ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಹಿಮದ ಮಹಾಗೋಡೆ

ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಮಹಾಗೋಡೆ ನಿರ‍್ಮಾಣವಾಗಿರುವುದು ಹಿಮದಿಂದ. ಈ ಮಾರ‍್ಗ ಉತ್ತರ ಜಪಾನಿನ ಆಲ್ಪ್ಸ್ ಮೂಲಕ ಹಾದುಹೋಗುತ್ತದೆ. ಈ ಮಾರ‍್ಗ  ಪೂರ‍್ಣಗೊಂಡಿದ್ದು 1971ರಲ್ಲಿ, ಈ ರಸ್ತೆ ಟೊಯಾಮೋ ನಗರವನ್ನು ಒಮಾಚಿ ಪಟ್ಟಣದೊಂದಿಗೆ ಸಂಪರ‍್ಕಿಸುತ್ತದೆ. ಈ ಮಾರ‍್ಗದಲ್ಲಿ ಅನೇಕ ವಿದವಾದ ಸಾರಿಗೆ ಸಂಚಾರ ವ್ಯವಸ್ತೆಯಿದೆ. ಕೇಬಲ್ ಕಾರುಗಳು, ಟ್ರಾಲಿ ಬಸ್ಸುಗಳು ಮತ್ತು ರೋಪ್ ವೇ ಮೂಲಕ ಈ ದುರ‍್ಗಮ ಹಾದಿಯನ್ನು ಕ್ರಮಿಸಬಹುದು. ಟಟೆಯಾಮ ಆಲ್ಪೈನ್ ಮಾರ‍್ಗದ ಉದ್ದ ಅಂದಾಜು 22 ಕಿಲೋಮೀಟ‍ರ್. ಈ ಮಾರ‍್ಗದ ಎರಡೂ ಬದಿಯಲ್ಲಿ ಹಿಮದಿಂದ ನಿರ‍್ಮಿತವಾದ ಅದ್ಬುತ ಗೋಡೆಯನ್ನು ಕಾಣಬಹುದು. ಈ ಗೋಡೆಗಳು ಕೆಲವು ಬಾಗದಲ್ಲಿ ಇಪ್ಪತ್ತು ಮೀಟ‍ರ್ ಎತ್ತರವನ್ನು ತಲಪುತ್ತವೆ. ಸಮುದ್ರ ಮಟ್ಟದಿದ 2,450 ಮೀಟ‍ರ್ ಎತ್ತರವಿರುವ ಟಟೆಯಾಮ ಪರ‍್ವತ ಶ್ರೇಣಿಯಲ್ಲಿ ಈ ರಸ್ತೆ ನಿರ‍್ಮಾಣವಾಗಿದೆ.

ಟಟೆಯಾಮಾ ಕುರೋಬೆ ಆಲ್ಪೈನ್ ಮಾರ‍್ಗದ ಪ್ರಮುಕ ಆಕರ‍್ಶಣೆಯೆಂದರೆ ಟಟೆಯಾಮ ಪರ‍್ವತ ಶ್ರೇಣಿಯ ಬವ್ಯ ದ್ರುಶ್ಯಾವಳಿಗಳು. ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರವಾಸಿಗರು ವರ‍್ಶದ ವಿವಿದ ರುತುಗಳಲ್ಲಿ ವಿವಿದ ದ್ರುಶ್ಯಾವಳಿಗಳನ್ನು ನೋಡಿ ಆನಂದಿಸಬಹುದು. ವಸಂತ ರುತುವಿನಲ್ಲಿ ರಸ್ತೆಯ ಮೇಲಿನ ಬಾಗವಾದ ಮಿಡಗಹರಾ ಮತ್ತು ಮುರೊಡೊದಲ್ಲಿ ಸಂಗ್ರಹವಾದ ಹಿಮವು ನಯನ ಮನೋಹರವಾದ ಹಿಮ ಕಾರಿಡಾ‍ರ್ ರೂಪಿಸುತ್ತದೆ. ಈ ಹಾದಿಯಲ್ಲಿ, ಮುರೊಡೊ ಸುತ್ತಮುತ್ತಲಿನ ಕಾರಿಡಾರ್ ನ ಒಂದು ವಿಬಾಗವು ಪಾದಚಾರಿಗಳಿಗೆ ಏಪ್ರಿಲ್ 15ರಿಂದ ಜೂನ್ 25ರ ವರೆಗೂ ತೆರೆದಿರುತ್ತದೆ.

ಜಪಾನಿನ ಆಲ್ಪ್ಸ್ ಹೇರಳವಾದ ಹಿಮಪಾತಕ್ಕೆ ಹೆಸರುವಾಸಿ. ಈ ಮಾರ‍್ಗವನ್ನು “ಯುಕಿ ನೊ ಓಟಾನಿ” ಎಂದು ಕರೆಯಲಾಗುತ್ತದೆ.  ಯುಕಿ ನೊ ಓಟಾನಿ ಎಂದರೆ “ಹಿಮದ ದೊಡ್ಡ ಕಣಿವೆ” ಎಂದರ‍್ತ.  ಈ ಕಣಿವೆ ಮಾರ‍್ಗದಲ್ಲಿ ನವೆಂಬ‍ರ್ ನಡುವಿನಿಂದ ಏಪ್ರಿಲ್ ಆರಂಬದವರೆಗೂ ಸಂಚರಿಸಲಾಗದಶ್ಟು ಹಿಮಪಾತವಾಗುತ್ತದೆ. ವಸಂತ ಕಾಲಕ್ಕೆ ಈ ರಸ್ತೆಯನ್ನು ತೆರೆವುಗೊಳಿಸಲು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಈ ಅವದಿಯಲ್ಲಿ ಅತ್ಯಂತ ಶಕ್ತಿಶಾಲಿ ಅಗೆಯುವ ಯಂತ್ರಗಳು ಮತ್ತು ಬುಲ್ಡೋಜರುಗಳು ವಿಶೇಶವಾಗಿ ತಯಾರಾದ ನೇಗಿಲಿನಂತಹ ಯಂತ್ರದೊಡನೆ ಸತತವಾಗಿ ಕಾರ‍್ಯ ನಿರ‍್ವಹಿಸಿ ಹಿಮವನ್ನು ಕೆತ್ತಿ ತೆಗೆಯಬೇಕಿರುತ್ತದೆ.

ಈ ಮಾರ‍್ಗ ಸಾರ‍್ವಜನಿಕರಿಗೆ ಮುಕ್ತವಾದ ದಿನದಿಂದ ಈ ರಸ್ತೆಯಲ್ಲಿ ಕಾರುಗಳು, ಬಸ್ಸುಗಳು ಸ್ಕೀಯರ‍್ರುಗಳು ಓಡಾಡಲು ಅನುಮತಿ ನೀಡಲಾಗಿದೆ. ಪ್ರತಿ ವರ‍್ಶ ಇಲ್ಲಿಗೆ ಪ್ರವಾಸಿಗರ ದಂಡೇ  ದಾವಿಸಿ ಬರುತ್ತದೆ. ಇಲ್ಲಿನ ಪಾರಂಪರಿಕ ನೈಸರ‍್ಗಿಕ ಅದ್ಬುತವನ್ನು ಕಾಪಾಡಲು ಪರಿಸರಕ್ಕೆ ಹೊಂದುವಂತೆ ಹೋಟೆಲ್ಗಳು ಸೇರಿದಂತೆ ಹಲವಾರು ರಿಪ್ರೆಶ್ಮೆಂಟ್ ಸ್ತಳಗಳನ್ನು ನಿರ‍್ಮಿಸಲಾಗಿದೆ. ಇಲ್ಲಿ ಪ್ರವಾಸಿಗರು ತಂಗಲು ಹೊಟೇಲ್ಗಳು, ಮೌಂಟನ್ ಹಟ್ಗಳು ಹಾಗೂ ಮೈದಾನದ ಶಿಬಿರಗಳು ಲಬ್ಯವಿವೆ. ಆಯ್ಕೆ ಪ್ರವಾಸಿಗರ ಜೇಬನ್ನು ಅವಲಂಬಿಸಿದೆ.

ಈ ರಸ್ತೆಯಲ್ಲಿನ ಅತಿ ಎತ್ತರದ ಹಿಮಚ್ಚಾದಿತ ಬಿಳಿ ಗೋಡೆಗಳ ಅದ್ಬುತವನ್ನು ಕಣ್ತುಂಬಿಸಿಕೊಳ್ಳಲು ಸೂಕ್ತ ಸಮಯವೆಂದರೆ ಏಪ್ರಿಲ್ ಮತ್ತು ಮೇ ತಿಂಗಳಿನ ನಡುವೆ. ಈ ಸಮಯದಲ್ಲಿ, ಬಿಳಿ ಗೋಡೆಗಳು ತಮ್ಮ ಗರಿಶ್ಟ ಎತ್ತರವನ್ನು ತಲುಪುತ್ತವೆ. ಜೂನ್ ನಿಂದ ಆಗಸ್ಟ್ ವರೆಗೆ ಇಲ್ಲಿನ ಬೇಸಿಗೆ ಮತ್ತು ಶರತ್ಕಾಲದ ಸಮಯದಲ್ಲಿ ಸುಂದರವಾದ ಬೂ ದ್ರುಶ್ಯಗಳು, ಆಲ್ಪೈನ್ ಹೂವುಗಳು, ಬಣ್ಣ ಬಣ್ಣದ ಎಲೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಮುರೊಡೊ ಮತ್ತು ಡೈಕಾಂಬೊ ಸುತ್ತ ಮುತ್ತ ಬಣ್ಣಗಳು ಅತ್ಯಂತ ಸುಂದರವಾಗಿ ಕಂಡುಬರುವುದು ಸೆಪ್ಟೆಂಬರ್ ಕೊನೆಯಿಂದ ಅಕ್ಟೋಬ‍ರ್ ಅರಂಬದ ಕೆಲ ದಿನಗಳು ಮಾತ್ರ.

ಮಾರ‍್ಗದ ಉದ್ದಕ್ಕೂ ಇರುವ ಮುಕ್ಯ ಅಂಶಗಳೆಂದರೆ, ಸಿಂಗಲ್-ಸ್ಪ್ಯಾನ್ ಟಟೆಯಾಮಾ ರೋಪ್ ವೇ. ಇದರಲ್ಲಿ ಪ್ರಯಾಣಿಸಿದರೆ, ಪರ‍್ವತದ ಸುತ್ತಮುತ್ತಲಿನ ದ್ರುಶ್ಯಾವಳಿಗಳ ವಿಹಂಗಮ ಪಕ್ಶಿನೋಟವನ್ನು ಆಸ್ವಾದಿಸಬಹುದು. ಇದರೊಂದಿಗೆ 186 ಮೀಟ‍ರ್ ಎತ್ತರದ ಕುರೋಬ್ ಅಣೆಕಟ್ಟಿನಿಂದ ನೀರು ಹೊರಗೆ ಹರಿಯುವ ದ್ರುಶ್ಯ ವಿಶೇಶವಾದ ಅದ್ಬುತ ರಮಣೀಯತೆಯನ್ನು ಒದಗಿಸುತ್ತದೆ. ಇದು ಅಕ್ಟೋಬ‍ರ್ ಮದ್ಯದಲ್ಲಿ ಮಾತ್ರ. ಈ ಮಾರ‍್ಗದಲ್ಲಿ ಜೂನ್ ಮದ್ಯದಿಂದ ಸೆಪ್ಟಂಬರ್ ವರೆಗೆ ತಾಪಮಾನವು ಸೌಮ್ಯವಾಗಿರುತ್ತದೆ. ಕೆಲವೊಮ್ಮೆ ಬಹಳ ಬಿಸಿ ವಾತಾವರಣ ಸಹ ಇರುತ್ತದೆ. ಏಪ್ರಿಲ್ ನಿಂದ ಮೇ ಆರಂಬದವರೆಗೂ ಹಾಗೂ ಅಕ್ಟೋಬ‍ರ್ ಮದ್ಯದಿಂದ ನವೆಂಬ‍ರ್ ವರೆಗೂ ತಾಪಮಾನವು ತಂಪಾಗಿರುತ್ತದೆ. ಈ ಪ್ರದೇಶದಲ್ಲಿ ಬೇಸಿಗೆಯ ಸಮಯದಲ್ಲಿ ಅತಿ ಕಡಿಮೆ ಬಟ್ಟೆ ಸಾಕಾದರೆ, ವಸಂತಕಾಲ ಮತ್ತು ಶರತ್ಕಾಲದ ಚಳಿಯಿಂದ ಕಾಪಾಡಿಕೊಳ್ಳಲು ಬೆಚ್ಚನೆಯ ಬಟ್ಟೆಗಳ ಅಗತ್ಯವಿರುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: wikipedia.org, japan.travel, japan-guide.com, timeout.com, gltjp.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks