ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?
ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು 50 ಮಿಲಿಯನ್ ವರ‍್ಶಗಳಿಂದ ಒಳ್ಳೆಯ ಏರ‍್ಪಾಟಿನ ಕಾಲೋನಿಗಳನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿವೆ!
ಇರುವೆಗಳು ನೆಲದ ಒಳಗೆ, ಗಿಡದ ಎಲೆಯ ಕಸದಲ್ಲಿ, ಕೊಳೆಯುತ್ತಿರುವ ಮರದ ಮೇಲೆ, ಬಂಡೆಗಳಲ್ಲಿ ಹೀಗೆ ಎಲ್ಲಾ ರೀತಿಯ ಜಾಗಗಳಲ್ಲಿ ಕಾಲೋನಿಗಳನ್ನು ಕಟ್ಟುತ್ತವೆ. ಇವು ಕಾಲೋನಿಗಳಲ್ಲಿ ಬದುಕುವ ಮುಕ್ಯ ಉದ್ದೇಶ ಎಂದರೆ ತಮ್ಮ ಉಳಿಯುವಿಕೆ (survival), ಬೆಳವಣಿಗೆ ಹಾಗೂ ಹೆರಿಕೆಗಾಗಿ (reproduction). ಇರುವೆಯ ಕಾಲೋನಿಗಳು ಕೇವಲ ಬೌತಿಕ ರಚನೆಯನ್ನು (physical structure) ಹೊಂದಿರುವುದಲ್ಲದೇ ಅವುಗಳು ಒಟ್ಟಾಗಿ ಬದುಕಲು ಹಾಗೂ ಕೆಲಸ ಮಾಡಲು ನೆರವಾಗುವ ತಮ್ಮದೇ ಆದ ಕೆಲವೊಂದು ಸಾಮಾಜಿಕ ನಿಯಮಗಳನ್ನು ಕೂಡಾ ಹೊಂದಿರುತ್ತವೆ.
ಮೊದಲಿಗೆ ಕಾಲೋನಿಯಲ್ಲಿ ಒಂದು ತಾಯಿ ಇರುವೆ, ಅವಳ ಹೆಣ್ಣು ಮಕ್ಕಳು, ಮೊಟ್ಟೆಗಳು, ಮರಿಹುಳು (larvae) ಹಾಗೂ ಗೂಡುಹುಳುಗಳು (Pupa) ಇರುತ್ತವೆ. ತಾಯಿ ಇರುವೆಯನ್ನು ಒಡತಿ ಎಂದು ಕರೆಯುತ್ತಾರೆ. ಇದು ಇಡೀ ಕಾಲೋನಿಯನ್ನು ಹುಟ್ಟುಹಾಕುವುದಲ್ಲದೇ ಅದರ ಒಡೆತನವನ್ನೂ ಹೊಂದಿರುತ್ತದೆ. ಒಡತಿ ಇರುವೆಯು ಕಾಲೋನಿಯಲ್ಲಿ ಮೊಟ್ಟೆ ಇಡುವ ಅಳವು ಹೊಂದಿರುವ ಏಕೈಕ ಹೆಣ್ಣು ಇರುವೆ ಕೂಡಾ ಆಗಿರುತ್ತದೆ. ಉಳಿದ ಹೆಣ್ಣಿರುವೆಗಳು ಕಾಲೋನಿಯಲ್ಲಿ ಕೇವಲ ಕೆಲಸಗಾರರಾಗಿರುತ್ತವೆ. ಈ ಗುಂಪಿನ ಪ್ರತಿ ಇರುವೆಗೂ ಒಂದೊಂದು ಬಗೆಯ ಕೆಲಸವನ್ನು ಗೊತ್ತುಪಡಿಸಲಾಗಿರುತ್ತದೆ.
ಹೀಗೆ ಸಾಗುತ್ತಿರುವ ಬೆಳೆಯುತ್ತಿರುವ ಕಾಲೋನಿಗೆ ಬೇರೆ ಕಾಲೋನಿಯಿಂದ ದೊಡ್ಡ ಸಂಕ್ಯೆಯಲ್ಲಿ ರೆಕ್ಕೆಗಳಿರುವ ಹೆಣ್ಣಿರುವೆಗಳು ಬಂದು ಸೇರಿಕೊಳ್ಳುತ್ತವೆ. ಹೊಸದಾಗಿ ಬಂದ ಹೆಣ್ಣಿರುವೆಗಳು ಕಾಲೋನಿಯಲ್ಲಿನ ಗಂಡು ಇರುವೆಗಳನ್ನು ಸೇರುತ್ತವೆ. ಇವುಗಳ ಲೈಂಗಿಕ ಕ್ರಿಯೆಯ ಸ್ವಲ್ಪ ಹೊತ್ತಿನ ಬಳಿಕ ಗಂಡು ಇರುವೆಗಳು ಸಾಯುತ್ತವೆ. ಹಾಗೆಯೇ ಹೆಚ್ಚಿನ ಸಂಕ್ಯೆಯ ಹೆಣ್ಣಿರುವೆಗಳು ಕೂಡ ಸಾಯುತ್ತವೆ. ಆದರೆ ಒಂದು ಸಣ್ಣ ಪ್ರಮಾಣದ ಹೆಣ್ಣು ಇರುವೆಗಳು ಹೊಸ ಕಾಲೋನಿಗಳನ್ನು ಕಟ್ಟಲು ಬದುಕುಳಿಯುತ್ತವೆ. ಹೀಗೆ ಬದುಕುಳಿದ ಹೆಣ್ಣಿರುವೆ ತಾನು ಬಂದು ಸೇರಿದ ಕಾಲೋನಿಯನ್ನು ಬಿಟ್ಟು ಹೋಗಿ, ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳಿಂದ ಹೊರಬರುವ ಕೆಲಸಗಾರ ಇರುವೆಗಳು (ಹೆಣ್ಣಿರುವೆ) ಮತ್ತು ಗಂಡು ಇರುವೆಗಳು ಸೇರಿ ಅಲ್ಲಿ ಹೊಸ ಕಾಲೋನಿ ಹುಟ್ಟಿ, ಬೆಳೆಯ ತೊಡಗುತ್ತದೆ. ಹೊಸ ಕಾಲೋನಿಯಲ್ಲಿ, ಮೊಟ್ಟೆಯಿಂದ ಹೊರಬಂದ ರೆಕ್ಕೆ ಇರುವ ಹೆಣ್ಣು ಇರುವೆಗಳು ದೊಡ್ಡವಾದ ಮೇಲೆ ಬೇರೊಂದು ಕಾಲೋನಿಗೆ ಹಾರಿಹೋಗಿ ಅಲ್ಲಿನ ಗಂಡು ಇರುವೆಗಳೊಂದಿಗೆ ಸೇರುತ್ತವೆ. ಇದನ್ನು ಒಟ್ಟಾಗಿ ಕಾಲೋನಿಯ ಬಾಳ್ಮೆಸುತ್ತು (colony life cycle) ಎಂದು ಕರೆಯುತ್ತಾರೆ.
ಇರುವೆಗಳ ಗೂಡಿನಲ್ಲಿ ಏನೇನಿರುತ್ತೆ?
ಇರುವೆಗಳ ಕಾಲೋನಿಯು ಒಂದು ಇಲ್ಲವೇ ಅದಕ್ಕಿಂತ ಹೆಚ್ಚಿನ ಬಾಗಿಲುಗಳನ್ನು ಹೊಂದಿದ್ದು, ಇದು ಇರುವೆಗಳು ನೆಲದೊಳಗೆ ಬಗೆ ಬಗೆಯ ಕೋಣೆಗಳನ್ನು ಕಟ್ಟಲು ನೆರವಾಗುತ್ತದೆ. ಪ್ರತಿ ಕೋಣೆಯನ್ನು ಒಂದೊಂದು ನಿರ‍್ದಿಶ್ಟವಾದ ಕೆಲಸಕ್ಕೆ ಬಳಸಲಾಗುತ್ತದೆ.
- ತಿಂಡಿತಿನಿಸುಗಳಿಗಾಗಿ ಒಂದು ದೊಡ್ಡ ಕೋಣೆಯಿರುತ್ತದೆ.
- ಒಡತಿ ಇರುವೆಯು ಅದರದೇ ಆದ ಒಂದು ಬೇರೆ ಕೋಣೆಯನ್ನು ಹೊಂದಿರುತ್ತದೆ.
- ಕೆಲಸಗಾರ ಇರುವೆಗಳು ಹಾಗೂ ಇನ್ನೂ ಮರಿಯಾಗದ ಮೊಟ್ಟೆಗಳಿಗಾಗಿ ಕೆಲವು ಕೋಣೆಗಳನ್ನು ಕಾಯ್ದಿರಿಸಲಾಗಿರುತ್ತದೆ.
- ಮರಿಹುಳು ಹಾಗೂ ಗೂಡುಹುಳುಗಳಿಗಾಗಿ ಒಂದು ಆಳವಾದ ಕೋಣೆ ಇರುತ್ತದೆ.
- ಎಲ್ಲರೂ ಸಾಮಾನ್ಯವಾಗಿ ಬಳಸಲು ಒಂದು ದೊಡ್ಡ ಕೋಣೆಯನ್ನು ಕಟ್ಟಲಾಗಿರುತ್ತವೆ.
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವೆಗಳು ಕಟ್ಟಿರುವ ದಿಬ್ಬಗಳನ್ನು ನೋಡಿರುತ್ತೀವಿ. ಇವುಗಳು ಇರುವೆಗಳ ನಿಜವಾದ ಕಾಲೋನಿಗಳಲ್ಲ. ಈ ದಿಬ್ಬಗಳು ಕಾಲೋನಿಯ ಬಾಗಿಲುಗಳು ಅಶ್ಟೆ. ಸಾಮಾನ್ಯವಾಗಿ ಈ ದಿಬ್ಬಗಳನ್ನು ಕೆಸರು, ಮರಳು ಹಾಗೂ ಇತರೆ ವಸ್ತುಗಳಿಂದ ಮಾಡಲಾಗಿರುತ್ತದೆ. ಕಾಲೋನಿಗಳು ನೆಲದ ಒಳಗೆ ತುಂಬಾ ಆಳದ ವರಗೆ ಹರಡಿದ್ದು, ಕೆಲವೊಂದು ಸುಮಾರು 25 ಅಡಿಗಳಶ್ಟು ಆಳವಾಗಿವೆ.
ಇರುವೆಗಳೂ ಮಾತನಾಡುತ್ತವೆ!?
ಇರುವೆಗಳು ಕೂಡ ಪರಸ್ಪರ ಮಾತನಾಡುತ್ತವೆ. ಆದರೆ ಅಚ್ಚರಿ ವಿಶಯವೆಂದರೆ ಅವುಗಳು ಮಾತನಾಡಲು ಯಾವುದೇ ರೀತಿಯ ದ್ವನಿಯನ್ನು ಬಳಸುವುದಿಲ್ಲ, ಬದಲಿಗೆ ರಾಸಾಯನಿಕಗಳನ್ನು ಬಳಸುತ್ತವೆ. ಇರುವೆಗಳು ನಿರ‍್ದಿಶ್ಟ ಸಂದೇಶಗಳಿಗೆ ಒಂದೊಂದು ಬಗೆಯ ರಾಸಾಯನಿಕಗಳನ್ನು ಮೈಯಿಂದ ಹೊರಹಾಕುತ್ತವೆ. ಮೊದಲಿಗೆ ಮಾತನಾಡ ಬಯಸುವ ಇರುವೆಯು ಅದರ ಸಂದೇಶಕ್ಕೆ ಅನುಗುಣವಾಗಿ ಒಂದು ಬಗೆಯ ರಾಸಾಯನಿಕವನ್ನು ಮೈಯಿಂದ ಹೊರಹಾಕುತ್ತದೆ. ಉಳಿದ ಇರುವೆಗಳು ಆ ರಾಸಾಯನಿಕವನ್ನು ಅರಿವುಕಗಳಿಂದ (antennae) ಪಡೆದು ಅದರ ಗುಟ್ಟುಬಿಡಿಸಿ ಅದಕ್ಕೆ ಉತ್ತರಿಸಲು ಮತ್ತೊಂದು ರಾಸಾಯನಿಕವನ್ನು ತಮ್ಮ ಮೈಯಿಂದ ಹೊರಹಾಕುತ್ತವೆ. ಕೆಲವು ಸಂದರ‍್ಬಗಳಲ್ಲಿ ಪರಸ್ಪರ ಮುಟ್ಟುವುದರ ಹಾಗೂ ಕಂಪನಗಳ ಮೂಲಕವೂ ಮಾತನಾಡುತ್ತವೆ.
ಕಾಲೋನಿಯ ಇರುವೆಗಳು ತಮ್ಮ ಮೈಯನ್ನು ಆವರಿಸಿರುವ ರಾಸಾಯನಿಕಗಳಿಂದ ಪರಸ್ಪರ ಗುರುತಿಸಿಕೊಳ್ಳುತ್ತವೆ. ಒಡತಿ ಇರುವೆಯ ಮೈಯು ಒಂದು ವಿಶಿಶ್ಟವಾದ ರಾಸಯನಿಕದಿಂದ ಆವರಿಸಿದ್ದು, ಇದು ಒಡತಿ ಇರುವೆಯ ಇರುವಿಕೆಯನ್ನು ತಿಳಿಸುತ್ತದೆ.
ಇರುವೆಗಳ ಗಿರಣಿ (Ant mill)
ಒಂದು ಒಳ್ಳೆಯ ಏರ‍್ಪಾಟಿನ ಕಾಲೋನಿಯಲ್ಲಿ ಬದುಕುವುದು ಕೂಡ ಕೆಲವೊಂದು ಜಾತಿಯ ಇರುವೆಗಳಿಗೆ ಹಲವಾರು ಸಮಯದಲ್ಲಿ ತೊಂದರೆ ಉಂಟು ಮಾಡಬಲ್ಲದು. ಈ ನೆಲದ ಮೇಲೆ ಸುಮಾರು 12,500 ಜಾತಿಯ ಇರುವೆಗಳಿದ್ದು, ಅದರಲ್ಲಿ ಸುಮಾರು 200 ಜಾತಿಯ ಇರುವೆಗಳಿಗೆ ಕಣ್ಣು ಕಾಣಿಸುವುದಿಲ್ಲ. ಇವುಗಳನ್ನು ಪಡೆ (army) ಇರುವೆಗಳೆಂದು ಕರೆಯುತ್ತಾರೆ. ಇವುಗಳು ಕೂಡ ಕಾಲೋನಿಗಳಲ್ಲಿ ಬದುಕುತ್ತವೆ. ಕಾಲೋನಿಯಲ್ಲಿನ ಪಡೆ ಇರುವೆಗಳಿಗೆ ಪ್ರಾಣಕ್ಕೆ ಅಪಾಯ ಉಂಟು ಮಾಡುವಂತಹ ಏನಾದರೂ ಸಂಗತಿ ನಡೆದರೆ, ಇವುಗಳಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದ್ದರಿಂದ ಅವುಗಳು ಒಂದರ ಹಿಂದೆ ಇನ್ನೊಂದು ಹಿಂಬಾಲಿಸಲು ಆರಂಬಿಸುತ್ತವೆ. ಅದು ಒಂದು ನಿರಂತರವಾಗಿ ತಿರುಗುವ ದುಂಡನ್ನು (rotating circle) ರೂಪಿಸುತ್ತದೆ. ಇದನ್ನು ಇರುವೆಗಳ ಗಿರಣಿ (Ant mill ) ಎಂದು ಕರೆಯುತ್ತಾರೆ. ಕಡೆಗೆ ಇವುಗಳು ಬಳಲಿಕೆಯಿಂದ ಸಾವನ್ನುಪ್ಪುತ್ತವೆ.
ಇರುವೆಗಳ ಗಿರಣಿ ಬಗ್ಗೆ ಮೊಟ್ಟ ಮೊದಲ ಬಾರಿಗೆ 1921 ರಲ್ಲಿ ವಿಲಿಯಂ ಬೀಬೆ (William Beebe) ಅವರು ವಿವರಿಸಿದರು. ಅವರು ಸುಮಾರು 12000 ಅಡಿ ಸುತ್ತಳತೆಯ ಇರುವೆ ಗಿರಣಿಯನ್ನು ಗಮನಿಸಿದರು. ಈ ಗಿರಣಿಯಲ್ಲಿ ಪ್ರತಿ ಇರುವೆ ಒಂದು ಸುತ್ತು ತಿರುಗಲು 2.5 ಗಂಟೆ ಕಾಲ ತೆಗೆದುಕೊಂಡಿತ್ತು!
ವಿಶ್ವದ ಅತ್ಯಂತ ದೊಡ್ಡ ಇರುವೆ ಕಾಲೋನಿಗಳು
• ತೆಂಕಣ ಯುರೋಪಿನ ಅರ‍್ಜಂಟೀನಾ ಇರುವೆಗಳು ಎಂದು ಕರೆಯಲ್ಪಡುವ ಇರುವೆಗಳ ಕಾಲೋನಿಯು ವಿಶ್ವದ ಅತ್ಯಂತ ದೊಡ್ಡ ಕಾಲೋನಿ ಎಂದು ತಿಳಿದುಬಂದಿದೆ. ಇದು ತೆಂಕಣ ಯುರೋಪಿನ ಮೆಡಿಟರೇನಿಯನ್ ಹಾಗು ಅಟ್ಲಾಂಟಿಕ್ ಕರಾವಳಿಯ ಉದ್ದಕ್ಕೆ ಸುಮಾರು 6,004 ಕಿಲೋಮೀಟರ್ ವರೆಗೂ ಹರಡಿದೆ.
• ಅಮೇರಿಕಾದಲ್ಲಿನ ಕ್ಯಾಲಿಪೋರ‍್ನಿಯನ್ ಲಾರ‍್ಜ್ (Californian large) ಎಂದು ಕರೆಯಲ್ಪಡುವ ಕಾಲೋನಿಯು ಕ್ಯಾಲಿಪೋರ‍್ನಿಯಾದ ಕರಾವಳಿಯಾದ್ಯಂತ ಸುಮಾರು 900 ಕಿಲೋಮೀಟರ್ ವರೆಗೂ ಹರಡಿದ್ದು, ವಿಶ್ವದ ಎರಡನೆಯ ದೊಡ್ಡ ಕಾಲೋನಿ ಎಂದು ಕರೆಯಲ್ಪಡುತ್ತದೆ.
• ಆಸ್ಟ್ರೇಲಿಯಾದ ಮೆಲ್ಬರ‍್ನ್ ಕರಾವಳಿಯಲ್ಲಿ ಹರಡಿರುವ ಸುಮಾರು 100 ಕಿಲೋಮೀಟರ್ ಉದ್ದದ ಕಾಲೋನಿಯು ವಿಶ್ವದ ಮೂರನೆಯ ದೊಡ್ಡ ಇರುವೆ ಕಾಲೋನಿ ಎಂದು ಕರೆಯಲ್ಪಡುತ್ತದೆ.
• ಜಪಾನ್ ಅಲ್ಲಿನ ಹೊಕ್ಕಯ್ಡೊ ಇಶಿಕಾರಿ (Hokkaido Ishikari) ಕರಾವಳಿಯಲ್ಲಿ ಹರಡಿರುವ ಸುಮಾರು 2.7 ಕಿಲೋಮೀಟರ್ ಉದ್ದದ ಕಾಲೋನಿಯು ವಿಶ್ವದ ನಾಲ್ಕನೆಯ ದೊಡ್ಡ ಕಾಲೋನಿ ಎಂದು ಕರೆಯಲ್ಪಡುತ್ತದೆ.
ಇರುವೆಗಳು ಅಂಟಾರ‍್ಕ್ಟಿಕಾ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಹವಾಯ್, ಪಾಲಿನೇಶ್ಯಾ ಮುಂತಾದ ಸಣ್ಣ ದ್ವೀಪಗಳನ್ನು ಹೊರತುಪಡಿಸಿ ವಿಶ್ವದೆಲ್ಲೆಡೆಯೂ ಕಂಡುಬರುತ್ತವೆ. ಈ ನೆಲದ ಮೇಲಿನ ಪ್ರತಿಯೊಂದು ಉಸಿರುಗವು ಇಂತಹ ಹಲವಾರು ಅಪರೂಪದ ಸಂಗತಿಗಳನ್ನು ಹೊಂದಿವೆ. ಪ್ರಕ್ರುತಿಯ ಬಗ್ಗೆ ತಿಳಿದುಕೊಂಡಶ್ಟು ಕುತೂಹಲ ಇನ್ನಶ್ಟು ಹೆಚ್ಚಾಗುತ್ತಾ ಹೋಗುತ್ತದೆ.
(ಮಾಹಿತಿ ಸೆಲೆ: nationalgeographic.com, nectunt.bifi.es, livescience.com, en.wikipedia.org, askabiologist.asu.edu, scienceabc.com, kids.britannica.com, en.wikipedia.org)
(ಚಿತ್ರ ಸೆಲೆ: zootles.wordpress.com, miriadna.com, wikimedia.org )
ಇತ್ತೀಚಿನ ಅನಿಸಿಕೆಗಳು