ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ
ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ… ಈ ನಾಣ್ಣುಡಿಯು ಈಗಿನ ವರ‍್ತಮಾನಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಸ್ತುತ ಸ್ಪರ‍್ದಾತ್ಮಕ ಯುಗದಲ್ಲಿ ಬದಲಾವಣೆ ಬಯಸುವುದು ಸಾಮಾನ್ಯ ಮತ್ತು ಅಗತ್ಯವೂ ಕೂಡ ಹೌದು. ಆದರೆ ಅದು ಎಶ್ಟರ ಮಟ್ಟಿಗೆ ಎಂಬುದು ಬಹಳ ಮುಕ್ಯ. ನಾವು ನಮ್ಮವರು ಎಂಬ ಜಗದೊಳಗೆ ‘ಮೊಬೈಲ್ ಜಗತ್ತು’ ಎಂಬುದು ಒಂದು ಸೋಜಿಗವೇ ಸರಿ. ನೆಂಟರಿಶ್ಟರ ಮನೆಗೆ ಹೋದಾಗಲೂ, ಶುಬ ಸಮಾರಂಬಗಳಿಗೆ ಹೋದಾಗಲೂ, ಜನರು ಈ ಮೊಬೈಲ್ ಎಂಬ ಲೋಕದಲ್ಲಿ ಮುಳುಗಿ ಹೋಗಿರುತ್ತಾರೆ. ಕೈಯಲ್ಲೊಂದು ಮೊಬೈಲ್ ಪೋನ್ ಇದ್ದರೆ, ಲೋಕದ ಆಗುಹೋಗುಗಳ ಪರಿವೆಯೇ ಇರುವುದಿಲ್ಲ. ಅತಿಯಾಗಿ ಮೊಬೈಲ್ ಬಳಸುವುದು ಹಾಗೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದು ಜನರ ಮೇಲೆ ಮಾನಸಿಕ ದುಶ್ಪರಿಣಾಮಗಳನ್ನು ಉಂಟುಮಾಡುವುದಲ್ಲದೆ ಸ್ವಸ್ತ ಮತ್ತು ಸದ್ರುಡ ಸಮಾಜ ರೂಪಿಸುವಲ್ಲಿಯೂ ತೊಡಕುಗಳನ್ನುಂಟು ಮಾಡುತ್ತದೆ.
ಕರಾಗ್ರೇ ವಸತೇ ಲಕ್ಶ್ಮಿ ಕರಮದ್ಯೆ ಸರಸ್ವತಿ |
ಕರಮೂಲೆ ಸ್ತಿತಾ ಗೌರಿ ಪ್ರಬಾತೇ ಕರದರ‍್ಶನಂ ||
ಎಂದು ಸ್ತುತಿಸುತ್ತಾ ನಮ್ಮ ಅಂಗೈಗಳನ್ನು ನೋಡುತ್ತಾ ಬೆಳಿಗ್ಗೆ ಏಳುವುದು ನಮ್ಮ ವಾಡಿಕೆ. ನಮ್ಮ ಪೂರ‍್ವಜರ ಪ್ರಕಾರ ನಮ್ಮ ಅಂಗೈ ಮತ್ತು ಬೆರಳುಗಳಲ್ಲಿ ದೇವತೆಗಳು ವಾಸಿಸುತ್ತಾರೆ. ಅದೇ ಕೈಗಳಿಂದ ನಾವು ನಮ್ಮ ದೈನಂದಿನ ಕೆಲಸಗಳನ್ನು ಮಾಡುತ್ತೇವೆ. ಬೆಳಿಗ್ಗೆ ಎದ್ದಕೂಡಲೇ ಅಂಗೈಯ ದರ‍್ಶನ ಮಾಡುವುದರಿಂದ ದೇವತೆಗಳು ನಮಗೆ ದಿನವಿಡೀ ಎಲ್ಲ ಕೆಲಸಗಳಲ್ಲೂ ಸಹಾಯ ಮಾಡುತ್ತಾರೆ. ಆದುದರಿಂದ ಬೆಳಿಗ್ಗೆ ಎದ್ದಕೂಡಲೇ ಅಂಗೈಯ ದರ‍್ಶನ ಮಾಡಬೇಕು ಎಂಬುದು ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈಗ ಬೆಳಿಗ್ಗೆ ಎದ್ದ ಕೂಡಲೇ ನಾವು ನೋಡುವುದು ಲಕ್ಶ್ಮಿ, ಸರಸ್ವತಿ ಮತ್ತು ಗೌರಿಯ ಬದಲಾಗಿ Facebook, WhatsApp ಹಾಗೂ instragram. ಹೌದು, ತಾಂತ್ರಿಕ ಜಗತ್ತು ನಮನ್ನು ಎಶ್ಟು ಆವರಿಸಿದೆ ಅಂದರೆ ಹಿಂದಿನ ಕಾಲದಲ್ಲಿ ಯಾರು ಲೌಕಿಕ ಜಗತ್ತಿನ ಬಂದಗಳಿಂದ ಮುಕ್ತರಾಗಿರುತ್ತಾರೋ ಅವರನ್ನು ಸನ್ಯಾಸಿಗಳು ಎನುತ್ತಿದ್ದರು. ಅದೇ ಈಗ ಯಾರು ತಾಂತ್ರಿಕ ಜಗತ್ತಿಂದ ದೂರ ಉಳಿಯುತ್ತಾರೋ ಅವರೇ ಸನ್ಯಾಸಿಗಳು ಎನ್ನಬಹುದು. ಐನ್‌ಸ್ಟೈನ್ ಬಹಳ ಹಿಂದೆಯೇ ಹೇಳಿದ ಮಾತೊಂದು ಈಗ ನಾವು ನೆನಪಿಸಿಕೊಳ್ಳಲೇಬೇಕು :
“I fear the day technology will surpass our human interaction. The world will have a generation of idiots ”
ತಾಂತ್ರಿಕ ಜಗತ್ತು ಯಾವ ಮಟ್ಟದಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದರೆ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋಗಿ ಅಲ್ಲಿರುವ ಮಕ್ಕಳೊಡನೆ ಕೂಡಿ ಕ್ರಿಕೆಟ್ ಆಡುತ್ತಾ ಪಕ್ಕದ ಮನೆಯ ಗಾಜುಗಳನ್ನು ಪುಡಿ ಪುಡಿ ಮಾಡುವುದು, ರಸ್ತೆಗೆ ತಡೆಯಾಗುವಂತೆ ಕೋಕೋ ಆಡುತ್ತಾ ಹೋಗಿ ಬರುವವರ ಬಳಿ ಬೈಸಿಕೊಳ್ಳುವುದು, ಕಬಡ್ಡಿ ಆಡುತ್ತಾ ಬಿದ್ದು ಮೈ ಕೈ ಎಲ್ಲ ಗಾಯಗಳನ್ನು ಮಾಡಿಕೊಳ್ಳುವುದು, ಕಣ್ಣಾ ಮುಚ್ಚಾಲೆ ಆಡುತ್ತಾ ಯಾವುದೋ ಮನೆಯೊಳಗೆ ನುಗ್ಗಿ ಬಚ್ಚಿಟ್ಟುಕೊಳ್ಳುವುದು, ಲಗೋರಿ ಆಡುತ್ತಾ ಚೆಲ್ಲಾ ಪಿಲ್ಲಿಯಾಗಿ ಓಡುವುದು, ಸಾಕಾ ಬೇಕಾ ಆಟದಲ್ಲಿ ಒಬ್ಬರ ಮೇಲೆ ಒಬ್ಬರು ಎಗರುವುದು, ಮರ ಕೋತಿ ಆಟವಾಡುತ್ತ ಮಂಗನಿಂದ ಮಾನವ ಎಂಬಂತೆ ಮರಗಳನ್ನು ಹತ್ತುವುದು, ಇಶ್ಟೇ ಅಲ್ಲದೆ ಬಿಸಿಲು ಹೆಚ್ಚಾದಾಗ ಮನೆಯ ಒಳಗೆ ಅತವಾ ಮರದ ಕೆಳಗೆ ಕೂತು ಚೌಕಾ-ಬಾರಾ, ಅಳಿಗುಳಿ ಮಣೆ, ಸೆಟ್, ರಾಜ-ರಾಣಿ-ಕಳ್ಳ-ಪೋಲೀಸ್ ಮತಿತ್ತರ ಆಟಗಳನ್ನು ಆಡಬೇಕಿದ್ದ ಮಕ್ಕಳು, ಈಗ ಮೊಬೈಲ್ನಲ್ಲಿ Candy Crush, Subway Surf, Angry Birds ಹಾಗೂ Clash of Clans ಅಂತ ಆಟಗಳನ್ನು ಆಡಿಕೊಂಡು ಕಾಲ ಕಳೆಯುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳು ಅತವಾ ಮಾದ್ಯಮಗಳು ಎಂದು ಕರೆಸಿಕೊಳ್ಳುವ Facebook, Instragram, Twitter, Whatsapp ಹಾಗೂ ಮತ್ತಿತರ ಮಾದ್ಯಮಗಳು, ಜನರು ಮನೆಯಲ್ಲೇ ಕೂತು ಚಾಟ್ ಮಾಡುವ ಅವಕಾಶವನ್ನು ಒದಗಿಸಿಕೊಟ್ಟಿರುವುದರಿಂದ ಜನರು ಪರಸ್ಪರ ಬೇಟಿಯಾಗುವುದು, ವಿಚಾರ ವಿನಿಮಯ ಮಾಡಿಕೊಳ್ಳುವುದು, ಒಳ್ಳೆಯ ವಿಚಾರಗಳನ್ನು ವಿಮರ‍್ಶಿಸುವುದು ಹಾಗೂ ಚರ‍್ಚಿಸುವುದು ಬಹಳ ವಿರಳವಾಗಿದೆ. ಆಗಸ್ಟ್ 15ರಂದು ಬಾರತದ ಬಾವುಟ, ನವೆಂಬರ್ 1ರಂದು ಕನ್ನಡ ಬಾವುಟವನ್ನು Facebook ಸ್ಟೇಟಸ್ ಆಗಿ ಹಾಕಿಕೊಳ್ಳುವ ಈಗಿನ ಯುವಕರಲ್ಲಿ ದೇಶಬಕ್ತಿ ಹಾಗೂ ಬಾಶಾಬಿಮಾನ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬಾರತ ಬಾವುಟಕ್ಕೊಂದು Like, ಕರ‍್ನಾಟಕ ಬಾವುಟಕ್ಕೊಂದು Share ಎನ್ನುವ ಬದಲು, ಒಂದೇ ಮನಸ್ತಿತಿಯ ಯುವಕರು ಎಲ್ಲಾ ಸೇರಿ ಒಂದು ಗುಂಪನ್ನು ಮಾಡಿಕೊಂಡು ದೇಶದ ಹಾಗೂ ನಾಡಿನ ಬಗ್ಗೆ ಕಾಳಜಿ ಮತ್ತು ಚಿಂತನೆಗಳನ್ನು ಹಂಚಿಕೊಳ್ಳಬಹುದು.
”ಅತಿಯಾದರೆ ಅಮ್ರುತವೂ ವಿಶ” – ಈ ನಾಣ್ಣುಡಿ ಇಲ್ಲಿ ಕೂಡ ಅನ್ವಯವಾಗುತ್ತದೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹಿತಮಿತವಾಗಿ ಮತ್ತು ಸಮಯೋಚಿತವಾಗಿ ಬಳಸಿದರೆ, ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾದ ಮಾದ್ಯಮಗಳಾಗಬಹುದು. ಅಶ್ಟಕ್ಕೂ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳು ಯಾವ ದುರುದ್ದೇಶವನ್ನೂ ಹೊಂದಿಲ್ಲ. ಸುದ್ದಿಗಳನ್ನು ಶೀಗ್ರವಾಗಿ ಹಾಗೂ ಉತ್ತಮ ರೀತಿಯಲ್ಲಿ ಹಂಚಿಕೊಳ್ಳುವ ಸದುದ್ದೇಶ ಇದರೊಳಗಿದೆ. ಮಾತ್ರವಲ್ಲದೇ, ಜನರು ಒಂದು ವೇದಿಕೆಯಲ್ಲಿ ಒಟ್ಟುಗೂಡಲೂ ಕೂಡ ಇದೊಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಇಂದು ಪತ್ರಿಕೆ ಹಾಗೂ ಟಿ.ವಿ ಮಾದ್ಯಮಗಳಿಗಿಂತಲೂ ವೇಗವಾಗಿ ಸುದ್ದಿಯನ್ನು ಬಿತ್ತರಿಸುತ್ತಿರುವುದು ಇದೇ ಸಾಮಾಜಿಕ ಜಾಲತಾಣಗಳು. ಅಶ್ಟೇ ಅಲ್ಲದೆ ಅದೆಶ್ಟೋ ಬಾರಿ ಪಕ್ಶಪಾತಿಯ ಹಾಗೂ ಬೇಡದ ಸುದ್ದಿಗಳನ್ನೇ ಬಿತ್ತರಿಸಿ ಜನರ ಆಲೋಚನೆಗಳನ್ನೇ ಬುಡಮೇಲು ಮಾಡುತ್ತಿರುವ ಇತರ ಮಾದ್ಯಮಗಳನ್ನು ಬೆತ್ತಲಾಗಿಸುವ ಕೆಲಸವನ್ನೂ ಈ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. ಆದರೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುವುದರಿಂದ ಜನರ ಮಾನಸಿಕ ಸ್ತಿತಿ ಹದಗೆಡುವುದಲ್ಲದೆ ಒಂದು ಸ್ವಸ್ತ ಸಮಾಜ ರೂಪುಗೊಳ್ಳುವುದಕ್ಕೆ ಅಡ್ಡ ಗೋಡೆಯಾಗಿ ನಿಲ್ಲುತ್ತದೆ.
( ಚಿತ್ರ ಸೆಲೆ: wheelerblogs.files.wordpress.com )
ಇತ್ತೀಚಿನ ಅನಿಸಿಕೆಗಳು