ಹೊಸ ವರುಶಕ್ಕೆ ಕಿಡಿ ಹಚ್ಚಿದ ಇಗ್ನಿಸ್

ಜಯತೀರ‍್ತ ನಾಡಗವ್ಡ.

ignis1

ಹೊಸ ವರುಶಕ್ಕೆ ಮಾರುತಿ ಸುಜುಕಿ ಕೂಟ ಬರ‍್ಜರಿ ಎಂಟ್ರಿ ಕೊಡುತ್ತಿದೆ. ಮಾರುತಿ ಸುಜುಕಿರವರ ಇಗ್ನಿಸ್(Ignis) ಹೆಸರಿನ ಹೊಸ ಬಂಡಿ ನಿನ್ನೆ ಮಾರುಕಟ್ಟೆಗೆ ಬಂದಿದೆ. ಹೊಸ ಬಂಡಿಗಳನ್ನು ಮಾರುಕಟ್ಟೆಗೆ ತರುತ್ತ ತನ್ನ ಮುಂದಾಳ್ತನ ಕಾಯ್ದುಕೊಂಡಿರುವ ಮಾರುತಿ ಸುಜುಕಿ, ಹೊಸ ವರುಶಕ್ಕೆ ಇಗ್ನಿಸ್ ಮೂಲಕ ಪಯ್ಪೋಟಿಯ ಕಿಡಿಯನ್ನು ಜೋರಾಗೇ ಹೊತ್ತಿಸಿದೆ. ಮಾರುತಿ ಇಗ್ನಿಸ್‌ನ ಒಂದು ಮರುನೋಟ ಈ ಬರಹದಲ್ಲಿ ಮುಂದಿಡುತ್ತಿದ್ದೇನೆ.

ಬಿಣಿಗೆ ಮತ್ತು ಸಾಗಣಿ (Engine and Transmission):

ಪೆಟ್ರೋಲ್ ಬಂಡಿಗೆ 1.2ಲೀಟರ್ ಅಳತೆಯ 4 ಉರುಳೆಗಳುಳ್ಳ ಕೆ12 ಬಿಣಿಗೆಯನ್ನು(K12 Engine) ಅಳವಡಿಸಿಕೊಂಡು ಬರಲಿದೆ. ಇದರಿಂದ 83 ಕುದುರೆಬಲದ ಕಸುವು ಉಂಟು ಮಾಡಿ, 113 ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ(Torque) ನೀಡಬಲ್ಲುದು. 5 ವೇಗದ ಓಡಿಸುಗನಿಡಿತದ ಸಾಗಣಿ(5-Speed Manual Transmission) ಇದಕ್ಕೆ ಜೊತೆಯಾಗಿರಲಿದೆ. 5 ವೇಗದ ಅರೆ-ಓಡಿಸುಗನಿಡಿತದ ಸಾಗಣಿಯ (5-speed automatic-manual transmission) ಇನ್ನೊಂದು ಆಯ್ಕೆಯನ್ನು ನೀಡಿದ್ದಾರೆ.

ಡೀಸೆಲ್ ಬಂಡಿಗೆ 1.3ಲೀಟರ್ ಅಳತೆಯ ಎಸ್‌ಡಿಇ ಡಿಡಿಆಯ್‌ಎಸ್ ಬಿಣಿಗೆ(SDE DDIS Engine) ಇರಲಿದೆ. ಇದು 75 ಕುದುರೆಬಲ ಕಸುವನ್ನು ಉಂಟು ಮಾಡಿ, 190ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ ನೀಡಬಲ್ಲುದು. ಡೀಸೆಲ್ ಬಿಣಿಗೆಗೂ , ಪೆಟ್ರೋಲ್ ಬಿಣಿಗೆಯಲ್ಲಿ ನೀಡಿರುವಂತೆ ಎರಡು ಬಗೆಯ ಸಾಗಣಿಯ ಆಯ್ಕೆಗಳನ್ನು ನೀಡಲಾಗಿದೆ. ಬಿಣಿಗೆ ಮತ್ತು ಸಾಗಣಿಯ ವಿಶಯಗಳಲ್ಲಿ ಹೇಳಿಕೊಳ್ಳುವಂತ ವಿಶೇಶವನ್ನೇನು ನೀಡದೇ, ಹಳೆಯ ನಂಬಿಗಸ್ತ ಬಿಣಿಗೆ/ಸಾಗಣಿಗಳನ್ನು ಇದರಲ್ಲೂ ಮುಂದುವರೆಸಲಾಗಿದೆ.

ignis-table1

ಮಯ್ಲಿಯೋಟ(Mileage):

ಪೆಟ್ರೋಲ್ ಬಂಡಿ 20.9 ಕಿ.ಮೀ.ಪ್ರತಿ ಲೀಟರ್‌ ಮಯ್ಲಿಯೋಟ ಹೊಂದಿದ್ದರೆ , ಡೀಸೆಲ್ ಬಂಡಿ ಪ್ರತಿ ಲೀಟರ್‌‌ಗೆ 26.8 ಕಿ.ಮೀ. ಸಾಗಲಿದೆ.

ಮೈಮಾಟ:

ಮುಂಬಾಗದಿಂದ ದಿಟ್ಟ ನೋಟ ಪಡೆದಿರುವ ಇಗ್ನಿಸ್ ಬಂಡಿ, ಮಾರುತಿಯ ಬಹುತೇಕ ಬಂಡಿಗಳಲ್ಲಿ ಕಾಣಸಿಗುವ ಮುನ್ಕಂಬಿ ತೆರೆ(Front Grill) ಪಡೆದಿದೆ. 3700 ಮಿಲಿಮೀಟರ್‌ಗಳ ಉದ್ದ, 1690 ಮಿಲಿಮೀಟರ್‌ಗಳ ಅಗಲ ಮತ್ತು 1595 ಮಿಲಿಮೀಟರ್‌ಗಳಶ್ಟು ಎತ್ತರ – ಇವು ಇಗ್ನಿಸ್ ಬಂಡಿಯ ಪ್ರಮುಕ ಆಯಗಳು. 180 ಮಿಲಿಮೀಟರ್‌ಗಳ ನೆಲತೆರವು ಈ ಬಂಡಿಯನ್ನು ಕಿರು ಕ್ರಾಸೋವರ್(Compact Crossover) ಬಂಡಿಗಳ ಸಾಲಿಗೆ ನಿಲ್ಲಿಸಿದೆ. 4.7 ಮೀಟರ್‌ಗಳ ತಿರುಗರೆ(Turning Radius) ಹೊಂದಿರುವ ಈ ಬಂಡಿಯನ್ನು ಕಿರಿದಾದ ದಾರಿಗಳಲ್ಲಿ ಸರ್ರನೆ ತಿರುಗಿಸಬಹುದು. 15 ಇಂಚಿನ ಟೈರುಗಳು ಇಗ್ನಿಸ್ ಬಂಡಿಯನ್ನು ಜಗ್ಗುವ ಸಾರತಿಗಳು.

ignis-table2

ಇಗ್ನಿಸ್ ಬಂಡಿ ಒಳಗಡೆಯಿಂದ ಚೆನ್ನಾಗಿದೆ, ಓಡಿಸುಗ ಸೇರಿ 5 ಮಂದಿ ಕುಳಿತುಕೊಂಡು ಸಾಗಲು ಬಲು ತಕ್ಕುದಾಗಿದೆ. ಕೈಕಾಲು ಚಾಚಲು ಸಾಕಶ್ಟು ಜಾಗವಿದೆ. 260ಲೀಟರ್ ಗಾತ್ರದ ಸರಕುಚಾಚಿನ(Luggage Space) ಜಾಗವಿದೆ. ಎರಡು ಬಣ್ಣದ ತೋರುಮಣೆ(Dual tone Dashboard), ಕೂಡುವಿಕೆಗೆ(connectivity) USB ಕಿಂಡಿ, Bluetooth ಕಿಂಡಿಗಳ ಏರ‍್ಪಾಟು ಒದಗಿಸಲಾಗಿದೆ. ಆಲ್ಪಾ(alpha), ಜೀಟಾ(Zeta) ಮಾದರಿಗಳಲ್ಲಿ ನಾಲ್ಕು ಉಲಿಕಗಳ(Speaker) ಹಾಡುಗಾರಿಕೆ ಪೆಟ್ಟಿಗೆಯೇರ‍್ಪಾಟು(Music System) ನೀಡಲಾಗಿದೆ. ಆಲ್ಪಾ, ಜೀಟಾ, ಸಿಗ್ಮಾ, ಡೆಲ್ಟಾ ನಾಲ್ಕು ಮಾದರಿಗಳಲ್ಲಿ ಸಿಗುವ ಇಗ್ನಿಸ್ ಬಂಡಿಗಳ ಮುಂಬಾಗಿಲಿಗೆ ಮಿನ್ಕಿಂಡಿ(Power window) ಅಳವಡಿಸಿದ್ದರೆ, ಸಿಗ್ಮಾ ಮಾದರಿ ಬಿಟ್ಟು ಉಳಿದೆಲ್ಲ ಮಾದರಿಗಳ ಹಿಂಬಾಗಿಲಿಗೂ ಮಿನ್ಕಿಂಡಿ ನೀಡಲಾಗಿದೆ. ವಾಲಿಸಿ ತಿರುಗಿಸಬಲ್ಲ ತಿಗುರಿ(Tilt Steering), ತಿಗುರಿ ಮೇಲೆಯೇ ಒತ್ತುಗುಂಡಿಗಳನ್ನು ನೀಡಲಾಗಿದ್ದು ಅದರ ಮೂಲಕವೇ ಬಂಡಿಯ ತಿಳಿನಲಿ ಏರ‍್ಪಾಟಿನ(Infotainment System) ಮೇಲೆ ಹಿಡಿತ ಸಾದಿಸಬಹುದು. ಬೇಕಾದಶ್ಟು ಕಪ್, ಬಾಟಲಿ ಸೇರುವೆಗಳು(Cup/Bottle Holders) ಪಯಣಿಗರ ಓಡಾಟಕ್ಕೆ ನೆರವು ನೀಡಲಿವೆ.

ignis-table3

ಕಾಪಿನ ವಿಶೇಶತೆಗಳು(Safety Features):

ಕದಲ್ಗಾಪಿನ ಏರ‍್ಪಾಟು(Immobilizer), ಸಿಲುಕಿನ ತಡೆತದ ಏರ‍್ಪಾಟುಗಳನ್ನು(ABS) ಎಲ್ಲ ನಾಲ್ಕು ಮಾದರಿಗಳಲ್ಲಿ ಅಳವಡಿಸಲಾಗಿದೆ. ಬಂಡಿ ನಿಲ್ಲಿಸಲು ನೆರವಾಗುವ ಹಿಂಬದಿಯ ಅರಿವಿಕಗಳು(Sensor), ಹಿಂಬದಿಯ ಮಂಜಿಳಕ(Rear Defogger), ಆಲ್ಪಾ(alpha) ಮಾದರಿಯಲ್ಲಿ ನಿಲುಗಡೆಗೆ ನೆರವಾಗುವ ತಿಟ್ಟುಕಗಳನ್ನು(Parking Camera) ಜೋಡಿಸಿದ್ದಾರೆ. ಜೀಟಾ, ಆಲ್ಪಾ ಮಾದರಿಗಳಲ್ಲಿ ಹಿಂಬದಿಯ ಗಾಜಿಗೆ ಒರೆಸುಕಗಳನ್ನು(Wiper) ಕೂಡ ಅಳವಡಿಸಲಾಗಿದೆ.

ಪಯ್ಪೋಟಿ ಮತ್ತು ಹೋಲಿಕೆ:

ಪ್ರೀಮಿಯಂ ಕ್ರಾಸೋವರ್ ಅಂದರೆ ಮೇಲ್ಮಟ್ಟದ ಬಂಡಿಗಳ ಸಾಲಿಗೆ ಇಗ್ನಿಸ್‍‍ಅನ್ನು ಸೇರಿಸಬೇಕೆಂದು ಮಾರುತಿ ಸುಜುಕಿ ಕೂಟ ಹೆಣಗುತ್ತಿದೆ. ಆದರೆ ಈ ಬಂಡಿಯನ್ನು ನೋಡಿದರೆ ಇದು ಕಿರು ಕ್ರಾಸೋವರ್ ಬಂಡಿಯೆನ್ನಲಡ್ಡಿಯಿಲ್ಲ. ಹೀಗಾಗಿ ಇದು ಮಹೀಂದ್ರಾರವರ ಕೆಯುವಿ 1ಒಒ ಜೊತೆಗೆ ಪಯ್ಪೋಟಿ ನೀಡಬಹುದೆಂದು ತಾನೋಡ ಕಯ್ಗಾರಿಕೆಯ ಪಂಡಿತರ ಲೆಕ್ಕಾಚಾರ.

ಉದ್ದ ಹಾಗೂ ಗಾಲಿಗಳ ನಡುವಿನ ಅಂತರ ಈ ಎರಡು ಆಯಗಳಲ್ಲಿ ಇಗ್ನಿಸ್, ಮಹೀಂದ್ರಾ ಕೆಯುವಿಗಿಂತ ಹೆಚ್ಚಿದೆ, ಹೀಗಾಗಿ ಇದರಲ್ಲಿ ಹೆಚ್ಚಿನ ಕಾಲು ಚಾಚಿಕೆ(Leg Space), ಸರಕು ಚಾಚಿಕೆ ಕಂಡು ಬರುತ್ತದೆ. ಅಗಲ ಮತ್ತು ಎತ್ತರಗಳಲ್ಲಿ ಮುಂದಿರುವ ಕೆಯುವಿ, ಹೆಚ್ಚಿನ ತಲೆಚಾಚಿಕೆ(Head Room) ಮತ್ತು ಹಿಂಬದಿಯ ಪಯಣಿಗರಿಗೆ ಹೆಚ್ಚಿನ ಜಾಗ ಒದಗಿಸಿ ಕೊಡಲಿದೆ.

ಇಗ್ನಿಸ್‌ನ 4 ಉರುಳೆಗಳ ಪೆಟ್ರ‍ೋಲ್ ಮತ್ತು ಡೀಸೆಲ್ ಬಿಣಿಗೆಗಳೆರಡು, ಕೆಯುವಿಯಲ್ಲಿ ಅಳವಡಿಸಲಾದ 3 ಉರುಳೆಗಳ ಬಿಣಿಗೆಗಳಿಗಿಂತ ಹೆಚ್ಚಿನ ಕಸುವು ಒದಗಿಸಲಿವೆ. ಕೆಯುವಿಯಲ್ಲಿ ಕೇವಲ ಓಡಿಸುಗನಿಡಿತದ ಸಾಗಣಿಯ ಆಯ್ಕೆ ಇದ್ದರೆ, ಇಗ್ನಿಸ್ ಬಂಡಿ ಓಡಿಸುಗ ಮತ್ತು ಅರೆ-ಓಡಿಸುಗನಿಡಿತದ ಸಾಗಣಿಗಳ ಆಯ್ಕೆಯಲ್ಲಿ ಸಿಗಲಿದೆ. ಮಯ್ಲಿಯೋಟದ ವಿಶಯದಲ್ಲೂ ಇಗ್ನಿಸ್ ಬಂಡಿ ಕೆಯುವಿಯನ್ನು ಬಗ್ಗು ಬಡಿದಿದೆ.

ignis-table4

ವಿಶೇಶ ಈಡುಗಾರಿಕೆಯಿಂದ(Design) ಸುದ್ದಿ ಮಾಡುತ್ತಿರುವ ಇಗ್ನಿಸ್ ಮಾರುತಿ ಸುಜುಕಿ ಕೂಟಕ್ಕೆ ಗೆಲುವಾಗಲಿದೆಯೇ ಇಲ್ಲವೇ ಸೋಲಿನ ಕಹಿ ಉಣಿಸುವುದೇ? ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

(*Crossover- ಕ್ರಾಸೋವರ್ ಅಂದರೆ ಅತ್ತ ಹಲಬಳಕೆ ಬಂಡಿಗಳಶ್ಟು ದೊಡ್ಡದಲ್ಲದ, ಇತ್ತ ಕಿರುಹಿಂಗದ(Hatchback) ಇಲ್ಲವೇ ಸೇಡಾನ್‌ಗಳಿಗಿಂತ ಕೊಂಚ ದೊಡ್ಡದೆನಿಸುವಂತ, ಇವೆರಡರ ಬೆರಕೆಯ ಬಂಡಿ).

ಬೆಲೆ:

ಇಗ್ನಿಸ್ ಬಂಡಿಯ ವಿವಿದ ಬಗೆಗಳ ಬೆಲೆಯನ್ನು ಕೆಳಗಡೆ ಪಟ್ಟಿಯಲ್ಲಿ ನೀಡಲಾಗಿದೆ. ಈಗಾಗಲೇ ಮುಂಗಡ ಕಾಯ್ದಿರಿಸುವಿಕೆ ಆರಂಬಗೊಂಡಿದ್ದು, ಬರೀ ರೂ. 11,000 ಕೊಟ್ಟು ಮುಂಗಡ ಕಾಯ್ದಿರಿಸಬಹುದು. ಮಾರುತಿ ಸುಜುಕಿರವರು ಮೇಲ್ಮಟ್ಟದ ಬಂಡಿಗಳನ್ನು ಮಾರಲೆಂದೇ ಕಳೆದ ವರುಶ ಶುರು ಮಾಡಿದ್ದ ನೆಕ್ಸಾ ಮಳಿಗೆಯ ಮೂಲಕವೇ ಇಗ್ನಿಸ್ ಬಂಡಿಯನ್ನು ಮಾರಾಟಕ್ಕಿಡಲಿದ್ದಾರೆ.

ignis-table5

(ಬರಹ ಮತ್ತು ಚಿತ್ರ ಸೆಲೆ: nexaexperience.comautocarindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: