮನಸೋ ಇಚ್ಚೆ ಶಪಿಸಿದ್ದಾಯಿತು. ಮನೆಗೆ ಹಿಂದಿರುಗುವಶ್ಟರಲ್ಲ್ಲಿ ಎಲ್ಲರೂ ಹೈರಾಣಾಗಿದ್ದರು.
ಅವ ಉಸ್ಸೆಂದು ಸೋಪಕ್ಕೆ ಒರಗಿ ಕುಳಿತು ಟಿವಿ ಆನ್ ಮಾಡಿದ. ‘ಬ್ರೇಕಿಂಗ್ ನ್ಯೂಸ್’ -‘ಬೆಂಗಳೂರು ಕ್ಯಾಲಿಪೋರ‍್ನಿಯ…’ ಅವನ ಕಿವಿ ಚುರುಕಾಯಿತು. ‘…ನಡುವಿನ ಏರ್ ಇಂಡಿಯ ವಿಮಾನ ನಾಪತ್ತೆ, ಉಗ್ರರ ಕೈವಾಡದ ಶಂಕೆ’ ಕೂತಲ್ಲೇ ಅವ ನಿಟ್ಟಿಸಿರು ಬಿಟ್ಟ. ಪುನರ‍್ಜನ್ಮ ಸಿಕ್ಕಂತಾಗಿತ್ತು.
ಕರೆಗಂಟೆ ಸದ್ದಾಯಿತು. ನಾಲ್ಕಾರು ಜನ ತಪ್ಪಿತಸ್ತರಂತೆ ತಮ್ಮ ಮೈಯನ್ನು ಕುಬ್ಜವಾಗಿಸಿಕೊಂಡು ನಮ್ರತೆಯಿಂದ ಒಳಬಂದರು. ದೇಣಿಗೆಗಾಗಿ ಬಂದವರು ಎಂದುಕೊಂಡ. ಬಂದವರೆಲ್ಲಾ ಇವನಿಗೆ ಕೈಮುಗಿದು ನಮಸ್ಕರಿಸಿ ‘ನಾವುಗಳು ಡಯಾಗ್ನಿಸ್ಟಿಕ್ ಲ್ಯಾಬ್‍ನಿಂದ ಬಂದಿದ್ದೇವೆ ಸಾರ್. ಬೇರೆಯವರ ರಿಪೂರ‍್ಟ್ ತಪ್ಪಾಗಿ ನಿಮ್ಮ ಕೈಸೇರಿದೆ. ನಿಮಗೆ ನೀಡಿದ ರಿಪೊರ‍್ಟ್ ನಿಮ್ಮದಲ್ಲ. ನಿಮ್ಮ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲ. ಆರೋಗ್ಯವಂತರು ನೀವು. ದಯವಿಟ್ಟು ನಮ್ಮನ್ನು ಕ್ಶಮಿಸಿ. ತಮಗೆ ಸಂಬಂದಿಸಿದ ಲ್ಯಾಬ್ ರಿಪೊರ‍್ಟ್ ಇಲ್ಲಿದೆ. ದಯವಿಟ್ಟು ಇದನ್ನು ಸ್ವೀಕರಿಸಿ ತಪ್ಪನ್ನು ಮನ್ನಿಸಿ’ ಕಳಕಳಿಯಿಂದ ಬೇಡಿದರು.
ಅವ ಕುಸಿದ, ಹ್ರುದಯಾಗಾತದಿಂದ.
(ಚಿತ್ರ ಸೆಲೆ: passpoted.com)
ಇತ್ತೀಚಿನ ಅನಿಸಿಕೆಗಳು