ನಾನೊಂದು ತುಂಬಿದ ಕೆರೆಯಾಗಿದ್ದೆ
– ಶಾಂತ್ ಸಂಪಿಗೆ.
ನಾನೊಂದು ತುಂಬಿದ ಕೆರೆಯಾಗಿದ್ದೆ
ಗಿಡಮರಗಳಲಿ ಹಸಿರನು ತುಂಬಿದ್ದೆ
ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ
ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ
ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ
ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ ಆಲಿಸುತ್ತಿದ್ದೆ
ಎಲ್ಲರ ಬಾಯಾರಿಕೆಗು ಉತ್ಸಾಹದಿ ನೀರೆರೆದು ತಣಿಸಿದ್ದೆ
ಕಾಲಿಟ್ಟನು ಅಬಿವ್ರುದ್ದಿಯ ಹಗಲು ವೇಶದಾರಿ
ಈ ಮನುಜನ ಕರುಣೆ ತುಂಬಿದ ಮದುರ ಮನಸಿನಲಿ
ಅತಿ ಆಸೆಗೆ ಬಲಿಯಾಗಿ ಆವರಿಸಿ ಮುಚ್ಚಲ್ಪಟ್ಟವು
ಹಳ್ಳ ಕೊಳ್ಳಗಳೆನ್ನುವ ನನ್ನ ಹೊಕ್ಕಳಬಳ್ಳಿ
ಹಳ್ಳ ಕೊಳ್ಳಗಳ ಸಂಪರ‍್ಕ ಕಡಿದಾಕ್ಶಣ ಬರಿದಾದೆ
ಬಿಕ್ಕಳಿಸಿ ಬರುತಿಹುದು ಅಂತರಂಗದಿ ಕಣ್ಣೀರು
ಕಣ್ಣಾರೆ ಕಂಡು ಅಸು ನೀಗಿದ ಜೀವರಾಶಿಗಳನು
ನನ್ನ ಮಡಿಲಲ್ಲಿ ಆವರಿಸಿದೆ ಈಗ ಸ್ಮಶಾನಮೌನ
ಯಾರ ಬಳಿ ಹೇಳಲಿ ಈ ದುಕ್ಕವನು
ಹಳ್ಳಕೊಳ್ಳಗಳೆ ನನ್ನ ಉಸಿರೆಂದು
ಎಲ್ಲೆಡೆ ಅಬಿವ್ರುದ್ದಿಯ ಕಿಚ್ಚನು ಹಚ್ಚಿಹರು
ಸುಡುವ ಬೆಂಕಿಗೆ ಇಲ್ಲಿ ಬೆಳಕಿನ ವೇಶ
ಬುದ್ದಿವಂತರು ನೀವು ಎಂದೆನೆಗೆ ತಿಳಿದಿಹುದು
ನನ್ನ ಉಳಿವಿಗೆ ದಾವಿಸುವಿರೆಂದು ಕಾದಿಹೆನು
ಬರಿದಾಗಿರೋ ನನ್ನ ಒಡಲು ಮತ್ತೆ ತುಂಬುವುದೆಂದು
ಆಶಾವಾದಿಯಾಗಿ ಉಸಿರು ಬಿಗಿಹಿಡಿದು ಕಾದಿಹೆನು
( ಚಿತ್ರ ಸೆಲೆ: prajavani.net )
ಇತ್ತೀಚಿನ ಅನಿಸಿಕೆಗಳು