‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ.

“ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?”
“ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.”
“ಸಿರಿ… ಇವತ್ತು ಮಳೆ ಬರುತ್ತಾ?”

ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು, ಬರವಣಿಗೆ ಆಮೇಲೆ ಹುಟ್ಟು ಪಡೆಯಿತು ಎಂಬುದು ಎಲ್ಲರಿಗೂ ಗೊತ್ತಿರುವುದೇ! ಆದರೆ ಮಿಂದಾಣದ(internet) ಲೋಕದಲ್ಲಿ ಇದು ತಿರುಗು-ಮುರುಗಾಗಿದೆ. ನಮಗೆಲ್ಲಾ ತಿಳಿದಿರುವಂತೆ, ಮೊದಲು (ಹೆಚ್ಚುಕಡಿಮೆ ಈಗಲೂ) ಮಿಂದಾಣಗಳಲ್ಲಿ ಏನಾದರು ಹುಡುಕಬೇಕೆಂದರೆ ಅದನ್ನು ಬರೆದು ಹುಡುಕುತ್ತೇವೆ. ಬಳಕಗಳನ್ನು(apps) ಬಳಸಬೇಕಾದರೆ ಆಯ್ಕೆಗಳನ್ನು ಒತ್ತುವುದರ ಮೂಲಕ ಹಾಗೂ ಕೀಲಿಮಣೆ ಬಳಸುವ ಮೂಲಕ ಬಳಸುತ್ತೇವೆ. ಈಗ ಕಾಲ ಬದಲಾಗುತ್ತಿದೆ, ಮಾತಿನ ಮೂಲಕವೇ ಬೇಕಾದ್ದನ್ನು ಹುಡುಕಬಹುದಾಗಿದೆ, ಬಗೆಬಗೆಯ ಬಳಕಗಳನ್ನು, ಗ್ಯಾಜೆಟ್‍ಗಳನ್ನು ಬಳಸಬಹುದಾಗಿದೆ. ಹಾಗಾಗಿ ‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆ.

ಇದರ ಹಿನ್ನಲೆ ಏನು?

ಚೂಟಿಯುಲಿ(smartphone), ಗ್ಯಾಜೆಟ್, ಎಣ್ಣುಕ ಹೀಗೆ ಯಾವುದೇ ಎಣಿಗೆ (device) ಮಾತಿನ ಮೂಲಕ ಅಪ್ಪಣೆಯನ್ನು(commands) ಕೊಟ್ಟರೆ, ಅದು ಮಾತನ್ನು ಸೆರೆಹಿಡಿದು, ಅದರ ಪದಗಳನ್ನು ಬಿಡಿಸಿ, ಏನು ಮಾಡಬೇಕೆಂದು ಅರಿತುಕೊಂಡು ಬಳಿಕ ಕೊಟ್ಟ ಅಪ್ಪಣೆಯಂತೆ ಕೆಲಸಮಾಡುವ ಚಳಕ ಹತ್ತಾರು ವರುಶಗಳಿಂದ ಬೆಳೆಯುತ್ತಿದೆ.

ಈ ಚಳಕ ಅಂಬೆಗಾಲಿಡುತ್ತಿದ್ದ ಹೊತ್ತಿನಲ್ಲಿ ನಾವಾಡಿದ ಮಾತುಗಳನ್ನು ಸರಿಯಾಗಿ ತಿಳಿದುಕೊಳ್ಳಲಾಗದೇ ಹಲವಾರು ತಪ್ಪುಗಳಾಗುತ್ತಿದ್ದವು. ಯಾವುದೇ ನುಡಿಯಲ್ಲಿ ಬರಹಕ್ಕೂ ಮಾತಿಗೂ ನಡುವೆ ಬೇರ‍್ಮೆ ಇದ್ದೇ ಇರುತ್ತದೆ(ಇಂಗ್ಲಿಶನ್ನೂ ಸೇರಿಸಿ). ಅಂತಹ ನುಡಿಯ ಆಡುಮಾತುಗಳನ್ನು (natural language) ಒಡೆದು ಬರಹಕ್ಕಿಳಿಸಿಕೊಂಡು, ಅದನ್ನು ಅರಿತುಕೊಂಡು ಕೆಲಸಮಾಡುವ ಚಳಕ ಸಣ್ಣದಾಗಿರಲಿಲ್ಲ.

‘ಊಟಕ್ಕೆಲ್ಲಾದ್ರು ಒಳ್ಳೆ ಜಾಗ ಇದ್ರೆ ಹೇಳು?’ ಎಂದು ಹೇಳುವ ಆಡುಮಾತಿನಲ್ಲಿ ‘ಊಟ’, ‘ಜಾಗ’, ‘ಹೇಳು’ ಎಂಬ ಪದಗಳು ಮುಕ್ಯವಾದದ್ದು ಮತ್ತು ಅದಕ್ಕೆ ತಕ್ಕಂತೆ ಉತ್ತರ ಕೊಡಬೇಕು ಎಂದು ನಿಮ್ಮ ಚೂಟಿಯುಲಿ ಇಲ್ಲವೇ ಎಣಿಗೆ ಗೊತ್ತಾಗಬೇಕು. ‘ಎಲ್ಲಾದ್ರು’ ‘ಒಳ್ಳೆ’ ‘ಜಾಗ’ ‘ಹೇಳು’ ಎಂಬ ಪದಗಳನ್ನು ಅದು ಮುಕ್ಯ ಎಂದು ಅಂದುಕೊಂಡರೆ ಸಿಗುವ ಉತ್ತರಗಳು ಬೇರೆಯಾಗಿಬಿಡುತ್ತವೆ.

ಎಣಿಗಳ ಜಾಣ್ಮೆ ಹಾಗೂ ಕಲಿಕೆ (artificial intelligence and machine learning)

ನಮ್ಮ ಆಡುಮಾತನ್ನು ಒಡೆದು, ಎಣಿಗಳಿಗೆ ಗೊತ್ತಾಗುವ ಬಗೆಯಲ್ಲಿ (natural language processing) ಕಳಿಸಲು ದೊಡ್ಡ ಕಲಿಕೆಯೊಂದು ಹಲವಾರು ವರುಶಗಳಿಂದ ನಡೆಯುತ್ತಿದೆ. ಹಾಗಾಗಿ ಮಾತಿನ ಮೂಲಕ ನಡೆಸುವ ಹುಡುಕಾಟ ಇಲ್ಲವೇ ಅಪ್ಪಣೆಗಳಲ್ಲಿ ಇಂದು ತಪ್ಪುಗಳು ಕಡಿಮೆಯಾಗಿವೆ. ಹೆಚ್ಚಿನ ಕಲಿಕೆ ನಡೆಯುತ್ತಲೇ ಇದೆ.

ಎಣಿಯು ಆಡುಮಾತನ್ನು ಸರಿಯಾಗಿ ತಿಳಿದುಕೊಂಡರೂ ಕೆಲವೊಮ್ಮೆ ಅದರ ಉತ್ತರಗಳು ಯಾವ ನೆರವನ್ನೂ ನೀಡುತ್ತಿರಲಿಲ್ಲ. ಉದಾಹರಣೆಗೆ ‘ಊಟ ಮಾಡಲು ಒಂದೊಳ್ಳೆ ಜಾಗ ಹೇಳು’ ಎಂದು ಅಪ್ಪಣೆಯನ್ನು ಕೊಟ್ಟರೆ ‘ಮದ್ಯಾನದ ಊಟಕ್ಕೋ, ರಾತ್ರಿಯ ಊಟಕ್ಕೋ? ಯಾವ ಊರಿನಲ್ಲಿ? ಬಾಡೂಟ ಬೇಕೋ? ಬೇಡವೋ? ಎಂಬೆಲ್ಲಾ ಗೊಂದಲಗಳು ಆ ಹುಡುಕಾಟದ ಕೆಲಸಕ್ಕೆ ಇರುತ್ತಿತ್ತು. ಹಾಗಾಗಿ, ಅದು ನೀಡುತ್ತಿದ್ದ ಆಯ್ಕೆಗಳು ಹಲವುಬಾರಿ ಸರಿಯಾಗಿರುತ್ತಿರಲಿಲ್ಲ.

ಚಳಕಗಳು ಬೆಳೆದಂತೆ, ಎಣಿಯು ಯಾವ ಊರಿನಲ್ಲಿ ಬಳಕೆಯಾಗುತ್ತಿದೆ, ಈಗ ಅಲ್ಲಿನ ಹೊತ್ತು ಎಶ್ಟು? ಮದ್ಯಾನ ಊಟದ ಹೊತ್ತೋ? ರಾತ್ರಿಯೋ? ಈ ಹಿಂದೆ ಇದರ ಬಳಕೆದಾರ ಯಾವ ಯಾವ ಊಟದ ಜಾಗಕ್ಕೆ ಹೋಗಿದ್ದ? ಆತ ಬಾಡೂಟ ತಿನ್ನುವನೋ? ಇಲ್ಲವೋ? ಇಂತಹ ಹಲವಾರು ಮಾಹಿತಿಗಳನ್ನು ಕೂಡಿಟ್ಟುಕೊಳ್ಳುವ ಅಳವು ಚಳಕಗಳಿಗಿದೆ. ಈ ಮಾಹಿತಿಯ ನೆರವಿನಿಂದ ಯಾವುದೇ ಅಪ್ಪಣೆ ಬಂದಲ್ಲಿ ಆ ಕೇಳ್ವಿಯ ‘ಕುಳ್ಳಿಹ'(context) ಏನು ಎಂದು ಅರಿತುಕೊಂಡು ಅದಕ್ಕೆ ತಕ್ಕಂತೆ ಎಣಿಗಳು ಉತ್ತರಕೊಡುತ್ತವೆ. ಈ ಬೆಳವಣಿಗೆಗಳು ಮಾತಿನ ಮೂಲಕ ಎಣಿಗಳನ್ನು ಬಳಸಲು ತುಂಬಾ ನೆರವಾಗಿವೆ.

ಹುಡುಕಾಟ ಇಲ್ಲವೇ ಅಪ್ಪಣೆಗಳಿಗೆ ಮಾತಿನ ಬಳಕೆ ಹಂತ ಹಂತವಾಗಿ ಬೆಳೆಯುತ್ತಿದೆ


ಗೂಗಲ್‍ನವರ ಗೂಗಲ್ ನೆರವಿಗ, ಅಮೇಜಾನ್ ಅವರ ಅಲೆಕ್ಸಾ, ಮೈಕ್ರೋಸಾಪ್ಟ್ ಅವರ ಕೊರ‍್ಟಾನ, ಆಪಲ್‍ನ ಸಿರಿ, ಸ್ಯಾಮ್‍ಸಂಗ್ ಅವರ ಬಿಕ್ಸ್ ಬಿ ಹಾಗೂ ಚೀನಾದಲ್ಲಿ ಹೆಸರುವಾಸಿಯಾದ ಬೈಡು ಕಂಪನಿಯವರ ಬೈಡು ನೆರವಿಗ, ಇವೆಲ್ಲವೂ ಮಿಂದಾಣದಲ್ಲಿ ಹಾಗೂ ಎಣಿಗಳ ಬಳಕೆಯಲ್ಲಿ ಮಾತುಗಳೇ ಮೇಲುಗೈ ಹೊಂದುವಂತಾಗಲು ಕೊಡುಗೆಯನ್ನು ನೀಡುತ್ತಿವೆ.

ನೀವು ಹೆಚ್ಚಾಗಿ ರಾಜ್‍ಕುಮಾರ್ ಹಾಡುಗಳನ್ನೇ ಕೇಳುತ್ತಿದ್ದರೆ, ಯಾವುದಾದರು ಒಂದು ದಿನ ‘ಯೂಟ್ಯೂಬಿನಲ್ಲಿ ಒಂದೊಳ್ಳೆ ಹಾಡನ್ನು ಹಾಕು’ ಎಂದು ಮಾತಪ್ಪಣೆ ಕೊಟ್ಟರೆ ನಿಮ್ಮ ಚೂಟಿಯುಲಿ ನಿಮ್ಮ ಮೆಚ್ಚಿನ ರಾಜ್‍ಕುಮಾರ್ ಹಾಡನ್ನೇ ಹಾಕುತ್ತದೆ! ಮನೆಯ ಟಿವಿ, ಚೂಟಿಯುಲಿ, ಎಣ್ಣುಕ, ಬೆಳಕು ಇವೆಲ್ಲವನ್ನೂ ಹೊಂದಿಸಿಕೊಂಡು ಇಟ್ಟಿದ್ದರೆ, ಮಾತಿನ ಮೂಲಕವೇ ಟಿವಿಯನ್ನು ಬಳಸುವುದು, ಬೆಳಕನ್ನು ಆರಿಸುವುದು, ಚೂಟಿಯುಲಿಯಲ್ಲಿ ಕರೆಮಾಡುವುದು, ಕರೆಯನ್ನು ತೆಗೆದುಕೊಳ್ಳುವುದು, ಓಲೆಗಳನ್ನು ಓದಿಹೇಳುವಂತೆ ಮಾಡುವುದು, ಬರಹಗಳನ್ನು ಓದುವುದು, ಹೀಗೆ ಈ ಎಣಿಗಳು ಮಾಡುವ ಕೆಲಸಕ್ಕೆ ಎಣೆಯೇ ಇಲ್ಲ.

ಸ್ಯಾಮ್ಸಂಗ್‍ನ ಎಸ್8 ನಲ್ಲಿ ಹೊರತಂದಿರುವ ‘ಬಿಕ್ಸ್ ಬಿ’ ಯಂತು ಒಂದು ಹೆಜ್ಜೆ ಮುಂದೆಹೋಗಿದೆ. ಚೂಟಿಯುಲಿಯು ಒಡೆಯನ ಮಾಹಿತಿಗಳನ್ನೆಲ್ಲಾ ಮೊದಲೇ ಕೂಡಿಟ್ಟುಕೊಳ್ಳುವುದರಿಂದ ಬಿಕ್ಸ್ ಬಿ ಜೊತೆಗೆ ಗೆಳೆಯರೊಂದಿಗೆ ಹರಟುವಂತೆ ಹರಟಬಹುದಾಗಿದೆ (feedback, question and answers). ಹೀಗೆ ಹರಟುವ ಆಯ್ಕೆ ಎಳವೆಯ ಹಂತದಲ್ಲಿದ್ದು ಗೂಗಲ್, ಅಮೆಜಾನ್ ಕೂಡ ಇದನ್ನು ಮೇಲ್ಮಟ್ಟಕ್ಕೇರಿಸುವ ಕೆಲಸ ನಡೆಸುತ್ತಿದ್ದಾರೆ. ಈ ಎಲ್ಲಾ ಹೊಸತನದಿಂದಾಗಿ ಎಣಿಗಳನ್ನು ಬಳಸುವಾಗ ಮಾತಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹದಿಹರೆಯದವರಿಂದ ಹಿರಿಯರವರೆಗೂ ಇದರ ಬಳಕೆ ನಡೆಯುತ್ತಿದೆ.

ಹೇಳುವ ಮೊದಲೇ ಕೆಲಸ ಮಾಡುವ ಜಾಣ!

ನಮ್ಮ ಕೆಲಸಗಳು ಯಾವಾಗಲೂ ಸುಲಬವಾಗಿ ಆಗುವಂತಿರಬೇಕು ಎಂಬ ಗುರಿಯೊಂದಿಗೆ ಹೊಸ ಚಳಕಗಳು ಮೂಡಿಬರುತ್ತಿವೆ. ‘ಬರವಣೆಗೆ’ಯ ಮೂಲಕ ಎಣಿಯನ್ನು ಬಳಸುವುದಕ್ಕಿಂತ ‘ಮಾತ’ನ್ನು ಬಳಸಿದರೆ ಸುಳುವಾಗುವುದು ಎಂದು ಮಾತಿನ ಸುತ್ತ ಚಳಕಗಳು ಹೊರಬಂದವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತುಂಬಾ ಕಡಿಮೆ ಮಾತಿನ ಮೂಲಕ ಇಲ್ಲವೇ ಚೂಟಿಯುಲಿಯನ್ನು ತೆರೆದಕೂಡಲೇ ‘ಯಾವ ಕೆಲಸಕ್ಕಾಗಿ’ ತೆರೆಯಲಾಗಿದೆ ಎಂದು ತಿಳಿದು ಆ ಕೆಲಸವನ್ನು, ಹೇಳುವ ಮೊದಲೇ ಮಾಡುವಂತೆ ಎಣಿಗಳನ್ನು ಅಣಿಗೊಳಿಸಲಾಗುತ್ತಿದೆ. ಉದಾಹರಣೆಗೆ, ದಿನಾ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಕೆಲಸಕ್ಕೆ ಹೋಗಲು ನೀವು ಉಬರ‍್/ಓಲಾ ಗಾಡಿಗಳನ್ನು ಕಾಯ್ದಿರಿಸುತ್ತಿದ್ದರೆ, ಮೂರ‍್ನಾಲ್ಕು ದಿನಗಳ ಬಳಿಕ ಬೆಳಗ್ಗೆ 8 ಗಂಟೆಗೆ ಚೂಟಿಯುಲಿಯನ್ನು ತೆರೆದರೆ ಅದೇ ನಿಮಗೆ ಉಬರ‍್/ಓಲಾ ಗಾಡಿಯನ್ನು ಕಾಯ್ದಿರಿಸಿ ಅದನ್ನು ನಿಕ್ಕಿಮಾಡಲು ಆಯ್ಕೆಯನ್ನು ನೀಡುತ್ತದೆ!

ಎಣಿಗಳಲ್ಲಿ ಮಾತಿನ ಬಳಕೆ ಹೆಚ್ಚಿದಂತೆ ಅದಕ್ಕೆ ತಕ್ಕ ವ್ಯಾಪಾರದ ಬಗೆಗಳೂ ಮಾರ‍್ಪಡಲಿವೆ. ಮಿಂದಾಣಗಳ ಬಳಕೆಯಲ್ಲಿ ಬರಹದ ಮೇಲುಗೈ ಇದ್ದಾಗ ಚಿತ್ರಗಳು ಹಾಗೂ ಪುಟ್ಟ ವೀಡಿಯೋಗಳು ಬಯಲರಿಕೆಗಳಾಗಿದ್ದವು. ಇವು ಉದ್ದಿಮೆಗಳಿಗೆ ವ್ಯಾಪಾರವನ್ನು ಹೆಚ್ಚಿಸುತ್ತಿದವು. ಮುಂದೆ ಮಿಂದಾಣದ ಬಳಕೆಯಲ್ಲಿ ಮಾತಿನದ್ದೇ ಮೇಲುಗೈ ಬಂದರೆ ಎಣಿಗಳನ್ನು ನೋಡದೇ ಇರುವ ಸಾದ್ಯತೆಗಳು ಹೆಚ್ಚು, ಆಗ ಯಾವ ಬಗೆಯ ಬಯಲರಿಕೆಗಳನ್ನು ಬಳಸಬೇಕು? ವ್ಯಾಪಾರಕ್ಕಾಗಿ ಯಾವುದಾದರು ಹೊಸ ದಾರಿ ಇದೆಯೇ? ಮಾತಿನ ಬಳಕೆಯಿಂದ ಅಲ್ಲಲ್ಲಿ ಕಾವಲಿನ(security) ತೊಂದರೆಗಳೂ ಎದುರಾಗಿವೆ. ಎಣಿಗಳನ್ನು ಬಳಸುವಾಗ ಮಾತನಾಡುವುದರಿಂದ ಆ ಮಾತು ಬೇರೆಯವರಿಗೆ ಕೇಳಿಸಿ ಕೆಲವು ಮಾಹಿತಿ ಸೋರಿಕೆಯಾಗುವ ಸಾದ್ಯತೆಗಳೂ ಇವೆ. ಈ ಎಲ್ಲಾ ಕೇಳ್ವಿಗಳಿಗೆ, ತೊಂದರೆಗಳಿಗೆ ಉತ್ತರ ಹುಡುಕಿಕೊಳ್ಳುವ ಕೆಲಸದಲ್ಲಿ ಗೂಗಲ್, ಮೈಕ್ರೋಸಾಪ್ಟ್ ನಂತಹ ಉದ್ದಿಮೆಗಳಿವೆ.

(ಮಾಹಿತಿ ಸೆಲೆ: searchenginewatch.comkpcb.com)

(ಚಿತ್ರ ಸೆಲೆ: searchenginewatch.com,)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: