ಮನೆ-ಮನವನ್ನು ಗೆದ್ದಿರುವ ಕೇರಮ್ ಆಟ

ಆಶಿತ್ ಶೆಟ್ಟಿ.

ಕೇರಮ್ ಆಟ ದಕ್ಶಿಣ ಏಶ್ಯಾದ ಅತ್ಯಂತ ಜನಪ್ರಿಯವಾದ ಆಟ. ಮನೆಯಲ್ಲಿಯೇ ಕುಳಿತು ಸುಲಬವಾಗಿ ಆಡಬಹುದಾದ ಕೇರಮ್ ಎಂದರೆ ಯಾರಿಗೆ ಪ್ರಿಯವಿಲ್ಲ ಹೇಳಿ. ಕೇರಮ್ ಆಟ ಮೊದಲು ಹುಟ್ಟಿದ್ದು ಇಂಡಿಯಾದ ಉಪಕಂಡದಲ್ಲಿ ಮತ್ತು ಇದನ್ನು ಆಗಿನ ಕಾಲದ ರಾಜರುಗಳು ಆಡುತ್ತಿದ್ದರು ಎಂದು ನಂಬಲಾಗಿದೆ. ಇದಕ್ಕೆ ಪುಶ್ಟಿ ಕೊಡುವಂತಹ ಯಾವುದೇ ಪುರಾವೆಗಳು ಇಲ್ಲ. ಗಾಜಿನ ಮೇಲ್ಮೈ ಹೊಂದಿರುವ ಒಂದು ಹಳೆಯ ಕೇರಮ್ ಬೋರ‍್ಡ್ ಇಂಡಿಯಾದ ಪಾಟಿಯಾಲದಲ್ಲಿ ಸಿಕ್ಕಿದೆ. ಅದನ್ನು ಬಿಟ್ಟರೆ ಕೇರಮ್ ಆಟದ ಹಿನ್ನಡವಳಿ ತಿಳಿಸುವ ಯಾವುದೇ ಹೆಚ್ಚಿನ ಪುರಾವೆಗಳು ಸಿಕ್ಕಿಲ್ಲ.

ಮೊದಲಿಗೆ 1988 ರಲ್ಲಿ ಚೆನ್ನೈನಲ್ಲಿ ಅಂತರರಾಶ್ಟ್ರೀಯ ಕೇರಮ್ ಒಕ್ಕೂಟವನ್ನು ಶುರುಮಾಡಲಾಯಿತು. ಇದೇ ವರುಶ, ಆಟಕ್ಕೆ ಬೇಕಾದ ನಿಯಮಗಳನ್ನು ರೂಪಿಸಲಾಯಿತು. ಕೇರಮ್ ಆಟಕ್ಕೆ ಒಂದು ಅಂತರರಾಶ್ಟ್ರೀಯ ಮನ್ನಣೆ ಸಿಕ್ಕಿದ್ದು ಆವಾಗಲೆ. ಯುರೋಪ್ ಮತ್ತು ಅಮೇರಿಕದಲ್ಲಿ ನೆಲೆಸಿದ್ದ ಇಂಡಿಯನ್ನರಿಂದ ಆಯಾ ದೇಶಗಳಲ್ಲಿ ಕೇರಮ್ ಆಟದ ಪರಿಚಯವಾಯಿತು. ಅಲ್ಲಿ ಕಾಣಸಿಗುವ ಕೇರಮ್ ಬೋರ‍್ಡ್ ಮತ್ತು ಆಡಲು ಬೇಕಾದ ವಸ್ತುಗಳನ್ನು ಇಂಡಿಯಾದಿಂದಲೇ ಆಮದು ಮಾಡಿಕೊಳ್ಳುತ್ತಾರೆ.

ಕೇರಮ್ ಆಡುವುದಕ್ಕೆ ಏನೇನು ಬೇಕು?

ಕೇರಮ್ ಬೊರ‍್ಡ್: ಪ್ಲೈವುಡ್‍ನಿಂದ ಮಾಡಿದ ಬೋರ‍್ಡ್ ನೊಡಲು ಚೌಕದ ಆಕಾರದಲ್ಲಿರುತ್ತದೆ, ಇದರ ನಾಲ್ಕು ಬದಿಯಲ್ಲಿ ಕಿಸೆಗಳಿರುತ್ತವೆ. ಬೋರ‍್ಡಿನಲ್ಲಿ ಸಿಗುವ ಆಟದ ಹರವು 29‍x29 ಇಂಚುಗಳು.

ಕೇರಮ್ ಬಿಲ್ಲೆಗಳು (coins/carrom men): ಕೇರಮ್ ಆಟದಲ್ಲಿ ಒಟ್ಟು 19 ದುಂಡಾಕಾರದ ಬಿಲ್ಲೆಗಳಿರುತ್ತವೆ. ಇದರಲ್ಲಿ 9 ಬಿಳಿ, 9 ಕಪ್ಪು ಮತ್ತು 1 ಕೆಂಪು(ರಾಣಿ) ಬಿಲ್ಲೆಗಳಿರುತ್ತವೆ. ಇವುಗಳನ್ನು ಮರ, ಅಕ್ರಿಲಿಕ್ ಹಾಗೂ ರಾಳ ಇಲ್ಲವೇ ಪ್ಲಾಸ್ಟಿಕ್ ನಿಂದ ಮಾಡಲಾಗಿರುತ್ತದೆ. ಒಂದು ಬಿಲ್ಲೆಯ ದುಂಡಗಲ 3.18 ಸೆಂಟಿಮೀಟರ್ ಇರುತ್ತದೆ. 7 ರಿಂದ 9 ಮಿ.ಮೀ. ದಪ್ಪವಿದ್ದು, 5 ರಿಂದ 5.5 ಗ್ರಾಂ ತೂಗುವ ಬಿಲ್ಲೆಯು ಬೋರ‍್ಡಿನ ಮೇಲೆ ಸುಲಬವಾಗಿ ಜಾರುವಂತಿರುತ್ತದೆ.

ಕೇರಮ್ ಸ್ಟ್ರೈಕರ‍್: ಸ್ಟ್ರೈಕರ್ ಒಂದು ಅಕ್ರಿಲಿಕ್ ನಿಂದ ಮಾಡಿದ ದೊಡ್ಡ ಗಾತ್ರದ, ಹೆಚ್ಚು ತೂಕದ ಬಿಲ್ಲೆ. ಇದರ ತೂಕ 15 ಗ್ರಾಂನವರೆಗೆ ಇರುತ್ತದೆ. ಇದನ್ನು ಸಣ್ಣ ಗಾತ್ರದ ಬಿಲ್ಲೆಗಳನ್ನು ಹೊಡೆದು ಕಿಸೆಯೊಳಕ್ಕೆ ಕಳಿಸಲು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಸ್ಟ್ರೈಕರ್‍ಗಳು ಹಲವು ಬಣ್ಣ ಮತ್ತು ವಿನ್ಯಾಸಗಳಲ್ಲಿ ಸಿಗುತ್ತವೆ.

ಕೇರಮ್ ಪುಡಿ: ಕೆರಮ ಬೋರ‍್ಡ್ ನುಣುಪಾಗಿ, ಬಿಲ್ಲೆ ಮತ್ತು ಸ್ಟ್ರೈಕರ್‍ಗಳು ಸುಲಬವಾಗಿ ಜಾರುವಂತೆ ಮಾಡಲು ಹಾಗೂ ಬೋರ‍್ಡ್ ಹೆಚ್ಚು ಸಮಯ ಬಾಳಿಕೆ ಬರಲು ಬೋರಿಕ್ ಆಸಿಡ್ ಪುಡಿಯನ್ನು ಬಳಸುತ್ತಾರೆ.

ಕೇರಮ್ ಆಟದ ಬಗೆಗಳು

1) ಪ್ಯಾಮಿಲಿ-ಪಾಯಿಂಟ್ ಕೇರಮ್(Family-Point carrom)

ಇದರಲ್ಲಿನ ನಿಯಮಗಳು ತುಂಬ ಸರಳ. ಕೇರಮ್ ಆಟದಲ್ಲಿ ಇರುವ ಬಿಲ್ಲೆಗಳ ಬಣ್ಣ ಕಪ್ಪು, ಬಿಳಿ ಮತ್ತು ಒಂದು ಕೆಂಪು. ಈ ಬಗೆಯ ಆಟದಲ್ಲಿ ಆಟಗಾರರು ಬಿಳಿ ಇಲ್ಲವೇ ಕಪ್ಪು ಬಣ್ಣದ ಬಿಲ್ಲೆಗಳನ್ನು ಬೋರ‍್ಡಿನ ನಾಲ್ಕು ಬದಿಯಲ್ಲಿರುವ ಯಾವುದಾದರು ಕಿಸೆಗೆ(carrom pocket) ಸ್ಟ್ರೈಕರ್‍ನಿಂದ ಹೊಡೆದು ಕಳಿಸಬೇಕು. ಕೆಂಪು ಬಣ್ಣದ ಬಿಲ್ಲೆಯನ್ನು ಕಿಸೆಯೊಳಕ್ಕೆ ಕಳುಹಿಸಿದ ಬಳಿಕ ಕಡ್ಡಾಯವಾಗಿ ಬಿಳಿ ಅತವ ಕಪ್ಪು ಬಿಲ್ಲೆಯನ್ನು ಕಿಸೆಯೊಳಕ್ಕೆ ಸ್ಟ್ರೈಕರ್‍ನಿಂದ ಹೊಡೆದು ಕಳುಹಿಸಬೇಕು. ಇಲ್ಲವಾದಲ್ಲಿ ಕೆಂಪು ಬಿಲ್ಲೆಯನ್ನು ಮತ್ತೆ ಬೋರ‍್ಡಿನ ನಡುವೆ ಇಡಲಾಗುವುದು. ಈ ಬಗೆಯಲ್ಲಿ ಕಪ್ಪು ಬಿಲ್ಲೆಗೆ 5 ಅಂಕ, ಬಿಳಿ ಬಿಲ್ಲೆಗೆ 10 ಅಂಕ ಹಾಗು ಕೆಂಪು ಬಿಲ್ಲೆಗೆ 25 ಅಂಕವನ್ನು ಆಟಗಾರರಿಗೆ ನೀಡಲಾಗುವುದು.

2) ಪಾಯಿಂಟ್ ಕೇರಮ್
ಈ ಬಗೆಯಲ್ಲಿ ಪ್ಯಾಮಿಲಿ-ಪಾಯಿಂಟ್ ಕೇರಮ್‍ನಂತೆಯೇ ನಿಯಮಗಳು ಇರುತ್ತವೆ, ಆದರೆ ಆಟಗಾರರಿಗೆ ಸಿಗುವ ಅಂಕಗಳು ಕಡಿಮೆ. ಕಪ್ಪು ಮತ್ತು ಬಿಳಿ ಬಿಲ್ಲೆಗೆ 1 ಅಂಕ ಹಾಗು ಕೆಂಪು ಬಿಲ್ಲೆಗೆ 3 ಅಂಕವನ್ನು ನೀಡಲಾಗುವುದು. 21 ಅಂಕಗಳನ್ನು ಗಳಿಸಿದ ಆಟಗಾರ ಗೆಲ್ಲುತ್ತಾನೆ. ಒಂದು ಸುತ್ತಿನ ಆಟದಲ್ಲಿ ಯಾವ ಆಟಗಾರರಿಗೂ 21 ಅಂಕಗಳು ಸಿಗದೆ ಹೋದಲ್ಲಿ ಹೆಚ್ಚು ಅಂಕ ಗಳಿಸಿದ ಆಟಗಾರ ಗೆಲ್ಲುತ್ತಾನೆ.

3)ಟೊಟಲ್-ಪಾಯಿಂಟ್ ಕೇರಮ್(Total-Point Carrom)
ಈ ಬಗೆಯಲ್ಲಿ ಪ್ಯಾಮಿಲಿ-ಪಾಯಿಂಟ್ ಕೇರಮ್‍ನಂತೆಯೇ ನಿಯಮಗಳು ಇರುತ್ತವೆ ಆದರೆ ಆಟಗಾರರಿಗೆ ಸಿಗುವ ಅಂಕದಲ್ಲಿ ಬೇರ‍್ಮೆ ಇದೆ. ಕಪ್ಪು ಬಿಲ್ಲೆಗೆ 5 ಅಂಕ, ಬಿಳಿ ಬಿಲ್ಲೆಗೆ 10 ಅಂಕ ಹಾಗು ಕೆಂಪು ಬಿಲ್ಲೆಗೆ 50 ಅಂಕವನ್ನು ಆಟಗಾರರಿಗೆ ನೀಡಲಾಗುವುದು. ಆಟಗಾರ ಗೆಲ್ಲಲು ಎಲ್ಲಾ ಬಿಲ್ಲೆಗಳನ್ನು ತನ್ನದಾಗಿಸಿಕೊಳ್ಳಬೇಕು.

4) ಪಳಗಿಕೆಯ ಕೇರಮ್(Professional Carrom)

ಈ ಬಗೆಯಲ್ಲಿ ಪ್ರತಿ ತಂಡ ಅತವ ಆಟಗಾರರಿಗೆ ಒಂದು ಬಣ್ಣದ ಬಿಲ್ಲೆಯನ್ನು ಗೊತ್ತುಮಾಡಲಾಗುತ್ತದೆ. ಆಟಗಾರರು ಅದೇ ಬಣ್ಣದ ಬಿಲ್ಲೆಯನ್ನು ಕಿಸೆಯೊಳಕ್ಕೆ ಕಳುಹಿಸಬೇಕು. ಬಿಲ್ಲೆಯ ಬದಲು ಸ್ಟ್ರೈಕರ್ ಅನ್ನು ಕಿಸೆಯೊಳಕ್ಕೆ ಕಳುಹಿಸಿದರೆ ಆಟಗಾರ ತಾನು ಗೆದ್ದ ಒಂದು ಬಿಲ್ಲೆಯನ್ನು ಬೋರ‍್ಡಿನ ನಡುವೆ ಇಡಬೇಕು. ಸ್ಟ್ರೈಕರ್ ಮತ್ತು ಬಿಲ್ಲೆ ಎರಡು ಒಟ್ಟಿಗೆ ಕಿಸೆಯೊಳಕ್ಕೆ ಹೋದರೆ ಆಟಗಾರ ತಾನು ಗೆದ್ದ ಒಂದು ಬಿಲ್ಲೆಯನ್ನು ಮತ್ತು ಕಿಸೆಯೊಳಕ್ಕೆ ಹೋದ ಬಿಲ್ಲೆಯನ್ನು ಬೋರ‍್ಡಿನ ನಡುವೆ ಇಡಬೇಕು.

ಕೆಂಪು ಬಣ್ಣದ ಬಿಲ್ಲೆಯನ್ನು ಕಿಸೆಯೊಳಕ್ಕೆ ಕಳುಹಿಸುವ ಮೊದಲು ಒಂದಾದರು ಬಿಲ್ಲೆಯನ್ನು ಕಿಸೆಯೊಳಕ್ಕೆ ಕಳುಹಿಸಿರಬೇಕು. ಮತ್ತು ಕೆಂಪು ಬಣ್ಣದ ಬಿಲ್ಲೆಯನ್ನು ಆಟಗಾರರಿಗೆ ಗೊತ್ತುಮಾಡಿದ ಬಣ್ಣದ ಕೊನೆಯ ಬಿಲ್ಲೆಯನ್ನು ಹೊಡೆಯುವ ಮುಂಚೆ ಕಿಸೆಯೊಳಕ್ಕೆ ಕಳುಹಿಸಬೇಕು.

ಹೀಗೆ ಕೆಂಪು ಬಣ್ಣದ ಬಿಲ್ಲೆಯನ್ನು ಗಳಿಸಿದ ಬಳಿಕ ಯಾರು ಮೊದಲು ತಮಗೆ ಗೊತ್ತುಮಾಡಿದ ಬಣ್ಣದ ಎಲ್ಲಾ ಬಿಲ್ಲೆಗಳನ್ನು ಕಿಸೆಯೊಳಕ್ಕೆ ಕಳುಹಿಸುತ್ತಾರೋ ಅವರು ಬೋರ‍್ಡ್ ಗೆಲ್ಲುತ್ತಾರೆ. ಬೋರ‍್ಡ್ ಸೋತವರ ಎಶ್ಟು ಬಿಲ್ಲೆಗಳು ಉಳಿದಿದೆಯೋ ಅಶ್ಟು ಅಂಕಗಳನ್ನು ಗೆದ್ದವರಿಗೆ ಕೊಡಲಾಗುತ್ತುದೆ. ಇದರ ಜೊತೆಗೆ ಕೆಂಪು ಬಿಲ್ಲೆಯನ್ನು ಬೋರ‍್ಡ್ ಗೆದ್ದ ತಂಡ ಹೊಡೆದುಕೊಂಡಿದ್ದರೆ 5 ಅಂಕಗಳನ್ನು ಅವರಿಗೆ ಸೇರಿಸಲಾಗುತ್ತದೆ. ಸೋತ ತಂಡಕ್ಕೆ ಯಾವುದೇ ಅಂಕ ಇರುವುದಿಲ್ಲ. ಇದರಲ್ಲಿ 21 ಅಂಕವನ್ನು ಪಡೆದ ಆಟಗಾರ ಗೆಲ್ಲುತ್ತಾನೆ.

(ಮಾಹಿತಿ ಸೆಲೆ: wiki )
(ಚಿತ್ರ ಸೆಲೆ: wiki , pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.