ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’

– ನಾಗರಾಜ್ ಬದ್ರಾ.

ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಾಲೊಮ್ಯಾನ್, ಎಕ್ಸ್ ಮ್ಯಾನ್ ಹೀಗೆ ಬಗೆ ಬಗೆಯ ಸೂಪರ್ ಹೀರೋಗಳನ್ನು ಸಿನಿಮಾ ಹಾಗೂ ದಾರವಾಹಿಗಳಲ್ಲಿ ನೋಡಿದ್ದೇವೆ. ಹಾಗೆಯೇ ಕೆಲವು ಸೂಪರ್ ಹೀರೋ ಪರಿಕಲ್ಪನೆಗಳನ್ನು ಕಾಮಿಕ್ಸ್ ಗಳಲ್ಲಿ ಕೂಡ ಓದಿದ್ದೇವೆ. ಇಂತಹ ಸೂಪರ್ ಹೀರೋ ಪಾತ್ರಗಳು ಕೇವಲ ಕಾಲ್ಪನಿಕ, ನಿಜ ಜೀವನದಲ್ಲಿ ಇದು ಸಾದ್ಯವಿಲ್ಲ ಎಂದು ನಂಬಿದ್ದರೆ ಅದು ತಪ್ಪು. ಸೂಪರ್ ಹೀರೋಗಳ ಬಗೆಯಲ್ಲಿ ಕೆಲವು ವಿಶಿಶ್ಟ ಶಕ್ತಿಗಳಿರುವ ಮನುಶ್ಯರು ನಮ್ಮ ನಿಮ್ಮ ನಡುವೆ ಇದ್ದಾರೆ!

ಈತನ ಮೈ ಒಂದು ‘ಮ್ಯಾಗ್ನೆಟ್’!

ಮಲೇಶಿಯಾ ದೇಶದ ಲೀವ್ ತೌ ಲಿನ್ (Liew Thow Lin) ಎಂಬ ಹೆಸರಿನ ಮನುಶ್ಯ ಎಕ್ಸ್ ಮ್ಯಾನ್ ಸರಣಿಯ ಕಾಮಿಕ್ಸ್ ನಲ್ಲಿ ಬರುವ ಸೂಪರ್ ಹೀರೋ ಹಾಗೇ ಯಾವುದೇ ಲೋಹದ ವಸ್ತುವನ್ನು ಅಂಟುಪದಾರ‍್ತದ ಸಹಾಯವಿಲ್ಲದೇ ನೇರವಾಗಿ ತನ್ನ ಮೈಗೆ ಅಂಟಿಸಿಕೊಳ್ಳುತ್ತಾನೆ. ಅವನು ಒಟ್ಟು 36 ಕೆ.ಜಿ. ತೂಕದವರೆಗಿನ ಲೋಹವನ್ನು ಮೈಗೆ ಅಂಟಿಸಿಕೊಳ್ಳಬಲ್ಲ. ಒಂದು ಲೋಹದ ತುಂಡು 2 ಕೆ.ಜಿ. ಇದ್ದರೆ, ಅಂತಹ 16 ತುಂಡುಗಳನ್ನು ಮೈಗೆ ಅಂಟಿಸಿಕೊಳ್ಳುತ್ತಾನೆ. ಒಂದು ವೇಳೆ ಲೋಹದ ತುಂಡು 2 ಕೆ.ಜಿಗಿಂತ ಹೆಚ್ಚಿದ್ದರೆ ಅದು ಅವನ ಮೈಗೆ ಅಂಟಿಕೊಳ್ಳುವುದಿಲ್ಲ! ಇವನು ಮಲೇಶಿಯಾ ದೇಶದಾದ್ಯಂತ ‘ಮ್ಯಾಗ್ನೆಟ್ ಮ್ಯಾನ್’ ಎಂದೇ ಹೆಸರುವಾಸಿ ಆಗಿದ್ದಾನೆ.

ತಾನು 60 ನೇ ವಯಸ್ಸಿನಲ್ಲಿ ಇರುವಾಗ ಆತ ಉಪಯೋಗಿಸುವ ಲೋಹದ ವಸ್ತುಗಳು ಮೈಗೆ ಅಂಟಿಕೊಳ್ಳಲು ಆರಂಬಿಸಿದವು, ಆಗ ಅವನಿಗೆ ಈ ವಿಶಿಶ್ಟ ಶಕ್ತಿಯ ಬಗ್ಗೆ ಅರಿವಾಯಿತು. ಮಲೇಶಿಯಾ ಕಲಿಕೆವೀಡಿನ ಅರಿಮೆಗಾರರು ಈ ವಿಶಿಶ್ಟ ಶಕ್ತಿಯ ಬಗ್ಗೆ ಅಚ್ಚರಿಗೊಂಡು ಲಿನ್ ಅವರ ಮೈಯನ್ನು ಪರೀಕ್ಶಿಸಿದರು. ಅವರಿಗೆ ಲಿನ್ ಮೈಯಲ್ಲಿ ಯಾವುದೇ ರೀತಿಯ ಸೆಳೆಗಲ್ಲಿನ ಗುಣಗಳು ಕಂಡುಬರಲಿಲ್ಲ. ಆದರೆ ಅವರ ತೊಗಲಿನಲ್ಲಿ ಅಸಹಜವಾದ ಉಜ್ಜುವಿಕೆ (friction) ಕಂಡುಬಂದಿದ್ದು. ಇದು ಅವರ ಮೈಯಲ್ಲಿ ಜಿಗುಟನ್ನು ಉಂಟುಮಾಡಿ ಲೋಹಗಳನ್ನು ಎಳೆದುಕೊಳ್ಳುವಂತೆ ಮಾಡುತ್ತಿದೆ. ಲಿನ್ ಅವರ ಮೂರು ಮೊಮ್ಮಕ್ಕಳು ಕೂಡ ಈ ವಿಶಿಶ್ಟ ಸಾಮರ‍್ತ್ಯವನ್ನು ಹೊಂದಿದ್ದು. ಈ ಜಿಗುಟಾದ ತೊಗಲು ಅವರಿಗೆ ಹುಟ್ಟಿನಿಂದಲೇ ಆನುವಂಶಿಕವಾಗಿ ಬಂದಿದೆ ಎಂದು ಹೇಳಲಾಗಿದೆ.

ಈಕೆಯ ಕಣ್ಣು ಕಣ್ಣಲ್ಲ, ಅದು ಟೆಲಿಸ್ಕೋಪ್!

ಸಾಮಾನ್ಯ ಮನುಶ್ಯರು ಹೆಚ್ಚೆಂದರೆ 20 ಅಡಿ ದೂರವಿರುವ ವಸ್ತುಗಳನ್ನು ನೋಡಬಹುದು. ಪಡುವಣ ಜರ‍್ಮನಿಯ ವೆರೋನಿಕಾ ಸೀಡೆರ್ (Veronica Seider) ಎಂಬ ಹೆಸರಿನ ಹೆಂಗಸು 1.6 ಕಿಲೋಮೀಟರ್ ದೂರವಿರುವ ವಸ್ತು ಹಾಗೂ ಮನುಶ್ಯರನ್ನು ಸುಲಬವಾಗಿ ಗುರುತಿಸಬಲ್ಲರು. ವೆರೋನಿಕಾ ಸ್ನಿಡೆರ್ ಅವರು ಪಡುವಣ ಜರ‍್ಮನಿಯ ಸ್ಟುಟ್ಗಾರ‍್ಟ್ (Stuttgart) ಕಲಿಕೆವೀಡಿನಲ್ಲಿ ಓದುತ್ತಿರುವಾಗ ಅವರ ಈ ಅಸಾಮಾನ್ಯ ಕಣ್ಣಿನ ಸುದ್ದಿ ಸಾರ‍್ವಜನಿಕರ ಗಮನಕ್ಕೆ ಬಂದಿದೆ. ಸಾಮಾನ್ಯ ಮನುಶ್ಯನ ಕಣ್ಣಿನ ನೋಟದ ಮೊನಚು 20/20 ಇರುತ್ತದೆ. ಆದರೆ ವೆರೋನಿಕಾ ಸೀಡೆರ್ ಅವರು 20/2 ನೋಟದ ಮೊನಚನ್ನು ಹೊಂದಿದ್ದು, ಇದನ್ನು ದೂರತೋರುಕಕ್ಕೆ (telescope) ಹೋಲಿಸಬಹುದಾಗಿದೆ.

ಬರೀ ಕೈಯಲ್ಲಿ ನೀರನ್ನು ಕುದಿಸುವ ತಾಕತ್ತು ಹೊಂದಿರುವವನು ಇಲ್ಲಿದ್ದಾನೆ ನೋಡಿ!

89 ವರುಶ ವಯಸ್ಸಿನ ಚೀನಾದ ಜೌ ಟಿಂಗ್ – ಜಿ ( Zhou Ting-Jue) ಅವರು ತಮ್ಮ ಕೈಗಳ ಮೂಲಕ ವಿಶಿಶ್ಟ ರೀತಿಯ ಬಿಸಿಯನ್ನು ಉತ್ಪತ್ತಿ ಮಾಡುತ್ತಾರೆ. ಇವರು ಕುಂಗ್ ಪೂ, ತಾಯ್ ಚಿ, ಹಾಗು ಕಿಗೊಂಗ್ ನಲ್ಲಿ (Kung Fu, Tai Chi, and Qigong) ಅಂತರರಾಶ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ಆಗಿದ್ದಾರೆ. ಜೌ ಟಿಂಗ್ – ಜಿ ಅವರು ಉತ್ಪಾದಿಸುವ ಬಿಸಿಯು ನೀರಿನ ಕುದಿಯುವ ಬಿಂದುವಿಗೆ ತುಂಬಾ ಹತ್ತಿರವಾಗಿದೆ. ಇದಲ್ಲದೇ ಅವರು ಒಂದು ತೆಳು ಹಾಳೆಯ ಮೇಲೆ ನಿಂತು ಕೊಳ್ಳುವ ಇನ್ನೊಂದು ವಿಶಿಶ್ಟ ಸಾಮರ‍್ತ್ಯವನ್ನು ಕೂಡ ಹೊಂದಿದ್ದಾರೆ. ಜೌ ಟಿಂಗ್- ಜಿ ಅವರು ಕಿಗೊಂಗ್ ಚಳಕದಿಂದ ಹಲವಾರು ದೀರ‍್ಗಕಾಲದ ರೋಗಗಳು ಹಾಗೂ ಗುಣಮುಕವಾಗದ ರೋಗಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ಇತ್ತೀಚಿಗೆ ಅವರು ದಲೈ ಲಾಮಾ, ಎಲ್.ಎ ಲೇಕರ‍್ಸ್ ಬ್ಯಾಸ್ಕೆಟ್ಬಾಲ್ ತಂಡದ ಆಟಗಾರರಿಗೆ, ಒಲಿಂಪಿಕ್ ಕ್ರೀಡಾಪಟುಗಳಿಗೆ ಹಾಗೂ ಹಲವಾರು ಹೆಸರುವಾಸಿ ವ್ಯಕ್ತಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆಯನ್ನು ನೀಡಿದ್ದಾರೆ. ಅವರ ಈ ಸಾದನೆ ಚೀನಾ ದೇಶದಾದ್ಯಂತ ಅಪಾರ ಗೌರವ ನೀಡಿದೆ. ಅವರನ್ನು “ಚೀನಾದ ರತ್ನ” ಹಾಗೂ “ಚೀನಾದ ಸಂಪತ್ತು” ಎಂದು ಕರೆಯಲಾಗುತ್ತದೆ.

ನಂಜು, ಗಾಜು ಮತ್ತು ಲೋಹವನ್ನು ತಿನ್ನುವವನು!

ಮನುಶ್ಯರು ಹಲವಾರು ಬಗೆಯ ತರಕಾರಿ, ಹಣ್ಣುಗಳನ್ನು ಮತ್ತು ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ ಎನ್ನುವುದು ತಿಳಿದಿತ್ತು. ಆದರೆ ಪ್ರಾನ್ಸ್ ದೇಶದ ಮೈಕೆಲ್ ಲೋಟಿಟೊ (Michel Lotito) ಎಂಬ ಹೆಸರಿನ ಮನುಶ್ಯ ಗಾಜು, ಲೋಹ ಹಾಗೂ ವಿಶಯುಕ್ತ ಪದಾರ‍್ತಗಳನ್ನು ಸಹ ತಿನ್ನುತ್ತಾರೆ ಎಂಬ ಕುತೂಹಲಕಾರಿ ವಿಶಯವು ಎಲ್ಲರನ್ನೂ ಬೆರಗಾಗಿಸಿದೆ. ಮೈಕೆಲ್ ಲೋಟಿಟೊ ಅವರು ತನ್ನ ಅರಗೇರ‍್ಪಾಟಿಗೆ ಯಾವುದೇ ತೊಂದರೆಯಾಗದ ಹಾಗೆ ತಿನ್ನುವ ವಸ್ತುಗಳನ್ನು ಮೊದಲು ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು, ಬಳಿಕ ನೀರು ಹಾಗೂ ಒಳ್ಳೆಯ ಕನಿಜವಿರುವ ಎಣ್ಣೆಯ ಮೂಲಕ ಸುಲಬವಾಗಿ ನುಂಗುತ್ತಾರೆ. ಇವರು ದಿನಕ್ಕೆ ಸುಮಾರು ಒಂದು ಕೆ.ಜಿ. ಲೋಹವನ್ನು ತಿನ್ನುತ್ತಾರೆ.

ಮೈಕೆಲ್ ಲೋಟಿಟೊ ಅವರು ಕೇವಲ ಎರಡು ವರ‍್ಶದಲ್ಲಿ ಇಡೀ ‘ಸೆಸ್ನಾ – 150’ ವಿಮಾನದ ಲೋಹ ಹಾಗೂ ಗಾಜಿನ ಬಿಡಿಬಾಗಗಳನ್ನು ತಿಂದು ಹಾಕಿದ್ದಾರೆ. 1959 ರಿಂದ 1997 ವರೆಗೆ ಮೈಕೆಲ್ ಲೋಟಿಟೊ ಅವರು ಸುಮಾರು 9 ಟನ್ ಲೋಹವನ್ನು ತಿಂದಿದ್ದಾರೆ. ಆದ್ದರಿಂದ ಇವರನ್ನು ಮೊನ್ಸಿಯೂರ್ ಮ್ಯಾನೇಟೊಟ್ (Monsieur Mangetout) ಅತವಾ ‘ಎಲ್ಲಾ ತಿನ್ನುವನು’ ಎಂದು ಕರೆಯುತ್ತಾರೆ. ಇವರು ಪೈಕ (Pica) ಎಂದು ಕರೆಯಲ್ಪಡುವ ವಿಶಿಶ್ಟ ಆಹಾರ ತಿನ್ನುವ ರೋಗದಿಂದ ಬಳಲುತ್ತಿದ್ದು, ಇದು ಅವರಿಗೆ ಏನು ಬೇಕಾದರೂ ತಿನ್ನುವ ಕಡುಬಯಕೆಯನ್ನು ಹುಟ್ಟು ಹಾಕುತ್ತದೆ. ಆದರೆ ಅವರಿಗೆ ಬಾಳೆಹಣ್ಣು ಹಾಗೂ ಹೆಚ್ಚು ಕುದಿಸಿದ ಮೊಟ್ಟೆಗಳನ್ನು ತಿನ್ನುವಾಗ ತುಂಬಾ ತೊಂದರೆಯಾಗುತ್ತದೆ ಎನ್ನುವುದು ಒಂದು ವಿರ‍್ಪಯಾಸವೆ ಸರಿ.

ಈತ 3 ದಿನಗಳ ಕಾಲ ಎಡಬಿಡದೆ ಓಡಬಲ್ಲ!

ಸಾಮಾನ್ಯ ಮನುಶ್ಯರು ಕೆಲವು ಗಂಟೆಗಳ ಕಾಲ ಓಡಬಹುದು. ಆದರೆ ಯಾರಾದರೂ ದಿನಗಳ ಕಾಲ ನಿರಂತರವಾಗಿ ಓಡುತ್ತಾರೆಂದರೆ ಬೆರಗಾಗುತ್ತದೆ, ಅದು ನಿಜ. ಅಮೆರಿಕಾದ ಮ್ಯಾರತಾನ್ ಓಟಗಾರ ಡೀನ್ ಕರ‍್ನಾಜೆಸ್ ( Dean Karnazes ) ಎಂಬುವರು ಇಂತಹ ವಿಶಿಶ್ಟ ಬಗೆಯ ಹುರುಪನ್ನು ಹೊಂದಿದ್ದಾರೆ. ಇವರು ಸುಮಾರು 3 ದಿನಗಳ ಕಾಲ ಒಂದು ಕ್ಶಣವು ನಿಲ್ಲದೆ, ನಿದ್ದೆಯನ್ನು ಮಾಡದೆ, ಹಗಲಿರುಳು ಎನ್ನದೆ ಎಡಬಿಡದೆ ಓಡುತ್ತಾರೆ. ಮಿತಿ ಮೀರಿದ ದೈಹಿಕ ಚಟುವಟಿಕೆಯಿಂದ ನಮ್ಮ ಎದೆಯ ಬಡಿತ ಹೆಚ್ಚಾಗುತ್ತದೆ, ಉಸಿರುಗೂಡಿನಲ್ಲಿ ಗಾಳಿಯ ತೊಂದರೆಯಾಗುತ್ತದೆ ಹಾಗೂ ನರಕಟ್ಟುಗಳು ಬಳಲುತ್ತವೆ. ಆದರೆ ಡೀನ್ ಅವರು 3 ದಿನಗಳ ಕಾಲ ನಿರಂತರವಾಗಿ ಓಡಿದರು ಅವರಲ್ಲಿ ಈ ರೀತಿಯ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಇವರು -25 ಡಿಗ್ರಿ ತಾಪಮಾನವಿರುವ ನೆಲದ ತೆಂಕಣ ತುದಿಯಲ್ಲಿಯೂ ಮ್ಯಾರತಾನನ್ನು ಓಡಿ ಮುಗಿಸಿದ್ದಾರೆ. 2006 ರಲ್ಲಿ ಡೀನ್ ಅವರು ಸತತ 50 ದಿನಗಳ ಕಾಲ 50 ರಾಜ್ಯಗಳಲ್ಲಿ ನಡೆದ ಮ್ಯಾರತಾನಲ್ಲಿ ಪಾಲ್ಗೊಂಡಿದ್ದಾರೆ.

(ಮಾಹಿತಿ ಹಾಗೂ ಚಿತ್ರ ಸೆಲೆ: unbelievable-facts.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: