ಟೊರೆಂಟ್: ಏನಿದು? ಅದು ಹೇಗೆ ಕೆಲಸಮಾಡುತ್ತೆ?

– ವಿಜಯಮಹಾಂತೇಶ ಮುಜಗೊಂಡ.

BitTorrent_big

ನೀವು ಮಿಂಬಲೆಯ(internet) ಬಳಸುಗರಾಗಿದ್ದಲ್ಲಿ ಆನ್‍ಲೈನ್ ಸಿನೆಮಾ ನೋಡುವುದು ಮತ್ತು ಇಳಿಸಿಕೊಳ್ಳುವುದು ನಿಮ್ಮ ಆನ್‍ಲೈನ್ ಚಟುವಟಿಕೆಗಳ ಬಾಗ ಆಗಿರಲೇಬೇಕು. ಮಿಂಬಲೆಯಿಂದ ಸಿನೆಮಾಗಳನ್ನು ಇಳಿಸಿಕೊಳ್ಳುವುದು ಹೇಗೆಂದು ನಿಮಗೆ ಗೊತ್ತಿರಬಹುದು. ಹಲವರು ಟೊರೆಂಟ್ ತಾಣಗಳಿಂದ ಸಿನೆಮಾ ಅತವಾ ಪುಕ್ಕಟೆ ಮೆದುಸರಕುಗಳನ್ನು(software) ಇಳಿಸಿಕೊಂಡು ಬಳಸಿರಬಹುದು. ಅದು ಎಶ್ಟರ ಮಟ್ಟಿಗೆ ಸರಿ-ತಪ್ಪು ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಇತ್ತೀಚಿಗೆ ಟೊರೆಂಟ್ ಮಿಂದಾಣಗಳು ಒಂದರ ಹಿಂದೊಂದು ಮುಚ್ಚುತ್ತಿರುವ ಸುದ್ದಿಯನ್ನು ನೀವು ಕೇಳಿರಬಹುದು. ಏನಿದು ಟೊರೆಂಟ್? ಅದರ ಕೆಲಸ ಮಾಡುವ ಬಗೆ ಏನು? ಅದರ ಬಳಕೆಯ ಮೇಲೆ ಕಡಿವಾಣ ಇದೆಯೇ? ಅದರ ಬಳಕೆ ಕಾನೂನಿನ ಕಟ್ಟಲೆಗಳಿಗೆ ಮೀರಿದ್ದೇ? ಅದರ ಬಳಕೆ ಎಶ್ಟು ನಂಬಿಕೆಗೆ ಅರ‍್ಹವಾದುದು? ಇಂತಹ ಹತ್ತು ಹಲವು ಕೇಳ್ವಿಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

‘ಟೊರೆಂಟ್’ ಹಾಗೆಂದರೇನು?

ಟೊರೆಂಟ್ ಅತವಾ ಬಿಟ್‍ಟೊರೆಂಟ್(BitTorrent) ಎನ್ನುವುದು ಮಿಂಬಲೆಯಲ್ಲಿ ಕಡತಗಳನ್ನು ಹಂಚಿಕೊಳ್ಳಲು ಇರುವ ಒಂದು ಮಿಂಕಟ್ಟಲೆ(protocol) ಆಗಿದೆ. ನೀವು ಮಿಂಬಲೆಯಲ್ಲಿ ಈಗಾಗಲೇ ಕಡತಗಳನ್ನು ಇನ್ನೊಬ್ಬರೊಂದಿಗೆ ಗೂಗಲ್ ಡ್ರೈವ್‍ ಅತವಾ ಮಿಂಚೆಯ ಮೂಲಕ ಹಂಚಿಕೊಂಡಿರುತ್ತೀರಿ. ಇದೇ ರೀತಿ ಟೊರೆಂಟ್ ಕೂಡ ಕಡತಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಬೇರೆ ಬಗೆಯ ಮಿಂಕಟ್ಟಲೆ ಆಗಿದೆ. ಕಡತಗಳನ್ನು ಮಂದಿಯ ನಡುವೆ ಹಂಚಿ ಮಂದಿಯನ್ನೇ ಕಡತಗಳ ನೀಡುಗರು ಮತ್ತು ಪಡೆಯುಗರನ್ನಾಗಿ ಮಾಡಲಾಗುತ್ತದೆ. ಅಂದರೆ ಇಲ್ಲಿ ಕಡತವನ್ನು ನೀಡುವ ಕೆಲಸವನ್ನು ಬಳಸುಗರೇ ಮಾಡುತ್ತಾರೆ.

ಟೊರೆಂಟ್‍ ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಬಿಟ್‍ಟೊರೆಂಟ್ ಮಿಂಕಟ್ಟಲೆಯನ್ನು ಕಡತಗಳನ್ನು ಹಂಚಿಕೊಳ್ಳಲು ಮಂದಿಯ ನಡುವೆ ಇರುವ ಒಂದು ಬಗೆಯ ಬೆಸುಗೆ ಎಂದೇ ಹೇಳಬಹುದು. ಟೊರೆಂಟ್ ಬಳಸಿ ಕಡತಗಳನ್ನು ಪಡೆಯಲು ಅತವಾ ಹಂಚಲು ಟೊರೆಂಟ್-ಕೊಳ್ವೆಣಿ(torrent client) ಎನ್ನುವ ಸಣ್ಣ ಮೆದುಸರಕನ್ನು ಬಳಸಲಾಗುತ್ತದೆ. ಇದು ಎಣ್ಣುಕಗಳ ನಡುವೆ ಬಿಟ್‍ಟೊರೆಂಟ್ ಮಿಂಕಟ್ಟಲೆಯನ್ನು ಅಣಿಗೊಳಿಸಲು ನೆರವಾಗುತ್ತದೆ.

ಕಡತಗಳನ್ನು ಇಳಿಸಿಕೊಳ್ಳಲು ಅತವಾ ಹಂಚಿಕೊಳ್ಳಲು ಮೊದಲು ಟೊರೆಂಟ್ ಕಡತವೊಂದು ಬೇಕಾಗುತ್ತದೆ. ಇದು ಸಣ್ಣ ಅಳತೆಯ ಕಡತವಾಗಿದ್ದು ಸಾಮಾನ್ಯವಾಗಿ .torrent ಬಗೆಯದಾಗಿರುತ್ತದೆ. ಟೊರೆಂಟ್ ಕಡತದಲ್ಲಿ ನೀವು ಹಂಚಿಕೊಳ್ಳಬೇಕಾಗಿರುವ ಕಡತದ ಕುರಿತಾದ ಮಾಹಿತಿ ಮತ್ತು ಟ್ರ್ಯಾಕರ್ ವಿವರಗಳು ಇರುತ್ತವೆ.

ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ(BitTorrenting process) ಪಾಲ್ಗೊಳ್ಳುವ ಎಣ್ಣುಕಗಳನ್ನು ಅವುಗಳ ಕೆಲಸಗಳ ಆದಾರದ ಮೇಲೆ ಮೂರು ಬಗೆಯಲ್ಲಿ ಬೇರ‍್ಪಡಿಸಬಹುದಾಗಿದ್ದು, ಅವು ಹೀಗಿವೆ.

  1. ಇಂಡೆಕ್ಸರ್‍ಗಳು(Indexers) ಅತವಾ ಟೊರೆಂಟ್ ಮಿಂದಾಣಗಳು – ಇಂಡೆಕ್ಸರ್‍ಗಳು ಟೊರೆಂಟ್ ಕಡತಗಳನ್ನು ಒಟ್ಟಾಗಿ ಕಲೆಹಾಕಿರುವ ಮಿಂದಾಣಗಳಾಗಿದ್ದು, ಸಾಮಾನ್ಯವಾಗಿ ಬಳಸುಗರು ಕಟ್ಟಿರುವ ಕೂಟಗಳಂತೆ ಕೆಲಸಮಾಡುತ್ತವೆ. ಇಲ್ಲಿ ಬಳಸುಗರು ತಮ್ಮದೇ ಆದ ಹೊಸ ಟೊರೆಂಟ್ ಕಡತಗಳನ್ನು ಸೇರಿಸಬಹುದು ಮತ್ತು ಇಳಿಸಿಕೊಳ್ಳಬಹುದು. ಈ ಕೂಟಗಳಿಗೆ ತಮ್ಮದೇ ಆದ ಕಟ್ಟಲೆಗಳಿರುತ್ತವೆ.
  2. ನೀಡುಗ(Seeders) – ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ ನೀಡುಗರು ಕಡತಗಳನ್ನು ಹಂಚುತ್ತಾರೆ.
  3. ಪಡೆಯುಗರು(Leechers) – ಬಿಟ್‍ಟೊರೆಂಟಿಂಗ್ ಒಪ್ಪೆಸಕದಲ್ಲಿ ಕಡತವನ್ನು ಇಳಿಸಿಕೊಳ್ಳುವವರಾಗಿದ್ದಾರೆ.
  4. ಟ್ರ್ಯಾಕರ್‍ಗಳು(Trackers) – ಇವು ಒಂದು ವಿಶೇಶ ಬಗೆಯ ಊಳಿಕಗಳಾಗಿದ್ದು( Server) ಕಡತ ಹಂಚಿಕೆಯಲ್ಲಿ ಪಾಲ್ಗೊಂಡ ಎಣ್ಣುಕಗಳ ನಡುವೆ ಅರುಹು(communication) ಉಂಟುಮಾಡುತ್ತವೆ. ಇವು ಬಳಸುಗರ ಎಣ್ಣುಕದಲ್ಲಿರುವ ಕಡತದ ತುಣುಕುಗಳ ಮಾಹಿತಿಯನ್ನು ಕಲೆಹಾಕುತ್ತವೆ.

ಬಿಟ್‍ಟೊರೆಂಟ್ ಒಪ್ಪೆಸಕ ಈ ಹಂತಗಳಲ್ಲಿ ನಡೆಯುತ್ತದೆ.

  • ಮೊದಲು ಮಂದಿಯ ನಡುವೆ ಹಂಚಬೇಕಾಗಿದ್ದ ಕಡತವನ್ನು ಸಣ್ಣ ಸಣ್ಣ ತುಣುಕುಗಳಾಗಿ ಪಾಲ್ಗೊಳ್ಳುಗರ ನಡುವೆ ಹಂಚಲಾಗುತ್ತದೆ. ಯಾವ ಬಳಸುಗರ ಬಳಿ ಕಡತದ ಯಾವ ತುಣುಕು ಇದೆ ಎನ್ನುವುದರ ಮಾಹಿತಿಯನ್ನು ಟ್ರಾಕರ್‍ಗಳು ಹಿಡಿದಿಟ್ಟಿರುತ್ತವೆ.
  • ಪಡೆಯುಗರಿಗೆ ಬೇಕಾದ ಕಡತದ ತುಣುಕು ಒಪ್ಪೆಸಕದಲ್ಲಿ ಪಾಲ್ಗೊಂಡ ಯಾವ ಬಳಸುಗರ ಬಳಿ ಇದೆ ಎಂದು ತಿಳಿದ ಟ್ರ್ಯಾಕರ್‍ಗಳು ಅವರಿಗೆ ಸರಿಯಾದ ನೀಡುಗರತ್ತ ದಾರಿತೋರುತ್ತವೆ. ಅಲ್ಲಿಂದ ತಮಗೆ ಬೇಕಾದ ತುಣುಕುಗಳನ್ನು ಪಡೆಯುಗರು ಇಳಿಸಿಕೊಳ್ಳುತ್ತಾರೆ.
  • ಹಲವು ಬಳಸುಗರಿಂದ ಕಡತಕ್ಕೆ ಬೇಕಾದ ಎಲ್ಲ ತುಣುಕುಗಳನ್ನು ಪಡೆಯುವ ಪಡೆಯುಗರು ತಮ್ಮಲ್ಲಿರುವ ತುಣುಕುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ನೀಡುಗರಾಗುತ್ತಾರೆ.

Torrentcomp_small

ಟೊರೆಂಟ್ ಹೇಗೆ ಬೇರೆಯಾಗಿದೆ?

ನೀವು ಗೂಗಲ್ ಡ್ರೈವ್ ಅತವಾ ಬೇರೆ ಮಿಂದಾಣಗಳಿಂದ ಕಡತಗಳನ್ನು ಇಳಿಸಿಕೊಳ್ಳುವಾಗ ನಿಮಗೆ ಬೇಕಾಗಿರುವ ಕಡತವನ್ನು ಮಿಂಬಲೆಯ ಊಳಿಕಗಳು(servers) ಬಿಟ್‍ಗಳೆಂಬ ಸಣ್ಣ ಸಣ್ಣ ತುಣುಕುಗಳಲ್ಲಿ ನಿಮ್ಮ ಎಣ್ಣುಕಕ್ಕೆ(computer) ಸಾಗಿಸುತ್ತವೆ(transfer). ಮಿಂದಾಣಗಳನ್ನು ಹಲವು ಬಳಸುಗರು ಜಗತ್ತಿನ ಬೇರೆಬೇರೆ ಕಡೆಯಿಂದ ತಲುಪುಬಹುದು ಮತ್ತು ಒಂದೇ ಕಡತವನ್ನು ಹಲವು ಮಂದಿ ಇಳಿಸಿಕೊಳ್ಳಬಹುದಾಗಿದೆ.  ಎಲ್ಲರಿಗೂ ಬೇಕಾದ ಮಾಹಿತಿಯನ್ನು ನೀಡುವುದು ಮತ್ತು  ಕಡತವನ್ನು ಎಲ್ಲರಿಗೆ ತಲುಪಿಸುವ ಕೆಲಸವನ್ನು ಮಿಂದಾಣ ಒಟ್ಟೊಟ್ಟಿಗೇ ಮಾಡುತ್ತಿರುತ್ತದೆ. ಕೆಲವೊಮ್ಮೆ ಮಿಂದಾಣದ ಊಳಿಕದ ಸೊಮ್ಮುಗಳಿಗೆ(resources) ಮೀರಿದಶ್ಟು ಮಂದಿ ಅದನ್ನು ಒಟ್ಟಿಗೆ ಬಳಸುತ್ತಿದ್ದರೆ ಅತವಾ ಕಡತಗಳನ್ನು ಇಳಿಸಿಕೊಳ್ಳುತ್ತಿದ್ದರೆ ಅಂತಹ ಹೊತ್ತಿನಲ್ಲಿ ಮಿಂಬಲೆಯಲ್ಲಿರುವ ತಾಣಗಳು ಮಂಕಾಗುವ(hang) ಅತವಾ ನಿಂತುಹೋಗುವ(crash) ಸಾದ್ಯತೆಗಳಿರುತ್ತವೆ. ಹೀಗೆ ತಾಣಗಳು ನಿಂತುಹೋದಾಗ ಕಡತವನ್ನು ಇಳಿಸಿಕೊಳ್ಳುವ ಎಲ್ಲ ಬಳಸುಗರೂ ಕೆಟ್ಟ ಕಡತಗಳನ್ನು ಪಡೆಯಬಹುದು ಅತವಾ ಇಳಿಕೆ ನಿಂತುಹೋಗಬಹುದು.

image277

ಟೊರೆಂಟ್‍ನಲ್ಲಿ ಕಡತವನ್ನು ಸಣ್ಣ ತುಣುಕುಗಳಲ್ಲಿ ಒಡೆದು ಬಳಸುಗರಿಗೆ ಹಂಚಿ, ಬಳಿಕ ಎಲ್ಲ ಬಳಸುಗರು ಅದನ್ನು ಪಡೆಯಲು ಅನುವು ಮಾಡಿಕೊಡುವ ಮೂಲಕ ಇಲ್ಲಿ ಕಡತವನ್ನು ಹಂಚುವ ಹೊಣೆ ಒಂದೇ ಊಳಿಕದ ಬದಲು ಹಲವು ಬಳಸುಗರ ನಡುವೆ ಹಂಚಿಹೋಗಿರುತ್ತದೆ. ಇದರಿಂದಾಗಿ ಊಳಿಕದ ಮೇಲಿನ ಹೊರೆ ತಪ್ಪುತ್ತದೆ. ನೀಡುಗರ ಮತ್ತು ಪಡೆಯುಗರ ನಡುವೆ ಕಡತದ ಹಂಚಿಕೆ ಆಗುವುದರಿಂದ ಕಡತವನ್ನು ಹಂಚುವ ಊಳಿಕದ ಕೆಲಸ ಕೊಳ್ವೆಣಿಗಳೇ ಮಾಡುತ್ತವೆ. ಇದರಿಂದ ಮಿಂದಾಣದ ಊಳಿಕಗಳು ನಿಂತುಹೋಗುವ ಅತವಾ ಮಂಕಾಗುವ ತಲೆನೋವು ಇರುವುದಿಲ್ಲ.

ಟೊರೆಂಟ್‍ಗಳ ಬಳಕೆ ಕಾನೂನಿನ ಪ್ರಕಾರ ತಪ್ಪೇ?

ಟೊರೆಂಟ್ ಮಿಂಕಟ್ಟಲೆಯ ಬಳಕೆಗೆ ಕಾನೂನಿನ ಕಟ್ಟಲೆಯಲ್ಲಿ ಯಾವುದೇ ತಡೆವುಗಳಿಲ್ಲ. ಇದು ಕಡತಗಳ ಹಂಚಿಕೆ ಮಾಡಲು ಇರುವ ಸುಲಬದ ಮತ್ತು ಹೆಚ್ಚು ಅಳವುಳ್ಳ(efficient) ಒಂದು ಮಿಂಕಟ್ಟಲೆಯಾಗಿದ್ದು, ಹಲವಾರು ಕಾನೂನಿಗೆ ಒಳಪಡುವ ಟೊರೆಂಟಿಂಗ್ ಸೇವೆಗಳಿವೆ. ಆದರೆ ಕೆಲವು ಟ್ರ್ಯಾಕರ್‍ಗಳು ಹಂಚಿಕೆಯಾಗುತ್ತಿರುವ ಕಡತದ ಹಕ್ಕುಗಳ ಕುರಿತ ಮಾಹಿತಿಯನ್ನು ಕಲೆಹಾಕುವುದಿಲ್ಲ. ಇದರಿಂದಾಗಿ ಕಾನೂನಿನ ಅಡಿಯಲ್ಲಿ ಇದರ ಬಳಕೆಯ ಕುರಿತು  ಸ್ಪಶ್ಟತೆ ಇಲ್ಲ.

ಕೆಲವು ಇಂಡೆಕ್ಸರ್‍ಗಳು .torrent ಬಗೆಯ ಟೊರೆಂಟ್ ಕಡತಗಳನ್ನು ಮಾತ್ರ ಹಂಚುತ್ತವೆ ಮತ್ತು ಹಕ್ಕುಗಳನ್ನು ಕಾಯ್ದಿಟ್ಟ ಬರಹಗಳು, ಹೊತ್ತಗೆಗಳು ಮತ್ತು ಸಿನೆಮಾಗಳು ಅವರ ಊಳಿಕದಲ್ಲಿ ಇರುವುದಿಲ್ಲ. ಹಕ್ಕುಗಳಿಗೆ ಒಳಪಡುಬಹುದಾದ ಕಡತಗಳನ್ನು ಹಂಚುವಲ್ಲಿ ಮತ್ತು ಪಡೆಯುವಲ್ಲಿ ಬಳಸುಗರು ನೇರವಾಗಿ ತೊಡಗಿರುವುದರಿಂದ ಇವುಗಳ ಹಕ್ಕುಗಳನ್ನು ಕಾಪಾಡುವ ಹೊಣೆ ಬಳಸುಗರ ಮೇಲಿರುತ್ತದೆ.

ಇನ್ನೂ ಕೆಲವು ಮಿಂದಾಣಗಳು ಆನ್‍ಲೈನ್ ಕೂಟ(forum)ಗಳಂತೆ ಕೆಲಸಮಾಡುತ್ತವೆ. ಇಲ್ಲಿಗೆ ಯಾರು ಬೇಕಾದರೂ ಟೊರೆಂಟ್ ಕಡತಗಳನ್ನು ಸೇರಿಸಬಹುದು ಮತ್ತು ಇಲ್ಲಿಂದ ಇಳಿಸಿಕೊಳ್ಳಬಹುದು.

ಕೆಲವು ಟ್ರ್ಯಾಕರ್‍ಗಳು ಕಲೆಹಾಕುವ ಮಾಹಿತಿಯಿಂದ ಬಳಸುಗರು ಹಂಚುತ್ತಿರುವ ಕಡತ ಅಶ್ಟೇ ಅಲ್ಲದೆ ಬಳಸುಗರ ಐಪಿ ವಿಳಾಸ(IP Address)ದಂತಹ ಮಾಹಿತಿ ಎಲ್ಲರಿಗೂ ಕಾಣುತ್ತದೆ. ಇದರಿಂದ ಜಾಗರೂಕರಾಗಿರುವುದು ಬಳಸುಗರ ಹೊಣೆಯಾಗಿದೆ.

ಮಿಂಕಟ್ಟಲೆಯ ಬಳಕೆ ಕಾನೂನಿನ ಕಟ್ಟಲೆಯಲ್ಲಿ ಸರಿಯಾದುದೇ. ಆದರೆ, ಹಂಚಲಾಗುವ ಕಡತದ ಹಕ್ಕುಗಳನ್ನು ತಿಳಿದು ಅದು ಹಂಚಲು ಯೋಗ್ಯವೇ ಎನ್ನುವುದನ್ನು ತಿಳಿದು ಎಚ್ಚರಿಕೆಯಿಂದ ನಡೆದರೆ ಒಳಿತು. ಟ್ರ್ಯಾಕರ್‍ಗಳು ನಿಮ್ಮ ಐಪಿ ವಿಳಾಸ(IP Address)ದಂತಹ ಮಾಹಿತಿಯನ್ನು ಕಲೆಹಾಕುವುದರಿಂದ ಟ್ರ್ಯಾಕರ್‍ಗಳ ಕಟ್ಟಲೆಗಳನ್ನು ತಿಳಿದು ನಡೆದರೆ ಅದು ಸುರಕ್ಶಿತವಾಗಿದೆ ಎಂದೇ ಹೇಳಬಹುದು.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org, howtogeek.comdevicemag.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ashokloni says:

    ಒಂದೊಳ್ಳೆಯ ಮಾಹಿತಿಗಾಗಿ ಧನ್ಯವಾದಗಳು.

ಅನಿಸಿಕೆ ಬರೆಯಿರಿ:

Enable Notifications