ವೀಕೆಂಡ್ ಮ(ನು)ಜ

 ಪ್ರವೀಣ್  ದೇಶಪಾಂಡೆ.

shoppingmall

ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ
ಸ್ಪರ‍್ದೆಗಿಳಿದ ಮನುಜನಿಗೆ
ಆಗಸ ಕಾಣಲೊಲ್ಲದು

ಅಗಲವಾಗಲು
ನುಣುಪಾದ ರಸ್ತೆಗಳೊಡನೆ
ಚೂಪಾಗಿದೆ ಸಹನೆ

ಲ್ಯಾಪ್ಟಾಪಿನ ಮೇಲೆ ಹೂಗಳ ಕವರು
ಒಳಗೆ ನೇಚರ್ ವಾಲ್ ಪೇಪರು
ಅಂತೇ, ನಗುವೂ ಸೇಬಿನ ಮೇಲಿನ ವ್ಯಾಕ್ಸ ಪಾಲಿಶ್ಶು

ತಿಳಿದುಕೋವಲ್ಲ,
ವೀಕೆಂಡು
ಜೀವನದ end ಅಲ್ಲ

ಸೋಮವಾರ
ಕಾರ‍್ಕಾನೆ ಶುರುವಾದ ಸೈರನ್ನು
ಶುಕ್ರವಾರ ಸಂಜೆ “ಮುಗೀತಿನ್ನು”

ಮುಗಿಬಿದ್ದು
ತಿನ್ನು, ಕುಡಿ
ಬದುಕಿನಂದವ ಬದಿಗಿಟ್ಟು

ಯಾರದೊ ಮಕ್ಕಳು ಚೆಂದ ಕಂಡರೆ ನಗೆಬೀಸಲಾರೆ
“ಒಳ್ಳೆಯತನ” ಚೆ,
ಹಂಗಂದರೇನು?

ಡಿಲೀಟು ಮಾಡೀ ಯ್ಯಾಪು
ನನ್ನ ರ‍್ಯಾಮಿನಲ್ಲಿ
ಜಾಗವಿಲ್ಲ

ದೊಡ್ಡಮೋರಿಯ ಒಳಚರಂಡಿಗಳು
ಒಯ್ಯಲೊಲ್ಲವು
ಮನಸೊಳಗಿನ ಹೊಲಸ

ಜೀವದುಸುರಿಗೇನು ಪ್ರೈಸ್ ಟ್ಯಾಗು?
ಅದು end ಆಗುವತನಕ
ಮಜಾ ಮಾಡಬೇಕು

ಉಸಿರಾಡಿದ್ದಕ್ಕು ಲೆಕ್ಕ ಬೇಕು,
ವೆಂಟಿಲೇಟರ್ ಗಳೂ
ನಡೆಯಬೇಕಲ್ಲಾ?

ಅರೆ,
ನಾವೂ ಮನುಶ್ಯರೆ?
ಹೌದು, ಮಾತ್ರ, ನೋಡಲು

ಮನುಶ್ಯತ್ವದ ಶುದ್ದ ಗಂಗೆಯಲ್ಲಿ
ನಿತ್ಯ ತೇಲುತ್ತವೆ
ಸಾಲು ಸಾಲು

ಅರ‍್ದಬೆಂದ ವಿಕಾರಗಳ
ಹೆಣಗಳು
ವಾರದ ಎಲ್ಲ ದಿನಗಳಲ್ಲೂ!

(ಚಿತ್ರಸೆಲೆ: yin-yang-india.com )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: