ವರುಶ – ಅನಂತ ಕಾಲದ ಒಂದೇ ಒಂದು ಹೆಜ್ಜೆ!

– ಚಂದ್ರಗೌಡ ಕುಲಕರ‍್ಣಿ.

ಕಾಲ ಚಕ್ರ, Time

ವರುಶ ಎಂಬುದು ಅನಂತ ಕಾಲದ
ಒಂದೇ ಒಂದು ಹೆಜ್ಜೆ!
ತಾಳಕೆ ತಕ್ಕಂತೆ ಕುಣಿಯಲೇ ಬೇಕು
ಕಾಲಲಿ ಕಟ್ಟಿ ಗೆಜ್ಜೆ!

ಚೇತನ ಜಡವು ಏನೇ ಇರಲಿ
ನುಂಗಿಬಿಡುವನು ಕಾಲ!
ತೈ! ತೈ! ತಕ ತೈ!
ಹಾಕುವ ಸಾವಿನ ತಾಳ !

ಅನುದಿನ ಕ್ರುಶಿಯನು ಮಾಡುತಲಿರುವನು
ಸಾವಿನ ಬೀಜವ ನೆಟ್ಟು!
ಹಸಿರಿನ ಉಸಿರಲಿ ಸತ್ತ ಸಾವದು
ಪಡೆವುದು ನೂತನ ಹುಟ್ಟು!

ತುಂಟ ಕಾಲನು ತಿಳಿಸುವುದಿಲ್ಲ
ಹುಟ್ಟಿಗೆ ಸಾವಿನ ಗುಟ್ಟು!
ಮರವೆಯಲ್ಲಿಯೆ ಹುದುಗಿಟ್ಟಿಹನು
ಜೀವದ ಸವಿ ರುಚಿಕಟ್ಟು!

ತಿಂಗಳು ವರುಶ ಸಂವತ್ಸರದ
ಲೆಕ್ಕೆಕೆ ಸಿಗದ ತುಂಟ!
ಸೆಕೆಂಡು ನಿಮಿಶ ಮಿಲಿಮಿಲಿಗಳನು
ಮೀರಿದ ವೀರ ಬಂಟ!

ಉಸಿರು ಜಾಗ ವೇಗ ಎಲ್ಲವು
ಇವಗೆ ಒಂದು ತುತ್ತು!
ಅನಂತ ಅನಂತ ರೂಪಿ ಕಾಲಗೆ
ಬರದು ಎಂದೂ ಕುತ್ತು!

( ಚಿತ್ರ ಸೆಲೆ: youtube )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: