ಕ್ರಿಕೆಟ್ ಜಗತ್ತಿನ ದಿಗ್ಗಜ ‘ಜಾವಗಲ್ ಶ್ರೀನಾತ್’

ರಾಮಚಂದ್ರ ಮಹಾರುದ್ರಪ್ಪ.

ಒಬ್ಬ ವಿಶ್ವಶ್ರೇಶ್ಟ ವೇಗದ ಬೌಲರ್ 90ರ ದಶಕದಾದ್ಯಂತ ತನ್ನ ಬೌನ್ಸರ್, ರಿವರ‍್ಸ್ ಸ್ವಿಂಗ್, ಇನ್‍ಸ್ವಿಂಗ್‍ಗಳಿಂದ ಬಾಟ್ಸ್ಮೆನ್‍ಗಳಿಗೆ ನಡುಕ ಹುಟ್ಟಿಸಿ ಬಾರತಕ್ಕೆ ಸಾಕಶ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದುಂಟು. ಆ ವೇಗದ ಬೌಲರ್ ನಮ್ಮ ಕನ್ನಡಿಗ, ಮಯ್ಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾತ್. ಕ್ರಿಕೆಟ್ ವಲಯದಲ್ಲಿ “ದಿ ಜೆಂಟಲ್ ಜೆಯಂಟ್” ಎಂದೇ ಹೆಸರುವಾಸಿಯಾಗಿದ್ದ ಶ್ರೀನಾತ್ ಬಾರತ ಕಂಡ ಅತ್ಯಂತ ವೇಗದ ಬೌಲರ್. ಈಗಲೂ ಸಹ ಅವರು ಎಸೆದ ಗಂಟೆಗೆ 157 ಕಿ.ಮಿ. ವೇಗದ ಎಸೆತ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಬಾರತೀಯನೊಬ್ಬನ ದಾಕಲೆಯ ವೇಗದ ಎಸೆತ.

ಎಳವೆಯಲ್ಲೇ ಕ್ರಿಕೆಟ್ ಗೀಳು

1969ರ ಆಗಸ್ಟ್ 31ರಂದು ಮಯ್ಸೂರಿನಲ್ಲಿ ಶ್ರೀನಾತ್ ಹುಟ್ಟಿದರು. ಮೂಲತ ಹಾಸನ ಜಿಲ್ಲೆಯ ಜಾವಗಲ್ ನವರಾದ ಶ್ರೀನಾತ್ ರ ತಂದೆ ಕೆಲಸದ ನಿಮಿತ್ತ ಮಯ್ಸೂರಿನಲ್ಲಿ ನೆಲೆಸಿದ್ದರು. ಎಳವೆಯಲ್ಲೇ ಕ್ರಿಕೆಟ್‍ಗೆ ಮಾರುಹೋಗಿದ್ದ ಶ್ರೀನಾತ್ ಸಣ್ಣ ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಶುರುಮಾಡಿದರು. ಮಯ್ಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಕಲಿತ ಶ್ರೀನಾತ್, ಪದವಿ ಪೂರ‍್ವ ಶಿಕ್ಶಣದ ನಂತರ ಹಾಸನದ ಮಲ್ನಾಡ್ ಕಾಲೇಜ್ ಆಪ್ ಎಂಜಿನೀಯರಿಂಗ್ ನಲ್ಲಿ ಇನ್‍ಸ್ಟ್ರುಮೆಂಟೇಶನ್ಇ ಟೆಕ್ನಾಲಜಿ ವಿಬಾಗದಲ್ಲಿ ಪದವಿ ಪಡೆಯಲು ಸೇರಿದರು. ಆದರೆ ಕ್ರಿಕೆಟ್ ಗೀಳು ಅವರನ್ನು ಮತ್ತೆ ಮಯ್ಸೂರಿಗೆ ಮರಳುವಂತೆ ಮಾಡಿತು. ಹಾಸನದಲ್ಲಿ ಕ್ರಿಕೆಟ್ ಗೆ ಅನುಕೂಲವಾಗುವಂತಹ ಏರ‍್ಪಾಡು ಇಲ್ಲದ ಕಾರಣ ಶ್ರೀನಾತ್ ಮಯ್ಸೂರಿನ ಎಸ್.ಜೆ.ಸಿ.ಇ ಕಾಲೇಜ್ ಸೇರಿ ತಮ್ಮ ಎಂಜಿನೀಯರಿಂಗ್ ಕಲಿಕೆಯ ಜೊತೆಗೆ ಕ್ರಿಕೆಟ್ ಅಬ್ಯಾಸವನ್ನು ಮುಂದುವರಿಸಿದರು.

ಮಯ್ಸೂರು ಜಿಮಕಾನ ಕ್ಲಬ್ ಶ್ರೀನಾತ್ ರ ಮೊದಲ ತಂಡವಾಯಿತು. ಈ ಕ್ಲಬ್ ಪರ ಆಡಿದ ಮೊದಲ ವರ‍್ಶದಲ್ಲೇ ಸಾಕಶ್ಟು ಹೆಸರು ಮಾಡಿ ಕೆ.ಎಸ್.ಸಿ.ಎ ಲೀಗ್ ಪಂದ್ಯಗಳಲ್ಲಿ ಆಡಲು ಆಯ್ಕೆಯಾದರು. ಒಮ್ಮೆ ಈ ಮಾದರಿಯ ಲೀಗ್ ಪಂದ್ಯಗಳಲ್ಲಿ ಆಗಿನ ಹಲವು ರಣಜಿ ಆಟಗಾರರನ್ನು ಶ್ರೀನಾತ್ ತಮ್ಮ ವೇಗದಿಂದ ತಬ್ಬಿಬ್ಬು ಮಾಡಿದ್ದರು. ಈ ಪ್ರದರ‍್ಶನವನ್ನು ಹತ್ತಿರದಿಂದ ಕಂಡಿದ್ದ ಗುಂಡಪ್ಪ ವಿಶ್ವನಾತ್ ಅವರು ಶ್ರೀನಾತ್ ಅವರನ್ನು ಪ್ರತಿಶ್ಟಿತ ಶಪಿ ದರಾಶ ಟ್ರೋಪಿಗೆ ಆಯ್ಕೆ ಮಾಡುವಂತೆ ಆಯ್ಕೆಗಾರರಿಗೆ ಸೂಚಿಸಿದರು. ಇಲ್ಲೂ ಸಹ ಅದೇ ಪ್ರದರ‍್ಶನವನ್ನು ಕಾಯ್ದುಕೊಂಡು 1988/89 ರ ಹೊತ್ತಿಗೆ ಶ್ರೀನಾತ್ ಕರ‍್ನಾಟಕ ಕ್ರಿಕೆಟ್ ವಲಯದಲ್ಲಿ ಹೆಸರುವಾಸಿಯಾಗಿದ್ದರು. 1989 ರಲ್ಲಿ ನಡೆದ ಮೊದಲ ಕಿರಿಯರ ವಿಶ್ವಕಪ್ ಗೆ ಶ್ರೀನಾತ್ ಆಯ್ಕೆ ಆಗುತ್ತಾರೆ ಎಂದು ಎಲ್ಲರೂ ನೆನೆದಿದ್ದರು. ಆದರೆ ಹಾಗಾಗದೆ ಅವರಿಗೆ ನಿರಾಸೆ ಉಂಟಾಯಿತು.

ರಣಜಿ ಪಾದಾರ‍್ಪಣೆ

1989ರ ನವಂಬರ್ ನಲ್ಲಿ ಶ್ರೀನಾತ್ ಕರ‍್ನಾಟಕದ ಪರ ರೋಜರ್ ಬಿನ್ನಿ ಅವರ ನಾಯಕತ್ವದಲ್ಲಿ ಹೈದರಾಬಾದ್ ವಿರುದ್ದ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಇವರ ಜೊತೆಗೆ ಇದೇ ಪಂದ್ಯದಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೂಡ ರಣಜಿಗೆ ಪಾದಾರ‍್ಪಣೆ ಮಾಡಿದರು. ಈ ಪಂದ್ಯದಲ್ಲಿ ಶ್ರೀನಾತ್ ತಮ್ಮ ವೇಗದಿಂದ ಎದುರಾಳಿಯನ್ನು ಸೆದೆ ಬಡೆಯುವುದರ ಜೊತೆಗೆ ಹ್ಯಾಟ್ರಿಕ್ ಕೂಡ ಪಡೆದು ಗಮನಸೆಳೆದರು. ಇದು ಮೊದಲ ಪಂದ್ಯದಲ್ಲೇ ಕನ್ನಡಿಗನೊಬ್ಬನ ಹ್ಯಾಟ್ರಿಕ್ ಎಂದು ದಾಕಲೆಯ ಪುಟ ಸೇರಿತು. ಈ ವರ‍್ಶದ ಮಿಕ್ಕೆಲ್ಲಾ ರಣಜಿ ಪಂದ್ಯಗಳಲ್ಲಿಯೂ ಶ್ರೀನಾತ್ ಬೌಲಿಂಗ್ ಮೊನಚು ಇನ್ನೂ ತೀವ್ರವಾಯಿತು. ಅವರ ಪ್ರದರ‍್ಶನ ಸದ್ದು ಮಾಡತೊಡಗಿತು. ವೇಗದ ಬೌಲರ್‍ಗಳ ಕೊರತೆಯಿಂದ ಬಳಲುತ್ತಿದ್ದ ಬಾರತ ತಂಡಕ್ಕೆ ಶ್ರೀನಾತ್ ಆಸರೆಯಾಗಬಲ್ಲರು ಎಂದು ಕ್ರಿಕೆಟ್ ವಲಯದಲ್ಲಿ ಆಗಲೇ ಚರ‍್ಚೆ ಶುರುವಾದವು. ಹೀಗಿದ್ದರೂ 1990 ರ ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀನಾತ್ ಆಯ್ಕೆಯಾಗುವುದಿಲ್ಲ. ಆದರೆ ಅವರ ಗೆಳೆಯ ಕುಂಬ್ಳೆ ಅವರಿಗೆ ಅದ್ರುಶ್ಟ ಒಲಿಯುತ್ತದೆ.

ಈ ಪ್ರವಾಸಕ್ಕೆ ಮುನ್ನ ಬಾರತ ತಂಡ ಅಬ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟಿತ್ತು. ಆಗ ಬಾರತ ತಂಡದ ಬ್ಯಾಟ್ಸ್ಮೆನ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದಕ್ಕಾಗಿ ಕರ‍್ನಾಟಕದ ಯುವ ವೇಗಿಗಳಾದ ವೆಂಕಟೇಶ್ ಪ್ರಸಾದ್ ಹಾಗು ಜಾವಗಲ್ ಶ್ರೀನಾತ್ ಅವರನ್ನು ಕರೆಸಲಾಯಿತು. ಆಗಿನ ಬಾರತದ ಪ್ರಬಲ ಬ್ಯಾಟ್ಸ್ಮೆನ್ ಗಳಾದ ಅಜರುದ್ದೀನ್, ಮಂಜ್ರೇಕರ್, ಸಿದ್ದು ಹಾಗೂ ತೆಂಡೂಲ್ಕರ್ ಬಾರತ ತಂಡದ ಬೌಲರ್ ಗಳಾದ ಮನೋಜ್ ಪ್ರಬಾಕರ್, ಸಂಜೀವ್ ಶರ‍್ಮ ಅವರಿಗಿಂತ ಶ್ರೀನಾತ್ ಅವರನ್ನು ಎದುರಿಸುವುದರಲ್ಲಿ ಕೊಂಚ ಕಶ್ಟಕ್ಕೆ ಒಳಗಾದರು. ಇದನ್ನು ಕಂಡ ಆಗಿನ ಬಾರತದ ಕೋಚ್ ಬಿಶನ್ ಸಿಂಗ್ ಬೇಡಿ ಅವರು ತಂಡದ ಆಯ್ಕೆ ನನಗೆ ಬಿಟ್ಟಿದ್ದರೆ ಕರ‍್ನಾಟಕದ ಈ ಇಬ್ಬರು ಬೌಲರ್ ಗಳನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ ಎಂದು ಹೇಳಿದ್ದರು.

ನಂತರ 1990/91 ರ ಸಾಲಿನ ದೇಶೀ ಕ್ರಿಕೆಟ್ ನಲ್ಲೂ ಶ್ರೀನಾತ್ ತಮ್ಮ ಬೌಲಿಂಗ್ ನಿಂದ ಮತ್ತೆ ಪ್ರಬಾವ ಬೀರಿದರು. ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಕಪಿಲ್ ಅವರೊಂದಿಗೆ ಹೊಸ ಬಾಲ್ ಹಂಚಿಕೊಳ್ಳಲು ಒಬ್ಬ ಅಳವುಳ್ಳ ವೇಗದ ಬೌಲರ್‍ನ ಹುಡುಕಾಟದಲ್ಲಿದ್ದ ಆಯ್ಕೆಗಾರರ ಕಣ್ಣಿಗೆ ಕಡೆಗೂ ಶೀನಾತ್ ಬೀಳುತ್ತಾರೆ. ಅವರನ್ನು 1991 ರಲ್ಲಿ ಶಾರ‍್ಜಾದಲ್ಲಿ ಪಾಕಿಸ್ತಾನ ವಿರುದ್ದದ ಒಂದು ದಿನದ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

ಶಾರ‍್ಜಾದಲ್ಲಿ ನಡೆದ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ವ್ರುತ್ತಿ ಬದುಕಿಗೆ ಒಳ್ಳೆ ಆರಂಬ ಪಡೆದು ತಮ್ಮ ಅಳವನ್ನು ತೋರಿದ್ದ ಶ್ರೀನಾತ್ ಈ ಪ್ರವಾಸದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಮತ್ತು 1992ರ ವಿಶ್ವಕಪ್ ಗೂ ಆಯ್ಕೆಯಾದರು. 1991ರ ನವಂಬರ್ ನಲ್ಲಿ ಆಸ್ಟ್ರೇಲಿಯಾದ ಮೇಲೆ ಬ್ರಿಸ್ಬೇನ್ ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ‍್ಪಣೆ ಮಾಡಿದರು. ನೋಡಲು ತುಂಬಾ ತೆಳ್ಳಗಿದ್ದ ಈ ಹುಡುಗ ವೇಗದ ಬೌಲಿಂಗ್ ಮಾಡಬಲ್ಲನೇ ಎಂಬ ಅಲ್ಲಿನ ಮಾದ್ಯಮ ಹಾಗೂ ಕ್ರಿಕೆಟ್ ಪಂಡಿತರ ಕೇಳ್ವಿಗಳಿಗೆ ತಮ್ಮ ಕರಾರುವಕ್ಕಾದ ಇನ್‍ಸ್ವಿಂಗ್ ಮತ್ತು ಯಾರ‍್ಕರ್ ಗಳಿಂದಲೇ ಉತ್ತರ ನೀಡಿದರು. ಆಸ್ಟ್ರೇಲಿಯಾದ ಪ್ರಮುಕ ಬ್ಯಾಟ್ಸ್ಮನ್ ಗಳಾದ ಜೆಪ್ ಮಾರ‍್ಶ್, ಡೇವಿಡ್ ಬೂನ್, ಡೀನ್ ಜೋನ್ಸ್, ಮಾರ‍್ಕ್ ಟೇಲರ್ ಅವರುಗಳಿಗೆ ತಮ್ಮ ಬೌನ್ಸರ್ ರುಚಿಯನ್ನು ತೋರಿಸಿ ಶ್ರೀನಾತ್ ಅಲ್ಲಿನ ಮಾದ್ಯಮಗಳ ಮೆಚ್ಚುಗೆ ಗಳಿಸಿದರು.

1992ರ ವಿಶ್ವಕಪ್ ನಲ್ಲಿ ಬಾರತ ನೀರಸ ಪ್ರದರ‍್ಶನ ತೋರಿದರೂ ಶ್ರೀನಾತ್ ಎಲ್ಲಾ ಪಂದ್ಯಗಳಲ್ಲಿಯೂ ಒಳ್ಳೆ ಬೌಲಿಂಗ್‍ನಿಂದ ಗಮನಸೆಳೆದು ತಮ್ಮ ಅಂತರಾಶ್ಟ್ರೀಯ ಕ್ರಿಕೆಟ್ ಬದುಕಿಗೆ ಮುನ್ನುಡಿ ಬರೆದರು. ಅಲ್ಲಿಂದ ಹಂತ ಹಂತವಾಗಿ ಬೆಳೆದು ಶ್ರೀನಾತ್ ಬಾರತ ತಂಡದ ಕಾಯಮ್ ಸದಸ್ಯರಾದರು. 1992ರ ದಕ್ಶಿಣ ಆಪ್ರಿಕಾ ಪ್ರವಾಸದಲ್ಲೂ ಇವರ ಬೌಲಿಂಗ್ ಪ್ರಾಬಲ್ಯ ಮುಂದುವರೆಯಿತು. ಹೀಗೆ ಬಾರತದ ಹೊರಗೆಲ್ಲಾ ಆಡಿದ ಪಂದ್ಯಗಳಲ್ಲಿ ತಮ್ಮ ಬೌಲಿಂಗ್ ಕೌಶಲ್ಯದಿಂದ ಮನೆಮಾತಾಗಿದ್ದ ಶ್ರೀನಾತ್ ಅವರಿಗೆ 1994ರ ತನಕ ತವರಿನಲ್ಲಿ ಟೆಸ್ಟ್ ಆಡಲು ಅವಕಾಶ ಸಿಗದೇ ಹೋಗಿದ್ದು ಕ್ರಿಕೆಟ್ ನ ದುರಂತಗಳಲ್ಲಿ ಒಂದು. ಸರ್ ರಿಚರ‍್ಡ್ ಹ್ಯಾಡ್ಲಿ ಅವರ ಗರಿಶ್ಟ 431 ಟೆಸ್ಟ್ ವಿಕೆಟ್ ಗಳ ದಾಕಲೆಯನ್ನು ಬೆನ್ನಟ್ಟಿದ್ದ ಕಪಿಲ್ ತಮ್ಮ ಪ್ರದರ‍್ಶನ ಕುಂದಿದ್ದರೂ ಆಡುತ್ತಾ ಹೋದರು. ಅವರಿಗೆ ಜೊತೆಯಾಗಿ ಬೌಲ್ ಮಾಡಲು ಇನ್ನೊಬ್ಬ ಹಿರಿಯ ಬೌಲರ್ ಪ್ರಬಾಕರ್ ಇದ್ದುದರಿಂದ ಶ್ರೀನಾತ್ 3 ವರ‍್ಶಗಳ ಕಾಲ ತವರು ಟೆಸ್ಟ್ ಗಳಲ್ಲಿ ಆಡುವ ಹನ್ನೊಂದರ ಹೊರಗೆ ಉಳಿದರು. ಕಡೆಗೆ 1994 ರಲ್ಲಿ ವೆಸ್ಟ್ ಇಂಡೀಸ್ ಬಾರತ ಪ್ರವಾಸಕ್ಕೆ ಬಂದಾಗ ಶ್ರೀನಾತ್ ತವರಿನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಆಡಿದರು. ಈ ಸರಣಿಯುದ್ದಕ್ಕೂ ಬ್ಯಾಟಿಂಗ್ ದಿಗ್ಗಜ ಬ್ರಯನ್ ಲಾರಾರನ್ನು ಕಾಡಿದರು. ಆಗಲೇ ಕ್ರಿಕೆಟ್ ಜಗತ್ತು ಶ್ರೀನಾತ್ ಅವರನ್ನು ವಿಶ್ವ ಶ್ರೇಶ್ಟ ಬೌಲರ್‍ಗಳ ಸಾಲಿಗೆ ಸೇರಿಸಿತು.

ಕೌಂಟಿ ಕ್ರಿಕೆಟ್

ಇಂಗ್ಲೆಂಡಿನ ವ್ರುತ್ತಿಪರ ಕೌಂಟಿಗಳಲ್ಲಿ ವಿದೇಶಿ ಆಟಗಾರರು ಆಡುವುದು ಆ ಆಟಗಾರನ ದೇಶಕ್ಕೆ ಹೆಮ್ಮೆಯ ವಿಶಯ. ಅದರಲ್ಲೂ ವೇಗದ ಬೌಲಿಂಗ್‍ನಲ್ಲಿ ಅಂತ ಹೇಳಿಕೊಳ್ಳುವ ಚರಿತ್ರೆ ಇಲ್ಲದ ಬಾರತದಿಂದ ಒಬ್ಬ ಬೌಲರ್ ಕೌಂಟಿ ಕ್ರಿಕೆಟ್ ಆಡಿದರೆ ಆ ಆಟಗಾರ ಸಾರ‍್ವಕಾಲಿಕ ಶ್ರೇಶ್ಟ ಎಂದೇ ಅರ‍್ತ. ಈಗಿನ ಕೌಂಟಿ ಕ್ರಿಕೆಟ್ ತನ್ನ ಕಳೆ ಕಳೆದುಕೊಂಡಿದ್ದರೂ 90ರ ದಶಕದಲ್ಲಿ ಕೌಂಟಿಗೆ ಆಯ್ಕೆ ಆಗುವುದು ಹೆಮ್ಮೆಯ ವಿಶಯವೇ ಆಗಿತ್ತು. 1995ರ ಹೊತ್ತಿಗಾಗಲೇ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಹೆಸರು ಮಾಡಿದ್ದ ಶ್ರೀನಾತ್ ಗ್ಲೋಸ್ಟರ್‍ಶೈರ್ ಕೌಂಟಿಗೆ ಆಯ್ಕೆಯಾದರು. ಆಡಿದ ಮೊದಲ ರುತುವಿನಲ್ಲೇ 100 ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದು ತಮ್ಮ ಆಯ್ಕೆಯನ್ನು ಸಮರ‍್ತಿಸಿಕೊಂಡರು. ಗ್ಲಾಮಾರ‍್ಗನ್ ಮೇಲಿನ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗಳನ್ನು ಪಡೆದದ್ದು ಕೌಂಟಿಯಲ್ಲಿ ಶ್ರೀನಾತ್ ರ ಶ್ರೇಶ್ಟ ಸಾದನೆ. ಒಬ್ಬ ವಿದೇಶಿ ಆಟಗಾರ ಒಂದು ಕೌಂಟಿಯನ್ನು ಪ್ರತಿನಿದಿಸುವುದೇ ದೊಡ್ಡ ಸಾದನೆ. ಹೀಗಿರುವಾಗ ಶ್ರೀನಾತ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಮೂರು ಕೌಂಟಿ ತಂಡಗಳ ಪರ ಆಡಿದರೆಂದರೆ ಅವರ ಅಳವಿನ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಲೀಸ್ಟರ್‍ಶೈರ್ ಮತ್ತು ಡರ‍್ಹಮ್ ಶ್ರೀನಾತ್ ಆಡಿದ ಇನ್ನೆರಡು ಕೌಂಟಿ ತಂಡಗಳು.

ಗಾಯಾಳು – ಶಸ್ತ್ರಚಿಕಿತ್ಸೆ

1996ರಲ್ಲಿ ಆ ಸಾಲಿನ ವಿಶ್ವಕಪ್ ಮತ್ತು ಎಲ್ಲಾ ಮಾದರಿಯ ಪಂದ್ಯಗಳನ್ನು ಬಿಡುವಿಲ್ಲದೆ ಶ್ರೀನಾತ್ ಆಡಿದರು. ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಬಿಡುವು ಸಿಕ್ಕಾಗ ಕರ‍್ನಾಟಕದ ಪರ 96ರ ರಣಜಿ ಪೈನಲ್ ಪಂದ್ಯ ಕೂಡ ಆಡಿ ಕರುನಾಡಿಗೆ ರಣಜಿ ಕಿರೀಟ ಮುಡಿಸಿದರು. ಹೀಗೆ ಎಡಬಿಡದೆ ಕ್ರಿಕೆಟ್ ಆಡುತ್ತಿದ್ದ ಶ್ರೀನಾತ್ ಅವರಿಗೆ 1997ರಲ್ಲಿ ಆಗಾತ ಕಾದಿತ್ತು. ಮಹತ್ವದ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಅವರಿಗೆ ಬುಜದ ನೋವು ಇನ್ನಿಲ್ಲದಂತೆ ಕಾಡಿತು. ವೈದ್ಯರು ಶಸ್ತ್ರಚಿಕಿತ್ಸೆ ಅನಿವಾರ‍್ಯ ಎಂದುದರಿಂದ ಶ್ರೀನಾತ್ 8 ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದರು. ಈ ಬಿಡುವಿನ ಹೊತ್ತನ್ನು ಬಳಸಿಕೊಂಡು ತಮ್ಮ ಎಂಜಿನಿಯರಿಂಗ್ ಪರೀಕ್ಶೆಗೆ ಹಾಜರಾಗಿ ಪದವಿ ಪಡೆದರು.

ಮರಳಿ ತಂಡಕ್ಕೆ

ಎಂಟು ತಿಂಗಳ ಅಜ್ನಾತ ವಾಸದ ನಂತರ 1997ರ ಕೊನೆಯಲ್ಲಿ ಶ್ರೀನಾತ್ ಮತ್ತೆ ಬಾರತ ತಂಡ ಸೇರಿದರು. ಶಸ್ತ್ರಚಿಕಿತ್ಸೆಯಿಂದ ಅವರ ವೇಗ ಕೊಂಚ ಕುಗ್ಗಿದ್ದರೂ ಬೌಲಿಂಗ್ ನಲ್ಲಿ ಸತ್ವ ಮಾತ್ರ ಕಳೆದುಕೊಳ್ಳಲಿಲ್ಲ. ಮತ್ತೊಮ್ಮೆ ಎಲ್ಲಾ ಪ್ರಕಾರದ ಪಂದ್ಯಗಳನ್ನು ಆಡುತ್ತಾ ತಂಡಕ್ಕೆ ಬೆನ್ನೆಲುಬಾಗಿ ನಿಂತರು. 2000 ಇಸವಿಯ ಹೊತ್ತಿಗೆ ಒಂದು ದಿನ ಹಾಗೂ ಟೆಸ್ಟ್ ಎರಡರಲ್ಲೂ 200 ವಿಕಟ್ ಗಡಿ ದಾಟಿದರು. ತಂಡದ ಹಿರಿಯ ಆಟಗಾರನಾಗಿ ಯುವ ಬೌಲರ್‍ಗಳಾದ ಅಗರ‍್ಕರ್, ಜಹೀರ್ ಕಾನ್, ನೆಹ್ರಾ ಅವರಿಗೆ ಮಾರ‍್ಗದರ‍್ಶಕರಾದರು.

ಬಾರತದ ಬ್ಯಾಟಿಂಗ್ ಗೆ ಹೇಗೆ ತೆಂಡೂಲ್ಕರ್ ಆಸರೆಯೋ ಹಾಗೇ ತಂಡದ ಬೌಲಿಂಗ್ ಶ್ರೀನಾತ್ ಅವರನ್ನೇ ನೆಚ್ಚಿಕೊಂಡಿತ್ತು. 2000 ಇಸವಿಯಿಂದಾಚೆಗೆ ಬೌಲಿಂಗ್ ನಲ್ಲಿ ಇನ್ನೂ ಮಾಗಿದ ಶ್ರೀನಾತ್ ತಮ್ಮ ವಯಸ್ಸು ಹಾಗೂ ಹೊಸ ಹುಡುಗರ ಬರುವಿಕೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಒಂದು ದಿನದ ಪಂದ್ಯಗಳನ್ನಾಡದೆ ಅತಿ ಮುಕ್ಯವಾದ ಸರಣಿಯಲ್ಲಿ ಮಾತ್ರ ಆಡುತ್ತಿದ್ದರು. 2002ರ ಐದು ಟೆಸ್ಟ್ ಗಳ ವೆಸ್ಟ್ ಇಂಡೀಸ್ ಪ್ರವಾಸದಿಂದ ಮರಳಿದ ಶ್ರೀನಾತ್ ಜೂನ್ ನಲ್ಲಿ ಏಕಾಏಕಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದರು. 2003 ರ ವಿಶ್ವಕಪ್ ಆಡುವುದು ನನ್ನ ಗುರಿ, ಹಾಗಾಗಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ ಎಂದು ಹೇಳಿಕೆ ನೀಡಿದರು. ಆದರೆ ಶ್ರೀನಾತ್ ಅವರ ಮುಂದಾಲೋಚನೆಯನ್ನು ಅರಿಯದ ಆಯ್ಕೆಗಾರರು ಇಂಗ್ಲೆಂಡ್ ಪ್ರವಾಸದ ಒಂದು ದಿನದ ಪಂದ್ಯಗಳಿಗೂ ಅವರನ್ನು ಕಯ್ ಬಿಟ್ಟು ಆಗಾತ ನೀಡಿದರು. ಇದರಿಂದ ಎದೆಗುಂದದೆ ಅವರು ಬಾರತದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲೇ ಲೀಸ್ಟರ್ ಪರ ಕೌಂಟಿ ಪಂದ್ಯಗಳನ್ನು ಆಡತೊಡಗಿದರು. ಬಾರತದ ಬೌಲರ್ ಗಳಾದ ಜಹೀರ್, ನೆಹ್ರಾ, ಅಗರ‍್ಕರ್ ಇಂಗ್ಲೆಂಡ್ ನಲ್ಲಿ ವಿಕೆಟ್ ಪಡೆಯಲು ಪರದಾಡುತ್ತಿರುವಾಗ ಅಲ್ಲಿನ ಕ್ರಿಕೆಟ್ ಪಂಡಿತರೆಲ್ಲರೂ ಶ್ರೀನಾತ್ ಇರಬೇಕಿತ್ತು ಎಂದರು. ಶ್ರೀನಾತ್ ಕೂಡ ನಾನು ಅದೇ ಸಮಯದಲ್ಲಿ ಹತ್ತಾರು ಮೈಲಿಗಳ ದೂರದಲ್ಲಿ ಕೌಂಟಿ ಪಂದ್ಯಗಳನ್ನಾಡುತ್ತಿದ್ದೆ, ಬಾರತ ತಂಡಕ್ಕೆ ನೆರವು ನೀಡಲಾಗಲಿಲ್ಲವಲ್ಲ ಎಂದು ವಿಶಾದ ವ್ಯಕ್ತಪಡಿಸಿದ್ದರು.

ಗಂಗೂಲಿ ಒತ್ತಾಯ – ಮರಳಿದ ಶ್ರೀನಾತ್

85 ವರ‍್ಶಗಳ ಹಳಮೆ ಇರುವ ಬಾರತದಲ್ಲಿ ಯಾವುದೇ ಆಟಗಾರ ಒತ್ತಾಯಕ್ಕೆ ಮಣಿದು ವಿದಾಯ ಹಿಂಪಡೆದು ತಂಡಕ್ಕೆ ಮರಳಿರುವ ಎತ್ತುಗೆಗಳಿಲ್ಲ. ಇಂಗ್ಲೆಂಡ್ ನಲ್ಲಿ ಶ್ರೀನಾತ್ ಆಡಿದ್ದರೆ ಬಾರತ ಸರಣಿ ಗೆಲ್ಲಬಹುದಿತ್ತು ಎಂದು ನಾಯಕ ಗಂಗೂಲಿ ಅರಿತ್ತಿದ್ದರು. ಹಾಗಾಗಿ 2003ರ ವಿಶ್ವಕಪ್ ಗೆ ಶ್ರೀನಾತ್ ತಂಡಕ್ಕೆ ಅನಿವಾರ‍್ಯ ಅನ್ನುವುದನ್ನು ಗಂಗೂಲಿ ಆಯ್ಕೆಗಾಗರಿಗೆ ಮನದಟ್ಟು ಮಾಡಿಸಿ ನಂತರ ಶ್ರೀನಾತ್ ಅವರನ್ನು ಎರಡೂ ಬಗೆಯ ಕ್ರಿಕೆಟ್ ಗೆ ಮರಳುವಂತೆ ಒಪ್ಪಿಸಿದರು. 2002ರ ಸೆಪ್ಟಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಚಾಂಪಿಯನ್ಸ್ ಟ್ರೋಪಿಯ ಪೈನಲ್ ಪಂದ್ಯದ ಮುಂಜಾನೆ ಶ್ರೀನಾತ್ ಇಂಗ್ಲೆಂಡ್ ನಿಂದ ಪ್ರಯಾಣ ಬೆಳೆಸಿ ತಂಡ ಸೇರಿಕೊಂಡರು. ಅದಾದ ಮೇಲೆ ಬಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ಸರಣಿ ಹಾಗೂ ನಂತರದ ನ್ಯೂಜಿಲ್ಯಾಂಡ್ ಪ್ರವಾಸದಲ್ಲೂ ಶ್ರೀನಾತ್ ಪ್ರಾಬಲ್ಯ ಮೆರೆದರು. ಈ ಪ್ರವಾಸದ ಬೆನ್ನಲ್ಲೇ ದಕ್ಶಿಣ ಆಪ್ರಿಕಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಅವರು ಒಂದು ದಿನದ ಪಂದ್ಯಗಳಲ್ಲಿ 300 ವಿಕೆಟ್‍ಗಳ ಗಡಿ ದಾಟಿದರು.

1992 ರಿಂದ 2003ರ ತನಕ ನಾಲ್ಕು ವಿಶ್ವಕಪ್ ಗಳಲ್ಲಿ ಎಲ್ಲಾ 34 ಪಂದ್ಯಗಳನ್ನಾಡಿ ಒಟ್ಟು 44 ವಿಕೆಟ್ ಪಡೆದ್ದಿದ್ದಾರೆ. ಇದು ವಿಶ್ವಕಪ್ ನಲ್ಲಿ ಬಾರತದ ಬೌಲರ್ ನೊಬ್ಬನ ಗರಿಶ್ಟ ಹಾಗೂ ಶ್ರೇಶ್ಟ ಸಾದನೆ. 2003ರ ವಿಶ್ವಕಪ್ ಪೈನಲ್ ನಲ್ಲಿ ಬಾರತ ಮುಗ್ಗರಿಸಿದರೂ ಶ್ರೀನಾತ್ ಬೌಲಿಂಗ್ ಪಡೆಯನ್ನು ಮುನ್ನಡೆಸಿದ ರೀತಿ ಎಲ್ಲರಿಂದ ಮೆಚ್ಚುಗೆ ಪಡೆಯಿತು. 33ರ ವಯಸ್ಸಿನಲ್ಲೂ ಅವರು ತಂಡದ ಯುವ ಬೌಲರ್ ಗಳಿಗಿಂತ ವೇಗವಾಗಿ ಬೌಲ್ ಮಾಡುತ್ತಿದ್ದದ್ದನ್ನು ಕಂಡು ಕ್ರಿಕೆಟ್ ಜಗತ್ತು ಬೆರಗಾಯಿತು. 2003ರ ಕೊನೆಗೆ ಬಾರತ ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಿತ್ತು. ನಾಯಕ ಗಂಗೂಲಿ ಶ್ರೀನಾತ್ ಇದೊಂದು ಪ್ರವಾಸಕ್ಕೆ ಬಂದರೆ ಸಾಕು, ಅಲ್ಲಿನ ಪಿಚ್ ಗಳಲ್ಲಿ ಆಡುವಾಗ ಅವರು ತಂಡಕ್ಕೆ ಬಹಳ ಮುಕ್ಯ ಎಂದು ಹೇಳಿಕೆ ನೀಡಿದ್ದರು. ಆದರೆ ಶ್ರೀನಾತ್ ನಾನು ನನ್ನ ಆಟಕ್ಕೆ ನ್ಯಾಯ ಒದಗಿಸಲಾರೆ, ಮತ್ತೆ ಬುಜದ ನೋವು ಕಾಡಲಾರಂಬಿಸಿದೆ ಎಂದು ನವಂಬರ್ 11, 2003 ರಂದು ಅಂತರಾಶ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು. ಅಂದು ಬಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಬಂಗಾರದ ಯುಗ ಮುಗಿದಂತಾಯಿತು.

ಕುಂಬ್ಳೆ- ಶ್ರೀನಾತ್ ಗೆಳೆತನ

ಶ್ರೀನಾತ್ ಅವರದು ತುಂಬಾ ತಮಾಶೆಯ ಸ್ವಬಾವ. ರಾಹುಲ್ ದ್ರಾವಿಡ್ ಹೊಸದಾಗಿ ಕರ‍್ನಾಟಕ ತಂಡ ಸೇರಿಕೊಂಡಾಗ ಅವರನ್ನು ಗೇಲಿ ಮಾಡಿ “ಜ್ಯಾಮಿ” ಎಂದು ಅಡ್ಡ ಹೆಸರು ಇಟ್ಟಿದ್ದು ಶ್ರೀನಾತ್ ಅವರೇ. ಕುಂಬ್ಳೆ ಅವರದು ಹೆಚ್ಚು ಮಾತನಾಡದ ಬಹಳ ಗಂಬೀರವಾದ ವ್ಯಕ್ತಿತ್ವ. ಹೀಗಿದ್ದರೂ ಇವರಿಬ್ಬರ ಗೆಳೆತನ ಕ್ರಿಕೆಟ್ ಜಗತ್ತು ಕಂಡ ಅಪೂರ‍್ವ ಗೆಳೆತನಗಳಲ್ಲೊಂದು. ಕರ‍್ನಾಟಕ ಕಿರಿಯರ ತಂಡದಿಂದ ಅಂತರಾಶ್ಟ್ರೀಯ ಕ್ರಿಕೆಟ್ ವರೆಗೂ ಇಬ್ಬರೂ ಒಟ್ಟಿಗೆ ಆಡಿ ವ್ರುತ್ತಿ ಬದುಕಿನಾದ್ಯಂತ ಒಬ್ಬರಿಗೊಬ್ಬರು ನೆರವಾಗುತ್ತಾ ಬಂದರು. 1990 ರ ಇಂಗ್ಲೆಂಡ್ ಪ್ರವಾಸದಿಂದ ಮರಳಿದ ಕುಂಬ್ಳೆ ಅಲ್ಲಿನ ಪ್ರಸಿದ್ದ “ಗನ್ ಅಂಡ್ ಮೂರ‍್” ಬೌಲಿಂಗ್ ಬೂಟ್ಸ್ ಅನ್ನು ಶ್ರೀನಾತ್ ಅವರಿಗೆ ನೀಡಿ, ನೀನು ಅಂತರಾಶ್ಟ್ರೀಯ ಕ್ರಿಕೆಟ್ ಆಡುವ ದಿನಗಳು ದೂರವಿಲ್ಲವೆಂದು ಹುರಿದುಂಬಿಸಿದ್ದರು. ಆನಂತರ ನಡೆದ್ದಿದ್ದೆಲ್ಲ ಇತಿಹಾಸ. ಇಬ್ಬರೂ ಒಂದು ದಶಕಕ್ಕೂ ಹೆಚ್ಚು ಕಾಲ ಒಟ್ಟಿಗೆ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ದಿಗ್ಗಜರಾಗಿ ಬೆಳೆದರು.

1996 ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ದದ ಒಂದು ದಿನದ ಪಂದ್ಯದಲ್ಲಿ ಇವರಿಬ್ಬರು ಬ್ಯಾಟಿಂಗ್ ನಿಂದ ಬಾರತವನ್ನು ಗೆಲುವಿನ ದಡ ಸೇರಿಸಿದ್ದು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲಾರ. 1999 ರ ದೆಹಲಿ ಟೆಸ್ಟ್ ನಲ್ಲಿ ಕುಂಬ್ಳೆ ಅವರು 9 ವಿಕೆಟ್ ಗಳನ್ನು ಪಡೆದ ನಂತರ ಎಲ್ಲಾ ಹತ್ತು ವಿಕೆಟ್ ಗಳನ್ನು ಅವರೇ ಪಡೆಯಲೆಂದು, ಇನ್ನೊಂದು ಬದಿಯಿಂದ ಬೌಲಿಂಗ್ ಮಾಡುತ್ತಿದ್ದ ಶ್ರೀನಾತ್ ಬೇಕೆಂದೇ ಮೂರ‍್ನಾಲ್ಕು ಓವರ್ ಗಳಲ್ಲಿ ಹೆಚ್ಚು ವೈಡ್ ಗಳನ್ನೇ ಮಾಡಿ ತಮ್ಮ ಗೆಳೆಯನಿಗೆ ನೆರವಾಗಿದ್ದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಇವರ ಗೆಳೆತನ ಕ್ರಿಕೆಟ್ ಅಂಗಳದ ಹೊರಗೂ ಮುಂದುವರೆಯಿತು. 2010 ರ ಕೆ.ಎಸ್.ಸಿ.ಎ ಚುನಾವಣೆಯಲ್ಲಿ ಗೆದ್ದು ಕುಂಬ್ಳೆ ಅದ್ಯಕ್ಶರಾದರೆ ಶ್ರೀನಾತ್ ಕಾರ‍್ಯದರ‍್ಶಿ ಸ್ತಾನಕ್ಕೆ ಏರಿ ಕರ‍್ನಾಟಕ ಕ್ರಿಕೆಟ್ ಗೆ ದುಡಿದರು.

ಶ್ರೀನಾತ್ ಕೊಡುಗೆ

ಹನ್ನೆರಡು ವರ‍್ಶಗಳ ಕಾಲ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ ಶ್ರೀನಾತ್ ಒಟ್ಟು 67 ಟೆಸ್ಟ್ ಗಳಿಂದ 236 ವಿಕೆಟ್‍ಗಳನ್ನು ಮತ್ತು 228 ಒಂದು ದಿನದ ಪಂದ್ಯಗಳಿಂದ 315 ವಿಕೆಟ್‍ಗಳನ್ನು ಪಡೆದ್ದಿದ್ದಾರೆ. ಬೌಲಿಂಗ್ ಜೊತೆಗೆ ತಂಡಕ್ಕೆ ಬ್ಯಾಟಿಂಗ್ ನಿಂದಲೂ ಆಗಾಗ ನೆರವಾಗಿದ್ದಾರೆ. ಅಜರುದ್ದೀನ್ ನಾಯಕರಾಗಿರುವಾಗ ಬೇಗನೆ ರನ್ ಗಳಿಸುವ ಅವಶ್ಯಕತೆ ಇರುವಾಗ ಶ್ರೀನಾತ್ ಅವರಿಗೆ ಬಡ್ತಿ ನೀಡಿ ಬ್ಯಾಟ್ ಮಾಡಲು ಕಳಿಸುತ್ತಿದ್ದು ಎಲ್ಲರಿಗೂ ತಿಳಿದೇ ಇದೆ. ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಗಳಿಸಿದ 5 ಅರ‍್ದ ಶತಕಗಳು ಅವರ ಬ್ಯಾಟಿಂಗ್ ಅಳವಿಗೆ ಸೂಕ್ತ ಎತ್ತುಗೆ. ಶ್ರೀನಾತ್ ಅವರ ಕೊಡುಗೆ ಅಂಕಿ ಸಂಕ್ಯೆಗಳಿಂದ ಅಳೆಯುವಂತದ್ದಲ್ಲ. ವೇಗದ ಬೌಲಿಂಗ್ ನಲ್ಲಿ ಅಂತ ಹೇಳಿಕೊಳ್ಳುವ ಚರಿತ್ರೆ ಇಲ್ಲದ ಬಾರತದಲ್ಲಿ ಹುಟ್ಟಿ ಇಶ್ಟು ಸಾದನೆ ಮಾಡಿರುವ ಶ್ರೀನಾತ್ ನಿಜಕ್ಕೂ ತೆಂಡೂಲ್ಕರ್, ದ್ರಾವಿಡ್, ಕುಂಬ್ಳೆ ಅವರ ಸಾಲಿಗೆ ಸೇರುವ ದಿಗ್ಗಜ ಆಟಗಾರ. ಆದರೆ ಅವರಿಗೆ ಸಿಗಬೇಕಿದ್ದ ಮನ್ನಣೆ ಸಿಗದೇ ಹೋದದ್ದು ವಿಶಾದದ ಸಂಗತಿ. ಬಾರತದ ನಿರ‍್ಜೀವ ಪಿಚ್‍ಗಳಲ್ಲಿ ವೇಗದ ಬೌಲಿಂಗ್ ಮಾಡುವುದು ದೊಡ್ಡ ಸವಾಲು. ಶ್ರೀನಾತ್ ಉತ್ತುಂಗದಲ್ಲಿರುವಾಗ ಸ್ಲಿಪ್, ಶಾರ‍್ಟ್ ಲೆಗ್ ಗಳಲ್ಲಿ ಕ್ಯಾಚ್ ಹಿಡಿಯಲು ನುರಿತ ಆಟಗಾರರಿದ್ದಿದ್ದರೆ ಅವರು ಇನ್ನೂ ಹೆಚ್ಚು ವಿಕೆಟ್ ಪಡೆಯುತ್ತಿದ್ದರು ಎಂದು ಹಲವಾರು ಮಾಜಿ ಆಟಗಾರರು ಅಬಿಪ್ರಾಯ ಪಟ್ಟಿದ್ದಾರೆ.

ಬಾರತ ತಂಡದಲ್ಲಿ ಇನ್ನೊಬ್ಬ ಶ್ರೀನಾತ್ ಇದ್ದಿದ್ದರೆ ನಾನು ಬಾರತದ ಮೇಲೆ ಇಶ್ಟು ರನ್ ಮಾಡಲಾಗುತ್ತಿರಲಿಲ್ಲ ಎಂದು ಪಾಕಿಸ್ತಾನದ ಬ್ಯಾಟ್ಸ್ಮೆನ್ ಸಯೀದ್ ಅನ್ವರ್ ತಮ್ಮ ವಿದಾಯದ ಬಾಶಣದಲ್ಲಿ ಹೇಳಿದ್ದರು. 90ರ ದಶಕದಾದ್ಯಂತ ಬೌಲರ್ ಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಶ್ರೀಲಂಕಾದ ಸನತ್ ಜಯಸೂರ‍್ಯರನ್ನು ತಕ್ಕ ಮಟ್ಟಿಗೆ ಕಟ್ಟಿ ಹಾಕಿದ್ದು ಬಹುಶ ಶ್ರೀನಾತ್ ಒಬ್ಬರೇ. ಈಗ ನಿವ್ರುತ್ತಿಯ ನಂತರ ಕ್ರಿಕೆಟ್ ವಲಯದಲ್ಲೇ ಐ.ಸಿ.ಸಿ ಮ್ಯಾಚ್ ರೆಪರಿಯಾಗಿ ತಮ್ಮ ಕ್ರಿಕೆಟ್ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಅವರ ಮಾರ‍್ಗದರ‍್ಶನ ಬಾರತದ ಈಗಿನ ಪೀಳಿಗೆಯ ಬೌಲರ್ ಗಳಿಗೆ ಅತ್ಯವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಗರಡಿಯಲ್ಲಿ ಪಳಗಿದ ಕರ‍್ನಾಟಕದ ವಿನಯ್ ಕುಮಾರ್ ರಾಜ್ಯ ತಂಡಕ್ಕೆ ನೀಡಿರುವ ಕೊಡುಗೆ ಕನ್ನಡಿಗರು ಮರೆಯಲು ಸಾದ್ಯವಿಲ್ಲ. ಬಾರತದ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲಿಂಗ್ ಬಗ್ಗೆ ಚರ‍್ಚೆ ಆದಾಗಲೆಲ್ಲಾ ಶ್ರೀನಾತ್ ರ ಹೆಸರು ಮುಂಚೂಣಿಯಲ್ಲಿರುತ್ತದೆ ಅನ್ನುವುದು ಮಾತ್ರ ದಿಟ. ಬಾರತ ಕ್ರಿಕೆಟ್‍ಗೆ ಇದೇ ನಮ್ಮ ಕನ್ನಡಿಗ ಶ್ರೀನಾತ್ ಅವರ ಕೊಡುಗೆ.

(ಚಿತ್ರ ಸೆಲೆ: itimes.com, omnipundit.com, oneindia.com, sports.6tclive.com, indiatimes.com)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.