ಪೆಟ್ರೋಲ್ ತುಂಬಿಸಿಕೊಳ್ಳಲು ಹೋದಾಗ ಇರಲಿ ಎಚ್ಚರ

ಜಯತೀರ‍್ತ ನಾಡಗವ್ಡ.

addisplaylcd-net

ವಾರದ ಕೊನೆಯಲ್ಲಿ ನಿಮ್ಮ ಬಂಡಿಯಲ್ಲಿ ಹಲವೆಡೆ ಸುತ್ತಾಡಿ ಬರುತ್ತೀರಿ. ಬಂಡಿಯ ಮಯ್ಲಿಯೋಟ ಎಶ್ಟಿತ್ತೆಂದು ಕುತೂಹಲದಿಂದ ಲೆಕ್ಕಹಾಕುವಾಗ, ಇದ್ದಕ್ಕಿದ್ದಂತೆ ಕಡಿಮೆಯಾಗಿದ್ದು ಕಂಡುಬರುತ್ತದೆ. ಕಳೆದ ವಾರ ಲೀಟರ್‍‍ಗೆ 20 ಕಿ.ಮೀ. ಇದ್ದ ಮಯ್ಲಿಯೋಟ ದಿಡೀರ್ ಅಂತ 18 ಕಿ.ಮೀ.ಗೆ ಕುಸಿದಿದೆ? ಏನು ಕಾರಣ? ನಾನು ಸರಿಯಾಗಿ ಬಂಡಿ ಓಡಿಸಲಿಲ್ಲವೇ? ಹೊತ್ತು ಹೊತ್ತಿಗೆ ಸರಿಯಾಗಿ ಬಂಡಿಯ ಆರೈಕೆ ಮಾಡಲಿಲ್ಲವೇ? ಬಂಡಿ ಓಡಾಡಿಸಿದ ರಸ್ತೆ ಕೆಟ್ಟದಾಗಿತ್ತೇ? ಎಂಬೆಲ್ಲ ಸಹಜ ಅನುಮಾನಗಳು ಸುಳಿದಾಡಬಹುದು. ಆದರೆ, ನಾವು ತುಂಬಿಸಿದ ಪೆಟ್ರ‍ೋಲ್‌ನ ಅಳತೆ ಸರಿಯಾಗಿತ್ತೇ? ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಸರಿಯಾಗಿ ಪೆಟ್ರೋಲ್ ತುಂಬಿಸಿದರೇ? ಎಂಬ ಕೇಳ್ವಿಗಳು ನಮ್ಮಲ್ಲಿ ಹುಟ್ಟಿಕೊಳ್ಳುವುದು ತೀರಾ ಕಡಿಮೆ. ಹಲವು ಸಾರಿ ಗೆಳೆಯರು, ಕುಟುಂಬದವರು ಆ ಪೆಟ್ರೋಲ್ ಬಂಕ್‌‌ಗೆ ಹೋದಾಗ ನನಗೆ ಮೋಸದ ಅನುಬವ ಆಗಿದೆ ಎಂದು ನಿಮಗೆ ಕಿವಿ ಮಾತು ಹೇಳಿ ಎಚ್ಚರಿಸಿರಬಹುದು. ಪೆಟ್ರ‍ೋಲ್ ತುಂಬಿಸಲೆಂದು ಬಂಕ್‌ಗೆ ಹೋದಾಗ ನಾವು ಕೆಲವು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಲು ಮುಕ್ಯ. ಅವುಗಳ ಮೇಲೆ ಕಣ್ಣಾಡಿಸೋಣ ಬನ್ನಿ.

ನೀವು 500 ರೂಪಾಯಿಗಳ ಮೊತ್ತದ ಪೆಟ್ರ‍ೋಲ್ ತುಂಬಿಸಲು ಸಿಬ್ಬಂದಿಗೆ ಹೇಳಿದಾಗ ಅವರು ನಿಮಗೆ ಕಾಣುವಂತೆ 500 ಮೊತ್ತವನ್ನು ಮಿಂಚೆಣಿಯ ಹಲಗೆ (Digital display) ಮೇಲೆ ನಮೂದಿಸಿ, ಅಳಕವನ್ನು ಸೊನ್ನೆಯಿಂದ ಹೊಂದಿಸಿಕೊಂಡು, ಪೆಟ್ರೋಲ್ ತುಂಬಿಸುವ ಕೊಳವೆಯನ್ನು ನಿಮ್ಮ ಬಂಡಿಯ ಉರುವಲು ಚೀಲಕ್ಕೆ ಸೇರಿಸಿ ಪೆಟ್ರೋಲ್ ತುಂಬಲು ಶುರು ಮಾಡುತ್ತಾರೆ. ಆದರೆ ಅವರು ಒಂದೇ ಸಮನೆ ಎಲ್ಲ ಪೆಟ್ರ‍ೋಲ್ ತುಂಬುತ್ತಿದ್ದಾರೆಯೇ ಗಮನಿಸಬೇಕು. ಕೆಲವೊಮ್ಮೆ ನಡು ನಡುವೆ ಕೊಳವೆಯ ಮೂತಿಯನ್ನು(Nozzle) ಹಿಸುಕಿ ಪೆಟ್ರ‍ೋಲ್ ಸರಾಗವಾಗಿ ಹರಿಯುವುದನ್ನು ಕತ್ತರಿಸಬಹುದು. ಇದರಿಂದ ಸರಿಯಾದ ಪ್ರಮಾಣದ ಪೆಟ್ರೋಲ್ ನಿಮ್ಮ ಬಂಡಿಯ ಉರುವಲು ಚೀಲ ಸೇರುವುದೇ ಇಲ್ಲ. ದೊಡ್ಡ ಹಲಬಳಕೆಯ ಬಂಡಿಗಳಿಗೆ (MUV-Multi Utility Vehicle) ಪೆಟ್ರೋಲ್ ತುಂಬಿಸುವಾಗ, ಇದರಿಂದಲೇ ಸುಮಾರು 1 ಲೀಟರ್‌ನಶ್ಟು ಪೆಟ್ರೋಲ್‌ಗೆ ಕತ್ತರಿಹಾಕಬಹುದಂತೆ. ಅದಕ್ಕೆಂದೇ ಬಂಕ್‌ನ ಕೆಲಸದವರು ಕೊಳವೆಯ ಮೂತಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಗಮನಿಸಿರಬಹುದು. ನೀವು ಪೆಟ್ರೋಲ್ ತುಂಬಿಸಿಕೊಳ್ಳುವಾಗ ಬಂಕ್‌ನ ಸಿಬ್ಬಂದಿಗೆ ಕೊಳವೆಯ ಮೂತಿಯ ಮೇಲೆ ಪದೇ ಪದೇ ಕೈ ಇಡದಂತೆ,  ಪೂರ‍್ತಿ ಉರುವಲು ತುಂಬುವವರೆಗೂ ಮೂತಿ ಹಿಸುಕದಂತೆ ಹೇಳಿ.

ಪೆಟ್ರೋಲ್ ತುಂಬಲು ಬಳಸುವ ಕೊಳವೆಗಳು ಸಾಮಾನ್ಯವಾಗಿ ಸಾಕಶ್ಟು ಉದ್ದವಾಗಿರುತ್ತವೆ. ಇದು ಪೆಟ್ರೋಲ್ ತುಂಬಿಸಿಕೊಳ್ಳುವವರ ನೆರವಿಗೆ ಬರುವುದೇನೋ ಸರಿ. ಆದರೆ ಈ ಹೆಚ್ಚಿನ ಉದ್ದದ ಕೊಳವೆಗಳ ಮೂಲಕ ಪೆಟ್ರ‍ೋಲ್ ಹರಿಯುವುದು ನಿಲ್ಲಿಸಿದಾಗಲೂ ಸಾಕಶ್ಟು ಪೆಟ್ರ‍ೋಲ್ ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಹೀಗೆ ಕೊಳವೆಯಲ್ಲಿ ಉಳಿದ ಪೆಟ್ರ‍ೋಲ್, ಕೊಳವೆಯನ್ನು ಮಡಚಿದಾಗ ಪೆಟ್ರ‍ೋಲ್‌ನ ಟ್ಯಾಂಕ್‌ಗೆ ಮರಳುತ್ತದೆ. ನಾವು ಮನೆಗಳಲ್ಲಿ ನಲ್ಲಿಯಿಂದ ನೀರು ತುಂಬಲು, ಸಾಗಿಸಲು ಬಳಸುವ ಕೊಳವೆಗಳನ್ನು ಒಮ್ಮೆ ನೋಡಿ. ಎಶ್ಟೋ ಸಾರಿ ನೀರಿನ ನಲ್ಲಿ ನಿಲ್ಲಿಸಿದರೂ ಈ ಕೊಳವೆಗಳಲ್ಲಿ ನೀರು ಉಳಿದುಕೊಂಡಿರುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ, ಪೆಟ್ರೋಲ್ ತುಂಬಿಸಿದ ತಕ್ಶಣ ನಿಮ್ಮ ಬಂಡಿಯನ್ನು ಒಂಚೂರು ಮುಂದಕ್ಕೆ ತಂದು ನಿಲ್ಲಿಸಿ, ಆಗ ಪೆಟ್ರೋಲ್ ಬಂಕ್‌ನ ಸಿಬ್ಬಂದಿಗೆ ಕೊಳವೆಯನ್ನು ಎತ್ತರಿಸಿ ಬೋರಲು ಮಾಡುವಂತೆ ಹೇಳಿ. ಇದರಿಂದ ಕೊಳವೆಯಲ್ಲಿ ಉಳಿದುಕೊಂಡಿದ್ದ ಪೆಟ್ರೋಲ್ ನಿಮ್ಮ ಉರುವಲು ಚೀಲ (Fuel Tank) ಸೇರಿಕೊಳ್ಳುತ್ತದೆ.

ಪೆಟ್ರೋಲ್ ಬಂಕ್‌ಗೆ ಹೋದಾಗ ನಿಮ್ಮ ಗಮನ ಅತಿತ್ತ ಹೋಗದಂತೆ ಎಚ್ಚರವಹಿಸಿ. ಪೆಟ್ರೋಲ್ ತುಂಬಿಸುವ ಸಿಬ್ಬಂದಿಯೊಂದಿಗೆ ಮಾತುಕತೆ, ಹರಟೆ ಮಾಡದೇ ನಿಮ್ಮ ಗಮನ ಅವರ ಕೆಲಸದ ಮೇಲೆ ಇರಲಿ. ಅಳಕವನ್ನು ಸೊನ್ನೆಗೆ ಹೊಂದಿಸಿ, ನೀವು ತಿಳಿಸಿದ ಮೊತ್ತವನ್ನು ಸರಿಯಾಗಿ ನಮೂದಿಸುತ್ತಾರೋ ಇಲ್ಲವೋ ಎಂಬುದನ್ನು ಕಚಿತಪಡಿಸಿಕೊಳ್ಳಿ. ಬಂಕ್‌ನ ಸಿಬ್ಬಂದಿ ಸರಿಯಾದ ಮೊತ್ತ ನಮೂದಿಸಿ, ಅಳಕ ಸೊನ್ನೆಗೆ ಹೊಂದಿಸುವ ಮೊದಲೇ ಬಂಡಿಯಿಂದ ಹೊರಗಿಳಿದು ನೋಡುವುದು ಒಳಿತು. ನಿಮ್ಮ ನೋಟಕ್ಕೆ ಯಾರೂ ಅಡ್ಡಿಯಾಗದಂತೆ ನೋಡಿಕೊಳ್ಳಿ.

ಪೆಟ್ರೋಲ್ ಬಂಕ್‌ಗೆ ಹೋದಾಗ ನೀವು 1000 ರೂಪಾಯಿಗೆ ಪೆಟ್ರೋಲ್ ತುಂಬಿಸಿ ಎಂದು ಹೇಳುತ್ತೀರಿ ಎಂದುಕೊಳ್ಳಿ. ಅಲ್ಲಿರುವ ಕೆಲಸದವರು  ಕೆಲವೊಮ್ಮೆ ಕೆಲಸದ ಒತ್ತಡವೋ ಇಲ್ಲವೇ ಗಡಿಬಿಡಿಯಿಂದಲೋ ಕೇವಲ 200 ರೂಪಾಯಿಗೆ ತುಂಬಿಸಿ, ಅಯ್ಯೋ ಮರೆತು ಹೋಗಿದ್ದೆ ಎಂದು ಹೇಳಿ, ಅಳಕವನ್ನು(Gauge or Meter) ಮರುಹೊಂದಿಸದೇ, ಮತ್ತೆ ಮಿಕ್ಕ 800 ರೂಪಾಯಿಗೆ ತುಂಬಿಸತೊಡಗುತ್ತಾರೆ. ಆಗ ನಿಜವಾಗಿ ನಿಮಗೆ 1000 ರೂಪಾಯಿಗಳ ಪೆಟ್ರೋಲ್ ದೊರೆಯದೇ, 800 ರೂಪಾಯಿಗಳ ಮಾತ್ರವೇ ಸಿಗುತ್ತದೆ. ಈ ಸಂದರ‍್ಬದಲ್ಲಿ, ಅಲ್ಲಿನ ಸಿಬ್ಬಂದಿ ಮತ್ತೆ 800 ರೂಪಾಯಿಗೆ ತುಂಬಿಸುವಾಗ ಪೆಟ್ರೋಲ್ ಅಳಕವನ್ನು ಮರುಹೊಂದಿಸಿ ಸೊನ್ನೆಯಿಂದ ಶುರು ಮಾಡಿದ್ದಾರೆಯೋ ಇಲ್ಲವೋ ನೋಡಿ. ಇಲ್ಲದೇ ಹೋದಲ್ಲಿ ಸೊನ್ನೆಯಿಂದ ಶುರು ಮಾಡುವಂತೆ ಎಚ್ಚರಿಸಿ.

ಆಗಾಗ ನಿಮ್ಮ ಬಂಡಿಗಳಿಂದ ಕರ‍್ಕಶ ಸದ್ದು ಹೊರಬರುತ್ತಿದ್ದರೆ, ಬಂಡಿಯ ಬಿಣಿಗೆಯ ಒಳಬಾಗಗಳು  ಸವೆತಕ್ಕೊಳಗಾದದ್ದು ಕಂಡುಬಂದರೆ ನುರಿತ ಮೆಕ್ಯಾನಿಕ್ ಬಳಿ ಕೊಂಡೊಯ್ದು ಸರಿಪಡಿಸಿಕೊಳ್ಳಿ. ಇದಕ್ಕೆ ಪೆಟ್ರೋಲ್‌ನ ಕಲಬೆರಕೆಯೂ ಕೂಡ ಕಾರಣವಾಗಿರಬಹುದು. ಪೆಟ್ರೋಲಿಯಂ ಉರುವಲುಗಳ ಜೊತೆ ಇತರೆ ಸೇರಿಕೆಗಳನ್ನು(Additive) ಸೇರಿಸಿ ಕಲಬೆರಕೆ ಮಾಡುವುದು ಸುಲಬ. ನಾಪ್ತಾ(Naphtha) ಎಂಬ ಇರ‍್ಪು(Chemical) ಪೆಟ್ರೋಲ್‌ನ ಒಡಮಾಡುಗೆಯಿಂದಾದದ್ದು(by-product). ಇದು ಪೆಟ್ರ‍ೋಲ್‌ನಲ್ಲಿ ಸುಲಬವಾಗಿ ಬೆರೆತು ಹೋಗುವುದರಿಂದ ಕಲಬೆರಕೆ ಮಾಡಲು ಇದರ ಬಳಕೆ ಹೆಚ್ಚು. ಆಗಾಗ ನಿಮ್ಮ ಬಂಡಿಯು ಕರ‍್ಕಶ ಸದ್ದು ಹೊರಡಿಸುತ್ತಿದ್ದರೆ ಇಲ್ಲವೇ ಬಿಣಿಗೆಯ ಬಿಡಿಬಾಗಗಳು (Engine Parts) ಕೆಟ್ಟು ಹೋಗುತ್ತಿದ್ದರೆ, ನೀವು ಹೆಚ್ಚಾಗಿ ಬೇಟಿ ನೀಡುವ ಪೆಟ್ರೋಲ್ ಬಂಕ್‌ಬಿಟ್ಟು, ಬೇರೆ ಬಂಕೊಂದಕ್ಕೆ ಹೋಗಿ ಪೆಟ್ರೋಲ್ ತುಂಬಿಸಿ ನೋಡಿ. ಅನುಮಾನಗಳು ಬಂದರೆ ಮೆಕ್ಯಾನಿಕ್ ನೆರವು ಪಡೆದು, ಕಲಬೆರಕೆಯಾದ ಪೆಟ್ರೋಲ್ ನಿಮ್ಮ ಬಂಡಿ ಸೇರಿಕೊಳ್ಳುತ್ತಿದೆಯೇ? ಇದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಉರುವಲು ತುಂಬಿಸಿಕೊಂಡ ನಂತರವೇ ಹಣ ನೀಡಿ ಸರಿಯಾದ ರಸೀದಿ ಪಡೆಯುವುದು ಜಾಣ ನಡೆ. ಪೆಟ್ರ‍ೋಲ್ ಬಂಕ್‌ನವರ ಉರುವಲಿನ ಬಗ್ಗೆಯಾಗಲಿ ಅತವಾ ಬೇರೆ ತರಹದ ಅನುಮಾನಗಳು ಕಂಡು ಬಂದಲ್ಲಿ ಹಿನ್ನುಣಿಕೆ (Feedback) ನೀಡಿ, ದೂರು ದಾಕಲಿಸಿ. ಗ್ರಾಹಕರು ತಂಟೆ ತಕರಾರು ಮಾಡಿದಾಗ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂದು ಕೆಲವು ಪೆಟ್ರೋಲ್ ಬಂಕಿನವರು ಗ್ರಾಹಕರಿಗೆ ಹೆಚ್ಚಿನ ದುಡ್ಡನ್ನೋ ಇಲ್ಲವೇ ಉರುವಲನ್ನೋ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಬಹುದು. ಇದರಿಂದಲೂ ಎಚ್ಚರವಾಗಿರಿ.

ಪೆಟ್ರೋಲ್ ಅನ್ನು ಎತ್ತುಗೆಗೆ ಬಳಸಲಾಗಿದ್ದು, ಡಿಸೇಲ್ ಬಳಕೆದಾರರಿಗೂ ಇದು ಅನ್ವಯಿಸುತ್ತದೆ.

(ಮಾಹಿತಿ ಮತ್ತು ತಿಟ್ಟ ಸೆಲೆ: cartoq.com , addisplaylcd.net )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *