ನಾಡು ಕಂಡ ಹೆಮ್ಮೆಯ ಬಾನರಿಗ ಪ್ರೊ.ಯು.ಆರ್.ರಾವ್

– ಜಯತೀರ‍್ತ ನಾಡಗವ್ಡ.

ಬಾರತದ ಬಾನರಿಮೆಯ ಹೆಸರುವಾಸಿ ಅರಿಮೆಗಾರ ಪ್ರೊಪೆಸರ್ ಯು.ಆರ್. ರಾವ್ ಕಳೆದವಾರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಉಡುಪಿ ರಾಮಚಂದ್ರ ರಾವ್ ಇವರ ಪೂರ‍್ಣ ಹೆಸರು. 10ನೇ ಮಾರ‍್ಚ್ 1932ರಂದು ಉಡುಪಿ ಜಿಲ್ಲೆಯ ಅದಮಾರು ಎಂಬ ಹಳ್ಳಿಯಲ್ಲಿ ಪ್ರೊ.ರಾವ್ ಹುಟ್ಟಿದರು. ಶ್ರೀ ಲಕ್ಶ್ಮೀನಾರಾಯಣ ಆಚಾರ‍್ಯ ಇವರ ತಂದೆ ಮತ್ತು ಕ್ರಿಶ್ಣವೇಣಿ ಇವರ ತಾಯಿ.

ತಮ್ಮ ಮೊದಲ ಹಂತದ ಕಲಿಕೆಯನ್ನು ಅದಮಾರುವಿನಲ್ಲಿ ಮುಗಿಸಿದ್ದರು. ಕನ್ನಡದಲ್ಲೇ ಮೊದಲ ಹಂತದ ಕಲಿಕೆ ಮುಗಿಸಿ, ಮುಂದಿನ ಹಂತದ ಕಲಿಕೆಗೆಂದು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿಗೆ ಸೇರಿದರು. ವಿಗ್ನಾನ, ಅರಿಮೆ ವಿಶಯಗಳ ಬಗ್ಗೆ ರಾವ್ ಅವರು ಹೊಂದಿದ್ದ ಆಸಕ್ತಿ ಸಹಜವಾಗಿ ಅವರಿಗೆ ವಿಗ್ನಾನದಲ್ಲಿ ಪದವಿ ಪಡೆಯುವಂತೆ ಮಾಡಿತು. 1952ರಲ್ಲಿ ಆಂದ್ರದ ಅನಂತಪುರದ ಸರಕಾರಿ ಕಲೆ ಮತ್ತು ವಿಗ್ನಾನ ಕಾಲೇಜಿನಲ್ಲಿ ಬಿ.ಎಸ್‍ಸಿ. ಪದವಿ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಮ್.ಎಸ್‍ಸಿ ಪದವಿ ಪಡೆದು, ಅಹ್ಮದಾಬಾದ್‌ನ ಪಿಸಿಕಲ್ ರಿಸರ‍್ಚ್ ಲ್ಯಾಬೋರೆಟರಿ ಮೂಲಕ ಬಾರತದ ಇನ್ನೊಬ್ಬ ಹಿರಿಯ ಅರಿಮೆಗಾರರಾದ ಡಾ.ವಿಕ್ರಮ್ ಸಾರಾಬಾಯ್ ಅವರ ಮಾರ‍್ಗದರ‍್ಶನದಲ್ಲಿ ಪಿಹೆಚ್‌.ಡಿ ಪಡೆದು ಡಾಕ್ಟರ್ ಆದರು. 1960ರಲ್ಲಿ ಡಾಕ್ಟರೇಟ್ ಒಲಿದು ಬಂದ ಮೇಲೆ ಅಮೇರಿಕಾದ ಕ್ಯಾತ ಎಮ್‌.ಐ.ಟಿ ಮತ್ತು ಯೂನಿವರ‍್ಸಿಟಿ ಆಪ್ ಟೆಕ್ಸಾಸ್‌ನಲ್ಲಿ ಪ್ರೊಪೆಸರ್ ಆಗಿ ಕೆಲಸ ಮಾಡಿದರು. ಅಮೇರಿಕದಲ್ಲಿ ಬಾನಬಂಡಿಗಳ(Spacecraft) ಬಗ್ಗೆ ಹಲವು ಅರಕೆ ನಡೆಸಿ, 1966ರ ಹೊತ್ತಿಗೆ ರಾವ್ ಮತ್ತೆ ಬಾರತಕ್ಕೆ ಮರಳಿದರು.

ಕಾಸ್ಮಿಕ್ ಕದಿರುಗಳ ಅರಿಮೆಗಾರರಾಗಿ(Cosmic Rays Scientist) ಇವರು ಮೊದಲು ಕೆಲಸ ಮಾಡಲು ಆರಂಬಿಸಿದರು. ನೇಸರನ ಕದಿರುಗಳು ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳನ್ನು ಹೊರಸೂಸುತ್ತವೆ. ಹೀಗೆ ಹೊರಬರುವ ಎಲೆಕ್ಟ್ರಾನ್ ಮತ್ತು ಪ್ರೋಟಾನ್‌ಗಳು, ನೆಲದಮಿನ್ಸೆಳೆತನದ(Geomagnetism) ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡುತ್ತವೆ ಎಂಬುದರ ಬಗ್ಗೆ ಆಳವಾದ ಅರಕೆ ನಡೆಸಿದ್ದರು ಪ್ರೊ.ರಾವ್. ಬೂಮಿ ಮತ್ತು ಬಾನಿನ ನಡುವಿನ ಈ ಮಿನ್ಸೆಳತದ(Electromagnetism) ಬಗ್ಗೆ ತಿಳಿಯಲು ಸುತ್ತುಗಗಳು(Satellite) ತಕ್ಕುದಾದವು ಎಂಬುದನ್ನು ರಾವ್ ಅರಿತಿದ್ದರು, ಇದಕ್ಕೆಂದೇ 1972ರ ಹೊತ್ತಿಗೆ ಸುತ್ತುಗದ ಚಳಕವನ್ನು(Satellite Technology) ಬಾರತದಲ್ಲಿ ಸ್ತಾಪಿಸಲು ಮುಂದಾದರು. ಇವರ ದಿಟ್ಟ ಮುಂದಾಳ್ತನದಲ್ಲಿ 1975ರ ಮೊದಲ ಸುತ್ತುಗ ಆರ‍್ಯಬಟ ಸೇರಿದಂತೆ ಬಾಸ್ಕರ್, ಆಪಲ್, ರೋಹಿಣಿ, ಇನ್ಸಾಟ್-1, ಇನ್ಸಾಟ್-2 ಮುಂತಾದ 18 ಸುತ್ತುಗಗಳನ್ನು ಬಾನಿಗೆ ಹಾರಿಬಿಡಲಾಯಿತು.

ಇಂದು ಬಾರತದ ಮೊಬೈಲ್ ಮತ್ತು ಐ.ಟಿ. ಉದ್ದಿಮೆಯಲ್ಲಿ ನಾವು ನೋಡುತ್ತಿರುವ ಚಳಕಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರ

1984ರಲ್ಲಿ ಇಸ್ರೋದ ಚೇರ‍್‌ಮನ್ ಆಗಿ ಅದಿಕಾರ ವಹಿಸಿಕೊಂಡ ಮೇಲೆ ರಾಕೆಟ್ ಚಳಕಗಳಿಗೆ ಹೆಚ್ಚಿನ ಬಲತುಂಬಿದರು. ಪಿ.ಎಸ್‌.ಎಲ್‌.ವಿ, ಎಸ್‌.ಎಲ್‌.ವಿ ಮುಂತಾದ ರಾಕೆಟ್‌ಗಳನ್ನು ಹಾರಿಬಿಟ್ಟು ರಾಕೆಟ್ ಚಳಕದಲ್ಲಿ ಬಾರತವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರೀಯುತ ರಾವ್ ಅವರ ಕೊಡುಗೆ ಮರೆಯುವಂತಿಲ್ಲ. 1991ರ ಹೊತ್ತಿಗೆ ಕಡುತಂಪಿನ ಬಿಣಿಗೆ(Cryogenic Engine) ಹೊರತರುವಲ್ಲಿ ರಾವ್ ಅವರು ಸಾಕಶ್ಟು ಶ್ರಮವಹಿಸಿದ್ದರು. ಇನ್ಸಾಟ್ ಸುತ್ತುಗಗಳನ್ನು ಹಾರಿಬಿಟ್ಟದ್ದು ಬಾರತದ ಕಮ್ಯುನಿಕೇಶನ್ ವಲಯದಲ್ಲಿ ಕ್ರಾಂತಿ ಮಾಡಿತು. ಒಂದು ಪೋನ್ ಕರೆ ಮಾಡಲು ಹಲವಾರು ನಿಮಿಶ ಕಾದು ಕರೆಯಲ್ಲಿ ಮಾತನಾಡುವ ಕಾಲವೊಂದಿತ್ತು. ಇನ್ಸಾಟ್ ಸುತ್ತುಗಗಳ ಪರಿಣಾಮವಾಗಿ ಎಸ್‌ಟಿಡಿ ಏರ‍್ಪಾಟು ಬಳಕೆಗೆ ಬಂದು ಮಂದಿ ಒಬ್ಬರಿಗೊಬ್ಬರು ಮಾತನಾಡಲು ಬಲು ಸುಳುವಾಯಿತು. ಮುಂದೆ ಬಾರತವು ಮೊಬಾಯ್ಲ್ ಮತ್ತು ಐ.ಟಿ. ವಲಯದಲ್ಲಿ ದೊಡ್ಡ ಬೆಳವಣಿಗೆ ಕಂಡಿದ್ದು ಇದೇ ಇನ್ಸಾಟ್‍ ಸುತ್ತುಗಗಳ ನೆರವಿನಿಂದ ಎಂಬುದು ಸುಳ್ಳಲ್ಲ.

ಬಾನರಿಮೆ, ಕಾಸ್ಮಿಕ್ ಕದಿರುಗಳು, ಸುತ್ತುಗಗಳು, ಬಾನಬಂಡಿಗಳು ಹೀಗೆ ತಾವು ಅರಕೆ ಮಾಡಿದ ವಿಗ್ನಾನ ಮತ್ತು ಚಳಕದ ವಿಶಯಗಳ ಬಗ್ಗೆ ಸುಮಾರು 350ಕ್ಕೂ ಹೆಚ್ಚು ಚಳಕದ ಹಾಳೆಗಳನ್ನು(Technological Papers) ಪ್ರಕಟಿಸಿ ಜಗತ್ತಿನೆಲ್ಲೆಡೆ ಹೆಸರುಗಳಿಸಿದರು. ಇವರಿಗೆ ಬಂದ ಬಿರುದುಗಳು, ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ. ನಾಡಿನ ಹಂಪಿ ಕನ್ನಡ ಕಲಿಕೆವೀಡು, ಮಂಗಳೂರು ಕಲಿಕೆವೀಡು, ಮೈಸೂರಿನ ಕಲಿಕೆವೀಡು, ಬೆಳಗಾವಿಯ ವಿಶ್ವೇಶ್ವರಯ್ಯ ಕಲಿಕೆವೀಡು ಸೇರಿದಂತೆ ದೇಶ-ವಿದೇಶದ 25ಕ್ಕೂ ಹೆಚ್ಚು ಕಲಿಕೆವೀಡುಗಳು ಇವರಿಗೆ ‘ಡಾಕ್ಟರ್ ಆಪ್ ಸೈನ್ಸ್’ ಪದವಿ ನೀಡಿವೆ. ಯುರೋಪ್‌ನ ಹಳೆಯ ಕಲಿಕೆವೀಡುಗಳಲ್ಲೊಂದಾದ ಇಟಲಿಯ ಬೊಲೊಗ್ನಾ ಕಲಿಕೆವೀಡು ಡಾಕ್ಟರ್ ಆಪ್ ಸೈನ್ಸ್ ಪದವಿ ನೀಡಿದ್ದು ವಿಶೇಶವಾಗಿ ಇಲ್ಲಿ ನೆನೆಸಿಕೊಳ್ಳಬಹುದು.

ಬೆಂಗಳೂರಿನ ನೆಹರು ತಾರಾಲಯ, ಬಾರತೀಯ ಬಾಹ್ಯಾಕಾಶ ಸಂಸ್ತೆ, ಬಾರತೀಯ ಬೌತ ವಿಗ್ನಾನ ಅರಕೆಮನೆ, ಕರ‍್ನಾಟಕ ರಾಜ್ಯ ವಿಗ್ನಾನ ಮತ್ತು ಚಳಕದ ಸಂಸ್ತೆ ಹೀಗೆ ದೇಶದ ಎಲ್ಲ ಪ್ರಮುಕ ಸಂಸ್ತೆಗಳ ಮುಂದಾಳಾಗಿ ಸೇವೆ ಸಲ್ಲಿಸಿದ ಪ್ರಮುಕ ಅರಿಮೆಗಾರ ಪ್ರೊ.ರಾವ್. ಸಾಕಶ್ಟು ಕಲಿಕೆವೀಡಿನ ಚಾನ್ಸಲರ್ ಹುದ್ದೆಗಳು ಇವರ ಪಾಲಿಗೆ ಒಲಿದು ಬಂದವು. ಬಾರತ ಸರಕಾರ 1976ರಲ್ಲಿ ಪದ್ಮಬೂಶಣ, 2017ರಲ್ಲಿ ಪದ್ಮವಿಬೂಶಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಎರಡು ಬಾರಿ ಕರ‍್ನಾಟಕ ರಾಜ್ಯೋತ್ಸವ, ಆರ‍್ಯಬಟ ಪ್ರಶಸ್ತಿ, ಬಾನರಿಮೆ ವಿಶಯದಲ್ಲಿ ದೊಡ್ಡ ಸಾದನೆ ಮಾಡುವವರಿಗೆ ನೀಡಲ್ಪಡುವ ಶಾಂತಿ ಬಟ್ನಾಗರ್ ಪ್ರಶಸ್ತಿ ಅಲ್ಲದೇ ರಶಿಯಾ, ಅಮೇರಿಕಾ ನಾಡುಗಳು ನೀಡುವ ಹಲವಾರು ಪ್ರಶಸ್ತಿಗಳು ಇವರನ್ನು ಅರಿಸಿ ಬಂದವು. ಲೆಕ್ಕವಿಲ್ಲದಶ್ಟು ಅರಕೆಮನೆ, ವಿಗ್ನಾನ ಸಂಸ್ತೆಗಳು ಇವರಿಗೆ ಪೆಲೋಶಿಪ್ ನೀಡಿ ಹಾಡಿ ಹೊಗಳಿವೆ. ಅಮೇರಿಕಾದ ವಾಶಿಂಗ್‌ಟನ್‌ನ “ಸ್ಯಾಟ‌ಲೈಟ್ ಹಾಲ್ ಆಪ್ ಪೇಮ್” ಮತ್ತು ಮೆಕ್ಸಿಕೋದ “ಐ.ಎ.ಎಪ್. ಹಾಲ್ ಆಪ್ ಪೇಮ್” ಪಟ್ಟಿಗೆ ಮೊದಲ ಬಾರತೀಯರಾಗಿ ಪ್ರೊ.ರಾವ್ ಹೆಸರು ಸೇರಿಕೊಂಡಿದ್ದು ನಮ್ಮೆಲ್ಲರ ಹೆಮ್ಮೆಯ ವಿಶಯ.

ಶ್ರೀಯುತ ರಾವ್‌ರವರು ಬಾನರಿಮೆಗೆ ಸಂಬಂದಿಸಿದಂತೆ ಒಟ್ಟು ಮೂರು ಹೊತ್ತಗೆಗಳನ್ನು ಬರೆದಿದ್ದಾರೆ. ಕಸ್ತೂರಿರಂಗನ್, ಕೆ.ಆರ್.ಸುಂದರ ಮೂರ‍್ತಿ ಮತ್ತು ಸುರೇಂದ್ರ ಪಾಲ್ ಜೊತೆಗೂಡಿ ಪರ್‍ಸ್ಪೆಕ್ಟೀವ್ಸ್ ಇನ್ ಕಮ್ಯುನಿಕೇಶನ್(Perspectives in Communications) ಎಂಬ ಹೊತ್ತಗೆ ಬರೆದರೆ, ಸ್ವಂತವಾಗಿ ಸ್ಪೇಸ್ ಆಂಡ್ ಅಜೆಂಡಾ21- ಕೇರಿಂಗ್ ಪಾರ್ ಪ್ಲಾನೆಟ್ ಅರ‍್ತ್(Space and Agenda21- Caring for Planet Earth) ಮತ್ತು ಸ್ಪೇಸ್ ಟೆಕ್ನಾಲಜಿ ಪಾರ್ ಸಸ್ಟೇನೇಬಲ್ ಡೆವಲ್ಪಂಟ್ (Space Technology For Sustainable Development) ಎಂಬ ಹೊತ್ತಗೆ ಹೊರತಂದರು.

ಬಾನರಿಮೆ, ರಾಕೆಟ್, ಸುತ್ತುಗಗಳ ವಿಶಯದಲ್ಲಿ ನಮ್ಮ ನಾಡಿನ ಅಚ್ಚನ್ನೊತ್ತಿ ನಾವುಗಳು ಏನೆಲ್ಲ ಸಾದಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಕರ‍್ನಾಟಕದ ಹೆಮ್ಮೆಯ ಅರಿಮೆಗಾರ ಇದೀಗ ನಮ್ಮ ನೆನಪುಗಳಲ್ಲಿ ಮಾತ್ರ. ಇವರು ಮಾಡಿದ ಸಾದನೆಗಳು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ.

(ಮಾಹಿತಿ ಸೆಲೆ: en.wikipedia.org, isro.gov.in)
(ಚಿತ್ರ ಸೆಲೆ: wikimedia, isro.gov.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications