‘ಕನಸು’ – ಕೆಲವು ಸೋಜಿಗದ ಸಂಗತಿಗಳು
– ಕೆ.ವಿ.ಶಶಿದರ.
ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ ಜೀವನದಲ್ಲಿ ನಾವಂದುಕೊಂಡಿದ್ದು ಮಾಡಲಾಗದಿದ್ದ ಹತಾಶೆ ಕನಸಿನಲ್ಲಿ ಪ್ರತಿಬಿಂಬಿಸುತ್ತದೆ. ಆದರೆ ಒಂದೇ ಒಂದು ಕೊರತೆಯಂದರೆ ನಾವುಗಳು ಕಂಡ ಕನಸುಗಳಲ್ಲಿ ಬಹಳಶ್ಟನ್ನು ನಿದ್ದೆಯಿಂಡ ಹೊರಬಂದ ಬಳಿಕ ಸಂಪೂರ್ಣವಾಗಿ ಮರೆಯುವುದು!
ಕೆಟ್ಟ ಕನಸುಗಳು ಇಲ್ಲವೇ ಬೀಕರ ಬಯಾನಕ ಕನಸುಗಳು ಬಿದ್ದಾಗ ಬಯಬೀತರಾಗಿ ಚೀರುತ್ತಾ ಏಳುವವರು ಇದ್ದಾರೆ. ಕನಸಿನ ಸಂಬಾಶಣೆಯನ್ನು ಕೆಲವೊಮ್ಮೆ ಸ್ಪಶ್ಟವಾಗಿ, ಕೆಲವೊಮ್ಮೆ ಅಸ್ಪಶ್ಟವಾಗಿ ಜೊತೆಯಲ್ಲಿ ಇರುವವರಿಗೆ ಕೇಳುವಂತೆ ಆಡುವವರಿದ್ದಾರೆ. ಹಾಗೆಯೇ ಕನಸಿನಲ್ಲಿ ಕಂಡ ವಿಚಿತ್ರಗಳಿಗೆ ನಗುತ್ತಾ, ಅಳುತ್ತಾ, ಕಣ್ಣುಗುಡ್ಡೆಗಳನ್ನು ಗಿರಗಿರನೆ ತಿರುಗಿಸುತ್ತಾ, ವಿಚಿತ್ರ ಹಾವಬಾವದ ಮುಕವನ್ನು ತೋರಿಸುವ ಮಕ್ಕಳನ್ನು ಕಾಣದವರೇ ಇಲ್ಲ. ಬಹಳಶ್ಟು ತಾಯಂದಿರು ಕನಸಿನ ಲೋಕದಲ್ಲಿ ವಿಹರಿಸುವ ಮುದ್ದು ಮುಕದ ಕಂದಮ್ಮಗಳ ಬಾವನೆಗಳಿಗೆ ಸ್ಪಂದಿಸಿರುತ್ತಾರೆ ಕೂಡ.
ಕನಸಿನ ಬಗ್ಗೆ ಹಲವಾರು ವಾದಗಳಿವೆ. ಮಲಗುವಾಗ ನಾವಂದುಕೊಂಡಿದ್ದು ಕನಸಿನಲ್ಲಿ ಪುನಾರಾವರ್ತನೆಯಾಗುತ್ತದೆ ಎಂಬುದು ಒಂದಾದರೆ ನಮ್ಮ ಮನಸಿನ ಮೇಲೆ ಆಗಿರುವ ಬೀಕರ ಅತವಾ ಅಳಿಸಲಾಗದ ಪರಿಣಾಮಗಳು ಕನಸಿನಲ್ಲಿ ಪ್ರತಿಪಲಿಸುತ್ತವೆ ಎಂಬುದು ಮತ್ತೊಂದು ವಾದ. ಈ ವಾದಗಳನ್ನು ಗಮನಿಸಿದರೆ ಕನಸು ನಮ್ಮದೇ ಆದ ಮನಸ್ತಿತಿಗೆ ಹಿಡಿದ ಕನ್ನಡಿ ಎಂಬುದರಲ್ಲಿ ಎರಡು ಮಾತಿಲ್ಲ.
ಹುಟ್ಟುಕುರುಡುರು ಕಾಣುವ ಕನಸುಗಳು ಹೇಗಿರುತ್ತವೆ?
ಪ್ರಪಂಚವನ್ನು ತಮ್ಮ ಕಣ್ಣುಗಳಿಂದ ಕಂಡು ಸವಿಯುವವರು ಕಾಣುವ ಕನಸಿಗೂ, ಪ್ರಪಂಚವನ್ನು ಕಾಣಲಾಗದ ಹುಟ್ಟು ಕುರುಡರು, ಹುಟ್ಟಿದ ನಂತರದ ದಿನಗಳಲ್ಲಿ ಕಣ್ಣು ಕಳಕೊಂಡವರು ಕಾಣುವ ಕನಸಿಗೂ ಬಹಳಶ್ಟು ವ್ಯತ್ಯಾಸವಿದೆ. ಹುಟ್ಟುಕುರುಡರು ಕಂಡ ಕನಸಿನಲ್ಲಿ ಯಾವುದೇ ಬಿಂಬಗಳು ಇರುವುದಿಲ್ಲವೆಂದು ಮನಶಾಸ್ತ್ರಜ್ನರು ಅಬಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಇಂದ್ರಿಯಗಳಿಂದ ಅನುಬವಿಸಿರುವ ಶಬ್ದ, ವಾಸನೆ, ಸ್ಪರ್ಶಗಳಿಂದ ಹಾಗೂ ಬಾವಾವೇಶಗಳು ತುಂಬಿರುವ ಕನಸುಗಳನ್ನು ಹೇರಳವಾಗಿ ಕಾಣುತ್ತಾರಂತೆ. ಕಣ್ಣಿಲ್ಲದವರಿಗೆ ಕನಸುಗಳೇ ದ್ರುಶ್ಯಮಾದ್ಯಮವಲ್ಲವೇ?
ಹುಟ್ಟಿದ ನಂತರದ ದಿನಗಳಲ್ಲಿ ಕಣ್ಣು ಕಳೆದುಕೊಂಡವರು ಬಿಂಬಸಹಿತ ಕನಸು ಕಾಣುತ್ತಾರಂತೆ. ಕಣ್ಣುಕಾಣುತ್ತಿದ್ದ ದಿನಗಳಲ್ಲಿ ಮನಸ್ಸಿನಲ್ಲಿ ದಾಕಲಾದ ಬಿಂಬಗಳಿಗಶ್ಟೇ ಅದು ಸೀಮಿತವಂತೆ.
ಎಲ್ಲರಿಗೂ ಕನಸು ಬೀಳುತ್ತದೆ ಆದರೆ ಬೇಗ ಮರೆತು ಹೋಗುತ್ತದೆ!
ಕನಸು ಕಾಣಲು ಗಾಡನಿದ್ದೆ ಅವಶ್ಯಕ. ಗಾಡನಿದ್ದೆಯಿಂದ ಎಚ್ಚೆತ್ತ ಐದು ನಿಮಿಶಗಳೊಳಗಾಗಿ ಕಂಡಿದ್ದ ಅರ್ದದಶ್ಟು ಕನಸು ಮರೆತು ಹೋಗುತ್ತದೆ. ಮತ್ತೆ ಹತ್ತು ನಿಮಿಶಗಳಲ್ಲಿ ಶೇಕಡಾ 90ರಶ್ಟು ಕನಸು ನೆನಪಿನಪುಟದಿಂದ ಮರೆಯಾಗುತ್ತದೆ. ಮಾನಸಿಕ ಆರೋಗ್ಯ ಸರಿಯಿಲ್ಲದ ಕೆಲವು ಪ್ರಕರಣಗಳನ್ನು ಹೊರತುಪಡಿಸಿ ಮತ್ತೆಲ್ಲರೂ ಕನಸು ಕಾಣುತ್ತಾರೆ. ಗಂಡಸರು ಮತ್ತು ಹೆಂಗಸರು ಕಾಣುವ ಕನಸುಗಳು ವಿಬಿನ್ನ. ಗಂಡಸರು ಕಾಣುವ ಕನಸಿನಲ್ಲಿ ಹೆಣ್ಣಿನ ಪಾತ್ರಗಳು ಬರುವುದು ಕಡಿಮೆ, ಗಂಡು ಪಾತ್ರಗಳೇ ಹೆಚ್ಚು. ಇನ್ನು ಹೆಂಗಸರು ಕಾಣುವ ಕನಸಿನಲ್ಲಿ ಗಂಡು ಹಾಗೂ ಹೆಣ್ಣಿನ ಪಾತ್ರಗಳಿಗೆ ಸಮಾನ ಅವಕಾಶ ಇರುತ್ತದೆ. ಎರಡೂ ಪಾತ್ರಗಳು ಸಮಾನವಾಗಿ ಇವರ ಕನಸಿನಲ್ಲಿ ಬರುತ್ತವೆ.
ಕನಸಿನಲ್ಲಿನ ಕಂಡುಬರುವ ಬಹಳಶ್ಟು ಮುಕಗಳು ಆಗಂತುಕರದ್ದಾಗಿದ್ದರೂ ಮನಸ್ಸು ಆ ಮುಕಗಳನ್ನು ಹುಟ್ಟಿಸುವುದಿಲ್ಲ. ಜೀವನದಲ್ಲಿ ಸಾವಿರಾರು ಮುಕಗಳನ್ನು ನಾವು ದಿನನಿತ್ಯ ಕಂಡಿರುತ್ತೇವೆ. ಅವುಗಳಲ್ಲಿನ ಯಾವುದೋ ಒಂದು ಮುಕ ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ ಅಶ್ಟೆ.
ಬಣ್ಣದ ಕನಸುಗಳೇ ಹೆಚ್ಚು, ಕಪ್ಪುಬಿಳುಪು ಕಡಿಮೆ
ಕಾಣುವ ಕನಸಿನಲ್ಲಿ ಶೇಕಡಾ 12ರಶ್ಟು ಬಾಗ ಕಪ್ಪು ಬಿಳುಪಿನದ್ದಾಗಿರುತ್ತದೆ ಎಂದು ಹಲವಾರು ಅದ್ಯಯನಗಳು ಕಂಡುಹಿಡಿದಿವೆ. ಉಳಿದ ಬಾಗ ಬಣ್ಣದ್ದು. ಹಿಂಸಾಚಾರ ಅತವಾ ಸಾವಿಗೆ ಸಂಬಂದಿಸಿದ ಕನಸಿನ ಪ್ರಬಾವವು ಕಪ್ಪು ಮತ್ತು ಬಿಳುಪು ಬಣ್ಣದಲ್ಲಿರುತ್ತದಂತೆ. ಕಪ್ಪು ಬಿಳುಪಿನ ಕನಸಿನಲ್ಲಿ ಕಾಣುವ ವ್ಯಕ್ತಿಗಿಂತಾ ಬಣ್ಣದಲ್ಲಿ ಕಾಣುವ ವ್ಯಕ್ತಿಯೊಂದಿಗೆ ಹೆಚ್ಚು ಬಾವನಾತ್ಮಕ ಬೆಸುಗೆ ಇರುತ್ತದಂತೆ.
ಬಹಳಶ್ಟು ಕನಸುಗಳು ಬಾಶೆ ಸಾಂಕೇತಿಕ. ಸುಪ್ತ ಮನಸ್ಸಿನ ಪ್ರತಿಬಿಂಬ ಕನಸು. ದೀರ್ಗಕಾಲ ದೂಮಪಾನ ಮಾಡಿ ಬಿಟ್ಟವರಿಗೆ ಸಾಮಾನ್ಯವಾಗಿ ಸ್ಪುಟವಾದ ಕನಸುಗಳು ಕಾಣುತ್ತವಂತೆ ಹಾಗೂ ದೂಮಪಾನ ಹಿಂಪಡೆಯುವಿಕೆಯ ಬಗ್ಗೆ ಆ ಕನಸುಗಳೆಲ್ಲಾ ಕೇಂದ್ರೀಕ್ರುತವಾಗಿರುತ್ತದಂತೆ.
ನಮ್ಮ ಕನಸನ್ನು ಆಕ್ರಮಿಸಿಕೊಳ್ಳುವುದು ಹೊರಗಿನ ಪ್ರಚೋದನೆಗಳು. ಇದೇ ಕನಸಿನ ಸಂಯೋಜನೆ. ಬೌತಿಕವಾಗಿ ಅನುಬವಿಸುವ ಹಲವು ಅನುಬವಗಳನ್ನು ನಿದ್ದೆಯ ಹೊತ್ತಿನಲ್ಲಿ ಮನಸ್ಸು ಕನಸಿನಲ್ಲಿ ಬಿಂಬಿಸುತ್ತದೆ. ನಂಬಲಿಕ್ಕೆ ಸಾದ್ಯವಿಲ್ಲದಂತಾ ವಿಚಾರವೆಂದರೆ ನಮ್ಮ ದೇಹವು ನಿದ್ದೆಯಲ್ಲಿ ವಾಸ್ತವಿಕವಾಗಿ ಪಾರ್ಶ್ವವಾಯುವಿಗೆ ಒಳಗಾಗಿರುತ್ತದಂತೆ. ಕನಸುಗಳ ಬಗೆಗಿನ ವಿಕಿಪೀಡಿಯಾದ ಲೇಕನದಲ್ಲಿ ಹೀಗೆ ಹೇಳಿದ್ದಾರೆ – “ಮಲಗಿದ್ದಾಗ ನಿದ್ದೆ ಬರುವಂತೆ ಮಾಡುವ ಹಾರ್ಮೋನ್ಗಳನ್ನು ಗ್ರಂತಿಗಳು ಒಸರುತ್ತವೆ, ಆಗ ನಿದ್ದೆ ಬರುತ್ತಿದೆ ಎಂಬ ಸಂದೇಶವನ್ನು ನರಕೋಶಗಳು ಬೆನ್ನು ಹುರಿಗೆ ತಲುಪಿಸುತ್ತವೆ. ಅದರಂತೆ ದೇಹವು ಸಡಿಲವಾಗಿ ಪೂರ್ಣ ವಿಶ್ರಾಂತಿ ಪಡೆಯುತ್ತದೆ. ಗಾಡನಿದ್ದೆಗೆ ಜಾರಿದಮೇಲೆ ಪಾರ್ಶ್ವವಾಯುವಿಗೆ ಒಳಗಾಗುತ್ತದೆ.”
ಪ್ರಾಣಿಗಳಿಗೆ ಕನಸು ಬೀಳುವುದೇ?
ಕನಸನ್ನು ಕಾಣಲು ಮನುಶ್ಯನಿಗೆ ಆತನ ದೇಹದಲ್ಲಿ ನಡೆಯುವ ‘ಬಿರುಸಾದ ಕಣ್ಣಿನ ಚಲನೆ'(Rapid eye movement) ಎಂಬ ಪ್ರಕ್ರಿಯೆ ಕಾರಣ ಎಂದು ವಿಜ್ನಾನಿಗಳು ಹೇಳುತ್ತಾರೆ. ಹಾಗೆಯೇ ಪ್ರಾಣಿಗಳಲ್ಲೂ ಸಹ ಬಿರುಸಾದ ಕಣ್ಣಿನ ಚಲನೆ ಇರುತ್ತದೆ ಹಾಗಾಗಿ ಅವುಗಳೂ ಕನಸು ಕಾಣುತ್ತವೆ. ಕೆಲವೊಂದು, ಅದರಲ್ಲೂ ಪ್ರಮುಕವಾಗಿ ಸಸ್ತನಿಗಳು ಕನಸನ್ನು ಕಾಣಬಹುದು ಎಂಬುದು ಸಂಶೋದಕರ ಅಂಬೋಣ. ಪ್ರಾಣಿಗಳ ಹಾಗೂ ಮಾನವನ ಮೆದುಳಿನ ನಮೂನೆಗಳು ಬಹಳವಾಗಿ ಹೋಲುವುದರಿಂದ ಅವುಗಳೂ ಸಹ ಕನಸನ್ನು ಕಾಣುತ್ತವೆ ಎಂಬುದು ವಿಜ್ನಾನಿಗಳ ನಿರೀಕ್ಶೆ. ಮೂಕ ಪ್ರಾಣಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಸಾದ್ಯವಿಲ್ಲದ ಕಾರಣ ವಿಜ್ನಾನಿಗಳ ತರ್ಕವನ್ನು ಒಪ್ಪುವುದು ಅನಿವಾರ್ಯ.
ಅತ್ಯಂತ ಸೋಜಿಗದ ಸಂಗತಿಯಂದರೆ ಗೊರಕೆ ಹೊಡೆಯುವಾಗ ಕನಸುಗಳನ್ನು ಕಾಣಲು ಸಾದ್ಯವಿಲ್ಲ. ಮೂರು ವರ್ಶದವರೆಗೆ ಮಕ್ಕಳು ತಮ್ಮ ಕುರಿತು ಕನಸು ಕಾಣುವುದಿಲ್ಲ. ಏಳು ಎಂಟು ವರ್ಶದವರೆಗೆ ಮಕ್ಕಳ ಕನಸು ಬ್ರಮಾಲೋಕದಲ್ಲಿರುತ್ತದೆ.
(ಮಾಹಿತಿ ಸೆಲೆ: listverse.com)
(ಚಿತ್ರ ಸೆಲೆ: maxpixel/dream, maxpixel/cloud, wiki)
ಇತ್ತೀಚಿನ ಅನಿಸಿಕೆಗಳು