ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ.

ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು. ನನ್ನ ನಾನೇ ಮರೆಯುವಂತೆ ಮಾಡುವವು. ಸ್ವರ ಎಂಬ ಬಾವನೆಯ ಸಂಗಡ ವ್ಯಂಜನ ಎಂಬ ಅನುಬವ ಸೇರಿ ಬಾವಾನುಬವ ಮೂಡಿಸುವ ಪದಗಳು ಮೂಡುವವು. ಪದಗಳ ಜೋಡಣೆಯಿಂದ ಆದ ವಾಕ್ಯಗಳು ಬುದ್ದಿ-ಬಾವದ ಪೋಶಕವಾಗಿ ಸಾಹಿತ್ಯ ನಿರ‍್ಮಾಣದಲ್ಲಿ ಪ್ರಮುಕ ಪಾತ್ರವಹಿಸುವವು.

ಕನ್ನಡವನ್ನು ನವಯುಗದ, ನವ್ಯದ್ರುಶ್ಟಿಯ ವಿಚಾರ ಸಾಹಸದೊಂದಿಗೆ ಹೊಸ ಸಾಹಿತ್ಯದತ್ತ ತೆಗೆದುಕೊಂಡು ಹೋಗಿ, ಪವಿತ್ರ ಕನ್ನಡ ದೇವ ಮಂದಿರವನ್ನು ಕಟ್ಟಿ-ಬೆಳೆಸಲು ಯುವ ಸಾಹಿತ್ಯ ಶಿಲ್ಪಿಗಳು ಬೇಕು. ಶತ-ಶತಮಾನದ ಹಿಂದೆ ಚಂಪೂ, ತ್ರಿಪದಿ, ಕಂದಪದ್ಯ, ರಗಳೆ ಇವುಗಳೆಲ್ಲ ಹೊಸದಾಗಿ ಹುಟ್ಟಿ ನವಯುಗದ ಪ್ರಯತ್ನಕ್ಕೆ ಪಲರೂಪವಾದದು ನಮಗೆ ತಿಳಿದಿದೆ. ಇಂತಹ ಸಿದ್ದಿ ಹಿಂದೆ ನಡೆದಂತೆ ಇಂದು-ಮುಂದೆಯೂ ನಡೆಯುತ್ತಿರಬೇಕು. ಕನ್ನಡದಲ್ಲಿ ಹೊಸ ಪ್ರಯತ್ನಗಳು ಹೊಸ ಸಾಹಿತ್ಯ ನಿರ‍್ಮಾಣದತ್ತ ಸಾಗಲು ನಾವೆಲ್ಲರೂ ಕೈ ಜೋಡಿಸಿ ಒಗ್ಗೂಡಿ ಮುನ್ನಡೆಯಬೇಕಿದೆ.

ಪಂಪ, ರನ್ನ, ನಾಗವರ‍್ಮ, ಹರಿಹರ, ರಾಗವಾಂಕ, ಬಸವೇಶ್ವರ, ಕುಮಾರವ್ಯಾಸ, ಲಕ್ಶ್ಮೀಶ, ಸರ‍್ವಜ್ನ, ಪುರಂದರದಾಸ, ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ, ಅನಂತಮೂರ‍್ತಿ, ಕಾರ‍್ನಾಡ, ಕಂಬಾರರಂತಹ ಕನ್ನಡ ಪುತ್ರರು ಕನ್ನಡ ಬಾಶೆಯ ಸಿರಿಮುಡಿಗೆ ಹೂ ಮುಡಿಸಲು ಹೊರಟಂದಿನಿಂದ ನಮ್ಮ ಕನ್ನಡ ಸಾಹಿತ್ಯವು ಮೊದಲಾಗುತ್ತದೆ. ನಾವು ಕನ್ನಡಿಗರು ಮುಂಚೆಯಿಂದಲೂ ಸಾಹಸ-ಸಾಹಿತ್ಯ ಪ್ರಿಯರು, ಬದಲಾವಣೆಗಾಗಲೀ, ಬೆಳೆಯುವುದಕ್ಕಾಗಲೀ ಹಿಂದೆ ಹೆಜ್ಜೆ ಹಾಕುವ ವಿಚಾರದವರೇ ಅಲ್ಲ.

ವಿಚಾರ ಮಾಡುವಂತ ವಿಶಯಗಳಲ್ಲಿ ಪ್ರಯೋಗಶೀಲರಾಗಿದ್ದು ಸಾಹಿತ್ಯದಲ್ಲೂ ಇದೇ ಬಗೆಯ ಸಾಹಸಪ್ರಿಯತೆಯನ್ನು ತೋರಿಸಬೇಕು. ಕನ್ನಡದ ಹಿರಿಯರ ನೆತ್ತರು ನಮ್ಮಲ್ಲಿ ಹರಿಯುತ್ತಿರುವುದರಿಂದಲೇ ನಾವಿಂದು ಸಾಹಸಿಗಳಾಗಿದ್ದೇವೆ. ಅವರಿಗೆ ನಾವು ಎಶ್ಟು ಕ್ರುತಜ್ನರಾದರೂ ಸಾಲದು. ನಮ್ಮ ಹೊಸ ಹಾದಿ, ನಮ್ಮ  ನಡೆಗೆ, ಸಾಹಸಕ್ಕೆ ಅವರ ಆಶೀರ‍್ವಾದವೊಂದೇ ಸಾಕು.

ಕನ್ನಡದ ಜನತೆ ಎಚ್ಚೆತ್ತಿದೆ, ಕನ್ನಡ ಸಾಹಿತ್ಯ ಆ ಎಚ್ಚರವನ್ನು ಮರುಬಿಂಬಿಸುತ್ತಿದೆ, ಹುರುಪುಗೊಳಿಸುತ್ತಿದೆ. ಹೊಸಪೀಳಿಗೆಯ ಬರಹಗಾರರು ಹೆಚ್ಚು-ಹೆಚ್ಚು ಆಸಕ್ತಿಯಿಂದ ವಿಜ್ನಾನ, ತಂತ್ರಜ್ನಾನ, ಇನ್ನೂ ಹಲವಾರು ವಿಶಯದ ಕುರಿತು ಬರಹ ಮಾಡುತ್ತಿದ್ದಾರೆ. ಓದುಗರು ಸಹ ಅವುಗಳನ್ನು ಆಸಕ್ತಿಯಿಂದ ಕೊಂಡು ಓದಿ ಮುಂದುವರೆಯುತ್ತಿದ್ದಾರೆ.

ಕನ್ನಡಮ್ಮನ ಹಿರಿ-ಕಿರಿ ಮಕ್ಕಳಿರಾ! ಬನ್ನಿ, ಬಾರಿಸೋಣ ಕನ್ನಡ ಡಿಂಡಿಮವ…

( ಚಿತ್ರ ಸೆಲೆ: kannada.oneindia.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.