ಅಲ್ಲಮನ ವಚನಗಳ ಓದು – 8ನೆಯ ಕಂತು
– ಸಿ.ಪಿ.ನಾಗರಾಜ.
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವ ನೀ ಕೇಳಾ
ಮೀಯದೆ ಮೀನು ಮೀಯದೆ ಮೊಸಳೆ
ತಾ ಮಿಂದು ತನ್ನ ಮನ ಮೀಯದನ್ನಕ್ಕರ ಈ
ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು.
ಮನದೊಳಗಿನ ಕೊಳೆಯನ್ನು ತೊಳೆದುಕೊಳ್ಳದೆ , ಮಯ್ ಮೇಲಣ ಕೊಳೆಯನ್ನು ಮಾತ್ರ ತೊಳೆದು ಮಡಿಯುಟ್ಟು ಮಾಡುವ ಪೂಜೆಯನ್ನು ದೇವರು ಮೆಚ್ಚುವುದಿಲ್ಲವೆಂದು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ. ಮನದೊಳಗಿನ ಕೊಳೆಯನ್ನು ತೊಳೆಯುವುದು ಎಂದರೆ ಮನದೊಳಗೆ ಮೂಡುವ ಕೆಡುಕಿನ ಒಳಮಿಡಿತಗಳನ್ನು ಹೋಗಲಾಡಿಸಿಕೊಂಡು , ಒಳ್ಳೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.
( ಮಿಂದು=ಸ್ನಾನ ಮಾಡಿ/ಜಳಕ ಮಾಡಿ/ಮಯ್ ತೊಳೆದು ; ಮೀ=ಸ್ನಾನ ಮಾಡು/ಜಳಕ ಮಾಡು/ಮಯ್ ತೊಳೆ ; ಪೂಜಿಸಿ+ಇಹೆನ್+ಎಂಬ ; ಪೂಜಿಸಿ=ಪೂಜೆಯನ್ನು ಮಾಡಿ ; ಇಹೆನ್=ಇದ್ದೇನೆ ; ಎಂಬ=ಎನ್ನುವ ; ಸಂದೇಹಿ ಮಾನವ=ಒಳಿತು/ಕೆಡುಕು ಹಾಗೂ ಸರಿ/ತಪ್ಪುಗಳ ನಡುವೆ ತೊಳಲಾಡುವ ಮನಸ್ಸುಳ್ಳ ವ್ಯಕ್ತಿ ; ನೀ=ನೀನು ; ಕೇಳಾ=ಕೇಳಿಸಿಕೊ/ತಿಳಿದುಕೊ/ಅರಿತುಕೊ ; ಮೀಯದೆ=ನೀರಿನಲ್ಲಿ ಮುಳುಗಿ ಮಡಿಯಾಗುವುದಿಲ್ಲವೇ ; ತಾ=ತಾನು ; ತನ್ನ=ಸ್ನಾನ ಮಾಡಿದ ವ್ಯಕ್ತಿಯ ; ಮನ=ಮನಸ್ಸು ; ಮೀಯದ+ಅನ್ನಕ್ಕರ ; ಮೀಯದ=ಸ್ನಾನ ಮಾಡದ/ಕೊಳೆಯನ್ನು ತೊಳೆದುಕೊಳ್ಳದ ; ಅನ್ನಕ್ಕರ=ಅಲ್ಲಿಯತನಕ/ಅಲ್ಲಿಯವರೆಗೆ ; ಬೆಡಗು=ತಳುಕು/ಒಯ್ಯಾರ/ಚಮತ್ಕಾರ ; ಬೆಡಗಿನ ಮಾತು=ಕೇಳುವವರ ಮನಸೆಳೆಯುವಂತಹ ಆದರೆ ಆಚರಣೆಯಲ್ಲಿ ಇಲ್ಲದ ತೋರಿಕೆಯ ಮಾತುಗಳು ; ಮೆಚ್ಚು=ಒಪ್ಪು/ಬಯಸು/ಒಲಿಯುವುದು ; ಮೆಚ್ಚುವನೆ=ಒಪ್ಪುತ್ತಾನೆಯೇ; ಗುಹೇಶ್ವರ ಲಿಂಗ=ಶಿವ/ಈಶ್ವರ/ದೇವರು )
ತನು ಬತ್ತಲೆಯಿದ್ದಡೇನೋ ಮನಶುಚಿಯಾಗದನ್ನಕ್ಕರ
ಮಂಡೆ ಬೋಳಾದಡೇನೋ ಭಾವ ಬಯಲಾಗದನ್ನಕ್ಕರ
ಭಸ್ಮವ ಪೂಸಿದಡೇನೋ ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ
ಇಂತೀ ಆಸೆಯ ವೇಷದ ಭಾಷೆಗೆ
ಗುಹೇಶ್ವರ ನೀ ಸಾಕ್ಷಿಯಾಗಿ ಛೀ ಎಂಬೆನು.
ವ್ಯಕ್ತಿಯು ತನ್ನ ಮಯ್-ಮನಗಳಲ್ಲಿ ತುಡಿಯುವ ಕೆಟ್ಟಬಯಕೆಗಳನ್ನು ಹತ್ತಿಕ್ಕಿಕೊಂಡು ಒಳಿತಿನ ನಡೆನುಡಿಗಳಿಂದ ಬಾಳದೆ , ಹೊರನೋಟಕ್ಕೆ ಮಾತ್ರ ಎಲ್ಲ ಕಾಮನೆಗಳನ್ನು ತೊರೆದವನಂತೆ ತೋರಿಸಿಕೊಳ್ಳಲು ತಳೆದಿರುವ ಬಹುಬಗೆಯ ರೂಪಗಳನ್ನು ಅಲ್ಲಮನು ಈ ವಚನದಲ್ಲಿ ಅಲ್ಲಗಳೆದಿದ್ದಾನೆ.
( ತನು=ಮಯ್/ದೇಹ/ಶರೀರ ; ಬತ್ತಲೆ+ಇದ್ದಡೆ+ಏನೋ ; ಬತ್ತಲೆ=ಮಯ್ ಮೇಲೆ ಉಡುಗೆತೊಡುಗೆಯಿಲ್ಲದಿರುವುದು/ಬರಿ ಮಯ್ ; ಇದ್ದಡೆ=ಇದ್ದರೆ ; ಏನೋ=ಏನು ತಾನೆ ಪ್ರಯೋಜನ/ಏನನ್ನು ಪಡೆದಂತಾಗುತ್ತದೆ ; ಮನ+ಶುಚಿ+ಆಗದ+ಅನ್ನಕ್ಕರ ; ಮನ=ಮನಸ್ಸು ; ಶುಚಿ=ಯಾವುದೇ ಬಗೆಯ ಕೊಳೆಯಾಗಲಿ/ಕಲೆಯಾಗಲಿ ಇಲ್ಲದಿರುವುದು ; ಮನಶುಚಿ=ಮನದಲ್ಲಿ ಮೂಡುವಂತಹ ಬಯಕೆಗಳಲ್ಲಿ ಒಳಿತನ್ನು ಉಳಿಸಿಕೊಂಡು , ಕೆಡುಕಿನ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಕೆಲಸ ; ಆಗದ=ಉಂಟಾಗದಿರುವುದು/ಆಗದೆ ಹೋಗುವುದು ; ಅನ್ನಕ್ಕರ=ಅಲ್ಲಿಯವರೆಗೆ/ಅಲ್ಲಿಯತನಕ ; ಆಗದನ್ನಕ್ಕರ=ಆಗದಿರುವ ತನಕ ; ಮಂಡೆ=ತಲೆ/ತಲೆಬುರುಡೆ ; ಬೋಳ್+ಆದಡೆ+ಏನೋ ; ಬೋಳ್=ತಲೆಗೂದಲನ್ನು ತೆಗೆಸುವುದು/ದೇವರಿಗೆ ತಲೆಗೂದಲನ್ನು ಮುಡಿ ಕೊಡುವುದು ; ಆದಡೆ=ಆದರೆ/ಹಾಗೆ ಮಾಡಿದರೆ ; ಭಾವ=ಮನದೊಳಗೆ ತುಡಿಯುವಂತಹ ಒಳಮಿಡಿತಗಳು ; ಬಯಲ್+ಆಗದ+ಅನ್ನಕ್ಕರ ; ಬಯಲು=ಇಲ್ಲವಾಗುವುದು/ಲಯಗೊಳ್ಳುವುದು ; ಭಾವ ಬಯಲು=ಮನದೊಳಗೆ ತುಡಿಯುವಂತಹ ನೂರಾರು ಒಳಮಿಡಿತಗಳಲ್ಲಿ ಕೆಟ್ಟ ಬಯಕೆಗಳನ್ನು ಹತೋಟಿಯಲ್ಲಿಟ್ಟುಕೊಂಡು , ಒಳ್ಳೆಯ ಬಯಕೆಗಳು ಅಂದರೆ ತನಗೆ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಒಳಮಿಡಿತಗಳನ್ನು ಮಾತ್ರ ಹೊಂದುವುದು ; ಭಸ್ಮ=ಬೂದಿ/ಯಾವುದಾದರೊಂದು ವಸ್ತುವನ್ನು ಬೆಂಕಿಯಿಂದ ಸುಟ್ಟಾಗ ದೊರೆಯುವ ಪುಡಿ/ಗೋವಿನ ಸಗಣಿಯನ್ನು ಒಣಗಿಸಿ ಬೆಂಕಿಯಲ್ಲಿ ಸುಟ್ಟಾಗ ದೊರೆಯುವ ಪುಡಿ/ವಿಬೂತಿ ; ಪೂಸಿದಡೆ+ಏನೋ ; ಪೂಸು=ಬಳಿದುಕೊಳ್ಳುವುದು/ಲೇಪಿಸಿಕೊಳ್ಳುವುದು ; ಪೂಸಿದಡೆ=ನೋಡುವವರ ಕಣ್ಣಿಗೆ ತಾವು ದೇವರ ಬಕ್ತರೆಂದು ತೋರಿಸಿಕೊಳ್ಳುವುದಕ್ಕಾಗಿ ಪವಿತ್ರವೆಂದು ನಂಬಿರುವ ಬೂದಿ/ವಿಬೂತಿಯನ್ನು ಹಣೆ/ಮಯ್ ಮೇಲೆ ಬಳಿದುಕೊಂಡರೆ ; ಕರಣ+ಆದಿ ; ಕರಣ=ಒಡಲು/ದೇಹ/ಮಯ್ ; ಆದಿ=ಮೊದಲು/ಮೂಲ ; ಗುಣಂಗಳನ್+ಒತ್ತಿ ; ಗುಣ=ನಡತೆ/ನಡೆನುಡಿ ; ಒತ್ತಿ=ಅಮುಕಿ/ಅದುಮಿ ; ಮೆಟ್ಟಿ=ತುಳಿದು ; ಸುಡದ+ಅನ್ನಕ್ಕರ ; ಸುಡು=ಸುಟ್ಟುಹಾಕು/ಇಲ್ಲವಾಗಿಸು/ನಾಶಪಡಿಸು ; ಸುಡದನ್ನಕ್ಕರ=ಸುಟ್ಟು ನಾಶಮಾಡದ ತನಕ ; ಕರಣಾದಿ ಗುಣಂಗಳನ್ ಒತ್ತಿ ಮೆಟ್ಟಿ ಸುಡುವುದು=ಕಣ್ಣು/ಕಿವಿ/ಮೂಗು/ತೊಗಲು/ನಾಲಗೆ ಎಂಬ ಅಯ್ದು ಬಗೆಯ ಇಂದ್ರಿಯಗಳಿಂದ ಮಯ್ ಮನಗಳಲ್ಲಿ ತುಡಿಯುವಂತಹ ಒಳ್ಳೆಯ ಮತ್ತು ಕೆಟ್ಟ ಒಳಮಿಡಿತಗಳಲ್ಲಿ , ಕೆಟ್ಟ ಕಾಮನೆಗಳನ್ನು ಮನದಲ್ಲಿಯೇ ಹತ್ತಿಕ್ಕಿ , ಅವನ್ನು ಹೊರಕ್ಕೆ ಬಿಡದಂತೆ ಎಚ್ಚರ ವಹಿಸುವುದು ; ಇಂತು+ಈ ; ಇಂತು=ಈ ರೀತಿಯಲ್ಲಿ/ಬಗೆಯಲ್ಲಿ ; ಆಸೆ=ಕಾಮನೆ/ಬಯಕೆ ; ವೇಷ=ಉಡುಗೆ ತೊಡುಗೆ ; ಭಾಷೆ=ಆಡುವ ನುಡಿ ; ಈ ಆಸೆಯ ವೇಷದ ಭಾಷೆಗೆ=ಮಯ್ ಮನಗಳಲ್ಲಿ ಅಪಾರವಾದ ಕೆಟ್ಟಕಾಮನೆಗಳನ್ನು ಇಟ್ಟುಕೊಂಡು , ತನ್ನೊಡನೆ ವ್ಯವಹರಿಸುವವರ ಕಣ್ಮನಗಳಲ್ಲಿ ಎಲ್ಲ ಬಗೆಯ ಕಾಮನೆಗಳನ್ನು ತೊರೆದವನೆಂದು ಕಾಣಿಸಿಕೊಳ್ಳಲೆಂದು ತಳೆದಿರುವ ರೂಪ ಮತ್ತು ನಡೆನುಡಿಗಳಿಗೆ ; ಗುಹೇಶ್ವರ=ಶಿವನೇ/ದೇವರೇ ; ನೀ=ನೀನು ; ಸಾಕ್ಷಿ+ಆಗಿ ; ಸಾಕ್ಷಿ=ಕಂಡದ್ದನ್ನು ಕಂಡಂತೆ ಹೇಳುವ ವ್ಯಕ್ತಿ ; ಛೀ=ಕೆಟ್ಟದ್ದನ್ನು ಕಂಡಾಗ/ಗುರುತಿಸಿದಾಗ ತಿರಸ್ಕಾರ ಸೂಚಕವಾಗಿ ಆಡುವ ಮಾತು ; ಎಂಬೆನು=ಎನ್ನುವೆನು)
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು
ಹಸಿವು ಹೋಹುದೇ
ಅಂಗದ ಮೇಲೆ ಲಿಂಗಸ್ವಾಯತವಾದರೇನು
ಭಕ್ತನಾಗಬಲ್ಲನೆ
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ಆ ಮೆಳೆ ಭಕ್ತನೆ
ಇಟ್ಟಾತ ಗುರುವೆ
ಇಂತಪ್ಪವರ ಕಂಡಡೆ ನಾಚುವೆನಯ್ಯ ಗುಹೇಶ್ವರ.
ಜೀವನದಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನು ಹೊಂದದೆ , ಮಯ್ ಮೇಲೆ ಲಿಂಗವನ್ನು ತೊಟ್ಟು ದೇವರಲ್ಲಿ ಒಲವುಳ್ಳ ಬಕ್ತನಂತೆ ಕಾಣಿಸಿಕೊಳ್ಳುವ ವ್ಯಕ್ತಿಯ ತೋರಿಕೆಯ ಗುಣವನ್ನು ಅಲ್ಲಮನು ಈ ವಚನದಲ್ಲಿ ಕಟುವಾಗಿ ವಿಡಂಬಿಸಿದ್ದಾನೆ.
(ಕಟ್ಟು+ಓಗರದ ; ಕಟ್ಟು=ಕೂಡಿಸು/ಸೇರಿಸು ; ಓಗರ=ಅನ್ನ/ಅಟ್ಟ ಅಡುಗೆ/ತಿಂಡಿತಿನಿಸು ; ಮೊಟ್ಟೆ=ಬುತ್ತಿ/ಗಂಟು/ಪೊಟ್ಟಣ; ಕಟ್ಟೋಗರದ ಮೊಟ್ಟೆ=ಪಯಣದ ಸಮಯದಲ್ಲಿ ದಾರಿಯ ನಡುವೆ ತಂಗಿದಾಗ ಉಣಲೆಂದು ಕಟ್ಟಿಕೊಂಡು ತಂದಿರುವ ಉಣಿಸುತಿನಿಸಿನ ವಸ್ತುಗಳುಳ್ಳ ಪೊಟ್ಟಣ; ಕಟ್ಟಿದರೆ+ಏನು ; ಕಟ್ಟಿದರೆ=ಕಟ್ಟಿಕೊಂಡರೆ/ಬಿಗಿದುಕೊಂಡರೆ ; ಏನು=ಯಾವ ಪ್ರಯೋಜನ ; ಹಸಿವು=ಉಂಡು ತಿಂದು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೆಂಬ ಬಯಕೆ/ಆಸೆ ; ಹೋಹುದೆ=ಹೋಗುವುದೆ/ನೀಗುವುದೆ/ತುಂಬುವುದೆ ; ಅಂಗ=ಮಯ್/ಶರೀರ/ದೇಹ ; ಲಿಂಗ+ಸ್ವಾಯತ+ಆದರೆ+ಏನು ; ಲಿಂಗ=ಕಲ್ಲನ್ನು ಕೆತ್ತಿ ರೂಪಿಸಿರುವ ಶಿವಲಿಂಗ ; ಸ್ವಾಯತ=ಕಟ್ಟಿಕೊಂಡಿರುವುದು/ಹಾಕಿಕೊಂಡಿರುವುದು ; ಅಂಗದ ಮೇಲೆ ಲಿಂಗಸ್ವಾಯತ=ಶಿವ ಬಕ್ತನಾದವನು ಗುರುವಿನ ಮೂಲಕ ಶಿವಲಿಂಗವನ್ನು ಪಡೆದು , ತನ್ನ ಮಯ್ ಮೇಲೆ ತೊಟ್ಟುಕೊಳ್ಳುವುದು/ಕಟ್ಟಿಕೊಳ್ಳುವುದು ; ಭಕ್ತನ್+ಆಗ+ಬಲ್ಲನೆ ; ಆಗ=ಆಗುವುದು ; ಆಗಬಲ್ಲನೆ=ಆಗುತ್ತಾನೆಯೇ ; ಭಕ್ತನಾಗಬಲ್ಲನೆ=ಶಿವಶರಣಶರಣೆಯರ ನಿಲುವಿನಲ್ಲಿ ಯಾವುದೇ ವ್ಯಕ್ತಿಯು ತನ್ನ ಮಯ್ ಮೇಲೆ ಶಿವಲಿಂಗವನ್ನು ಕಟ್ಟಿಕೊಂಡ ಮಾತ್ರಕ್ಕೆ ಬಕ್ತನಾಗುವುದಿಲ್ಲ. ಬಕ್ತನಾಗಬೇಕಾದರೆ ತನಗೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳನ್ನು ಹೊಂದಿರಬೇಕು ; ಇಟ್ಟ=ಇಟ್ಟಿರುವ ; ಇಟ್ಟ ಕಲ್ಲು=ಬಕ್ತನಾದವನು ಮಯ್ ಮೇಲೆ ತೊಟ್ಟಿರುವ ಶಿವಲಿಂಗ ; ಮೆಳೆ=ಹಾದಿಯ ಬದಿಯ ಬೇಲಿಯಲ್ಲಿ ಬೆಳೆದಿರುವ ಗಿಡಗಂಟೆಗಳ ಪೊದೆ ; ಸಿಕ್ಕಿದಡೆ=ಸಿಕ್ಕಿಕೊಂಡರೆ/ನೇತು ಬಿದ್ದರೆ ; ಇಟ್ಟ+ಆತ ; ಆತ=ಅವನು ; ಇಟ್ಟಾತ=ಇಟ್ಟವನು/ಶಿವಲಿಂಗವನ್ನು ತೊಡಿಸಿದ ವ್ಯಕ್ತಿ ; ಇಂತು+ಅಪ್ಪ+ಅವರ ; ಇಂತು=ಈ ರೀತಿ ; ಅಪ್ಪ=ಆಗಿರುವ ; ಇಂತಪ್ಪವರ=ಇಂತಹ ವ್ಯಕ್ತಿಗಳನ್ನು/ಒಳ್ಳೆಯ ನಡೆನುಡಿಗಳಿಲ್ಲದ ಗುರು ಮತ್ತು ಬಕ್ತರನ್ನು ; ಕಂಡಡೆ=ನೋಡಿದರೆ ; ನಾಚುವೆನ್+ಅಯ್ಯ ; ನಾಚು=ಲಜ್ಜೆ/ತಲೆಬಾಗುವುದು ; ನಾಚುವೆನಯ್ಯ=ಶಿವಬಕ್ತರಂತೆ ನಟಿಸುತ್ತಾ , ಕೆಟ್ಟ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗಳನ್ನು ಕಂಡು , ನೋವು ಮತ್ತು ಅಪಮಾನದಿಂದ ತಲೆಬಗ್ಗಿಸುತ್ತೇನೆ ; ಗುಹೇಶ್ವರ=ಶಿವ/ದೇವರು)
ಸುತ್ತಿ ಸುತ್ತಿ ಬಂದಡಿಲ್ಲ ಲಕ್ಷಗಂಗೆಯ ಮಿಂದಡಿಲ್ಲ
ತುಟ್ಟತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ
ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ
ನಿಚ್ಚಕ್ಕೆ ನಿಚ್ಚ ನೆನೆವ ಮನವ ಅಂದಂದಿಗೆ ಅತ್ತಲಿತ್ತ
ಹರಿವ ಮನವ ಚಿತ್ತದಲ್ಲಿ ನಿಲಿಸಬಲ್ಲಡೆ
ಬಚ್ಚಬರಿಯ ಬೆಳಗು ಗುಹೇಶ್ವರ ಲಿಂಗವು.
ಕೆಟ್ಟ ಬಯಕೆಗಳತ್ತ ಎಡೆಬಿಡದೆ ತುಡಿಯುವ ಮಯ್ ಮನಗಳ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದು , ಇನ್ನುಳಿದ ಎಲ್ಲಾ ಬಗೆಯ ಆಚರಣೆಗಳಿಗಿಂತ ದೊಡ್ಡದೆಂದು ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.
( ಬಂದಡೆ+ಇಲ್ಲ ; ಬಂದಡೆ=ಬಂದರೆ ; ಸುತ್ತಿ ಸುತ್ತಿ ಬಂದಡಿಲ್ಲ=ದೇವರ ವಿಗ್ರಹಗಳ ಸುತ್ತ/ದೇವತೆಗಳು ನೆಲೆಸಿದ್ದಾರೆಂದು ಜನಸಮುದಾಯ ಪರಂಪರೆಯಿಂದಲೂ ನಂಬಿಕೊಂಡು ಬಂದಿರುವ ಮರಗಿಡಗಳ ಸುತ್ತ ಮೂರು ಸಲ ಇಲ್ಲವೇ ಅನೇಕ ಸಲ ಸುತ್ತುವುದರಿಂದ/ಬಳಸುವುದರಿಂದ/ಪ್ರದಕ್ಶಿಣೆಯನ್ನು ಹಾಕುವುದರಿಂದ ಯಾವ ಪ್ರಯೋಜನವು ದೊರೆಯದು/ಏನನ್ನೂ ಪಡೆಯಲಾಗದು ; ಲಕ್ಷ+ಗಂಗೆ ; ಲಕ್ಷ=ನೂರು ಸಾವಿರ/ಲೆಕ್ಕಕ್ಕೆ ಸಿಗದ ಸಂಕೆ/ಹಲವು ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ ; ಗಂಗೆ=ದೇಗುಲಗಳ ಬಳಿ ಹರಿಯುವ ತೊರೆಗಳ/ಇರುವ ಕೆರೆಕಟ್ಟೆಬಾವಿಗಳ ನೀರು ; ಮಿಂದಡೆ+ಇಲ್ಲ ; ಮೀ=ಸ್ನಾನ ಮಾಡು/ಜಳಕ ಮಾಡು/ಮಯ್ ತೊಳೆ ; ಮಿಂದಡೆ=ಸ್ನಾನ ಮಾಡಿದರೆ/ಮಯ್ ತೊಳೆದರೆ ; ಲಕ್ಷಗಂಗೆಯ ಮಿಂದಡಿಲ್ಲ=ತೀರ‍್ತಕ್ಶೇತ್ರಗಳೆಂದು ಹೆಸರು ಪಡೆದಿರುವ ನೆಲೆಗಳಲ್ಲಿರುವ ಕೆರೆ/ಕೊಳ/ತೊರೆಗಳಲ್ಲಿ ಮಿಂದೇಳುವುದರಿಂದ ಯಾವ ಪ್ರಯೋಜನವೂ ದೊರೆಯದು ; ತುಟ್ಟತುದಿ=ಬಹಳ ಎತ್ತರದ ನೆಲೆ/ಮೇಲಿನ ಕೊನೆ ; ಮೇರು=ಒಂದು ಪರ‍್ವತದ ಹೆಸರು ; ಗಿರಿ=ಬೆಟ್ಟ/ಪರ‍್ವತ ; ಮೆಟ್ಟಿ=ತುಳಿದು/ಮೇಲಿನ ತುದಿಗೆ ಹತ್ತಿಹೋಗಿ ನಿಂತುಕೊಂಡು ; ಕೂಗಿದಡೆ+ಇಲ್ಲ ; ಕೂಗು=ಎತ್ತರದ ದನಿಯಲ್ಲಿ ಪದಗಳನ್ನು ಉಚ್ಚರಿಸುವುದು ; ಕೂಗಿದಡಿಲ್ಲ=ಎತ್ತರದ ದನಿಯಲ್ಲಿ ಗಟ್ಟಿಯಾಗಿ ದೇವರ ಹೆಸರನ್ನು ಉಚ್ಚರಿಸುತ್ತಾ ಮೊರೆಯಿಡುವುದರಿಂದ ಯಾವ ಪ್ರಯೋಜನವೂ ದೊರೆಯದು ; ನಿತ್ಯ=ಸದಾಕಾಲ/ಯಾವಾಗಲೂ ; ನೇಮ+ಇಂದ ; ನೇಮ=ದೇವರನ್ನು ಒಲಿಸಿಕೊಳ್ಳಲು/ದೇವರ ಅನುಗ್ರಹವನ್ನು ಪಡೆಯಲೆಂದು ಮಾಡುವ ಬಹುಬಗೆಯ ಆಚರಣೆಗಳು ; ತನು=ಮಯ್/ದೇಹ/ಶರೀರ ; ಮುಟ್ಟಿ+ಕೊಂಡಡೆ+ಇಲ್ಲ ; ಮುಟ್ಟು=ಸೋಕುವುದು/ಸ್ಪರ‍್ಶಿಸುವುದು ; ಕೊಂಡಡೆ=ಕೊಂಡರೆ ; ತನುವ ಮುಟ್ಟಿಕೊಂಡಡಿಲ್ಲ=ದೇವರ ವಿಗ್ರಹದ ಮುಂದೆ ದಿಂಡುರುಳುವುದು/ದೇವರ ವಿಗ್ರಹದ ಸುತ್ತ ಉರುಳುಸೇವೆಯನ್ನು ಮಾಡುವುದು/ಉಪವಾಸ ಮುಂತಾದ ಆಚರಣೆಗಳ ಮೂಲಕ ಮಯ್ಯನ್ನು ದಂಡಿಸುವುದರಿಂದ ಯಾವ ಪ್ರಯೋಜನವೂ ದೊರೆಯದು ; ನಿಚ್ಚ=ನಿತ್ಯವೂ/ಪ್ರತಿದಿನವೂ ; ನಿಚ್ಚಕ್ಕೆ ನಿಚ್ಚ=ಎಡೆಬಿಡದೆ/ಒಂದೇ ಸಮನೆ/ನಿರಂತರವಾಗಿ ; ನೆನೆವ=ನೆನಪಿಸಿಕೊಳ್ಳುವ ; ಮನ=ಮನಸ್ಸನ್ನು ; ಅಂದು+ಅಂದಿಗೆ ; ಅಂದು=ಆ ದಿನ/ಆ ಸಮಯ ; ಅಂದಿಗೆ= ಆ ದಿನಕ್ಕೆ/ಆ ಸಮಯಕ್ಕೆ ; ಅತ್ತ+ಅಲ್+ಇತ್ತ ; ಅತ್ತಲ್=ಆ ಕಡೆ ; ಇತ್ತ=ಈ ಕಡೆ ; ಹರಿ=ಚಲಿಸು ; ಅಂದಂದಿಗೆ ಅತ್ತಲಿತ್ತ ಹರಿವ ಮನವ=ಜೀವನದ ಪ್ರತಿಗಳಿಗೆಯಲ್ಲೂ ಬಹುಬಗೆಯ ಚಂಚಲತೆಯಿಂದ ಆಸೆ/ಆದರ‍್ಶಗಳ ನಡುವೆ, ಒಳಿತು/ಕೆಡುಕಿನ ನಡುವೆ ಇಬ್ಬಗೆಯ ಸೆಳೆತದಲ್ಲಿ ಸಿಲುಕಿ ತೊಳಲಾಡುವ ಮನಸ್ಸನ್ನು ; ಚಿತ್ತ=ಮನಸ್ಸು/ಗುರಿ/ಉದ್ದೇಶ ; ನಿಲಿಸ+ಬಲ್ಲಡೆ ; ನಿಲಿಸ=ನಿಲ್ಲಿಸಲು ; ಬಲ್ಲಡೆ=ತಿಳಿದಿದ್ದರೆ ; ಚಿತ್ತದಲ್ಲಿ ನಿಲಿಸಬಲ್ಲಡೆ=ಒಳಿತಿನ ನಡೆನುಡಿಗಳತ್ತ ನೆಲೆಗೊಳಿಸುವ ಕಸುವು ದೊರೆತರೆ ; ಬಚ್ಚಬರಿ=ಪರಿಪೂರ‍್ಣವಾದ/ಕೇವಲ ; ಬಚ್ಚಬರಿ ಬೆಳಗು=ಸಂಪೂರ‍್ಣವಾದ ಬೆಳಕು/ಪರಿಪೂರ‍್ಣವಾದ ಅರಿವು ದೊರೆಯುವುದು ಎಂಬ ರೂಪಕದ ತಿರುಳನಲ್ಲಿ ಬಳಕೆಯಾಗಿದೆ ; ಗುಹೇಶ್ವರ ಲಿಂಗ=ಶಿವ/ದೇವರು)
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ
ಅದರಿಚ್ಚೆಯನರಿದು ಹೊಡೆಯದಿದ್ದರೆ
ಅದರಚ್ಚು ಮುರಿಯಿತ್ತು ಗುಹೇಶ್ವರ.
ಜೀವನದಲ್ಲಿ ಎಲ್ಲಾ ಬಗೆಯ ಆಗುಹೋಗುಗಳಿಗೆ ಕಾರಣವಾಗುವ ಕಣ್ಣು/ಕಿವಿ/ಮೂಗು/ತೊಗಲು/ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಂಡು ಬಾಳಬೇಕಾದ ಅಗತ್ಯವನ್ನು ರೂಪಕ/ಶಬ್ದಚಿತ್ರದ ಮೂಲಕ ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.
( ಕಾಲುಗಳ್+ಎರಡೂ ; ಗಾಲಿ=ಚಕ್ರ ; ಕಂಡ+ಅಯ್ಯ ; ಕಂಡ=ನೋಡಿದ ; ಕಂಡಯ್ಯ=ತಿಳಿದು ನೋಡು/ಅರಿತು ನೋಡು ; ದೇಹ+ಎಂಬುದು+ಒಂದು ; ಎಂಬುದು=ಎನ್ನುವುದು ; ಬಂಡಿ=ಗಾಡಿ/ಚಕ್ಕಡಿ ; ತುಂಬಿದ ಬಂಡಿ=ಸರಕಿನಿಂದ ತುಂಬಿದ ಗಾಡಿ ; ಹೊಡೆವವರು+ಐವರು ; ಹೊಡೆವವರು=ಮುನ್ನಡೆಸುವವರು/ಮುಂದೆ ಮುಂದೆ ಸಾಗುವಂತೆ ಮಾಡುವವರು ; ಐವರು=ಅಯ್ದುಮಂದಿ ; ಮಾನಿಸ=ಮಾನವ ; ಮಾನವನ ಮಯ್ಯನ್ನು/ದೇಹವನ್ನು ಸರಕು ತುಂಬಿದ ಬಂಡಿಯನ್ನಾಗಿಯೂ , ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಬದುಕಿನ ನಡೆನುಡಿಗಳನ್ನು ರೂಪಿಸುವ ಕಣ್ಣು/ಕಿವಿ/ಮೂಗು/ತೊಗಲು/ನಾಲಿಗೆಯೆಂಬ ಅಯ್ದು ಇಂದ್ರಿಯಗಳನ್ನು ಬಂಡಿಯನ್ನು ಮುನ್ನಡೆಸುವ ವ್ಯಕ್ತಿಗಳನ್ನಾಗಿಯೂ ಕಲ್ಪಿಸಿಕೊಳ್ಳಲಾಗಿದೆ ; ಒಬ್ಬರಿಗೆ+ಒಬ್ಬರು ; ಸಮ+ಇಲ್ಲ+ಅಯ್ಯ ; ಒಬ್ಬರಿಗೊಬ್ಬರು ಸಮವಿಲ್ಲಯ್ಯ=ಕಣ್ಣಮುಂದಿನ ವಸ್ತುಗಳನ್ನು ಮತ್ತು ಲೋಕದಲ್ಲಿ ನಡೆಯುವ ಆಗುಹೋಗುಗಳನ್ನು ಕಾಣುತ್ತಿದ್ದಂತೆಯೇ , ಉಳಿದೆಲ್ಲ ಇಂದ್ರಿಯಗಳು ಸೆಳೆತ/ಮೋಹಕ್ಕೆ ಒಳಗಾಗಿ ಬಹುಬಗೆಯ ಒಳಮಿಡಿತಗಳಿಂದ ತುಡಿಯತೊಡಗುತ್ತವೆ. ಆಗ ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ತುಂಬಾ ತೊಡಕಿನ ಕೆಲಸವಾಗುತ್ತದೆ ; ಅದರ+ಇಚ್ಚೆಯನ್+ಅರಿದು ; ಅದರ=ಅಯ್ದು ಇಂದ್ರಿಯಗಳ ; ಇಚ್ಚೆಯನ್=ಬಯಕೆಯನ್ನು/ಆಸೆಯನ್ನು/ಕಾಮನೆಯನ್ನು ; ಅರಿದು=ತಿಳಿದು/ಹೊಂದಾಣಿಕೆಯನ್ನು ಮಾಡಿ/ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ತಿಳಿದು ; ಹೊಡೆಯದೆ+ಇದ್ದರೆ ; ಹೊಡೆಯದಿದ್ದರೆ=ಕೆಡುಕನ್ನುಂಟು ಮಾಡುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು , ಒಳಿತಿನ ನಡೆನುಡಿಗಳನ್ನು ಆಚರಣೆಯಲ್ಲಿ ತರದಿದ್ದರೆ ; ಅದರ+ಅಚ್ಚು ; ಅದರ=ಗಾಡಿಯ/ಬಂಡಿಯ ; ಅಚ್ಚು=ಗಾಡಿ/ಬಂಡಿಯಲ್ಲಿನ ಎರಡು ಚಕ್ರಗಳನ್ನು ಒಂದುಗೂಡಿಸಲೆಂದು ಹಾಕಿರುವ ಕಬ್ಬಿಣದ ಉಪಕರಣ/ಇರಚಿ ; ಮುರಿ=ತುಂಡಾಗು ; ಮುರಿಯಿತ್ತು=ತುಂಡಾಗುತ್ತದೆ ; ಅದರಚ್ಚು ಮುರಿಯಿತ್ತು=ಮಾನವನ ಬದುಕು ಮುನ್ನಡೆಯದೆ , ದುರಂತದಲ್ಲಿ ಕೊನೆಗೊಳ್ಳುತ್ತದೆ ಎಂಬ ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ ; ಗುಹೇಶ್ವರ=ಶಿವ/ದೇವರು)
ಶಬ್ದಸಂಭ್ರಮದಲ್ಲಿ ಹಿಂದುಗಾಣರು ಮುಂದುಗಾಣರು
ತಮ್ಮ ತಾವರಿಯರು ಇದು ಕಾರಣ
ಮೂರು ಲೋಕವೆಲ್ಲವು ಬರುಸೂರೆವೋಯಿತ್ತು ಗುಹೇಶ್ವರ.
ದೊಡ್ಡ ದೊಡ್ಡ ಮಾತುಗಳನ್ನಾಡುತ್ತ , ಮಾತಿನ ಮೋಡಿಯಿಂದಲೇ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತ , ಎಲ್ಲವನ್ನೂ ಗೆದ್ದೆವೆಂದು ಮೆರೆಯುವ ವ್ಯಕ್ತಿಗಳನ್ನು ಅಲ್ಲಮನು ಈ ವಚನದಲ್ಲಿ ಟೀಕಿಸಿದ್ದಾನೆ.
( ಶಬ್ದ=ಮಾತು/ಪದ/ನುಡಿ ; ಸಂಭ್ರಮ=ಆಡಂಬರ/ಬೊಬ್ಬೆ/ಸಡಗರ ; ಶಬ್ದಸಂಭ್ರಮದಲ್ಲಿ=ಕೇಳುಗರ ಮನಸೆಳೆಯುವಂತಹ ಮಾತುಗಳನ್ನಾಡುವುದರಲ್ಲಿ ತೊಡಗಿ ; ಹಿಂದು+ಕಾಣರು ; ಹಿಂದು=ಈ ಮೊದಲು ನಡೆದಿರುವುದನ್ನು ; ಕಾಣರು=ತಿಳಿಯರು ; ಮುಂದು+ಕಾಣರು ; ಮುಂದು=ಮುಂದಿನ ದಿನಗಳಲ್ಲಿ ಏನಾಗುವುದೆಂಬುದನ್ನು ; ತಾವ್+ಅರಿಯರು ; ತಾವ್=ತಾವು/ಅವರು/ಮಾತಿನ ಮಲ್ಲರು ; ಅರಿ=ತಿಳಿ/ಗ್ರಹಿಸು ; ಅರಿಯರು=ತಿಳಿಯಲಾರರು/ಗ್ರಹಿಸಿಕೊಳ್ಳಲಾರರು ; ತಮ್ಮ ತಾವರಿಯರು=ತಮ್ಮ ನಡೆನುಡಿಯಲ್ಲಿನ ಇತಿಮಿತಿಗಳನ್ನು ತಿಳಿಯಲಾರರು ; “ತಮ್ಮನ್ನು ತಾವು ಅರಿಯುವುದು” ಎಂದರೆ ಪ್ರತಿಯೊಬ್ಬ ಮಾನವನು ತಾನು ಹುಟ್ಟಿ ಬೆಳೆದು ಬಾಳುವ ಪರಿಸರದಲ್ಲಿರುವ ನಿಸರ‍್ಗದಲ್ಲಿನ ಏರಿಳಿತಗಳಿಗೆ ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟು ವ್ಯವಹರಿಸುತ್ತಿರುತ್ತಾನೆ. ಆದುದರಿಂದಲೇ ಮಾನವ ಜೀವಿಯ ಮಯ್-ಮನಗಳು ಸದಾಕಾಲ ಒಳಿತುಕೆಡುಕಿನ ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುತ್ತವೆ ಎಂಬ ವಾಸ್ತವವನ್ನು ತಿಳಿದುಕೊಳ್ಳುವುದು ; ಇದು ಕಾರಣ=ಎಲ್ಲ ವ್ಯಕ್ತಿಗಳಲ್ಲಿಯೂ ಒಳಿತು-ಕೆಡುಕಿನ ಒಳಮಿಡಿತಗಳು ಇರುತ್ತವೆ ಎಂಬ ವಾಸ್ತವವನ್ನು ತಿಳಿಯದೆ ಇರುವುದರಿಂದ ; ಲೋಕ+ಎಲ್ಲವು ; ಮೂರು ಲೋಕ=ದೇವಲೋಕ/ಬೂಲೋಕ/ಪಾತಾಳಲೋಕವೆಂಬ ಮೂರು ಲೋಕಗಳು ಇವೆಯೆಂಬ ನಂಬಿಕೆಯು ಪರಂಪರಾಗತವಾಗಿ ಜನಮನದಲ್ಲಿ ನೆಲೆಸಿದೆ ; ಬರು+ಸೂರೆ+ಹೋಯಿತ್ತು ; ಬರು=ಬರಿದು/ಕೇವಲ/ಏನೊಂದು ಪ್ರಯೋಜನವಿಲ್ಲದೆ ; ಸೂರೆ=ಲೂಟಿ/ಕೊಳ್ಳೆ ; ಬರುಸೂರೆಹೋಯಿತ್ತು=ಟೊಳ್ಳುತನದ ಬದುಕಿನಲ್ಲಿ/ಬೂಟಾಟಕೆಯ ನಡೆನುಡಿಗಳಲ್ಲೇ ಕಳೆದುಹೋಗುತ್ತಿದೆ/ಸಂಪೂರ‍್ಣವಾಗಿ ಹಾಳಾಗುತ್ತಿದೆ ; ಗುಹೇಶ್ವರ=ಶಿವ/ದೇವರು)
( ಚಿತ್ರ ಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು