ಲಿಂಗಮ್ಮನ ವಚನದ ಓದು

– ಸಿ.ಪಿ.ನಾಗರಾಜ.

ಲಿಂಗಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣೆ. ಈಕೆಯು ರಚಿಸಿರುವ ವಚನಗಳನ್ನು “ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋದೆಯ ವಚನಗಳು“ ಎಂದು ಕರೆದು, ಲಿಂಗಮ್ಮನ ಬಗ್ಗೆ ಸಾಹಿತ್ಯ ಚರಿತ್ರೆಕಾರರು ಈ ಕೆಳಕಂಡ ವಿವರಣೆಗಳನ್ನು ನಮೂದಿಸಿದ್ದಾರೆ. ಪುಣ್ಯಸ್ತ್ರೀ ಎಂದರೆ ಹೆಂಡತಿ/ಪತ್ನಿ ; ಬೋದೆ ಎಂದರೆ ಅರಿವು/ತಿಳಿವು/ಕಲಿಸುವಿಕೆ/ತಿಳುವಳಿಕೆ.

ಹೆಸರು: ಲಿಂಗಮ್ಮ.

ಗಂಡ: ಹಡಪದ ಅಪ್ಪಣ್ಣ.

ಅಪ್ಪಣ್ಣನು ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯಲ್ಲಿ ವೀಳ್ಯವನ್ನು ವಿತರಣೆ ಮಾಡುವ ಕಾಯಕವನ್ನು ಮಾಡುತ್ತಿದ್ದುದರಿಂದ, ಈತನಿಗೆ ಹಡಪದ ಅಪ್ಪಣ್ಣ ಎಂಬ ಹೆಸರು ಬಂದಿತು. ವೀಳ್ಯ ಎಂದರೆ ಎಲೆ ಅಡಕೆ ಸುಣ್ಣ ಮೊದಲಾದುವುಗಳನ್ನು ಒಳಗೊಂಡ ತಾಂಬೂಲ.

ಹಡಪ ಎಂಬ ಪದಕ್ಕೆ ಎರಡು ಬಗೆಯ ತಿರುಳುಗಳಿವೆ:

ಹಡಪ / ಅಡಪ / ಅಡೆಪ = 1) ಎಲೆ ಅಡಕೆಗಳನ್ನು ಇಟ್ಟುಕೊಳ್ಳುವ ಚೀಲ
2) ಗಡ್ಡ ಮೀಸೆ ತಲೆಗೂದಲನ್ನು ಅಂದವಾಗಿ ಕತ್ತರಿಸುವ ಇಲ್ಲವೇ ಕೂದಲನ್ನು ತೆಗೆಯುವ ಕೆಲಸಕ್ಕಾಗಿ ಬಳಸುವ ಸಲಕರಣೆಗಳನ್ನು ಇಟ್ಟುಕೊಳ್ಳುವ ಚೀಲ/ಚಿಕ್ಕ ಪೆಟ್ಟಿಗೆ.

ದೊರೆತಿರುವ ವಚನಗಳ ಸಂಕ್ಯೆ: 114

ವಚನಗಳ ಅಂಕಿತನಾಮ: ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.

======================================================

ಕಾಮವಿಲ್ಲ ಕ್ರೋಧವಿಲ್ಲ ಲೋಭವಿಲ್ಲ
ಮೋಹವಿಲ್ಲ ಮದವಿಲ್ಲ ಮತ್ಸರವಿಲ್ಲ
ಎಂಬ ಅಣ್ಣಗಳಿರಾ ನೀವು ಕೇಳಿರೊ ಹೇಳಿಹೆನು
ಕಾಮವಿಲ್ಲದವಂಗೆ ಕಳವಳವುಂಟೆ
ಕ್ರೋಧವಿಲ್ಲದವಂಗೆ ರೋಷವುಂಟೆ
ಲೋಭವಿಲ್ಲದವಂಗೆ ಆಸೆಯುಂಟೆ
ಮೋಹವಿಲ್ಲದವಂಗೆ ಪಾಶವುಂಟೆ
ಮದವಿಲ್ಲದವಂಗೆ ತಾಮಸವುಂಟೆ
ಮತ್ಸರವಿಲ್ಲದವನು ಮನದಲ್ಲಿ ಮತ್ತೊಂದ ನೆನೆವನೆ
ಇವು ಇಲ್ಲವೆಂದು ಮನವ ಕದ್ದು ನುಡಿವ
ಅಬದ್ಧರ ಮಾತ ಮೆಚ್ಚುವನೆ
ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.

ಹರೆಯಕ್ಕೆ ಕಾಲಿಟ್ಟ ಪ್ರತಿಯೊಂದು ಗಂಡು ಹೆಣ್ಣಿನ ಮಯ್ ಮನಗಳಲ್ಲಿ ನಿಸರ‍್ಗ ಸಹಜವಾದ ಕಾಮವೆಂಬುದು ತುಡಿಯುತ್ತಿರುತ್ತದೆ. ವ್ಯಕ್ತಿಯು ಹುಟ್ಟಿ ಬೆಳೆಯುವ ಕುಟುಂಬ ಮತ್ತು ಸಮಾಜದಲ್ಲಿನ ಸಂಪ್ರದಾಯಗಳು , ಕಟ್ಟುಪಾಡುಗಳು, ಆಚರಣೆಗಳು, ಆಸ್ತಿಪಾಸ್ತಿ ಹಣಕಾಸುಗಳ ಒಡೆತನ ಮತ್ತು ಹೊಂದಿರುವ ಹುದ್ದೆಗಳು ಮಾನವಜೀವಿಯ ಮನದಲ್ಲಿ ಕ್ರೋದ/ಲೋಬ/ಮೋಹ/ಮದ/ಮತ್ಸರವೆಂಬ ಒಳಮಿಡಿತಗಳು ಮೂಡುವುದಕ್ಕೆ ಕಾರಣವಾದ ಸಾಮಾಜಿಕ ಸಂಗತಿಗಳಾಗಿರುತ್ತವೆ. ಮಾನವಜೀವಿಯ ನಡೆನುಡಿಗಳನ್ನು ನಿಸರ‍್ಗ ಮತ್ತು ಸಾಮಾಜಿಕ ಸಂಗತಿಗಳ ಹಿನ್ನೆಲೆಯಲ್ಲಿ ನೋಡಿದಾಗ ಸಾವಿನ ಕೊನೆಗಳಿಗೆಯ ತನಕ ಪ್ರತಿಯೊಬ್ಬರಲ್ಲಿಯೂ ಈ ಎಲ್ಲಾ ಬಗೆಯ ಒಳಮಿಡಿತಗಳು ಇದ್ದೇ ಇರುತ್ತವೆ. ವ್ಯಕ್ತಿಯು ತನ್ನ ಮತ್ತು ಸಹಮಾನವರ ಒಳಿತಿಗಾಗಿ ಹಾಗೂ ಹೊಂದಾಣಿಕೆಯಿಂದ ಕೂಡಿದ ನೆಮ್ಮದಿಯ ಬದುಕಿಗಾಗಿ ಮಯ್ ಮನಗಳಲ್ಲಿ ತುಡಿಯುತ್ತಿರುವ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು ಸಮಾಜದ ನೀತಿನಿಯಮಗಳ ಎಲ್ಲೆಯೊಳಗೆ ಬಾಳಲು ಆಗುತ್ತದೆಯೇ ಹೊರತು, ಅಂತಹ ಒಳಮಿಡಿತಗಳೇ “ನನ್ನಲ್ಲಿ ಇಲ್ಲ“ ಎಂದು ಹೇಳಲು ಆಗುವುದಿಲ್ಲ. ಯಾರಾದರೂ “ನನ್ನ ಮಯ್ ಮನಗಳಲ್ಲಿ ಕಾಮ/ಕ್ರೋದ/ಲೋಬ/ಮೋಹ/ಮದ/ಮತ್ಸರವಿಲ್ಲ“ ಎಂದು ಹೇಳಿಕೊಂಡು ಮೆರೆದರೆ , ಅಂತಹ ವ್ಯಕ್ತಿಗಳು ತಮ್ಮ ನಯವಾದ ಮಾತುಗಾರಿಕೆಯಿಂದ ಸುಳ್ಳನ್ನೇ ದಿಟವೆಂದು ಜನರು ನಂಬುವಂತೆ ಮಾಡಿ, ಸಮಾಜವನ್ನು ವಂಚಿಸುವ ಕಲೆಯಲ್ಲಿ ಚೆನ್ನಾಗಿ ಪಳಗಿರುತ್ತಾರೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ಕಾಮ+ಇಲ್ಲ; ಕಾಮ=ಬಯಕೆ/ಇಚ್ಚೆ/ಆಸೆ/ಗಂಡು-ಹೆಣ್ಣುಗಳ ಮಯ್ ಮನಗಳು ಒಂದನ್ನೊಂದು ಜತೆಗೂಡಲು ಹಂಬಲಿಸುವ ಒಳಮಿಡಿತ; ಇಲ್ಲ=ಗೋಚರಿಸದು/ಕಂಡುಬರದು ; ಕ್ರೋಧ+ಇಲ್ಲ; ಕ್ರೋಧ=ರೇಗು/ಸಿಟ್ಟು/ಕೋಪ/ಆಕ್ರೋಶ/ವ್ಯಕ್ತಿಯು ಆಸೆಪಟ್ಟ ವಸ್ತುಗಳು ದೊರೆಯದಿದ್ದಾಗ ಇಲ್ಲವೇ ಆತನ ಎಣಿಕೆಯಂತೆ ಕೆಲಸಗಳು ನಡೆಯದಿದ್ದಾಗ ಮಯ್ ಮನಗಳಲ್ಲಿ ಕೆರಳುವ ಒಳಮಿಡಿತ; ಲೋಭ+ಇಲ್ಲ; ಲೋಭ=ಅತಿಯಾಸೆ/ದುರಾಸೆ/ಜಿಪುಣತನ/ಆಸ್ತಿಪಾಸ್ತಿ ಹಣಕಾಸು ಒಡವೆ ವಸ್ತುಗಳೆಲ್ಲವನ್ನೂ ಹೆಚ್ಚುಹೆಚ್ಚಾಗಿ ಗಳಿಸಿ ಕೂಡಿಡಬೇಕೆಂಬ ಆಸೆ; ಮೋಹ+ಇಲ್ಲ; ಮೋಹ=ಯಾವುದೇ ಒಂದು ವಸ್ತು/ವ್ಯಕ್ತಿ/ಜಾಗ/ಕೆಲಸದ ಬಗ್ಗೆ ಅತಿಯಾದ ಒಲವು/ಸೆಳೆತಕ್ಕೆ ಒಳಗಾಗಿರುವುದು; ಮದ=ಸೊಕ್ಕು/ ದರ‍್ಪ/ಅಮಲು/ನಾನೇ ಎಲ್ಲವನ್ನೂ ತಿಳಿದವನು-ನಾನೇ ಎಲ್ಲರಿಗಿಂತ ದೊಡ್ಡವನು-ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎಂಬ ಒಳಮಿಡಿತ; ಮತ್ಸರ+ಇಲ್ಲ; ಮತ್ಸರ=ಹೊಟ್ಟೆಕಿಚ್ಚು/ಕರುಬು/ಇತರರಿಗೆ ಉಂಟಾದ ಒಳಿತನ್ನು ಕಂಡು ತನಗೆ ಅಂತಹುದು ದೊರೆಯಲಿಲ್ಲವೆಂಬ ಸಂಕಟದಿಂದ ಮನದಲ್ಲಿ ಕುದಿಯುವ ಒಳಮಿಡಿತ; ಎಂಬ=ಎನ್ನುವ/ಎಂದು ಹೇಳುವ; ಅಣ್ಣಗಳು=ಸಮಾಜದಲ್ಲಿ ದೊಡ್ಡದೊಡ್ಡ ಗದ್ದುಗೆಯಲ್ಲಿರುವ ವ್ಯಕ್ತಿಗಳು / ಗುರುಹಿರಿಯರು / ಜಾತಿ ಜಗದ್ಗುರುಗಳು / ದೇವಮಾನವರು; ಅಣ್ಣಗಳಿರಾ=ಗುರುಹಿರಿಯರಾದ ವ್ಯಕ್ತಿಗಳನ್ನು ಕುರಿತು ಮಾತನಾಡುವಾಗ ಬಳಸುವ ಪದ; ಕೇಳಿರೊ=ಕೇಳಿಸಿಕೊಳ್ಳಿ; ಹೇಳಿ+ಇಹೆನು; ಇಹೆನು=ಇರುವೆನು; ಹೇಳಿಹೆನು=ಹೇಳುತ್ತಿದ್ದೇನೆ;

ಕಾಮ+ಇಲ್ಲದ+ಅವಂಗೆ; ಅವಂಗೆ=ಅವನಿಗೆ ; ಕಾಮವಿಲ್ಲದವಂಗೆ=ಕಾಮವಿಲ್ಲದವನಿಗೆ ; ಕಳವಳ+ಉಂಟೆ; ಕಳವಳ=ತಳಮಳ/ಕಸವಿಸಿ/ಚಿಂತೆ/ಏನಾಗುವುದೋ ಎಂಬ ಗಾಬರಿ/ತಲ್ಲಣ; ಉಂಟೆ=ಇರುತ್ತದೆಯೇ/ಇರುವುದೇ; ಕ್ರೋಧ+ಇಲ್ಲದ+ಅವಂಗೆ; ಕ್ರೋಧವಿಲ್ಲದವಂಗೆ=ಕ್ರೋಧವಿಲ್ಲದವನಿಗೆ; ರೋಷ+ಉಂಟೆ; ರೋಷ=ಸಿಟ್ಟು/ಕೋಪ/ಆಕ್ರೋಶ; ಲೋಭ+ಇಲ್ಲದ+ಅವಂಗೆ; ಲೋಭವಿಲ್ಲದವಂಗೆ=ಲೋಬವಿಲ್ಲದವನಿಗೆ; ಆಸೆ+ಉಂಟೆ; ಆಸೆ=ಬಯಕೆ/ಏನನ್ನಾದರೂ ಪಡೆಯಬೇಕೆಂಬ ಹಂಬಲ; ಮೋಹ+ಇಲ್ಲದ+ಅವಂಗೆ; ಮೋಹವಿಲ್ಲದವಂಗೆ=ಮೋಹವಿಲ್ಲದವನಿಗೆ; ಪಾಶ+ಉಂಟೆ; ಪಾಶ=ಹಗ್ಗ/ನೇಣು/ಕೊರಳಿಗೆ ಹಾಕಿ ಎಳೆಯುವ ಕುಣಿಕೆ/ಯಾವುದೇ ವಸ್ತು-ವ್ಯಕ್ತಿ-ಸಂಗತಿಯ ಬಗ್ಗೆ ಅತಿಹೆಚ್ಚಿನ ಸೆಳೆತ/ತುಡಿತ; ಮದ+ಇಲ್ಲದ+ಅವಂಗೆ; ಮದವಿಲ್ಲದವಂಗೆ=ಮದವಿಲ್ಲದವನಿಗೆ; ತಾಮಸ+ಉಂಟೆ; ತಾಮಸ=ಕತ್ತಲೆ/ತಿಳುವಳಿಕೆಯಿಲ್ಲದಿರುವುದು/ನೀಚತನ/ಕೆಟ್ಟನಡೆನುಡಿ; ಮತ್ಸರ+ಇಲ್ಲದ+ಅವನು; ಮನದ+ಅಲ್ಲಿ; ಮನದಲ್ಲಿ=ಮನಸ್ಸಿನಲ್ಲಿ; ಮತ್ತು+ಒಂದ; ಮತ್ತೊಂದ=ಇನ್ನೊಂದನ್ನು/ಬೇರೆಯದನ್ನು; ನೆನೆ=ಕಲ್ಪಿಸಿಕೊಳ್ಳುವುದು/ಸ್ಮರಿಸಿಕೊಳ್ಳುವುದು/ಬಯಸುವುದು; ನೆನೆವನೆ=ನೆನೆಯುತ್ತಾನೆಯೇ/ಬಯಸುತ್ತಾನೆಯೇ/ಸ್ಮರಿಸಿಕೊಳ್ಳುತ್ತಾನೆಯೇ;

ಮನದಲ್ಲಿ ಮತ್ತೊಂದ ನೆನೆವನೆ=ಇತರರ ಮುಂದೆ ಬಾಯಲ್ಲಿ ಬಹು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ, ತಾನು ಗುಣವಂತನೆಂದು ತನ್ನನ್ನು ತಾನೇ ಹಾಡಿಹೊಗಳಿಕೊಳ್ಳುತ್ತಾ, ಮನದಲ್ಲಿ ಬಹುಬಗೆಯ ಒಳಮಿಡಿತಗಳಿಂದ ಕೂಡಿರುವವನು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಳು; ಇಲ್ಲ+ಎಂದು; ಇವು ಇಲ್ಲವೆಂದು=ಕಾಮ/ಕ್ರೋದ/ಲೋಬ/ಮೋಹ/ಮದ/ಮತ್ಸರಗಳೆಂಬ ಒಳಮಿಡಿತಗಳು ನನ್ನ ಮಯ್ ಮನಗಳಲ್ಲಿ ಇಲ್ಲವೆಂದು; ಮನವ=ಮನಸ್ಸನ್ನು ; ಮನವ ಕದ್ದು ನುಡಿವ=ಮನದಲ್ಲಿ ಉಂಟಾಗುತ್ತಿರುವ ಒಳಮಿಡಿತಗಳನ್ನು ಮರೆಮಾಚಿ, ಬಹಿರಂಗದಲ್ಲಿ ಅವು ಇಲ್ಲವೆಂದು ಹೇಳುತ್ತಿರುವ / ತನ್ನ ಮನಸ್ಸಿಗೆ ತಾನೇ ವಂಚನೆ ಮಾಡಿಕೊಂಡು ಮಾತನಾಡುತ್ತಿರುವ ; ಅಬದ್ಧ=ಸುಳ್ಳು/ದಿಟವಲ್ಲದ/ತಪ್ಪು/ವಾಸ್ತವವಲ್ಲದ; ಬದ್ಧ=ಸತ್ಯ/ದಿಟ/ನಿಜ; ಅಬದ್ಧರು=ಸುಳ್ಳುಗಾರರು/ಕಪಟಿಗಳು/ಮೋಸಗಾರರು/ವಂಚಕರು; ಮಾತ=ಮಾತುಗಳನ್ನು/ನುಡಿಗಳನ್ನು; ಮೆಚ್ಚು=ಒಪ್ಪು/ಸಮ್ಮತಿಸು/ಒಲಿ; ಮೆಚ್ಚುವನೆ=ಮೆಚ್ಚುತ್ತಾನೆಯೆ/ಮೆಚ್ಚಿಕೊಳ್ಳುತ್ತಾನೆಯೆ; ಅಪ್ಪಣ್ಣ=ಶಿವಶರಣೆ ಲಿಂಗಮ್ಮನ ಗಂಡ; ಅಪ್ಪಣ್ಣಪ್ರಿಯ=ಅಪ್ಪಣ್ಣನಿಗೆ ಪ್ರಿಯನಾದ/ಆಪ್ತನಾದ/ಒಲವಿಗೆ ಪಾತ್ರನಾದ; ಚೆನ್ನಬಸವಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ; ಅಪ್ಪಣ್ಣಪ್ರಿಯ ಚೆನ್ನಬಸವಣ್ಣ=ಲಿಂಗಮ್ಮನು ರಚಿಸಿದ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ;

ಅಬದ್ಧರ ಮಾತ ಮೆಚ್ಚುವನೆ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ=ಮನದೊಳಗಿನ ಬಹುಬಗೆಯ ಒಳಮಿಡಿತಗಳನ್ನು ಮುಚ್ಚಿಕೊಂಡು, ಜನರನ್ನು ವಂಚಿಸುತ್ತಾ, ಸುಳ್ಳನ್ನಾಡುವ ಕಪಟ ವ್ಯಕ್ತಿಗಳನ್ನು ಒಪ್ಪಿಕೊಳ್ಳಬಾರದೆಂಬ / ಅಂತಹ ನೀಚ ವ್ಯಕ್ತಿಗಳಿಂದ ದೂರವಿರಬೇಕೆಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ. ಯಾವುದೇ ಒಬ್ಬ ವ್ಯಕ್ತಿಯು ಸಂಸಾರಿಯಾಗಿರಲಿ ಇಲ್ಲವೇ ಸನ್ಯಾಸಿಯಾಗಿರಲಿ ಇಲ್ಲವೇ ಮತ್ತೇನೆ ಆಗಿದ್ದರೂ ತನ್ನ ಜೀವನದ ಉದ್ದಕ್ಕೂ ಒಂದಲ್ಲ ಒಂದು ಕಾರಣದಿಂದಾಗಿ “ಕಳವಳ/ರೋಶ/ಆಸೆ/ಪಾಶ/ತಾಮಸದ ಒಳಮಿಡಿತಗಳಿಂದ“ ಪರಿತಪಿಸುತ್ತಿರುತ್ತಾನೆ. ಬೀಸುತ್ತಿರುವ ಗಾಳಿಯ ಹೊಡೆತಕ್ಕೆ ತಕ್ಕಂತೆ ಕಡಲಿನಲ್ಲಿ ನೀರಿನ ಅಲೆಗಳು ಹೇಗೆ ಸದಾಕಾಲ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಏರಿಳಿತಕ್ಕೆ ಒಳಗಾಗುತ್ತಿರುತ್ತವೆಯೋ ಅಂತೆಯೇ ಮಾನವ ಜೀವಿಯು ಜೀವಂತವಾಗಿರುವ ತನಕ ಮಯ್ ಮನಗಳಲ್ಲಿ ಒಳಮಿಡಿತಗಳು ನಿರಂತರವಾಗಿರುತ್ತವೆ ಎಂಬ ವಾಸ್ತವವನ್ನು ಈ ವಚನವು ತಿಳಿಸುತ್ತದೆ)

( ಚಿತ್ರ ಸೆಲೆ:  shivasharaneyaru )Categories: ನಲ್ಬರಹ

ಟ್ಯಾಗ್ ಗಳು:, , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s