ಬಾನಂಗಳದ ಪುಟಾಣಿ ಬಾನಬಂಡಿ – ‘ಸ್ಪ್ರೈಟ್’

– ಪ್ರಶಾಂತ. ಆರ್. ಮುಜಗೊಂಡ.

Space, ಬಾನರಿಮೆ, ಪ್ರಾಕ್ಸಿಮಾ, ಬಾನಬಂಡಿ

ಬಾನಂಗಳದಲ್ಲಿರುವ ಸೋಜಿಗದ ಸಂಗತಿಗಳನ್ನು ಅರಿಯಲು ಇದುವರೆಗೆ  ಹಲವಾರು ಬಾನಬಂಡಿಗಳು ಬಾನಿಗೇರಿವೆ. ಇವುಗಳಲ್ಲಿ ಕೆಲವು ಹೊಸ ಮಾಹಿತಿ ತೋರುವಲ್ಲಿ ಅನುವು ಮಾಡಿಕೊಟ್ಟಿದ್ದರೆ ಇನ್ನು ಕೆಲವು ಯಶಸ್ವಿಯಾಗಿ ಮಾಹಿತಿ ತೋರದೆ ಉಳಿದಿರುವುದೂ ಇದೆ. ಸಾವಿರಾರು ಕಿಲೋಮೀಟರ್ ದೂರದಿಂದ ಮಾಹಿತಿ ಕಳಿಸುವ ಬಾನಬಂಡಿಗಳ ಗಾತ್ರ ಸಹಜವಾಗಿ ದೊಡ್ಡದಾಗಿ ಇರುವುದು ಎಂದು ನಾವು ಅಂದುಕೊಂಡಿದ್ದರೆ ಅದು ತಪ್ಪು. ಬಾನಂಗಳಕ್ಕೆ ಏರಿದ ಅತೀ ಚಿಕ್ಕ ಮತ್ತು ಅತೀ ಕಡಿಮೆ ತೂಕದ ಬಾನಬಂಡಿಯೊಂದಿದೆ.

ಸ್ಪ್ರೈಟ್ (sprite) ಬಾನಬಂಡಿ ಎಶ್ಟು ಚಿಕ್ಕದು?

ಈ ಬಾನಬಂಡಿಯ ಉದ್ದ ಮತ್ತು ಅಗಲ ಕೇವಲ 3.5 ಸೆಂಟಿ ಮೀಟರ್ ಮತ್ತು ತೂಕ 4 ಗ್ರಾಂ, ಅಂದರೆ ನಮ್ಮ ಅಂಗೈಯಲ್ಲಿ ಸರಳವಾಗಿ ಹಿಡಿದುಕೊಳ್ಳುವಶ್ಟು ಗಾತ್ರ. ಒಂಟಿಸುತ್ತು ಮಿನ್ನೇರ‍್ಪಾಟು (Single Circuit) ಬಳಸಿ ಕಟ್ಟಲಾದ ಈ ಬಂಡಿ ಆಕಾರದಲ್ಲಿ ಚಿಕ್ಕದಾದರೂ, ತನ್ನೊಳಗೆ ಹಲವು ಅರಿವುಕಗಳು (Sensors), ಎಣ್ಣುಕಗಳು (computers), ಬಾನುಲಿಗಳನ್ನು (radios) ಹೊಂದಿದ್ದು, ಈ ಎಲ್ಲ ಸಲಕರಣೆಗಳಿಗೆ ಶಕ್ತಿ ಒದಗಿಸಲು ಸೌರಹಲಗೆಯನ್ನು(solar panel) ಕೂಡ ಒಳಗೊಂಡಿದೆ.

ಸ್ಪ್ರೈಟ್ ಬಾನಬಂಡಿ ಅಮೆರಿಕಾದ ಬಾನರಿಗ ಮತ್ತು ಅರಕೆಗಾರ ಜಾಕ್ ಮ್ಯಾಂಚೆಸ್ಟರ್ ಅವರ ಕನಸಿನ ಕೂಸು. ಸ್ಪ್ರೈಟ್ ಬಾನಬಂಡಿ ಕಟ್ಟಲು ದುಡ್ಡುಹೊಂದಿಸುವ ಸಲುವಾಗಿ 2011ರಲ್ಲಿ ಕಿಕ್‌ಸ್ಟಾರ‍್ಟರ್ ಎಂಬ ಅಬಿಯಾನ ಶುರುಮಾಡಿದರು. ರಶ್ಯಾದ ಹೂಡಿಕೆದಾರ ಯೂರಿ ಮಿಲ್ನರ್ ಅವರು ಹೂಡಿಕೆಯೊಂದಿಗೆ ಬ್ರೇಕ್‌ತ್ರೂ ಸ್ಟಾರ‍್‌ಶಾಟ್(Breakthrough Starshot) ಹಮ್ಮುಗೆಯ ಮೂಲಕ ಮೊದಲ ಸ್ಪ್ರೈಟ್ ಬಾನಬಂಡಿಯನ್ನು ತಯಾರಿಸಲಾಯಿತು.

ಚಿಕ್ಕ ಬಾನಬಂಡಿಯ ಉದ್ದೇಶಗಳೇನು?

ಬ್ರೇಕ್‌ತ್ರೂ ಸ್ಟಾರ‍್‌ಶಾಟ್ ಯೋಜನೆಯ ಗುರಿಯಂತೆ ಬಾನಬಂಡಿಯನ್ನು ಬಾನಂಗಳದಲ್ಲಿ ಕೇವಲ ಬೆಳಕಿನ ಶಕ್ತಿಯ ಮೂಲಕ ಮುಂದೆ ಸಾಗಿಸಬಹುದು. ಈ ಬಾನಬಂಡಿಯು, ಬೆಳಕಿನ ವೇಗದ 20% ರಶ್ಟು ವೇಗದೊಂದಿಗೆ ಸಾಗುವ ಅಳವು ಹೊಂದಿದೆ. ನೆಲದಿಂದ ಲೇಸರ್ ಕಿರಣಗಳನ್ನು ಬಿಟ್ಟು ಸ್ಪ್ರೈಟ್ ಬಾನಬಂಡಿಯನ್ನು ಮುನ್ನೂಕಬಹುದಾಗಿದ್ದು, 4.2 ಬೆಳಕಿನೇಡು(light year) ದೂರದಲ್ಲಿರುವ ಪ್ರಾಕ್ಸಿಮಾ ಸೆಂಟಾರಿಯನ್ನು ಸುಮಾರು 20 ವರುಶಗಳಲ್ಲಿ ತಲುಪಬಹುದು.

ಅಳತೆಯಲ್ಲಿ ಚಿಕ್ಕದಾದ ಕಾರಣದಿಂದ 5-6 ಅತವಾ ಅದಕ್ಕಿಂತ ಹೆಚ್ಚಿನ ಸಂಕ್ಯೆಯ ಸ್ಪ್ರೈಟ್ ಬಾನಬಂಡಿಗಳನ್ನು ಒಂದೇ ಸಾರಿ ಬಾನಿಗೇರಿಸಿ ಬಾನಂಗಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬಹುದು ಎಂಬುದು ಇದರ ಮೂಲ ಉದ್ದೇಶ.

ಬಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ತೆಯ (ISRO) ಪಾತ್ರ

2017ರ ಜೂನ್ 23ರಂದು ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ದವನ್ ಉಡಾವಣಾ ಕೇಂದ್ರದಿಂದ ಬಾನಿಗೇರಿಸಿದ PSLV C38 ತನ್ನೊಂದಿಗೆ 30 ಉಪಗ್ರಹಗಳನ್ನು ಒಳಗೊಂಡಿತ್ತು, ಅವುಗಳಲ್ಲಿ ಮಾಕ್ಸ್ ವೆಲಿಯರ್ & ವೆಂಟಾ ಎಂಬ ಉಪಗ್ರಹ, 6 ಸ್ಪ್ರೈಟ್ (sprite) ಬಾನಬಂಡಿಗಳನ್ನು ಇರಿಸಿಕೊಂಡಿತ್ತು.

ನಮಗೆ ಹತ್ತಿರದ ತಾರೆಗಳ ಗುಂಪು ಅಲ್ಪಾ ಸೆಂಟಾರಿಯಲ್ಲಿ ಬೂಮಿಯ ಹಾಗೆ ಮತ್ತೊಂದು ಗ್ರಹ ಇರುವಿಕೆಯ ಸುದ್ದಿ ದಿಟವಾಗಿದೆಯೋ ಎಂಬ  ವಿಶಯವನ್ನು ಪತ್ತೆ ಮಾಡಲು ಈ ಬಾನಬಂಡಿಯನ್ನು ಹಾರಿಬಿಡಲಾಯಿತು. ಅಲ್ಲಿ ಜೀವಿಗಳ ಜೈವಿಕ ಕ್ರಿಯೆಗಳಿಗೆ ಅವಶ್ಯಕತೆಯಿರುವ ಗಾಳಿಹೊದಿಕೆಗಳು (Atmosphere), ಆಮ್ಲಜನಕ ಮತ್ತು ಇನ್ನಿತರ ಬೇರಡಕಗಳು (elements) ಇರುವಿಕೆಯ ಕುರಿತ ಅರಕೆ ನಡೆಯಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ:  techcrunch.comiflscience.comthebetterindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: