‘ದಿ ಎನ್‍ಚಾಂಟೆಡ್ ಹೈವೇ’ಯ ದೊಡ್ಡ ಆಕ್ರುತಿಗಳು

– ಕೆ.ವಿ.ಶಶಿದರ.

ಅಮೇರಿಕಾದ ನಾರ‍್ತ್ ಡಕೋಟ ರಾಜ್ಯದಲ್ಲಿರುವ, ಪ್ರವಾಸಿಗರನ್ನು ಮಂತ್ರ ಮುಗ್ದಗೊಳಿಸುವ ‘ದಿ ಎನ್‍ಚಾಂಟೆಡ್ ಹೈವೇ’ ಹೆದ್ದಾರಿ 32 ಮೈಲಿಗಳಶ್ಟು ಉದ್ದಕ್ಕೆ ಚಾಚಿದೆ. ಗ್ಲ್ಯಾಡ್‍ಸ್ಟೋನ್ ಹತ್ತಿರದಿಂದ ಪ್ರಾರಂಬವಾಗಿ ರೀಜೆಂಟ್‍ನಲ್ಲಿ ಮುಗಿಯುವ ಈ ಹೆದ್ದಾರಿಯ ಉದ್ದಕ್ಕೂ ಉಪಯೋಗಕ್ಕೆ ಬಾರದ ಲೋಹದ ಚೂರುಗಳಿಂದ ರಚಿತವಾದ ಬ್ರುಹದಾಕಾರದ ಆಕ್ರುತಿಗಳನ್ನು ಕಾಣಬಹುದು. ಬಾತು ಕೋಳಿಗಳು, ಜಿಂಕೆಗಳು, ಪೆಸೆಂಟ್ ಗಳು, ಮಿಡತೆಗಳು, ಟೆಡ್ಡಿ ರೂಸ್‍ವೆಲ್ಟ್, ಟಿನ್ ಪ್ಯಾಮಿಲಿ ಇವೇ ಮುಂತಾದ ಬಾರಿ ಗಾತ್ರದ ಕಲಾಕ್ರುತಿಗಳು ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಕಂಡುಬರುತ್ತದೆ.

ಯಾರು ಇದರ ಸ್ರುಶ್ಟಿಕರ‍್ತ?

maxresdefault

ರೀಜೆಂಟ್ ನಗರದ ನಿವ್ರುತ್ತ ಉಪಾದ್ಯಾಯ ಗ್ಯಾರಿ ಗ್ರೆಪ್ ಈ ದೊಡ್ಡ ದೊಡ್ಡ ಆಕ್ರುತಿಗಳ ಸ್ರುಶ್ಟಿಕರ‍್ತ.
ತನ್ನ ತವರಿನವರು ಊರು ಬಿಟ್ಟು ಜೀವನವನ್ನು ಸಾಗಿಸಲು ವಲಸೆ ಹೋಗಲಾರಂಬಿಸಿದಾಗ ಈತನಿಗೆ ಬಹಳ ವ್ಯತೆಯಾಯಿತು. ರೀಜೆಂಟ್ ನಗರವು ದಿನಗಳೆದಂತೆ ಮಸುಕಾಗಿ ಕ್ರಮೇಣ ಮರೆಯಾಗುವುದನ್ನು ತಡೆಯಲು, ಹಾಗೂ ವಿಶ್ವದ ಬೂಪಟದಲ್ಲಿ ರಾರಾಜಿಸುವಂತೆ ಮಾಡಲು ದಾರಿಯನ್ನು ಹುಡುಕ ತೊಡಗಿದಾಗ, ಅವನ ಮನಸ್ಸಿಗೆ ಹೊಳದಿದ್ದೇ ಉಪಯೋಗಕ್ಕೆ ಬಾರದ ಲೋಹದ ಚಿಂದಿಗಳಿಂದ ಬ್ರುಹತ್ ಆಕ್ರುತಿಗಳ ನಿರ‍್ಮಾಣ ಮಾಡುವುದು.

ಮಜಬೂತಾದ ಲೋಹದಿಂದ ತಯಾರಿಸಿದ ಬ್ರುಹತ್ ಆಕ್ರುತಿಗಳನ್ನು ಹೆದ್ದಾರಿಯಲ್ಲಿ ಹಲವು ಮೈಲಿಗಳ ಅಂತರದಲ್ಲಿ ಸ್ತಾಪಿಸಲು 1990ರಲ್ಲಿ ಪ್ರಾರಂಬಿಸಿದ. ಇದರಿಂದ ಈ ಹೆದ್ದಾರಿಯನ್ನು ಬಳಸುವ ಎಲ್ಲಾ ಚಾಲಕರ ಹಾಗೂ ಪ್ರವಾಸಿಗರ ಕುತೂಹಲ ಕೆರಳಿಸುವುದು ಗ್ಯಾರಿ ಗ್ರೆಪ್‍ನ ಮೂಲ ಉದ್ದೇಶವಾಗಿತ್ತು. ಪ್ರವಾಸಿಗರ ಆಕರ‍್ಶಣೆಗಾಗಿ ದೊಡ್ಡ ದೊಡ್ಡ ಲೋಹದ ಆಕ್ರುತಿಗಳಿರುವ ತಾಣಗಳನ್ನು ವಿಹಾರಾರ‍್ತ ಪ್ರದೇಶವನ್ನಾಗಿ ಮಾಡಿ ಅಲ್ಲಿ ತಂಗಿರುವಶ್ಟು ಕಾಲವೂ ಸಂತೋಶದಿಂದ ಕಾಲ ಕಳೆಯಲು ಆಟದ ಮೈದಾನ ಮತ್ತು ಎಲ್ಲಾ ಆಟದ ಮೈದಾನದಲ್ಲಿ ಲಬ್ಯವಿರುವ ಉಪಕರಣಗಳನ್ನು ಸ್ತಾಪಿಸುವುದು ಅವನ ಮನದಾಸೆಯಲ್ಲಿ ಸೇರಿತ್ತು.

ಒಟ್ಟಾರೆ ಮೊದಲ ಹಂತದಲ್ಲಿ ಹತ್ತು ರಾಕ್ಶಸಾಕಾರದ ಆಕ್ರುತಿಗಳನ್ನು ತಯಾರಿಸುವ ಕನಸು ಹೊತ್ತ ಗ್ಯಾರಿ ಗ್ರೆಪ್ ಈವರೆಗು ತಯಾರಿಸಿರುವುದು ಎಂಟು ಮಾತ್ರ. ಈ ಎಲ್ಲಾ ಆಕ್ರುತಿಗಳನ್ನು ಉತ್ತರಕ್ಕೆ ಮುಕ ಮಾಡಿ ನಿಲ್ಲಿಸಿರುವುದು ಕುತೂಹಲದ ವಿಚಾರ. ಪ್ರತಿಯೊಂದು ಆಕ್ರುತಿಯು ಹೆದ್ದಾರಿಯ ಪಕ್ಕದಲ್ಲಿ ಅನತಿ ದೂರದಲ್ಲಿದ್ದು ಪ್ರವಾಸಿಗರು ತಮ್ಮ ವಾಹನವನ್ನು ಹೆದ್ದಾರಿಯಿಂದ ಹೊರಕ್ಕೆ ತಂದು ನಿಲ್ಲಿಸಿ ನಿರ‍್ಮಲ ಮನಸ್ಸಿನಿಂದ ಆಕ್ರುತಿಯ ವಿಶೇಶತೆಯನ್ನು ಸವಿಯಲು ಹಾಗೂ ವಿಶ್ಲೇಶಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಕೊಂಚ ಸಮಯ ಆರಾಮವಾಗಿವಿದ್ದು ಆಯಾಸವನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಎಲ್ಲೆಲ್ಲಿ ಸ್ತಾಪಿಸಲಾಗಿದೆ? ಏನದರ ವಿಶೇಶತೆ?

ಈ ರೀಜೆಂಟ್-ಗ್ಲಾಡ್‍ಸ್ಟೋನ್ ಹೆದ್ದಾರಿಯಲ್ಲಿ ಇಂತಹ ಬ್ರುಹತ್ ಆಕ್ರುತಿಗಳನ್ನು ಸ್ತಾಪನೆ ಮಾಡಲು ಪ್ರಾರಂಬಿಸಿದ ನಂತರವೇ ಗ್ಯಾರಿ ಗ್ರೆಪ್ ಈ ಹೆದ್ದಾರಿಗೆ ‘ದಿ ಎನ್‍ಚಾಂಟೆಡ್ ಹೈವೇ’ ಎಂದು ಮರುನಾಮಕರಣ ಮಾಡಿದ್ದು. ಹಾರಾಡುತ್ತಿರುವ ಬಾತು ಕೋಳಿಗಳ ಆಕ್ರುತಿ 2001ರಲ್ಲಿ ಗ್ಲ್ಯಾಡ್‍ಸ್ಟೋನ್ ನಗರದಿಂದ ಹೊರಬರುವ ಹೆದ್ದಾರಿಯಲ್ಲಿ ಸ್ತಾಪಿತವಾಗಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಹೊರಾಂಗಣ ಕಲಾಕ್ರುತಿ ಎಂದು ಗಿನ್ನೆಸ್ ದಾಕಲೆಯಲ್ಲಿ ಸೇರಿದೆ. ಇದರ ಮೂಲ ರಚನೆಯು 154 ಅಡಿ ಅಗಲ ಮತ್ತು 110 ಅಡಿ ಎತ್ತರವಿದೆ. ಬಾತು ಕೋಳಿಗಳ ರಕ್ಕೆ 30 ಅಡಿಯಶ್ಟು ಅಗಲಕ್ಕೆ ಚಾಚಿದೆ.

geese-in-flight3ರೀಜೆಂಟ್‍ನಿಂದ ಹೊರಡುವ ಹೆದ್ದಾರಿಯ ಮೂರನೇ ಮೈಲಿಯಲ್ಲಿ ಟೆಡ್ಡಿ ರೂಸ್‍ವೆಲ್ಟ್ ಕುದುರೆಯನ್ನೇರಿರುವ ದೊಡ್ಡ ಗೊಂಬೆಯಿದೆ. ‘ತಿಯೋಡರ್ ರೂಸ್ ವೆಲ್ಟ್ ರೈಡ್ಸ್ ಎಗೈನ್’ ಎನ್ನುವ ಈ ಕಲಾಕ್ರುತಿಯಲ್ಲಿನ ಟೆಡ್ಡಿ ಹಾಗೂ ಕುದುರೆಯನ್ನು ಕೊಳವೆ ಬಾವಿಯಲ್ಲಿ ಬಳಸುವ ಪೈಪುಗಳಿಂದ ಮಾಡಲಾಗಿದೆ. ಸಕಾರಣ ಇದು 9000 ಪೌಂಡ್‍ನಶ್ಟು (4.08 ಟನ್) ತೂಕವಿದೆ.

enchanted-highway-roosevelt-22

ಅಲ್ಲಿಂದ ಮುಂದೆ ಒಂದೂವರೆ ಮೈಲಿ ಉತ್ತರದ ಕಡೆ ಹೋದರೆ ಟಿನ್ ಪ್ಯಾಮಿಲಿಯ ಕಲಾಕ್ರುತಿ ಇದೆ. ಟಿನ್ ಪ್ಯಾಮಿಲಿಯಲ್ಲಿನ ಕಲಾಕ್ರುತಿಯಲ್ಲಿ ಹುಡುಗ ತಳ್ಳುಕವನ್ನು ತಲೆಯ ಮೇಲಿರಿಸಿಕೊಂಡು ಹೀರುಗವನ್ನು ಹಿಡಿದಿರುವಂತೆ ರಚಿಸಲಾಗಿದೆ. ಬಣ್ಣಗಳಿಂದ ಅಲಂಕ್ರುತವಾದ ಈ ಗೊಂಬೆಗಳ ಬುಡದಲ್ಲಿ ನಿಂತಲ್ಲಿ ತಲೆಯೆತ್ತೇ ನೋಡಬೇಕು. ಟಿನ್ ಪ್ಯಾಮಿಲಿಯಲ್ಲಿನ 45 ಅಡಿ ಅಪ್ಪ, 44 ಅಡಿ ಅಮ್ಮ ಹಾಗೂ 23 ಅಡಿಯ ಮಗನ ಆಕ್ರುತಿಗಳ ತಯಾರಿಕೆಯಲ್ಲಿ ಕಾಲಿ ಆಯಲ್ ಡ್ರಮ್‍ಗಳನ್ನು ಬಳಸಿದೆ. ಇವುಗಳೆಲ್ಲವೂ ಅಶ್ಟು ಎತ್ತರಕ್ಕೆ ನಿಲ್ಲಲು ಆದಾರ ಸ್ತಂಬವಾಗಿ 16 ಟೆಲಿಪೋನ್ ಕಂಬಗಳನ್ನು ಉಪಯೋಗಿಸಲಾಗಿದೆ. ಹೆಣ್ಣಿಗೆ ತುರುಬೇ ಬೂಶಣ. ಹಾಗಾಗಿ ಅಮ್ಮನ ಗೊಂಬೆಯ ಕೂದಲನ್ನು ಮುಳ್ಳು ತಂತಿಯಿಂದ ಮಾಡಲಾಗಿದೆ.

enchanted-highway-tin-family-22

ಒಂದು ದೊಡ್ಡ, ಒಂದು ಮದ್ಯಮ ಹಾಗೂ ಮೂರು ಸಣ್ಣ ಸಣ್ಣ ಗಾತ್ರದ ಪೆಸೆಂಟ್ ಸಂಸಾರದ ಆಕ್ರುತಿಗಳು 1998ರಲ್ಲಿ ಪೂರ‍್ಣಗೊಂಡವು. ಅತಿ ದೊಡ್ಡದಾದ ಗಂಡಿನ 60 ಅಡಿ ಉದ್ದ ಮತ್ತು 40 ಅಡಿ ಎತ್ತರ, ಹೆಣ್ಣಿನ 50 ಅಡಿ ಉದ್ದದ ಮತ್ತು 35 ಅಡಿ ಎತ್ತರ ಹಾಗೂ 15 ಅಡಿ ಉದ್ದದ ಮತ್ತು 12 ಅಡಿ ಎತ್ತರದ ಮೂರು ಮರಿಗಳು ಸೇರಿರುವ ಪೆಸೆಂಟ್ ಗಳ ಪ್ಯಾಮಿಲಿಯ ಆಕ್ರುತಿಗಳನ್ನು 9ನೇ ಮೈಲಿಯ ಬಳಿಯಲ್ಲಿ ಸ್ತಾಪಿಸಲಾಗಿದೆ. ಈ ಸಂಸಾರದ ಒಟ್ಟು ತೂಕ 30000 ಪೌಂಡ್. (13.608 ಟನ್)

enchanted-highway-pheasants-15

1999ರ ಸ್ಪ್ರಿಂಗ್‍ನಲ್ಲಿ ವಿಶ್ವದಲ್ಲೇ ಅತಿ ದೊಡ್ಡದೆನ್ನಬಹುದಾದ ಮಿಡತೆಯ ಆಕ್ರುತಿಯನ್ನು ಅನಾವರಣಗೊಳಿಸಲಾಯಿತು. 60 ಅಡಿ ಉದ್ದ ಹಾಗೂ 40 ಅಡಿ ಎತ್ತರವಿರುವ ಈ ದೈತ್ಯ ಮಿಡತೆಯ ಆಕ್ರುತಿಯನ್ನು ಪ್ಯೂಯಲ್ ಟ್ಯಾಂಕ್ ಮತ್ತು ಆಯಿಲ್ ವೆಲ್ ಟ್ಯಾಂಕ್‍ಗಳನ್ನು ಬಳಸಿ ತಯಾರಿಸಲಾಗಿದೆ.

grasshopper-22

ಬ್ರುಹತ್ ಜಿಂಕೆಗಳು ನಗೆಯುತ್ತಾ ರಸ್ತೆಯನ್ನು ದಾಟುತ್ತಿರುವ ಚಿತ್ರಣದ ಆಕ್ರುತಿಯನ್ನು ಕೆಲಸಕ್ಕೆ ಬಾರದ ಆಯಿಲ್ ವೆಲ್ ಟ್ಯಾಂಕ್‍ಗಳನ್ನು ತಯಾರಿಸಿ 2002ರ ಸೆಪ್ಟಂಬರ್‍ನಲ್ಲಿ ಲೋಕಾರ‍್ಪಣೆ ಮಾಡಲಾಯಿತು. ಹಾರುತ್ತಿರುವ ಜಿಂಕೆ 75 ಅಡಿ ಎತ್ತರ ಹಾಗೂ 60 ಅಡಿ ಉದ್ದವಿದೆ. ಹಾರುತ್ತಿರುವ ಜಿಂಕೆಯ ಹಿಂದಿರುವ ಹೆಣ್ಣು ಜಿಂಕೆ 50 ಅಡಿ ಉದ್ದ ಹಾಗೂ 50 ಅಡಿ ಎತ್ತರವಿದೆ.

deer-crossing2

ಮೀನುಗಾರರ ಕನಸು ಗ್ಯಾರಿ ಗ್ರೇಪ್ ತಯಾರಿಸಿದ ಏಳನೇ ಅದ್ಬುತ. ಅವನ ಎಲ್ಲಾ ಆಕ್ರುತಿಗಳಿಗೆ ಹೋಲಿಸಿದಲ್ಲಿ ಇದೇ ಅತಿ ಜಟಿಲ ಕಲಾಕ್ರುತಿ. ಲೋಹದಲ್ಲೇ ನಿರ‍್ಮಾಣವಾದ ಮೀನು 70 ಅಡಿ ಎತ್ತರಕ್ಕೆ ಹಾರಿರುವ ದ್ರುಶ್ಯ ಹಾಗೂ ಅದರಡಿಯಲ್ಲಿರುವ ಲೋಹದ ಕೊಳ ಕಣ್ಮನ ಸೆಳೆಯುತ್ತದೆ. 2007ರ ಮೊದಲ ಬಾಗದಲ್ಲಿ ಇದು ಪೂರ‍್ಣಗೊಂಡಿತು.

enchanted-highway-fishermen-12

ಗ್ಯಾರಿ ಗ್ರೆಪ್ ಜೊತೆ ಕೈ ಜೋಡಿಸಿದವರು ಯಾರು?

ಹತ್ತಾರು ವರ‍್ಶಗಳ ಹಿಂದೆಯೇ ಪ್ರಾರಂಬವಾದ ಇಂತಹ ಗುರುತರವಾದ ಯೋಜನೆಯನ್ನು ಕಾರ‍್ಯರೂಪಕ್ಕೆ ತರಲು ನಾಲ್ಕಾರು ಕೈಗಳು ಸೇರಿದರೆ ಮಾತ್ರ ಸಾದ್ಯ. ಲೋಹದ ಕೆಲಸ, ಅವುಗಳ ಸಾಗಾಣೆ, ಬ್ರುಹತ್ ರಚನೆಯನ್ನು ನಿಲ್ಲಿಸುವ ಹಾಗೂ ಸುತ್ತಮುತ್ತಲಿನ ಜಾಗವನ್ನು ಸ್ವಚ್ಚಗೊಳಿಸುವಲ್ಲಿ ಹಲವಾರು ಸ್ವಯಂ ಸೇವಕರು ಸಹಾಯ ಮಾಡಿದರು. ಬೂಮಿಯನ್ನು ಹೊಂದಿರುವವರು ಈ ಯೋಜನೆಗೆ ಅತ್ಯಲ್ಪ ಮೊತ್ತಕ್ಕೆ ಜಾಗವನ್ನು ಬೋಗ್ಯಕ್ಕೆ 20 ವರ‍್ಶಕ್ಕೆ ಒಂದು ಡಾಲರ್‍ನಂತೆ ಹಾಗೂ ಮುಂದೆ ನವೀಕರಿಸುವ ಆದಾರದ ಮೇಲೆ ನೀಡಿದರು.

‘ದಿ ಎನ್‍ಚಾಂಟೆಡ್ ಹೈವೇ’ ಉದ್ದಕ್ಕೂ ಸ್ತಾಪಿಸಿರುವ ಒಂದೊಂದು ಬ್ರುಹತ್ ಆಕ್ರುತಿಯ ಹಿಂದೆ ಅಂತರ‍್ದ್ರುಶ್ಟಿಯ ಕಲಾವಿದನ ಹೋರಾಟದ ವ್ಯತೆಯ ಕತೆಯಿದೆ. ಪ್ರತಿ ದಾನಿಗಳಿಂದ ಸಂಗ್ರಹಿಸಿದ ಹಣವನ್ನಾಗಲಿ ವಸ್ತುವನ್ನಾಗಲಿ ಬಿಡದೆ ಉಪಯೋಗಿಸಿ ಕಲಾಕ್ರುತಿಗಳ ನಿರ‍್ಮಾಣಮಾಡಲಾಗಿದೆ. 2012ರಲ್ಲಿ ಗ್ರೆಪ್ ‘ದ ಎನ್ಚಾಂಟೆಡ್ ಕಾಸಲ್’ ಎಂಬ 19 ರೂಮುಗಳಿರುವ ಮೋಟೆಲ್ ಅನ್ನು ರೀಜೆಂಟ್ ಬಳಿ ಸ್ತಾಪಿಸಿದ. ಇದರಲ್ಲಿ ಪ್ರವಾಸಿಗರಿಗೆ ಅವಶ್ಯವಿರುವ ತಿಂಡಿ ಪಾನೀಯಗಳು ಹಾಗೂ ವಿರಮಿಸಲು ಸ್ತಳಾವಕಾಶ ಲಬ್ಯವಿರುವಂತೆ ವ್ಯವಸ್ತೆ ಮಾಡಿದ.

ಇಶ್ಟೇ ಅಲ್ಲದೆ ಗ್ಯಾರಿ ಗ್ರೆಪ್ ಬಳಿ ಇನ್ನೂ ಅನೇಕ ಹೊಸ ಹೊಸ ಯೋಜನೆಗಳಿವೆ. ಹೊಸ ಯೋಜನೆಯಲ್ಲಿ ಜೇಡರ ಬಲೆಯ ದೈತ್ಯ ಆಕ್ರುತಿ, ಲೋಹದ ದೊಡ್ಡ ದೊಡ್ಡ ಚೇಳುಗಳು, ಕೊಳದಲ್ಲಿ ಹರಿದಾಡುವ ಬಾರಿ ಗಾತ್ರದ ಮೀನಿನ ಆಕ್ರುತಿಗಳು ಸೇರಿವೆ. ಹೆದ್ದಾರಿಯನ್ನು ಮತ್ತೂ ಆಕರ‍್ಶಕಗೊಳಿಸಲು ವಾಟರ್ ಪಾರ‍್ಕ್, ರೆಸ್ಟೋರೆಂಟ್, ವರ‍್ತುಲ ರಂಗಮಂದಿರ ಹಾಗೂ ಎಲ್ಲಾ ರೀತಿಯ ಆಟವನ್ನು ಆಡಲು ಅವಶ್ಯವಿರುವ ಉಪಕರಣಗಳನ್ನು ಹೊಂದಿರುವ ಬ್ರುಹತ್ ಕ್ರೀಡಾಂಗಣ ಇವುಗಳ ನಿರ‍್ಮಾಣದ ದೊಡ್ಡ ಕನಸನ್ನು ಹೊತ್ತಿದ್ದಾನೆ ಈತ.

ಸದ್ಯದಲ್ಲಿ ದಿ ಎನ್‍ಚಾಂಟೆಡ್ ಹೈವೇಯ ರೀಜೆಂಟ್ ಬಳಿ ಸ್ತಾಪಿಸಿರುವ ಗಿಪ್ಟ್ ಶಾಪನ್ನು ವಿಸ್ತರಿಸುವ ಕಾರ‍್ಯ ಪ್ರಗತಿಯಲ್ಲಿದೆ.

(ಚಿತ್ರ ಸೆಲೆ: amusingplanet.com, youtube)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: