350 ವರುಶಗಳ ಹಿಂದಿನ ಬೆಂಕಿ ಅನಾಹುತ ನೆನಪಿಸುವ ಲಂಡನ್ ಸ್ಮಾರಕ

– ಕೆ.ವಿ.ಶಶಿದರ.

ಲಂಡನ್ನಿನ ಅತಿ ಬಯಂಕರವಾದ ಬೆಂಕಿ ಅನಾಹುತ ಆಗಿದ್ದು 1666ರ ಸೆಪ್ಟಂಬರ್ 2ನೇ ದಿನಾಂಕದಂದು. ಪುಡ್ಡಿಂಗ್ ಲೇನ್‍ನಲ್ಲಿದ್ದ ತಾಮಸ್ ಪಾಮ್‍ನರ್ ಒಡೆತನದ ಬೇಕರಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. ಈಗಿನ ‘ಗ್ರೇಟ್ ಪೈರ್ ಆಪ್ ಲಂಡನ್’ ಸ್ಮಾರಕ ಇರುವ ಸ್ತಳದಿಂದ ಕೇವಲ 202 ಅಡಿ ದೂರದಲ್ಲಿದ್ದ ಬೇಕರಿ ಅದು. ಬೇಕರಿಯಲ್ಲಿನ ಒಲೆಯನ್ನು ಪೂರ‍್ಣ ನಂದಿಸದೇ ಇದ್ದುದು ಈ ಬಯಾನಕ ಬೆಂಕಿ ಅನಾಹುತಕ್ಕೆ ನಾಂದಿಯಾಗಿತ್ತು.

17ನೇ ಶತಮಾನದಲ್ಲಿ ಲಂಡನ್ನಿನ ಬಹುತೇಕ ಕಟ್ಟಡಗಳ ನಿರ‍್ಮಾಣ ಮರದಿಂದ ಆಗಿದ್ದುದು ಹೌದು. ಸಹಜವಾಗಿ ಬೆಂಕಿ ಹರಡಲು ಸೂಕ್ತ ವಾತಾವರಣ, ಒಣ ಬೇಸಿಗೆ ಕಾಲ, ಹತ್ತಿಕೊಂಡ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹಾಗಾಗಿ ಬೆಂಕಿಯ ಕೆನ್ನಾಲಗೆ ಇಡೀ ಊರನ್ನು ಹಬ್ಬಲು ಹೆಚ್ಚು ಹೊತ್ತು ಹಿಡಿಯಲಿಲ್ಲ. 4 ದಿನಗಳ ಕಾಲ ತನ್ನ ಹಾದಿಯಲ್ಲಿ ಸಿಕ್ಕ ಎಲ್ಲವನ್ನೂ ಸುಟ್ಟು ಬೂದಿ ಮಾಡಿ ಅವ್ಯಾಹತವಾಗಿ ಉರಿದ ಈ ಬಯಾನಕ ಬೆಂಕಿಗೆ ಆಹುತಿಯಾಗಿದ್ದು ನಗರದ ಶೇಕಡಾ 86ರಶ್ಟು ಬಾಗ! ಮನೆ-ಮಟ್ಟುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು 1,30,000 ಮಂದಿ.

ಬೆಂಕಿಯ ಅನಾಹುತ ಬಯಾನಕವಾದರೂ ಹೆಚ್ಚು ಸಾವು ನೋವುಗಳಾಗಲಿಲ್ಲ. ಬೆಂಕಿಯನ್ನು ಮೊದಲು ಕಂಡ ಹೆಂಗಸೊಬ್ಬಳು ಇದಕ್ಕೆ ಬಲಿಯಾದಳು. ಬೆಂಕಿಯು ತನ್ನ ಕನ್ನಾಲಗೆಯನ್ನು ಚಾಚುತ್ತಾ ವೇಗವಾಗಿ ಹಬ್ಬುತ್ತಿದ್ದ ವೇಳೆ ದಿಕ್ಕುಗೆಟ್ಟ ಬಹಳಶ್ಟು ಜನ ತಮಗೆ ಸಿಕ್ಕ ಸಿಕ್ಕ ಸಾಮಾನು ಸರಂಜಾಮುಗಳೊಂದಿಗೆ ನದಿಯ ದಡಕ್ಕೆ ಹೋಗಿ, ಅಲ್ಲಿಂದ ಬೋಟಿನಲ್ಲಿ ಆಚೆ ದಡ ಸೇರಿ ಜೀವ ಉಳಿಸಿಕೊಂಡರು. ಮತ್ತಶ್ಟು ಜನ ಲಂಡನ್ನಿನ ಹೊರವಲಯದಲ್ಲಿದ್ದ ಬೆಂಕಿಯು ಹಬ್ಬಲಾಗದ ಮೂರ್ ಪೀಲ್ಡ್ಸ್‍ಗೆ ಹೋಗಿ ಆಶ್ರಯ ಪಡೆದರು.

ಸುಟ್ಟು ಬೂದಿಯಾದ ನಗರವನ್ನು ಹೊಸದಾಗಿ ಕಟ್ಟಲು 50 ವರುಶಗಳೇ ಹಿಡಿದವು!

ಹಬ್ಬುತ್ತಿದ್ದ ಬೆಂಕಿಯ ಜ್ವಾಲೆಯನ್ನು ಹರಡದಂತೆ ಹತೋಟಿಗೆ ತರಲು ಹಾಗೂ ಸುಡುತ್ತಿರುವ ಕಡೆ ನಂದಿಸಲು ಬೆಂಕಿಪಾರು ಮಾಡುವ ಸೇವೆಗಳು ಇಲ್ಲದ್ದು ಅನಾಹುತ ಹೆಚ್ಚಾಗಲು ಪ್ರಮುಕ ಕಾರಣವಾಯಿತು. ಲಂಡನ್ನಿನಲ್ಲಿದ್ದ ಸೇನೆಯ ಜೊತೆ ಸಾರ‍್ವಜನಿಕರೂ ಸೇರಿ ತಮ್ಮಲ್ಲಿದ್ದ ಸಣ್ಣ ಸಣ್ಣ ಸಂಪನ್ಮೂಲಗಳಾದ ಬಕೆಟ್, ನೀರು, ಮರಳು, ನೀರಿನ ಗನ್ನುಗಳನ್ನು ಬಳಸಿ ಬೆಂಕಿಯನ್ನು ಹರಡದಂತೆ ತಡೆಯಲು ಹಾಗೂ ಆರಿಸಲು ಶತಪ್ರಯತ್ನ ಪಟ್ಟರು. ಅವರ ಎಲ್ಲಾ ರೀತಿಯ ಪ್ರಯತ್ನಗಳಿಗೆ ಬೀಸುತ್ತಿದ್ದ ಗಾಳಿ ತಣ್ಣೀರೆರೆಚುತ್ತಿತ್ತು. ಬೆಂಕಿಯ ಜ್ವಾಲೆ ಗಾಳಿಯ ರಬಸಕ್ಕೆ ಕಾಡ್ಗಿಚ್ಚಿನಂತೆ ಎಲ್ಲಾ ಕಡೆ ಹಬ್ಬುತ್ತಿತ್ತು. 4 ದಿನಗಳ ಕಾಲ ಬೆಂಕಿಯ ಬೇಗೆಯಲ್ಲಿ ಬೆಂದ ಲಂಡನ್ ಸುಟ್ಟು ಕರಕಲಾಯಿತು. ಬೆಂಕಿಗೆ ಆಹುತಿಯಾದ ಬಹುತೇಕ ಕಟ್ಟಡಗಳಲ್ಲಿ ಸೈಂಟ್ ಪಾಲ್ಸ್ ಕೆತೆಡ್ರಲ್‍ನಂತ ಪ್ರಸಿದ್ದ ಚರ‍್ಚ್ ಸೇರಿ ಅನ್ಯ 85 ಚರ‍್ಚ್‍ಗಳು ನಾಶವಾಗಿದ್ದವು. ಬೆಂಕಿಯಿಂದ ಸುಟ್ಟು ನೆಲಸಮವಾದ ಲಂಡನ್ನಿನ ಈ ಪ್ರದೇಶ ಮರುನಿರ‍್ಮಾಣ ಮಾಡಲು 50 ವರುಶಗಳೇ ಹಿಡಿದವು.

ಈ ಬೆಂಕಿ ಅನಾಹುತದಿಂದ ಎಚ್ಚೆತ್ತುಕೊಂಡ ಸರ‍್ಕಾರ ಮರುನಿರ‍್ಮಾಣದ ಸಮಯದಲ್ಲಿ ಇಂತಹ ಅನಾಹುತ ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಹಲವಾರು ಕಟ್ಟುನಿಟ್ಟಾದ ಮಾರ‍್ಗದರ‍್ಶನವನ್ನು ರೂಪಿಸಿತು. ಪ್ರಮುಕವಾಗಿ ಮರಗಳ ಬದಲಿಗೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಮನೆಯನ್ನು ನಿರ‍್ಮಿಸುವುದು ಹಾಗೂ ರಸ್ತೆಗಳನ್ನು ವಿಶಾಲವಾಗಿ ನಿರ‍್ಮಿಸುವುದರ ಜೊತೆಗೆ ಮನೆ ಮನೆಗೂ ಕನಿಶ್ಟ ಅಂತರವನ್ನು ಕಾಪಾಡಿಕೊಳ್ಳುವುದೂ ಸೇರಿತ್ತು.

340 ವರುಶಗಳಶ್ಟು ಹಳೆಯದಾದ ಈ ಸ್ಮಾರಕವನ್ನು ಕಟ್ಟಲು ಆಗ 6 ವರುಶ ತೆಗೆದುಕೊಂಡಿದ್ದರು!

ಈ ಬೆಂಕಿ ಅನಾಹುತದ ನೆನೆಸಿಕೆಯಾಗಿ ‘ಗ್ರೇಟ್ ಪೈರ್ ಆಪ್ ಲಂಡನ್’ ಅನ್ನು ಕಟ್ಟುವ ತೀರ‍್ಮಾನ ಸರಕಾರ ಮಾಡಿತು. ಇದರ ಅಂತಿಮ ವಿನ್ಯಾಸವನ್ನು ಡಾ|| ರಾಬರ‍್ಟ್ ಹುಕ್ ಹಾಗೂ ಸರ್ ಕ್ರಿಸ್ಟೋಪರ್ ವಾರೆನ್ ರಚಿಸಿದರು. ಅದರ ನಿರ‍್ಮಾಣ ಕಾರ‍್ಯವು 1671ರಲ್ಲಿ ಪ್ರಾರಂಬವಾಯಿತು. ಮುಗಿಯುವ ಹೊತ್ತಿಗೆ 6 ವರ‍್ಶಗಳೇ ಸಂದಿದ್ದವು. ಇಶ್ಟು ವರ‍್ಶಗಳ ಕಾಲ ತೆಗೆದುಕೊಳ್ಳಲು ಪ್ರಮುಕವಾಗಿ ಆ ವಿನ್ಯಾಸಕ್ಕೆ ಅವಶ್ಯವಿದ್ದ ಅಳತೆಯ ಪೋರ‍್ಟ್‍ಲ್ಯಾಂಡ್ ಕಲ್ಲುಗಳ ಅಬಾವ ಮತ್ತು ಅವುಗಳ ಸಾಗಾಣಿಕೆಗೆ ಇದ್ದ ತೊಂದರೆ. ಸಾಗಾಣಿಕೆಗೆ ಮೂಲ ಕಾರಣ 1672 ರಿಂದ 1674ರವರಗೆ ಡಚ್ ವಿರುದ್ದ ನಡಯುತ್ತಿದ್ದ ಎರಡು ವರ‍್ಶದ ಯುದ್ದ.

ಕ್ರಿಸ್ಟೋಪರ್ ರನ್ ಹಾಗೂ ರಾಬರ‍್ಟ್ ಹುಕ್ ಬೆಂಕಿ ಆನಾಹುತದ ನೆನಪಿಗಾಗಿ ಸ್ಮಾರಕವನ್ನು ನಿರ‍್ಮಿಸುವ ಸಲುವಾಗಿ ಹಲವಾರು ವಿನ್ಯಾಸಗಳನ್ನು ತಯಾರು ಮಾಡಿ ಅನುಮೋದನಗೆ ಸಲ್ಲಿಸಿದ್ದರು. ಕೊಳವೆಯಾಕಾರದ ಒರಟು ಕಂಬದ ವಿನ್ಯಾಸ ಅಂತಿಮವಾದ ನಂತರ ಪ್ರಾರಂಬವಾದದ್ದು ಕಂಬದ ತುದಿಯನ್ನು ಯಾವ ರೀತಿಯಲ್ಲಿ ವಿನ್ಯಾಸಗೊಳಿಸಬೇಕು ಎಂಬುದರ ಬಗ್ಗೆ. ತನ್ನ ಎರಡೂ ರೆಕ್ಕೆಗಳನ್ನು ಚಾಚಿಕೊಂಡು ಬೂದಿಯಿಂದ ಎದ್ದು ಬರುವಂತಿರುವ ಪೀನಿಕ್ಸ್ ಪಕ್ಶಿಯ ಚಿತ್ರಣದ ಬಗ್ಗೆ ರೆನ್ ಅಬಿಮತವಿತ್ತು. ಕಂಬದ ನಿರ‍್ಮಾಣ ಮುಗಿಯುತ್ತಾ ಬಂದಾಗ ರೆನ್ ಪೀನಿಕ್ಸ್ ಪಕ್ಶಿಯ ಬದಲಾಗಿ 15 ಅಡಿ ಎತ್ತರದ ಕಿಂಗ್ ಚಾರ‍್ಲ್ಸ್ II ಪ್ರತಿಮೆ ಅತವಾ ವಿಜಯೋತ್ಸಾಹದ ಲಂಡನ್‍ನನ್ನು ಪ್ರತಿನಿದಿಸುವ ಕತ್ತಿಯನ್ನು ಬೀಸುತ್ತಿರುವ ಹೆಣ್ಣಿನ ಚಿತ್ರ ಅವನ ಮುಂದೆ ಇತ್ತು. ತನ್ನ ಪ್ರತಿಮೆಯನ್ನು ಅಲ್ಲಿ ನಿರ‍್ಮಿಸುವುದನ್ನು ಚಾರ‍್ಲ್ಸ್ II ತಾನೇ ಇಶ್ಟಪಡಲಿಲ್ಲ.

ಚಾರ‍್ಲ್ಸ್ II ತಾಮ್ರದಿಂದ ತಯಾರಿಸಿದ ದೊಡ್ಡ ಚಂಡಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುವಂತೆ ನಿರ‍್ಮಿಸಲು ಸೂಚಿಸಿದ್ದ. ಆದರೆ ಕೊನೆಯಲ್ಲಿ ರಾಬರ‍್ಟ್ ಹುಕ್ ಸೂಚಿಸಿದ ಕಂಚಿನ ಲೇಪನದ ಬೂದಿಯನ್ನು ಹೊಂದಿದ ಕಲಶ ಅಂತಿಮವಾಯಿತು. ‘ಗ್ರೇಟ್ ಪೈರ್ ಆಪ್ ಲಂಡನ್’ನ ಸ್ಮಾರಕದ ಅಂತಿಮವಾಗಿ 1677ರಲ್ಲಿ ಲೋಕಾರ‍್ಪಣೆಯಾಯಿತು.

ಕ್ರಿಸ್ಟೋಪರ್ ರನ್ ಹಾಗೂ ರಾಬರ‍್ಟ್ ಹುಕ್ ಇದನ್ನು ವಿನ್ಯಾಸಗೊಳಿಸಿದಾಗ ಸ್ಮಾರಕದೊಂದಿಗೆ ಗುರುತ್ವಾಕರ‍್ಶಣೆ ಮತ್ತು ಪೆಂಡುಲಮ್ ಪ್ರಯೋಗಗಳಿಗೆ ಅವಶ್ಯವಿರುವ ಜೆನಿತ್ ಟೆಲಿಸ್ಕೋಪ್ ಸ್ತಾಪನೆ ಹಾಗೂ ಅದನ್ನು ನೆಲದಲ್ಲಿನ ಪ್ರಯೋಗಶಾಲೆಗೆ ಸಂಪರ‍್ಕಿಸುವ ಉದ್ದೇಶ ಹೊಂದಿದ್ದರು.  ಪ್ರತಿ ವರ‍್ಶವೂ ಕನಿಶ್ಟ 2,50,000 ವೀಕ್ಶಕರು ಈ ಸ್ಮಾರಕದ 311 ಸುರಳಿ ಮೆಟ್ಟಲುಗಳನ್ನು ಹತ್ತುತ್ತಾರೆ. 4.5 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ಸ್ಮಾರಕವನ್ನು 2010ರಲ್ಲಿ ಹೊಸದಾಗಿಸಲಾಯಿತು. ಇದನ್ನು ಪ್ರತಿ 100 ವರ‍್ಶಕ್ಕೊಮ್ಮೆ ಹೊಸದಾಗಿಸಲಾಗುತ್ತದೆ.

ಸ್ಮಾರಕದ ತುದಿಯನ್ನು ತಲುಪಲು ಇರುವ ಮೆಟ್ಟಿಲುಗಳು

ಈ ಸ್ಮಾರಕದ ಮೂರು ಬದಿಯಲ್ಲಿ ಹಲವು ದಾಕಲೆಗಳನ್ನು ಲ್ಯಾಟಿನ್ ಬಾಶೆಯಲ್ಲಿ ಕೆತ್ತಿದ್ದಾರೆ. ದಕ್ಶಿಣದಲ್ಲಿರುವ ಗೋಡೆಯ ಮೇಲೆ ಕಿಂಗ್ ಚಾರ‍್ಲ್ಸ್ II ಬೆಂಕಿಯ ಅನಾಹುತದ ಸಮಯದಲ್ಲಿ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ್ದಾರೆ. ಪೂರ‍್ವದಲ್ಲಿ ಸ್ಮಾರಕವನ್ನು ನಿರ‍್ಮಿಸಿದ ಬಗ್ಗೆ ವಿವರಗಳು ದಾಕಲಾಗಿವೆ. ಯಾವ ಯಾವ ಮೇಯರ್‍ಗಳ ಕಾಲದಲ್ಲಿ ಏನೇನಾಯಿತು ಎಂದು ದಾಕಲಾಗಿದೆ. ಉತ್ತರ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಬೆಂಕಿಯ ಅನಾಹುತ ಪ್ರಾರಂಬವಾದ ವಿವರ, ಅದರಿಂದಾದ ಹಾನಿಯ ವಿವರ ಹಾಗೂ ಕೊನೆಗೆ ಹೇಗೆ ಅದನ್ನು ನಂದಿಸಲಾಯಿತು ಎಂಬ ವಿವರವಿದೆ.

ಈ ಸ್ಮಾರಕದ ಕೆಲವು ವಾಸ್ತವಾಂಶಗಳು: 

  • ಈ ಸ್ಮಾರಕವು 202 ಅಡಿ ಎತ್ತರವಿದ್ದು ಬೆಂಕಿಯ ಉಗಮ ಸ್ತಾನದಿಂದ ಪಶ್ಚಿಮಕ್ಕೆ ಸರಿಯಾಗಿ 202 ಅಡಿ ದೂರದಲ್ಲಿದೆ.
  • ಇದರಲ್ಲಿ 311 ಸುರಳಿ ಮೆಟ್ಟಲುಗಳಿವೆ. ಮೆಟ್ಟಲುಗಳು ನೇರವಾಗಿ ಸಾರ‍್ವಜನಿಕ ವೀಕ್ಶಣಾ ವೇದಿಕೆಗೆ ಕೊಂಡೊಯ್ಯುತ್ತದೆ. ಈ ವೇದಿಕೆಯು ನೆಲದಿಂದ 160 ಅಡಿ ಎತ್ತರದಲ್ಲಿದೆ.
  • 1788 ರಿಂದ 1842ರ 54 ವರ‍್ಶದ ಅವದಿಯಲ್ಲಿ ಈ ವೇದಿಕೆಯಿಂದ ಜಿಗಿದು 6 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇಂತಹ ಅನಾಹುತ ಮರುಕಳಿಸದಂತೆ ತಡೆಗಟ್ಟಲು 19ನೇ ಶತಮಾನದಲ್ಲಿ ಕ್ರಮ ಜರುಗಿಸಿ, ವೇದಿಕೆಯ ಸುತ್ತಲೂ ವೈರ್ ಜಾಲರಿಯನ್ನು ಹಾಕಿ ಹಾರಲಾಗದಂತೆ ಬಂದೋಬಸ್ತ್ ಮಾಡಲಾಗಿದೆ.
  • ಈ ಸ್ಮಾರಕವನ್ನು ಗ್ರೇಡ್ 1 ಎಂದು ವರ‍್ಗೀಕರಿಸಲಾಗಿದೆ.
  • ಸಾರ‍್ವಜನಿಕ ವಿಕ್ಶಣಾ ವೇದಿಕೆ ಚಿಕ್ಕದಿರುವ ಕಾರಣ ಒಮ್ಮೆಗೆ ಕೇವಲ 33 ಮಂದಿಯನ್ನು ಮಾತ್ರ ಬಿಡುವ ಪರಿಪಾಟವಿದೆ.
  • ವೀಕ್ಶಣಾ ವೇದಿಕೆಯನ್ನು ಹತ್ತುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು

(ಚಿತ್ರ ಸೆಲೆ: daysoutguide.co.uk, walklondon.com, famouswonders.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: