ಅಂಟಾರ‍್ಟಿಕಾದಲ್ಲೊಂದು ನೆತ್ತರ ಜಲಪಾತ!

ವಿಜಯಮಹಾಂತೇಶ ಮುಜಗೊಂಡ.

ನಿಸರ‍್ಗದ ಅದ್ಬುತಗಳು ಒಂದೆರಡಲ್ಲ. ನೆಲದ ಒಡಲಾಳದಿಂದ ಹೊರಗೆ ಸುಡುವ ನೀರನ್ನು ಚಿಮ್ಮುವ ಬಿಸಿನೀರಿನ ಬುಗ್ಗೆಗಳ ಬಗ್ಗೆ ನೀವು ಕೇಳಿರಬಹುದು. ಹರಿಯುವ ಕಾಮನಬಿಲ್ಲು ಎಂದು ಕರೆಯಿಸಿಕೊಳ್ಳುವ ಅಮೆರಿಕದ ಕ್ಯಾನೋ ಕ್ರಿಸ್ಟೇಲ್ಸ್ ನದಿಯ ಬಗ್ಗೆಯೂ ನಿಮಗೆ ಗೊತ್ತಿರಬಹುದು. ಮೂಡಣ(east) ಅಂಟಾರ‍್ಟಿಕಾದ ಟೇಲರ್ ಕಣಿವೆಯಲ್ಲಿ ನೆತ್ತರ ಅಬ್ಬಿ(falls) ಎಂದು ಕರೆಯಿಸಿಕೊಳ್ಳುವ ನೀರಿನ ಜಲಪಾತ ಒಂದಿದೆ. ಇದೇನಿದು ನೆತ್ತರ ಅಬ್ಬಿ ಎಂದು ನಿಮಗೆ ಅಚ್ಚರಿಯಾಗಬಹುದು. ನೆತ್ತರಿನಂತೆ ಕೆಂಪು ಬಣ್ಣವುಳ್ಳ ನೀರು ಹರಿಯುವುದರಿಂದಾಗಿ ಈ ಅಬ್ಬಿಗೆ ‘ನೆತ್ತರ ಅಬ್ಬಿ’ ಅತವಾ ‘ಬ್ಲಡ್ ಪಾಲ್ಸ್’ ಎನ್ನುವ ಹೆಸರು ಬಂದಿದೆ.

‘ನೆತ್ತರ ಅಬ್ಬಿ’, ಎಲ್ಲಿ ಮತ್ತು ಹೇಗೆ?

ಮೂಡಣ ಅಂಟಾರ‍್ಟಿಕಾದ ವಿಕ್ಟೋರಿಯಾ ಲ್ಯಾಂಡ್‍ನಲ್ಲಿ ಮೆಕ್‍ಮುರ್‍ಡೋ ಡ್ರೈ ವ್ಯಾಲೀಸ್(McMurdo Dry Valleys) ಇದೆ. ಇದನ್ನು ಜಗತ್ತಿನ ಅತೀ ಬಂಜರು ನೆಲ ಎಂದೆನ್ನಲಾಗುತ್ತದೆ. ಇಲ್ಲಿರುವ ಟೇಲರ್ ವ್ಯಾಲಿಯ, ಟೇಲರ್ ನೀರ‍್ಗಲ್ಲಿನಿಂದ(Glacier) ಹರಿಯುವ ಉಪ್ಪುನೀರು ವೆಸ್ಟ್ ಲೇಕ್ ಬೋನೀ(West Lake Bonney) ಎನ್ನುವ ಉಪ್ಪು ನೀರಿನ ಕೆರೆಗೆ ಸೇರುತ್ತದೆ.

ಟೇಲರ್‍ಸ್ ನೀರ‍್ಗಲ್ಲಿನಿಂದ ಹರಿಯುವ ಉಪ್ಪುನೀರಿನಲ್ಲಿರುವ ಕಬ್ಬಿಣದ ಮಿನ್ತುಣುಕುಗಳು(ions) ವಾತಾವರಣದ ಗಾಳಿಯೊಂದಿಗೆ ಸೇರಿ ಹುಳಿಯುಟ್ಟುವಿಕೆಯ(oxidation) ಕ್ರಿಯೆಯಲ್ಲಿ ತೊಡಗುತ್ತವೆ. ಈ ಹುಳಿಯುಟ್ಟುವಿಕೆಯ ಕ್ರಿಯೆಯಲ್ಲಿ ಹೊರಬಂದ ಕಬ್ಬಿಣದ ಆಕ್ಸೈಡ್ ಮಂಜುಗಡ್ಡೆಯ ಮೇಲ್ಮೈಗೆ ಅಂಟಿಕೊಳ್ಳುತ್ತದೆ. ಬಳಿಕ ಮಂಜುಗಡ್ಡೆಯ ಮೇಲೆ ಹರಿಯುವ ಉಪ್ಪುನೀರು ಕಬ್ಬಿಣದ ಆಕ್ಸೈಡಿನೊಂದಿಗೆ ಬೆರೆತು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಕೆಂಪು ನೀರು ನೀರ್‍ಗಲ್ಲ ಸಂದುಗಳಿಂದ ಹರಿದು, ನೋಡಲು ನೆತ್ತರ ನದಿಯಂತೆ ಕಾಣುತ್ತದೆ. ಮೊದಲು ಕೆಂಪು ಪಾಚಿಯಿಂದಾಗಿ ನದಿಯ ನೀರು ನೆತ್ತರಿನಂತೆ ಕಾಣುತ್ತದೆ ಎಂದು ನಂಬಲಾಗಿತ್ತು. ಈ ಕುರಿತು ಮೊದಲು ಅರಕೆ ನಡೆಸಿದ್ದು ಆಸ್ಟ್ರೇಲಿಯಾದ ನೆಲದೊಡಲರಿಗ(geologist) ಗ್ರಿಪಿತ್ ಟೇಲರ್(Griffith Taylor) ಎಂಬುವರು. ಇವರಿಂದಾಗಿಯೇ ಈ ಕಣಿವೆಗೆ ಟೇಲರ್‍ಸ್ ವ್ಯಾಲಿ ಮತ್ತು ನೀರ‍್ಗಲ್ಲಿಗೆ ಟೇಲರ್‍ಸ್ ಗ್ಲೇಸಿಯರ್ ಎನ್ನುವ ಹೆಸರು ಬಂದಿದೆ.

ಅಂಟಾರ‍್ಟಿಕಾದಲ್ಲಿ ಜೀವಿಗಳು!

ಅಂಟಾರ್‍ಟಿಕಾದಲ್ಲಿ ಪೆಂಗ್ವಿನ್‍ಗಳ ಹೊರತಾಗಿ ಬೇರೆ ಜೀವಿಗಳು ಕಂಡುಬಂದಿರಲಿಲ್ಲ. ಅಲ್ಲಿ ಬೇರೆ ಬಗೆಯ ಸೂಕ್ಶ್ಮಜೀವಿಗಳೂ ಇರಲಿಕ್ಕಿಲ್ಲ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಅರಕೆಗಳ ಪ್ರಕಾರ ಇಲ್ಲಿ ಅತೀ ತಂಪಾದ ಉಪ್ಪಿನ ನೀರು ನೆಲದಡಿಯಲ್ಲಿ ಇರಬಹುದು ಎನ್ನಲಾಗುತ್ತಿದೆ. ಹಲವು ತಣ್ಣೀರಿನ ಕೆರೆಗಳು ನೆಲದಡಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡು ಇರಬಹುದು ಎಂದು ಊಹಿಸಲಾಗಿದೆ. ಈ ತಣ್ಣೀರಿನ ಕೆರೆಗಳಲ್ಲಿ ಹಲವು ಅತಿಸೂಕ್ಶ್ಮ ಜೀವಿಗಳು ಬೀಡುಬಿಟ್ಟಿರಬಹುದು ಎಂದು ಇತ್ತೀಚಿನ ಅರಕೆಗಳು ಹೇಳುತ್ತವೆ.

ಟೆನಿಸ್ಸೀ ಕಲಿಕೆವೀಡಿನ ಜಿಲ್ ಮಿಕುಕ್ಕಿ(Jill Mikucki) ಅವರ ಪ್ರಕಾರ, ನೆಲದಡಿಯಲ್ಲಿ ಬೆಸೆದುಕೊಂಡಿರುವ ಉಪ್ಪುನೀರಿನ ಕೆರೆಗಳಲ್ಲಿ ಸುಮಾರು 17 ಬಗೆಯ ಅತಿ ಸಣ್ಣಜೀವಿಗಳು ಇವೆಯಂತೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಇಲ್ಲಿನ ನೀರಿನಲ್ಲಿ ಯಾವುದೇ ಉಸಿರ‍್ಗಾಳಿ(oxygen) ಇಲ್ಲ. ಇಲ್ಲಿನ ಅತಿಸೂಕ್ಶ್ಮ ಜೀವಿಗಳು ಉಸಿರ‍್ಗಾಳಿಯ ಕೊರತೆಯ ನಡುವೆ ಸಲ್ಪೇಟನ್ನು ಬಿರುಗೆಯನ್ನಾಗಿ(catalyst) ಬಳಸಿಕೊಂಡು ಕಬ್ಬಿಣದ ಅಯಾನುಗಳೊಂದಿಗೆ ಉಸಿರಾಡುತ್ತವೆ. ಈ ಉಸಿರಾಟದ ನೆರವಿನಿಂದ ಅವು ತಿಂದಿದ್ದನ್ನು ಅರಗಿಸಿಕೊಳ್ಳುತ್ತವೆ. ಈ ಬಗೆಯ ಅರಗುವಿಕೆ ಜೀವಿಗಳಲ್ಲಿ ಮೊದಲ ಸಲ ಕಂಡುಬಂದಿದೆ. ಇದರ ಮೇಲೆ ಇನ್ನೂ ಹೆಚ್ಚಿನ ಅರಕೆ ನಡೆಯಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: