ನಿಮ್ಮ ಮನೆಯ ಹಿತ್ತಲಲ್ಲೇ ಕಾಡನ್ನು ಬೆಳೆಯಿರಿ!

ಕೊಡೇರಿ ಬಾರದ್ವಾಜ ಕಾರಂತ.

ನಿಮ್ಮ ಮನೆಯ ಹಿತ್ತಲಲ್ಲೆ ಕಾಡನ್ನು ಬೆಳೆಸಬಹುದು! ಮನೆಯ ಹಿತ್ತಲಲ್ಲಿ ಕೈದೋಟವನ್ನು ಬೆಳೆಸುವುದನ್ನು ಕೇಳಿರುತ್ತೀರಿ, ಇದೇನಿದು ‘ಕಾಡು’ ಎಂದು ನಿಮಗೆ ಬೆರಗಾಗಬಹುದು. ಹೌದು, ಕಾಡು ಎಂದಾಗ ನಮಗೆ ದೊಡ್ಡ ಜಾಗದಲ್ಲಿ ಬಹಳ ಮರಗಳಿದ್ದು, ಕಾಡುಮಿಕಗಳು ಓಡಾಡಿಕೊಂಡಿರುವುದು ತೋಚುತ್ತದೆ. ಆದರೆ ಕಾಡನ್ನು ಒಂದು ಸಣ್ಣ ಜಾಗದಲ್ಲಿಯೂ ಬೆಳೆಯಬಹುದು. ಮರಗಳನ್ನು ಮನುಶ್ಯ ಒಳನುಗ್ಗಲಾರದಶ್ಟು ಹತ್ತಿರತ್ತಿರದಲ್ಲಿ ದಟ್ಟವಾಗಿ ಬೆಳೆಸಿದಲ್ಲಿ ಅದೇ ನನ್ನ ಮಟ್ಟಿಗೆ ಕಾಡು ಎಂದು ಕಾಡನ್ನು ಬೆಳಸುವುದನ್ನೇ ಕಸುಬಾಗಿಸಿಕೊಂಡಿರುವ ಸುಬೇಂದು ಶರ‍್ಮಾರವರು ಹೇಳುತ್ತಾರೆ. ಸುಬೇಂದು ಶರ‍್ಮಾರವರು ಈಗಾಗಲೆ ಈ ರೀತಿಯ 90 ಕ್ಕೂ ಹೆಚ್ಚಿನ ಕಾಡುಗಳನ್ನು ಬೆಳೆಸಿದ್ದಾರೆ.

ಮಿಯಾವಾಕಿ ಬಗೆಯಲ್ಲಿ ಕಾಡನ್ನು ಬೆಳೆಸುವುದು ಹೇಗೆ?

ಜಪಾನಿನ ಹೆಸರಾಂತ ಗಿಡದರಿಗ (botanist) ಅಕಿರಾ ಮಿಯಾವಾಕಿ ಅವರು ಕಾಡಿನ ಮರುಬೆಳವಣಿಗೆಗೆ(forest restoration) ಒಂದು ಬಗೆಯನ್ನು ರೂಪಿಸಿದ್ದಾರೆ. ಮರುಬೂಮಿಯೂ ಸೇರಿದಂತೆ ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ಈ ಮಿಯಾವಾಕಿ ಬಗೆಯನ್ನು ಬಳಸಿ ಯಶಸ್ವಿಯಾಗಿ ಕಾಡನ್ನು ಬೆಳೆಸಲಾಗಿದೆ.

ಮೊದಲಿಗೆ ಬೆಳೆಸುವ ಜಾಗದ ಗುಣ ಹಾಗು ಮಣ್ಣಿನ ಗುಣವನ್ನು ತಿಳಿಯಬೇಕು. ಮಣ್ಣನ್ನು ಮೊದಲಿಗೆ ಮುಟ್ಟಿ, ಮೂಸಿ ಕೆಲವೊಮ್ಮೆ ರುಚಿ ನೋಡಿ ಸಹ ಅದರ ಗುಣವನ್ನು ತಿಳಿಯಲಾಗುತ್ತದೆ. ಮಣ್ಣು ತೀರಾ ಅಂಟಂಟಾಗಿದ್ದರೆ ನೀರು ಇಂಗುವುದಿಲ್ಲ, ಹಾಗೆ ಮಣ್ಣು ತೀರಾ ಮರಳು-ಮರಳಾಗಿದ್ದರೆ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಮಣ್ಣನ್ನು ಮೊದಲು ಸರಿಯಾಗಿ ಹದ ಮಾಡಲಾಗುವುದು.

ಮಣ್ಣನ್ನು ಹದಮಾಡುವ ಬಗೆ:

  • ಮೊದಲಿಗೆ ಸುಮಾರು ಒಂದು ಮೀಟರಿನ ಆಳದಶ್ಟು ಮಣ್ಣೆತ್ತಬೇಕು.
  • ಮಣ್ಣಿಗೆ ಬತ್ತದ ಹೊಟ್ಟು, ಕಬ್ಬಿನ ಜಲ್ಲೆ, ತೆಂಗಿನ ನಾರು ಹೀಗೆ ಅಲ್ಲೆ ಹತ್ತಿರದಲ್ಲಿ ಸಿಗುವ ಸಾವಯವ ವಸ್ತುಗಳನ್ನು ಮಣ್ಣಿನ ಗುಣಕ್ಕೆ ತಕ್ಕಂತೆ ಬೆರೆಸಬೇಕು. ಬತ್ತದ ಹೊಟ್ಟು ಮಣ್ಣಿನಲ್ಲಿ ಕಿರುತೂತುಗಳನ್ನು ಹೆಚ್ಚಿಸುತ್ತದೆ, ಇದರಿಂದ ಮಣ್ಣಿನಲ್ಲಿ ನೀರಿಂಗಲು ಸುಳುವಾಗುತ್ತದೆ. ಹಾಗೆ ತೆಂಗಿನ ನಾರು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅಳವನ್ನು ಹೆಚ್ಚಿಸುತ್ತದೆ.
  • ಇವೆಲ್ಲದರ ಜೊತೆಗೆ ಮಣ್ಣಿನೊಟ್ಟಿಗೆ ಸಾವಯವ ಗೊಬ್ಬರವನ್ನು ಸೇರಿಸಬೇಕು. ಹೀಗೆ ಹದಮಾಡಿದ ಮಣ್ಣು ಗಿಡಗಳ ಬೇರು ಆಳದವರೆಗೂ ಸುಲಬವಾಗಿ ನುಸುಳುವಶ್ಟು ಮೆತ್ತಗಾಗಿರುತ್ತದೆ.

ಗಿಡಗಳ ಆಯ್ಕೆ ಹಾಗೂ ನೆಡುವ ಬಗೆ

ಆ ಜಾಗದ ಸ್ತಳೀಯ ತಳಿಗಳ(native species) ಮರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಒಂದು ಸರಳ ಮಾನದಂಡವನ್ನು ಬಳಸಲಾಗುತ್ತದೆ. ಯಾವುದು ಮನುಶ್ಯನ ಕೈವಾಡಕ್ಕೂ (interference) ಮೊದಲಿತ್ತೋ ಅದನ್ನು ಅಲ್ಲಿಯ ಸ್ತಳೀಯ ತಳಿ ಎಂದು ನಿರ‍್ದರಿಸಲಾಗುತ್ತದೆ. ಇದನ್ನು ತಿಳಿಯಲು ಕಾಡುಗಳ, ದೈವದ ಬನಗಳ(sacred grooves) ಬಗ್ಗೆ ಅರಿಯಲಾಗುತ್ತದೆ. ಕೆಲವೊಮ್ಮೆ ಆ ಜಾಗದ ಸಾಹಿತ್ಯ, ಜಾನಪದಗಳನ್ನು ತಿಳಿಯಬೇಕಾಗುತ್ತದೆ. ಇಶ್ಟಾಗಿಯೂ ಮಾಹಿತಿ ಸಿಗದಿದ್ದಲ್ಲಿ ಹತ್ತಿರದ ಮ್ಯೂಸಿಯಮ್ಮುಗಳ ಮೊರೆ ಹೋಗಬೇಕಾಗುತ್ತದೆ.  ಸ್ತಳಿಯ ತಳಿಗಳು ಯಾವು-ಯಾವುದೆಂದು ಪಟ್ಟಿ ಮಾಡಿಕೊಂಡ ಮೇಲೆ ಯಾವ ರೀತಿಯ ಕಾಡನ್ನು ಬೆಳಸಬೇಕೆಂದಿದೆಯೋ ಅದಕ್ಕೆ ತಕ್ಕಂತೆ ಮರಗಳನ್ನು ಆಯ್ದುಕೊಳ್ಳಬೇಕು. ಎತ್ತುಗೆಗೆ ಹಣ್ಣಿನ ಮರಗಳ ಕಾಡು ಬೆಳೆಸಬೇಕು ಎಂದಿದ್ದರೆ, ಹೆಚ್ಚು ಹೆಚ್ಚು ಹಣ್ಣಿನ ಮರಗಳನ್ನು (ಸರಿಸುಮಾರು 50ರಶ್ಟು), ಹಕ್ಕಿ, ದುಂಬಿಗಳನ್ನು ಸೆಳೆಯುವಂತಹ ಕಾಡು ಬೇಕೆಂದಿದ್ದಲ್ಲಿ ಹೆಚ್ಚು ಹೆಚ್ಚು ಹೂವಿನ ಮರಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಸಾಮಾನ್ಯ ಹಸಿರು ಕಾಡು ಬೇಕೆಂದಿದ್ದಲ್ಲಿ ಸದಾಹಸಿರಿರುವ ಕಾಡನ್ನು ಬೆಳೆಯಬಹುದು.

ಮರಗಳನ್ನು ಅವುಗಳು ಬೆಳೆಯಬಹುದಾದ ಎತ್ತರಕ್ಕೆ ತಕ್ಕಂತೆ ಕೆನೊಪಿ, ಟ್ರೀ, ಸಬ್ ಟ್ರೀ ಹಾಗು ಶ್ರಬ್ (canopy, tree, sub-tree, shrub) ಎಂದು ನಾಲ್ಕು ಬಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದೇ ಎತ್ತರ ಬೆಳೆಯುವ ಮರಗಳು ಅಕ್ಕ-ಪಕ್ಕದಲ್ಲಿದ್ದರೆ ತಮ್ಮ ಮೇಲ್ಜಾಗಕ್ಕೆ(vertical space) ಪೈಪೋಟಿ ಏರ‍್ಪಡುವ ಸಾದ್ಯತೆ ಇರುತ್ತದೆ. ಹಾಗಾಗದಂತೆ ನೋಡಿಕೊಂಡು ಬೇರೆ ಬೇರೆ ಎತ್ತರದ ಗಿಡಗಳನ್ನು ಸಾಮಾನ್ಯವಾಗಿ ಪ್ರತಿ ಚದರ ಮೀಟರಿಗೆ 3 ರಿಂದ 5 ಗಿಡಗಳಂತೆ ನೆಡಲಾಗುತ್ತದೆ.

ಗಿಡಗಳನ್ನು ನೆಟ್ಟ ನಂತರ ಮಣ್ಣಿನ ಮೇಲೆ ಒಣ ಎಲೆಗಳನ್ನೊ ಇಲ್ಲಾ ಒಣ ಹುಲ್ಲನ್ನೊ ಹಾಸಲಾಗುತ್ತದೆ. ಹೀಗೆ ಹಾಸುವುದರಿಂದ ಅವುಗಳು ತಮ್ಮ ಕೆಳಗಿನ ಮಣ್ಣನ್ನು ಬಿಸಿಲಿನಿಂದ ಹಾಗು ಚಳಿಯಿಂದ ಕಾಪಾಡುತ್ತವೆ. ಎಂತಹ ಬಿಸಿಲಿದ್ದರೂ ಈ ಹಾಸು ಕೆಳಗಿನ  ಮಣ್ಣಿನಿಂದ ನೀರಿನಂಶ ಆವಿಯಾಗದಂತೆ ತಡೆಯುತ್ತದೆ ಮತ್ತು ಚಳಿಯಲ್ಲಿ ಹಾಸಿನ ಕೆಳಗಿನ ಮಣ್ಣನ್ನು ಬೆಚ್ಚಗಿರಿಸುತ್ತದೆ. ಇದರಿಂದ ಮಣ್ಣಿನಲ್ಲಿ ಸೀರುಸಿರಿಗಳ ಚಟುವಟಿಕೆ(microbial activities) ಹೆಚ್ಚಿ, ಮಣ್ಣು ಉಸಿರಾಡಲು ಶುರುವಾಗುತ್ತದೆ. ಈ ಸೀರುಸಿರಿಗಳು ಗಿಡಗಳಿಗೆ ಬೇಕಾಗುವ ಪೋಶಕಾಂಶಗಳನ್ನು ಒದಗಿಸುವಲ್ಲಿ ಸಹಾಯಮಾಡುವುದು. ಈ ಹಂತದಲ್ಲಿ ಮಣ್ಣು ಎಶ್ಟು ಮೆತ್ತಗಾಗಿರುತ್ತದೆ ಎಂದರೆ ಗಿಡದ ಬೇರುಗಳು ಸುಳುವಾಗಿ ಮಣ್ಣಿನೊಳಗೆ ಬೆಳೆಯಬಹುದು.

ಪಾಲನೆ

ಮೊದಲ ಮೂರು ತಿಂಗಳುಗಳ ಕಾಲ ಮೇಲೆ ಹೆಚ್ಚಿನ ಬೆಳವಣಿಗೆ ಕಾಣುವುದಿಲ್ಲ, ಆದರೆ ನೆಲದಡಿಯಲ್ಲಿ ಬೇರುಗಳು ಚೆನ್ನಾಗಿ ಬೆಳೆದು ಗಟ್ಟಿಗೊಳ್ಳುತ್ತವೆ. ಮೊದಲ 2 ವರುಶಗಳ ಕಾಲ ನೀರುಣಿಸಿ, ಕಳೆ ಕೀಳಬೇಕು. ಅಶ್ಟರಲ್ಲಿ ಕಾಡು ಒಂದು ಹಂತದವರೆಗೆ ಬೆಳೆದಿರುತ್ತದೆ. ಆಗ ನೀರುಣಿಸುವುದನ್ನು ಕ್ರಮೇಣವಾಗಿ ಕಡಿಮೆ ಮಾಡಬೇಕು. ಇಶ್ಟರಲ್ಲಿ ಕಾಡು ಸಾಕಶ್ಟು ಬೆಳೆದು ದಟ್ಟವಾಗಿರುವ ಕಾರಣ ಸೂರ‍್ಯನ ಬೆಳಕು ನೆಲಮುಟ್ಟುವುದಿಲ್ಲ. ಹೀಗಾಗಿ ಕಳೆಗಳು ಬೆಳೆಯುವುದಿಲ್ಲ. ಈ ಹಂತದಲ್ಲಿ ಆ ಜಾಗದಲ್ಲಿ ಬೀಳುವ ಪ್ರತಿ ಹನಿ ಮಳೆನೀರು ಹೊರಗೆ ಆವಿಯಾಗುವುದಿಲ್ಲ. ಕಾಡಿನ ಸುತ್ತಲಿನ ವಾತಾವರಣವು ತಣ್ಣಗಿರುವ ಕಾರಣ, ಗಾಳಿಯಲ್ಲಿನ ತೇವಾಂಶ ನೀರಾಗಿ ಗಿಡಗಳಿಗೆ ನೀರೊದಗಿಸುತ್ತದೆ.

ಇಲ್ಲಿಂದ ಮುಂದೆ ಯಾವುದೇ ರೀತಿಯ ಪಾಲನೆಯ ಅಗತ್ಯ ಬೀಳುವುದಿಲ್ಲ. ಕಾಡಿನ ಮರಗಳಿಂದ ಉದುರುವ ಎಲೆಗಳು ನೆಲದಲ್ಲಿ ಕೊಳೆತು ಮರಗಳಿಗೆ ಗೊಬ್ಬರವಾಗುತ್ತದೆ. ಇದರಿಂದ ಮರಗಳು ವೇಗವಾಗಿ ಬೆಳೆಯುತ್ತವೆ. ಹೆಚ್ಚು ಬೆಳೆದಂತೆಲ್ಲ ಮತ್ತು ಹೆಚ್ಚೆಚ್ಚು ಎಲೆಗಳನ್ನು ಉದುರಿಸುತ್ತವೆ. ಹೆಚ್ಚು ಎಲೆ ಉದುರಿದಂತೆಲ್ಲ ಮತ್ತೆ ಹೆಚ್ಚು ಗೊಬ್ಬರ ಸಿಗುತ್ತದೆ. ಹೆಚ್ಚು ಗೊಬ್ಬರ ಸಿಕ್ಕಂತೆಲ್ಲ ಬೆಳೆಯುವ ವೇಗ ಮತ್ತಶ್ಟು ಹೆಚ್ಚುತ್ತದೆ. ಈ ಸುತ್ತು (cycle) ಮುಂದುವರಿಯುತ್ತಾ ನೂರು ವರುಶದ ಕಾಡು ಬರೀ ಹತ್ತು ವರುಶಗಳಲ್ಲಿ ತಯಾರಾಗುತ್ತದೆ.

ಪ್ರಯೋಜನಗಳು

ಕಾಡು ಬೆಳೆಸುವುದರಿಂದ ಲಾಬಗಳು ಬಹಳಶ್ಟಿದೆ. ಇಲ್ಲಿ ಕೆಲವನ್ನು ಪಟ್ಟಿಮಾಡಲಾಗಿದೆ.

  • ಈ ರೀತಿಯ ಕಾಡುಗಳು ಸಣ್ಣದಿದ್ದರೂ ಸಹ ಇವುಗಳ ಸುತ್ತಲಿನ ವಾತಾವರಣವನ್ನು ತಂಪಾಗಿರಿಸುತ್ತವೆ. ಗಾಳಿಯ ಗುಣಮಟ್ಟ ಹೆಚ್ಚಾಗುತ್ತದೆ.
  • ಮರಗಿಡಗಳು ನೀರಿಂಗಿಸುವಲ್ಲಿ ನೆರವಾಗಿ, ಸುತ್ತಮುತ್ತಲಿನ ನೆಲದಡಿಯ ನೀರು/ಅಂತರ‍್ಜಲ ಮಟ್ಟ ಹೆಚ್ಚಿಸುತ್ತವೆ.
  • ಕಾಡು ಬೆಳೆದಂತೆಲ್ಲಾ ಹಕ್ಕಿ, ಚಿಟ್ಟೆ, ದುಂಬಿ ಮುಂತಾದ ಜೀವರಾಶಿಯು ಎಣಿಕೆಯೂ ಹೆಚ್ಚುತ್ತದೆ.
  • ಸಾಕಶ್ಟು ಹಣ್ಣುಗಳು ಸಿಗುತ್ತವೆ.
  • ಸಾಮಾನ್ಯ ನೆಡುತೋಪಿಗೆ ಹೋಲಿಸಿದಲ್ಲಿ ಮಿಯಾವಾಕಿ ಬಗೆಯಲ್ಲಿ ನೂರು ಪಟ್ಟು ಹೆಚ್ಚು ವೈವಿದ್ಯಮಯವಾಗಿರುತ್ತದೆ ಮತ್ತು ಮೂವತ್ತು ಪಟ್ಟು ಹೆಚ್ಚು ದಟ್ಟವಾಗಿರುತ್ತದೆ.
  • ಮಿಯಾವಾಕಿ ಬಗೆಯಲ್ಲಿ ಬೆಳೆಸುವುದರಲ್ಲಿ ಗಿಡಗಳ ಬೆಳವಣಿಗೆಯೂ ಹೆಚ್ಚು. ಸಾಮಾನ್ಯವಾಗಿ ಒಂಟಿಯಾಗಿ ಬೆಳೆಯುವ ಗಿಡಗಳಿಗಿಂತ ಮಿಯಾವಾಕಿ ಬಗೆಯಲ್ಲಿ ಬೆಳೆಸುವ ಕಾಡಿನಲ್ಲಿನ ಗಿಡಗಳು ಹತ್ತು ಪಟ್ಟು ಹೆಚ್ಚು ವೇಗವಾಗಿ ಬೆಳೆಯುತ್ತವೆ. ಹಾಗಾಗಿ ನೂರು ವರುಶದ ಕಾಡನ್ನು ಬರೀ ಹತ್ತು ವರುಶದಲ್ಲಿ ಬೆಳೆಸಬಹುದು.

ಮಿಯಾವಾಕಿ ಬಗೆಯಲ್ಲಿ ಬೆಳೆಸಲು ಶುರುವಿನಲ್ಲಿ ಸಾಕಶ್ಟು ಕರ‍್ಚಾಗುತ್ತದೆ ಮತ್ತು ಇಡೀ ಕಾಡಿನಲ್ಲಿನ ಮರಗಳು ಒಂದೇ ವಯಸ್ಸಿನವಾಗಿರುವ ಕಾರಣ ಒಂದೇ ರೀತಿ ಕಾಣುತ್ತದೆ ಎಂಬ ಟೀಕೆಗಳೂ ಉಂಟು. ಇವುಗಳನ್ನು ಮೀರಿ ಇದು ಜನಪ್ರಿಯತೆ ಪಡೆಯುತ್ತಿದೆ.

(ಮಾಹಿತಿ ಹಾಗು ತಿಟ್ಟ ಸೆಲೆ: ted.com, blog.ted, wikipedia, www.afforest.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: