ಮೂಡೆ – ಕರಾವಳಿಗರ ನೆಚ್ಚಿನ ತಿನಿಸು

– ಹರ‍್ಶಿತ್ ಮಂಜುನಾತ್.

ಮೂಡೆ ಇದು ತುಳು ಪದವಾಗಿದ್ದು ಕನ್ನಡದಲ್ಲಿ ಇದನ್ನು ಕೊಟ್ಟೆ ಎನ್ನುವರು. ಅಲ್ಲದೇ ಹಳೆಗನ್ನಡದಲ್ಲಿ ಕಡುಂಬುಂದು ಎನ್ನುತ್ತಿದ್ದರು. ಮುಂಡೇವಿನ ಎಲೆಗಳಿಂದ ಮಾಡುವ ತಿನಿಸಾದ್ದರಿಂದ ಇದಕ್ಕೆ ಮೂಡೆ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತದೆ. ಕರಾವಳಿಗರ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿರುವ ಮೂಡೆಯು, ಹಬ್ಬ ಹರಿದಿನಗಳಲ್ಲಿ ತುಳುವರ ಅಡುಗೆಯ ಒಂದು ಬಗೆ ಎಂದರೆ ತಪ್ಪಾಗಲಾರದು.

ಅಶ್ಟಕ್ಕೂ ಮೂಡೆ ಇಂದು ನಿನ್ನೆಯ ತಿನಿಸಲ್ಲ. ಬಹಳ ಹಳೆಯ ಕಾಲದಿಂದಲೂ ತನ್ನ ರುಚಿಯಿಂದ ಕರಾವಳಿಗರ ಮನಸೂರೆ ಮಾಡಿರುವ ಮೂಡೆ, ಎಲ್ಲಾ ನಲಿವಿನ ಹಬ್ಬಗಳಿಗೆ ಹೇಳಿಮಾಡಿಸಿದ ಅಡುಗೆಯಾಗಿದೆ. ಅದಕ್ಕೇ ಇರಬೇಕು ಮುದ್ದಣ ಕೂಡ ಅವರ ನಲ್ಬರಹ ಒಂದರಲ್ಲಿ ಮೂಡೆಯ ಬಗ್ಗೆ ಬರೆದಿದ್ದಾರೆ (ಹಳೆಗನ್ನಡದಲ್ಲಿ ಕಡುಂಬುಂದು ಪದ ಬಳಸಿದ್ದು ಮುದ್ದಣ) ಎಂದು ತುಳುವರು ಹೇಳುತ್ತಾರೆ. ಇದೊಂದು ಮಾತು ಮೂಡೆಯ ರುಚಿ ಮತ್ತು ಹಿರಿತನವನ್ನು ಇನ್ನಶ್ಟು ಚೆಂದಗಾಣಿಸುತ್ತದೆ.

ಮೂಡೆ ಕಟ್ಟುವ ಬಗೆ:

ಮೊದಲೇ ಹೇಳಿದಂತೆ ಮೂಡೆಯನ್ನು ಕಟ್ಟಲು ಮಂಡೇವಿನ ಎಲೆಗಳನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಕನ್ನಡದಲ್ಲಿ ಮುಂಡುಗ ಎನ್ನುವರು. ಮುಂಡೈ ಎನ್ನುವ ಇನ್ನೊಂದು ತುಳು ಪದ ಕೂಡ ಇದಕ್ಕಿದೆ. ಸಾಮಾನ್ಯವಾಗಿ ನೀರು ಹರಿದು ಹೋಗುವ ಬದಿಗಳಲ್ಲಿ, ಬೇಲಿಗಳಲ್ಲಿ ಹೆಚ್ಚಾಗಿ ಇವುಗಳ ರಾಶಿ ಕಾಣ ಸಿಗುತ್ತದೆ. ತನ್ನ ಎಲೆಯ ಹಿಂದಣದಲ್ಲಿ ಚೂಪಾದ ಮುಳ್ಳುಗಳನ್ನು ಹೊಂದಿರುವ ಇವುಗಳನ್ನು ಕತ್ತರಿಸುವುದು ತುಸು ಕಶ್ಟವೇ ಸರಿ. ತುಂಡರಿಸಿದ ಮುಂಡುಗದ ಎಲೆಯ ಮೇಲಿರುವ ಮುಳ್ಳುಗಳನ್ನು ಹೆರೆದು, ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಇಲ್ಲವೇ ಬೆಂಕಿಯಲ್ಲಿ ತುಸು ಸುಟ್ಟು ಕಾಯಿಸಬೇಕು. ಹೀಗೆ ಕಾಯಿಸುವುದರಿಂದ ಎಲೆಯನ್ನು ನಮಗೆ ಬೇಕಾದ ಹಾಗೆ ಮಡಚಬಹುದು ಮತ್ತು ಎಲೆಗಳು ಮಡಚುವಾಗ ಹರಿಯದಂತೆ ನೋಡಿಕೊಳ್ಳಬಹುದು. ಕಾಯಿಸಿದ ಎಲೆಯು ಬಿಸಿ ಇರುವಾಗಲೇ ನೆಲಕ್ಕೆ ಚೆನ್ನಾಗಿ ತಿಕ್ಕಿದರೆ ತುಸು ಅಗಲವೂ ಆಗುತ್ತದೆ. ಬಳಿಕ ಎಲೆಯನ್ನು ಮಡಚುತ್ತ, ತೆಂಗಿನ ಗರಿಯ ‍‍ಕಡ್ಡಿಯನ್ನು ಮಡಚಿದ ಎಲೆಗೆ ಪೋಣಿಸುತ್ತಾ ಕೊಟ್ಟೆಯನ್ನು ಕಟ್ಟಬೇಕು.

ಮುಂಡುಗದ ಎಲೆಯನ್ನು ಒಣಗಿಸಿ ಕೊಟ್ಟೆಯನ್ನು ಕಟ್ಟುವ ಬಗೆ ಈ ವೀಡಿಯೋದಲ್ಲಿದೆ.
[wpvideo 8BsalLrv]

ಇಲ್ಲೊಂದು ವಿಶೇಶವೆಂದರೆ ಇಲ್ಲಿ ನಮಗೆ ಕೊಟ್ಟೆ ಕಟ್ಟುವ ಬಗೆ ಮಾತ್ರ ತುಸು ಕಶ್ಟವಾಗಬಹುದು. ಉಳಿದ ಕೆಲಸ ಮಾತ್ರ ಬಹಳ ಸುಲಬ. ನಿಮಗೆಲ್ಲ ಇಡ್ಲಿ ಮಾಡುವ ರೀತಿ ಗೊತ್ತೇ ಇದೆ. ಇಲ್ಲೂ ಕೂಡ ಇಡ್ಲಿಗೆ ಬೇಕಾದಶ್ಟು ಹದಕ್ಕೆ ಅಕ್ಕಿಯನ್ನು ಕಡೆದುಕೊಳ್ಳಬೇಕು. ಬಳಿಕ ಕಡುಬಿನ ಪಾತ್ರೆಯಲ್ಲಿ ಕೊಟ್ಟೆಯನ್ನು ಚೆನ್ನಾಗಿ ಜೋಡಿಸಿ ಅದಕ್ಕೆ ಅಕ್ಕಿ ಹಿಟ್ಟನ್ನು ಸುರಿದು ಇಡ್ಲಿಯಂತೆ ಆವಿಯಲ್ಲಿ ಬೇಯಿಸಿದರೆ ಮೂಡೆ ಅತವಾ ಕೊಟ್ಟೆ ತಿನ್ನಲು ಸಿದ್ದವಾಗುತ್ತದೆ.

ಕಡುಬಿನ ಪಾತ್ರೆ ಇಲ್ಲವಾದರೆ ಇಡ್ಲಿಯ ಪಾತ್ರೆಯನ್ನೂ ಬಳಸಬಹುದು. ಇದಕ್ಕೆ ಮಾಂಸದ ಸಾರು, ತರಕಾರಿ ಸಾರು, ತಿಳಿ ಸಾರು, ಚಟ್ನಿ ಅಲ್ಲದೇ ತೆಂಗಿನ ಹಾಲು ಹೀಗೆ ಯಾವುದಕ್ಕೆ ನಂಚಿದರೂ ತನ್ನ ರುಚಿಗೆ ಮತ್ತಶ್ಟು ರುಚಿ ಬೆರೆಸಿ ತನ್ನತ್ತ ನಾಲಗೆಯನ್ನು ಸೆಳೆಯುತ್ತದೆ. ಮುಂಡುಗದ ಎಲೆಯ ಗಮ, ಅಕ್ಕಿಹಿಟ್ಟಿನ ರುಚಿ, ಆವಿಯಲ್ಲಿ ಬೇಯಿಸಿದ ಬಗೆ ಎಲ್ಲವೂ ಸೇರಿ ಮೂಡೆಯನ್ನು ಒಂದು ಸೊಗಸಾದ ಅಡುಗೆಯನ್ನಾಗಿಸಿದೆ. ಒಮ್ಮೆ ಮಾಡಿ ನೋಡಿ.

(ಚಿತ್ರ ಸೆಲೆ: quora )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: