ಮಕ್ಕಳ ಕವಿತೆ: ರೆಕ್ಕೆ ಇದ್ರೆ ಮಕ್ಕಳಿಗೆ

– ಚಂದ್ರಗೌಡ ಕುಲಕರ‍್ಣಿ.

ಹಕ್ಕಿಯಂತೆ ರೆಕ್ಕೆ ಇದ್ರೆ
ಶಾಲೆಯ ಮಕ್ಕಳಿಗೆ
ಬಸ್ಸು ಆಟೊ ಕಾಯುತಿರಲಿಲ್ಲ
ಬೇಗನೆ ಬರಲು ಶಾಲೆಗೆ

ಪುರ‍್ರಂತ ಹಾರಿ ಬರತಾ ಇದ್ರು
ತಪ್ಪದೆ ಸರಿಯಾದ ವೇಳೆಗೆ
ರೆಕ್ಕೆ ಮಡಚಿ ಕೂತಿರತಿದ್ರು
ಸಾಲು ಸಾಲಿನ ಬೆಂಚಿಗೆ

ಮರದ ಮೇಲೇ ಉಣತಾ ಇದ್ರು
ಗುಬ್ಬಿ ಕೋಗಿಲೆ ಜತೆಯಲ್ಲಿ
ಆಟಕ್ಕೆ ಬಿಟ್ರೆ ತೇಲಾಡತಿದ್ರು
ಬಟ್ಟಬಯಲಿನ ಮುಗಿಲಿನಲಿ

ಹುಡುಕಿ ಹುಡುಕಿ ಸವಿಯುತಲಿದ್ರು
ಮೆಲ್ಲಗೆ ಗೂಡಿನ ಜೇನನ್ನು
ಗಿಳಿ ಮರಿ ಜತೆಯಲಿ ಮೆಲ್ಲುತಲಿದ್ರು
ಮಾವು ಪೇರಲ ಹಣ್ಣನ್ನು

ಲಕ್ಶಗೊಟ್ಟು ಕೇಳುತಲಿದ್ರು
ಎಲ್ಲ ವಿಶಯದ ಪಾಟವನು
ಬೇಜಾರಾದ್ರೆ ಹಾರಿ ಬಿಡತಿದ್ರು
ತಪ್ಪಿಸಿ ಎಲ್ಲ ಕ್ಲಾಸನ್ನು

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

1 ಅನಿಸಿಕೆ

ಅನಿಸಿಕೆ ಬರೆಯಿರಿ: