ಕಡಲಾಳದಲ್ಲಿದೆ ಕಾಲುಗಳಿರುವ ಮೀನು!

– ನಾಗರಾಜ್ ಬದ್ರಾ.

chaunax-700

ನೋಡಲು ಸುಂದರ ಗುಲಾಬಿ ಬಣ್ಣದ ಕಪ್ಪೆಯಂತೆ ಕಾಣುವ ಇದು ಕಪ್ಪೆಯಲ್ಲ, ನಡೆದಾಡುವ ಮೀನು! ಇಶ್ಟುದಿನಗಳವರೆಗೂ ಮೀನುಗಳು ನೀರಿನಲ್ಲಿ ಬರೀ ಈಜುತ್ತವೆ ಹಾಗೂ ಅದಕ್ಕೆ ತಕ್ಕಂತೆ ಈಜುರೆಕ್ಕೆಗಳು ರೂಪುಗೊಂಡಿರುತ್ತವೆ ಎಂದು ತಿಳಿದಿತ್ತು. ಆದರೆ ಚೌನಾಕ್ಸ್ ಪಿಕ್ಟಸ್ (Chaunax pictus) ಎಂಬ ಹೆಸರಿನ ಸಮುದ್ರ ಮೀನು ನಾಲ್ಕು ಚಿಕ್ಕ ಕಾಲುಗಳನ್ನು ಹೊಂದಿದ್ದು, ಅವುಗಳ ನೆರವಿನಿಂದ ಕಡಲಾಳದಲ್ಲಿರುವ ಬಂಡೆ ಹಾಗೂ ಮರಳಿನ ಮೇಲೆ ನಡೆಯುತ್ತದೆ. ಇಂತಹ ಬೆರೆಗಿನ ಸುದ್ದಿಯೊಂದನ್ನು ಕಡಲರಸುಗರು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಎನ್ ಓ ಎ ಎ (NOAAs)ನ ಕಡಲರಸುಗರು ಪೋರ‍್ಟೊ ರಿಕೊ ತೀರದ ಮೊನಾ ಆಳಕಣಿವೆಯಲ್ಲಿ (Mona Canyon) ಹುಡುಕಾಟ ನಡೆಸುವಾಗ ಈ ಮೀನು ಕಣ್ಣಿಗೆ ಬಿದ್ದಿದೆ.

ಚೌನಾಕ್ಸ್ ಪಿಕ್ಟಸ್ ಎಂಬ ನಡೆದಾಡುವ ಮೀನು

ಚೌನಾಕ್ಸ್ ಪಿಕ್ಟಸ್ ಮೀನು ಚೌನಾಸಿಡೇ ( Chaunacidae ) ಎಂಬ ಕುಟುಂಬಕ್ಕೆ ಸೇರಿದ ಮೊನಚು ಮುಕದ ಮೀನಿನ (Anglerfish ) ಒಂದು ಬಗೆಯಾಗಿದ್ದು, ಸುಮಾರು 40 ಸೆಂಟಿಮೀಟರ್‍ವರೆಗೂ ಉದ್ದವಿರುತ್ತದೆ. ಸುಮಾರು 200 ರಿಂದ 978 ಮೀಟರ್ ಆಳವಾದ ಕಡಲಲ್ಲಿ ಕಂಡುಬರುವ ಇವು ಹೆಚ್ಚಾಗಿ ಅಟ್ಲಾಂಟಿಕ್ ಮಹಾಸಾಗರ ಹಾಗೂ ಮೆಡಿಟರೇನಿಯನ್ ಸಮುದ್ರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಈ ಮೀನುಗಳು ಬಿಸಿಹವೆಯ ಪೆರ‍್ನೆಲದ ಅರೆ (tropical continental shelves), ಪೆರ‍್ನೆಲದ ಇಳಿಜಾರು ಪ್ರದೇಶದ (continental slope) ಬಾಗದಲ್ಲಿ ಹಾಗೂ ಕೆರಿಬಿಯನ್ ಸಮುದ್ರ ಹೊರತುಪಡಿಸಿ ಎಲ್ಲಾ ಹದಕಾವುಳ್ಳ ನೀರಿರುವ (temperate waters) ಕಡಲಿನಲ್ಲಿ ಕಂಡುಬರುತ್ತವೆ.

ಅಗಲವಾದ ಕಪ್ಪೆ ತರಹದ ಬಾಯಿಯನ್ನು ಹಾಗೂ ಗುಲಾಬಿ ಮೈಬಣ್ಣವನ್ನು ಹೊಂದಿರುವುದರಿಂದ ಇದಕ್ಕೆ ಗುಲಾಬಿ ಬಣ್ಣದ ಕಡಲ ಕಪ್ಪೆ ಎಂದು ಕೂಡ ಕರೆಯುತ್ತಾರೆ. ಇದು ನೋಡಲು ಮುಂಗೋಪದ ಕಡಲ ಬೆಕ್ಕಿನ ಸೋದರ ಸಂಬಂದಿಯಂತೆ ತೋರುತ್ತದೆ. ಚೌನಾಕ್ಸ್ ಪಿಕ್ಟಸ್ ಮೀನಿನ ಎರಡು ಕಣ್ಣುಗಳ ನಡುವಿರುವ ಒಂದು ತೂತಿನಲ್ಲಿ ವಿಶೇಶವಾದ ಸಣ್ಣ ಅಂಗವಿದ್ದು, ಅದು ಅದರ ಬೇಟೆಯ ಕಸುವನ್ನು ಹೆಚ್ಚಿಸಿದೆ.

cp

ಮೇಲಿನ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಿರುವ ಪ್ರದೇಶಗಳಲ್ಲಿ ಈ ಮೀನುಗಳು ಕಾಣಿಸಿಕೊಂಡಿವೆ.

ಕಾಲುಗಳಿರು ಮೀನು ಇಂಡಿಯಾದ ಕಡಲುಗಳಲ್ಲಿಯೂ ಕಾಣಿಸಿಕೊಂಡಿವೆ 

ಚೌನಾಕ್ಸ್ ಜಾತಿಯ ಚೌನಾಕ್ಸ್ ಪಿಕ್ಟಸ್ ಎಂಬ ಮೀನು ಇಂಡಿಯಾದಲ್ಲಿಯು ಕಾಣಿಸಿಕೊಂಡಿವೆ. ಇತ್ತೀಚಿಗೆ ಇಂಡಿಯಾದ ಕಡಲಿನಲ್ಲಿ ಸಂಗ್ರಹಿಸಿದ ಚೌನಸ್ ಪಿಕ್ಟಸ್ ಮೀನಿನ ಮಾದರಿಗಳ ಪರೀಕ್ಶೆ ಸಮಯದಲ್ಲಿ ಅದರ ಎರಡು ಬೇರೆ ಬೇರೆ ರೂಪಗಳು ಪತ್ತೆಯಾಗಿದ್ದು. ಅದರಲ್ಲೊಂದು ಬಗೆಯು ಒಂದೇ ರೂಪದ ಗುಲಾಬಿ ಬಣ್ಣವನ್ನು ಹಾಗೂ ಇನ್ನೊಂದು ಬಗೆಯು ದೇಹದ ಮೇಲೆ ಹಲವು ಹಸಿರು ಕಲೆಗಳನ್ನು ಹೊಂದಿದೆ. ಇವುಗಳ ಮೇಲೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ಕೆಲಸದಲ್ಲಿ ಕಡಲರಸುಗರು ತೊಡಗಿಸಿಕೊಂಡಿದ್ದಾರೆ.

ಪ್ರಕ್ರುತಿಯು ನೋಡಲು ಎಶ್ಟು ಸುಂದರವಾಗಿದೆಯೋ, ನಮಗೆ ತಿಳಿಯದ ಅಶ್ಟೇ ಕುತೂಹಲಕಾರಿ ವಿಶಯಗಳನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿದೆ. ಈ ಸುಂದರ ಪ್ರಕ್ರುತಿಯಲ್ಲಿ ಇನ್ನೂ ಏನೇನು ಅಡಿಗಿದೆಯೋ?

ಈ ಮೀನುಗಳು ಕಡಲಾಳದಲ್ಲಿ ನಡೆಯುವ ವೀಡಿಯೋ ಕೊಂಡಿ

(ಮಾಹಿತಿ ಸೆಲೆ: wiki, mnm.comthebluereporters.commapress.com, yourdailydish.com)
(ಚಿತ್ರ ಸೆಲೆ: oceanexplorer.noaa.govfishbase.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: