ನಮ್ಮೂರಿನ ನೆನಪ ತೋಟದಲ್ಲಿ

– ಅಮರ್.ಬಿ.ಕಾರಂತ್.

DSC_0031

ಏಡು ಮೂವತ್ತಾಗಲಿ ಮತ್ತೊಂದಾಗಲಿ
ಸಲಸಲವು ಇಲ್ಲಿ ಬಂದಾಗ ಅರಿವು ಅಳಿಯುವುದು
ಮೊಟ್ಟೆಯಿಂದೊಡೆದು ಬರುವ ಮರಿಯಂತೆ
ಮಗುವಾಗಿ ಹೊರಳುವೆನು ಕೊಸರುವೆನು
ಈ ಊರ ಚೆಲುವ ಮಡಿಲಿನಲ್ಲಿ.

ಹೊಕ್ಕೊಡೆ ಊರಕೇರಿಯ ಎಡತಿರುವಿನಲಿ
ಕಮರಿದ ನೆನಪು ಮೈಕೊಡವಿ ಹರಡುವುದು
ಕದಡದ ಕೊಳದೊಳ್ ಅಲೆ ಅಲೆಯುವಂತೆ
ಹರೆಯೆಳೆಯ ಬದುಕ ಬೆದಕುವೆನು
ಈ ಬಳಿಯ ಬೆಡಗ ಕಾಣ್ಮೆಯಲ್ಲಿ.

ಹುಲ್ಲು ಹಾಸಿನ ಮನೆಯ ಅಂಗಳದಲಿ
ಮುದುಡಿ ಕೂತೊಡೆ ಮನದ ಕದ ತೆರೆಯುವುದು
ಹಸಿದ ಹಸುಗೂಸಿನ ಚೆಂದುಟಿಗಳಂತೆ
ಬಾಳ್ವಾಲ ಹನಿಗೆ ಹಾತೊರೆಯುವೆನು
ಬಂದ ಬಾನಾಡಿಗಳ ಉಲಿಪಿನಲ್ಲಿ.

ಗುಡ್ಡ ಹಾಡಿಯ ನೆರಳಿನಲಿ
ದಾರಿ ಸಮೆದೊಡೆ ಅಮಲು ಮುಸುಕುವುದು
ಹಳೆಯ ಹುಳಿಹೆಂಡವ ಗಟಗಟನೆ ಕುಡಿದಂತೆ
ಮುಳ್ಳುಪೊದೆಯೊಳು ತೂರಿ ನಡೆಯುವೆನು
ತೆರೆಯ ಕಾಲ್ಸುಳಿಯ ತವಕದಲ್ಲಿ.

ಕಿರುಮಲೆಯ ಮೇಲ್ ಹರವಿನಲಿ
ಕಡಲನಪ್ಪಿದ ಬಾನು ಕೆಂಪೇರುವುದು
ಗಾಳಿಗದುರಿದ ಚವುಳಿಯ ಕೊಟ್ಟೆಯಂತೆ
ಕದಲಿಕೆಯ ದೂಸರೆಗಳ ಅರಸುವೆನು
ಕೊನೆಗಾಣುವ ಮುಗಿಲ ಅಂಚಿನಲ್ಲಿ.

ಮರುದಿನದ ಮುಂಬಗಲಿನ ಮಬ್ಬಿನಲಿ
ತೆರಳಲು ಅಗಲಿಕೆಯ ನೋವು ಇರಿಯುವುದು
ಕೊಯ್ಮಾಂಜುಗನ ಹರಿತಾದ ಕಯ್ದಿನಂತೆ
ನೋಟದಿರಿತವ ಮರಮರಳಿ ಸವಿಯುವೆನು
ನಮ್ಮೂರಿನ ನೆನಪ ತೋಟದಲ್ಲಿ.

(ಚಿತ್ರಸೆಲೆ: ಅಮರ್.ಬಿ.ಕಾರಂತ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: