ಲ್ಯಾಕ್ಟೋಸ್ ಇಂಟಾಲರನ್ಸ್ – ಹಾಲನ್ನು ಅರಗಿಸಿಕೊಳ್ಳಲಾಗದ ತೊಂದರೆ!

 

– ಕೆ.ವಿ.ಶಶಿದರ.

ಬಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಇರುವ ಮೇಲ್ಮೆ ಬೇರಾವುದಕ್ಕೂ ಇಲ್ಲ. ಹುಟ್ಟುವ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಾವಶ್ಯ. ಮಗುವಿನ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ಪ್ರಾತಮಿಕ ಹಂತದಲ್ಲಿ ದೇಹದ ಬೆಳವಣಿಗೆಯನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಪ್ರಮುಕ ಪಾತ್ರ ವಹಿಸುವುದು ಮೊದಲ ಹತ್ತು ದಿನದ ಎದೆಹಾಲು. ಈ ಹಾಲನ್ನೇ ಕೊಲಸ್ಟ್ರಮ್ ಎನ್ನುವುದು. ದೇಹದ ಬೆಳವಣಿಗೆಗೆ ಅವಶ್ಯವಿರುವಶ್ಟು ಎಲ್ಲಾ ರೀತಿಯ ವಿಟಮಿನ್‍ಗಳು, ಕನಿಜಗಳು, ಕಾರ‍್ಬೋಹೈಡ್ರೇಟ್, ಕೊಬ್ಬು ಈ ಹಾಲಿನಲ್ಲಿ ಸಿಗುತ್ತವೆ.

ಹುಟ್ಟಿದಾಗಿನಿಂದ ಕನಿಶ್ಟ ಒಂದು ಒಂದೂವರೆ ವರ‍್ಶ ಹಾಲೇ ಕಂದಮ್ಮಗಳ ಬೆಳವಣಿಗೆಗೆ ಮೂಲ. ಎಲ್ಲಾ ರೀತಿಯ ಪರಿಪೂರ‍್ಣ ಆಹಾರ. ಅದಕ್ಕೆ ಹಾಲನ್ನು ಅಮ್ರುತಕ್ಕೆ ಹೋಲಿಸಿರುವುದು. ಇಂತಹ ಒಂದು ದ್ರವ್ಯ ಮಾನವನ ದೇಹಕ್ಕೆ ಬೇಡವಾಗಲು ಸಾದ್ಯವೇ? ಸಾದ್ಯ ಎನ್ನುತ್ತದೆ ವಿಜ್ನಾನ. ವಿಪರ‍್ಯಾಸವೆಂದರೆ ಬಹಳಶ್ಟು ಮಂದಿ ತಮಗೆ ಅರಿವಿಲ್ಲದೆ ಈ ಕಡುದಿಗಿಲಿಗೆ(phobia) ತುತ್ತಾಗಿದ್ದಾರೆ. ಮತ್ತೊಂದು ಸೋಜಿಗದ ವಿಶಯವೆಂದರೆ ಈ ಪೋಬಿಯಾ ಇರುವುದು ಅವರಾರಿಗೂ ತಿಳಿದೇ ಇಲ್ಲ! ಇದರಿಂದ ಯಾವುದೇ ರೀತಿಯ ಪ್ರಾಣಾಪಾಯ ಇಲ್ಲದಿರುವುದು ಇದಕ್ಕೆ ಮೂಲ ಕಾರಣ. ಈ ಪೋಬಿಯಾವನ್ನೇ ಲ್ಯಾಕ್ಟೋಸ್ ಇಂಟಾಲರೆನ್ಸ್/ತಾಳಮೆ ಎನ್ನುವುದು.

ಬಾರತ ದೇಶವನ್ನು ಪರಿಗಣಿಸಿದಲ್ಲಿ ಪ್ರತಿ ನಾಲ್ವರಲ್ಲಿ ಮೂರು ಜನ ಲ್ಯಾಕ್ಟೋಸ್ ತಾಳಮೆಗೆ ತುತ್ತಾಗಿದ್ದಾರೆ. ಅವರುಗಳಿಗೆ ತಾವು ಸೇವಿಸಿದ ಹಾಲಾಗಲಿ, ಹಾಲಿನ ಉತ್ಪನ್ನವಾಗಲಿ ಅರಗುವುದಿಲ್ಲ. ಹಾಲು ಅತವಾ ಹಾಲಿನಿಂದ ಮಾಡಿದ ಯಾವುದೇ ಪದಾರ‍್ತವಾಗಲಿ ದೇಹದಲ್ಲಿ ಅರಗಲು ಅದರಲ್ಲಿನ ಲ್ಯಾಕ್ಟೋಸ್(lactose) ಒಡೆಯಬೇಕಾದ್ದು ಅನಿವಾರ‍್ಯ. ಈ ಒಡೆತಕ್ಕೆ ಪೂರಕವಾದದ್ದು “ಲ್ಯಾಕ್ಟೇಸ್“(lactase) ಎಂಬ ಕಿಣ್ವ. ಈ ಕಿಣ್ವ ದೇಹದಲ್ಲಿ ಉತ್ಪಾದನೆ ಆಗದಿದ್ದಲ್ಲಿ ಲ್ಯಾಕ್ಟೋಸ್ ತಾಳಮೆಗೆ ತುತ್ತಾಗುವುದು ಶತಸಿದ್ದ. ಈ ಕೊರತೆ 74% ಮಂದಿ ಬಾರತೀಯರಲ್ಲಿದೆ.

ಲ್ಯಾಕ್ಟೋಸ್ ತಾಳಮೆ ಎಂದರೇನು? ಅದರ ಲಕ್ಶಣಗಳೇನು?

ಲ್ಯಾಕ್ಟೋಸ್ ತಾಳಮೆ ಎಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಗುವಿಕೆಯಲ್ಲಾದ ಏರುಪೇರು. ಇದರ ಲಕ್ಶಣಗಳು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿದ 30 ನಿಮಿಶದಿಂದ 2 ಗಂಟೆಯ ಒಳಗಾಗಿ ಕಾಣಿಸಿಕೊಳ್ಳುತ್ತವೆ. ಹೊಟ್ಟೆಯ ಬಾಗದಲ್ಲಿ ಸೆಳೆತ ಹಾಗೂ ಉಬ್ಬರ, ಕರುಳಿನಲ್ಲಿ ಗಾಳಿ ತುಂಬುವಿಕೆ, ಬೇದಿ, ವಾಕರಿಕೆ ಮುಂತಾದವು ಇದರ ಪ್ರಮುಕ ಲಕ್ಶಣಗಳು.

ಲ್ಯಾಕ್ಟೋಸ್ ತಾಳಮೆಗೆ ಕಾರಣವಾದ ಲ್ಯಾಕ್ಟೇಸ್ ಕಿಣ್ವದ ಕೊರತೆಯನ್ನು ಹಲವು ಬಾಗಗಳಾಗಿ ವಿಂಗಡಿಸಬಹುದು

ಮೊದಲ ಹಂತದ ಲ್ಯಾಕ್ಟೇಸ್ ಕೊರತೆ: ವಿಶ್ವಾದ್ಯಂತ ಕಂಡುಬರುತ್ತಿರುವ ಲ್ಯಾಕ್ಟೋಸ್ ತಾಳಮೆಗೆ ಮೊದಲನೆಯದಾಗಿ ಲ್ಯಾಕ್ಟೇಸ್ ಎಂಬ ಕಿಣ್ವದ ಕೊರತೆಯೇ ಮೂಲ ಕಾರಣ. ಇದು ವಂಶಪಾರಂಪರ‍್ಯವಾಗಿ ಹರಿದು ಬಂದ ಕೊರತೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ದೈನಂದಿನ ಅವಲಂಬನೆ ಕಡಿಮೆಯಾದಾಗ ಈ ಕೊರತೆ ಕಂಡುಬರುತ್ತದೆ. ಎರಡು ವರುಶ ವಯಸ್ಸಾದ ನಂತರ ಅಂದರೆ ತಾಯಿ ಅತವಾ ಬಾಟಲ್ ಹಾಲಿನ ಮೇಲಿನ ಅವಲಂಬನೆ ನಿಂತಾಗ ಇದರ ಕೊರತೆ ಪ್ರಾರಂಬವಗಬಹುದು.

ಎರಡನೆ ಹಂತದ ಲ್ಯಾಕ್ಟೇಸ್ ಕೊರತೆ: ಇದು ಸಣ್ಣ ಕರುಳಿನ ತೊಂದರೆಯಿಂದ ಉಂಟಾಗಬಹುದಾದ ಲ್ಯಾಕ್ಟೇಸ್ ಕೊರತೆ. ಯಾವುದೇ ವಯೋಮಾನದವರಲ್ಲೂ ಈ ತೊಂದರೆ ಕಾಣಿಸಿಕೊಳ್ಳಬಹುದು. ಈ ಕೆಳಗಿನ ಕಾರಣಗಳಿಂದಾಗಿ ಈ ಕೊರೆತೆ ಕಂಡುಬರಬಹುದು;

  1. ಸಣ್ಣ ಕರುಳಿನ ಶಸ್ತ್ರ ಚಿಕಿತ್ಸೆ
  2. ಬೇರೆ ಯಾವುದೋ ಕಾಯಿಲೆ ಗುಣಪಡಿಸಲು ಸೇವಿಸಿದ ಔಶದಿಗಳು
  3. ಹೊಟ್ಟೆ ಮತ್ತು ಕರುಳಿಗೆ ತಗುಲಿರುವ ಸೋಂಕು
  4. ಕ್ಯಾನ್ಸರ್ ಆದಾಗ ಕರುಳಿನ ಬಾಗಕ್ಕೆ ನೀಡುವ ಕಿಮೋತೆರಪಿ
  5. ಹೊಟ್ಟೆಯಲ್ಲಿನ ಗ್ಲೂಟೆನ್‍ನಿಂದಾದ ಅಡ್ಡಪರಿಣಾಮ
  6. ಹೆಚ್ಚುಕಾಲದಿಂದ ಆಂಟಿಬಯೋಟಿಕ್ಸ್ ತೆಗೆದುಕೊಳ್ಳುತ್ತಿರುವುದು

ಲ್ಯಾಕ್ಟೇಸ್ ಉತ್ಪಾದನೆಯ ಇಳಿತ ಸೆಕೆಂಡರಿ ಲ್ಯಾಕ್ಟೇಸ್ ಕೊರತೆಯಲ್ಲಿ ತಾತ್ಕಾಲಿಕವಾಗಿರುವ ಸಾದ್ಯತೆಯಿದೆ.

ಲ್ಯಾಕ್ಟೇಸ್ ಕೊರತೆ ಹುಟ್ಟುವ ಮಕ್ಕಳಲ್ಲೂ ಸಹ ಕಾಡುತ್ತದೆ. ಈ ಕೊರತೆ ಬಹಳ ಅಪರೂಪ. ಇದಕ್ಕೆ ಮೂಲವಾಗಿ ತಂದೆ-ತಾಯಿಯಲ್ಲಿ ಲ್ಯಾಕ್ಟೇಸ್ ಕೊರತೆಯ ದೋಶಯುಕ್ತ ಜೀನ್ ಇದ್ದು ಅದು ಮಗುವಿಗೆ ಬಂದಲ್ಲಿ ಮಾತ್ರ ಈ ಕೊರತೆ ಕಂಡುಬರುವ ಸಾದ್ಯತೆಯಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು ದೇಹಕ್ಕೆ ಅವಶ್ಯವಿರುವ ಕ್ಯಾಲ್ಶಿಯಂ, ಪ್ರೋಟೀನ್, ‘ಎ’, ಬಿ12 ಹಾಗೂ ‘ಡಿ’ವಿಟಮಿನ್‍ಗಳನ್ನು ನೀಡುವುದರಿಂದ ಇದು ಒಂದು ರೀತಿಯ ಸಮತೋಲನ ಆಹಾರ. ಲ್ಯಾಕ್ಟೋಸ್ ತಾಳಮೆ ಹೊಂದಿರುವವರು ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ಸಂಪೂರ‍್ಣವಾಗಿ ತ್ಯಜಿಸಿದಲ್ಲಿ ಇವೆಲ್ಲವುಗಳಿಂದ ವಂಚಿತರಾಗುತ್ತಾರೆ. ಬೇರೆ ಮೂಲಗಳಿಂದ ಇವುಗಳನ್ನು ಸೇವಿಸದಿದ್ದಲ್ಲಿ ಕೆಲವೊಂದು ಕಾಯಿಲೆಗಳಿಗೂ ತುತ್ತಾಗುವ ಸಂಬವವಿರುತ್ತದೆ. ಪ್ರಮುಕವಾಗಿ ಮೂಳೆಗೆ ಸಂಬಂದಿಸಿದ ಆಸ್ಟಿಯೊಪೊರೋಸಿಸ್. ಮೂಳೆಗಳ ಬಲಹೀನತೆ.

ಲ್ಯಾಕ್ಟೋಸ್ ತಾಳಮೆಯಿಂದ ಪ್ರಾಣಾಪಾಯ ಇಲ್ಲ ನಿಜ. ಆದರೆ ಹಾಲಿನಿಂದ ದೊರಕಬಹುದಾದ, ದೇಹದ ಆರೋಗ್ಯಕ್ಕೆ ಪೂರಕವಾದ ವಿಟಮಿನ್‍ಗಳು, ಪ್ರೋಟೀನ್‍ಗಳು, ಕನಿಜಗಳು, ಕೊಬ್ಬು ಮುಂತಾವುಗಳನ್ನು ಬೇರೆ ಬೇರೆ ಮೂಲಗಳಿಂದ ಪೂರೈಸಲೇ ಬೇಕು. ಇಲ್ಲವಾದಲ್ಲಿ ಹಾಲಿಲ್ಲದೇ ದೋಶ ಮುಕ್ತ ಜೀವನ ನಿರ‍್ವಹಣೆ ಅಸಾದ್ಯ.

(ಮಾಹಿತಿ ಸೆಲೆ: webmd.com, en.wikipedia.org, nhs.uk)
(ಚಿತ್ರ ಸೆಲೆ: archive.gosanangelo.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: