ಸೊಳ್ಳೆಗಳೇಕೆ ಎಲ್ಲರಿಗೂ ಕಚ್ಚುವುದಿಲ್ಲ?

– ವಿಜಯಮಹಾಂತೇಶ ಮುಜಗೊಂಡ.

ಸೊಳ್ಳೆಗಳ ಕಾಟ ಅನುಬವಿಸದವರು ಯಾರಿಲ್ಲ? ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡದೆ ಗುಂಯ್ ಎಂದು ಸದ್ದು ಮಾಡುತ್ತಾ ತುಂಬಾ ತೊಂದರೆ ಕೊಡುತ್ತವೆ ಸೊಳ್ಳೆಗಳು. ಕೆಲವರು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದರೆ, ಇನ್ನೂ ಕೆಲವರು ತಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದರ ಪರಿವೆಯೇ ಇಲ್ಲದೆ ಹಾಯಾಗಿ ಗೊರಕೆ ಹೊಡೆಯುತ್ತಿರುತ್ತಾರೆ. ಸೊಳ್ಳೆಗಳು ಕೆಲವರನ್ನು ಕಚ್ಚುವುದಿಲ್ಲವೇ? ಅತವಾ ಕಚ್ಚಿದರೂ ಅವರಿಗೆ ಅದರ ಅರಿವಿರುವುದಿಲ್ಲವೇ ಎನ್ನುವ ಕೇಳ್ವಿ ಸಹಜವಾಗಿ ಮೂಡಿರುತ್ತದೆ.

ದಿಟವಾಗಿಯೂ ಸೊಳ್ಳೆಗಳು ಕೆಲ ಮಂದಿಗೆ ಕಚ್ಚುವುದಿಲ್ಲವಂತೆ!

ಸೊಳ್ಳೆಗಳು ಯಾರನ್ನು ಕಚ್ಚಬೇಕು, ಯಾರನ್ನು ಕಚ್ಚಬಾರದು ಎನ್ನುವ ವಿಶಯದಲ್ಲಿ ನಾಜೂಕು ಎಂದರೆ ನೀವು ನಂಬಲೇಬೇಕು. ಹೌದು, ಅರಕೆಗಳ ಪ್ರಕಾರ ಸೊಳ್ಳೆಗಳು ಕೆಲ ಮಂದಿಗೆ ಹೆಚ್ಚಾಗಿ ಕಚ್ಚುತ್ತವೆ ಎನ್ನುವುದು ತಿಳಿದು ಬಂದಿದೆ. “ಸೊಳ್ಳೆಗಳು ಕಚ್ಚಬೇಕೆಂದಿರುವ ಮಂದಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತವೆ, ಇದು ಮಂದಿಯ ಮಯ್ಯ ತೊಗಲಿನಿಂದ ಒಸರುವ ಕೆಮಿಕಲ್ ಮತ್ತು ಮಯ್ತೊಗಲಿನ ಬಗೆಯನ್ನು ಅವಲಂಬಿಸಿದೆ” ಎನ್ನುತ್ತಾರೆ ಅಮೆರಿಕಾದ ಸೊಳ್ಳೆ ತಡೆ ಕೂಟದ ಹುಳದರಿಗ(entomologist) ಜೋಸೆಪ್ ಕಾನ್ಲನ್. ಜೋಸೆಪ್ ಅವರು ಹೇಳುವಂತೆ ಈ ಕೆಳಗಿನ 4 ಬಗೆಯ ಮಂದಿಗೆ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆಯಂತೆ.

ಗರ‍್ಬಿಣಿಯರಿಗೆ ಸೊಳ್ಳೆಗಳ ಕಾಟ ಹೆಚ್ಚಂತೆ!

ಹೆಣ್ಣುಸೊಳ್ಳೆಗಳು ಕಾರ‍್ಬನ್ ಡೈಆಕ್ಸೈಡ್ ಬಗ್ಗೆ ವಿಶೇಶ ಒಲವನ್ನು ಹೊಂದಿವೆ. ಅವುಗಳ ಮಯ್ಯಲ್ಲಿರುವ ವಿಶೇಶ ನರಗಳು ಗಾಳಿಯಲ್ಲಿರುವ ಕಾರ‍್ಬನ್-ಡೈ-ಆಕ್ಸೈಡನ್ನು ಗುರುತಿಸಬಲ್ಲವು. ಬಸಿರಿರುವ ಹೆಂಗಸರು ಹೆಚ್ಚು ಕಾರ‍್ಬನ್-ಡೈ- ಆಕ್ಸೈಡ್ ಅನ್ನು ಹೊರಹಾಕುತ್ತಾರೆ. 2002ರಲ್ಲಿ ದ ಲ್ಯಾನ್ಸೆಟ್ ಮಾಂಜರಿಮೆ ಜರ‍್ನಲ್‌ನವರು ನಡೆಸಿದ ಅರಕೆಯೊಂದರಲ್ಲಿ 28 ವಾರಗಳ ತುಂಬು ಬಸಿರಿರುವ ಹೆಂಗಸರು ಬೇರೆಯವರಿಗಿಂತ ಸುಮಾರು 21% ರಶ್ಟು ಹೆಚ್ಚು ಕಾರ‍್ಬನ್-ಡೈ-ಆಕ್ಸೈಡ್ ಅನ್ನು ಹೊರಹಾಕುತ್ತಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಸೊಳ್ಳೆಗಳು ಗರ‍್ಬಿಣಿಯರನ್ನು ಹೆಚ್ಚಾಗಿ ಕಚ್ಚುತ್ತವೆ.

‘O’ ಗುಂಪಿನ ನೆತ್ತರು ಹೊಂದಿದವರು

ಮನುಶ್ಯರಿಗೆ ಮೆಚ್ಚಿನ ತಿಂಡಿ, ತಿನಿಸುಗಳಿರುವ ಹಾಗೆ, ಸೊಳ್ಳೆಗಳೂ ಕೆಲವು ರುಚಿಗಳ ಕುರಿತು ವಿಶೇಶ ಒಲವು ಹೊಂದಿವೆಯಂತೆ. ಜರ‍್ನಲ್ ಆಪ್ ಮೆಡಿಕಲ್ ಎಂಟಮಾಲಜಿ (Journal of Medical Entomology) ಯ ಅರಕೆಯ ಪ್ರಕಾರ, ಸೊಳ್ಳೆಗಳು ‘O’ ಗುಂಪಿನ ರಕ್ತ ಇರುವವರನ್ನು ಹೆಚ್ಚಾಗಿ ಕಚ್ಚುತ್ತವೆ ಎಂದು ತಿಳಿದುಬಂದಿದೆ. ‘O’ ಗುಂಪಿನ ರಕ್ತ ಹೊಂದಿರುವವರು ಸೊಳ್ಳೆಗಳು ಮೆಚ್ಚುವ ವಾಸನೆಯನ್ನು ಹೊರಹಾಕುತ್ತಿರಬಹುದು ಎನ್ನುವುದು ಕಾನ್ಲನ್ ಅವರ ಅನಿಸಿಕೆ.

ಬಿಯರ್ ಕುಡಿಯುವವರಿಗೆ ಸೊಳ್ಳೆಕಾಟ ಜಾಸ್ತಿ!

ಕೊಂಚ ತಮಾಶೆಯಾಗಿ ಹೇಳಬೇಕೆಂದರೆ ‘ಸೊಳ್ಳೆಗಳಿಗೂ ಎಣ್ಣೆಯೆಂದರೆ ಪಂಚಪ್ರಾಣ’. ಹಾಗಂತ ಸೊಳ್ಳೆಗಳು ಬಿಯರ್ ಕುಡಿಯುತ್ತವೆ ಎಂದಲ್ಲ. ಬಿಯರ್ ಕುಡಿದಾಗ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವಂತೆ! ಈ ಅರಕೆಯನ್ನು ಪ್ಲೋಸ್ ಒನ್ ಅರಿಮೆ ನಾಳ್ಕಡತ(scientific journal) ನಡೆಸಿತ್ತು. “ಜಪಾನಿನಲ್ಲಿ ನಡೆಸಿದ ಅರಕೆಯು, ಹೆಂಡವನ್ನು ಸೇವಿಸಿದ ಮಂದಿಗೆ ಸೊಳ್ಳೆಗಳ ಕಾಟ ಹೆಚ್ಚು ಎಂದು ತಿಳಿಸಿದೆ” ಎನ್ನುತ್ತಾರೆ ಹುಳದರಿಗ ಹ್ಯಾರಿಂಗ್ಟನ್.

ಬೆವರಿದಾಗ ಸೊಳ್ಳೆಗಳು ಕಚ್ಚುವುದು ಹೆಚ್ಚು

ಹೆಚ್ಚು ಬೆವರುವವರಿಗೆ ಸೊಳ್ಳೆ ಕಚ್ಚುವ ಸಾದ್ಯತೆ ಹೆಚ್ಚು. ಯಾಕೆಂದರೆ, ಬೆವರಿನೊಂದಿಗೆ ಮಯ್ಯಿಂದ ಹೊರಬರುವ ಲ್ಯಾಕ್ಟಿಕ್ ಹುಳಿ ಸೊಳ್ಳೆಗಳನ್ನು ಸೆಳೆಯುತ್ತದೆ. ಕಶ್ಟದ ಕೆಲಸ ಮಾಡಿದಾಗ ಏರುವ ಮೈಯ ಕಾವು ಕೂಡ ಸೊಳ್ಳೆಗಳಿಗೆ ಕಚ್ಚಲು ಕರೆಯೋಲೆ ನೀಡಿದ ಹಾಗೆ!

(ಮಾಹಿತಿ ಮತ್ತು ಚಿತ್ರ ಸೆಲೆ: time.comwikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Ravichandra Ravi says:

    ಲೇಕನ‌ ತುಂಬಾ ಚೆನಾಗಿದೆ

ಅನಿಸಿಕೆ ಬರೆಯಿರಿ: