ಬರ ನೀರಿಗೋ ಇಲ್ಲ ನಮ್ಮ ಜಾಣತನಕ್ಕೋ?

ಸುನಿತಾ ಹಿರೇಮಟ.

ಜೀವಜಾಲಕ್ಕೆ ಮೂಲವಾದ ನೀರು ಯಾವ ಕಾಲಕ್ಕೂ ಅಮ್ರುತ. ಇನ್ನು ಇದೆ ನೀರಿನ ಸೆಲೆಗಳನ್ನ ಮೂಲವಾಗಿಸಿ ಬೆಳೆದದ್ದು ನಮ್ಮ ನಾಗರಿಕತೆ. ನಾಗರಿಕತೆಯ ಕಾಲಮಾನಕ್ಕೆ ಅನುಸಾರವಾಗಿ ಬೆಳೆದದ್ದು ನೀರಾವರಿ ಮತ್ತು ನೀರು ನಿಲ್ದಾಣಗಳ ಕಟ್ಟುವಿಕೆ.

ವಾಸ್ತುಶಾಸ್ತ್ರ ಮತ್ತು ಕಟ್ಟಡಶಾಸ್ತ್ರಗಳು ಕಲೆ ಮತ್ತು ನೆಲದ ಅರಿವಿನಿಂದ ಬೆಳೆದವು. ಹೀಗೆ ಬೆಳೆದ ನಮ್ಮ ಹಿರಿಯರ ವಾಸ್ತುಕಲೆಯನ್ನ ಹಲವಾರು ವಿಬಾಗಗಳಲ್ಲಿ ನಾವು ಇಂದಿಗೂ ಗಮನಿಸಬಹುದು. ಜನರು ದಿನನಿತ್ಯದಲ್ಲಿ ಉಪಯೋಗಿಸುವ ದಾರ‍್ಮಿಕ ಮತ್ತು ಸಾಮಾಜಿಕ ಕಟ್ಟಡಗಳನ್ನು ಇದೆ ನೆಲೆಗಟ್ಟಿನಲ್ಲಿ ಬೆಳೆಸಲಾಗಿದೆ.

ಇಲ್ಲಿ ನಮಗೆ ಇಂದಿಗೂ ಪ್ರಸ್ತುತವೆನಿಸುವುದು ನೀರಾವರಿ ಮತ್ತು ಕೆರೆಗಳ ನಿರ‍್ಮಾಣ. ಸಾಮಾಜಿಕ ವಾಸ್ತುಕಲೆಯಲ್ಲಿ ನೀರಿನ ಮಹತ್ವವನ್ನ ಗಮನಿಸಿ ಅದಕ್ಕೆ ದಾರ‍್ಮಿಕ ಆಯಾಮವನ್ನಿತ್ತು, ಆ ನೀರಿನ ನಿಲ್ದಾಣಗಳನ್ನ ಸಾವಿರಾರು ಕಾಲ ಬಾಳುವಂತೆ ಮಾಡಿದ ಆ ದೂರದ ಆಲೋಚನೆ ಈಗ ಇಲ್ಲ. ಎಲ್ಲೋ ಬಿಸಿಲನಾಡಿನ ಗುಡ್ಡದ ಮೇಲೆ ನೀರಿನ ಒರತೆಯನ್ನ ಗಮನಿಸಿ ಅದಕ್ಕೊಂದು ಪುಶ್ಕರಣಿಯ ಮೂರ‍್ತರೂಪ ಕೊಟ್ಟಿದ್ದು ಇಂದಿಗೂ ಸಹ ನಮ್ಮ ಅರಿವನ್ನು ಮೀರಿದ್ದು. ನಮಗೆ ಅಂತಹುದನ್ನ ಕಟ್ಟುವುದಿರಲಿ ಕಟ್ಟಿದ್ದನ್ನ ಉಳಿಸುಕೊಳ್ಳಲಾಗದಶ್ಟು ಅಸಹಾಯಕತೆ. ನಾವೇ ಶ್ರೇಶ್ಟ ಎನ್ನುವ ಮೊಂಡುವಾದದಲ್ಲಿ ಎಲ್ಲ ಜೀವರಾಶಿಗಳ ಹಕ್ಕನ್ನು ಕಸಿದಿದ್ದೇವೆ.

ನೀರಿನ ಸಂಕಶ್ಟ ಅನುಬವಿಸುವ ನಮಗೆ ಎಲ್ಲಿಂದಾದರೂ ನೀರು ಬಂದರೆ ಸಾಕು. ಅದರಾಚೆಯ ಸತ್ಯಗಳ, ಹರಿವಿನ ಮತ್ತು ಉಪಯೋಗಿಸುವ ವಿದಾನಗಳ ಬಗ್ಗೆ ನಮ್ಮ ಯೋಚನೆಗಳಿಲ್ಲ. ನೀರಿನ ಸುತ್ತ ಇಡೀ ಬದುಕಿನ ಚಕ್ರ ತಿರುಗುತ್ತಿದೆ. ಮೊದಲು ಅನುಬವಿಸಿದ ನೋವಿದ್ದರೂ ಇಂದಿನ ಉಪಯೋಗದ ಬಗ್ಗೆಯಶ್ಟೇ ನಮ್ಮ ಆತುರ.

ಒಂದಕ್ಕೊಂದು ಸಂಬಂದವಿದ್ದೋ ಇಲ್ಲದೆಯೋ ಯೋಚನೆಗಳು ತಾಕಲಾಡುತ್ತಿದ್ದವು… ಹಳೆಯದ್ದನ್ನು ಉಳಿಸಬೇಕೋ ಹೊಸದನ್ನು ಬೆಳೆಸಬೇಕೋ ಉತ್ತರವಿಲ್ಲದ ಪ್ರಶ್ನೆಗಳು…

ಮಳೆಯ ನೀರಿಗೆ ಕೆರೆಯ ದಾರಿ – ನಮ್ಮ ರಾಜ್ಯದ ಅತಿ ಹಳೆಯ ಕೆರೆಗಳ ಕಾಲಮಾನವನ್ನ ಗಮನಿಸಿದರೆ ಗುಡ್ಡದ ತುದಿಯಿಂದ ಕಣಿವೆಯಲ್ಲಿ ಹರಿಯುವ ನೀರಿಗೆ ಮಣ್ಣಿನ ಕಟ್ಟೆ ಕಟ್ಟುವ ಸರಳ ವಿದಾನ. ನಮ್ಮ ಹಿರಿಯರ ಈ ಜಾಣ್ಮೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ರಾಜ್ಯದ ಕೋಟೆ, ಕೆರೆಯ ರಚನೆಗಳನ್ನು ನೋಡುತ್ತ ಹೋದರೆ ನೀರಿನ ಸಂರಕ್ಶಣೆಯ ದಾರಿ ಎಶ್ಟು ಸುಲಬ ಎನ್ನುವ ಬಗ್ಗೆ ಆಲೋಚನೆ ಬರದೇ ಇರದು. ರಾಜ್ಯದ ಗಿರಿದುರ‍್ಗ, ವನದುರ‍್ಗಗಳಲ್ಲಿ ನೀರಿರುವ ಕೆರೆಗಳು ಎತ್ತರದ ಗುಡ್ಡಗಳಲ್ಲಿವೆ ಮುಂದುವರಿದ ತಾಂತ್ರಿಕತೆಯ ಬಗ್ಗೆ ಕೊಚ್ಚಿಕೊಳ್ಳುವ ನಾವು ನಮ್ಮ ಹಿರಿಯರು ಮಾಡಿದ ಆಸ್ತಿಯನ್ನು ಉಳಿಸಿಕೊಳ್ಳುವ ಯೋಚನೆಯನ್ನು ಮಾಡದ ಕೆಟ್ಟ ಮಟ್ಟಕ್ಕೆ ಇಳಿದಿದ್ದೇವೆ.

ಕಾಡು ಎಂದರೆ ನೀರು, ನೀರು ಎಂದರೆ ಅನ್ನ, ಅನ್ನವೆಂದರೆ ಪ್ರಾಣ ಇದು ಜೀವನದ ಚಕ್ರ

ನೀರಿನ ಸೆಲೆಯಲ್ಲಿ ಬದುಕು ಶುರು ಮಾಡಿದ ನಮಗೆ ಕಾಡು ಬೆಳೆಸುವ ಉಳಿಸುವ ಆಲೋಚನೆಗಳನ್ನು ಸಹ ಆ ಸಮಯದಲ್ಲಿ ಹೇಳಿಕೊಟ್ಟಿದ್ದು ನಮ್ಮ ಹಿರಿಯರು. ಆದರೆ ಅವರ ಆ ಆಚರೆಣೆಗಳಲ್ಲಿ ಕೊಂಕು ತೆಗೆದು ಅವರು ಬೆಳೆಸಿದ ಆ ಆಸ್ತಿಯೆನ್ನೆಲ್ಲಾ ಹಾಳುಗೆಡವಿ ಇಂದಿನ ಈ ದುರ‍್ಗತಿಗೆ ನಾವೇ ಕಾರಣ. ನಾವಿದ್ದಲ್ಲಿ ನೀರು ಬರಬೇಕೆಂದು ಬಯಸಿ, ಕೆರೆ-ಕುಂಟೆ ಹಳ್ಳ ಕೊಳ್ಳ ಕಲ್ಯಾಣಿ ಪುಶ್ಕರಣಿಗಳನ್ನ ಹಾಳುಗೆಡವಿದ್ದು ನಾವು. ನಾಗರಿಕತೆಯನ್ನ ಬೆಳೆಸುವ ನೆಪದಲ್ಲಿ ಕಾಡು ಮರೆತ ನಾವು ಕಾಂಕ್ರೀಟ್ ಕಾಡುಗಳನ್ನು ಕಟ್ಟುತ್ತ, ಮಣ್ಣು ಹಾಗೂ ನೀರಿನ ಜೊತೆಗಿನ ನಮ್ಮ ಅನುಬಂದವನ್ನ ಇಲ್ಲವಾಗಿಸಿದ್ದೇವೆ.

ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ ಎಂಬುದು ಪರಿಸರ ಮತ್ತು ಜೀವಸಕುಂಲದ ಕೊಂಡಿ ಅದು ಈಗ ನಮಗೆಲ್ಲ ಮರೆತು ಹೋಗಿದೆ. ಬೇಸಿಗೆ ಶುರುವಾದರೆ ನೀರೆಂದು ಹಪಹಪಿಸುವ ನಾವು ಆಯಾ ನೆಲಕ್ಕೆ ತಕ್ಕಂತೆ ನೀರ ಉಳಿಸುವ ಹಿರಿಯ ಪರಂಪರೆಯ ನೀರಿನ ಸಂರಕ್ಶಣಾ ವಿದಾನಗಳನ್ನ ಮರೆತ್ತಿದ್ದೇವೆ. ಆ ವಿದಾನಗಳಿಗೆ ಇಂದಿನ ಕೋಟಿ ರೂಪಾಯಿಗಳ ಲೆಕ್ಕ ಬೇಡವೇ ಬೇಡ. ಹಿರಿಯರು ಮಾಡಿಟ್ಟ ಆಸ್ತಿಗಳನ್ನ ಉಳಿಸಿಕೊಳಬಹುದಾದಲ್ಲಿ ಎಶ್ಟೋ ನೀರನ್ನ ನಾವು ಇಂದಿಗೂ ಉಳಿಸಬಹುದು. ಬೆಂಕಿ ಬಂದಾಗ ಹಳ್ಳ ತೋಡುವ ಮನಸ್ತಿತಿಯನ್ನ ಈಗಲಾದರೂ ಬದಲಾಯಿಸಿಕೊಳ್ಳೋಣ.

ಹುಚ್ಚು ಮನಸ್ಸಿನ ಆ ಯೋಚನೆಗಳು ಬಿಸಿಲ ಕುದುರೆಯನ್ನೇರಿ ಓಡುತ್ತಿದ್ದವು, ಉತ್ತರಗಳು ಸಿಗದ ಮರೀಚಿಕೆಯಂತೆ ಕಾಣುತ್ತಿದ್ದವು… ಆದರೂ ಎಲ್ಲೋ ಒಂದು ಆಶಾ ಕಿರಣ ನಮ್ಮ ಯೋಚನೆಗಳು ಬದಲಾಗಿ ನಮ್ಮ ಪರಿಸರವನ್ನ ಬೆಳೆಸಬಹುದೆಂದು.

(ಚಿತ್ರ ಸೆಲೆ: wiki/Irrigation_tank, wiki/Drought_in_India)Categories: ನಲ್ಬರಹ

ಟ್ಯಾಗ್ ಗಳು:, , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s